Friday, March 07, 2008

ವಿಭಕ್ತಿಯ ಬಗೆಗಿನ ಭಕ್ತಿ

ನಿಮಗೆ ಗೊತ್ತಿರಬೇಕಲ್ಲ?

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯ - ಇಂದ
ಚತುರ್ಥಿ - ಗೆ, ಇಗೆ, ಅಕ್ಕೆ
ಪಂಚಮಿ - ದೆಸೆಯಿಂದ
ಷಷ್ಠಿ - ಅ
ಸಂಬೋಧನೆ - ?


ಇತ್ಯಾದಿ...ಅವೇ ಸ್ವಾಮಿ, ವಿಭಕ್ತಿ-ಪ್ರತ್ಯಯಗಳು, ಥ್ಯಾಂಕ್ಸ್ ಟು ನಮ್ಮ ಕನ್ನಡಾ ಟೀಚರ್ಸ್...ಓಂ ಗುರುಭ್ಯೋ ನಮಃ...ಮೇಷ್ಟ್ರೇ ನಿಮಗೇ ಜೋಡಿಸ್ತೀನಿ...

ಯಾಕೆ ಇದರ ಬಗ್ಗೇ ಯೋಚಿಸ್ತಾ ಹೋದೆ ಅಂತಂದ್ರೆ, ಇತ್ತೀಚೆಗೆ ನಮ್ ಹತ್ತಿರದ ಸಂಬಂಧಿಕರ ಮಗಳೊಬ್ಬಳು, ಬೆಂಗ್ಳೂರು ಕನ್ನಡತಿ, ಅವಳ ಜೊತೆ ಮಾತನಾಡ್ತಾ ಇರಬೇಕಾದ್ರೆ ಥಟ್ಟನೆ ಅವಳು ನಮ್ಮ ಕನ್ನಡದ ವಿಭಕ್ತಿ ಪ್ರತ್ಯಯಗಳನ್ನೆಲ್ಲ ಹದಿಹರೆಯದ ಹುಡುಗ್ರು ಹೊಸ ಕಾರಿನಲ್ಲಿ ಸ್ಟಾಪ್ ಸೈನ್‌ಗಳನ್ನು ಎಗುರಿಸಿಕೊಂಡು ಹೋಗೋ ಹಾಗೆ ಹಾರಿಸುತ್ತಿದ್ದಳು. ಅವಳ ಬಳಕೆಯ ಪ್ರಕಾರ, ’ನಮ್ಮ ಅಪ್ಪ ಹತ್ರ ಅದು ಇದೆ, ಅಮ್ಮ ಕಾರು ಹಾಗಿತ್ತು, ತಮ್ಮ ಕೇಳಿ ಹೇಳ್ತೀನಿ’, ಇತ್ಯಾದಿ.

ನಾನು ಏನೂ ಹೇಳೋಕ್ ಹೋಗ್ಲಿಲ್ಲ, ಮತ್ತೇನಾದ್ರೂ ಅವಳು ಬೆಂಗ್ಳೂರು ಕನ್ನಡದಲ್ಲಿ ಬೈದ್ಲೂ ಅಂತಂದ್ರೆ? ಜೊತೆಗೆ ನಾನ್ ಕೇಳೋ ರ್ಯಾಪ್ ರೀತಿಯ ಇಂಗ್ಲೀಷೋ, ದೇವ್ರೇ ನನ್ನನ್ ಕಾಪಾಡ್‌ಬೇಕು. ನನ್ನ ಕಷ್ಟಾ ಏನೂ ಅಂತ ಹೇಳ್ಲೀ ಸ್ವಾಮೀ, ಇತ್ಲಾಗೆ ಈ ಕರಿಯರ (ಆಫ್ರಿಕನ್ ಅಮೇರಿಕನ್ನರ) ರ್ಯಾಪೂ ಅರ್ಥ ಆಗೋಲ್ಲ, ಆ ಕಡೆ ನಮ್ಮ್ ಕನ್ನಡಾ ಹಾಡ್‌ಗಳಲ್ಲಿ ಬರೋ ಇಂಗ್ಲೀಷ್ ಶಬ್ದ, ಸಾಲಿನ ಉಚ್ಛಾರಣೆಗಳೂ ಕೈಗೆ ಸಿಗೋಲ್ಲ!

ವಿಭಕ್ತಿ ವಿಷಯಕ್ಕೆ ಬರೋಣ - ನಮ್ಮ ಕನ್ನಡ ಬಹಳ ಸೊಗಸಾಗಿರೋದು ಇದ್ರಲ್ಲೇ ಅನ್ಸುತ್ತೆ. ನಾವು, ’ಅಪ್ಪನ, ಅಮ್ಮನ, ತಮ್ಮನ...’ ಅಂತೀವಿ, ಆದ್ರೆ ತಂಗಿ ವಿಷಯಕ್ಕೆ ಬಂದಾಗ ’ತಂಗಿಯ’ ಅಂತೀವಿ. (ಅಮ್ಮಂದಿರು, ಅಮ್ಮಗಳ ಬಗ್ಗೆ ಹಿಂದೊಮ್ಮೆ ಬರ್ದಿದ್ದೆ, ಅದು ಬೇರೆ ವಿಷಯ). ’ಅಪ್ಪನ ಹತ್ರ ಕೇಳಿ ನೋಡ್ತೀನಿ’ ಅನ್ನೋದು ಸರಿಯಾದ ಬಳಕೆ, ಅದನ್ನು ಬಿಟ್ಟು ಯಾರಾದ್ರೂ ’ಅಪ್ಪ ಹತ್ರ ಕೇಳ್ತೀನಿ’ ಅಂತಂದ್ರೆ ತಪರಾಕಿ ಹೊಡೀದೇ ಇರೋದಾದ್ರೂ ಹೇಗೆ? ’ತಂಗಿಯ’ ಅನ್ನೋ ಬದಲಿಗೆ ’ತಂಗೀ’ (ದೀರ್ಘ ಗಮನಿಸಿ) ಅನ್ನೋದು ಆಡು ಭಾಷೆಯಲ್ಲಿ ಬರುತ್ತೆ ಅನ್ನಬಹುದು. ಅದಕ್ಕೆ ತಕ್ಕಂತೆ, ’ಅಪ್ಪಾ’, ’ತಮ್ಮಾ’, ’ಅಮ್ಮಾ’ (ದೀರ್ಘ ಸ್ವರದ ಬಳಕೆಗಳು) ಅನ್ನೋದು ಎಷ್ಟರ ಮಟ್ಟಿಗೆ ಸರಿ?

ನಾವು ಇಂಗ್ಲೀಷೋ ಮತ್ತೊಂದು ಭಾಷೆಯನ್ನು ಕಲಿತಾದ ಮಾತ್ರಕ್ಕೆ ನಮ್ಮಲ್ಲಿರುವ ಕೆಲವೊಂದು ವಿಶೇಷವಾದ ಬಳಕೆಗಳನ್ನು ಬಿಡೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ. ನಾವು ಆಫೀಸಿನಲ್ಲಿ ಸುಮ್ಮನೇ ಲೋಕಾಭಿರಾಮವಾಗಿ ಹರಟುತ್ತಿದ್ದಾಗ ನಾನು ’co-brother' ಅನ್ನೋ ಪದವನ್ನು ಬಳಸಿದೆ, ಎಲ್ಲರೂ ’what is that?' ಅನ್ನೋ ಹಾಗೆ ನನ್ನ ಮುಖವನ್ನು ನೋಡಿದ್ರು, ನಾನು ’ನನ್ನ ಹೆಂಡತಿಯ ತಂಗಿಯ ಗಂಡ’ ಎಂದು ಉತ್ತರ ಕೊಟ್ಟೆ (ಷಡ್ಡುಕ, ಷಡ್ಕ, ಸಡ್ಕ ಅನ್ನೋ ಅರ್ಥದಲ್ಲಿ). ಮತ್ತೆ ಹೋಗಿ ಆನ್‌ಲೈನ್ ಡಿಕ್ಷನರಿಗಳನ್ನು ನೋಡಲಾಗಿ ’ಅದು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಬಳಸೋ ಇಂಗ್ಲೀಷಿನ ಪದ’ವೆಂಬುದಾಗಿ ತಿಳಿಯಿತು. ಹೌದು, ಎಲ್ಲರಿಗೂ ’brother-in-law' ಎಂದು ಕರೆದೋ ’sister-in-law' ಎಂದು ಸಂಬೋಧಿಸಿಯೋ ನಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಬಹುದು, ಆದರೆ ಷಡ್ಡುಕನೇ ಬೇರೆ, ಬಾವನೆಂಟನೇ ಬೇರೆ, ಸೋದರ ಮಾವನೇ ಬೇರೆ, ದೊಡ್ಡಪ್ಪ-ಚಿಕ್ಕಪ್ಪನೇ ಬೇರೆ, ಇವರೆನ್ನೆಲ್ಲ ಒಂದೋ ಎರಡೋ ಪದಗಳನ್ನು ಬಳಸಿ ತೂಗಲಾದೀತೆ? ಅದಕ್ಕೆ ಬೆಂಗ್ಳೂರಿನ ಕನ್ನಡಿಗರು ’my ಚಿಕ್ಕಪ್ಪಾ is doing this...' ಎಂದು ಕನ್ನಡವನ್ನು ಬಳಸಿದ್ರೆ ನನಗೆ ಖುಷಿ ಆಗುತ್ತೆ ಅಂತ್ಲೇ ನಾನು ಹೇಳೋದು! (ಕೊನೇಪಕ್ಷ ಅವರ ’uncle' ಯಾರು ಅಂತ ಗೊತ್ತಾಯ್ತಲ್ಲ, ಅದಕ್ಕೆ).

***

’ಏನ್ ಸಾರ್ ನಿಮ್ ರಾಮಾಯಣ? ನೀವೇನು ಕನ್ನಡ ಕೊಂಡ್‌ಕೊಂಡೋರ್ ಹಾಗ್ ಆಡ್ತೀರಲ್ಲ? ನಿಮ್ದೊಳ್ಳೇ ರಾಮ ಜನ್ಮ ಭೂಮೀ ಜನ ಹಿಂದೂ ಧರ್ಮವನ್ನು ಕೊಂಡು ಕೊಂಡೋರ ಹಾಗಿನ ಕಥೆ ಆಯ್ತು, ತೆಗೀರಿ ಮತ್ತೆ!’ ಅಂತ ನೀವು ನನಗೆ ತಮಾಷೆ ಮಾಡ್ತೀರಿ ಅಂತ ಗೊತ್ತು. ನಾನು ಯಾವ ವೇದಿಕೆಯನ್ನು ಸೇರ್ತಾ ಇಲ್ಲ, ಕಟ್ತಾ ಇಲ್ಲ, ಏನೋ ನನ್ ಕಣ್ಣಿಗೆ ಕಂಡಿದ್ದನ್ನ ಕಂಡ ಹಾಗೆ ಹೇಳ್ದೆ ಅಷ್ಟೇ.

ನೀವ್ ಬೆಂಗ್ಳೂರ್ ಕನ್ನಡಿಗರಾದ್ರೆ ಓದಿ ನಕ್ಕ್ ಬಿಡಿ, ಇಲ್ಲಾ ನನ್ನ ಹಾಗೆ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದೋರಾದ್ರೆ ಬೇಸ್ರ ಮಾಡ್ಕೋಳ್ ಬೇಡಿ, ಅದೇ ಬದ್ಕು ಅಂದ್ಕೊಂಡು ಸುಮ್ನಾಗಿ ಅಷ್ಟೇ!

ಅಂದ ಹಾಗೆ ನಮ್ಮನೇಲೂ ಒಬ್ರು ಬೆಂಗ್ಳೂರ್ ಕನ್ನಡಿಗರಿದ್ದಾರೆ, ಅವ್ರ ಬಗ್ಗೆ ಇನ್ನೊಮ್ಮೆ ಬರೆದ್ರಾಯ್ತು!

6 comments:

Anonymous said...

ಸರ,

ಕನ್ನಡ ವ್ಯಾಕರಣ ಬರದವರು ಈ ಸಮಾಸಗಳನ್ನ ಬಿಡಿಸ್ರಲ್ಲ...

ಪಂಚಾಂಗ, ಪಿಸ್ತೂಲ್, ಕೋಟ್ರಶೆಟ್ಟಿ, ಪಂಚಪಾತ್ರೆ

ಎಲ್ಲ ಉಡಾಳ್ (ಪೋಲಿ) ಶಬ್ದ ಅದಾವ್....ಕ್ಷಮಾ ಇರ್ಲಿ :)

-ಮಠ

ಸುಪ್ತದೀಪ್ತಿ suptadeepti said...

ರಾಮಾಯಣವೂ ಇಲ್ಲ, ಮಹಾಭಾರತವೂ ಇಲ್ಲ.

ಈಗಿನ ಕನ್ನಡದ ಮಕ್ಕಳು ಬಾಯಿ ತೆರೆದ್ರೆ... ಕಷ್ಟ, ಕಷ್ಟ. ಕನ್ನಡಾಂಬೆ ಬೆಂಗಳೂರಲ್ಲಿ ಇರೋದೇ ಹೌದಾದ್ರೆ, ಅವಳಿಗೆ ದೇವರೇ (ಭಾರತಾಂಬೆಯೂ ಅಲ್ಲ) ಗತಿ!!

Keshav.Kulkarni said...

ಸಂಬೋಧನ: ಏ, ಇರಾ, ಆ, ಈ
ಅಲ್ಲವೇ?

ಕೇಶವ

Satish said...

ಮಠ,
ನೀವು ಅಮೇರಿಕಕ್ಕೆ ಬಂದ್ರೂ ಇನ್ನೂ ’ಸಂಧಿ-ಗೊಂದಿ’ ನುಗ್ಗೋದ್ ಬಿಟ್ಟಿಲ್ಲಾ ಅಂತಾತು :-)
ನಿಮ್ ಉಡಾಳ್ ಶಬ್ದಗಳ ಸಮಾಸ ಬಿಡಿಸಿ ಒಂದ್ ಇ-ಮೇಲ್ ಬರೀರಿ ಶಿವಾ, ನಾವೂ ಒಂದಿಷ್ಟು ನಗತೀವಂತ.

ಜ್ಯೋತಿ,
ಈಗಿನ ಮಕ್ಕಳ ಕಥೆ ಕೇಳಿದ್ರೆ ಮೈ ನಡುಕ ಬರುತ್ತೆ, ಇನ್ನೊಂದು ಐವತ್ತು ವರ್ಷದಲ್ಲಿ ಅವರ ಭಾಷೆ ಹೇಗಿರುತ್ತೋ?!

ಕೇಶವ್,
ನೀವು ಹೇಳಿದ್ದು ಸರಿ, ನಿಮ್ಮ ಕನ್ನಡ ಮೇಷ್ಟ್ರಿಗೆ ಜೈ!

Chamaraj Savadi said...

ಸತೀಶ ಅವರೇ,

ಉತ್ತರ ಕರ್ನಾಟಕದ ಸಂಬೋಧನೆಗಳು ಇನ್ನೂ ಮಜಾ ಇರ್ತವೆ. ಅಪ್ಪನಿಗೆ ಅಣ್ಣ, ಅಣ್ಣನಿಗೂ ಅಣ್ಣ, ಚಿಕ್ಕಪ್ಪನಿಗೆ ಕಕ್ಕ, ಚಿಕ್ಕಮ್ಮನಿಗೆ ಕಾಕಿ, ಇನ್ನೊಬ್ರ ಹೆಂಡತಿಗೆ ನಿಮ್ಮಾಕಿ, ಇನ್ನೂ ಒಬ್ರು ಜೊತೇಲಿದ್ದರೆ ಅವರಾಕಿ, ಅಜ್ಜಿಗೆ ಅಮ್ಮ, ಅಮ್ಮನಿಗೆ ಅವ್ವ, ಚಿಕ್ಕಮ್ಮನಿಗೆ ಚಿಗವ್ವ, ಚಿಕ್ಕಪ್ಪನಿಗೆ ಚಿಗಪ್ಪ, ಅಜ್ಜಿಗೆ ಚಾಚಿ- ಹುಡುಕುತ್ತ ಹೋದರೆ ಕಳೆದೇ ಹೋಗುತ್ತೇವೆ.

ಆದರೂ ಅದೇ ಒಂಥರಾ ಮಜಾ. ಏಕೆಂದರೆ ಅಲ್ಲಿ ಕಲಬೆರಕೆ ಕಡಿಮೆ. ಪ್ರತಿಯೊಂದು ಶಬ್ದಕ್ಕು ಹಿನ್ನೆಲೆ ಇದೆ, ಅರ್ಥ ಇದೆ. ಆದರೆ, ಮನೆ ಭಾಷೆ, ಪರಿಸರ ಭಾಷೆ ಬೇರೆ ಬೇರೆ ಇರುವ ವಾತಾವರಣದಲ್ಲಿ ಬೆಳೆದವರು ಸಾಮಾನ್ಯವಾಗಿ ಎಡಬಿಡಂಗಿ ಭಾಷೆ ಮಾತನಾಡುತ್ತಾರೆ. ಅವರಿಗೆ ಸ್ಪಷ್ಟವಾದ ಭಾಷೆ ಗೊತ್ತಿರುವುದಿಲ್ಲ.

ಉತ್ತಮ ಚರ್ಚೆಯನ್ನು ತಮಾಷೆಯಾಗಿ ಪ್ರಾರಂಭಿಸಿದ್ದೀರಿ. ಮುಂದುವರೆಸಿ.

- ಚಾಮರಾಜ ಸವಡಿ
http://chamarajsavadi.blogspot.com

Satish said...

ಚಾಮರಾಜ್,
ಧನ್ಯವಾದ. ಉತ್ತರ ಕರ್ನಾಟಕ ಉದಾಹರಣೆಗಳು ಸಾಂದರ್ಭಿಕವಾಗಿವೆ...ಹೀಗೆ ಅಂತರಂಗಕ್ಕೆ ಭೇಟಿ ಕೊಡ್ತಾ ಇರಿ.