ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು 25 ವರ್ಷಗಳನ್ನು ಕಳೆದರೆ ಏನೇನಾಗಬಹುದು? ಅನ್ನೋದರ ಬಗ್ಗೆ ಒಂದು ಕುತೂಹಲಕರವಾದ ಸ್ವ ವಿಮರ್ಶೆ ಅಷ್ಟೇ!
ನಾವೆಲ್ಲ ನೀರಿನ ಒಂದೊಂದು ಬಿಂದುವಿದ್ದ ಹಾಗೆ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ಮತ್ತಿನ್ನೇಲ್ಲೋ ಸಾಗರವನ್ನು ಅರಸಿಕೊಂಡು ಹೋಗಿ ಸೇರಿ, ಮತ್ತೆ ಹನಿಯಾಗಿ ಹುಟ್ಟಿ ಬರುವವರು. ಈ ರೀತಿ, ಕೊನೇಪಕ್ಷ ಒಂದು ಮಿಲಿಯನ್ ಸರ್ತಿ ಮಾಡಿದ್ರೆ, ಮೋಕ್ಷ ಅಂತೇನಾದ್ರೂ ಸಿಗುತ್ತೋ ಏನೋ... ಇರ್ಲಿ, ಅದು ಇನ್ನೊಂದು ದಿನದ ಟಾಪಿಕ್ ಆಗುತ್ತೆ ಬಿಡಿ!
ಭಾರತದಲ್ಲಿ ಹುಟ್ಟಿ ಬೆಳೆದು ಅಲ್ಲೇ ಜೀವನವನ್ನ ಕಳೆಯೋರಿಗೆ ನಮ್ಮ ವಲಸಿಗರ ಬದುಕನ್ನ ಅರ್ಥೈಸಿಕೊಳ್ಳೋಕಾಗಲ್ಲ! ವಲಸಿಗರ ಜೀವನವೇ ಒಂದು ರೀತಿಯಲ್ಲಿ ವಿಶೇಷವಾದದ್ದು... ಒಂದು ಸಣ್ಣ ಉದಾಹರಣೆಯ ಮೂಲಕ ಹೇಳೋದಾದ್ರೆ, ನಾವೆಲ್ಲ ನಮ್ಮ ನಮ್ಮ ಶಾಲೆಗಳಲ್ಲಿ ಹಿಂದೆ ಗಣಪತಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸ್ತಿದ್ದಾಗ, ನಮ್ಮ ಜೊತೆಗೆ ಓದುತ್ತಾ ಇದ್ದ ಬೆರಳೆಣೆಕೆಯ ಕೆಲವು ಹಿಂದುಗಳಲ್ಲದ ಹುಡುಗರಿಗೆ ಯಾವ ರೀತಿಯ feeling ಬರ್ತಿತ್ತೋ... ಇಲ್ಲಿ ಬಂದವರಿಗೆ ಮೊದಮೊದಲಿಗೆ ಹಾಗನ್ಸುತ್ತೆ.
ನಮ್ಮ ಅಣ್ಣ ಯಾವಾಗ್ಲೂ ಹೇಳೋ ಹಾಗೆ, "ನಮ್ಮೂರುಗಳಲ್ಲಿ ನಾವು ನೀರು ಕುಡುಕೊಂಡ್ ಬೇಕಾದ್ರೂ ಬದುಕಬಹುದು. ಆದ್ರೆ, ನಿಮ್ಮದಲ್ಲದ ದೇಶದಲ್ಲಂತೂ ಖಂಡಿತ ಹಾಗಾಗಲ್ಲ!"
ಅಮೇರಿಕದ ವಿಚಾರದಲ್ಲಿ ಹೇಳೋದಾದರೆ, ಹೊಸ ಬದುಕನ್ನ ಅರಸಿಕೊಂಡು, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದವರ ಕತೆ ಯಾವಾಗ್ಲೂ ರತ್ನಕಂಬಳಿಯ ಮೇಲೆ ನಡೆದಂತೆ ಇರೋದಿಲ್ಲ. ಇಲ್ಲಿನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ, ಪ್ರತಿದಿನವೂ "ಈಸಬೇಕು, ಇದ್ದು ಜೈಸಬೇಕು". ಅದರ ಜೊತೆಗೆ, your past performance is not an indication of future results! ಅನ್ನೋ ಧ್ಯೇಯವಾಕ್ಯವನ್ನ ಅರ್ಥಮಾಡಿಕೊಳ್ಳಬೇಕಾದ್ರೇ ಸುಮಾರು ಸಮಯ ಹಿಡಿಯುತ್ತೆ.
ಹಂಗಂತ, ಅಮೇರಿಕದ ವಿಚಾರವನ್ನು, ಇಲ್ಲಿ ತಮ್ಮ ಮಕ್ಕಳ ಮನೆಗೆ ಬೇಸಿಗೆ ಸಮಯದಲ್ಲಿ ಭೇಟಿ ಕೊಡುವ ತಂದೆ-ತಾಯಿಯರ ಅನುಭವದ ಮೂಲಕ ಸರಳೀಕರಿಸಲಾಗೋದಿಲ್ಲ. ನೀವು ಯಾವುದೋ ದೇಶದ ರಿಸಾರ್ಟ್‌ನ all inclusive vacation package ತಗೊಂಡು, ಒಂದು ವಾರ ರಿಸಾರ್ಟಿನ safety net ನಲ್ಲಿದ್ದುಕೊಂಡು ಬಂದು, ನಾನು ಆ ದೇಶವನ್ನು ನೋಡಿದ್ದೇನೆ ಅಂತ ಹೇಳಿದ್ರೆ ಹೇಗಾಗುತ್ತೋ ಹಾಗೆ.
ಯಾವ್ದೂ ಬೇಡ, ಅಮೇರಿಕದ ಒಂದು ಫ಼್ಯಾಮಿಲಿಯಲ್ಲಿ ಒಂದು ಸಾಕುಪ್ರಾಣಿಯನ್ನು ಇಟ್ಟುಕೊಳ್ಳೋ ಅನುಭವ ಉಳಿದ ಎಲ್ಲ ದೇಶಗಳ ಅನುಭವಕ್ಕಿಂತ ಬಿನ್ನ, ಅಂತಂದ್ರೆ ನೀವು ನಂಬ್ತೀರಾ? ಇಲ್ಲಿನ ಐವತ್ತುರಾಜ್ಯಗಳಲ್ಲಿ ಸಾಕು ಪ್ರಾಣಿಗಳನ್ನ ಇಟ್ಟುಕೊಳ್ಳೋದರ ಬಗ್ಗೆ, ಐವತ್ತು ಕಾನೂನುಗಳಿರಬಹುದು. ನಮ್ಮ ನ್ಯೂ ಜೆರ್ಸಿಯ ಮನೆಗಳಲ್ಲಿ, ನಾವು ಇಟ್ಟುಕೊಳ್ಳೋ ನಾಯಿ-ಬೆಕ್ಕುಗಳಿಗೆ ಟೌನ್‌ಶಿಪ್‌ನಿಂದ ಲೈಸೆನ್ಸ್ ತಗೋಬೇಕು ಅಂದ್ರೆ ನಿಮಗೆ ಆಶ್ಚರ್ಯ ಆಗದಿದ್ರೆ ಸಾಕು.
ಅಮೇರಿಕದಲ್ಲಿ ಸಂಬಂಧಗಳನ್ನ ಹೇಗೆ "ಇನ್-ಲಾ" ಅಂತ ಕರೆದುಕೊಳ್ತಾರೋ, ಹಾಗೇ ಇಲ್ಲಿ ಕಾನೂನು-ಕಟ್ಟಳೆಗಳು ಜಾಸ್ತಿ ಅಂತಾನೇ ಹೇಳ್ಬೇಕು. ನನ್ನ ಹಾಗೆ ಕೆಲಸ ಮಾಡೋ ಹೆಚ್ಚಿನವರು ಒಂದು ವಿಚಾರದಲ್ಲಿ ಬಹಳ ಸಂತೋಷವನ್ನು ಅನುಭವಿಸ್ತೀವಿ ಅಂತಂದ್ರೆ - ಅದು ಭ್ರಷ್ಟಾಚಾರ/ಲಂಚಗುಳಿತನ ಇರದೇಇರೋದು... ನಾವು ಕಳೆದ 25 ವರ್ಷಗಳಲ್ಲಿ ಲಂಚವನ್ನ, ಯಾರಿಂದಲೂ ತಗೊಳೋದೂ ಇಲ್ಲ, ಯಾರಿಂದಲೂ ನಿರೀಕ್ಷಿಸೋದೂ ಇಲ್ಲ. ಇಲ್ಲಿನ ಸರ್ಕಾರಿ ಕಛೇರಿಗಳಿಗೂ ನಮ್ಮ ಒಡನಾಟಕ್ಕೂ ಒಂದು ರೀತಿ ದೂರವೇ... ಇಲ್ಲಿ, ಬಹಳ ಅಪರೂಪಕ್ಕೊಮ್ಮೆ ನಾವು ಸರ್ಕಾರಿ ಕಛೇರಿಗಳನ್ನ ಎಡತಾಕ್ತೀವಿ... ಅದನ್ನ ಬಿಟ್ರೆ, ಉಳಿದವೆಲ್ಲ ಕೆಲಸಗಳು ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಮುಖೇನ ನಡೆಯುತ್ತೆ. ಸರ್ಕಾರಿ ಕಛೇರಿಗಳೂ ಕೂಡಾ ಇಲ್ಲಿ ಲಂಚಮುಕ್ತವಾಗಿ, ಪ್ರಾಸೆಸ್ಸ್ ಓರಿಯೆಂಟೆಡ್ ಸಿಸ್ಟಮ್ ಆಗಿ ಕೆಲಸ ಮಾಡುತ್ತೆ ಅಂತ ಹೇಳ್ಕೊಳ್ಳೋಕ್ಕೆ ಹೆಮ್ಮೆ ಆಗುತ್ತೆ.
ಇಲ್ಲಿನ ವ್ಯವಸ್ಥೆಯಲ್ಲಿ trust ಇದೆ. India ದಲ್ಲಿ ಕೂತಗೊಂಡು ಕೆಲವರು, ನಿಮ್ಮ ಅಮೇರಿಕನ್ ಎಲೆಕ್ಷನ್ ಸಿಸ್ಟಂ ಚೆನ್ನಾಗಿಲ್ಲ, ಬರೀ ಸಿಗ್ನೇಚರ್ ನೋಡಿ ಜನರನ್ನ identify ಮಾಡ್ತಾರೆ, ಅಂತ ವಿಡಿಯೋ ಮಾಡ್ತಾರಲ್ಲ! ಅದನ್ನ ನೋಡಿ ಹೇಳ್ಬೇಕು ಅನ್ನುಸ್ತು.
ನಮ್ಮ ಮನೆಗಳಲ್ಲಿ ಗಾಜಿನ ಕಿಟಕಿ ಬಾಗಿಲುಗಳಿಗೆ ಮೆಟಲ್ ಕಟಕಟೆ ಹಾಕ ಬೇಕಾಗಿಲ್ಲ - ಮನೆಗೆ ಒಂದು ಸೆಕ್ಯುರಿಟಿ ಸಿಸ್ಟಂ ಇರುತ್ತೆ ಅನ್ನೋದು ಬಿಟ್ರೆ, ಇಲ್ಲಿ ನಾವಂತೂ ಜೈಲಿನಲ್ಲಿ ಬದುಕಿದ ಹಾಗೆ ಬದುಕೋದಿಲ್ಲ.
ಇಲ್ಲಿ ಗಾಳಿ ಸ್ವಚ್ಛವಾಗಿದೆ, ನೀರು ಯಥೇಚ್ಚವಾಗಿ ಸಿಗುತ್ತೆ, cost of living ಕಡಿಮೇನೇ relatively speaking. ಆಮೇಲೆ, ಜನರಿಗೆ ಸಿಸ್ಟಮ್ ಮೇಲೆ ನಂಬಿಕೆ ಹೆಚ್ಚು! ನಿಜವಾಗಿಯೂ, freedom ಅಂದ್ರೆ ಏನು, liberty ಅಂದ್ರೆ ಏನು, justice system ಅನ್ನೋದು ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳೀತಾ ಹೋದಹಾಗೆ - ಈ ಹಿಂದೆ ನಾವು ಅನುಭವಿಸದ ವ್ಯವಸ್ಥೆಗಿಂತ, ಇಲ್ಲಿ ಬಹಳ ಬಿನ್ನವಾಗಿರೋ ಕಾರಣ - ಒಮ್ಮೆ ಇಲ್ಲಿಗೆ ಬಂದೋರು ಈ ವ್ಯವಸ್ಥೆಯನ್ನ ಇಷ್ಟ ಪಡದೇ ಇರೋ ಚಾನ್ಸೇ ಇಲ್ಲ. ಮುಖ್ಯವಾಗಿ, ಇಲ್ಲಿ ಅವಕಾಶವಾದಿಗಳಾಗಿ ಬಂದವರಿಗೆ ಯಾವತ್ತೂ ನಿರಾಶೆ ಆಗೋದಿಲ್ಲ - sky is the limit! ಅಂತಾರಲ್ಲ ಹಾಗೆ, ಅವರು ಎಷ್ಟು ಎತ್ತರಕ್ಕೆ ಬೇಕಾದ್ರೂ ಬೆಳೀಬಹುದು.
ಉಳಿದೆಲ್ಲ immigrantsಗಳಿಗೂ ನಮಗೂ ಇರೋ ಬಹು ಮುಖ್ಯ ವ್ಯತ್ಯಾಸ ಅಂದ್ರೆ ನಾವು ಇಲ್ಲಿ ಅವಿದ್ಯಾವಂತರಾಗಿ, ಭಿಕ್ಷೆ ಬೇಡಿಕೊಂಡಾಗಲಿ, ಹಸಿವಿನಿಂದ ಕಂಗಾಲಾಗಿಯಾಗಲಿ, religious oppression ನಿಂದಾಗಲೀ, political indifference ನಿಂದಾಗಲೀ, asylum seeking ನಿಂದಾಗಲೀ ಬಂದಿಲ್ಲ... ನಾವು ಇಲ್ಲಿ skilled workers ಆಗಿ, engineers ಆಗಿ, doctors ಆಗಿ ಬಂದವರಿಗೆ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ... ಕರ್ಮ ಜೀವನವನ್ನ ಆಧರಿಸಿಕೊಂಡು, ನಮ್ಮ ಕೆಲಸವನ್ನು, ಕೈಕಾಲುಗಳನ್ನು ನಂಬಿಕೊಂಡು ಬಂದವರು. ಇದರಿಂದಾಗಿ ನಮ್ಮಂಥವರ ಅನಿವಾಸಿ ಅಮೇರಿಕನ್ ಅನುಭವ ಇತರೆ ದೇಶದವರ ಅನುಭವಕ್ಕಿಂತ ಬಿನ್ನವಾಗಿರಲು ಸಾಧ್ಯ!
25 ವರ್ಷಗಳ ಅಮೇರಿಕನ್ ಬದುಕಿನ ಬಗ್ಗೆ ಹೇಳಿದ್ರೂ ಕಮ್ಮೀನೆ. ಈಗ ಇಷ್ಟು ಸಾಕು, ಸಮಯ ಬಂದಾಗ ಇನ್ನೊಂದಿಷ್ಟು ವಿಚಾರಗಳನ್ನ ಸೇರಿಸ್ತಾ ಹೋಗ್ತೀನಿ.