ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ...
ಮತ್ತದೇ ಮಬ್ಬು ಮುಸುಕಿಕೊಂಡು ಇರೋ ಒಂದು ಭಾನುವಾರವನ್ನೂ ಹೆಚ್ಚೂ ಕಡಿಮೆ ಕತ್ತಲೆಯಲ್ಲೇ ದೂಡಿ ಬಿಡುವ ಸಂಚನ್ನು ಯಾರು ಮಾಡಿದ್ದಾರೋ ಎನ್ನುವ ಅನುಮಾನ ಯಾರಿಗಾದರೂ ಬರುವಂತಿತ್ತು ಇವತ್ತಿನ ಹವಾಮಾನ. ಮೊನ್ನೆ ಒಂದಿಷ್ಟು ಸ್ನೋ ಫ್ಲೇಕ್ಸ್‌ಗಳನ್ನ ನೆಲಕ್ಕೆಲ್ಲಾ ಸಿಂಪಡಿಸಿ ಹಳೆಯ ನೆಂಟಸ್ತಿಕೆಯನ್ನು ಗುರುತಿಸಿಕೊಂಡು ಬರೋ ದೂರದ ಸಂಬಂಧಿಯ ಹಾಗೆ ಹೇಳದೇ ಕೇಳದೇ ಬಂದು ಹೆಚ್ಚು ಹೊತ್ತು ನಿಲ್ಲದ ಸ್ನೋ ಇವತ್ತು ಒಂದು ಮುಕ್ಕಾಲು ಇಂಚಿನಷ್ಟು ಬಂದು ಬಿದ್ದಾಗಲೇ ನಾನು ಮನಸ್ಸಿನಲ್ಲಿ ಮುಂಬರುವ ಕೆಟ್ಟ ಛಳಿಯನ್ನು ಯೋಚಿಸಿಕೊಂಡು ಒಮ್ಮೆ ನಡುಗಿ ಹೋಗಿದ್ದು. ಗ್ಲೋಬಲ್ ವಾರ್ಮಿಂಗ್ ಅಥವಾ ಎನ್ವೈರ್‌ಮೆಂಟನ್ನು ಚೆನ್ನಾಗಿಟ್ಟುಕೊಳ್ಳುವುದು ಹಾಗಿರಲಿ, ನಮ್ಮನೇ ಡೆಕ್ಕ್‌ನಲ್ಲಿರುವ ಥರ್ಮಾ ಮೀಟರ್ ಸೊನ್ನೆಯ ಆಜುಬಾಜುವಿನಲ್ಲಿ ತನ್ನೊಳಗೆ ಹುದುಗಿದ ಪಾದರಸವನ್ನು ಅದುಮಿಕೊಂಡಿರುವಾಗ ಫೈರ್‌ಪ್ಲೇಸ್‌ನಲ್ಲಿ ಬೆಂಕಿ ಉರಿಸದೇ ಬದುಕೋದಾದರೂ ಹೇಗೆ ಎಂದು ಇತ್ತೀಚೆಗಷ್ಟೇ ಅನ್ನಿಸಿದ್ದು.
ಮೊದಲೆಲ್ಲಾ ಶಾಲೆಗೆ ಹೋಗೋ ಹುಡುಗ್ರಾಗಿದ್ದಾಗ ಬೆಳ್ಳಂಬೆಳಗ್ಗೆ ಬಚ್ಚಲು ಮನೆ ಒಲೆಯ ಮುಂದೆ ಕುಳಿತೇ ಹಲ್ಲು ತಿಕ್ಕು ತಿದ್ದುದು. ಬಚ್ಚಲು ಮನೆಯ ಒಲೆಯೊಳಗೆ ಅದೆಷ್ಟು ಬಾರಿ ಗೋಡಂಬಿಯನ್ನೋ ಹಲಸಿನ ಬೀಜವನ್ನೋ ಸುಟ್ಟು ತಿಂದಿದ್ದಿಲ್ಲ. ಹಾಗೇ ಇಲ್ಲಿಯ ಫೈರ್‌ಪ್ಲೇಸ್‌ನೊಳಗೆ ಉರಿಯುವ ಜ್ವಾಲೆ ಹಳೆಯದನೆಲ್ಲ ನೆನಪಿಗೆ ತರುತ್ತದೆ. ಅಲ್ಲಿ ಬಚ್ಚಲ ಒಲೆಯ ಉರಿ ತನ್ನ ಮೇಲಿನ ತಣ್ಣೀರ ಹಂಡೆಯನ್ನು ಬಿಸಿ ಮಾಡಿಕೊಂಡಿರುತ್ತಿದ್ದರೆ ಇಲ್ಲಿಯ ಬೆಂಕಿ ತನ್ನೊಳಗಿನ ಉರಿ ಹಾಗೂ ಉಷ್ಟತೆಯನ್ನು ಚಿಮಣಿಯೊಳಗೆ ಏರಿಸಿಕೊಂಡು ಏದುಸಿರು ಬಿಡುವುದರಲ್ಲೇ ಸಂತೋಷ ಪಡುವಂತೆ ಕಾಣುತ್ತಿತ್ತು. ನಿಗಿ ನಿಗಿ ಉರಿದ ಬೆಂಕಿ, ತಾವೇ ಉರಿದು ತಮ್ಮನ್ನೇ ತಾವು ಅರ್ಪಿಸಿಕೊಳ್ಳುವ ಒಣಗಿದ ಕಟ್ಟಿಗೆ, ಕೆಂಪಾದ ಕೆಂಡ ಕಪ್ಪಾಗಿ ಮುಂದೆ ಬಿಳಿಯ ಬೂದಿಯಾಗೋದು, ಮಧ್ಯೆ ಯಾರಿಗೋ ಪಿಟಿಪಿಟಿ ಬಯ್ಯೋ ಮುದುಕಿಯ ಸ್ವರದ ಹಾಗೆ ಕಂಡು ಬರುವ ಚಟಪಟ ಸಿಡಿಯುವ ಸದ್ದು ಹೀಗೆ ನಮ್ಮನೆಯಲ್ಲಿನ ಫೈರ್‌ಪ್ಲೇಸ್‌ನ ಬೆಂಕಿಯದು ಒಂದೊಂದು ದಿನ ಒಂದೊಂದು ಕಥೆ. ಮೊದಲೆಲ್ಲಾ ಸ್ವಲ್ಪ ಬಿಸಿಯಾದ ನೀರನ್ನು ಸ್ನಾನ ಮಾಡಬಹುದಿತ್ತು, ಸ್ವಲ್ಪವೇ ಬೆಂಕಿ ಕಾಯಿಸಿಕೊಂಡಿದ್ದರೂ ಹಾಯ್ ಎನಿಸುತ್ತಿತ್ತು, ಇತ್ತೀಚೆಗಂತೂ ಎಷ್ಟು ಸುಡು ನೀರನ್ನು ಮೈ ಮೇಲೆ ಹೊಯ್ದುಕೊಂಡರೂ ಎಷ್ಟೇ ಬೆಂಕಿಯನ್ನು ಕಾಯಿಸಿಕೊಂಡರೂ ಮತ್ತಷ್ಟು ಬಿಸಿ ಬೇಕು ಎನ್ನಿಸುತಿದೆ. ಹೀಗೆ ವಯಸ್ಸು ಮಾಗುತ್ತಿರುವ ಹಾಗೆ ಚರ್ಮ ಸುಕ್ಕು ಸುಕ್ಕಾಗುತ್ತಿರುವಂತೆ ಮೈ ಮೇಲೆ ಬೀಳುವ ನೀರಿನ ಬಿಸಿಯೂ ಹೆಚ್ಚಾಗಬೇಕು, ಬೆಂಕಿಯ ಜ್ವಾಲೆಗೆ ಹತ್ತಿರ ಬರಬೇಕು, ಅಲ್ಲದೇ ಪ್ರತಿಯೊಂದು ವರ್ಷದ ಛಳಿಯ ಅನುಭವವೂ ಹಿಂದಿನ ವರ್ಷದ ಅನುಭವಕ್ಕಿಂತ ಕಟುವಾಗಬೇಕು.
ಕಿಟಕಿಯಿಂದ ಹೊರಗಡೆ ನೋಡಿದರೆ ಬಡವರ ಮೇಲೆ ದೌರ್ಜನ್ಯ ಮಾಡುವ ಬಿಳಿ ಬಟ್ಟೆ ತೊಟ್ಟ ರಾಜಕಾರಣಿಗಳ ಹಾಗೆ ಕೇವಲ ಹುಲ್ಲಿನ ಮೇಲೆ ಮಾತ್ರ ಅರ್ಧ ಅಂಗುಲದಷ್ಟು ಸ್ನೋ ಕಟ್ಟಿ ನಿಂತಿತ್ತು. ಹುಲ್ಲಿನ ಪಕ್ಕದಲ್ಲಿರುವ ಕರಿ ರಸ್ತೆಯಾಗಲೀ, ಗ್ರೇ ಬಣ್ಣದ ಸೈಡ್ ವಾಕ್ ಮೇಲಾಗಲೀ ಬೀಳುತ್ತಿದ್ದ ಸ್ನೋ ಕಟ್ಟಿ ನಿಲ್ಲುತ್ತಿರಲಿಲ್ಲ, ಅದೇ ಕಣ್ಣಿಗೆ ಕಾಣುವ ಕರಿದಾದ ಮನೆಯ ಛಾವಣಿಯ ಮೇಲೆ ಸ್ನೋ ತನ್ನ ಅಟ್ಟಹಾಸ ಸಾರುತ್ತಿತ್ತು. ನಿಸರ್ಗದತ್ತ ಕೊಡುಗೆಯಾದ ಹಿಮಕ್ಕೂ ಈ ಬಗೆಯ ಭಿನ್ನತೆ ಏಕೆ ಮನಸ್ಸಿನಲ್ಲಿ ಬಂತು ಎಂದು ನಾನೊಮ್ಮೆ ಯೋಚಿಸಿಕೊಂಡರೂ ಬೇರೇನೋ ಭೌತಿಕವಾದ ಬಲವಾದ ಕಾರಣವಿದೆ ಇದರ ಹಿಂದೆ ಎಂದು ತಲೆ ತೂಗಿಸಿ ಆ ವಸ್ತುವನ್ನು ಅಲ್ಲಿಗೇ ಬಿಟ್ಟೆ. ಬೆಳಗ್ಗಿನಿಂದ ಸಂಜೆವರೆಗೆ ಹೊರಗಡೇ ಪ್ರತಿಶತ ತೊಂಭತ್ತು ಭಾಗ ಆರ್ಧತೆ ಇರುವ ವ್ಯವಸ್ಥೆಯಲ್ಲಿನ ಮನೆಯೊಳಗೆ ಬೆಳಗ್ಗಿನಿಂದ ಸಂಜೆವರೆಗೆ ಉರಿಯುವ ಗ್ಯಾಸ್ ಹೀಟರ್‌ನ ಮಹಿಮೆಯೋ ಮತ್ತೊಂದು ಅತ್ಯಂತ ಡ್ರೈ ಹವೆಯಿರುವುದು ಮತ್ತೊಂದು ತಲೆತಿನ್ನುವ ಅಂಶ. ಬೇಕೋ ಬೇಡವಾಗಿಯೋ ತುರಿಸಿಕೊಳ್ಳಲೇ ಬೇಕು ಚರ್ಮವನ್ನು - ಕೆರೆದುಕೊಂಡಲ್ಲೆಲ್ಲಾ ಉರಿದುಕೊಳ್ಳೋದು ಸಾಮಾನ್ಯ, ಇನ್ನೇನಾದರೂ ಹೆಚ್ಚೂ ಕಡಿಮೆಯಾಗಿ ಘಾಯವಾಗಿ ಹೋದರೆ ಎನ್ನುವ ಹೆದರಿಕೆ ಬೇರೆ ಕೇಡಿಗೆ.
ಈಗಾಗಲೇ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡಿರುವ ಪ್ರತಿಯೊಂದು ಮರಗಳೂ ದಿನವಿಡೀ ಬೀಳೋ ಬಿಳೀವಸ್ತುವಿನ ಎದಿರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಬೀಳುವಾಗ ಮಾತ್ರ ಶುದ್ಧ ಬಿಳಿಯಾಗಿ ಮರುದಿನದಲ್ಲೇ ಪ್ರಪಂಚದ ಕೊಳೆಯನ್ನು ತನ್ನ ಮುಖದಲ್ಲಿ ಬಿಂಬಿಸಿಕೊಳ್ಳುವ ರಸ್ತೆ ಬದಿಯ ಸ್ನೋ ಗೆ ಯಾಕೀ ಮರಗಳು ಅಷ್ಟೊಂದು ಮಹತ್ವಕೊಡುತ್ತವೆ ಎನ್ನುವುದನ್ನು ನಾನಂತೂ ಅರಿಯೆ. ತಮ್ಮ ಅಂಗುಲ ಅಂಗುಲಗಳಲ್ಲಿ ಈ ಬಿಳಿವಸ್ತುವನ್ನು ಏಕೆ ನಿಲ್ಲಿಸಿಕೊಳ್ಳಬೇಕು, ಗಾಳಿ ಬಂದ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಝಾಡಿಸಿ ಒದ್ದು ನೂಕಿದರೆ ಹೇಗೆ ಈ ಬಿಳಿವಸ್ತುವನ್ನ ಎಂದು ಮರದ ಪರವಾಗಿ ಯೋಚಿಸುತ್ತಿದ್ದ ನನ್ನ ಮನದಲ್ಲಿ ಬಂದ ಆಲೋಚನೆ. ಮನೆಯ ಹಿಂದೆ ಹಾಗೂ ಮುಂದೆ ಇರುವ ಬರ್ಚ್ ಮರಗಳಲ್ಲಿ ಯಾವುದೇ ಧಮ್ ಇದ್ದಂತಿರಲಿಲ್ಲ. ನಳಿ ನಳಿ ಬೇಸಿಗೆಯಲ್ಲೇ ತಮ್ಮ ಭಾರವನ್ನು ತಾವೇ ಹೊರಲಾರದ ಅಶಕ್ತ ಮರಗಳು ಆರು ತಿಂಗಳ ಛಳಿಯಲ್ಲಿ ಬದುಕಿ ಉಳಿದಾವೇ ಎನ್ನುವ ಸಂಶಯವೇ ಬಲವಾಗಿರುವಾಗ ಈ ಮರಗಳ ಹೊತ್ತುಕೊಂಡು ನನ್ನದಾದರೂ ಯಾವ ವಾದ? ಈ ಅಶಕ್ತ ಮರಗಳ ಬದಲಿಗೆ ಕುಬ್ಜ ನಿತ್ಯಹರಿದ್ವರ್ಣಗಲೇ ಎಷ್ಟೋ ವಾಸಿ, ತಮ್ಮ ಮೇಲೆ ಅದೆಷ್ಟೋ ಸ್ನೋ ಬಂದರೂ ಹೊತ್ತುಕೊಂಡು ಸುಮ್ಮನಿರುತ್ತವೆ, ಛಳಿಯಲ್ಲಿ ತಮ್ಮ ಎಲೆಗಳನ್ನು ಉಳಿಸಿಕೊಂಡು.
ಸಾಮಾನ್ಯ ದಿನಗಳಲ್ಲಿ ಮೂರೋ ಸಂಜೆಯ ಹೊತ್ತಿಗೆ ಗೂಡಿಗೆ ಹಿಂತಿರುಗುತ್ತಿದ್ದ ಪಕ್ಷಿಗಳ ಧ್ವನಿ, ಕಲರವ ಇಂದು ಕೇಳಿ ಬರಲಿಲ್ಲ. ಯಾವುದೇ ಸೀಜನ್ ಬಂದರೂ, ಯಾವುದೇ ಋತುಮಾನವಿದ್ದರೂ ತಮ್ಮ ಹುಟ್ಟುಡುಗೆಯಲ್ಲೇ ಕಾಳ ಕಳೆದು ಬದುಕನ್ನು ಸಾಗಿಸುವ ಈ ಪ್ರಾಣಿ-ಪಕ್ಷಿಗಳ ಬದುಕೇ ಒಂದು ಸೋಜಿಗೆ. ಇವುಗಳಿಗೆಲ್ಲಾ ಈ ಛಳಿಯಲ್ಲಿ ಕಾಳು-ಕಡಿಯನ್ನು ಯಾರು ಇಡುವವರು? ಆದ್ದರಿಂದಲೇ ಇರಬೇಕು ಶ್ರೀಮಂತ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಛಳಿ ಹೆಚ್ಚು ಇರುವುದು. ಅಳಿಲಿನಿಂದ ಹಿಡಿದು ದೊಡ್ಡ ಕರಡಿಯವರೆಗೆ ಬೇಸಿಗೆಯಲ್ಲಿ ಠೊಣಪರಂತೆ ತಿದ್ದು ಮೈ ಬೆಳೆಸಿಕೊಳ್ಳುವ ಈ ಪ್ರಾಣಿಗಳಿಗೆ ಮೊದಲು ಹಸಿವೆಂಬುದು ಏನು ಎಂದು ಕಲಿಸಿಕೊಡಬೇಕು. ಇಲ್ಲಿ ಇವುಗಳು ಹೈಬರ್‌ನೇಟ್ ಮಾಡುವುದಿರಲಿ, ಛಳಿಗಾಲಕ್ಕೆ ಆಹಾರ ಪದಾರ್ಥಗಳನ್ನು ಕೂಡಿ ಹಾಕಿಕೊಂಡರೂ ಬೇಕಾದಷ್ಟು ಜಾಗವಿದೆ, ಬಡದೇಶಗಳಲ್ಲಿನ ಸ್ಪರ್ಧೆ ಇರಬಹುದು ಇರದೆಯೂ ಇರಬಹುದು. ಆದರೆ ಇಂದು ಸಂಜೆ ಪಕ್ಷಿಗಳು ಹಿಂತಿರುಗಲೇ ಇಲ್ಲವಲ್ಲಾ, ದಿನವಿಡೀ ಓಡಾಡುವ ಅಳಿಲುಗಳು ಕಂಡುಬರಲಿಲ್ಲವಲ್ಲಾ? ಅವುಗಳೇನಾದರೂ ಬೇರೆ ಎಲ್ಲಿಯಾದರೂ ವಲಸೆ ಹೋದವೇನು? ಅಥವಾ ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಬರದೇ ಇರುವ ಶಪಥ ಮಾಡಿಕೊಂಡಿವೆಯೇನು?
ಇಲ್ಲಿನ ಮೋಡಗಳ ಅರ್ಭಟಕ್ಕೆ ಸೂರ್ಯನೂ ಇವತ್ತು ಹೆದರಿ ಸೋತು ಹೋಗಿದ್ದ. ಅವನ ಕಿರಣಗಳಿಂದಾದರೂ ನಮ್ಮ ನೆರೆಹೊರೆ ತುಸು ಗೆಲುವಾಗುತ್ತಿತ್ತು. ಇನ್ನು ಬಿದ್ದ ಬಿಳಿವಸ್ತು ನಾಳೆಗೆ ಕರಗಿ ನೀರಾಗುವುದಿರಲಿ, ಬೀಳುವಾಗ ಪುಡಿಪುಡಿಯಾಗಿದ್ದುದು ಈ ನೆಲದ ರುಚಿ ಕಂಡಕೂಡಲೇ ಗಡುಸಾಗಿ ಹೋಗುವುದು ಮತ್ತೊಂದು ವಿಶೇಷ, ತಾನು ನೆಲದ ಛಳಿಯನ್ನು ರಾತ್ರೋಹಗಲೂ ಅನುಭವಿಸಿದ ಮಾತ್ರಕ್ಕೆ ತಾನು ಎಂದು ಎಂದೆಂದಿಗೂ ಬದಲಾದ ಹಾಗೆ ಘಟ್ಟಿ ರೂಪವನ್ನು ತೋರಿಸುವುದನ್ನು ನೋಡಿದರೆ ನಮ್ಮ ನೆರೆಹೊರೆಯಲ್ಲಿ ಹಿಮ ಈ ವರ್ಷ ಕರುಗುವುದೇ ಇಲ್ಲವೇನೋ ಎನ್ನಿಸಿದ್ದು ನಿಜ. ಪ್ರಪಂಚದಾದ್ಯಂತ ಬೇಕಾದಷ್ಟಿದೆ ನೀರು, ಆದರೂ ಜನ ಬರದಲ್ಲಿ ಸಾಯುತ್ತಾರೆ. ಇಂದು ಬಿದ್ದ ಹಿಮದಿಂದ ನಮ್ಮ ನೆರೆಹೊರೆಗೂ ಅಗಾಧವಾದ ನೀರು ಬಂದಿದೆ, ನೆಲವೆಲ್ಲ ಹಸಿಯಾಗಿದೆ , ಆದರೆ ಈ ತೇವ ಹುಲ್ಲನ್ನು ಹಸಿರು ಮಾಡದೇ ಒಣಗಿಸಿ ಹಾಕುತ್ತದೆ ಎನ್ನುವುದು ಇತ್ತೀಚಿಗೆ ನಾನು ಗಮನಿಸಿದ ಸತ್ಯಗಳಲ್ಲೊಂದು.