Sunday, April 27, 2008

ನಮ್ಮ ನಡುವಿನ ಸಂಬಂಧ-ಸೂಕ್ಷ್ಮತೆ

ನನ್ನ ಸ್ನೇಹಿತ, ಸಹೋದ್ಯೋಗಿಯಾಗಿದ್ದವನು ಇಂದು ಕರೆ ಮಾಡಿ ಏನೋ ಹೊಸ ಸುದ್ದಿಯನ್ನು ಹೇಳುತ್ತಾನೆ ಅಂದುಕೊಂಡರೆ ನನಗೆ ಖಂಡಿತವಾಗಿ ಆಶ್ಚರ್ಯ ಕಾದಿತ್ತು. ಆತನ ಮಾತನ್ನು ಕೇಳಿದ ಮೇಲೆ ಮಾನವ ಸಂಬಂಧಗಳನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುವಂತೆ ಆಗಿದ್ದು ನಿಜ. ಒಮ್ಮೆ ಆ ಮಟ್ಟಿಗಿನ ವೈರಾಗ್ಯ ನನ್ನನ್ನು ಹಾಗೆ ಆಲೋಚಿಸುವಂತೆ ಸ್ಪೂರ್ತಿ ನೀಡಿದ್ದಿರಬಹುದು, ಅಥವಾ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸುವ ನನ್ನ ರೀತಿ ಹಾಗೆಯೇ ಇರಬಹುದು.

ಈಗ್ಗೆ ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಕಳೆದು ಹನ್ನೊಂದು ವರ್ಷಗಳ ವೈವಾಹಿಕ ಜೀವನದಲ್ಲಿ ಮುದ್ದಾದ ಎರಡು ಮಕ್ಕಳನ್ನು ಪಡೆದ ನನ್ನ ಸ್ನೇಹಿತನ ಬದುಕು ಗಂಭೀರವಾಗಿದೆಯಂತೆ. ಆತನ ಹೆಂಡತಿ ಇದ್ದಕ್ಕಿದ್ದಂತೆ ಕಳೆದೊಂದು ವಾರದಲ್ಲಿ ಮಾತಿಗೆ ಮಾತು ಬೆಳೆಸಿ ತನ್ನ ಮಕ್ಕಳನ್ನು ಕರೆದುಕೊಂಡು ಇನ್ನೊಮ್ಮೆ ಬರುವುದಿಲ್ಲ ಎಂದುಕೊಂಡು ಒನ್ ವೇ ಟಿಕೇಟ್ ತೆಗೆದುಕೊಂಡು ಹೋಗಿದ್ದಾಳಂತೆ. ಮೊದಲಿನಿಂದಲೂ ಎರಡೂ ಮನೆಯವರಿಗೂ ಸಂಬಂಧಗಳಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲವೆಂದೂ ಯಾವಾಗಲೂ ಗಂಡ-ಹೆಂಡತಿಯರ ನಡುವೆ ಜಗಳವಿತ್ತೆಂದೂ, ಎಷ್ಟೋ ಸಾರಿ ಜಗಳ ತಾರಕಕ್ಕೇರಿ ವಿಚ್ಛೇದನದ ಮಾತಿನವರೆಗೂ ಹೋಗಿದೆ ಎಂದು ತಿಳಿದು ನನಗಂತೂ ಏನೂ ಹೇಳಲು ತೋಚದಂತಾಯಿತು.

***

ಇಂದಿನ ಯುಗದಲ್ಲಿ ನಮ್ಮ ನಮ್ಮ ನಡುವಿನ ಕಮ್ಮ್ಯುನಿಕೇಷನ್‌ಗೆ ಆದ್ಯತೆ ಕೊಡುವ ಕಾಲ, ನಮ್ಮ ಅಂತರಾಳದ ಸಂವಹನಕ್ಕೆ ಬೇಕಾದ ಸೂತ್ರಗಳಿವೆ, ಉಪಕರಣಗಳಿವೆ. ಹೀಗೆಲ್ಲ ಇರುವಾಗಲೇ ನಾನು ಗಂಡ-ಹೆಂಡತಿ ನಡುವೆ ಆಗಿ ಹೋಗದ ಮಾತುಗಳನ್ನೋ ಅಥವಾ ಹೆಚ್ಚು ವಿಚ್ಛೇದನದ ವಿಷಯವನ್ನೋ ಅಲ್ಲಲ್ಲಿ ಸುದ್ಧಿ-ವಿಚಾರವಾಗಿ ಕೇಳೋದೇ ಹೆಚ್ಚು. ಅಂದರೆ ಹಿಂದಿನ ಕಾಲದವರು ಕಷ್ಟವೋ-ಸುಖವೋ ಹೊಂದಿಕೊಂಡಿರುತ್ತಿದ್ದರೋ ಅಥವಾ ಅವರ ರಾದ್ಧಾಂತಗಳು ಹೊರಗೆ ಬರುತ್ತಿರಲಿಲ್ಲವೋ, ಅಥವಾ ಇಂದಿನವರ ಸವಾಲಿಗೂ ಅಂದಿನವರ ಸವಾಲಿಗೂ ವ್ಯತ್ಯಾಸವಿದೆಯೋ, ಅಥವಾ ಇವೆಲ್ಲ ನಿಜವೋ ಎನ್ನುವ ಆಲೋಚನೆ ಸಹಜವಾಗೇ ಬರುತ್ತದೆ. ಅದೂ ಇತ್ತೀಚಿನ ಗಂಡ-ಹೆಂಡತಿ ಇಬ್ಬರೂ ದುಡಿದು ಬರುವ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಮಕ್ಕಳಿರಲಿ ಬಿಡಲಿ ಮನೆಯ ಹಿರಿಯ ಅಥವಾ ಯಜಮಾನರಾಗಿ ಅವರೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಂಸಾರ ರಥವನ್ನು ನಡೆಸುವ ಕಾಯಕವನ್ನು ಅನುಸರಿಸುತ್ತಿರುವಾಗ ಸಂಬಂಧಗಳ ಹೆಣಿಕೆಯಲ್ಲಿ ಒಂದು ಚೂರು ಊನವಾದರೂ ಸಂಸಾರ ರಥಕ್ಕೆ ಸಂಚಕಾರ ಬಂದಂತೆಯೇ ಎಂದು ಎಷ್ಟೋ ಸರತಿ ಅನ್ನಿಸಿದ್ದಿದೆ.

ನಾನೇನೂ ಹೇಳೋದಿಲ್ಲ, ಹೇಳೋದಕ್ಕೆ ಉಳಿದಿರೋಲ್ಲ ಬಿಡಿ. ಈ ಸಂಸಾರ ತಾಪತ್ರಯದ ಒಡಕಲಿನ ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಆಗಬೇಕಾದ್ದದೆಲ್ಲ ಆಗಿ ಹೋಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ನನಗೆ ಪರಿಚಿತರೇ ಆದ ಸಂದರ್ಭಗಳಲ್ಲಿ ನಾವು ಯಾರೊಬ್ಬರ ಪರವನ್ನು ವಹಿಸಿ ಮಾತನಾಡುವುದು ತಪ್ಪಾದೀತು - ಬೆಂಕಿ ಇಲ್ಲದೇ ಹೊಗೆ ಬಾರದು ಎನ್ನುವಂತೆ ಏನೋ ಕ್ಷುಲ್ಲಕ ಕಾರಣ ಇದ್ದು ಅದು ದೊಡ್ಡ ಹೆಮ್ಮರವಾಗಿ ಬೆಳೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

***

ಇಂದಿನ ಗಂಡ-ಹೆಂಡತಿ ಸಂಬಂಧವೆಂದರೆ ಸಾವಿರದ ಒಂಭೈನೂರ ಐವತ್ತರ ಸಮಯದ ಸಂಬಂಧಗಳ ಹಾಗೆ ಇರಬೇಕಾಗಿಲ್ಲ. ಗಂಡ ಉಂಡಾದ ನಂತರವೇ ಹೆಂಡತಿ ಊಟ ಮಾಡುವುದು ಎಂಬ ಕಾನೂನನ್ನು ತಲೆ ಸರಿ ಇರುವ ಯಾರೂ ಪಾಲಿಸಿಕೊಂಡು ಹೋಗಲಾರರು. ಆದರೆ ಗಂಡ-ಹೆಂಡತಿಯ ನಡುವೆ ವ್ಯತ್ಯಾಸವಿದ್ದಿರಲೇ ಬೇಕು, ಹಾಗಿದ್ದಾಗಲೇ ಚೆನ್ನು, ಆ ವ್ಯತ್ಯಾಸವನ್ನು ಆ ಕುಟುಂಬದ ಏಳಿಗೆಗೆ ಬಳಸದೇ ಅದನ್ನು ವಾದದ ಬೆಂಕಿಗೆ ಇಂಬುಕೊಡುವ ತುಪ್ಪವನ್ನಾಗಿ ಸುರಿದು ಮಾತಿಗೆ ಮಾತು ಬೆಳೆಸಿ ಕೋರ್ಟು ಕಛೇರಿ ಹತ್ತುವುದು ಆಯಾ ವ್ಯಕ್ತಿಯ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣಿಸಿದರೂ ಇಡೀ ಕುಟುಂಬದ ಹಂದರಕ್ಕೆ ಅದರಿಂದ ಸಂಚಕಾರ ಬರುತ್ತದೆ. ಭಾರತದಲ್ಲೂ ಸಹ ಗಂಡ-ಹೆಂಡತಿ ಅಮೇರಿಕನ್ ಶೈಲಿಯಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಕಷ್ಟಡಿಗೆ ತೆಗೆದುಕೊಂಡು ಸಾಕುತ್ತಾರೆ ಎನ್ನುವುದನ್ನು ಕೇಳಿದ ಮೇಲೆ ಎಲ್ಲೋ ನಮ್ಮ ಸಂಸ್ಕೃತಿಗೆ ವಿದೇಶಿ ಶಿಫಾರಸ್ಸು ಹೆಚ್ಚಾಗಿಯೇ ಸಿಕ್ಕಿದೆಯೆಂದು ಅರ್ಥವಾಯಿತು. ಮೊದಲೆಲ್ಲಾ ಹೇಗಿತ್ತೋ ಗೊತ್ತಿಲ್ಲ, ಆದರೆ ನಾನು ಭಾರತದಲ್ಲಿ ಮಕ್ಕಳನ್ನು ಕಷ್ಟಡಿಗೆ ತೆಗೆದುಕೊಂಡು ಸಾಕುವುದನ್ನು ಕೇಳಿದ್ದು ಇಂದೇ ಮೊದಲು.

ಯಾವುದು ಎಲ್ಲಿ ತಪ್ಪಿತೋ ಎಂದು ಸೋಜಿಗ ಪಡುವ ಸಮಯವೋ, ಆದದ್ದಾಗಲಿ ಮುಂದಿನದು ಮುಖ್ಯ ಎನ್ನುವ ಧೋರಣೆಯನ್ನು ಬಿಗಿದಪ್ಪುವ ನಿಲುವೋ, ಈ ಸಂಬಂಧಗಳ ಗೊಂದಲವೇ ಬೇಡ ಎನ್ನುವ ಹಣಾಹಣಿಯೋ ಮತ್ತೊಂದೋ ತಪ್ಪಿದ್ದಲ್ಲ. ಅದು ಬದುಕು, ಅದೇ ಅದರ ನಿಯಮ ಹಾಗೋ ಅದರಲ್ಲಿರುವ ಸೂಕ್ಷ್ಮತೆಯ ಒಂದಲ್ಲ ಒಂದು ರೀತಿಯಲ್ಲಿ ನಾವು ಯೋಚಿಸುವುದು ನಮಗೆ ಅಂಟಿದ ಕಾಯಕ ಎಂದರೆ ತಪ್ಪೇನಿಲ್ಲ.

Sunday, April 13, 2008

ಇಂದಿನದು ಇಂದಿರಲಿ

ಎಲ್ಲರೂ ಇಲ್ಲಿ ಬೇಸಿಗೆ ಯಾವಾಗ ಬರುತ್ತೋ ಎಂದು ಕುತೂಹಲಿತರಾಗಿ ಕಾದುಕೊಂಡು ಕುಳಿತಿರುವುದರ ಬಗ್ಗೆ ಯೋಚಿಸುತ್ತಿರುವಾಗ ನನಗನ್ನಿಸಿದ್ದು ಹೀಗೆ: ಡಿಸೆಂಬರ್ ನಿಂದ ಜೂನ್ ವರೆಗೆ ನಿಧಾನವಾಗಿ ದಿನದಲ್ಲಿ ಬೆಳಕು ಹೆಚ್ಚಾಗುತ್ತಾ ಹೋಗಿ, ಜೂನ್‌ನಿಂದ ಮತ್ತೆ ಕತ್ತಲಿನ ಆರ್ಭಟ ಹೆಚ್ಚಾಗುವುದು ಇಲ್ಲಿನ ಋತುಮಾನ. ಮಾರ್ಚ್ ಹಾಗೂ ಸೆಪ್ಟೆಂಬರ್ ನಡುವೆ ಇರುವ ಎಲ್ಲ ದಿನಗಳನ್ನು ಬೇಸಿಗೆಯೆಂದೇ ಏಕೆ ಸ್ವೀಕರಿಸಬಾರದು? ಬೇಸಿಗೆ ಬೆಳಕು ಜೂನ್ ವರೆಗೆ ಹೆಚ್ಚಾಗಿ ಮುಂದೆ ಸೆಪ್ಟೆಂಬರ್ ನಲ್ಲಿ ಎಲೆಗಳು ಉದುರಿ ನಿಧಾನವಾಗಿ ಛಳಿ ಹಿಡಿದುಕೊಳ್ಳುವಲ್ಲಿಯವರೆಗೆ ಎಲ್ಲಿಯವರೆಗೆ ಹೊರಗಿನ ಉಷ್ಣತೆ ಸಹಿಸಿಕೊಳ್ಳಬಹುದೋ ಅಲ್ಲಿಯವರೆಗೆ ಬೇಸಿಗೆಯನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ಇಲ್ಲಿನ ಕಾರ್ಟೂನ್ ಶೋ‌ಗಳಿಂದ ಹಿಡಿದು ನಾನು ನೋಡಿದ ಬೇಕಾದಷ್ಟು ಜನರವರೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಉಡುಪುಗಳನ್ನು ಬದಲಾಯಿಸುವವರೆ. ನಮ್ಮ ದಕ್ಷಿಣ ಭಾರತದಲ್ಲಿ ವರ್ಷದುದ್ದಕ್ಕೂ ಒಂದೇ ವೇಷ-ಭೂಷಣ ನಡೆದೀತು ಎನ್ನುವಂತಲ್ಲ. ಅಲ್ಲದೇ, ಗೋಲ್ಫ್ ಆಡುವುದಕ್ಕೆ ಹೋಗುವುದರಿಂದ ಹಿಡಿದು ಫಿಶಿಂಗ್ ಹೋಗುವಲ್ಲಿಯವರೆಗೆ, ಆಫೀಸಿಗೆ ಹೋಗುವುದರಿಂದ ಹಿಡಿದು, ಟೆನ್ನಿಸ್ ಆಡುವಲ್ಲಿಯವರೆಗೆ, ಛಳಿಗೆ-ಬಿಸಿಲಿಗೆ ಥರಾವರಿ ವೇಶಗಳು ಅವುಗಳದ್ದೇ ಆದ ಬಣ್ಣ-ವಿನ್ಯಾಸಗಳಲ್ಲಿ. ನಮ್ಮ ಉತ್ತರ ಭಾರತದ ಜನರಲ್ಲಿ ಸ್ವಲ್ಪ ಈ ರೀತಿಯ ಆದ್ಯತೆ ಇರಬಹುದು, ಛಳಿ ಇರಲಿ ಇಲ್ಲದಿರಲಿ ಆ ಒಂದು ಸೀಜನ್ ಬಂದಿತೆಂದರೆ ಕೊನೇ ಪಕ್ಷ ಒಂದು ಸ್ವೆಟರ್ ಇಲ್ಲದೆ ಜನರು ಹೊರಗೆ ಕಾಲಿಡೋದೇ ಇಲ್ಲವೇನೋ.

***

’ರಿಟೈರ್ಡ್ ಆದ ಮೇಲೆ ಬದುಕೇನಿದೆ, ಈಗ ಇದ್ದು ಬದುಕೋದೇ ಸೊಗಸು. ಮುಂದೇನಾಗುತ್ತೋ ಎಂದು ಯಾರಿಗೆ ಗೊತ್ತು?’ ಎಂದು ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಈ ಅಣಿಮುತ್ತುಗಳು ಉದುರಿದವು. ನನ್ನ ಜೊತೆಯಲ್ಲಿ ಕಾಫಿ ಕುಡಿಯೋದಕ್ಕೆ ಬಂದ ಮತ್ತಿಬ್ಬರು ತಮ್ಮ ವೃದ್ಧ ತಂದೆ-ತಾಯಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಒಂದು ರೀತಿಯಲ್ಲಿ ಕಾರಣ ಎಂದು ಹೇಳಿದರೂ ಮಧ್ಯಾಹ್ನ ನಾಲ್ಕು ಘಂಟೆಯ ಮೇಲೆ ಹೊಟ್ಟೆಯೊಳಗೆ ಇಳಿಯುತ್ತಿದ್ದ ಗರಮ್ ಕಾಫಿಗೆ ನಾನು ಕೃತಜ್ಞತೆಯನ್ನು ಹೇಳಲೇಬೇಕು. ಪ್ರತೀ ಸಾರಿ ಮಧ್ಯಾಹ್ನದ ಕಾಫಿಯ ನಂತರ ಮನಸ್ಸು ಅದರದ್ದೇ ಒಂದು ತತ್ವವನ್ನು ಹೊಕ್ಕಿಕೊಂಡು ಅದರ ನೆಲೆಯಲ್ಲಿ ಹೊರಗಿನದನ್ನು ನೋಡೋದು ಸಹಜವೇ ನನಗೆ.

ನನ್ನ ಮಾತುಗಳು ಜೊತೆಗಿದ್ದವರಿಗೆ ಸ್ವಲ್ಪ ಆಶ್ಚರ್ಯವನ್ನು ಮೂಡಿಸಿದರೂ ಅವರು ನನ್ನ ತರ್ಕವನ್ನು ಒಪ್ಪಿಕೊಂಡ ಹಾಗಿತ್ತು, ಅದರ ವಿರುದ್ಧವಾಗಿ ಏನನ್ನೂ ಹೇಳದಿದ್ದುದನ್ನು ನೋಡಿ ನಾನು ಹಾಗಂದುಕೊಳ್ಳಬೇಕಾಯ್ತು. ಏನಿರಬಹುದು, ಈ ನಿವೃತ್ತ ಜೀವನದ ಮರ್ಮ? ಎಂದು ಮನಸ್ಸು ತನ್ನದೇ ಯಾವುದೋ ಒಂದು ಸಬ್ ರುಟೀನ್‌ನಲ್ಲಿ ಕಳೆದುಕೊಳ್ಳತೊಡಗಿತು.

ಭಾರತದಲ್ಲಿದ್ದೋರು ತಮ್ಮ ಮಕ್ಕಳ ಮದುವೆ ಯೋಗಕ್ಷೇಮಕ್ಕೆ ಒಂದಿಷ್ಟು ದುಡ್ಡು-ಕಾಸು ಉಳಿಸಿಕೊಂಡಿರುತ್ತಾರೆ. ಸರಿಯಾದ ಆಹಾರ, ದಿನಚರಿ ಇಲ್ಲದ ಶರೀರಗಳು ಕುಬ್ಜವಾಗುವುದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಬೊಜ್ಜು ಕಟ್ಟಿಕೊಳ್ಳತೊಡಗುತ್ತವೆ. ತಲೆಯ ಕೂದಲು ನೆರೆತೋ ಅಥವಾ ಉದುರಿಹೋಗಿ, ಹಲ್ಲುಗಳು ಸಂದುಗಳಲ್ಲಿ ಜಾಗ ಕಾಣಿಸಿಕೊಂಡು, ಮುಖದ ಮೇಲೆ ನೆರಿಗೆಗಳು ಹುಟ್ಟಿ, ಮೂಗಿನ ಮೇಲೆ ಕನ್ನಡಕ ಕುಳಿತು, ಆಗಾಗ್ಗೆ ’ಒಂದು ಕಾಲದಲ್ಲಿ ಹಾಗಿತ್ತು...’ ಎನ್ನುವ ವಾಕ್ಯಗಳು ಸಹಜವಾಗಿ ಹೋಗುವುದು ನಿವೃತ್ತ ಬದುಕಿನ ಲಕ್ಷಣವಾಗಿದ್ದಿರಬಹುದು. ಅದೇ ಭಾರತೀಯರು ವಿದೇಶಗಳಲ್ಲಿದ್ದರೂ ಈ ವಿವರಣೆಯನ್ನು ಬಿಟ್ಟು ಹೆಚ್ಚು ಬದಲಾದಂತೆ ಕಾಣಿಸಿಕೊಂಡಿಲ್ಲದಿರುವುದು ನನ್ನ ಕಲ್ಪನೆ ಅಲ್ಲವಷ್ಟೇ.

ನನಗೆ ಇಲ್ಲಿನ ಸಾಲ ಕೂಪದಲ್ಲಿ ಸೇರಿಕೊಳ್ಳುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ ಇಲ್ಲಿನ ಜನರ ಪ್ರಾಯೋಗಿಕತೆಗೆ ತಲೆಬಾಗಲೇ ಬೇಕಾಗುತ್ತದೆ. ನೀವು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಬಾಡಿಗೆ ಮನೆಯಲ್ಲಿದ್ದು ಎಲ್ಲ ಸಂಕಷ್ಟಗಳ ನಡುವೆ ಹಣವನ್ನು ಕೂಡಿಟ್ಟು, ಬೆಳೆಸಿ ಮುಂದೆ ನಿವೃತ್ತರಾಗುವ ಹೊತ್ತಿಗೆ ಮನೆ ಕಟ್ಟಿಸಿಕೊಂಡು ಹಾಯಾಗಿ ಇರುವ ಕನಸು ಅಥವಾ ಆಲೋಚನೆ ಹೇಗಿದೆ? ಅದರ ಜೊತೆಗೆ ಮೊದಲಿನಿಂದಲೇ ನೀವು ನಿಮಗೆ ಬೇಕಾದ ಮನೆಯನ್ನು ಸಾಲದ ಮುಖೇನ ತೆಗೆದುಕೊಂಡು ಅದನ್ನು ಕಂತುಗಳಲ್ಲಿ ಬಡ್ಡಿ-ಅಸಲನ್ನಾಗಿ ಹಲವಾರು ವರ್ಷಗಳು ತೀರಿಸುತ್ತಾ ಹೋಗುವುದು ಹೇಗೆ? ಸಾಲ ಎಲ್ಲರಿಗೂ ಇದೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು ನಮ್ಮಂಥ ಹುಲುಮಾನವರವರೆಗೆ, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಮುಂದುವರೆದೆ ದೇಶಗಳವರೆಗೆ. ನಮ್ಮ ಅಗತ್ಯಗಳಿಗೋಸ್ಕರ ಮುಂದಾಲೋಚನೆಯಿಂದ ಸಾಲ ಮಾಡುವುದು ತಪ್ಪಾದರೂ ಹೇಗೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಈಗಾಗಲೇ ಆಲೋಚನೆಗಳು ಬೆಳೆದುಕೊಂಡಿವೆ, ಊಹೂ ಪ್ರಯೋಜನವಿಲ್ಲ - ನಿಮಗೆ ಬೇಕೋ ಬೇಡವೋ ಸಾಲದೊಳಗೆ ನೀವಿದ್ದೀರಿ, ನಿಮ್ಮೊಳಗೆ ಸಾಲವಿದೆ.

***

ನಾಳಿನದರಲ್ಲಿ ಏನಿದೆ ಏನಿಲ್ಲವೋ ಯಾರೂ ಗ್ಯಾರಂಟಿ ಕೊಡೋದಿಲ್ಲ. ಅದಕ್ಕೇ ನಮ್ಮ ಹಿರಿಯರು "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ" ಎಂದಿದ್ದು. ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು? ನಿನ್ನೆ ನಿನ್ನೆಯೇ ಆಗಿಕೊಂಡಿದ್ದರೂ ಇಂದು ನಾಳೆಯ ಸೇರುವುದರೊಳಗೆ ಆ ಇಂದನ್ನು ಇಂದೇ ಅನುಭವಿಸುವ ಮನಸ್ಥಿತಿ ನಮಗೇಕಿಲ್ಲ? ಅಷ್ಟೂ ಮಾಡಿ ನಾಳೆಯ ನಾಳೆಗಳು ಹೀಗೇ ಇರುತ್ತವೆ ಎಂದು ಯಾರೂ ಬರೆದಂತೂ ಕೊಟ್ಟಿಲ್ಲ, ಎಂತಹ ಅತಿರಥ ಮಹಾರಥರಿಗೂ ನಾಳೆಯ ಪಾಡು ಸಂಪೂರ್ಣವಾಗಿ ತಿಳಿದಿಲ್ಲ ಹಾಗಿರುವಾಗ ಎಲ್ಲವೂ ಭವಿಷ್ಯಮಯವಾಗೇ ಏಕಿರಬೇಕು? ಇಂದಿನ ದಿನವನ್ನು ’ಏನೋ ಒಂದು ಮಾಡಿ ತಿಂದರಾಯಿತು...’ ಎನ್ನುವ ಅಸಡ್ಡೆಯ ಮನೋಭಾವನೆಯಿಂದೇಕೆ ನೋಡಬೇಕು ನಾಳೆ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳೂತ್ತವೆ ಎನ್ನುವ ಗ್ಯಾರಂಟಿ ಎನೂ ಇಲ್ಲದಿರುವಾಗ?

Sunday, April 06, 2008

ಬೇವು-ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!

ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?

***

ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.

ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.

***

ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.

ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ಹೊಸ ವರ್ಷದ ಶುಭಾಶಯಗಳು, ಸರ್ವಧಾರಿ ನಾಮ ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!

Wednesday, April 02, 2008

ಚಿಲ್ರೆ ಜನಾ ಸಾರ್...

ಇವರು ಕಟ್ಟಿಕೊಂಡ ಪ್ರಾಸೆಸ್ಸುಗಳೇ ಇವರನ್ನ ಕೊನೆಗೆ ಕಟ್ಟಿಕೊಳ್ಳೋದು ಅಂತ ಅನ್ನಿಸಿದ್ದು, ಕೇವಲ ಎರಡು ಸೆಂಟುಗಳ ಸಲುವಾಗಿ ಇಪ್ಪತ್ತು ಡಾಲರ್ ಚಿಲ್ಲರೆ ಮಾಡಿಸಬೇಕಾದ ಪ್ರಸಂಗ ಒದಗಿ ಬಂದಾಗ. ನನ್ನ ಹತ್ತಿರ ಇದ್ದ ಡಾಲರ್ ಬಿಲ್ ಒಂದರಲ್ಲಿ ನಾನು ಏನನ್ನೋ ಕೊಂಡುಕೊಳ್ಳುತ್ತೇನೆ ಎಂದು ಅಂಗಡಿಯನ್ನು ಹೊಕ್ಕ ನನಗೆ ಬೇಕಾದ ವಸ್ತು ಒಂದು ಡಾಲರ್ ಒಳಗಡೆ ಇದ್ದರೂ ಅದಕ್ಕೆ ಏಳು ಪ್ರತಿಶತ ಟ್ಯಾಕ್ಸ್ ಸೇರಿಸಿ ಒಟ್ಟು ಬಿಲ್ ಡಾಲರಿನ ಮೇಲೆ ಎರಡು ಸೆಂಟ್‌ಗಳಾದಾಗ ನನ್ನ ಬಳಿ ಇದ್ದ ಹಣಕಾಸಿನ ಸಾಧನ ಸಾಮಗ್ರಿಗಳು ಒಮ್ಮೆ ಗರಬಡಿದು ಹೋಗಿದ್ದವು: ಈ ಕಡೆ ಡೆಬಿಟ್, ಕ್ರೆಡಿಟ್ ಕಾರ್ಡ್ ಉಪಯೋಗಿಸಲಾರದ ದೀನತೆ, ಆ ಕಡೆ ಇಪ್ಪತ್ತ್ ಡಾಲರುಗಳನ್ನು ಎರಡು ಸೆಂಟಿನ ಸಲುವಾಗಿ ಮುರಿಸಲು ಹಿಂಜರಿದ ಕೊಸರಾಟ ಜೊತೆಗೆ ಅಂಗಡಿಯ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲೇ ಹುಟ್ಟಿ ಬೆಳೆದವು ಎನ್ನುವಂತೆ ಆಡುವ ಒಂದು ಸೆಂಟನ್ನು ಬಿಟ್ಟೂ ಕೆಲಸ ಮಾಡಲಾರೆ ಎನ್ನುವ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಪ್ರಾಸೆಸ್ಸುಗಳು.

ಈ ಒಂದು ಅಥವಾ ಎರಡು ಸೆಂಟುಗಳ ಹಣೆಬರಹವೇ ಇಷ್ಟು - ದಾರಿಯಲ್ಲಿ ಬಿದ್ದರೂ ಯಾರೂ ಅವನ್ನು ಮೂಸಿ ನೋಡದಂಥವುಗಳು, ಅವುಗಳನ್ನು ಉತ್ಪಾದಿಸುವುದರ ಒಟ್ಟು ಮೊತ್ತ ಅವುಗಳ ಮುಖಬೆಲೆಗಿಂತ ಹೆಚ್ಚಿರುವಂತಹವು. ನಮ್ಮ ಕೆಫೆಟೇರಿಯಾ ಮೊದಲಾದ ಸ್ಥಳಗಳಲ್ಲಿ ಸೇಲ್ಸ್ ರಿಜಿಸ್ಟರ್ ಪಕ್ಕದಲ್ಲಿ ಕೆಲವರು ಚೇಂಜ್ ತೆಗೆದುಕೊಳ್ಳದೇ ಬಿಟ್ಟು ಹೋದ ಕಾಪರ್ ಕಾಯಿನ್ನುಗಳನ್ನು ಇಟ್ಟಿರುತ್ತಾರೆ, ನನ್ನಂತಹ ಕಂಜೂಸು ಮನುಷ್ಯರಿಗೆ ಉಪಯೋಗಕ್ಕೆ ಬರಲಿ ಎಂದು! ನನ್ನಂತಹವರು ಎಂದರೆ, ಅನೆಯ ಹಾಗಿನ ಡಾಲರನ್ನು ಹೇಗೆ ಬೇಕೆಂದರಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಗೊಟ್ಟು, ಒಂದೆರಡು ಸೆಂಟುಗಳ ಬಾಲವನ್ನು ಹಿಡಿದು ಎಳೆಯುವಂತಹವರು - ಹೆಚ್ಚೂ ಕಡಿಮೆ ಇನ್ನೊಬ್ಬರ ಒಂದೆರಡು ಸೆಂಟುಗಳನ್ನು ಧಾರಾಳವಾಗಿ ಬಳಸಿದ್ದಿದೆಯೇ ಹೊರತು, ಊಹ್ಞೂ, ನಾವಂತೂ ಕೈ ಎತ್ತಿಯೂ ಇನ್ನೊಬ್ಬರಿಗೆ ಕೊಟ್ಟವರಲ್ಲ. ನಮ್ಮಂತಹವರಿಗೆ ಸಿಂಹಸ್ವಪ್ನವಾಗಿಯೆಂದೇ ಈ ಕಟ್ಟು ನಿಟ್ಟಿನ ಚಿಲ್ಲರೆ ಎಣಿಸಿ ಲೆಕ್ಕ ಇಟ್ಟುಕೊಳ್ಳುವ ಟರ್ಮಿನಲ್ಲುಗಳು, ಅವುಗಳನ್ನು ನಾನು ಶಪಿಸೋದೇ ಹೆಚ್ಚು.

ನೀವು ತರಕಾರಿ ತೆಗೆದುಕೊಳ್ಳೋದಕ್ಕೆ ಯಾವತ್ತಾದರೂ ಫಾರ್ಮರ್ಸ್ ಮಾರ್ಕೆಟ್ಟಿಗೆ ಹೋಗಿ ನೋಡಿ, ಅಲ್ಲಿನ ತೂಕಗಳಾಗಲೀ, ಅಳತೆಗಳಾಗಲೀ ಮೇಲಾಗಿ ಚಿಲ್ಲರೆ ಪ್ರಾಸೆಸ್ಸುಗಳಾಗಲೀ ಎಲ್ಲವೂ ಧಾರಾಳವಾಗಿರುತ್ತವೆ. ನಮ್ಮೂರಿನ ಸಂತೆಯಲ್ಲಿ ಯಾವನಾದರೂ ಬೀನ್ಸು-ಬದನೇಕಾಯಿಗಳನ್ನು ಕೆಜಿ ಕಲ್ಲಿಗೆ ನಿಖರವಾಗಿ ತೂಗಿದನೆಂದರೆ - ’ಏನೂ, ಬಂಗಾರ ತೂಗ್‌ದಂಗ್ ತೂಗ್ತೀಯಲಾ’ ಎಂದು ಯಾರಾದರೂ ಬೈದಿರೋದು ನಿಜ. ಆದರೆ, ಈ ಪಾಯಿಂಟ್ ಆಫ್ ಸೇಲ್ಸ್ ಟರ್ಮಿನಲ್ಲುಗಳಿಗೆ ಧಾರಾಳತೆಯೆನ್ನುವುದನ್ನು ಕಲಿಸಿದವರು ಯಾರು? ಒಂದು ಪೌಂಡಿಗೆ ಇಂತಿಷ್ಟು ಬೆಲೆ ಎಂದು ಮೊದಲೇ ಪ್ರೊಗ್ರಾಮ್ ಮಾಡಿಸಿಕೊಂಡಿರುವ ಇವುಗಳು, ನೀವು ಆಯ್ದುಕೊಂಡ ಪ್ರತಿಯೊಂದು ವಸ್ತುವಿನ ಅಣು-ಅಣುವಿಗೂ ಆ ರೇಟ್ ಅನ್ನು ಅನ್ವಯಿಸಿ, ಅದರ ಒಟ್ಟು ಮೊತ್ತವನ್ನು ನಿಮ್ಮ ರಶೀದಿಗೆ ಸೇರಿಸದಿದ್ದರೆ ಅವುಗಳ ಜನ್ಮವೇ ಪಾವನವಾಗದು. ಇಂತಹ ಸಂದರ್ಭಗಳಲ್ಲೇ ನನಗನ್ನಿಸೋದು, ಧಾರಾಳತೆಗೂ-ಬಡತನಕ್ಕೂ ಅನ್ಯೋನ್ಯತೆ ಇದೆ ಎಂದು. ಹೆಚ್ಚು ಹೆಚ್ಚು ಸಿರಿವಂತರ ಜೊತೆ ವ್ಯವಹಾರ ಮಾಡಿ ನೋಡಿ ಅನುಭವಿಸಿದವರಿಗೆ ಗೊತ್ತು, ಅಲ್ಲಿ ಪ್ರತಿಯೊಂದು ಪೈಸೆಗೂ ಅದರ "ವ್ಯಾಲ್ಯೂ" ಇದೆ, ಅದೇ ಬಡತನದಲ್ಲಿ ಇಂದಿನ ನೂರು ರುಪಾಯಿ ಇಂದಿದೆ, ಅದು ಒಂದಲ್ಲ ಒಂದು ರೀತಿಯಲ್ಲಿ ಕೆಲಸಕ್ಕೆ ಬಂದರಾಯಿತು, ಅದರ ಹಿಂದು-ಮುಂದಿನ ಕರ್ಮ-ಮರ್ಮವನ್ನು ನೆನೆಸಿಕೊರಗುವ ಮನಸ್ಥಿತಿಯೇ ಅಲ್ಲಿಲ್ಲ!

ಇಪ್ಪತ್ತು ಡಾಲರನ್ನು ಮುರಿಸಲಿ ಬಿಡಲಿ, ನಾನು ತೆರಬೇಕಾದರ್ ಎರಡು ಸೆಂಟ್ ಅನ್ನು ಅಂಗಡಿಯವರು ಬಿಡುವಂತಿದ್ದರೆ...ಎಂದು ಒಮ್ಮೆ ಅನ್ನಿಸಿದ್ದು ನಿಜ. ನಮ್ಮೂರಿನ ಶೆಟ್ಟರ ಕಿರಾಣಿ ಮಳಿಗೆಗಳಲ್ಲಿ ಹಾಗೆ ಹಿಂದೆ ಮಾಡಿದ ಅನುಭವ ನನ್ನ ಈ ಕಸಿವಿಸಿಗೆ ಇಂಬು ನೀಡಿರಬಹುದು, ಅಥವಾ ’ಏನು ಎರಡು ಸೆಂಟ್ ತಾನೇ...’ ಎನ್ನುವ ಧಾರಾಳ ಧೋರಣೆ (ನನ್ನ ಪರವಾಗಿ) ಕೆಲಸಮಾಡಿರಬಹುದು. ಈ ಆಲೋಚನೆಗಳ ಒಟ್ಟಿಗೇ, ಹೀಗೇ ನನ್ನಂತಹವರಿಗೆ ಎರಡೆರಡು ಸೆಂಟುಗಳನ್ನು ಬಿಡುತ್ತಾ ಬಂದರೆ ಅಂಗಡಿಯವನ ಕಥೆ ಏನಾದೀತೂ ಎನ್ನುವ ಕೊರಗೊಂದು ಹುಟ್ಟುತ್ತದೆ, ಅದರ ಜೊತೆಗೇ ಜನರೇಕೆ ಸ್ವಲ್ಪ ಉದಾರಿಗಳಾಗಬಾರದು ಎನ್ನುವ ಧಾರಾಳತೆಯೂ ಒದಗಿ ಬರುತ್ತದೆ. ಲೆಕ್ಕ ಅನ್ನೋದು ಮನುಷ್ಯನ ಸೃಷ್ಟಿ, ಧಾರಾಳತೆ ಉದಾರತೆ ಮುಂತಾದವುಗಳು ಭಾವನೆಗಳು ಅವು ಲೆಕ್ಕಕ್ಕೆ ಸಿಕ್ಕುವವಲ್ಲ ಹೀಗಿರುವಾಗ ನಮ್ಮೂರಿನ ಧಾರಾಳ ಆಲೋಚನೆ ಅನುಭವಗಳ ಸಂತೆಯಲ್ಲಿ ಈ ಶ್ರೀಮಂತರ ನಾಡಿನ ಯಂತ್ರಗಳು ತೋರುವ ನಿಖರತೆಯನ್ನು ನಾನು ಯಾವ ಮಟ್ಟದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಿ? ಬರೀ ನನ್ನೊಳಗಿನ ಉದಾರತೆಯನ್ನು ಎಲ್ಲರಿಗೂ ಸಮವೆಂದು ಹೊಸ ಸಾಮಾಜಿಕ ಚಳುವಳಿಯನ್ನು ಹುಟ್ಟು ಹಾಕಲೇ, ಅಥವಾ ಬಡವರೊಳಗಿನ ಲೆಕ್ಕಕ್ಕೆ ಸಿಗದ ಅನಂತವಾದ ಮೌಲ್ಯವನ್ನು ಎಲ್ಲರಲ್ಲೂ ಇರಲಿ ಎಂದು ಹಾರೈಸಲೇ.

ಏನೇ ಹೇಳಿ, ನನ್ನ ಅನಿಸಿಕೆಯ ಪ್ರಕಾರ ಭಿಕ್ಷುಕರಿಗೂ ಬಡವರ ಮನೆಯಲ್ಲೇ ಸುಭಿಕ್ಷವಾಗಿ ಸಿಕ್ಕೀತು, ಅದೇ ಶ್ರೀಮಂತರ ಮನೆಯ ಮುಂದೆ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಫಲಕವನ್ನು ದಾಟಿ, ಒಂದು ವೇಳೆ ಮನೆಯವರು ಪುರುಸೊತ್ತು ಮಾಡಿಕೊಂಡು ತಮ್ಮ ದೊಡ್ಡ ಮನೆಯಲ್ಲಿನ ಮುಂಬಾಗಿಲನ್ನು ತೆರೆದು ಭಿಕ್ಷುಕರನ್ನು ಗಮನಿಸುವ ಪ್ರಸಂಗ ಬಂದರೂ ಅದು ’ನಿನಗೇನಾಗಿದೆ ಧಾಡಿ ದುಡಿದು ತಿನ್ನಲಿಕ್ಕೆ?’ ಎನ್ನುವ ತತ್ವ ಪ್ರದಾನವಾದ ಬೈಗಳ ಕೆಲವೊಮ್ಮೆ ಸ್ವಲ್ಪ ಭಿಕ್ಷೆಯನ್ನೂ ಹೊತ್ತು ತಂದೀತು. ಏನ್ ಹೇಳ್ಲಿ, ಚಿಲ್ರೇ ಜನಾ ಸಾರ್, ಪ್ರತಿಯೊಂದಕ್ಕೂ ಯೋಚಿಸೋರು - ಅವರೇ ಬಡವರು; ಹೋಗಿದ್ದು ಹೋಗ್ಲಿ ಏನ್ ಬೇಕಾದ್ರಾಗ್ಲಿ ಅನ್ನೋರೇ ಶ್ರೀಮಂತರು, ಬುದ್ಧಿವಂತರು - ಯಾಕೆಂದ್ರೆ ನಿನ್ನೆ-ನಾಳೆಗಳ ಬಗ್ಗೆ ಯೋಚಿಸಿರೋ ಧಣಿಗಳು ಕಡಿದು ಕಟ್ಟಿಹಾಕಿರೋದು ಅಷ್ಟರಲ್ಲೇ ಇದೆ, ಏನಂತೀರಿ?