ಜಾಗೃತಿ ಆರ್ಯಾವತಿ ಹಾಗೂ ನಮ್ಮತನ
’ಏಕೆ ನಿನ್ನ ಹೆಸರನ್ನು J J ಅಂತ ಬದಲಾಯಿಸಿಕೊಂಡಿದ್ದೀಯಾ?’ ಎಂದು ಇಂದು ವಾಲ್ಮಾರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸೊಬ್ಬಳನ್ನು ಕೇಳಿದೆ. ಭಾರತೀಯ ಮೂಲದ ಆಕೆ ಅಪರೂಪಕ್ಕೊಮ್ಮೆ ನಾನು ಶಾಪ್ಪಿಂಗ್ ಹೋದಾಗಲೆಲ್ಲ ಸಿಕ್ಕು ಮುಖ ಪರಿಚಯವಿದ್ದಂತೆ ’ನಾವು ಭಾರತೀಯರು’ ಎನ್ನುವ ಸಂಬಂಧವೂ ನಮಗೆ ಹೇಳದ ಹಾಗೆ ಬೆಳೆದು ಬಂದಿದೆ. ಆಕೆಯ ನೇಮ್ ಟ್ಯಾಗ್ನಲ್ಲಿದ್ದದ್ದು ’ಜಾಗೃತಿ’ ಎಂಬುದಾಗಿ, ಇಂದು ಅದರ ಮೇಲೆ ಮತ್ತೊಂದು ಹೊಸ ಹೆಸರಿನ ಟ್ಯಾಗ್ ಮುದ್ರಿಸಿಕೊಂಡು ಜೆಜೆ ಎಂದು ಓಡಾಡಿಕೊಂಡಿದ್ದಾಳೆ.
’ಏನಾಯ್ತು?’ ಎಂದರೆ ಆಕೆ ’ಅವರಿಗೆಲ್ಲ ನನ್ನ ಹೆಸರನ್ನು ಉಚ್ಛರಿಸುವುದಕ್ಕೆ ಕಷ್ಟವಾಗುತ್ತಿತ್ತು, ಅದಕ್ಕೇ ಈ ಹೆಸರು ಕೊಟ್ಟಿದ್ದಾರೆ...’
ನಾನು ಆಕೆಯ ಮಾತನ್ನು ಮಧ್ಯದಲ್ಲಿ ತುಂಡು ಮಾಡಿ ಕೇಳಿದೆ, ’ಜಾಗೃತಿ ಅನ್ನೋ ಪದ ಕಷ್ಟವೇ? ನೀನು ಹಾಗೆ ಆಗೋದಿಲ್ಲ ಎನ್ನಬೇಕಿತ್ತು...’ ಎನ್ನುವಾಗ, ಆಕೆ ಚಿಕ್ಕ ಮುಖ ಮಾಡಿಕೊಂಡು ಹೇಳಿದಳು, ’ಪುಸ್ತಕದಲ್ಲೆಲ್ಲಾ ಜಾಗೃತಿ ಅಂತಲೇ ಇದೆ, ಆದರೆ ಕರೆಯುವುದಕ್ಕೆ ಈ ಹೆಸರನ್ನು ಕೊಟ್ಟರು ನಾನೇನು ಹೇಳಲಿಲ್ಲ’.
ನಮ್ಮ ಒಂದು ನಿಮಿಷದ ಭೇಟಿಯಲ್ಲಿ ನಾನೇನೂ ಹೆಚ್ಚು ಮಾತು ಬೆಳೆಸಲಿಲ್ಲ, ಬದಲಿಗೆ ’ಮತ್ತೆ ಹೇಳಿ ನೋಡಿ, ಜಾಗೃತಿ ಅನ್ನೋ ಹೆಸರು ನಿಜವಾಗಿಯೂ ಚೆನ್ನಾಗಿದೆ, ಜೊತೆಗೆ ಅಮೇರಿಕನ್ನರಿಗೆ ಹೇಳುವುದಕ್ಕೆ ಅಷ್ಟೊಂದು ಕಷ್ಟವಾದುದೇನೂ ಅಲ್ಲ’ ಎಂದು ಹೇಳಿ ನನ್ನ ದಾರಿ ಹಿಡಿದೆ.
ನನ್ನ ಈ ಹೆಸರಿನ ಉಚ್ಛಾರಕ್ಕೆ ಪುಷ್ಟಿಕೊಡುವ ಹಾಗೆ ಆಗಷ್ಟೇ ಲೈಬ್ರರಿಯಲ್ಲಿ ಬಾರೋ ಮಾಡಿದ ಸಿಎನ್ಎನ್ ನ ಆಂಡರ್ಸನ್ ಕೂಪರ್ (Anderson Cooper) ನ ಟಿಪ್ಪಣಿಗಳ ಆಡಿಯೋ ಸಿಡಿ ಕಾರಿನಲ್ಲಿ ನಡೆಯುತ್ತಿತ್ತು, ಅದರಲ್ಲಿ ಆತ ಶ್ರೀಲಂಕಾದಲ್ಲಿ ಸುನಾಮಿಯ ಅನುಭವಗಳನ್ನು ದಾಖಲು ಮಾಡಿದ ಬಗ್ಗೆ ಓದುತ್ತಾ ಹೋಗುತ್ತಿದ್ದಾಗ ಅಲ್ಲಿ ಸುನಾಮಿಯ ತರುವಾಯ ಆಕ್ಸಿಡೆಂಟ್ಗೆ ಒಳಗಾದ ರೈಲಿನ ಅವಶೇಷವೊಂದನ್ನು ವಿವರಿಸುತ್ತಾ ಆರ್ಯವಾಟಿಯ ಕಣ್ಣೆದುರೇ ಆಕೆಯ ಮಗ ಹಾಗೂ ಅಮ್ಮ ಕಾಣೆಯಾದುದರ ಬಗ್ಗೆ ವಿವರಿಸುವ ಒಂದು ಪ್ಯಾರಾಗ್ರಾಫ್ ಬಂತು. ಆರ್ಯ...ವಾಟಿ...ಯ ಬಗ್ಗೆ ಮತ್ತಷ್ಟು ಚಿಂತಿಸಲಾಗಿ ಅದು ಆರ್ಯಾವತಿ ಇದ್ದಿರಬಹುದೇನೋ ಅನ್ನೋ ಕಲ್ಪನೆ ಮೂಡಿಬಂತು. Mom Yes, Son No...ಎಂದು ಹೇಳುತ್ತಾ ಇಬ್ಬರನ್ನೂ ಕಳೆದುಕೊಂಡು ಒಬ್ಬರ ಕಳೇಬರವನ್ನಷ್ಟೇ ಕಳೆದುಕೊಂಡ ದುಃಖದಲ್ಲಿದ್ದ ಆರ್ಯಾವತಿಯ ಪ್ರೈಯಾರಿಟಿಗಳು ಖಂಡಿತವಾಗಿಯೂ ಬೇರೆಯೇ ಇದ್ದಿರುತ್ತವೆ. ಆಂಡರ್ಸನ್ ಕೂಪರ್ ಎನ್ನುವ ರಿಪೋರ್ಟರ್ ತನ್ನ ಹೆಸರನ್ನು ಒಂದು ದಿನ ಹೀಗೆ ಬಳಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಆಕೆಗೆ ಇರಲಿಕ್ಕಿಲ್ಲ.
***
ನಮಗೆ ನಮ್ಮತನ ನಮ್ಮದರಲ್ಲಿ ಏನೋ ಕೊರತೆ ಇದೆ. ಆ ಕೊರತೆ ನಮಗೆ ಕೀಳು ಮನೋಭಾವನೆಯನ್ನು ತಂದುಕೊಟ್ಟಿದೆ. ಜಾಗೃತಿಯ ಹೆಸರನ್ನು ಇದ್ದ ಹಾಗೆ ಹೇಳುವಷ್ಟು ನಾಲಿಗೆ ತಿರುಗಿಸುವುದಕ್ಕೆ ಆಕೆಯ ವಾಲ್ಮಾರ್ಟ್ ಸಹೋದ್ಯೋಗಿಗಳು ಕಷ್ಟಪಡಬೇಕಾಗಿಲ್ಲ, ಆಕೆಯೇ ಬದಲಾಗಿದ್ದಾಳೆ. ವಿಶ್ವದ ದೊಡ್ಡ ಕಾರ್ಪೋರೇಟ್ ವ್ಯವಸ್ಥೆಯ ಮುಂದೆ ಘಂಟೆಗೆ ಇಂತಿಷ್ಟು ಎಂದು ಕೆಲಸ ಮಾಡುವ ಆಕ್ರಂದನವೆಲ್ಲಿ ನಡೆದೀತು? ಇದರಲ್ಲಿ ಘಂಟೆಗೆ ಇಂತಿಷ್ಟು ಕೆಲಸ ಮಾಡುವ ಮಿತಿಯಾಗಲೀ ನಮ್ಮ ಪದವಿ ಹುದ್ದೆಗಳ್ಯಾವುವೂ ಲೆಕ್ಕಕ್ಕೆ ಬಾರದವು. ನಾನು ’ಹೊಸನಗರ’ ಎಂದು ಅಮೇರಿಕನ್ನರಿಗೆ ಹೇಳುವಲ್ಲಿ ನನ್ನ ಉಚ್ಛಾರಣೆಯಲ್ಲಿ ಏನನ್ನಾದರೂ ಬದಲಾಯಿಸಿಕೊಳ್ಳುತ್ತೇನೆಯೇ? ಏಕೆ?
ನಿನ್ನೆ ನಮ್ಮ ಮನೆಯಿಂದ ಅರವತ್ತು ಮೈಲು ದೂರದಲ್ಲಿರೋ ನ್ಯೂ ಯಾರ್ಕ್ ನಗರದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅನ್ನು ನೋಡಿಕೊಂಡು ಬರಲು ನಮ್ಮ ಮನೆಯವರೊಂದಿಗೆ ಹೋಗಿದ್ದೆ. ಅಲ್ಲಿ ಹೆಚ್ಚು ಜನ ಬರೋ ಪ್ರವಾಸಿಗರಿಗೆ ಆಡಿಯೋ ಉಪಕರಣವನ್ನು ಕೊಡುತ್ತಿದ್ದವ ನೀವು ಯಾವ ದೇಶದವರು ಎಂದು ಔಪಚಾರಿಕವಾಗೇ ಮಾತನಾಡುತ್ತಾ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದ. ಇದೇ ಕಟ್ಟದ ಪಕ್ಕದಲ್ಲೇ ದಿನವೂ ನಡೆದುಕೊಂಡು ಹೋಗಿ ಸುಮಾರು ನಾಲ್ಕು ವರ್ಷ ಕೆಲಸ ಮಾಡಿದ್ದೇನೆ ಎನ್ನುವ ಕನ್ಸೆಷನ್ನ್ ಕೂಡಾ ಇಲ್ಲದೇ ’ನೀವು ಭಾರತೀಯರು!’ ಎಂದು ಅವನೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದ. ಅವನ ಕಣ್ಣೆದುರಿನಲ್ಲಿ ನಾನು ಭಾರತೀಯನೇ, ಇಂದಿಗೂ ಎಂದಿಗೂ. ನಾನು ಕುಡಿದ ಅದೆಷ್ಟೋ ಸ್ಟಾರ್ಬಕ್ಸ್ ಕಾಫಿಯ ಗತ್ತು, ನಾನು ಓದಿದ ಅದೆಷ್ಟೋ ವಾಲ್ ಸ್ಟ್ರೀಟ್ ಜರ್ನಲ್ಲ್ನ ಕಿಮ್ಮತ್ತು, ನಾನು ಟ್ರೇನಿನಲ್ಲಿ ಮುಖದ ಮೇಲೆ ಆಗಾಗ್ಗೆ ಸೃಷ್ಟಿಸಿಕೊಂಡ ಹುಸಿಗಾಂಭೀರ್ಯದ ಚಹರೆ ಹಾಗೂ ಅದರ ಹಿಂದಿನ ಮೆದು ಧ್ವನಿ, ಇಲ್ಲಿ ಎಲ್ಲರಂತೆ ನಾನೂ ಟ್ಯಾಕ್ಸ್ ಕೊಟ್ಟು ಅನುಭವಿಸುವ ಹಸಿರು ಕಾರ್ಡಿನ ವೈಭವದ ದ್ವಂದ್ವ ಇವೆಲ್ಲವನ್ನೂ ಎಂಭತ್ತನೇ ಮಹಡಿಯಿಂದ ಎತ್ತಿ ಹಲವಾರು ಆಶಾವಾದಗಳೆನ್ನುವ ತರಗೆಲೆಗಳನ್ನು ಅದೆಲ್ಲಿಂದಲೋ ಸುತ್ತಿ ಸುಳಿದು ತರುತ್ತಿದ್ದ ಗಾಳಿಗೆ ಎಸೆದ ಹಾಗಾಯಿತು.
’ಹೌದು, ನಾನು ಭಾರತೀಯನೇ!’ ಅಷ್ಟೇ ಗಟ್ಟಿಯಾಗಿ ಹೇಳಿದೆ. ’ಬೇಕಾಗಿಲ್ಲ ನಿಮ್ಮ ಪರಂಪರೆಯನ್ನು ಸಾರಿ ಹೇಳುವ ಕಿವಿ ಮಾತು (ಆಡಿಯೋ ಯಂತ್ರ), ಅದರ ಬಗ್ಗೆಯೂ ಸಾಕಷ್ಟು ಬಲ್ಲೆ’ ಎಂದು ಹೇಳಿದವನೇ ಬಿರುಬಿರನೆ ನಡೆದು ಮುಂದೆ ಹೋದೆ. ಭೂಮಿಗೂ ಆಕಾಶಕ್ಕೂ ನಡುವೆ ಸಂಪರ್ಕ ಏರ್ಪಡಿಸುವಂತೆ ಬೆಳೆಸಿದ ಕಟ್ಟಡವನ್ನು ಅದೆಲ್ಲೆಲ್ಲಿಂದಲೋ ಬಂದು ಹತ್ತೊಂಭತ್ತು ಡಾಲರ್ರನ್ನು ಕೊಟ್ಟು ನೋಡುವ ಜನರಿಗೆ ಮೂರು ಡಾಲರಿಗೊಂದರಂತೆ ಆಡಿಯೋ ಉಪಕರಣವನ್ನು ಬಾಡಿಗೆಗೆ ಕೊಡುವ ಮೂರು ಕಾಸಿನವನ ಬಳಿ ನನ್ನದೇನು ಅಹವಾಲು? ನೀನು ಕರಿ ಕಪ್ಪಗಿನವನು, ಮೊದಲು ನಿನ್ನ ಮೂಲ ಹಾಗೂ ಮರ್ಮವನ್ನು ಕೆದಕಿಕೊಂಡು ನೋಡು ಎಂದು ನಮ್ಮೂರಿನಲ್ಲಾಗಿದ್ದರೇ ಗಟ್ಟಿಯಾಗಿ ಹೇಳಿಯೇ ಬಿಡುತ್ತಿದ್ದೆ.
ಎಂಭತ್ತಾರನೇ ಮಹಡಿಯ ಹೊರಗೆ ಮೌನವಿದೆ! ಬೆಳೆದು ಆಕಾಶವನ್ನು ಉಳಿದವರೆಲ್ಲರಿಗಿಂತ ಹೆಚ್ಚು ಮುಟ್ಟಿದ ಗಾಂಭೀರ್ಯತೆ ಇದೆ. ದಿನಕ್ಕೊಂದಿಷ್ಟು ಬೆರಗು ಕಣ್ಣಿನವರನ್ನು ಸಮಾಧಾನಗೊಳಿಸಿದ ಸಾಂತ್ವನ ಮನಸ್ಥಿತಿ ಇದೆ. ಅದೇ ಮುಗಿಲು ಅಲ್ಲಿ ಭಾರತೀಯರು-ಅಮೇರಿಕನ್ನರು ಎಂಬ ಬೇಧ-ಭಾವವಿಲ್ಲ. ಆದರೆ ನೆಲಕ್ಕಿದೆ, ನೆಲದ ಮೇಲೆ ನಿಂತ ನಮಗಿದೆ ನಮ್ಮ ಜೊತೆಗಿನ ಕಟ್ಟಡಕ್ಕೂ ಇದೆ. ಮೇಲೆ ಹಾರಬೇಕೆನ್ನುವ ಕನಸುಗಳಿಗೆ ಯಾವ ಬಂಧನವಿಲ್ಲ, ಅಡ್ಡಿ ಆತಂಕಗಳಿಲ್ಲ; ಕೆಳಗೆ ಬದುಕಬೇಕೆನ್ನುವ ಬದುಕಿಗೆ ಹಲವಾರು ಬಂಧನಗಳಿವೆ, ಹೀಗಿರಬೇಕು ಎನ್ನುವವರಿದ್ದಾರೆ. ಹೀಗಿರುವ ನೆಲ ಮುಗಿಲುಗಳಲ್ಲಿ ನಾನು ಯಾವತ್ತಿದ್ದರೂ ಭಿನ್ನನೇ, ಎಲ್ಲಿದ್ದರೂ ನನ್ನ ಸ್ವಂತಿಕೆ ಎನ್ನುವುದು ಇದ್ದೇ ಇದೆ. ಅದಕ್ಕೇನಾದರೂ ಯಾರಾದರೂ ಅಡ್ಡಿ ಬಂದಾರೆಂದರೆ ಅಲ್ಲಿಂದ ಕಂಬಿ ಕೀಳುವಂತೆ ಪ್ರಚೋದಿಸುವುದು ನನ್ನತನವೇ. ಎಲ್ಲ ಕಡೆಯೂ ಇದ್ದು, ಎಲ್ಲೂ ಇರದಿರುವುದೇ ನಮ್ಮತನ.
6 comments:
ಸರ,
ಕೆಲವೊಂದ ಹೆಸರ ಕೇಳಿದ್ರ ಇಲ್ಲಿ USA ಗೆ ಬಂದ ಮ್ಯಾಗೆ ಬದಲಾಯಿಸಿಕೊಲ್ಲುದು better. ಅಲ್ರಿ, ಈ ಹೆಸರ ನೋಡ್ರಿ - ಶಂತನು, ದಕ್ಷಿತ್, ಪರಿಕ್ಷಿತ್, ದೀಕ್ಷಿತ್, ವಿಷಕಂಠ - ಇಂಥ ಹೆಸರ ಇಟಗೊಂಡು ಮ್ಯಾಲಿಂದ ಮ್ಯಾಲೆ ಇಲ್ಲಿಯವರು 'spell it for me please' ಅಂದಾಗ spell ಮಾಡಿ ಅವ್ರಿಗೆ ಪುಕ್ಸಟ್ಟೆ ಮಜಾ ಕೊಡುದರ ಬದಲಿ ಬದಲಾಯಿಸಿಕೊಂದವರು ಇದ್ದಾರೆ.
-ಮಠ
yaako Yerederedu sala Odikonde..tumba ishtavaayitu..idakke coment hege haakodu gottaaguttilla..adbhuta baraha matte barahaagaara yaavattu kaamentina bagge tale kedisikolluvudilla allava? nija nimage barahada mele adbhutavaada hiditavide...
antarangakke preetiya salaam:)
Nimma
somu
end note... exceptional!
Jagruti has rights and if she doesnt want to exercise them for whatever reason or doesnt know how to..it is her problem..it is not the system.
That black man wouldnt have cared if Infy's Murthy walked by..brown skin is brown skin.
WSJ, starbucks consumption doesnt make someone an american, a little blue book issued by the govt does:)
The very fact that we are here means we are getting something out of this country, it has something we want and like.
to live and enjoy a system and to nitpick the same system is called hypocrisy:)
If the black guy is "moorukaasinavnu" then Jagruti is too..what say you?
S
ಮಠ,
ಮಕ್ಕಳಿಗೆ ಹೆಸರಿಡೋದಕ್ಕೆ ಸಹಾಯ ಮಾಡಿ ಅನ್ನೋರಿಗೆ ನಿಮ್ಮ ರೆಫೆರೆನ್ಸ್ ಕೊಡೋದಕ್ಕೆ ಅಡ್ಡಿ ಇಲ್ಲ ನೋಡಿ, ಒಳ್ಳೇ ಕಲೆಕ್ಷನ್ನೇ ಇಟ್ಟಿದ್ದೀರ.
ಸೋಮು,
ಧನ್ಯವಾದಗಳು, ಕಾಮೆಂಟಿನ ಬಗ್ಗೆ ಖಂಡಿತ ತಲೆಕೆಡಿಸಿಕೊಳ್ಳೋಲ್ಲ, ಅವು ಇದ್ರೆ ಓಕೆ, ಇಲ್ದಿದ್ರೂ ಓಕೆ, ಆಗಾಗ್ಗೆ ಭೇಟಿ ಕೊಡ್ತಾ ಇರಿ.
ಸಮನ್ವಿತಾ,
ಬಹಳ ಒಳ್ಳೆಯ ಪಾಯಿಂಟ್(ಗಳು).
ಲಿಟ್ಲ್ ಬ್ಲೂ ಬುಕ್ಕೂ ಅಥವಾ ಹಸಿರು ಕಾರ್ಡೂ ಇವು ನಮ್ಮ ಹಾಗೂ ವ್ಯವಸ್ಥೆಯ ನಡುವೆ ಇರುವ ಪ್ರವರಗಳು, ಅದು ಹೊರಗಿನವರಿಗೆ ಹೇಗೆ ಗೊತ್ತಾಗುತ್ತೆ ಹೇಳಿ.
ಅವನು ’ಮೂರು ಕಾಸಿನವರು’ ಎನ್ನುವುದು ನನ್ನ ನಿಜವಾದ ಧ್ವನಿ ನನ್ನ ಮತ್ತು ಅವನ ನಡುವಿನ ಸಂಬಂಧ ಹಾಗೂ ಸಂವಾದ ಕುರಿತು. ಅದೇ ಒಂದು ಕಾರ್ಪೋರೇಟ್ ವ್ಯವಸ್ಥೆಯ ಹಿನ್ನೆಲೆಯಲ್ಲಿ ಕೆಲಸಗಾರರೆಲ್ಲ ಸಮಾನರಲ್ಲವೆ.
Satish,
Idu nijakkoo olleya baraha.Complex subject but glad you have not over simplified.
Tumbaa ishtavaayithu,
Jayashree
ಜಯಶ್ರೀ,
ಧನ್ಯವಾದಗಳು, ಏಕೆ ಬಹಳ ಅಪರೂಪವಾಗಿ ಹೋದಿರಲ್ಲ?!
Post a Comment