ನನ್ನ ಪೆನ್ನಿನ ಕಥೆ...
'ಆ ಪೆನ್ನು ನನ್ದೂ, ಅದಿಲ್ದೇ ಇದ್ರೆ ನಾನ್ ಎಕ್ಸಾಮ್ಗೇ ಹೋಗಲ್ಲ!' ಎಂದು ನೀವು ನಿಮ್ಮ ಬದುಕಿನಲ್ಲಿ ಯಾವತ್ತಾದ್ರೂ ಹಠ ಹಿಡಿಯದೇ ಈ ಲೇಖನ ಓದುವವರೆಗೆ ಬೆಳಿದಿದ್ದೀರಿ ಅಂದ್ರೆ, ನೀವು ನಾನು ಬೆಳೆದ ಭಾರತದ ವಾತಾವರಣದಲ್ಲಿ ಬೆಳಿದಿಲ್ಲ ಎಂದು ಅರ್ಥ!
***
ಅದ್ಯಾವ್ ಪುಣ್ಯಾತ್ಮ ನಮಗೆಲ್ಲಾ ಇಂಕ್ ಪೆನ್ನಲ್ಲಿ ಬರೆಯೋಕ್ ಕಲಿಸಿದ್ನೋ ಏನೋ ಅಥ್ವಾ ನಾವು ಓದೋ ಹೊತ್ತಿಗೆ ಇನ್ನೂ ಬಾಲ್ ಪಾಯಿಂಟ್ ಪೆನ್ನುಗಳು ಅವತಾರ ತಳೆದಿರ್ಲಿಲ್ವೋ ಯಾರಿಗ್ ಗೊತ್ತು - ಒಟ್ನಲ್ಲಿ ನಾನು ಪರೀಕ್ಷೆಗಳನ್ನು ಬರೆದಿದ್ದೆಲ್ಲಾ ಇಂಕ್ ಪೆನ್ನಲ್ಲೇ. ಸ್ಕೂಲು-ಕಾಲೇಜು ಮೆಟ್ಲು ಹತ್ತೋ ಹೊತ್ತಿಗೆ ಕಡಿಮೆ ಬೆಲೆಯ ವಿಂಡ್ಸರ್ ನಿಬ್ಬಿನ ಪೆನ್ನಿನಿಂದ ಹಿಡಿದು ಚೈನಾದಲ್ಲಿ ತಯಾರಾಗಿದ್ದು ಎಂದು ಹಣೆ ಪಟ್ಟಿ ಅಂಟಿಸಿಕೊಂಡ ಹೀರೋ ಪೆನ್ನುಗಳ ಹಾವಳಿ ಹೆಚ್ಚೇ ಇತ್ತು. ಈ ಫೌಂಟನ್ ಪೆನ್ನುಗಳಲ್ಲಿ ಹಿಡಿಯೋ ಇಂಕ್ ಕಡಿಮೆ ಅದೂ ಅಲ್ದೇ ಪ್ರತೀ ದಿನ ಸ್ಕೂಲಿಗೆ ಹೋಗ್ಬೇಕಾದ್ರೆ ಪೆನ್ನಿಗೆ ಇಂಕ್ ಬೇರೆ ಹಾಕ್ಕೊಂಡ್ ಹೋಗೋ ಕಷ್ಟಾ, ಯಾರಿಗೆ ಬೇಕಿತ್ತಪ್ಪಾ?
ಅದರ ಬದಲಿಗೆ ಡಜನ್ ಗಟ್ಟಲೆ ಬಾಲ್ ಪಾಯಿಂಟ್ ಪೆನ್ನುಗಳನ್ನು ತೆಗೆದುಕೊಂಡು, ಅವುಗಳು ಖಾಲಿಯಾದ ಹಾಗೆ ಅಥವಾ ಕಳೆದು ಹೋದ ಹಾಗೆ ಒಂದೊಂದಾಗೇ ಇರುವ ದಾಸ್ತಾನನ್ನು ಖರ್ಚು ಮಾಡಿಕೊಂಡು ಹೋಗೋ ತತ್ವ ಹೇಗಿರುತ್ತೇ, ಅದರ ಹಿಂದಿರುವ ಪರಂಪರೆ ಏನು, ಅದರ ಮರ್ಮವೇನು ಎಂದು ಯೋಚಿಸುತ್ತಾ ಹೋದ ಹಾಗೆಲ್ಲಾ ಎಕಾನಮಿ, ಅಭಿವೃದ್ಧಿ, ಬೆಳವಣಿಗೆ...ಮುಂತಾದ ದೊಡ್ಡ ದೊಡ್ಡ ಪದಗಳೆಲ್ಲ ಆಲೋಚನೆಗೆ ಬಂದು ಸುಸ್ತು ಮಾಡಿ ಹಾಕೋದಂತೂ ಗ್ಯಾರಂಟಿ!
***
ನಾನೂ ಅಮೇರಿಕಕ್ಕೆ ಬರುವಾಗ ನನ್ನ ಹೀರೋ ಪೆನ್ನುಗಳನ್ನು ಜೋಪಾನ ಮಾಡಿಟ್ಟುಕೊಂಡು ಬಂದವನೇ. ಅವುಗಳಿಗೆ ಹಾಕಬಹುದಾದ ಇಂಕ್ ಬಾಟಲನ್ನು ಅದು ಬ್ಯಾಗಿನಲ್ಲಿ ಸೋರಿ ಅಥವಾ ಒಡೆದು ಹೋಗಿ ಅವಾಂತರವಾಗಬಹುದಾದ ಹೆದರಿಕೆಯಿಂದ ಬಿಟ್ಟು ಬರುವಾಗ ಒಡ ಹುಟ್ಟಿದವರನ್ನು ಬಿಟ್ಟು ಬರುವ ದುಃಖವಾದರೂ ಎರಡು ಪೆನ್ನುಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಇಂಕನ್ನು ತುಂಬಿಸಿ, ಒಂದು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಇಟ್ಟು ರಬ್ಬರ್ ಬ್ಯಾಂಡ್ ಹಾಕಿ ಗಟ್ಟಿ ಮಾಡಿಕೊಂಡು ಎರಡೆರಡು ಸಲ ಮುಟ್ಟಿ ನೋಡಿಕೊಂಡು ಕ್ಯಾರಿ ಆನ್ ಅಥವಾ ಚೆಕ್ ಇನ್ ಬ್ಯಾಗಿನಲ್ಲಿಡುವುದೋ ಎಂದು ಯೋಚಿಸಿಕೊಂಡಂತೆಲ್ಲ ಯಾವ ನಿರ್ಧಾರವೂ ಗಟ್ಟಿಯಾಗದೇ, ಆಗಿದ್ದಾಗಲಿ ಎಂದು ಆ ದಿನ ಚೆಕ್ ಇನ್ ಲಗ್ಗೇಜಿನಲ್ಲಿಟ್ಟ ಪೆನ್ನುಗಳನ್ನು ಅಮೇರಿಕಕ್ಕೆ ಬಂದು ಎಷ್ಟೋ ವರ್ಷಗಳಾದರೂ ಉಪಯೋಗಿಸದೇ ನಿರುಪಯೋಗಿ ವಸ್ತುಗಳನ್ನಾಗಿ ಮಾಡಿದ್ದೂ ಅಲ್ಲದೇ ಒಂದು ಮನೆಯಿಂದ ಮತ್ತೊಂದು ಮನೆಗೆ ಮೂವ್ ಮಾಡುವಾಗಲೆಲ್ಲ, 'ಬೇಕೋ ಬೇಡವೋ' ಎನ್ನುವ ಸಂಕಷ್ಟಕ್ಕೆ ಸಿಲುಕುವಂತಾದದ್ದು ವಿಪರ್ಯಾಸವಲ್ಲದೇ ಮತ್ತಿನ್ನೇನು?
ಒಂದು ಹೀರೋ ಪೆನ್ನು - ಒಂದು ಕಾಲದಲ್ಲಿ ಹದಿನೈದು ರೂಪಾಯಿಗಳಿಗೆ ಒಂದು ಸಿಗುತ್ತಿದ್ದುದು, ಈಗ ನೂರೈವತ್ತು ರೂಪಾಯಿಯಾಗಿರಬಹುದು - after all ಮೂರ್ನಾಲ್ಕು ಡಾಲರ್, ಅಷ್ಟೇ - ಕೆಲವರು ಕುಡಿಯಬಹುದಾದ ಸ್ಟಾರ್ಬಕ್ಸ್ ಅಥವಾ ಜಾವಾಸಿಟಿ ಕಾಫಿಯ ಬೆಲೆಗಿಂತಲೂ ಕಡಿಮೆ - ಎಂದು ಉಪೇಕ್ಷೆ ಮಾಡಲೇ? ಅಥವಾ ಒಂದು ಕಾಲದಲ್ಲಿ ನನ್ನೊಡಲಾಳದಲ್ಲಿದ್ದ ಧ್ವನಿಗೆ ಜೀವವಾದ, ನನ್ನೆಲ್ಲ ಪರೀಕ್ಷೆಗಳನ್ನು ಪಾಸು ಮಾಡಲು ಉಪಯೋಗಿಸಿದ, ಖಡ್ಗಕ್ಕಿಂತಲೂ ಹರಿತವಾದದ್ದು ಎಂದು ನನ್ನ ಹಿರಿಯರು ನಂಬಿಸಿದ ಮುಳ್ಳಿಗೆ (nib) ಶರಣು ಹೋಗಲೇ? ಅಪರೂಪಕ್ಕೊಮ್ಮೆ ನನ್ನ ಸೂಟ್ ಪಾಕೆಟ್ನಲ್ಲಿ ಸೇರಿಕೊಳ್ಳುವ ಯಾವತ್ತೋ ಇಟಲಿಯಲ್ಲಿ ನಲವತ್ತು ಯೂರೋಗಳಿಗೆ ಕೊಂಡುಕೊಂಡ ಹೊಸ ಫೌಂಟನ್ ಪೆನ್ನಿನ ಜೊತೆ ಈ ಹೀರೋ ಪೆನ್ನುಗಳಿಗೆ ಸಮನಾದ ಸ್ಥಾನಮಾನವನ್ನು ಕೊಡಲೇ? ಅಥವಾ ಆಫೀಸಿನಲ್ಲಿ ಪ್ರತಿದಿನವೂ ಉಪಯೋಗಿಸುವುದರ ಮೂಲಕ ನನ್ನ ಸಹೋದ್ಯೋಗಿಗಳು 'ಓ, ಫೌಂಟನ್ ಪೆನ್ನ್!' ಎಂದು ಉದ್ಗಾರವೆತ್ತುವಂತೆ ಪರೋಕ್ಷವಾಗಿ ಆಗ್ರಹಿಸಲೇ?
'ಇವುಗಳೋ - ಚೈನಾದಲ್ಲಿ ಮಾಡಿದ್ದು, ಇಂಡಿಯಾದಲ್ಲಿ ಕೊಂಡು ಉಪಯೋಗಿಸಿದ್ದು, ಈಗ ಉತ್ತರ ಅಮೇರಿಕವನ್ನು ಕಂಡುಕೊಂಡಿವೆ!' ಎಂದು ನನ್ನ ಅಂತಾರಾಷ್ಟ್ರೀಯತನವನ್ನು ಉತ್ಸಾಹದಿಂದ ಮೆರೆಯುವಂತೆ ನಟಿಸಲೇ?
ಟೈಪ್ರೈಟರುಗಳಲ್ಲಿ ಕುಟ್ಟಿ ಬರೆಯುವ ವರದಿಗಾರರೇ ಇಲ್ಲದಿರುವ ಕಾಲದಲ್ಲಿ, ಎಲ್ಲರೂ ಕಂಪ್ಯೂಟರಿನಲ್ಲೇ ನೇರವಾಗಿ ಬರೆದು ಪ್ರಕಟಿಸುವ ಮಾಧ್ಯಮಗಳಲ್ಲಿ - ಖಡ್ಗಕ್ಕಿಂತ ಹರಿತವಾದ ಲೇಖನಿಯ ಸ್ಥಾನಮಾನವಾದರೂ ಏನು?
Or, after all, ಈ ಪೆನ್ನುಗಳಿಂದ ಅಂತಹ ಮಹಾನ್ ಏನಾಗುತ್ತೇ? ಎಂದು ನಿಡುಸುಯ್ದು ಬೇಸ್ಮೆಂಟಿನ ಯಾವತ್ತೂ ತೆರೆಯದ ಬಾಕ್ಸುಗಳ ಮೂಲೆಗಳಲ್ಲೊಂದರಲ್ಲಿ ಇವುಗಳಿಗೆ ಪರ್ಮನೆಂಟ್ ಸ್ಥಾನಮಾನವನ್ನು ಕಲ್ಪಿಸಿಬಿಟ್ಟರೆ ಹೇಗೆ ಎಂದು ಹಲವಾರು ಸಲ ಯೋಚಿಸಿಕೊಂಡಿದ್ದಿದೆ.
***
ಅಮೇರಿಕದ ಪೆನ್ನುಗಳನ್ನು ರಾಶಿ-ರಾಶಿಯಾಗಿ ಕೊಂಡು (ಹೋಲ್ಸೇಲ್ ಬೆಲೆಯಲ್ಲಿ) ಪ್ರತಿಯೊಂದು ಪೆನ್ನನ್ನೂ ಅವುಗಳಲ್ಲಿನ ಜೀವರಸ (ಇಂಕ್) ಬತ್ತುವ ವರೆಗೆ ಬರೆಯಬೇಕು, ಎಸೆಯುವ ಮೊದಲು ಅವುಗಳ ಸಂಪೂರ್ಣ ಪ್ರಯೋಜನ ಪಡೆಯಬೇಕು ಎನ್ನುವ ನನ್ನ ಕನ್ಸರ್ವೇಟಿವ್ ಬುದ್ಧಿ (ಜಿಪುಣತನವಲ್ಲ ಎನ್ನುವುದನ್ನು ಒತ್ತಿ ಹೇಳುತ್ತಾ), ಎಷ್ಟೋ ಸಲ ಅದೆಲ್ಲೋ ಕಳೆದುಹೋದ ಅಥವಾ ಯಾರೋ ತೆಗೆದುಕೊಂಡು ಕೊಡಲು ಮರೆತ ಪೆನ್ನುಗಳನ್ನು ನೆನೆಸಿಕೊಂಡು ಮಮ್ಮಲ ಮರುಗಿದ್ದಿದೆ. ಒಳ್ಳೆಯದೋ ಕೆಟ್ಟದೋ ಇತ್ತೀಚೆಗೆ ಬರೀ ಓದುವುದಷ್ಟೇ ಕಡಿಮೆಯಾಗಿಲ್ಲ, ಬರೆಯುವುದೂ ಕಡಿಮೆಯಾಗಿದೆ - ಅಂದರೆ ಪೆನ್ನು ಹಿಡಿದು ಪೇಪರ್/ಪುಸ್ತಕಗಳಲ್ಲಿ ಬರೆಯುವುದು. ಕೊನೇ ಪಕ್ಷ ಬರೆಯುವುದು ಮರೆತೇ ಹೋಗದಿರಲಿ ಎಂದುಕೊಂಡು (ಅಥವಾ ಆ ರೀತಿ ಹಠ ತೊಟ್ಟುಕೊಂಡವರ ಹಾಗೆ) ಮೀಟಿಂಗುಗಳಲ್ಲಿ ಉದ್ದುದ್ದವಾದ ಟಿಪ್ಪಣಿ (ನೋಟ್ಸು)ಗಳನ್ನು ಮಾಡಿಕೊಂಡಿದ್ದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ವಾಙ್ಮಯ", "ಯಜ್ಞ" ಮುಂತಾದ ಪದಗಳನ್ನು ಬರೆದುಕೊಂಡು 'ಓಹ್, ಇನ್ನೂ ಮರೆತಿಲ್ಲ...' ಎಂದು ಸಂತಸ ಪಟ್ಟುಕೊಂಡಿದ್ದಿದೆ!
***
ಇಷ್ಟು ಬೆಳೆದು, ಇಲ್ಲಿಗೆ ಬಂದು ನನ್ನ ಸೆನ್ಸಿಟಿವಿಟಿಗಳು ಬಹಳಷ್ಟು ಬದಲಾದ ಹಾಗೆ ನನ್ನ ಲೇಖನಿಯ ಮೊನೆ ಮೊನಚಾಗದೇ ಹಾಗೇ ಉಳಿದಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ಬೇಸ್ಮೆಂಟಿನ ಬಾಕ್ಸುಗಳ ಮೂಲೆಯಲ್ಲೆಲ್ಲೋ ಅಡಗಿ ಕುಳಿತ ನಾನು ಭಾರತದಿಂದ ತಂದ ಪೆನ್ನುಗಳು ಇಷ್ಟು ದಿನ ಬಳಸದಿದ್ದುದ್ದಕ್ಕೆ ಮೊಡ್ಡಾಗಿದೆ ಎನ್ನುವುದನ್ನು ಒಪ್ಪಿಕೊಳ್ಳದೇ ಬೇರೆ ಗತಿಯಿಲ್ಲ ಎನ್ನುವಂತಾಗಿದೆ!
ಇದಿಷ್ಟು ನನ್ನ ಪೆನ್ನಿನ ಕಥೆ, ಇನ್ನು ನಿಮ್ಮದು...