Sunday, December 01, 2024

ಪರೀಕ್ಷಿಸುವ ಸಮಯ...

ರಾಜಕೀಯವಾಗಿ, ಸಾಮಾಜಿಕವಾಗಿ ನಾವು ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ನಮ್ಮಲ್ಲಿ ಕೆಲವರು ಅಂದುಕೊಂಡಿದ್ದರೆ, ಅಂತಹವರು ಮತ್ತೊಮ್ಮೆ ಯೋಚಿಸಬೇಕಾದ ಸಮಯ ಇದು.

ಅಮೇರಿಕದಲ್ಲಿ ಡೋನಾಲ್ಡ್ ಟ್ರಂಪ್ ಗೆದ್ದರೆ ಸರ್ವಾಧಿಕಾರಿಯಾಗಿ ಬಿಡುತ್ತಾನೆ. ಟ್ರಂಪ್ ಅನ್ನು, ನಿರಂಕುಶ ಮತಿ, ಕೇಡು ಬಯಸುವ, ಬಿಳಿಯರನ್ನು ಸರ್ವಶ್ರೇಷ್ಠರನ್ನಾಗಿ ಮಾಡಿ, ಪ್ರಪಂಚದ ಅಂತ್ಯಕ್ಕೆ ನಾಂದಿ ಹಾಡುವವನು... ಎಂದು ಇನ್ನೂ ಅನೇಕ ಉಪಮೆಗಳಿಂದ, ಆತನನ್ನು ಬಿಂಬಿಸಲಾಗಿದ್ದರೂ ಸಹ, ಎಲೆಕ್ಟೋರಲ್ ಕಾಲೇಜುಗಳ ಮತಗಳಿರಲಿ, ದೇಶದ ಉದ್ದಗಲಕ್ಕೂ ಜನಪ್ರಿಯ ಮತಗಳನ್ನು ಬಾಚಿಕೊಂಡು ದಾಖಲೆ ಮಾಡಿದನಲ್ಲ, ಅದಕ್ಕೇನೆನ್ನಬೇಕು? ಹಾಗಾದರೆ, ಅಮೇರಿಕದಲ್ಲಿ ಮತ ಚಲಾಯಿಸಿದ ಅರ್ಧಕ್ಕರ್ಧ ಜನರಿಗೆ ತಲೆ ಸರಿ ಇಲ್ಲವೆಂದರ್ಥವೇ?

ಇದು ಪ್ರಜಾಪ್ರಭುತ್ವದ ಶಕ್ತಿ ಮತ್ತು ದೌರ್ಬಲ್ಯ ಕೂಡ. ಇರುವ ಇಬ್ಬರು, ಪ್ರಮುಖ ಅಭ್ಯರ್ಥಿಗಳಲ್ಲಿ, ಯಾರಾದರೂ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಷ್ಟೇ? ಹೆಚ್ಚಿನ ಜನರು, ಕಮಲಾ ಹ್ಯಾರಿಸ್ ಬಗ್ಗೆ ಮಾತನಾಡಿಕೊಳ್ಳುತ್ತಿಲ್ಲವೇಕೆ? ಬೈಡೆನ್ ನಡೆಸಿಕೊಂಡು ಬಂದ ಈ ನಾಲ್ಕು ವರ್ಷಗಳ ದಬ್ಬಾಳಿಕೆ ಜನರಿಗೆ ಸಾಕಾಯಿತೆಂದು ಅರ್ಥವೇ?

ಕಮಲಾ ಅವರು ಸೋತಿದ್ದು ನಿಜ, ಆದರೆ, ಅದು ಅವರ ತಪ್ಪಲ್ಲ!

***

2024ರ ಡೋನಾಲ್ಡ್ ಟ್ರಂಪ್ ಚುನಾವಣೆಯ ತಯಾರಿ ಆರಂಭವಾಗಿದ್ದು, ಸುಮಾರು ಹತ್ತು ವರ್ಷಗಳ ಹಿಂದೆ. 2016ರಲ್ಲಿ ಒಮ್ಮೆ ಗೆದ್ದು, 2020ರಲ್ಲಿ ಒಮ್ಮೆ ಸೋತ ನಂತರವೂ, ಟ್ರಂಪ್ ತನ್ನ ರಾಜಕೀಯ ತಯಾರಿಯನ್ನು ಬಿಡಲೇ ಇಲ್ಲ. ತನಗೆ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಸಹ, ರಾಜಕೀಯ ಸದುದ್ದೇಶಕ್ಕೆ ಬಳಸಿಕೊಂಡು ಮುಂದೆ ಬಂದಿರುವುದು ನಿಜವಾಗಿಯೂ ಪ್ರಶಂಸೆಗೆ ಅರ್ಹವಾದ ವಿಷಯ. ಡೋನಾಲ್ಡ್ ಟ್ರಂಪ್, ತನ್ನ ರ‍್ಯಾಲಿಗಳಲ್ಲಿ, ತನ್ನ ಕಿವಿಗೆ ಗುಂಡು ಸವರಿಕೊಂಡು ಹೋದಾಗಲೂ ಸಹ, ತನ್ನನ್ನು ಹಿಡಿದು ಕೋರ್ಟ್ ಕಟಕಟೆ ಹತ್ತಿಸಿದ ಮೇಲೂ, ತನ್ನ ವಿರುದ್ಧ ರಾಜಕೀಯವಾಗಿ ಎಲ್ಲ ಷಡ್ಯಂತ್ರಗಳನ್ನು ಹೂಡಿದ ಮೇಲೂ, ಅವೆಲ್ಲವನ್ನೂ ತನ್ನ ಬೆಳವಣಿಗೆಗೆ ಪರಿಣಾಮಕಾರಿಯಾಗಿ ಬಳಸಿಕೊಂಡವ.

ರಾಜಕೀಯವಾಗಿ, ಬೇರೆ ಯಾವುದೇ ಅನುಭವವಿಲ್ಲದಿದ್ದರೂ ದೇಶದ ಎತ್ತರ ಗದ್ದುಗೆಗೆ ಏರಲು ಕಾರಣವಾಗಿದ್ದು, ಡೋನಾಲ್ಡ್ ಟ್ರಂಪ್ ಮಾಡಿದ ಅವಿರತ ಪ್ರಯತ್ನ.  ಉದಾಹರಣೆಗೆ, 78 ವರ್ಷದ ಟ್ರಂಪ್‌ಅನ್ನು ಯಾರೂ ವಯಸ್ಸಾದವನು ಎಂದು ಕರೆಯಲಾರರು. ಅವನಿಗಿಂತ ಇಪ್ಪತ್ತು ವರ್ಷ ಚಿಕ್ಕವರಿಗಿಂತಲೂ ಚಟುವಟಿಕೆಯಿಂದಿರಬಲ್ಲ ಶಕ್ತಿ ಈ ಮನುಷ್ಯನಲ್ಲಿದೆ.

ಪಾಪ, ಕಮಲಾ ಹ್ಯಾರಿಸ್‌ಗೆ ಒಂದು ರೀತಿ ಸಮಯದ ಬೊಂಬೆಯಾಗಿ ಅಲಂಕಾರಕ್ಕೆ ಇಟ್ಟು ಆಟಕ್ಕೆ ಕರೆದಂಥ ಪರಿಸ್ಥಿತಿ! ಜೋ ಬೈಡೆನ್ ಕೈಯಲ್ಲಿ ಎರಡನೇ ಟರ್ಮ್‌ಅನ್ನು ಮಾಡಲಾಗುವುದಿಲ್ಲ ಎಂದು ಹೇಳಿಕೆ ಕೊಡಲು ಡೆಮಾಕ್ರ್ಯಾಟ್ ಪಕ್ಷದ ಧೀಮಂತರು ಮುಂದೆ ಬಂದರೆ? ಹಾಗಾಗಲಿಲ್ಲ! ಬೈಡೆನ್‌ನ ಎರಡನೇ ಟರ್ಮ್‌ನ ಸಾಧ್ಯತೆಗಳು ಹಲವಿದ್ದರೂ, ಟ್ರಂಪ್ ವಿರುದ್ಧದ ಒಂದೇ ಒಂದು ಡಿಬೇಟ್ ಪಕ್ಷದ ನಿಲುವನ್ನು ಬದಲಾಯಿಸಿತು. ಬೈಡೆನ್ ಇನ್ನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿಕೆ ಕೊಡಲು ಜುಲೈ ಬರಬೇಕಾಯಿತು. ಅಷ್ಟರಲ್ಲಿ, ಕಾಲ ಮಿಂಚಿ ಹೋಗಿ, ಸಮಯದ ಬೊಂಬೆಯಾಗಿ ಕೈಗೆ ಸಿಕ್ಕ ಹ್ಯಾರಿಸ್‌ಗೆ ಪಕ್ಷದ ಟಿಕೆಟ್ ಹಸ್ತಾಂತರ ಮಾಡಬೇಕಾಗಿ ಬಂತು. ಒಂದು ವೇಳೆ, ಅದೇ ಡೆಮಾಕ್ರಾಟಿಕ್ ಪಕ್ಷದ ನಾಮಿನಿ ಒಬ್ಬರು, ಒಂದೆರಡು ವರ್ಷದಿಂದ ತಯಾರಾಗಿ, ಸರಿಯಾದ ರೀತಿಯಲ್ಲಿ ಮುಂದುವರೆದು ನಾಮಿನಿ ಆಗಿ, ಮುಂದೆ ಬಂದಿದ್ದೇ ಆದರೆ, ಇಂದು ಡೋನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾಗಲು ಸಾಧ್ಯವಾಗುತ್ತಿರಲಿಲ್ಲ.

ಈ ನಿಟ್ಟಿನಲ್ಲಿ, ಕಮಲಾ ಅವರು ಸೋತಿದ್ದು ಜೋ ಬೈಡೆನ್‌ನ ಅಧಿಕಾರ ಲಾಲಸೆಯಿಂದ. ಕಮಲಾ ಅವರು ಸರಿಯಾಗಿ ಪಕ್ಷದ ಸೆಲೆಕ್ಷನ್ ಪ್ರಾಸೆಸ್ಸಿನಲ್ಲಿ ಗೆದ್ದು, ಒಬ್ಬ ನಾಮಿನಿ ಆಗಿ ಮುಂದುವರೆದಿದ್ದರೆ, ಅವರಿಗೆ ಜಯ ಖಂಡಿತವಾಗಿಯೂ ಸಿಕ್ಕಿರುತ್ತಿತ್ತು. ನಾಲ್ಕು ವರ್ಷದಿಂದ ಕತ್ತಿ ಮಸೆದುಕೊಂಡು ಯುದ್ದದ ಅಖಾಡದಲ್ಲಿ ತಯಾರಾದ ಅಭ್ಯರ್ಥಿಯನ್ನು ಸೋಲಿಸಲು, ಕೇವಲ ಮೂರ್ನಾಲ್ಕು ತಿಂಗಳುಗಳ ತಯಾರಿ ಯಾವ ಮೂಲೆಗೂ ಸಾಲದು ಎನ್ನುವುದು ರುಜುವಾತಾಯಿತು.

***

ಅಮೇರಿಕನ್ನರಾದ್ರೂ ನಾವು ಯಾರನ್ನು ಆದರ್ಶ ಎಂದುಕೊಳ್ಳುತ್ತೇವೆ? ಉತ್ತರದ ಕೆನಡಾದ ಪ್ರಧಾನ ಮಂತ್ರಿಯನ್ನೇ? ಓಲೈಕೆ ಮತದಾರರನ್ನು ಆಶ್ರಯಿಸಿ, ಭಾರತದಂತಹ ಶಾಂತಿ ಸಂದೇಶವನ್ನು ಸಾರುವ ದೇಶದ ಮೇಲೆ ಕತ್ತಿ ಮಸೆಯುವ ಅಂಥವನನ್ನು ಗುಮ್ಮನ ಗುಸುಗ ಎನ್ನಬಹುದು.

ದಕ್ಷಿಣದ ಮೆಕ್ಸಿಕೋ ಅನ್ನು ನಂಬಬೇಕೇ? ಡ್ರಗ್ ಕಾರ್ಟೆಲ್ಲುಗಳ ಅಟ್ಟಹಾಸದಲ್ಲಿ ಸಿಕ್ಕಿಕೊಂಡು, ಚೈನಾದ ಫ಼ೆಂಟಿನಿಲ್ ಮಾತ್ರೆಗಳಿಗೆ ರಹದಾರಿಯನ್ನು ತೆರೆದು, ಅಮೇರಿಕದ ಸಾವಿರಾರು ಜನರ ಸಾವು-ನೋವುಗೆ ಕಾರಣಿಗರಾದ ಇವರನ್ನು ನಂಬುವುದಾದರೂ ಹೇಗೆ?

ಇನ್ನು ಯುರೋಪಿನವರನ್ನೇ? ಅವರ ಸಮಸ್ಯೆಗಳೇ ಅವರಿಗೆ ಹೊದೆಯಲು ಹಾಸಲು ಬೇಕಾದಷ್ಟಿವೆ. ನಮ್ಮ ಜಯಶಂಕರ್ ಹೇಳಿದಂತೆ, ಯುರೋಪಿನ ಸಮಸ್ಯೆಗಳು ಜಗತ್ತಿನ ಸಮಸ್ಯೆಗಳು ಎಂದು ಅವರು ನಂಬಿಕೊಂಡಿರಬಹುದು. ಆದರೆ, ನಾವು ಹಾಗೆ ಅಂದುಕೊಂಡಿಲ್ಲ. ಯೂರೋಪು ಎನ್ನುವ, ಸುಮಾರು 25-30 ದೇಶಗಳ ಒಂದು ಸಂಕೀರ್ಣ ಖಂಡದಲ್ಲಿ, ಮುಕ್ಕಾಲು ಬಿಲಿಯನ್ ಜನಸಂಖ್ಯೆ ಇರಬಹುದು, ಅಂದರೆ ಭಾರತದ ಅರ್ಧದಷ್ಟು. ಅವರ ಇತಿಹಾಸವನ್ನು ತೆರೆದು ನೋಡಿದರೆ, ಬರೀ ಹೋರಾಟ, ಹೊಡೆದಾಟಗಳೇ ಕಾಣಿಸುತ್ತವೆ. ರಷ್ಯವನ್ನು ಹೊರತು ಪಡಿಸಿದರೆ, ಯುರೋಪಿನ ವಿಸ್ತೀರ್ಣವಾಗಲೀ, ಜನಸಂಖ್ಯೆಯಾಗಲೀ ಅಷ್ಟೊಂದು ಮುಖ್ಯವೆನಿಸೋದಿಲ್ಲ. ಹಾಗಂತ, ಬರೀ ಜನಸಂಖ್ಯೆ ಮತ್ತು ವಿಸ್ತೀರ್ಣ ಇವೆರಡರಲ್ಲಿ ಮಾತ್ರ ಒಂದು ದೇಶವನ್ನು ಅಳೆಯಲಾಗದು. ಇತಿಹಾಸದ ಪುಟಗಳಲ್ಲಿ ಯುರೋಪಿನ ಪಾತ್ರ ಬೇಕಾದಷ್ಟಿದೆ, ಅದರೆ, ಅಲ್ಲಿನ ದೇಶಗಳೆಂದೂ ಅಮೇರಿಕದ ಆದರ್ಶವೆನಿಸಲಾರದು.

ಇನ್ನು ಚೈನಾ ದೇಶ? ಕಮ್ಯುನಿಸಮ್‌ನ ಕಪಿಮುಷ್ಟಿಯಲ್ಲಿ ಸಿಲುಕಿ ಹಾಕಿಕೊಂಡ ಒಂದೂವರೆ ಬಿಲಿಯನ್ ಜನರ ಸಾಮಾಜಿಕ ಆಶೋತ್ತರಗಳನ್ನು ನೀವು ಗಮನಿಸಿದರೆ ಅರ್ಥವಾಗುತ್ತದೆ. ಜಗತ್ತಿನ ವೇರ್‌ಹೌಸ್ ಎಂದು ಬೋರ್ಡ್ ತಗಲಿಸಿಕೊಂಡು ನಮ್ಮ ದಿನಬಳಕೆಯ ಸಾಕ್ಸ್‌ನಿಂದ ಹಿಡಿದು ಫ಼ೋನ್‌ವರೆಗೆ ಎಲ್ಲವನ್ನು ತಯಾರು ಮಾಡಿ ಅಚ್ಚುಕಟ್ಟಾಗಿ ಕಳಿಸಿಕೊಡುವುದರಲ್ಲಿ ನಿಸ್ಸೀಮರು ಅವರು. ಅಷ್ಟೇ ಅಲ್ಲ, ಗೂಡಾಚಾರಿಕೆ, ಬೇಹುಗಾರಿಕೆ, ತಂತ್ರಜ್ಞಾನ ಮತ್ತು ಜ್ಞಾನವನ್ನು ಕಳ್ಳತನ ಮಾಡುವುದು, ಸೈಬರ್/ಕಂಪ್ಯೂಟರ್ ಧಾಳಿ ಮಾಡುವುದು, ಅಮೇರಿಕದ ಒಳಗಡೆ ಮಾದಕ ದ್ರವ್ಯಗಳನ್ನು ನುಸುಳುವಂತೆ ಮಾಡಿ ಯುವಜನರನ್ನು ಹಾಳು ಮಾಡುವುದು - ಇವುಗಳಷ್ಟೇ ಅಲ್ಲ, ಪಟ್ಟಿ ಇನ್ನೂ ಉದ್ದವಾಗುತ್ತ ಹೋಗುತ್ತದೆ. ಇಲ್ಲ, ಚೈನಾದವರು, ನಮಗ್ಯಾವತ್ತೂ ಆದರ್ಶಪ್ರಾಯರಾಗೋದಿಲ್ಲ.

ಇನ್ನುಳಿದ ಪುಟ್ಟ ಹಾಗೂ ಪ್ರಬಲ - ಜಪಾನ್, ಸೌತ್ ಕೊರಿಯಾ? ಅವರ ಆದರ್ಶಗಳು ಅವರಿಗೇ ಇರಲಿ. ಅವರ ಚಿಕ್ಕ ದೇಶದಲ್ಲಿ ನಡೆದುಕೊಂಡು ಬರುವ ಜನಾಭಿಪ್ರಾಯ, ಜನಬಳಕೆ ನಮ್ಮ ದೊಡ್ಡ ದೇಶದಲ್ಲಿ ನಡೆಯೋದಿಲ್ಲ. ಸೌತ್ ಕೊರಿಯಾದವರು ರಾತ್ರೋ ರಾತ್ರಿ ಎಲ್ಲ ಮನೆ/ಆಫ಼ೀಸುಗಳನ್ನು ಹೈ ಸ್ಪೀಡ್ ಇಂಟರ್ನೆಟ್‌ಗೆ ಅಪ್‌ಗ್ರೇಡ್ ಮಾಡಬಹುದು, ಆದರೆ, ಅವರ ತಂತ್ರಗಾರಿಕೆ ಅಮೇರಿಕದಲ್ಲಿ ನಡೆಯೋದಿಲ್ಲ.

***

ಅಮೇರಿಕದಲ್ಲಿನ ಒಂದು ಅಂಶ ಎಲ್ಲರಿಂದಲೂ ನಗಣ್ಯವಾಗಿಯೇ ಉಳಿಯುತ್ತದೆ - ಅದು, ಇಲ್ಲಿನ ಸ್ವಾತ್ರಂತ್ಯ (freedom), ಅನಿರ್ಬಂಧಿತ ಸ್ಥಿತಿ (liberty). ಯಾವ ಸರ್ಕಾರವೇ ಬರಲಿ, ಜನರಿಗೆ ನೀವು ಹೀಗೆಯೇ ಬದುಕಬೇಕು ಎಂದು ಎಲ್ಲಿಯೂ ತಡೆ ಹಾಕುವುದಿಲ್ಲ. ಕೋವಿಡ್ ಬಂದಾಗಲೂ ಕೂಡ ಒಂದಿಷ್ಟು ಜನ ವ್ಯಾಕ್ಸೀನ್ (ಲಸಿಕೆ) ಗಳನ್ನು ಚುಚ್ಚಿಸಿಕೊಳ್ಳಲಿಲ್ಲ - ಆ ಬಗ್ಗೆ ಸರ್ಕಾರ ಯಾವುದೇ ನಿರ್ಬಂಧ ಹೇರಲಿಲ್ಲ.

ಅಮೇರಿಕದಲ್ಲಿ ಗಾಜ಼ಾ ಪಟ್ಟಿ-ಪ್ಯಾಲಿಸ್ತೇನ್ ಜನರ ಪರವಾಗಿ ಹೋರಾಡುವ ಯುವಕ-ಯುವತಿಯರು ಒಂದು ದಿನ ಆ ದೇಶಗಳಲ್ಲಿ ಬದುಕಿ ಬಂದರೆ, ಅವರಿಗೆ ನಿಜವಾಗಿಯೂ freedom, liberty ಯ ಬೆಲೆ ಗೊತ್ತಾಗುತ್ತದೆ! ಉದಾಹರಣೆಗೆ, ಇರಾನ್ ದೇಶದಲ್ಲಿ, ಯಾವುದೇ ಸಮುದಾಯದ ಯುವತಿಯೂ ಕೂಡ ತಲೆವಸ್ತ್ರ ಧರಿಸದೇ ಹೊರಗೆ ತಲೆ ಹಾಕುವಂತಿಲ್ಲ. ಅಲ್ಲೇಕೆ ಹೋಗಿ ಇವರುಗಳು ಧರಣಿ ಹೂಡೋದಿಲ್ಲ?

ಈ ಭೂಮಿಯ ಮೇಲಿರುವ ಇನ್ನೂರು ದೇಶಗಳಲ್ಲಿ, ಅಮೇರಿಕ ಒಂದೇ ತನ್ನ ರಾಷ್ಟ್ರಧ್ವಜವನ್ನೂ ಕೂಡ ಸುಡುವ, ಹರಿಯುವ, ತೊಟ್ಟುಕೊಳ್ಳುವ ಅವಕಾಶವನ್ನು (freedom ನ ಹೆಸರಿನಲ್ಲಿ) ಕೊಟ್ಟಿರುವುದು. ಅಂತಹ ರಾಷ್ಟ್ರದಲ್ಲಿದ್ದುಕೊಂಡು, ಆ ರಾಷ್ಟ್ರದ ಪ್ರಜೆಗಳಾಗಿ, ಅಲ್ಲಿನ ಕಾಲೇಜಿನ ಫಲಾನುಭವಿಯಾಗಿ, ಅಮೇರಿಕದ ಮೇಲೆ ಗೂಬೆ ಕೂರಿಸುವಂತಹ ಭಾಷಣಗಳನ್ನು ಮಾಡುತ್ತಾರಲ್ಲ, ಅಂತಹವರನ್ನು ಏನೆಂದು ಕರೆಯಬೇಕು?

***

Introspection

ಇದೊಂದು ಪರೀಕ್ಷೆಯ ಸಮಯ. ಅಮೇರಿಕನ್ನರ ಸತ್ವವನ್ನು ಪರೀಕ್ಷಿಸಿ ನೋಡುವ ಸಮಯ ಹತ್ತಿರ ಬಂದಿದೆ. ನಮ್ಮ ದೇಶದಲ್ಲಿ ಅನ್ಯಾಯದ ಹಾದಿಯಲ್ಲಿ ನಡೆದು ಫ಼ೆಂಟಿನೆಲ್ ಅಂತಹ ಕ್ರೂರ ಡ್ರಗ್‌ಅನ್ನು ಹಂಚುತ್ತಾ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ಯಾರೇ ನಡೆಸಿದ್ದರೂ ಅಂಥವರಿಗೊಂದು ಪಾಠ ಕಲಿಸುವ ಸಮಯ ಹತ್ತಿರ ಬಂದಿದೆ.

ಇಲ್ಲಿನ ಯುವ ಜನತೆಗೆ ಬ್ರೈನ್ ವಾಷ್ ಮಾಡಿ, ಹಿಜಾಬ್ ತೊಡಿಸಿ, ಅವರ ಮನದಲ್ಲಿ ಅಮೇರಿಕದ ಬಗ್ಗೆ ವಿಷ ಉಣಿಸುವ ಎಲ್ಲರಿಗೂ ಪಾಠ ಕಲಿಸುವ ಮತ್ತು ಪ್ರಶ್ನಿಸುವ ಸಮಯ ಒದಗಿ ಬಂದಿದೆ.

ಅಮೇರಿಕನ್ನರ ನೀತಿ ಏನೇ ಇರಲಿ, ಅದು ಅಲ್ಲಿನ ಜನರಿಂದ ಜನರಿಗೋಸ್ಕರ ಇರುವ ನೀತಿ. ನೂರಕ್ಕೆ ಐವತ್ತರಷ್ಟು ಜನ ಟ್ರಂಪ್ ಅನ್ನು ಮುಂದಿನ ಅಧ್ಯಕ್ಷರನ್ನಾಗಿ ಚುನಾಯಿಸಿ ತಪ್ಪನ್ನಂತೂ ಮಾಡಿಲ್ಲ. ಅವರ ಮುಂದಿರುವ ಇಬ್ಬರಲ್ಲಿ, ಶಾಂತಿ-ಸೌಹಾರ್ದತೆ ಬಂದು ನೆಲೆಸೀತು ಎನ್ನುವ ಆಶಾಭಾವನೆಯಿಂದ,  ಒಂದನ್ನು ಆಯ್ದುಕೊಂಡಿದ್ದಾರೆ, ಅಷ್ಟೇ. ಅವರ ನಿರೀಕ್ಷೆ ಹುಸಿಯಾಗದಿರಲಿ.

ಟ್ರಂಪ್‌ಗೆ ಮತ ಚಲಾಯಿಸಿದ ಹೆಚ್ಚು ಜನರಲ್ಲಿ ಕಾಲೇಜು ಡಿಗ್ರಿಗಳಿಲ್ಲ, ಆದರೆ, ಇವರೆಲ್ಲ ಜೀವನದಲ್ಲಿ ಸ್ಥಿರತೆಯನ್ನು ನಿರೀಕ್ಷಿಸುವವರು. ಎರಡು ಹೊತ್ತು ತಮ್ಮ ತಮ್ಮ ಕುಟುಂಬಗಳಿಗೆ ಊಟ ಸಿಕ್ಕುವ ವ್ಯವಸ್ಥೆಗೆ ಬೆಂಬಲ ಕೊಡುವವರು. ಹೆಚ್ಚಿನವರು ಬ್ಲೂ ಕಾಲರಿನ ಕೆಲಸಗಾರರು. ಒಂದು ವೇಳೆ, ಬೈಡೆನ್-ಹ್ಯಾರಿಸ್ ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ, ಅವರು ಟ್ರಂಪ್‌ಅನ್ನು ಅತಂತ್ರಗೊಳಿಸುವುದಕ್ಕೆ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವುದರ ಬದಲಿಗೆ, ಇಮಿಗ್ರೇಷನ್ ಮತ್ತು ಇನ್‌ಫ಼್ಲೇಷನ್ ನಿಯಂತ್ರಣಕ್ಕೆ ಮನಸ್ಸು ಮಾಡಿದ್ದರೆ, ಇಂದು ಅಮೇರಿಕದ ರಾಜಕೀಯ ದಿಕ್ಕೇ ಬದಲಾಗುತ್ತಿತ್ತು... ಅಂತಹ ಸುಸಂದರ್ಭದ ಸಮಯವನ್ನು ಹಾಳು ಮಾಡಿಕೊಂಡ ಡೆಮಾಕ್ರಾಟಿಕ್ ಪಕ್ಷದ ನಾಯಕರುಗಳಿಗೆ ಪರೀಕ್ಷೆಯ ಸಮಯ ಬಂದಿದೆ.

No comments: