Tuesday, September 29, 2009

(ಕುರುಚಲು ಗಡ್ಡ, ಓಡುವ ಮೋಡ ಹಾಗೂ) ಆಲೋಚನೆಗಳು

ಈ ಆಲೋಚನೆಗಳೇ ಹಾಗೆ ಕೆಲವೊಮ್ಮೆ ತಂಡೋಪತಂಡವಾಗಿ ಸರಣಿಗಳಲ್ಲಿ ಬಂದು ಮುತ್ತಿಗೆ ಹಾಕಿ ಬಿಡುತ್ತವೆ, ತಿಳಿಯಾದ ಕೊಳವನ್ನು ಕಲಕಿ ರಾಡಿಯನ್ನು ಮೆಲಕೆತ್ತಿದ ಹಾಗೆ ಹಳೆಯದೆಲ್ಲ ಮೇಲಕ್ಕೆದ್ದು ಕೇಂದ್ರೀಕೃತ ಅಲೆಗಳ ಹಿಂಡು ದಡವನ್ನು ಅಪ್ಪಳಿಸುವಂತೆ ಕಣ್ಣು ಮುಚ್ಚಿ ಬಿಡುವುದರೊಳಗೆ ಏನೇನೋ ಅಗಿ ಹೋಗುತ್ತದೆ. ಈ ಮನಸೆಂಬ ಮರ್ಕಟ ಹಾರಿ ಬಂದ ಮರಗಳ ರೆಂಬೆ-ಕೊಂಬೆಗಳಿಗೆ ಹೇಗೆ ಕೊನೆಯಿಲ್ಲವೋ ಹಾಗೆ ಆಲೋಚನೆಗಳ ದಂಡು.

ಈ ಆಲೋಚನೆಗಳಿಗೂ ಓಡುವ ಮೋಡಗಳಿಗೂ ಏನು ಸಂಬಂಧ? ಈ ಆಲೋಚನೆಗಳಿಗೂ ಕುರುಚಲು ಗಡ್ಡಕ್ಕೂ ಏನು ನಂಟು? ಎಂದು ಯೋಚಿಸಿಕೊಂಡಂತೆಲ್ಲ ಮೇಲ್ಮಟ್ಟದಲ್ಲಿ ಗೋಕುಲಾಶ್ಠಮಿ-ಇಮಾಮ್ ಸಾಬಿಗಳಂತೆ ಕಂಡುಬಂದರೂ ಒಳಗೊಳಗೆ ಅವುಗಳ ಅರ್ಥಬದ್ಧ ಬಾಂಧವ್ಯದ ಬಗ್ಗೆ ನನಗೆ ತಿಳಿದದ್ದು ಇತ್ತೀಚೆಗಷ್ಟೇ. ಈ ಆಳವಾಗಿ ಆಲೋಚಿಸುವ ಕೆಲವರು ಮುಗಿಲನ್ನು ಎವೆಯಿಕ್ಕದೆ ದಿಟ್ಟಿಸುವುದನ್ನು ನೀವು ಗಮನಿಸಿರಬಹುದು. ಹೌದು, ಈ ಆಳವಾದ ದೃಷ್ಟಿಯೇ ಮುಗಿಲಿನ ಹಂದರದಲ್ಲಿ ಹರವಿಕೊಂಡ ಆ ಮೋಡಗಳಲ್ಲಿ ಚಲನಶಕ್ತಿಯನ್ನು ಕುದುರಿಸೋದು. ಹಾಗೇ ಆಲೋಚನೆಯಲ್ಲಿ ಮುಳುಗಿದವರು ಗದ್ದಕ್ಕೆ ಕೈಯಿಟ್ಟು ಯೋಚನೆ ಮಾಡಿದಂತೆಲ್ಲ ನುಣುಪಾದ ಅಂಗೈ ಹಾಗೂ ಕೆನ್ನೆಯ ನಡುವೆ ಘರ್ಷಣೆ ಹುಟ್ಟುವ ಹೊತ್ತಿನಲ್ಲಿ ಕೈ ಜಾರದಂತೆ ಜೀವವಿಕಾಸ ಸೃಷ್ಟಿಸಿದ ವಿಸ್ಮಯಗಳಲ್ಲಿ ಕುರುಚಲು ಗಡ್ಡವೂ ಒಂದು!

ಆಲೋಚನೆಗಳನ್ನು ಮಾಡಿ ತಲೆ ಕೆಡಿಸಿಕೊಂಡವರೇ ಹೆಚ್ಚು, ಉದ್ದಾರವಾದವರು ಯಾರು ಎಂದು ಅಲ್ಲಗಳೆಯಬೇಡಿ, ಹೆಚ್ಚು ಆಲೋಚನೆ ಮಾಡಿದವರೇ ದೊಡ್ಡ ಮನುಷ್ಯರು, ಅವರವರ ಆಲೋಚನೆಗಳ ಆಳ ಅವರವರ ಚಿಂತನಶೀಲತೆಯ ಪ್ರತೀಕ ಎಂದರೆ ತಪ್ಪೇನು ಇಲ್ಲ. ಆದರೆ ಆಲೋಚನೆ, ಕೊರಗು, ಚಿಂತೆ ಹಾಗೂ ಚಿಂತನೆಗಳಲ್ಲಿ ಬೇಕಾದಷ್ಟು ವ್ಯತ್ಯಾಸಗಳಿವೆ. ನನ್ನ ಪ್ರಕಾರ ಆಲೋಚನೆ ತನ್ನ ಪ್ರಭೇದದ ಇತರ ಸೋದರರಾದ ಕೊರಗು-ಮರುಗು-ಚಿಂತೆ-ಚಿಂತನೆಗಳಿಗಿಂತ ಸ್ವಲ್ಪ ಭಿನ್ನ ಹಾಗೂ ತನ್ನಷ್ಟಕ್ಕೆ ತಾನು ಒಂದು ಅಮೋಘವಾದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡ ಧೀರ ಬೇರೆ. ಆಲೋಚನೆಗೆ ಯಾವುದೇ ವಿಷಯ-ವಸ್ತುವೆಂಬುದಿಲ್ಲ, ಎಂದು ಇತರರ ಜೊತೆ ಬೆಳೆದು ಸಮಾಲೋಚನೆಯಾಗಬಹುದು, ಅಥವಾ ತನ್ನ ದೂರದ ಮಟ್ಟಕ್ಕೆ ದೂರಾಲೋಚನೆಯಾಗಬಹುದು, ಕೆಟ್ಟ ವಸ್ತುಗಳಿದ್ದರೆ (ಕೆಟ್ಟದು ಎಂಬುದು ಸಾಪೇಕ್ಷವಾದುದು) ದುರಾಲೋಚನೆಯೂ ಆಗಬಹುದು. ಆಲೋಚನೆ ಎನ್ನುವುದು ತನ್ನಷ್ಟಕ್ಕೆ ತಾನು ಇದ್ದರಿರಬಹುದು ಅಥವಾ ಅದು ಉಳಿದವರ ಜೊತೆ ಸೇರಿ ಒಂದು ಸಿದ್ಧಾಂತವಾಗಬಹುದು. ಒಟ್ಟಿನಲ್ಲಿ ಆಲೋಚನೆ ಎನ್ನುವುದು ನೀರಿದ್ದ ಹಾಗೆ, ಅದು ತನ್ನಷ್ಟಕ್ಕೆ ತಾನು ಯಾವುದೇ ಆಕಾರ, ಗಾತ್ರ, ಬಣ್ಣ, ವಾಸನೆ, ಗಡಿರೇಖೆಗಳಿಗೆ ಒಳಪಡದ ಒಂದು ರೀತಿಯ ಎಲ್ಲವನ್ನು ತ್ಯಜಿಸಿದ ಸಂತನ ಮನಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆ ಜೊತೆಗೆ ತಾನು ಇದ್ದ ಯಾವುದೇ ಒಂದು ವಸ್ತುವಿನ ರೂಪರೇಶೆಗಳನ್ನು ದಿಢೀರನೆ ಪಡೆದುಕೊಂಡುಬಿಡಬಲ್ಲದು.

ಒಟ್ಟಿನಲ್ಲಿ ಈ ಆಲೋಚನೆಯ ಪರಿ ಭಿನ್ನ. ನನ್ನ ಮನಸ್ಸಿನಲ್ಲಿ ಬರುವ ಆಲೋಚನೆಗಳ ಮಹಾಪೂರವನ್ನು ನೋಡಿ ಕೆಲವೊಮ್ಮೆ ಈ ಪರಿಯ ಸೊಬಗ ಇನ್ಯಾವ ಮನಸ್ಥಿತಿಯಲೂ ಕಾಣೆ ಎಂದು ಹಾಡಿಕೊಂಡಿದ್ದಿದೆ. ಈ ಆಲೋಚನೆಗಳೆಂಬುವುದಕ್ಕೆ ಮಿತಿಯಂತೂ ಇಲ್ಲವೇ ಇಲ್ಲ - ಅದರಲ್ಲಿ ಬಿಳಿ-ಕಪ್ಪಿದೆ, ಕೆಟ್ಟದ್ದು-ಒಳ್ಳೆಯದಿದೆ, ಸಂಭ್ರಮ-ಸಂಗಮಗಳಿವೆ, ನೋವು-ನಲಿವಿದೆ, ಹೀಗೆ ಅನೇಕಾನೇಕ ಪರ-ವಿರೋಧಗಳನ್ನು ತನ್ನೊಡಲಿನಲ್ಲಿ ಹರವಿಕೊಂಡ ಅಲೋಚನೆಗಳ ದಿಬ್ಬಣವನ್ನು ನಾನು ನಮ್ಮೂರ ಜಾತ್ರೆಯ ತೇರಿಗೆ ಹೋಲಿಸಿಕೊಳ್ಳೋದು. ತೇರಿನ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಅಸಂಖ್ಯ ಭಕ್ತರು ಎಳೆದು ಜನತುಂಬಿ ತುಳುಕುತ್ತಿರುವ ರಸ್ತೆಯ ಮಧ್ಯದಲ್ಲಿ ನಿಧಾನವಾಗಿ ತೇಲಿ ಹೋಗುವ ತೇರಿನ ಹಾಗೆ - ನಾವು ಎಲ್ಲಿದ್ದರೂ ಹೇಗಿದ್ದರೂ ಏನನ್ನೇ ಮಾಡುತ್ತಿದ್ದರೂ ನಮ್ಮ ಮನದಲ್ಲಿ ಈ ಆಲೋಚನೆಗಳ ತೇರು ಎಳೆಯಲ್ಪಡುತ್ತಿರುತ್ತದೆ, ನಿರಂತರವಾಗಿ.

3 comments:

ಸಾಗರದಾಚೆಯ ಇಂಚರ said...

ಆಲೋಚನೆ ಬಗ್ಗೆ ಓದುತ್ತ ನಾನು ಆಲೋಚಿಸತೊಡಗಿದೆ. ತುಂಬಾ ಸರಳವಾಗಿ ಗಹನವಾದ ವಿಷಯ ತಿಳಿಸಿದ್ದಿರಾ,
ಬರೆದ ಶೈಲಿ ಇಷ್ಟವಾಯಿತು, ಅದರಲ್ಲೂ ಆಲೋಚನೆಯ ಸಹೋದರರ ಸಂಭಂಧಿಗಳ ಬಗೆಗಿನ ವಾಕ್ಯ ತುಂಬಾ ಹಿಡಿಸಿತು.

AntharangadaMaathugalu said...

ಸತೀಶ್ ರವರೆ...
ಆಲೋಚನೆಗಳ ಬಗ್ಗೆ ಬರೆದು, ನಮ್ಮನ್ನೂ ಆಲೋಚಿಸುವಂತೆ ಮಾಡಿದ್ದೀರಿ. ಅದರಲ್ಲೂ ಈ ಆಲೋಚನೆಗಳು ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತರೆ ಸಾಕು...ಲಗ್ಗೆ ಹಾಕಿ ಕಾಡಿಬಿಡುತ್ತವೆ. ಬರಹ ಇಷ್ಟವಾಯಿತು.

ಶ್ಯಾಮಲ

Satish said...

ಸಾಇ,
ಧನ್ಯವಾದ.

ಶ್ಯಾಮಲ,
ಧನ್ಯವಾದ.