Saturday, December 06, 2008

ಈ ತತ್ವಗಳ ಹಣೇಬರಾನೇ ಇಷ್ಟು...

...ಅಂತ ಅನ್ಸಿದ್ದು ಇತ್ತೀಚೆಗಷ್ಟೇ ಏನಲ್ಲ, ಆದ್ರೆ ಈ ಹೊತ್ತಿನ ತತ್ವದ ಹಿನ್ನೆಲೆಗೆ ಒಂದು ಸಮಜಾಯಿಷಿಯಂತೂ ಖಂಡಿತ ಇದೆ. ನಾನು ನನ್ನ ಕ್ರೆಡಿಟ್ ಕಾರ್ಡ್ ಬಿಲ್ಲುಗಳನ್ನ ಸಮಯ ಸಿಕ್ಕಾಗ ರಿವ್ಯೂವ್ ಮಾಡ್ತಾ ಇದ್ದಾಗ ಒಂದು ಸಂಗತಿ ಗೊತ್ತಾಯಿತು, ಆದೇನಂದರೆ ನನ್ನ ಸಂಬಳದ ಒಂದು ಅಂಶ ನಿಯಮಿತವಾಗಿ ವಾಲ್‌ಮಾರ್ಟ್ ಹಾಗೂ ಸಾಮ್ಸ್‌ಕ್ಲಬ್‌ಗೆ ಹೋಗ್ತಾ ಇರೋದು! ಅಂದ್ರೆ ಅದೇನು ಇಲ್ಲೀಗಲ್ ಟ್ರಾನ್ಸಾಕ್ಷನ್ನ್ ಅಲ್ಲ, ನಾನೇ ಹೋಗಿ ಬಂದು ಅಲ್ಲಿ ಖರೀದಿ ಮಾಡಿದ ಸಾಮಾನಿನ ಪ್ರತಿಯಾಗಿ ಅವರು ನನ್ನ ಕ್ರೆಡಿಟ್ ಕಾರ್ಡಿನಿಂದ ಎಳೆದುಕೊಂಡ ಹಣ, ಎಲ್ಲ ನ್ಯಾಯವಾದ್ದೇ ಅದ್ರಲ್ಲೇನೂ ತಪ್ಪಿಲ್ಲ ಬಿಡಿ. ಆದ್ರೆ, ಇತ್ತೀಚೆಗೆ ಪ್ರತೀ ತಿಂಗಳು ವಾಲ್‌ಮಾರ್ಟ್, ಸ್ಯಾಮ್ಸ್‌ಕ್ಲಬ್ಬಿಗೆ ಹೋಗಿ ಅಲ್ಲಿ ಖರೀದಿ ಮಾಡಿ ತರುವ ಸಾಮಾನುಗಳ ಪಟ್ಟಿ ಬೆಳೆದಿದ್ದು ಹೇಗೆ? ಮೊದ್ಲೆಲ್ಲ ಆ ಸ್ಟೋರುಗಳಿಂದ ದೂರವಿರಬೇಕು ಎಂಬ ಪಣತೊಟ್ಟ ತ್ರಿವಿಕ್ರಮನಂತೆ ನಾನು ದೂರವಿದ್ದು ಕೊನೆಗೆ ಬೇತಾಳನ ಸವಾಲಿಗೆ ಸರಿಯಾಗಿ ಉತ್ತರ ಹೇಳಿಯೂ ಅದು ಹೆಗಲು ಬಿಟ್ಟು ಹಾರಿ ಹೋಗಿ ಕೊನೆಗೆ ಕೊಂಬೆಗೆ ನೇತಾಡುವ ರೀತಿಯಲ್ಲಿ ನಾನು ವಾಲ್‌ಮಾರ್ಟ್ ಅಂಗಡಿಯಿಂದ ದೂರವಿದ್ದಷ್ಟೂ ಅದಕ್ಕೆ ಹತ್ತಿರ ಹತ್ತಿರ ಹೋಗಿ ಕೊನೆಗೆ ನನ್ನ ಹೆಚ್ಚಿನ ಪರ್ಚೇಸುಗಳೆಲ್ಲ ಅವೇ ಅಂಗಡಿಯಿಂದ ಆಗುತ್ತಿದೆ ಏನಾಶ್ಚರ್ಯ!

ವಾಲ್‌ಮಾರ್ಟ್ ಅಂದರೆ ನನಗೇನೂ ಅಲರ್ಜಿ ಇಲ್ಲ, ಆದರೆ ಅದು ಅಮೇರಿಕನ್ ಕ್ಯಾಪಿಟಲಿಸಮ್ ಅನ್ನು ಪರಮಾವಧಿ ಮುಟ್ಟಿಸಿರುವ ಕಂಪನಿ ಎಂದೂ; ಆ ಅಂಗಡಿಗಳಲ್ಲಿ ಸಾಮಾನುಗಳನ್ನು ಕಡಿಮೆ ದರದಲ್ಲಿ ಮಾರಬೇಕಾಗುವಲ್ಲಿ ಬೇಕಾದಷ್ಟು ತಂತ್ರಗಳನ್ನು ಅಳವಡಿಸಿ ಅದನ್ನು ಅನುಸರಿಸಿರುತ್ತಾರೆಂತಲೂ; ನಮ್ಮ ಊರಿನ ಹಾಗೂ ನೆರೆಹೊರೆಯವರು ನೆಲಸಮಾಧಿಯಾಗುವಷ್ಟು ಮಟ್ಟಿನ ಸ್ಪರ್ಧೆಯನ್ನು ಒಡ್ಡುವುದರಲ್ಲಿ ನಿಸ್ಸೀಮರೆಂತಲೂ, ಮಿಲಿಯನ್ನ್‌ಗಟ್ಟಲೆ ಜನರನ್ನು ಎಂಪ್ಲಾಯ್ ಮಾಡಿಕೊಂಡಿದ್ದರೂ ಗ್ರಾಹಕರಿಗೆ ಬೇಕಾದ ಸಮಯದಲ್ಲಿ ಕಷ್ಟಮರ್ ಸರ್ವೀಸ್ ಹೇಳ ಹೆಸರಿಲ್ಲದೇ ನೀಲಿ ಓವರ್‌ಕೋಟ್ ಧರಿಸಿದ ಯಾವೊಬ್ಬರೂ ಕಣ್ಣಿಗೆ ಬೀಳೋದೇ ಇಲ್ಲವೆಂತಲೂ; ಗೋಲ್ಡ್‌‌ಫಿಶ್‌ನಿಂದ ಹಿಡಿದು ಒಣ ಸಗಣಿಯವರೆಗೆ (ಉತ್ಪ್ರೇಕ್ಷೆ) ಒಂದೇ ಸೂರಿನಡಿಯಲ್ಲಿ ಉದ್ದಾನುದ್ದ ಸ್ಟೋರುಗಳಲ್ಲಿ ಮಾರಿ ಗ್ರಾಹಕರಿಗೆ ತಲೆಕೆಡಿಸುತ್ತಾರೆಂತಲೂ; ಘಂಟೆಗೆ ಎಂಟು-ಹತ್ತು ಡಾಲರ್‌ ಕೊಟ್ಟು ಬೆನಿಫಿಟ್ ಹೆಸರಿನಲ್ಲಿ ಎಂಪ್ಲಾಯಿಗಳನ್ನು ಶೋಷಿಸುತ್ತಾರೆಂತಲೂ, ಇತ್ಯಾದಿ ಇತ್ಯಾದಿಯಾಗಿ ಬಹಳಷ್ಟು ಹೇಳಲಾಗದ ಕಾರಣಗಳಿಂದ ನಾನು ದೂರವಿರಬೇಕು ಎಂಬುದು ನನ್ನ ತತ್ವವಾಗಿತ್ತು.

ಈ ಹೇಟ್ರೆಡ್ ಹಿಂದೆ ಕೆಲವು ನಿಜ ಅಂಶಗಳೂ ಇನ್ನು ಕೆಲವು ನಾನೇ ಕಲ್ಪಿಸಿಕೊಂಡವುಗಳೂ ಇರಲಿಕ್ಕೆ ಸಾಕು, ಕೈಲಾಗದವನು ಮೈಯೆಲ್ಲಾ ಪರಚಿಕೊಂಡನಂತೆ ಹಾಗೆ. ನಾನು ಯಾವುದನ್ನು ಬಹಳಷ್ಟು ದ್ವೇಷಿಸುತ್ತೇನೆಯೋ ಅದಕ್ಕೇ ನಾನು ಹೆಚ್ಚು ಹೆಚ್ಚು ಜೋತು ಬೀಳುವ ನಿದರ್ಶನ ಇವತ್ತು ನಿನ್ನೆಯದಲ್ಲ - ಆ ಪಟ್ಟಿಗೆ ಇಂದು ವಾಲ್‌ಮಾರ್ಟ್ ಅನ್ನೂ ಸೇರಿಸಿಕೊಂಡಿದ್ದೇನೆ. (ಆ ಪಟ್ಟಿಯ ಇನ್ನುಳಿದವುಗಳೆಂದರೆ - ನಾನು ಮದ್ರಾಸ್ ಅನ್ನು ಮನಸಾ ದ್ವೇಷಿಸಿದ್ದ ಪಾಡಿನಿಂದಾಗಿ ಮದ್ರಾಸಿನ ಹೊರವಲಯದಲ್ಲಿ ಹದಿನೆಂಟು ತಿಂಗಳು ಕಳೆಯುವಂತಾಗಿದ್ದು, ಅಮೇರಿಕದ ಹಾದಿಯೇ ಬೇಡವೆಂದವನಿಗೆ ಈಗ ಹತ್ತಿರ ಹತ್ತಿರ ಹನ್ನೆರಡು ವರ್ಷ "ವನವಾಸ" ತಾಗಿಕೊಂಡಿದ್ದು, ಬೆಂಗಳೂರಿನ ಕನ್ನಡಿಗರೋ, ದೇವಾ, ಅವರನ್ನು ನೀನೇ ಕಾಪಾಡಬೇಕು ಎಂದು ದ್ವೇಷಿಸಿದಂತೆ ಬೆಂಗಳೂರಿನ ಕನ್ನಡತಿಯೇ ನನ್ನ ಅರ್ಧಾಂಗಿಯಾಗಿದ್ದು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ). (ನಾನು ದ್ವೇಷಿಸಿದ್ದಲ್ಲ ಹತ್ತಿರವಾಗುತ್ತಿರುವ ನಿದರ್ಶನಗಳನ್ನು ಕಂಡರೆ ನಾಳೆಯಿಂದ ಮಿಲಿಯನ್ನುಗಟ್ಟಲೆ ಹಣಗೆಲ್ಲುವ ಲಾಟರಿ ಟೆಕೇಟ್ ಅನ್ನು ದ್ವೇಷಿಸಿದರೆ ಹೇಗೆ ಎನ್ನುವುದು ಈ ಹೊತ್ತಿನ ತತ್ವಗಳ ಉಪತತ್ವ, ಆ ಮಾತು ಬೇರೆ).

***

ಏಪ್ರಿಲ್, ೨೦೦೮ ರ ಹೊತ್ತಿಗೆಲ್ಲ ಒಂದು ಗ್ಯಾಲನ್ ಗ್ಯಾಸೋಲಿನ್ ಬೆಲೆ ಡಾಲರ್ 3.41 ಇದ್ದಿತ್ತು. ಅದು ಕ್ರಮೇಣ ನಂತರದ ಐದಾರು ತಿಂಗಳಲ್ಲಿ ಗ್ಯಾಲನ್‌ಗೆ ಡಾಲರ್ 3.99 ಆಗಿ ಹೋಗಿತ್ತು. ನಾನು ಒಮ್ಮೆ ನನ್ನ ಕಾರನ್ನು ಫಿಲ್ ಮಾಡಿಸಿದರೆ ಸುಮಾರು 65 ಡಾಲರ್ ಕೊಡಬೇಕಾದ ಪರಿಸ್ಥಿತಿ, ಎಲ್ಲರಂತೆ ನಾವೂ ಕೂಡ ಅನಗತ್ಯ ಪ್ರಯಾಣಗಳಿಗೆ ಕತ್ತರಿ ಹಾಕಿದ್ದೆವು. ಈ ಏರುತ್ತಿರುವ ಗ್ಯಾಸೋಲಿನ್ ಬೆಲೆಗೂ ಸ್ಯಾಮ್ಸ್‌ಕ್ಲಬ್ಬಿನಲ್ಲಿ ಮಾರುವ ಜೋಡಿ ಬ್ರೆಡ್ಡುಗಳ ಕಂತೆಗೂ ಎಲ್ಲೋ ಅವಿನಾಭಾವ ಸಂಬಂಧ. ಮೊದಲು ಜೋಡಿ ಬ್ರೆಡ್ ಲೋಫ್‌ಗೆ $2.07 ಇದ್ದಿದ್ದು ಮುಂದೆ $3.40 ಆಗಿ ಹೋಯಿತು. ಏನೇ ಆದ್ರೂ ಸ್ಯಾಮ್ಸ್‌ಕ್ಲಬ್ಬ್‌ನಲ್ಲಿ ದೊರೆಯುವ ಹಾಲು, ಬ್ರೆಡ್ಡುಗಳಷ್ಟು ಕಡಿಮೆ ಬೇರೆ ಯಾರೂ ಮಾರಲಿಕ್ಕಿಲ್ಲ. ಇಲ್ಲಿನ ಗೌಳಿಗರ ಮನೆಯಲ್ಲಿನ ಹಾಲೂ ಅದಕ್ಕಿಂತ ತುಟ್ಟಿಯಾಗಿದ್ದಿರಬಹುದು! ಮೊದಲೆಲ್ಲ, ಇಷ್ಟು ಎಕಾನಮಿ ಹದಗೆಟ್ಟಿರಲಿಲ್ಲ; ಒಂದು ವರ್ಷದ ಮೊದಲು ನನ್ನ ಪೋರ್ಟ್‌ಫೋಲಿಯೋ ಡಬಲ್ ಡಿಜಿಟ್ ಗೈನ್ ಮಾಡಿಕೊಂಡು ನಗುತ್ತಿತ್ತು (ಅವೆಲ್ಲ ಪೇಪರ್ ಹಣ ಮಾತ್ರ). 2008 ರ ಮಧ್ಯ ಭಾಗದಿಂದ ಶುರುವಾಯಿತು ನೋಡಿ ಕಷ್ಟಗಳು - ಒಂದೇ, ಎರಡೇ...ಬೇಕಾದಷ್ಟು. ನಾವು ಪೇ ಚೆಕ್ ನಂಬಿಕೊಂಡವರದೆಲ್ಲ ಆದಾಯ ಅಷ್ಟೇ, ಆದರೆ ಖರ್ಚು ಮಾತ್ರ ಮುಗಿಲೆತ್ತರ. ಈ ದಿನಗಳಲ್ಲೇ ಇರಬೇಕು ನಾನು ಬೇರೆಲ್ಲ ಅಂಗಡಿ ಮುಗ್ಗಟ್ಟುಗಳಿಗೆ ಹೋಗೋದನ್ನು ನಿಲ್ಲಿಸಿ ಇದ್ದುದರಲ್ಲಿ ಕಡಿಮೆ ಬೆಲೆಗೆ ಮಾರುವ ಸ್ಯಾಮ್ಸ್‌ಕ್ಲಬ್/ವಾಲ್‌ಮಾರ್ಟ್ ನಂಬಿಕೊಂಡಿದ್ದು. ಮುಂಬರುವ ದಿನಗಳು ಹೇಗೋ ಏನೋ, ಕೆಲಸವಿದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ - ಅದಕ್ಕಾಗಿ ಎಲ್ಲರೂ ಉಳಿಸುವವರೇ, ಮಿತವಾಗಿ ಖರ್ಚು ಮಾಡುವವರೇ. ನಮ್ಮ ಮನೆಗೆ ಹತ್ತಿರವಿರುವ ಎಕ್ಸಾನ್‌ನಲ್ಲಿ ಕೆಲಸ ಮಾಡುವ ಪಟೇಲ ಒಂದೇ ಶಿಫ್ಟಿನಲ್ಲಿ ಹದಿನೈದು ಸಾವಿರ ಡಾಲರ್ ವ್ಯಾಪಾರಮಾಡಿ ದೊಡ್ಡ ರೆಕಾರ್ಡ್ ಮಾಡಿದ್ದನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದ, ಆದರೆ ಇಲ್ಲಿ ಬರುವ ವಾಹನಗಳು ಕಡಿಮೆಯಾಗಿವೆ ಇತ್ತೀಚೆಗೆ ಅನ್ನೋದನ್ನೂ ಮರೆಯದೇ ಹೇಳಿದ್ದ. ಪಕ್ಕದಲ್ಲಿನ ಡಂಕಿನ್ ಡೋನಟ್ಸ್ ಅಂಗಡಿಯಲ್ಲಿ ನಾನು ಸರತಿ ಸಾಲಿನಲ್ಲಿ ನಿಂತಿರುವಂತೇ ಇಬ್ಬರು ತಮ್ಮ ಕೆಲಸ ಇತ್ತೀಚೆಗಷ್ಟೇ ಕಳೆದುಕೊಂಡಿದ್ದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೆ ಬಿತ್ತು - ಹೀಗೆ ಎಲ್ಲರದೂ ಕಷ್ಟದ ಪರಿಸ್ಥಿತಿ.

ಇನ್ನೊಬ್ಬರ ಕಷ್ಟಕ್ಕೆ ಲಘುವಾಗಿ ಸ್ಪಂದಿಸುವ ನಾನು, ಅವರ ಕಷ್ಟಗಳು ನನಗೇನಾದರೂ ಬಂದರೆ ಎಂದು ಯೋಚಿಸಿಕೊಂಡಂತೆಲ್ಲ ನನ್ನಲ್ಲಿ ಹಲವಾರು ಬದಲಾವಣೆಗಳಾಗ ತೊಡಗಿದವು: ನಮ್ಮ ಪಟ್ಟಣದ ಒಂದು ಫ್ಯಾಮಿಲಿ ಬೇಕರಿಗೆ ನಾನು ಭೇಟಿಕೊಡೋದನ್ನೇ ನಿಲ್ಲಿಸಿ ಬಿಟ್ಟೆ (ಖರೀದಿ ಮಾಡುವ ಸಾಮಾನುಗಳು ಬರೀ ಫ್ರೆಶ್ ಆಗಿದ್ದರೆ ಮಾತ್ರ ಸಾಲದು); ಅಗತ್ಯ ವಸ್ತುಗಳಿಗೆ ಈ ಕಡಿಮೆ ಬೆಲೆಯ ವಾಲ್‌ಮಾರ್ಟ್ ನಿಯಮಿತ ಭೇಟಿ ಕೊಡುವ ಸಂಗತಿಯಾಗಿ ಹೋಯಿತು; ಹೂವು/ಹಣ್ಣಿನ ಅಂಗಡಿಗಳಿಗೆ ಕಾಲಿಟ್ಟು ಎಷ್ಟೋ ತಿಂಗಳುಗಳಾಯಿತು; ಇಂಡಿಯನ್ ಫುಡ್ ಇಡುವ ಫಾಸ್ಟ್‌ಫುಡ್ ರೆಸ್ಟೋರೆಂಟುಗಳಿಗೆ ಇಂಡಿಯನ್ ಹೋಟೆಲುಗಳಿಗೆ ಹೋಗೋ ದಾರಿಯನ್ನೇ ಮರೆತದ್ದಾಯಿತು; ನನ್ನಲ್ಲಿ ಹುದುಗಿದ್ದ ಅಪ್ಪಟ ಕ್ಯಾಪಿಟಲಿಸ್ಟ್ ವಿರೋಧಿ ಮನಸ್ಥಿತಿ ಇತಿಹಾಸವಾಯಿತು; ಲೋಕಲ್ ಅಂಗಡಿಗಳು ಬದುಕಿದರೆಷ್ಟು ಬಿಟ್ಟರೆಷ್ಟು ಎನ್ನುವ ಧೋರಣೆ ತಲೆದೋರಿ ಮುಂದೆ ಅದೇ ಬದುಕಾಯಿತು; ಈ ಅಂಗಡಿಗಳಿಗೆ ಹೆಚ್ಚೆಚ್ಚು ಹೋಗಿ ಬಂದ ಫಲವಾಗಿ ಅಲ್ಲಿನ ಜಾಗೃತಿಯಂತಹ ಎಂಪ್ಲಾಯಿಗಳು ಪರಿಚಿತರಾದರು; ಆ ದೊಡ್ಡ ಅಂಗಡಿಗಳಲ್ಲೂ ಯಾವ ಯಾವ ವಸ್ತುವನ್ನು ಎಲ್ಲೆಲ್ಲಿ ಇಟ್ಟಿರುತ್ತಾರೆ ಎನ್ನುವ ಇಮೇಜ್ ತಲೆಯಲ್ಲಿ ಕೂತು ಹೋಯಿತು...ಹೀಗೆ ಅಥವಾ ಒಟ್ಟಾರೆ ನಾನು ಸಂಪೂರ್ಣ ವಾಲ್‌ಮಾರ್ಟ್ ಮಯವಾಗಿ ಹೋಗುವಂತಾಯಿತು.

***

ಅದಕ್ಕೇ ಹೇಳಿದ್ದು, ಈ ತತ್ವಗಳ ಹಣೇಬರಹವೇ ಇಷ್ಟು ಎಂದು. ನೀವು ಕೇಳಿಲ್ವೇ - ಆಚಾರ ಹೇಳೋರು ಬದನೇಕಾಯಿ ತಿನ್ನೋ ವಿಚಾರಾನ? ಈ ಬರಹ ಅದರ ಹಿಂದಿನ ಸ್ಪಂದಿಸೋ ಮನಸ್ಥಿತಿ ಇವೆಲ್ಲ ಬರೀ ಹೊಟ್ಟೆ ತುಂಬಿದ ಮೇಲಿನ ವಿಚಾರಗಳ ಆಟ್ರಿಬ್ಯೂಟ್ ಸಾರ್. ಅದ್ರಲ್ಲೇನು ಹುರುಳಿಲ್ಲ ಬಿಡಿ. ನಮ್ಮದು ನಮ್ಮ ತತ್ವ ಅಂತ ಜೋತು ಬೀಳೋದರ ಗುಂಗು ಹಾಗಿರಲಿ, ಗಾಳಿ ಬಂದಾಗ ತೋರಿಕೊಳ್ಳೋದೇ ಜಾಣತನವಾಗಿ ಹೋಗಿದೆ (ಅಷ್ಟು ಧಮ್ ಇದ್ರೆ ಗಾಳಿ ಇಲ್ದಾಗ ತೂರು ನೋಡೋಣ ಅನ್ನೋದು ಮತ್ತೊಂದು ದಿನದ ಚಾಲೆಂಜ್, ನಮಗೇ ನಾವು ಬೀಸುವ ಗಾಳಿಯನ್ನು ಸೃಷ್ಟಿ ಮಾಡೋ ತಾಕತ್ತಿದ್ದರೆ ತೂರೋ ಕಷ್ಟವೆಲ್ಲಿಂದ ಬರುತ್ತಿತ್ತು). ಆಫೀಸಿನಲ್ಲಿ struggle for existence ಆಗಿ ಹೋಗಿದೆ - ಕೆಲಸ ಕಳೆದುಕೊಂಡವರ ಬಗ್ಗೆ ಮೊದಲೆಲ್ಲ ಹಲ್ಲಿಯ ಹಾಗೆ ಲೊಚಗುಟ್ಟುತ್ತಿದ್ದವನಿಗೆ ಈಗ ಅವನು ಕಳೆದುಕೊಳ್ಳದಿದ್ದರೆ ಇನ್ಯಾರಾದರೂ (ನಾನೂ ಸೇರಿ) ಕಳೆದುಕೊಳ್ಳಬೇಕಿತ್ತು, ಅವನು ಹೋಗಿದ್ದೇ ಒಳ್ಳೆಯದಾಯ್ತು (ಎಲ್ಲಿ ನನ್ನ ಕುತ್ತಿಗೆಗೆ ಬಂದು ಬಿಡುತ್ತೋ ಎಂದು) ಎನ್ನುವ ಸಮಜಾಯಿಷಿ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುತ್ತೆ. ದುಡಿಮೆಯನ್ನು ನಂಬಿಕೊಂಡು ಬಂದ ನಮಗೆ ಇಲ್ಯಾರೂ ಇಲ್ಲಾ ಸಾರ್ ನಮ್ಮನ್ನು ಬಿಟ್ರೆ. ಊರಿನಲ್ಲಾದ್ರೆ ಆರಾಮಾಗಿ ಅಣ್ಣ ಅಕ್ಕನ ಮನೆಗೆ ಹೋಗಿ ಒಂದು ವಾರ ಇದ್ದು ಬರಬಹುದಿತ್ತು, ಇಲ್ಲಿ ಆ ಭಾಗ್ಯ ಇಲ್ಲ. ಕೆಲಸವನ್ನು ನಂಬಿಕೊಂಡು ಬದುಕೋ ನಮಗೆ ಅದೇ ಎಲ್ಲ - ನಮಗೆ ಕಣ್ಣು ತುಂಬಿ ಬರೋ ನಿದ್ರೆಯಿಂದ ಹಿಡಿದು ನಮ್ಮನ್ನು ಕಾಡುವ ಚಿಂತೆಗಳವರೆಗೆ ಕೆಲಸದ ಕುರಿತ ವಿಷಯಗಳ ಕಾರುಭಾರು. (ಹಾಗಿದ್ರೆ ಇದನ್ನೆಲ್ಲ ಬಿಟ್ಟು ಬಂದು ಬಿಡಿ, ಅನ್ನೋದು ಸುಲಭ - ಆ ಪ್ರಾಜೆಕ್ಟ್ ಕೈಗೂಡೋದಕ್ಕೆ ಕೊನೇಪಕ್ಷ ಒಂದು ವರ್ಷದ ತಯಾರಿ ಆದ್ರೂ ಬೇಕು).

ಅಷ್ಟೇ, ಮತ್ತೆನಿಲ್ಲ - ಈ ಹೊತ್ತಿನ ತತ್ವ ಅಂತ ಬರೆದೂ ಬರೆದೂ ಅವುಗಳ ಲಿಮಿಟೇಷನ್ನ್ ನಿಮಗೆ ಗೊತ್ತಾದ್ರೆ ಸಾಕು.

8 comments:

Pramod said...

ಈ ಕಷ್ಟ ಇನ್ನೆಷ್ಟು ದಿನ...ಇನ್ನೂ ಕನಿಷ್ಟ 6 ತಿ೦ಗಳೇ?.. :(

Anonymous said...

ಇಲ್ಲಿ ಎಕನಾಮಿಕ್ ಸ್ಥಿತಿ ನೋಡಿದ್ರೆ ಮತ್ತೊಂದು ಮಾಸ್ಸ್ ಮೈಗ್ರೆಶನ ಆಗೋ ತರ ಕಾಣಸ್ತದೆ. ಮೊದಲು ಏನಂದ್ರು....ಯೆ ಈ ಸಲ ಅಮೇರಿಕಾದ ಎಕಾನಮಿ ಬಿದ್ದರೂ ಇಂಡಿಯಾ ಮತ್ತ ಚೈನಾ ಚೊಲೋ ಮಾಡಿ ಏನ್ ಅಷ್ಟು ತೊಂದ್ರಿ ಆಗಲಿಕ್ಕೆ ಇಲ್ಲ. ಅವನ್ನವ್ವನ.....ಇಲ್ಲಿಯವರ ಪ್ಯಾಂಟ್ ಕಳದ್ರ ಇಡಿ ಜಗತ್ತಿನ್ಯಾಗೆ ಪ್ಯಾಂಟು, ಅಂಗಿ, ಚೊಣ್ಣ, ಅಂಡರ್ವೇರ್ ಎಲ್ಲ ಕಳ್ಕೊಂಡ್ ಅಂಬೋ ಅನ್ನಕ್ ಹತ್ಯರಾಲ್ಲರಿ ಶಿವ. ವಾಲ್ಮಾರ್ಟ್ ಬೆಸ್ಟ್ ನೋಡ್ರಿ. ಎಲ್ಲ ಕಂಪನಿ ಸ್ಟಾಕ್ ಪ್ರೈಸ್ ಬಿದ್ದರು ಅವರದ್ದು ಮಾತ್ರ ಎದ್ದೈತಿ. ಡಿವಿಡೆಂಡ್ ಕೂಡ ಚೊಲೋ ಕೊಡ್ತಾರ. ಎಕಾನಮಿ ಡೌನ ಆದಾಗ ಸ್ಟಾಕ್ ತೊಗೊಳ್ಳೋದು ಬೆಸ್ಟ್. ಇಂತ ಅವಕಾಶ ಮತ್ತೆ ಬರೋದಿಲ್ಲ. ಮನಿ ಮಠ ಅಂತ ತೊಗೊಂಡು ಕೂತ್ರ ಗಡಿಬಿಡಿಯಾಗ ಮಾರಾಟ ಮಾಡೋದು ಕಷ್ಟ. ಹಾರ್ಡ್ ಕಾಶ್ ಇಟ್ಗೊಂದ್ ಮಜ ಮಾಡ್ಬೇಕ್ ನೋಡ್ರಿ.

"ದುಡಿಮೆಯನ್ನು ನಂಬಿಕೊಂಡು ಬಂದ ನಮಗೆ ಇಲ್ಯಾರೂ ಇಲ್ಲಾ ಸಾರ್ ನಮ್ಮನ್ನು ಬಿಟ್ರೆ."

ಸರಿ ಹೇಳಿದ್ರಿ. ನಮ್ಮ ಕನ್ನಡ ಮಂದಿಗೆ ಇದು ಭಾರಿ ಪ್ರಾಬ್ಲಮ್. ಅದೇ ಪಂಜಾಬಿಸ್, ಗುಜರಾಥಿಸ್ ನೋಡ್ರಿ....ಅವರ ಪೂರ್ತಿ ಹಳ್ಳಿನ ಇಲ್ಲಿ ಇರತೈತಿ. ಸ್ಟ್ರಾಂಗ್ ಕಂಮ್ಯುನಿಟಿ ಫೀಲಿಂಗ್ ಬರತೈತಿ. ಹಾಂಗಾಗಿ ಇಂತ ಕಷ್ಟ ಕಾಲದಾಗ ಅವರಿಗೆ ಅಷ್ಟ್ ತೊಂದ್ರಿ ಅನ್ನಿಸಲಿಕ್ಕೆ ಇಲ್ಲ. ನಮ್ಮ ಕನ್ನಡ ಮಂದಿ ಅಪ್ಪ ಅವ್ವ ಕಸಿನ್ಸ್ etc. ಬರಲಿಕ್ಕೆ ಒಪ್ಪೋದಿಲ್ಲ. ಬಂದ ನಮ್ಮಂತೋರು ಪರದೇಸಿ ಹಾಂಗೆ ಟೆನ್ಶನ್ ನಲ್ಲಿ ಇರಬೇಕಗೈತಿ.


-ಮಠ

Keshav.Kulkarni said...

ನಿಜ ಸತೀಶ್,

ತತ್ವಗಳಿರೋದೇ ಬ್ರೇಕ್ ಮಾಡೋಕೆ.

-ಕೇಶವ

Shree said...

And thus an idealist died a natural death! :) En guru idu? Hingella madkontheeraa?

ವಿ.ರಾ.ಹೆ. said...

ha ha ha. nice.

Lakshmi Shashidhar Chaitanya said...

tatvagaLanna break maaDo tatva na neTTage paalisidre saaku annOdu nanna policy :)

Shiv said...

ಸತೀಶ್,

ಬಿಟ್ಟರೂ ಬಿಡದು ಈ ವಾಲ್ ಮಾರ್ಟ್ ಮಾಯೆ.
ಅದು ಎನೇ ಆಗಿದ್ದರೂ, ಕೊನೆಗೆ ಗ್ರಾಹಕನಿಗೆ ಬೇಕಾದವು ಎಲ್ಲಾ ಒಂದೇ ಕಡೆ ಕಡಿಮೆ ಬೆಲೆಗೆ ಸಿಗುತ್ತೆ ಆನ್ನುವಾಗ ಗ್ರಾಹಕ ಎಕೇ ತಲೆ ಕೆಡಿಸಿಕೊಳ್ಳುತ್ತಾನೆ?

Satish said...

ಎಲ್ಲರಿಗೂ...ದಯವಿಟ್ಟು ಕ್ಷಮಿಸಿ ಉತ್ತರಿಸಲು ತಡವಾಗಿದ್ದಕ್ಕೆ.

ಪ್ರಮೋದ್,
ಇನ್ನು ಆರು ತಿಂಗಳು? ಅದಕ್ಕಿಂತ ಹೆಚ್ಚು ಸಮಯ ಬೇಕು, ಇನ್ನೆರಡು ವರ್ಷವಾದ್ರೂ ಬೇಕು ಕನಿಷ್ಠ.

ಮಠ,
ಹೌದು, ನಮಗೆ ನಮ್ಮವರ ಕೊರತೆ ಕಡಿಮೆ ಆಗಿದೆ. ನಡೀರಿ ಬೆಂಗ್ಳೂರಿಗೆ ಹೋಗಿ ಎಲ್ಲ ಕನ್ನಡಿಗರನ್ನು ಕರಕೊಂಡ್ ಬರೋಣಂತೆ!

ಕೇಶವ್,
ಏನ್ಸಮಾಚಾರ, ಬಹಳ ಸಮಯವಾಯ್ತು ನಿಮ್ಮ ದರ್ಶನವಾಗಿ. ’ಬ್ರೇಕ್’ ಮಾಡೋಕೆ ಅನುಕೂಲವಾಗಲೀ ಎಂಬುದಕ್ಕಾಗೇ ’ಈ ಹೊತ್ತಿನ ತತ್ವಗಳು’ ಎಂದು ಅವುಗಳನ್ನು ಕರೆಯೋದು ಎಂದು ಮೊನ್ನೆ ಯಾರೋ ತಮಾಷೆ ಮಾಡ್ತಾ ಇದ್ರು ನೋಡಿ.

ಶ್ರೀ,
ಏನಿಲ್ಲ, ಐಡಿಯಲಿಸ್ಟ್ ಇಲ್ಲೂ ನ್ಯಾಚುರಲ್ಲೂ ಇಲ್ಲ, ಡೆತ್ ಅಂತ್ಲೂ ಇಲ್ಲವೇ ಇಲ್ಲ...ಸುಮ್ನೇ ಊಹೆ ಮಾಡ್ಕೊತಿದೀರಾ ಅಷ್ಟೆ.

ವಿಕಾಸ್,
ಥ್ಯಾಂಕ್ಸ್.

ಲಕ್ಷ್ಮಿ,
ಒಳ್ಳೇ ಪಾಲಿಸಿ ಇಟ್ಟುಕೊಂಡಿದೀರಾ, ನಿಮ್ಮ ಉಳಿದ ಪಾಲಿಸಿಗಳನ್ನು ನಮ್ಮಲ್ಲಿ ಹಂಚಿಕೊಳ್ಳಬಾರದೇಕೆ?

ಶಿವಣ್ಣೋ,
ಎಲ್ಲಿದ್ದೀರಾ ಸಾರ್? ಏನ್ ಸಮಾಚಾರ...
ಗ್ರಾಹಕರ ದೃಷ್ಟಿಯಿಂದ ಅಗ್ಗವಾದ ಕಡೆಗೆ ಹೆಚ್ಚುವ ಬಿಸಿನೆಸ್ಸು, predatory pricing ಮಾಡೋದು ಕೆಲವೊಮ್ಮೆ ಗ್ರಾಹಕರ ಗಮನಕ್ಕೆ ಬರದೇ ಇರಬಹುದು.