...ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ
ನಾನು ಒಣದ್ರಾಕ್ಷಿ ಡಬ್ಬದ ಮುಚ್ಚಳ ತೆಗೆಯೋದಕ್ಕೂ ಅದರ ಒಳಗಿನಿಂದ ಮುಂದುವರೆಯುತ್ತಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಸರಿಯಾದ ಸಮಯ ಬಂದಿತ್ತು, ’...ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಅನಿವಾಸಿಗಳ ಥರ ಬರೀ ನಿಮ್ಮದೇ ರಾಗದ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ನಿ ಕಾರ್ಯಕ್ರಮ ಆರಂಭ ಮಾಡೋಣ’.
ಎಲಾ ಇವನಾ, ಅನಿವಾಸಿಗಳ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರ್ ಯಾರಪ್ಪಾ ಎಂದು ಬೆಳಕಿಗೆ ಡಬ್ಬವನು ಬಗ್ಗಿಸಿ ನೋಡಿದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೆಚ್ಚು ಮೋರೆಯ ದರ್ಶನ ಕೊಟ್ಟು ಕೊನೆಗೆ ದಿಢೀರನೆ ಗುಂಪಿನಲ್ಲಿ ಕರಗಿ ಹೋಗಿದ್ದ ಒಣದ್ರಾಕ್ಷಿದ್ವಯರು ಕಂಡು ಬಂದರು. ಸುಮಾರು ಇಪ್ಪತ್ತು ಉಳಿದ ದ್ರಾಕ್ಷಿಗಳನ್ನು ಒಂದೆಡೆ ಆಯೋಜಿಸಿ ಅದೇನೋ ’ಕಾರ್ಯಕ್ರಮ’ವನ್ನು ಆರಂಭಿಸುವ ಗುಂಗಿನಲ್ಲಿದ್ದವರು ಆ ಮಟ್ಟಿಗೆ ವ್ಯಸ್ತರಾಗಿ ಕಂಡುಬಂದುದು ನನಗೆ ಸ್ವಲ್ಪ ಖುಷಿ ತಂದಿತು. ಏನಿಲ್ಲವೆಂದರೂ ಈ ಹಿಂದಿನ ಅಳುಮೋರೆಗೆ ಉತ್ತರ ಕೊಡಬೇಕಾಗಿಲ್ಲವಲ್ಲ ಎಂದು ನನ್ನೊಳು ನಾನೇ ಹೇಳಿಕೊಂಡಿರುವಾಗ ನಾನು ಡಬ್ಬದ ಮುಚ್ಚಳ ತೆಗೆದ ಫಲವಾಗಿ ದಿಢೀರನೆ ಹೆಚ್ಚಿದ ಬೆಳಕನ್ನು ಕಂಡು ತಮ್ಮ ಕಾರ್ಯಕ್ರಮಕ್ಕೆ ಅದ್ಯಾರಪ್ಪಾ ಭಂಗ ತಂದವರು ಎಂದು ಹುಬ್ಬೇರಿಸುತ್ತಲೇ ನನ್ನತ್ತ ನೋಡಿದ ದ್ರಾಕ್ಷೀದ್ವಯರು, ’ಓಹ್, ಏನ್ಸಾರ್ ಬಾಳಾ ಅಪರೂಪ ಆಗಿದ್ದೀರಾ ಇತ್ತೀಚಿಗೆ!?’ ಎಂದು ಒಕ್ಕೊರಲಿನಿಂದಲೇ ತಮ್ಮ ಆಶ್ಚರ್ಯವನ್ನು ಸೂಚಿಸುತ್ತಲೇ ಪ್ರಶ್ನೆಯೊಂದನ್ನು ಎಸೆದವು.
ನಾನಿದ್ದೋನು, ’ಹೌದಲ್ವಾ, ಹೇಗಿದ್ದೀರಾ ಮತ್ತೆ? ಏನ್ಸಮಾಚಾರಾ, ಏನೋ ಗಡಿಬಿಡಿ ನಡೀತಾ ಇರೋ ಹಾಗಿದೆ?’ ಎಂದೆ.
ಆ ದ್ರಾಕ್ಷಿಗಳಲ್ಲಿ ಬಲಗಡೆ ಇದ್ದುದು ಉತ್ತರ ಕೊಡುವ ಹವಣಿಕೆ ಮಾಡುತ್ತಾ, ’ಹೀಗಿದೀವ್ ನೋಡಿ, ಸದ್ಯ ಕಳೆದ ಸರ್ತಿ ಡಬ್ಬ ಖಾಲಿ ಆದ ಹಾಗೆ ಈ ಸರ್ತಿ ಆಗ್ಲಿಲ್ಲವಲ್ಲಾ, ಒಂದಿಷ್ಟು ಜನ ಉಳಿದಿರೋದೇ ಹೆಚ್ಚು’ ಎಂದು ಸಿನಿಕತನದ ಹಾರಿಕೆ ಉತ್ತರಕೊಡುವ ಹೊತ್ತಿಗೆ ಅದರ ಜೊತೆಗಾರ, ’ಊರ್ ತುಂಬಾ ಎಷ್ಟ್ ಜನಾ ಬೇಕಾದ್ರೂ ಇರ್ಲಿ ನೋಡ್ರಿ ಕೊನೆಗೆ ನಮ್ ಕಾರ್ಯಕ್ರಮ ಅಂತಂದ್ರೆ ಇಷ್ಟೇ ಜನಾ ಬರೋದು!’ ಎಂದು ಅಸಮಧಾನವನ್ನು ವ್ಯಕ್ತಪಡಿಸಿತು.
ನಾನು, ’ಅದೇನೋ ಅನಿವಾಸಿಗಳ ಬಗ್ಗೆ ಹೇಳ್ತಾ ಇದ್ರಲ್ಲ, ಅವರುಗಳ ಬಗ್ಗೆ ನಿಮಗೇನ್ ಗೊತ್ತಿರೋದು?’ ಎಂದೆ ಕೆದಕಿ ನೋಡಿದ್ದಕ್ಕೆ,
ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಏನ್ ಹೇಳೋದೂ ಬಿಡೋದು ಗೊತ್ತಾಗದೇ ಒಂದು ಕ್ಷಣ ಅಮೇರಿಕಕ್ಕೆ ಬಂದ ಪ್ರವಾಸಿಯ ಹಾಗೆ ಗರ ಬಡೆದು ನಿಂತುಕೊಂಡವು, ಸ್ವಲ್ಪ ಸುಧಾರಿಸಿಕೊಂಡು ಬಲಗಡೆ ಇದ್ದ ದ್ರಾಕ್ಷಿ ಹೇಳಿತು, ’ನಮಗೇನ್ ಗೊತ್ತೂ ಸಾರ್, ನಾವ್ ನಮಗೆ ಕಂಡದ್ದು ಹೇಳಿದ್ವಿ ಅಷ್ಟೇ, ಅನಿವಾಸಿಗಳು ಯಾವಾಗ್ ನೋಡುದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ, ಒಂದ್ ರೀತಿ ಗಮ್ಮನ್ ಗುಸಕಗಳ ಥರಾ ಯಾವಾಗ್ ನೋಡುದ್ರೂ ಅವರದ್ದೇ ಅವರಿಗೆ ಅತಿಯಾಗಿ ಹೋಗಿರುತ್ತೇ, ತಮ್ಮದೇ ದೊಡ್ಡದು ಅನ್ನೋ ಥರಾ ಆಡೋ ಅಂತಾ ಸ್ವಾರ್ಥಿಗಳನ್ನು ನಾನು ಯಾವತ್ತೂ ನೋಡೇ ಇಲ್ಲ, ಅದಕ್ಕೇ ಹಂಗದ್ದದ್ದು!’ ಎಂದು ದೊಡ್ಡ ವಾಗ್ದಾಳಿಯೊಂದನ್ನು ಮಾಡಿ ಸುಮ್ಮನಾಯಿತು.
ಆ ದ್ರಾಕ್ಷಿ ಹೀಗೆಂದ ಕೂಡಲೇ ನಾನೇನ್ ಹೇಳೋದು ಅಂತ ತಲೆ ತುರಿಸಿಕೊಂಡ್ರೆ ಏನೂ ಹೋಳೀಲಿಲ್ಲ, ಮ್ಯಾನೇಜ್ಮೆಂಟ್ ಎಂಪ್ಲಾಯಿ ಹೇಳೋ ಹಾಗೆ, ’ಅದು ನಿಮ್ಮ ನಿಮ್ಮ ಅನಿಸಿಕೆ ಅಭಿಪ್ರಾಯ ಅದಕ್ಕೆ ನೀವೇ ಬಾಧ್ಯಸ್ಥರು...ಅದು ಸುಳ್ಳೋ ನಿಜಾನೋ ಅಂತ ಮಾತಾಡ್ತಾ ಹೋದ್ರೇ ದೊಡ್ಡ ವಾದಾನೇ ನಡೆದು ಹೋಗುತ್ತೆ, ಅದರ ಬದಲಿಗೆ ಅದನ್ನ ಅಲ್ಲಿಗೆ ಬಿಡೋದೇ ವಾಸಿ’ ಎಂದು ಹೇಳಿ ಕೈ ತೊಳೆದುಕೊಳ್ಳಲು ನೋಡಿದೆ.
ಆಗ ಎಡಗಡೆ ಇದ್ದ ದ್ರಾಕ್ಷಿ, ’ಅಲ್ರಿ, ಹೀಗೆ ಒಂದು ಸಮೂಹದ ಮೇಲೆ ನಾವ್ ಏನಾದ್ರೂ ಹೇಳ್ಲಿ ಅದನ್ನ ಅವರವರ ಅಭಿಪ್ರಾಯ ಅಂತ ಹೇಳಿಬಿಟ್ಟು ಸುಮ್ನೇ ಕೈ ತೊಳಕೊಳಕ್ಕೆ ನೋಡ್ತೀರಲ್ಲಾ, ನಿಮಗೆ ಕೆಚ್ಚು ಅಭಿಮಾನಾ ಅನ್ನೋದ್ ಸ್ವಲ್ಪಾನೂ ಇಲ್ವೇ ಮತ್ತೆ? ಏನು ಅದನ್ನೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯ ಏಣಿಯ ಮೆಟ್ಟಿಲುಗಳಿಗೆ ಆಪೋಷನ ಕೊಟ್ಟೋರಂಗೆ ಆಡ್ತೀರಲ್ಲಾ, ನಿಮ್ಮಂತೋರುನ್ನಾ ನಮ್ಮೂರ್ನಲ್ಲಿ ಏನಂತಾ ಕರೀತಾರೆ ಗೊತ್ತಾ?...’ ಎಂದು ಸುಮ್ಮನಾಯಿತು.
ನಾನು, ’ಏನಂತ ಕರೀತಾರೆ?’ ಎಂದರೆ,
’ಬ್ಯಾಡಾ ಬಿಡಿ, ನಾನ್ಯಾಕೆ ಹೇಳಿ ನನ್ನ ಬಾಯನ್ನ ಹೊಲ್ಸು ಮಾಡ್ಕೊಳ್ಳೀ?’ ಎನ್ನುವ ಉತ್ತರ ದೊರೆಯಿತು, ಮತ್ತೆ ಮುಂದುವರೆಸುತ್ತಾ, ’ನಾವ್ ಹೆಂಗಾರೂ ಇರ್ಲಿ ನಮ್ಮನ್ನ ಯಾವಾನಾದ್ರೂ ಸ್ವಾರ್ಥಿ ನನಮಕ್ಳು ಅಂತ ಹೇಳಿದ್ದಿದ್ರೆ ಅವರನ್ನ ಒಂದ್ ಕೈ ನೋಡಿಕಂತಿದ್ವಿ, ಏನೋ?’ ಎಂದು ಪಕ್ಕದವನ ಪಕ್ಕೆಗೆ ತಿವಿಯಿತು.
ನಾನು, ’ಥೂ, ಇದೇನಪ್ಪಾ ಗ್ರಹಚಾರ’ ಎಂದು ಮನಸ್ಸಿನಲ್ಲೇ ಶಪಿಸಿಕೊಂಡೆ, ಶಾವಿಗೆ ಪಾಯಸ ಮಾಡೋದಕ್ಕೆ ಒಣದ್ರಾಕ್ಷಿ ಹಾಕೋಣ ಅಂತ ಮುಚ್ಚಳ ತೆಗೆದೋನಿಗೆ ಈ ಇಬ್ಬರ ಜೊತೆ ವಾದಾ ಮಾಡಿ ಮೈ ಮನಸ್ಸು ಕೆದರಿಕೊಳ್ಳೋ ಕಷ್ಟಾ ಯಾವನಿಗೆ ಬೇಕಿತ್ತು?
ನಾನು ಸುಮ್ಮನಿದ್ದುದನ್ನು ನೋಡಿ ಎಡಗಡೆ ಇದ್ದ ದ್ರಾಕ್ಷಿ ಬಲಗಡೆಯವನ ಕುರಿತು, ’ಏ ಬಿಡೋ, ಈ ಅನಿವಾಸಿಗಳನ್ನ ಯಾರು ಉದ್ದಾರ ಮಾಡಿದಾರೆ. ನಮ್ಮ ಕೆಲಸ ನೋಡೋಣ ನಡಿ, ಜನಗಳು ಕಾಯ್ತಾ ಇದಾರೆ ಕಾರ್ಯಕ್ರಮಾನಾದ್ರೂ ಶುರು ಮಾಡೋಣ’ ಎಂದು ಹೇಳುತ್ತ ಇನ್ನೇನು ಅಲ್ಲಿ ಮೂಲೆಯಲ್ಲಿ ಸೇರಿದ್ದ ಉಳಿದ ದ್ರಾಕ್ಷಿಗಳ ಕಡೆಗೆ ತಿರುಗಬೇಕು ಎನ್ನುವಾಗ ನಾನೆಂದೆ,
’ಅಲ್ರೋ, ಅನಿವಾಸಿಗಳನ್ನ ಕಂಡ್ರೆ ನಿಮಗ್ಯಾಕೆ ಅಷ್ಟೊಂದು ಹೊಟ್ಟೇಕಿಚ್ಚು? ಎಲ್ಲೋ ಒಂದು ದೃಷ್ಟಿಕೋನದಿಂದ ಅವರುಗಳನ್ನು ನೋಡಿರಬಹುದಾದ ನೀವು ಪ್ರಪಂಚವನ್ನೇ ತಿಳಿದುಕೊಂಡಿರೋ ತಿಕ್ಕಲುಗಳ ಥರಾ ಆಡೋದ್ ಯಾಕೆ? ಊರು-ಮನೇ-ದೇಶ ಬಿಟ್ಟು ಬಂದು ತಮ್ಮ್ ತಮ್ಮ ಕಷ್ಟದಲ್ಲಿ ಸಿಕ್ಕಿ ಒದ್ದಾಡ್ತಿರೋರನ್ನ ಪೂರ್ತಿ ಅರ್ಥ ಮಾಡಿಕೊಳ್ಳದೇ ಬರೀ ಅವರನ್ನ ದೊಡ್ಡ ಸ್ವಾರ್ಥಿಗಳು ಅಂತೀರಲ್ಲಾ ಇದು ಯಾವ ನ್ಯಾಯ?’ ಎಂದು ಮೂರ್ನಾಲ್ಕು ಪ್ರಶ್ನೆಗಳನ್ನ ಒಂದೇ ಉಸಿರಲ್ಲಿ ಕೇಳಿ ದಂಗುಬಡಿಸಿದೆ.
ಎಡಗಡೆ ದ್ರಾಕ್ಷಿಗೆ ನನ್ನ ಮಾತೇ ಕೇಳಿ ಸಿಟ್ಟೇ ಬಂದಿತು ಅಂತ ಕಾಣ್ಸುತ್ತೆ, ’ ಅವರವರ ತೆವಲಿಗೆ ಬಂದವರು ಅವರವರ ಕಷ್ಟಗಳನ್ನ ಅನುಭವಿಸಲೇ ಬೇಕಾದ್ ನ್ಯಾಯಾ ತಾನೆ? ಯಾವಾಗ್ ನೋಡಿದ್ರೂ ಸೆಲ್ಫ್ ಸೆಂಟರ್ಡ್ ಜನ ಅಂತ ಹೇಳ್ದೇ ಇನ್ನೇನ್ ಹೇಳೋಕ್ ಆಗುತ್ತೇ? ಒಂದ್ ದಿನಾನಾದ್ರೂ ಹೊರಗಿನ ಪ್ರಪಂಚದ ಬಗ್ಗೆ ಯೋಚ್ನೇ ಮಾಡಿ ಗೊತ್ತೇನ್ರೀ ಅವರಿಗೆ? ತಾವ್ ಆಡಿದ್ದೇ ಆಟ ತಾವ್ ಮಾಡಿದ್ದೇ ಮಾಟಾ ಅನ್ನೋ ಗುಂಗ್ನಲ್ಲಿ ತಮ್ಮಲ್ಲಿರೋ ಡಾಲರ್ರೂ-ಪೌಂಡೂ-ಯೂರೋಗಳನ್ನ ಝಳಪಿಸ್ತಾನೇ ನಮ್ಮಲ್ಲಿರೋ ರುಪಾಯಿ ಎಣಿಸೋ ಜನಗಳನ್ನ ಕೊಂದು ಬಿಟ್ಟಿರೋದು. ಕಷ್ಟಾ ಇರ್ಲಿ, ಸುಖಾ ಇರ್ಲಿ ಕಂಡಿದ್ದನ್ನೆಲ್ಲ ರೊಕ್ಕದಿಂದ ಕೊಳ್ತೀವಿ ಅನ್ನೋ ಮಾತು ಎಲ್ಲೀವರೆಗೆ ನಡೆಯುತ್ತೇ ನೀವೇ ಹೇಳಿ’ ಎಂದು ನನಗೇ ತಿರುಮಂತ್ರ ಹಾಕಲು ನೋಡಿತು.
ನಾನು, ’ಓಹ್, ಪ್ರತಿಯೊಂದೂ ದುಡ್ಡಿನ ಸುತ್ಲೂ ತಿರುಗುತ್ತೇ, ಅಲ್ವೇನು?’ ಅಂದು ಸುಮ್ಮನಾದೆ.
’ನೋಡಿ ನೋಡಿ, ನಮಗೇನೋ ಅರ್ಥ ಆಗದ ಹೀಗೆ ದೊಡ್ಡದೊಂದು ವಾಕ್ಯವನ್ನ ಮಧ್ಯೆ ಸೇರಿಸಿ ಏನೂ ಎಕ್ಸ್ಪ್ರೆಶ್ಶನ್ನೇ ಇಲ್ದಿರೋ ಮುಖವನ್ನ ಮಾಡೋ ಕಲೆ ಅನಿವಾಸಿಗಳಿಗಲ್ದೇ ಇನ್ಯಾರಿಗೆ ಬರುತ್ತೇ?’ ಎಂದು ಬಲಗಡೆ ದ್ರಾಕ್ಷಿ ಸೊಪ್ಪು ಹಾಕಿತು.
’ದುಡ್ದಿನ ವಿಷ್ಯಾ ಎತ್ತಿದೋನು ನಾನಂತೂ ಅಲ್ಲಾ!’ ಎಂದು ಒಂದು ಕ್ಷಣ ತಡೆದು, ’ನಿಮ್ಮಗಳಲ್ಲೇ ಅಡಗಿರೋ ಭಿನ್ನತೆ, ಭಿನ್ನಾಭಿಪ್ರಾಯದ ಮಸೂರದಲ್ಲಿ ಎಲ್ರುನ್ನೂ ನೋಡೋ ಹಾಗೆ ಅನಿವಾಸಿಗಳನ್ನೂ ನೋಡಿ, ಅದರಲ್ಲಿ ಕಾಣೋದೇನಿದ್ರೂ ನಿಮಗೆ ಹಳದಿಯೇ, ಕಾಮಾಲೆ ರೋಗ ನನಗಂತೂ ಬಂದಿಲ್ಲ’ ಎಂದು ಮತ್ತೆ ಸುಮ್ಮನಾದೆ.
ಎಡಗಡೆ ಇದ್ದ ದ್ರಾಕ್ಷಿಗೆ ಈಗಂತೂ ಸಿಟ್ಟೇ ಬಂದಿತು ಅಂತಾ ಕಾಣ್ಸುತ್ತೆ, ’ಬಾರಿ ಶಾಣ್ಯಾ ಇದೀರ್ ನೋಡ್ರಿ, ಅದೆಷ್ಟು ಬೇಗ ನಮ್ಮ ಆರ್ಗ್ಯುಮೆಂಟೇ ತೆಗೆದು ನಮ್ಮ ಮೇಲೇ ಗೂಬೇ ಕೂರಿಸಿ ತಮ್ಮನ್ನ ತಾವೇ ಸರಿ ಅಂತ ಸಾಧಿಸಿಕೊಳ್ಳೋ ನಿಮ್ಮಂತೋರಿಗೆಲ್ಲಾ ಒಂದ್ ಗತಿ ಕಾಣ್ಸದೇ ಇದ್ರೆ ನೋಡಿ ಮತ್ತೆ?’ ಎಂದು ಕತ್ತಿ ಮಸೆಯಿತು.
’ಓಹ್, ಏನು...ಅನಿವಾಸಿಗಳ ನಡೆನುಡಿಯ ಬಗ್ಗೆ ಪುಸ್ತಕಾ ಬರೀತೀರೇನು?’ ಎಂದು ಜೋರಾಗಿ ನಗುವ ಧ್ವನಿಯನ್ನು ಮಾಡಿ ಕೈಯಲ್ಲಿನ ಚಮಚೆಯಿಂದ ಪಕ್ಕೆಗೆ ತಿವಿದೆ, ’ಬರೀರಿ, ಬರೀರಿ - ನಿಮ್ಮಗಳ ಸಾಹಿತ್ಯವೇ ದೊಡ್ದು, ನೀವ್ ಬರ್ದಿರೋದೇ ರಾಮಾಯಣ!’
ಆ ಎರಡೂ ದ್ರಾಕ್ಷಿಗಳು ಒಕ್ಕೊರಲಿನಿಂದ, ’ದಯವಿಟ್ಟು ಈಗ ನಮ್ಮನ್ನ ಸುಮ್ನೇ ಬಿಟ್ ಬಿಡಿ ಸಾರ್, ಕಾರ್ಯಕ್ರಮ ಶುರುವಾಗೋ ಹೊತ್ತಾಯ್ತು’ ಎಂದು ಆರ್ತರಾಗಿ ಬೇಡಿಕೊಂಡವು.
ನಾನಿದ್ದೋನು, ’ಇನ್ನೊಬ್ರ ಬದುಕಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಅದೇನೋ ಕಾರ್ಯಕ್ರಮ ಅಂತ ಸಾಯ್ತಿರೋ ನಿಮಗೆ ಸಮಯದ ಪ್ರಜ್ಞೇ ಬೇರೆ ಕೇಡಿಗೆ’ ಎನ್ನುತ್ತಾ ಇವತ್ತು ಪಾಯಸಕ್ಕೆ ದ್ರಾಕ್ಷಿ ಹಾಕದಿದ್ರೇನೇ ಲೇಸು ಎಂದು ದ್ರಾಕ್ಷೀ ಡಬ್ಬದ ಮುಚ್ಚಳವನ್ನು ಹಾಕಿದರೂ, ದ್ರಾಕ್ಷಿ ಸ್ನೇಹಿತರು ಹೇಳಿದ ’ಅನಿವಾಸಿಗಳು ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ’ ಎನ್ನುವ ವಾಕ್ಯಗಳು ನನ್ನ ಮನದಲ್ಲಿ ಅನುರಣಿಸತೊಡಗಿದವು.