Sunday, August 17, 2008

ಚಿತ್ರವಿಲ್ಲದ ಕವನ

Its all your fault...ಚಿತ್ರಕವನ! ಕಳೆದ ಅರವತ್ತೈದು ವಾರಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನನ್ನನ್ನು ನಾಲ್ಕು ಸಾಲು ಕವನದ ರೀತಿಯಲ್ಲಿ ಗೀಚುವಂತೆ ಪ್ರೇರೇಪಿಸುತ್ತಿದ್ದ ಚಿತ್ರಗಳನ್ನು ಬಿಂಬಿಸುತ್ತಿದ್ದ ತಾಣ ಈಗ ಒಂದು ವಾರದಿಂದ ಸ್ಥಗಿತಗೊಂಡಿದೆ, ಅಥವಾ ಸೆಪ್ಪೆಯಾಗಿದೆ.

So, what is the impact? ನಾನು ಪ್ರತಿವಾರ ಏನಾದರೊಂದನ್ನು ಕವನದ ರೂಪದಲ್ಲಿ ಬರೆಯಬೇಕೆನ್ನುವುದು ರೂಢಿಯಾಗಿ ಹೋಗಿದೆ, ಅದಕ್ಕೋಸ್ಕರ ಈ ಬ್ಲಾಗ್‌ಪೋಸ್ಟ್‌ನಲ್ಲಿ ಮುಂದೆ ಒಂದು ಕವನ ಹುಟ್ಟಲಿದೆ - ಈವರೆಗೆ ಅದರ ತತ್ವವಾಗಲಿ, ಸತ್ವವಾಗಲಿ, ಯಾವುದರ ಬಗ್ಗೆ ಬರೆಯಬೇಕು ಬಿಡಬೇಕು ಎಂಬುದರ ಬಗ್ಗೆ ಒಂದು ಚೂರೂ ಗೊತ್ತಿಲ್ಲ - ಕೆಳಗೆ ಕವನ ಡೈನಮಿಕ್ ಆಗಿ ಹುಟ್ಟೋದೇ ಈ ಬ್ಲಾಗ್ ಬರಹಗಳ ವಿಶೇಷ!

***

ಕಳೆದ ವರ್ಷ ಮೇ ತಿಂಗಳಿನಲ್ಲಿ, ಅರವತ್ತೈದು ವಾರಗಳ ಹಿಂದೆ ಶ್ರೀದೇವಿ ಹೀಗೊಂದು ಸೈಟು ಹುಟ್ಟು ಹಾಕಿದ್ದೇವೆ ನೋಡಿ ಎಂದು ಹೇಳಿದ್ದೇ ತಡ ನನ್ನೊಳಗಿನ ಕವಿಗೆ ಒಂದು ಜೀವ ಬಂದು ಹಾಕಿದ ಚಿತ್ರಗಳಿಗೆಲ್ಲ ಒಂದು ಕವನವನ್ನು ಬರೆದು ಹಾಕಿದ್ದಾಯಿತು. ಮುಂದೆ ಅವರು ತಮ್ಮದೇ ಆದ ವೆಬ್‌ಸೈಟ್ ಅನ್ನು ಹುಟ್ಟು ಹಾಕುತ್ತೇವೆ, ಅದು ’ಚಿತ್ರಸ್ಪಂದನ’ವಾಗಿ ಹೊರಬರಲಿದೆ ಎಂದಾಗ ನಾನೇ ’ಯಾಕೆ, ಈಗಿರುವುದು ಚೆನ್ನಾಗೇ ಇದೆಯೆಲ್ಲ’ ಎಂದು ಕೊಂಕು ನುಡಿದಿದ್ದೆ. ಕೆಲವರ ಹುಮ್ಮಸ್ಸು ನೋಡಿ ನನಗೆ ಬಹಳಷ್ಟು ಸಂತೋಷವಾದರೂ, ಹಿಂದೆ ’ಕರ್ನಾಟಕಪತ್ರ ಡಾಟ್ ಕಾಮ್’ ನಮ್ಮದೇ ಆದ ವೆಬ್‌ಸೈಟ್ ಇಲ್ಲದೇ ನಮ್ಮ ಬದುಕೇ ನಡೆಯದು ಎಂದು ಹಂಬಲಿಸಿದ ಒಂದಿಬ್ಬರು ಬೆಂಗಳೂರಿನ ಯುವಕರಿಗೆ ನಾನು ದುಡ್ಡು ಖರ್ಚು ಮಾಡಿ ಒಂದು ಇಂಡಿಪೆಂಡೆಂಟ್ ವೆಬ್‌ಸೈಟ್ ಅನ್ನು ಮಾಡಿಕೊಟ್ಟ ಮೇಲೆ ಏನಾಯಿತು, ಫ್ರೀ ಸೈಟ್‌ನಲ್ಲಿದ್ದ ಕಂಟೆಂಟಾಗಲೀ, ಅದರ ಹುಮ್ಮಸ್ಸಾಗಲೀ ಸ್ವತಂತ್ರ ಸೈಟ್‌ನಲ್ಲಿ ಮೂಡಿ ಬರಲೇ ಇಲ್ಲ. ಈ ಯುವಕರು ಮುಂದೆ ತಮ್ಮ ತಮ್ಮ ದಾರಿ ಹಿಡಿದು ಹೊರಟು ಹೋದರು, ನಾನು ಮರೀಚಿಕೆಗೆ ಇನ್ನೂರೈವತ್ತು ಡಾಲರ್ ಸುರಿದು ಬೆಪ್ಪನಾದೆ. ಈ ಹಿಂದೆ ಹೀಗೆ ಕೈ ಸುಟ್ಟುಕೊಂಡ ಕಾರಣಕ್ಕಾಗಿಯೇ ನಾನು ’ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ’ ಎಂದು ಹಾರಾಡುವವರನ್ನೆಲ್ಲ ಭೂಮಿಗೆ ಹಿಡಿದು ಒಂದು ಮೊಳೆ ಹೊಡೆದಿಡಲು ಪ್ರಯತ್ತಿಸುವುದು, ಅವರ ಪರಿಶ್ರಮ ನಿಜವಾಗಿಯೇ ಇದ್ದಲ್ಲಿ ಅದು ಪರಿಶುದ್ಧ ಚಿನ್ನದಂತೆ ಮೂಸೆಯಲ್ಲಿ ಕುದಿಯುವಾಗಲೂ ಹೊಳೆಯುತ್ತದೆ, ಸಣ್ಣಪುಟ್ಟ ಅಡೆತಡೆಗಳು ದೊಡ್ಡ ಗುರಿಯನ್ನಾಗಲೀ, ಆಶಾವಾದವನ್ನಾಗಲೀ ನಿಲ್ಲಿಸಲಾರವು.

***

ಈಗ ಕೆಳಗೆ ಬರೆಯಬೇಕಾದ ಕವನ - ಚಿತ್ರವೆಲ್ಲಿದೆ ಎಂದುಕೊಳ್ಳುತ್ತೀರಾದರೆ, ನೀವು ಕಣ್ಣು ಮುಚ್ಚಿ ಐದು ಕ್ಷಣ ನಿಮ್ಮೊಳಗೆ ನೀವು ನೋಡಿಕೊಂಡಿದ್ದೇ ಆದರೆ ಅದೇ ಚಿತ್ರ, ಅದಕ್ಕೆ ತಕ್ಕನಾಗಿ ನಿಮಗೊಬ್ಬರಿಗೆ ಮಾತ್ರ ಅರ್ಥವಾಗುವ ಈ ಕವಿತೆಯ ಸಾಲುಗಳು - here you go:

ಪಯಣ ದೊಡ್ಡದೋ ಹಾದಿ ದೊಡ್ಡದೋ
ಹಾದಿ ಹಿಡಿದು ಹೊರಟ ಪಯಣ
ತಲುಪೋ ಗುರಿಯು ದೊಡ್ಡದೋ.
ತೇರು ದೊಡ್ಡದೋ ಕಲಶ ದೊಡ್ಡದೋ
ಸುತ್ತ ಹತ್ತು ಕಷ್ಟ ಹೇಳಿಕೊಂಡು
ಬೇಡೋ ಜನರ ಮನಸು ದೊಡ್ಡದೋ.

ನಡೆಯತೊಡಗಿ ನೋಡಿದಂತೆ ಮುಂದೆ
ದೂರ ಎಷ್ಟೋ ಭಾರ ಎಷ್ಟೋ ಹಿಂದೆ
ನಾಳೆ ಇರುವ ಕಷ್ಟಗಳ ಯೋಚನೆ
ಇಂದು ಗಟ್ಟಿ ನಿಂತ ಮನದ ಯಾಚನೆ.

ಮೇಲೆ ಎಷ್ಟೇ ಮಳೆಯು ಸುರಿದರೂ
ಸೂರಿನಿಂದ ನೀರು ಹನಿಯಾಗಿ ಬೀಳುವಂತೆ
ಕೈಕೊಂಡಿಹ ಕೆಲಸಕೆ ಆತಂಕವು ಸಹಜವು.
ಅಲ್ಲಿ ಇಲ್ಲಿ ಹಾಗೆ ದುಡಿದು ಬೇಡವಾದುದನ್ನು
ಬಗೆದು ಸವಾಲುಗಳನ್ನೆಲ್ಲ ಮೀರಿ ಒಮ್ಮೆ ಸಿಕ್ಕ
ನೆಲೆಯಿಂದ ಇನ್ನೆಲ್ಲೋ ಸಾಗುವುದೇ ಕ್ಷೇಮವು.

ಒಳಗಿರುವ ಸುಖವನ್ನು ನೋಡುವವರೇ ಇಲ್ಲ
ಯಾವಾಗಲೂ ಹೊರಗೆ ಅರ್ಭಟಿಸುವುದೇ ಎಲ್ಲ
ಸುಖವೆಂಬುದು ಅವರವರ ಮನಸಿನಾ ನೆಲೆ
ಇರದಿದ್ದಲ್ಲಿ ಹುಡುಕುವುದು ಒಂದು ಕಷ್ಟದ ಬಲೆ.


***

So, what do you think? ಚಿತ್ರವಿಲ್ಲದೇ ಕವನ ಚಿತ್ರಕವನ ತಂಡದ ಕೃಪೆಯಿಂದ ಇಲ್ಲಿ ಹೀಗೆ ಪಬ್ಲಿಷ್ ಆಗ್ತಾ ಇದೆ. ಇದಕ್ಕೆ ಹಿನ್ನೆಲೆ-ಮುನ್ನೆಲೆ, ಮಣ್ಣೂ-ಮಸಿ ಒಂದೂ ಇಲ್ಲ, ಸುಮ್ಮನೇ ಎಂದಿನಂತೆ ಬರೆದ ಈ ಹೊತ್ತಿನ ತತ್ವವಷ್ಟೇ!

ಈ ಸಾರಿ ಶ್ರಾವಣ ಮಾಸ ಆರಂಭವಾಗಿ ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ, ನೂಲು ಹುಣ್ಣಿಮೆ, ರಕ್ಷಾ ಬಂಧನ ಇವುಗಳೆಲ್ಲ ಆದ್ರೂ ಇನ್ನೂ ’ಅಂತರಂಗ’ದಲ್ಲಿ ಶ್ರಾವಣ ಅನ್ನೋ ಪದವೇ ಬಳಕೆ ಯಾಕೆ ಆಗಿಲ್ಲ ಅಂತ ನನಗೆ ನನ್ನದೇ ಪ್ರಶ್ನೆ. ಈ ಒಲಂಪಿಕ್ಸ್ ಆಟಗಳನ್ನು ನೋಡೋದರಲ್ಲಿ ಟೈಮು ಕಳೆಯುತ್ತಿದ್ದೇನೆ ಅನ್ನೋದು ಒಂದು ಸುಳ್ಳು ನೆಪ ಅಷ್ಟೇ, ಯಾಕೋ ಬರೆದೇ ಇಲ್ಲ ಇತ್ತೀಚೆಗೆ. ಈ ಬ್ಲಾಗ್ ಬರಹಗಳು ಒಂದು ರೀತಿ ಫ್ರೀಡಂ ಅನ್ನೋ ಕೊಡೋದರ ಜೊತೆಗೆ ಬರೀ ಇದಕ್ಕೆ ಅಡಿಕ್ಟ್ ಆಗಿದ್ದುಕೊಂಡು ಇದರಲ್ಲೇ ನಮ್ಮ ಮಿತಿಗಳನ್ನು ಆಡಿಸಿಕೊಂಡು ಬರೋದು ಹುಚ್ಚಾಟವಾಗುತ್ತದೆ. ಆ ಕಾರಣದಿಂದಲೇ ಇತ್ತೀಚೆಗೆ ಒಂದಿಷ್ಟು ಓದೋದನ್ನ ರೂಢಿಸಿಕೊಳ್ಳುತ್ತಿದ್ದೇನೆ. After all, ಚೆನ್ನಾಗಿ ಓದದೇ ಏನು ಬರೆದರೇನು, ಬಿಟ್ಟರೇನು?! ನಾವು ನಾವೇ ಬರೆಯೋದು ಎಲ್ಲರಿಗೂ ಮಹಾನ್ ಆಗಿ ಕಾಣೋದರಲ್ಲಿ ತಪ್ಪಿಲ್ಲ, ನಮ್ಮದನ್ನು ಬಿಟ್ಟು ಬೇರೆಯವರದೂ ಇದೆ ಎಂದುಕೊಂಡು ಬೇರೆಲ್ಲೋ ನಮ್ಮನ್ನು ನಾವು ಕಂಡುಕೊಳ್ಳೋದು ಇದೆಯಲ್ಲ ಅದು ದೊಡ್ಡದು.

3 comments:

Shree said...

ಒಂದು ವಾರ ಹೀಗಾಗಿದ್ದಕ್ಕೆ ಇಷ್ಟು ಸಿಟ್ಟು ಮಾಡ್ಕೋಬೇಡಿ ಗುರು... ನಮ್ಮಂತಹ ಬಡಪಾಯಿಗಳ ಮೇಲೆ ಯುದ್ಧ ಸಾರಬೇಡಿ... ಈ ತಪ್ಪು ಇನ್ನು ಪುನರಾವರ್ತನೆ ಆಗದಂತೆ ನೋಡ್ಕೋತೀವಿ...

ನಮಗೆ ಆಸಕ್ತಿ ಕುಗ್ಗಿಲ್ಲ ಏನು ಇಲ್ಲ, ತಾಂತ್ರಿಕ ಕಾರಣಗಳಿಂದಾಗಿ ಹೀಗಾಯ್ತು... ನಾವು ಕೂಡ ವೆಬ್ ಸೈಟಿಗೆ ದುಡ್ಡು ಸುರಿದಿದ್ದೇವೆ, ಯಾರದೋ ದುಡ್ಡಲ್ಲ - ನಾವು ಸ್ವಂತ ದುಡಿದ ದುಡ್ಡು, ಹಾಗಾಗಿ ವೆಬ್ ಸೈಟ್ ಬಂದೇ ಬರುತ್ತದೆ...:)

Karnataka Best said...

durada urinalli kulittu
urina bagge
urina berina bagge
bhasheya bagge yochiso nimmatavaru istavagtare nange. bareyutiri

Satish said...

ಶ್ರೀ,
ಸಿಟ್ಟೇನೂ ಇಲ್ಲ, ನೀವು ಚಿತ್ರಗಳನ್ನು ಹಾಕ್ತಾ ಇರಬೇಕು ಕವನಗಳು ಬರ್ತಾ ಇರಬೇಕು, ಆಗ್ಲೇ ಚೆನ್ನ.
’ಚಿತ್ರಕವನ’ತಂಡದ ಉತ್ಸಾಹ ಅಮಿತವಾದದ್ದು, ನಿಮ್ಮ ವೆಬ್‌ಸೈಟ್ ಆದಷ್ಟು ಬೇಗನೆ ಬರಲಿ.

ಪ್ರವೀಣ ಚಂದ್ರ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು, ಹೀಗೇ ಭೇಟಿಕೊಡುತ್ತಿರಿ.