Sunday, February 24, 2008

ಬೆಂಕಿ-ಉರಿ-ಬೆಳಕು

ಅಗ್ಗಿಷ್ಟಿಕೆಯಲ್ಲಿ (fireplace) ಬೆಂಕಿ ನಿಗಿ ನಿಗಿ ಉರಿತಾ ಉರಿತಾ ಇರೋ ಹೊತ್ತಿಗೆ ನಾನು ಕುಳಿತುಕೊಂಡ ಜಾಗೆಯೆಲ್ಲ ಗರಂ ಆಗಿ ಹೋಗಿತ್ತು. ಬಹಳ ದಿನಗಳ ನಂತರ ಕಟ್ಟಿಗೆ ಸುಟ್ಟು ಬೂದಿ ಆಗಿ ಬೆಂಕಿ ಸಂಪೂರ್ಣ ಆರಿ ಹೋಗುವ ಕಾಯಕವನ್ನು (process) ಅನ್ನು ನೋಡೋದಕ್ಕೆ ಒಂದು ರೀತಿ ಚೆನ್ನಾಗಿತ್ತು. ನಿಧಾನವಾಗಿ ಯಾರೋ ಹೇಳಿಕೊಟ್ಟು ಹೋಗಿದ್ದಾರೆ ಅನ್ನೋ ಹಾಗೆ ಘನವಾದ ಕಟ್ಟಿಗೆ ಉರಿದು, ಬೆಂಕಿಯಾಗಿ ಕೆಂಪು ಕೆಂಡವಾಗಿ ಮುಂದೆ ಬಿಳಿ ಬೂದಿಯಾಗಿ ಹೋಗೋದು ಈ ಭಾನುವಾರದ ಸಂಜೆಯ ಮಟ್ಟಿಗೆ ಅದೊಂದು ವಿಸ್ಮಯವೇ ಅನ್ನಿಸಿದ್ದು ಹೌದು. ಮೊದಲೆಲ್ಲ ಬಚ್ಚಲ ಒಲೆಗೆ ದರಲೆ ತುಂಬುವಾಗ ನಮ್ಮ ಮುಗ್ಧ ಮನಸ್ಸಿನಲ್ಲಿ ಅದೇನೇನೋ ಅನ್ನಿಸದ ವಿಷಯ ವಸ್ತುವೆಲ್ಲ ಒಂದು ರೀತಿ ಬೆಂಕಿ ಹೊತ್ತಿ ಹೊಮ್ಮಿಸಿದ ಹೊಗೆಯ ಹಾಗೆ ಮನದಲ್ಲಿ ಎದ್ದುಕೊಂಡಿದ್ದವು. ಎಷ್ಟೇ ಪ್ರಭಲವಾಗಿ ಉರಿದರೂ ಬೆಂಕಿಯಿಂದ ಬೆಳಕಾಗದು ಎಂದು ಎನ್ನಿಸಿದ್ದು ಅಂತಹ ಶುಷ್ಕ ಮನಸ್ಸಿನ ವೇದಾಂತಗಳಲ್ಲೊಂದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಬೆಂಕಿಯ ಜೊತೆಗಿನ ಬೂದಿ ಬೆಳಕಿನ ಬಗ್ಗೆ ಮಾತನಾಡುವ ಬದಲು, ಈ ಬೆಂಕಿ ಉರಿಯುತ್ತಿರುವಾಗ ನಾನು ಮೊದಲಿನಿಂದಲೂ ಮಾಡಿಕೊಂಡಿದ್ದ ಅಂಶವೊಂದು ಗಮನಕ್ಕೆ ಬಂತು - ಬೆಂಕಿಯು ಹತ್ತಿ ಉರಿದಂತೆಲ್ಲಾ ಕಟ್ಟಿಗೆ ತುಂಡುಗಳನ್ನು ಒಂದಕ್ಕೊಂದು ತಾಕಿಸಿ ಕೂಡಿಟ್ಟು ಮತ್ತೆ ಅವುಗಳ ನಡುವೆ ಜ್ವಾಲೆ ಹೆಚ್ಚುವಂತೆ ಮಾಡುವುದು. ಎಷ್ಟೇ ಜೋರಾಗಿ ಬೆಂಕಿ ಉರಿಯುತ್ತಲಿದ್ದರೂ ಒಮ್ಮೆ ಒಂದು ಕಟ್ಟಿಗೆಯ ಅಡ್ಡವಾಗಿ ಮತ್ತೊಂದು ಕಟ್ಟಿಗೆ ಬಾರದೇ ಹೋದರೆ, ಅಥವಾ ಅಡ್ಡ ಕಟ್ಟಿಗೆ ಉರಿಯುವುದು ನಿಂತರೆ ಈ ಕೂಡಿಟ್ಟ ಕಟ್ಟಿಗೆಗಳ ಮಗ್ಗಲು ಬದಲಾಯಿಸುವುದು ಅನಿವಾರ್ಯ, ಇಲ್ಲವೆಂದರೆ ಬೆಂಕಿ ಆರಿ ಹೋದೀತು, ಇಲ್ಲವಾದರೆ ನಿಧಾನವಾಗಿ ಉರಿದು ಕಾವೇ ಬಾರದೇ ಹೊಗೆಯೇ ಹೆಚ್ಚಾದೀತು.


***

ಅನ್ನ, ಪ್ರಾಣ, ಜ್ಞಾನ, ವಿಜ್ಞಾನ, ಆನಂದಗಳೆಂಬ ಹಂತಗಳನ್ನು ನಮ್ಮ ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಯಾರೂ ಬೇಕಾದರೂ ವಿವರಿಸಬಲ್ಲರು. ಒಂದಿಷ್ಟು ಜನರು ದಿನನಿತ್ಯದ ವಿಷಯದಲ್ಲಿ ಅನ್ನ-ಪ್ರಾಣಗಳ ಸಲುವಾಗಿ ದುಡಿದು-ಬಡಿದಾಡಿ-ಕಾದಾಡಿಕೊಂಡರೆ, ಇನ್ನೊಂದಿಷ್ಟು ಜನರಿಗೆ ಅನ್ನ-ಪ್ರಾಣಗಳು ದೇವರು ಕೊಟ್ಟ ವರವಾಗಿ, ಅವರ ಕಷ್ಟ-ನಷ್ಟಗಳೇನಿದ್ದರೂ ಜ್ಞಾನ-ವಿಜ್ಞಾನಕ್ಕೆ ಮೀಸಲಾದವು. ಇನ್ನು ಕೆಲವೇ ಕೆಲವು ಜನರು ಮುಂದೆ ಹೋಗಿ ಬದುಕನ್ನು ಆಳವಾದ ಆನಂದವನ್ನು ಪಡೆಯುವುದಕ್ಕೆ ಮೀಸಲಾಗಿಟ್ಟಿರುವುದು ನಮಗೆಲ್ಲರಿಗೂ ಜನಜನಿತ. ಇದನ್ನೇ Maslow's hierarchy of needs ಎಂದಾದರೂ ಕರೆದುಕೊಳ್ಳಲಿ, ಅಥವಾ High Performance Business Program ಎಂದಾದರೂ ಕರೆದುಕೊಳ್ಳಲಿ. ವ್ಯಕ್ತಿ ಅಥವಾ ಸಂಸ್ಥೆಗಳು ಸಾವಿರಾರು ವರ್ಷದಿಂದ ಮಾಡಿದ್ದನ್ನೇ, ಅಥವಾ ಬಲ್ಲದ್ದನ್ನೇ ಬೇರೆ ಪದಗಳಲ್ಲಿ ಬಣ್ಣಿಸಿಯೋ ಅಥವಾ ಅವರದ್ದೇ ಆದ ಮಸೂರದಲ್ಲಿ ತೋರಿಸಿಯೋ ಯಾವುದೋ ಒಂದು ರೀತಿಯಲ್ಲಿ ಹೊಸ ಹೊಸ ವಿವರಣೆಗಳು, ಅನ್ವೇಷಣೆಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ ಕೆಲವೊಮ್ಮೆ ಅವುಗಳನ್ನು ಕುರಿತು ಓದಲು ತೊಡಗಿದರೆ.

ಓಹ್ ನಮ್ಮದೇನು ಸಾವಿರಾರು ವರ್ಷಗಳ ಇತಿಹಾಸ ಇರುವಂಥದ್ದು ಎಂದು ನಾವು ಸುಮ್ಮನೇ ಕೂರುವಂತೂ ಇಲ್ಲ. ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಅಥವಾ ದೇಶವಾಗಲೀ ಮುಂದಾಳತ್ವದ ದೃಷ್ಟಿಯಿಂದ ಇಂದು ಏನೇನು ಚೆನ್ನಾಗಿ ನಡೆಯುತ್ತಿದೆಯೋ ಅದನ್ನು ಬಿಟ್ಟು ಇನ್ನು ಏನು ಚೆನ್ನಾಗಿ ನಡೆಯಬೇಕು ಎಂದು ಯೋಚಿಸುವುದು, ಯೋಚಿಸಿ ಕಾರ್ಯತಂತ್ರವನ್ನು ರೂಪಿಸಿ ಹಾಗೆ ನಡೆಯುವುದೇ ಇಂದಿನ ದಿನಗಳ ಸವಾಲು. ಪ್ರಪಂಚದ ಯಾವುದೋ ಒಂದು ದೇಶದ ಜನರು ಉಳಿದೆಲ್ಲರನ್ನು ಆಳುವ ಕಾಲ ದೂರವಾಗಿ ಅಲ್ಲಲ್ಲಿ ಕ್ರಮೇಣ ಬಲಿಷ್ಠ ರಾಷ್ಟ್ರಗಳು ಹುಟ್ಟಿಕೊಳ್ಳುವ ಬೆಳವಣಿಗೆಯ ದೃಷ್ಟಿಯಿಂದಂತೂ ಇಂದು ಬೆಳೆಯುತ್ತಿರುವ ಪ್ರತಿಯೊಂದು ರಾಷ್ಟ್ರಗಳು ಮುಬರುವ ನಾಳೆಗಳ ಕುರಿತು ಯೋಚಿಸಿ ಯಾವುದೋ ಒಂದು ತಂತ್ರವನ್ನು ಅನುಸರಿಸುತ್ತ ಹಾಗಿರುವಂತೆ ತೋರುತ್ತದೆ ಇಂದಿನ ದಿನಗಳ ವಿದ್ಯಮಾನ.

ನಿನ್ನೆಯ ದಿನಗಳ ನೆರಳಲ್ಲಾಗಲೀ ಹಳೆಯ ಇತಿಹಾಸದಲ್ಲಾಗಲಿ ಕಲಿಯುವುದು ಬೇಕಾದಷ್ಟಿರಬಹುದು, ಆದರೆ ಅವುಗಳಿಂದ ಕಲಿಯುವವರು ಕಡಿಮೆಯೇ ಎನ್ನುವುದು ನನ್ನ ಅಂಬೋಣ. ಹಾಗಿಲ್ಲದೇ ಹೋದರೆ ಜಗತ್ತಿನಲ್ಲೇನು ದಿನವಿಡೀ ಹೊಸ ಮೂರ್ಖರು ಹುಟ್ಟುತ್ತಲೆಯೇ ಇರುತ್ತಾರೆಯೇನು? ಅವರಿವರು ಮಾಡಿದ್ದನ್ನು ನಾವೂ ನೋಡಬೇಕು, ಹಳೆಯದೆಲ್ಲವನ್ನು ನಾವೂ ತಿಳಿಯಬೇಕು ಎನ್ನುವುದರ ಹಿಂದೆ ಇರುವ ತತ್ವವೇ ಅದರಿಂದೇನಾದರೊಂದಿಷ್ಟು ಕಲಿಯಬೇಕು ಎಂಬುದು. ಆ ಕಲಿಕೆ ಇನ್ನಷ್ಟು ಹೆಚ್ಚಿ ವ್ಯವಸ್ಥಿತವಾದಷ್ಟು ಪ್ರತಿಯೊಬ್ಬರಿಗೂ ಒಳ್ಳೆಯದೇ. ನಿನ್ನೆ ನಡೆದ ಕಾರ್ಯತಂತ್ರಗಳು ಇಂದು ಹಳಸಲಾದಾವು, ಅವುಗಳು ಹಳೆಯದಾಗುವಷ್ಟರಲ್ಲೇ ಹೊಸದನ್ನು ಹುಡುಕಿಕೊಳ್ಳುವುದರಲ್ಲಿ ಸಮಯವನ್ನು ವ್ಯಯಿಸುವ ತಾರ್ಕಿಕತೆ ಎಷ್ಟೋ ಸಂಸ್ಥೆ, ದೇಶಗಳಲ್ಲಿರುವುದರಿಂದಲೇ ಅವು ತಾವು ಮಾಡುತ್ತಿರುವುದರಲ್ಲಿ ಮುಂದಿರುವುದು.

***

ಹೀಗೆ ಬರೆಯುತ್ತ ಹೋದ ಹಾಗೆ ಇಷ್ಟು ಹೊತ್ತು ಉರಿದು ಅಟ್ಟ ಹಾಸ ಬೀರುತ್ತಿದ್ದ ಜ್ವಾಲೆಯ ಆಟ ಸ್ವಲ್ಪ ಕಡಿಮೆಯಾಯಿತು. ನಾನು ಸುಮ್ಮನೇ ಇದ್ದರೆ ಇನ್ನು ಬೆಂಕಿ ಆರಿ ಹೋಗಿ ಕೊನೆಗೆ ಉಳಿಯುವುದು ಇತಿಹಾಸ ಸಾರುವ ಅರ್ಧ ಸುಟ್ಟ ಕಟ್ಟಿಗೆ ಬೊಡ್ಡೆಗಳ ಅವಶೇಷ ಮಾತ್ರ. ಕಾಲದ ಸ್ವರೂಪದಲ್ಲಿ ಇತಿಹಾಸವನ್ನು ಬಿಂಬಿಸುವ ಈ ಬೊಡ್ಡೆಗಳ ಅವಶೇಷ ಮುಂಬರುವವರಿಗೆ ಯಾವುದೋ ಒಂದು ಪಾಠವನ್ನು ಕಲಿಸೀತು ಎನ್ನುವ ಹುಮ್ಮಸ್ಸಿನಿಂದ ನಾನು ಅವುಗಳನ್ನು ಹಾಗೆಯೇ ಬಿಡಬಹುದು. ಅಥವಾ ಉರಿಯುವ ತಾಕತ್ತು ಅವುಗಳಲ್ಲಿ ಇರುವವರೆಗೆ ನಾನು ಅವುಗಳನ್ನು ಮುಂದೂಡುತ್ತಲೋ ಅಥವಾ ಬದಿಯಿಂದ ಬದಿಗೆ ತಿರುಗಿಸುತ್ತಲೋ ಅಥವಾ ಒಂದಕ್ಕೊಂದು ತಾಗಿಕೊಂಡೋ ಇರುವಂತೆ ಮಾಡಿ ಅವುಗಳಲ್ಲಿದ್ದ ಶಕ್ತಿಯನ್ನು ಉರಿಯ ರೂಪದಲ್ಲಿ ಹೊರತೆಗೆದು ಬಿಡಬಹುದು. ಈ ಬದಲಾವಣೆಯ ಸಮಯ ಹೆಚ್ಚು ಹೊತ್ತು ಇರಲೊಲ್ಲದು, ಆದಷ್ಟು ಬೇಗ ಅರ್ಧ ಉರಿದ, ಅಲ್ಲಲ್ಲಿ ಉರಿಯುತ್ತಲ್ಲಿದ್ದ ಬೊಡ್ಡೆಗಳನ್ನು ಇನ್ನಷ್ಟು ಮುಂದೆ ತಳ್ಳುತ್ತೇನೆ. ಅವು ತಾವೇ ಸುಟ್ಟುಕೊಂಡು ಹೋಗುತ್ತಿದ್ದರೂ ಅದ್ಯಾವುದೋ ಕಷ್ಟದಿಂದ ಅವುಗಳನ್ನು ದೂರ ಸರಿಸಿದೆನೆಂದೋ ಇಲ್ಲಾ ಈಗಿನ ಮಟ್ಟಿಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಬಳಸಿದೆನೆಂದೋ ಒಂದು ರೀತಿಯ ಕೃತಜ್ಞತೆಯನ್ನು ಸ್ಪುರಿಸತೊಡಗುತ್ತವೆ, ಅದೇ ಖುಷಿಯಲ್ಲಿ ತಮ್ಮಲ್ಲಡಗಿದ ಯಾವುದೋ ಅವ್ಯಕ್ತ ಶಕ್ತಿಯ ಹುರುಪಿನಲ್ಲಿ ಗುರ್ರ್ ಗುರ್ರು ಎಂದು ಎಲ್ಲಾ ಕಡೆ ಜ್ವಾಲೆಯನ್ನು ಹತ್ತಿಸಿ ಆ ಕಾಲಕ್ಕಾದರೂ ಬೆಳಕು ಹಾಗೂ ದಗೆಯನ್ನು ಹರಡುತ್ತವೆ. ಉರಿಯುವ ಕೊಳ್ಳಿಗಳು ತಮ್ಮ ತಮ್ಮಲ್ಲಿ ತಡಕಾಡಿಕೊಂಡಾಗಲೇ ಜ್ವಾಲೆ ಹೆಚ್ಚಾಗುವುದೆಂದಾದರೆ ಹಾಗೆಯೇ ಆಗಲಿ.

Sunday, February 17, 2008

ಇಲ್ಲಿಗೂ ಅಲ್ಲಿಗೂ ಏನೂ ವ್ಯತ್ಯಾಸವಿಲ್ಲಾ ಅಂತಂದ್ರೆ...

ಇನ್ನೇನು ಸೂರ್ಯ ಹುಟ್ಟಿ ಜಗತ್ತನ್ನ ಬೆಳಗಬೇಕು ಅನ್ನೋ ಸೂಚನೆಗಳು ಸಿಕ್ಕೊಡನೆ ನಮ್ಮನೇ ಮೂಲೆಯಲ್ಲಿರೋ ಮಲ್ಲಿಗೆ ಗಿಡಗಳ ಎಲೆಗಳ ಮುಖದಲ್ಲಿ ಒಂದು ಮಂದಹಾಸ ಮಿನುಗ ತೊಡಗಿತು. ಅನತಿ ದೂರದಲ್ಲಿ ಮೋಡ ಮತ್ತು ಖಾಲಿ ಆಕಾಶಗಳ ನಡುವೆ ಅದೇ ತಾನೇ ಜಗತ್ತಿಗೆ ತನ್ನನ್ನು ಸಾರಿಕೊಂಡು ಕೆಂಪನ್ನು ಸಾರುತ್ತಿರುವ ಕಿರಣಗಳು ಈ ಎಲೆಗಳ ಮೇಲೆ ಹನಿ ಹನಿ ಸೇರಿ ತೆಳುವಾಗಿ ಮಂಜು ಕಟ್ಟಿದ್ದ ಲೇಪನದಲ್ಲೂ ಪ್ರತಿಫಲನವಾಗತೊಡಗಿತು. ಇನ್ನೇನು ಸೂರ್ಯ ಜಗತ್ತಿಗೆ ಬಂದೇ ಬಿಟ್ಟ ಕತ್ತಲೆ ಅನ್ನೋದು ಹಾರಿ ಹೋಯ್ತು ಎಂದು ಈ ಮಲ್ಲಿಗೆಯಲ್ಲಿನ ಎಲೆಗಳು ಬೀಗಿದ್ದೇ ಬಂತು. ಅದೆಷ್ಟೋ ಹೊತ್ತಿನಿಂದ ಹನಿಹನಿ ನೀರಿನ ಪಸೆಯನ್ನು ತಮ್ಮ ಮೈಮೇಲೆ ಶೇಖರಿಸಿಕೊಂಡು ’ಸದ್ಯ, ಈಗಲಾದರೂ ಬಂದ ಸೂರ್ಯ!’ ಎಂದು ಉಸ್ಸ್ ಎಂದು ಉಸಿರು ಬಿಡುವಷ್ಟರಲ್ಲಿ, ಅದ್ಯಾವುದೋ ತಣ್ಣಗಿನ ಗಾಳಿಯೊಂದು ಬೀಸಿತೋ ಇಲ್ಲವೋ ಎನ್ನುವಂತೆ ಬಂದು ಹೋದಂತಾಗಿ ಎಲೆಗಳು ಸ್ವಲ್ಪ ನಲುಗಿದ್ದೇ ತಡ, ಅವುಗಳ ಮೇಲಿನ ನೀರಿನ ಪಸೆ ನಿಧಾನವಾಗಿ ಹನಿಯೊಂದಾಗಿ ಜಾರಿ ಮಣ್ಣಿಗೆ ಬಿದ್ದು ಹೋಗೋದೇ! ’ಛೇ’ ಎಂದು ಎಲೆಗಳೆಲ್ಲ ಒಮ್ಮೆ ಕಿರುಚಿಕೊಂಡು ಬೇಕೋ ಬೇಡವೋ ಎನ್ನುವಂತೆ ಗಾಳಿಗೆ ತಲೆ ಆಡಿಸತೊಡಗಿದವು. ’ಹೋಯ್ತಲ್ಲಪ್ಪಾ!’ ಎನ್ನುವ ರೋಧನ ಇನ್ನೂ ಕೇಳಿಬರುತ್ತಿತ್ತೋ ಏನೋ, ಅಷ್ಟರಲ್ಲಿ ದಿಗಂತದ ಗೆರೆಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮೇಲೆದ್ದು ಬಂದ ಸೂರ್ಯನ ಕಿರಣಗಳು ಎಲೆಗಳ ಮುಖದ ಮೇಲೆ ಬಿದ್ದು, ಅವು ಹಸಿರು ಬಣ್ಣದವಿದ್ದರೂ ಅವನ್ನು ತನ್ನ ಕೆಂಪಿನಲ್ಲಿ ತೋಯಿಸಿಕೊಂಡವು. ಒಂದು ಕಡೆ ತಮ್ಮ ನೀರಿನ ಪಸೆಯನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಅದ್ಯಾವುದೋ ಹೊಸದರ ಸಂಭ್ರಮ. ಎಲೆಗಳ ಕಸಿವಿಸಿ ಚೆನ್ನಾಗಿ ಅವುಗಳ ಮುಖದ ಮೇಲೆ ಹೊಸಬೆಳಕಿನಲ್ಲಿ ಗೋಚರಿಸತೊಡಗಿತ್ತು. ಇದು ಯಾವುದೂ ತನಗೆ ಗೊತ್ತಿಲ್ಲ, ತನ್ನ ಹೊನ್ನ ಕಿರಣಗಳು ಎಲ್ಲೆಲ್ಲೋ ಹರಡಿ ಅವು ಏನೇನನ್ನೋ ಕಂಡುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎನ್ನುವ ಧೋರಣೆ ತಳೆದ ಸೂರ್ಯ ಒಂದಿನಿತೂ ಎಲ್ಲೂ ನಿಲ್ಲುವಂತೇನೂ ತೋರಲಿಲ್ಲ.

***

’ಯಾಕೋ ಬೇಜಾರ್ ಮಾಡ್ಕೊಂಡಿದಿಯಾ?’ ಎಂದೆ.

’ಏನಿಲ್ಲ, ಇಲ್ಲಿದ್ರೆ ಅಲ್ಲೀ ಯೋಚ್ನೆ, ಅಲ್ಲಿದ್ರೆ ಇಲ್ಲೀ ಯೋಚ್ನೆ...’

’ಏಕೆ, ಇತ್ತೀಚೆಗಷ್ಟೇ ಅಲ್ವೇ ನೀನು ಅಮೇರಿಕ ಬಿಟ್ಟು ಇಂಡಿಯಾಕ್ ಹೋಗಿದ್ದು? ಎಲ್ಲ ಸುಖವಾಗಿರಬೇಕಲ್ಲ’.

’ಅದೇ, ಸುಖವಾಗೇನೋ ಇದೀನಿ. ಆದ್ರೆ...’

’ಆದ್ರೆ ಏನು?’

’ಏನಿಲ್ಲ, ಇಲ್ಲಿಗೆ ಹಿಂತಿರುಗಿದಂದಿನಿಂದ ನನಗೆ ಆರೋಗ್ಯನೇ ಅಷ್ಟೊಂದು ಸರಿಯಾಗಿಲ್ಲ ಕಣೋ. ಅದೇನ್ ಅಮೇರಿಕದಲ್ಲಿ ಸ್ವಚ್ಛತೆಯ ವಾತಾವರಣದಲ್ಲಿದ್ವೋ ಬಿಟ್ವೋ ಇಷ್ಟೊಂದು ವರ್ಷಾ, ಇಲ್ಲಿಗೆ ಬರ್ತಾ ಇದ್ದ ಹಾಗೆ ಪ್ರತಿದಿನವೂ ಬ್ಯಾಕ್ಟೀರಿಯಾ ವೈರಸ್ಸುಗಳ ವಿರುದ್ಧ ಸೆಣೆಸೋದೇ ಆಗಿದೆ ನೋಡು. ಒಂದಲ್ಲ ಒಂದು ರೀತಿಯ ಕಷ್ಟ, ನಾಲ್ಕು ದಿನ ನೆಟ್ಟಗಿದ್ರೆ ಇನ್ನು ನಾಲ್ಕು ದಿನ ಮಲಗಿರ್ತೀನಿ ಅನ್ನೋ ಹಾಗಿದೆ.’

’ಏ, ಇಂಡಿಯಾ ಅನ್ನೋ ವಾತಾವರಣದಲ್ಲೇ ಅಲ್ವೇ ನಾವು ಬೆಳೆದು ಬಂದಿರೋದು. ಮತ್ತೆ ಅಲ್ಲಿಗೆ ವಾಪಾಸ್ ಹೋಗಿ ಬದುಕೋದು ಯಾಕ್ ಕಷ್ಟಾ ಆಗುತ್ತೆ? ಈ ಪೊಲ್ಯೂಷನ್ನೂ ಮತ್ತಿನ್ನೊಂದು ಹಿಂದೆಯೂ ಇತ್ತು ಮುಂದೆಯೂ ಇರುತ್ತೆ ಅದರಲ್ಲೇನು ವಿಶೇಷ?’

’ಅಲ್ಲೇ ಇರೋದು ವಿಶೇಷ, ಈ ಪ್ರಪಂಚ ಬಹಳಷ್ಟು ಬೆಳೆದಿದೆ. ನಾವು ಹತ್ತು ವರ್ಷದ ಹಿಂದೆ ನೋಡಿದ ಪೊಲ್ಯೂಷನ್ನು ಇವತ್ತಿನ ಪೊಲ್ಯೂಷನ್ನಿಗೆ ಯಾವ ಹೋಲಿಕೆಯೂ ಅಲ್ಲ. ಜೊತೆಗೆ ಇಂದಿನ ಬೆಳೆದ ವಾತಾವರಣದಲ್ಲಿರೋ ಸ್ಟ್ರೆಸ್ಸೂ ಕಾರಣಾ ಅನ್ನು’.

’ಸ್ಟ್ರೆಸ್ಸೂ ಅಂದ್ರೆ...’

’ಅದೇ, ಬೆಳಿಗ್ಗೆ ಎಂಟು ಘಂಟೆಗೆ ಆಫೀಸಿಗೆ ಹೋದ್ರೆ ಸಂಜೆ ಎಂಟರ ಮೇಲಾಗುತ್ತೆ ಬರೋದು. ಈ ಟ್ರಾಫಿಕ್ ಜಾಮ್ ಅನ್ನೋ ನಕ್ಷತ್ರಿಕ ಯಾವನಿಗೂ ಬಿಡೋ ಹಾಗೇ ಕಾಣ್ಸಲ್ಲ. ದಿನಕ್ಕೆ ಒಟ್ಟಿಗೆ ಹದಿನಾಲ್ಕು ಘಂಟೆ ಒದ್ದಾಡೋದನ್ನ ವೃತ್ತಿ ಜೀವನ ಅಂತ ಕರೆಯೋದಕ್ಕೂ ಹೇಸಿಗೆ ಅನ್ಸುತ್ತೆ ನೋಡು. ಇಲ್ಲಿಗೆ ಬಂದು ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದುಕೊಂಡಿದ್ದ ಆಸೆಗಳೆಲ್ಲ ಬಲೂನಿಗೆ ಸೂಜಿ ಚುಚ್ಚಿದ ಹಾಗೆ ಠುಸ್ಸ್ ಎಂದು ಹೋದ್ವು. ಕೆಲವೊಂದು ಸರ್ತೀ ಅಂತೂ ಇಲ್ಲಿನ ಟ್ರಾಫಿಕ್ ಜಾಮಿಗೆ ಹೆದರಿ ಅಥವಾ ಅದನ್ನ ನೆನೆಸಿಕೊಂಡೇ ನಾನು ಎಷ್ಟೋ ಕಾರ್ಯಕ್ರಮಗಳಿಗೆ ಹೋಗೋದೇ ಇಲ್ಲ. ಅಲ್ಲಿಗೆ ಹೋದ್ರೂ ಪಾರ್ಕಿಂಗ್ ಮಾಡಿ ಗೆಲ್ತೀನೀ ಅಂತ ಇನ್ನೂವರೆಗೆ ನನಗೆ ಎಲ್ಲೂ ಖಾತ್ರಿ ಆಗಿದ್ದಿಲ್ಲ’.

’ಹೌದಾ, ಅಷ್ಟೊಂದು ಕಷ್ಟವೇ?’

’ಕಷ್ಟಾನಾ, ಇದಕ್ಕೆ ಕಷ್ಟಾ ಅಂತಂದ್ರೆ ಅದು ಒಂದು ಅಂಡರ್ ಸ್ಟೇಟ್‌ಮೆಂಟು’.

’ಅವೆಲ್ಲ ಇರ್ಲಿ, ಆಫೀಸ್ ವಾತಾವರಣ ಹೇಗಿದೆ?’

’ಇದರಲ್ಲಿ ಹೆಚ್ಚಿಗೆ ಬದಲಾದಂತೆ ಅನ್ಸಲ್ಲ, ಅವೇ ಮೈಂಡ್‌ಸೆಟ್ಟುಗಳು, ಜನರು ಎಲ್ಲೀವರೆಗೆ ಬದಲಾಗೋಲ್ವೋ ಅಲ್ಲೀವರೆಗೆ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ರೆಡ್ ಟೇಪಿಸ್ಸಮ್ಮು, ಡರ್ಟೀ ಪಾಲಿಟಿಕ್ಸೂ ಅಂತ ಅಮೇರಿಕದಲ್ಲಿ ಕರಿಯರಿಗೆ-ಬಿಳಿಯರಿಗೆ ನಾನು ಬೈದುಕೊಂಡಿದ್ದೇ ಬಂತು, ಇಲ್ಲಿ ನಡೆಯೋ ರಾಜಕೀಯ ಅವಾಂತರಗಳನ್ನ ನೋಡಿದ್ರೆ ಅಲ್ಲೇ ಎಷ್ಟೋ ವಾಸಿ ಅಂತ ಅನ್ಸುತ್ತೆ’.

’ವಿದೇಶದಲ್ಲಿ ಇಷ್ಟೊಂದು ವರ್ಷ ಅನುಭವ ಇದೆ ಅಂತ್ಲೂ ನಮ್ಮಂತೋರಿಗೆ ಬೆಲೆ ಸಿಗೋದಿಲ್ವೇನು?’

’ಓಹ್ ಸಿಗುತ್ತೆ, ಯಾಕ್ ಸಿಗಲ್ಲ. ಆದ್ರೆ ನೀನು ಹತ್ತು ಅಂದ್ರೆ ಜನ ಇಪ್ಪತ್ತು ಅನ್ನೋರ್ ಸಿಕ್ಕೇ ಸಿಗ್ತಾರೆ ಎಲ್ಲ್ ಹೋದ್ರೂ. ಜೊತೆಗೆ ಕೇವಲ ಎಕ್ಸ್‌ಪೀರಿಯೆನ್ಸ್ ಅಳತೇ ಮೇಲೆ ನಿನಗೇನೂ ಸಿಗೋದಿಲ್ಲ, ಯಾವ ಅನುಭವ ಎಲ್ಲಿ ಹೇಗಿತ್ತು ಅನ್ನೋದರ ಮೇಲೆ ಬಹಳಷ್ಟು ನಿರ್ಧಾರವಾಗುತ್ತೆ’.

’ಅದೆಲ್ಲ ಇರ್ಲಿ, ಮನೆಯವ್ರು, ಮಕ್ಳಾದ್ರೂ ಆರಾಮಾಗಿದ್ದಾರಾ?’

’ಹ್ಞೂ, ಒಂದು ರೀತಿ ಅವರೇ ಅರಾಮಾಗಿರೋರು ನನಗಿಂತ. ಒಂದು ಕಾಲ್ದಲ್ಲಿ ಇಂಡಿಯಾ ಮುಖವನ್ನ ನೋಡದ ಮಕ್ಳು ಇಲ್ಲಿಗೆ ಹೊಂದಿಕೋತಾರಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇವತ್ತು ಅವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದಾರೆ, ಕಷ್ಟಾ ಬಂದಿರೋದೇ ನನಗೆ ನೋಡು...

’ಅದೇನ್ ಅಂತಾ ಕಷ್ಟಾ?’

’ಅದೇ, ಅಮೇರಿಕದಲ್ಲೂ ಮೈ ತುಂಬಾ ಸಾಲಾ ಮಾಡ್ಕೊಂಡು ಮಾರ್ಟ್‌ಗೇಜ್ ಕೊಟಗಂಡು ಮನೆಯಲ್ಲಿದ್ವಿ, ಇಲ್ಲಿ ಬಂದು ನೋಡಿದ್ರೆ ಒಂದು ಸಾಧಾರಣ ಮನೆ ಕಟ್ಸೋಕೇ ಒಂದು ಕೋಟಿ ರೂಪಾಯ್ ಅಂತಾರೆ - ಕಾಲು ಮಿಲಿಯನ್ ಅಮೇರಿಕನ್ ಡಾಲರ್ ನನ್ಹತ್ರ ಇದ್ದಿದ್ರೆ ಇಷ್ಟೊತ್ತಿಗೆ ನಾನು ಇಲ್ಯಾಕ್ ಇರ್ತಿದ್ದೆ? ಜೊತೆಗೆ ಸೈಟ್ ಅಂತ ಒಂದು ಇದ್ರೆ ಪುಣ್ಯ, ಇಲ್ಲ ಅಂದ್ರೆ ಇನ್ನೊಂದು ಐವತ್ತು ಲಕ್ಷವಾದ್ರೂ ಹೋಗುತ್ತೆ. ಎಲ್ಲಿಂದ ತರೋದು ಇಷ್ಟೊಂದು ದುಡ್ಡು? ಅದಕ್ಕೇ ಇಲ್ಲಿನ ಬ್ಯಾಂಕುಗಳ ಮೊರೆ ಹೋಗಿ ಮೈ ತುಂಬಾ ಸಾಲಾ ಮಾಡ್ಕೊಂಡಿದ್ದೀನಿ. ಅದರ ಫಲವೇ ನನ್ನ ಅಹರ್ನಿಶಿ ದುಡಿಮೆ, ಹೀಗೇ ಸಾಲಾ-ದುಡಿಮೆಯ ಚಕ್ಕರದಲ್ಲಿ ಮುಳುಗಿ ಹೋಗಿದ್ದೇನೆ ನೋಡು’.

’ಅಷ್ಟೊಂದು ವರ್ಷ ಅಮೇರಿಕದಲ್ಲಿದ್ರೆ ಸ್ವಲ್ಪವೂ ದುಡ್ಡು ಹುಟ್ಟೋಲ್ವೇ, ಉಳಿಯೋಲ್ವೇ?’

’ಇರುತ್ತೆ ಯಾಕಿಲ್ಲ? ಅವುಗಳೆಲ್ಲ ಒಂದಲ್ಲ ಒಂದು ಕಡೆ ಈಗಾಗ್ಲೇ ತೊಡಗಿಕೊಂಡಿರುತ್ತೆ, ಇಲ್ಲಾ ಅಂತಂದ್ರೂ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲಿಡಬೇಕು ಅಂತಂದ್ರೆ ಅಮೇರಿಕದಲ್ಲಿ ಪೇ ಚೆಕ್ ನಿಂದ ಪೇ ಚೆಕ್ ಗೆ ದುಡಿಯೋರ್ ಹತ್ರ ಕಷ್ಟ ಸಾಧ್ಯವೇ ಸರಿ. ಏನೇ ಅಂದ್ರೂ ಮಿಲಿಯನ್ ಡಾಲರ್ ಯಾವನ ಹತ್ರ ಇದೆ ನೀನೇ ಹೇಳು’.

’ಮತ್ತೇ, ಅಮೇರಿಕದಲ್ಲಿರೋರು ಇಂಡಿಯಾಕ್ ಬರ್ತೀವಿ ಅಂತಂದ್ರೆ ನೀನ್ ಅವರಿಗೆ ಹೇಳೋದೇನಾದ್ರೂ ಇದೆಯೇನು?’

’ಶೂರ್, ದಿನಕ್ಕೆ ಹದಿನಾಲ್ಕು ಘಂಟೆ ದುಡಿದು ಸಾಲದ ಚಕ್ಕರದಲ್ಲಿ ಬೀಳೋ ಹಾಗಿದ್ರೆ ನೀವ್ ಎಲ್ಲಿರ್ತೀರೋ ಅಲ್ಲೇ ಇರ್ರಿ, ಅದರ ಬದ್ಲಿ ಒಂದು ಸಣ್ಣ ಊರಲ್ಲಿ ಒಂದು ಉದ್ಯಮವನ್ನ ಶುರು ಹಚ್ಚಿಕೊಂಡು ನಿಮಗೆ ನೀವೇ ಬಾಸ್ ಆಗೋ ಹಾಗಿದ್ರೆ ಇಲ್ಲಿಗೆ ಬನ್ನಿ! ಇಲ್ಲೂ-ಅಲ್ಲಿಗೂ ಏನೂ ವ್ಯತ್ಯಾಸವಿಲ್ಲ ಅನ್ನೋದು ಒಳ್ಳೆಯದೋ ಕೆಟ್ಟದ್ದೋ ಅನ್ನೋದೂ ಅವರವರಿಗೆ ಬಿಟ್ಟಿದ್ದು ಅಂತ್ಲೂ ಹೇಳ್ತೀನಿ.

’ಮತ್ತೇ, ಎಲ್ರೂ ಬೆಂಗಳೂರಿಗೇ ಬರ್ತಾರೇ ಅಂತ ಕೇಳ್ದೆ...’

’ಅದೂ ನಿಜವೇ, ಎಲ್ರೂ ಇಲ್ಲೇ ಬಂದು ಸಾಯೋದ್ರಿಂದ್ಲೇ ಬೆಂಗಳೂರಿನವರಾದ ನಮಗೆ ಈ ಕಷ್ಟ ಬಂದಿರೋದು...ನನ್ನ ಕೇಳಿದ್ರೆ ಇಂಡಿಯಾದಲ್ಲಿ ಬೇರೆ ಊರುಗಳೇ ಇಲ್ವೇ, ಅಲ್ಲಿಗೆ ಹೋಗ್ಲಿ’ .

***

ನಮ್ಮನೆಯ ಮಲ್ಲಿಗೆಯ ಗಿಡದ ಎಲೆಗಳು ಇಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಬಲಿತ ಸೂರ್ಯ ರಶ್ಮಿಯಲ್ಲಿ ತೋಯ್ದು ಹೋಗಿದ್ದವು. ಗಾಳಿ ಬೀಸುತ್ತೆ ಬೆಳಕು ಬೀಳುತ್ತೆ ಮೈ ಮೇಲೆ ಮಂಜು ಕೂರುತ್ತೆ, ಅದು ನಿಸರ್ಗ ನಿಯಮ ಅನ್ನೋ ಉಪದೇಶ ಸಾರುವ ಮುಖವನ್ನು ಮಾಡಿಕೊಂಡಿದ್ದವು. ಅವುಗಳ ವೈರಾಗ್ಯ ಮನಸ್ಸಿನ ನೆರಳಿನಲ್ಲಿ ಇವತ್ತಲ್ಲ ನಾಳೆ ಎಲ್ಲವೂ ಸರಿ ಹೋಗೇ ಹೋಗುತ್ತೆ ಎನ್ನುವ ಛಾಯೆ ಕಂಡು ಬರುತ್ತಿತ್ತು. ಅದನ್ನ ಆಶಾಭಾವನೆ ಅನ್ನೋಣವೇ ಅಥವಾ ಬದುಕಿನ ಯೋಜನೆ ಎಂದು ಕರೆದುಕೋಳ್ಳೋಣವೇ ಎಂದು ಎಲೆಗಳ ನಡುವೆ ಇನ್ನೇನು ವಾದ ಏಳುವ ಹುರುಪು ಕಂಡುಬರುತ್ತಿತ್ತು.

Sunday, February 10, 2008

ಮೌನದ ಮೊರೆ

ಇತ್ತೀಚಿನ ದಿನಗಳನ್ನ ವೇಗಮಯ ದಿನಗಳು ಎಂದು ಕರೆದುಕೊಂಡರೆ - ನಮ್ಮ ಮುಂದುವರೆದ ಟೆಕ್ನಾಲಜಿ, ಎಲ್ಲವೂ ಈ ಕೂಡಲೇ ಬೇಕು ಎನ್ನುವ ಮನಸ್ಥಿತಿಯ ಹಿನ್ನೆಲೆಯಲ್ಲಿ - ಯಾರೂ ಮೌನಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡೋದಿಲ್ಲವೇ ಎಂದು ಎಷ್ಟೋ ಸಾರಿ ಅನ್ನಿಸಿದ್ದಿದೆ. ನಮ್ಮ ಆಫೀಸಿನಲ್ಲಿ ನಡೆಯುವ ಮುಖಾಮುಖಿ ಮೀಟಿಂಗುಗಳಲ್ಲಾಗಲೀ ಅಥವಾ ಟೆಲಿಫೋನ್ ಮೂಲಕ ನಡೆಯೋ ಕಾನ್‌ಫರೆನ್ಸ್ ಕರೆಗಳಾಗಲೀ ಇವು ಯಾವುದರಲ್ಲೂ ಪ್ರಶ್ನೆಯೊಂದರ ಉತ್ತರ ಹೊರಹೊಮ್ಮುವುದಕ್ಕೂ ಕಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೇ ನನ್ನ ಅನುಭವ. ಯಾರೋ ಪ್ರಶ್ನೆ ಕೇಳಿದ್ದಕ್ಕೆ ಥಟ್ಟನೆ ಉತ್ತರ ಹೇಳಿಬಿಡಬೇಕು, ಇಲ್ಲವೆಂದಾದರೆ ನಮಗೆ ಉತ್ತರ ಗೊತ್ತಿಲ್ಲವೆಂದು ಅವರೇ ತಮ್ಮ ಪ್ರಶ್ನೆಯನ್ನು ಉತ್ತರಿಸಿಕೊಂಡಾರು.

ಮಾತು-ಮೌನದಲ್ಲಿ ’ಪಂಚವಟಿ’ಯ ಲಕ್ಷ್ಮಣನ ಬಗ್ಗೆ ಬರೆದಿದ್ದೆ, ಕೆಲವೊಮ್ಮೆ ನಮ್ಮ ಮಾತುಗಳನ್ನು ನಾವು ಮನಸಿನಲ್ಲಿಯೋ ಹೊರಗೋ ಹರವಿಕೊಂಡು ಅದರ ವಿಸ್ತಾರವನ್ನು ನೋಡಿಕೊಳ್ಳೋದು ಸಹಜ. ಯಾರೋ ಒಂದು ಪ್ರಶ್ನೆಯನ್ನು ಕೇಳಿದರೆಂದು ಅವರ ಪ್ರಶ್ನೆ ಕೇಳಿ ನಿಲ್ಲಿಸಿದ ನಂತರ ನಮ್ಮ ಉತ್ತರದ ಧ್ವನಿ ಹುಟ್ಟುವ ಮೊದಲು ಇರುವ ಮೌನವನ್ನು ಕಡಿಮೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ, ಅವರು ಕೇಳಿದ ಪ್ರಶ್ನೆಗೆ ನಾವು ಕೊಡಬೇಕಾದ ಉತ್ತರಕ್ಕೆ ಒಂದೆರಡು ಕ್ಷಣಗಳನ್ನು ಹೆಚ್ಚು ತೆಗೆದುಕೊಂಡರಾಗದೇ? ಲೀಡರ್‌ಶಿಪ್ ಕಾನ್ಟೆಕ್ಸ್ಟಿನಲ್ಲಿ ಆಕ್ಟಿವ್ ಲಿಸನಿಂಗ್ (active listening) ಬಗ್ಗೆ ಏನೇ ಹೇಳಿ ಕೊಟ್ಟಿರಲಿ, ನಾವು ಇನ್ನೊಬ್ಬರಿಗೆ ಕೊಡಬೇಕಾದ ಉತ್ತರ ಅವರ ಪ್ರಶ್ನೆಯೊಂದಿಗೆಯೇ ನಮ್ಮ ತಲೆಯಲ್ಲಿ ಆರಂಭವಾಗುತ್ತದೆ ಎಂಬುದು ಸುಳ್ಳಲ್ಲ. ಯಾರು ಏನು ಹೇಳಿದರು ಎಂಬುವುದಕ್ಕಿಂತ ಅವರು ಹೇಳಿದ್ದಕ್ಕೆ ನಾವೇನು ಹೇಳಬೇಕು ಎಂದು ನಮ್ಮ ಮನಸ್ಸಿನ ವ್ಯಾಪಾರದಲ್ಲಿ ಮುಳುಗಿ ಹೋಗುವುದಿದೆ ನೋಡಿ, ಅದು ನಿಜವಾಗಿಯೂ ಚಿಂತಿಸಬೇಕಾದ ವಿಚಾರ.

ಅಮೇರಿಕನ್ನರು ಏಕೆ ಉದ್ದುದ್ದವಾಗಿ ಮಾತನಾಡುತ್ತಾರೆ ಎಂದು ಕೇಳಿಕೊಂಡರೆ ನಿಜವಾದ ಕಾರಣದ ಬದಲು ನಮ್ಮ ಸುಬ್ಬನ ಶೈಲಿಯಲ್ಲಿ ಹಗುರವಾದ ಉತ್ತರವೊಂದು ಹೊಳೆಯಿತು. ಎದುರಿನವರು ಕೇಳಿದ ಪ್ರಶ್ನೆಯೇನೇ ಇರಲಿ ನಿಮ್ಮ ಉತ್ತರವನ್ನು ಈ ರೀತಿ ಆರಂಭಿಸಿದ್ದಾದರೆ ಈ ಮೊದಲಿನ ಕೆಲವು ವಾಕ್ಯಗಳನ್ನು ಹೇಳುವ ಹೊತ್ತಿಗಾದರೂ ನಿಮಗೆ ನಿಜವಾದ ಉತ್ತರ ಹೊಳೆದೀತು

"First of all, he brings up a very valid point, I mean, looking at it from the
context of this scenario, more or less, he kind of read my mind..."

ಸುಮ್ನೇ ತಮಾಷೆಗೆ ಹೇಳ್ದೆ ಅಷ್ಟೇ, ನೀವು ವೆದರ್ರೋ ಮತ್ತೊಂದನ್ನೋ ಸೇರಿಸಿಕೊಂಡೋ, ಅಥವಾ ಅವರೂ ಇವರಿಗೆ ಥ್ಯಾಂಕ್ಯೂಗಳನ್ನು ಸೇರಿಸಿಕೊಂಡು ನಿಮ್ಮ ಆರಂಭ ವಾಕ್ಯವನ್ನು ಬೇಕಾದಷ್ಟು ಉದ್ದ ಮಾಡಿಕೊಳ್ಳಬಹುದು ಸಂದರ್ಭಕ್ಕನುಸಾರವಾಗಿ, ನಿಮಗೆ ಸಿಕ್ಕೋದು ಹತ್ತು ಸೆಕೆಂಡ್ ಹೆಚ್ಚಿಗೆ ಅದರ ಮೂಲಕ ನೀವು ಕೊಡಬೇಕಾದ ಉತ್ತರವನ್ನು ಇನ್ನಷ್ಟು ಯೋಚಿಸಿಕೊಳ್ಳೋದಕ್ಕೆ ಸಮಯ ಸಿಕ್ಕಿದ ಹಾಗೆ ಆಯ್ತು ತಾನೆ?

***

ಏಕೋ ನಾವೆಲ್ಲ ಮೌನದ ಮೊರೆ ಹೋಗೋ ಬದಲು ಗದ್ದಲದ ಮೊರೆ ಹೋಗುತ್ತಿದ್ದೇವೆ. ಸುತ್ತಲಿನ ಪರಿಸರದ್ದು ಅದರದ್ದೇ ಆದ ಒಂದು ಶಬ್ದ ಗಾಂಭೀರ್ಯ ಇದ್ದರೆ ನಾವು ನಮ್ಮ ಐಪಾಡ್‌ಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಸಂಗೀತ/ಸಾಹಿತ್ಯದ ಸೋಗಿನಲ್ಲಿ ನಮ್ಮದೇ ಆದ ಪ್ರಪಂಚವನ್ನು ಕಲ್ಪಿಸಿಕೊಳ್ಳುತ್ತೇವೆ. ಸದ್ದಿನಲ್ಲಿ ಎಲ್ಲವೂ ಇದೆ ಎಂದುಕೊಂಡವರು ಒಂದೆರಡು ಘಂಟೆ ಮೌನವನ್ನು ಅನುಭವಿಸಿ ನೋಡಲಿ ಅದರಲ್ಲಿಯೂ ಬೇಕಾದಷ್ಟಿದೆ - ಮೌನ ಒಂದು ರೀತಿ ಮಾತಿಲ್ಲದ ಸಿನಿಮಾದ ಹಾಗೆ, ಮನದ ಪರದೆಯ ಮೇಲೆ ಏನೇನೋ ಚಿತ್ರಗಳು ಮೂಡಿ ಮರೆಯಾಗಿ ನಮ್ಮದೇ ಆದ ಮತ್ತೊಂದು ಪ್ರಪಂಚ ತೆರೆದುಕೊಳ್ಳೋದು ನಿಜ. ನಾನು ಹಿಂದೆ ಎಲ್ಲೋ ಓದಿದ ಹಾಗೆ ನಮ್ಮ ಹೊರಗಿನ ಪ್ರಪಂಚದಷ್ಟೇ ಆಳ ಹಾಗೂ ವಿಸ್ತಾರವಾದ ಪ್ರಪಂಚ ನಮ್ಮ ಮನಸ್ಸಿನೊಳಗೂ ಇದೆ. ಇವುಗಳ ವ್ಯತ್ಯಾಸ ಒಂದು ರೀತಿ ಆಸ್ಟ್ರೋಫಿಸಿಕ್ಸ್ ಹಾಗೂ ಕ್ವಾಂಟಮ್ ಮೆಕ್ಯಾನಿಕ್ಸ್‌ಗಳ ನಡುವಿನ ವ್ಯತ್ಯಾಸದ ಹಾಗೆ - ಒಂದು, ಬಹು ದೂರದ ವಸ್ತುವಿನ ಚಲನವಲನವನ್ನು ಗ್ರಾವಿಟೇಷನ್ ಎನ್ನುವ ವೀಕ್ ಫೋರ್ಸ್‌ನ ಮಾಧ್ಯಮದಲ್ಲಿ ಕಲ್ಪಿಸಿಕೊಂಡರೆ ಮತ್ತೊಂದು ಅಣುಗಳನ್ನು ಮೀರಿರುವ ಪಾರ್ಟಿಕಲ್ಲುಗಳ ನಡುವಿನ ಸ್ಟ್ರಾಂಗ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೋರ್ಸ್‌ನ ಅಳತೆಯನ್ನು ಹಿಡಿದ ಹಾಗೆ.

ನಮಗೆ ವಿಶ್ರಾಂತಿಯನ್ನು ಕೊಡುವ ನಿದ್ರೆ, ನಮ್ಮ ಮನಸ್ಸಿನ ಸಂವೇದನೆಗಳನ್ನು ಹಿಡಿತದಲ್ಲಿಟ್ಟು ನಮ್ಮ ಸಂಸ್ಕಾರಗಳಿಂದ ನಮ್ಮನ್ನು ಹೊರನಿಲ್ಲಿಸಿ ನೋಡುವಂತೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಧ್ಯಾನ ಮುಂತಾದವುಗಳೆಲ್ಲ ಮೌನದ ಮಡಿಲಲ್ಲಿ ನೆಲೆಗೊಂಡರೆ ನಮ್ಮ ಭೌತಿಕ ಜಗತ್ತು ನಾವು ಏನು ಹೇಳುತ್ತೇವೆ ಅರ್ಥಾಥ್ ನಾವು ಯಾವ ಯಾವ ಶಬ್ದ/ಪದಗಳನ್ನು ಬಳಸುತ್ತೇವೆ ಎಂಬುದನ್ನು ಅವಲಂಭಿಸಿದೆ. ಮೌನ-ಶಬ್ದ ನಡುವಿನ ವ್ಯತ್ಯಾಸ, ಅವೆರಡೂ ವಿಭಿನ್ನ ಚೌಕಟ್ಟಿನ ಸಾಧ್ಯತೆ-ಬಾಧ್ಯತೆಗಳು ನಮಗೆ ಅನಿವಾರ್ಯವೂ ಹೌದು, ಆದರೆ ಇತ್ತೀಚಿನ ಪ್ರಪಂಚದ ಮೌನದ ಮೊರೆ ಹೋಗುವುದಕ್ಕಿಂತ ಹೆಚ್ಚಾಗಿ ಶಬ್ದದ ಮೊರೆ ಹೊಕ್ಕಿದೆ ಎಂದೇ ನನ್ನ ಅಭಿಪ್ರಾಯ.

***

ಈ ಯುಗದಲ್ಲಿಯೂ ಇಂದ್ರಿಯಗಳನ್ನು ಜಯಿಸುವುದು ಸಾದ್ಯವಿರಬೇಕಿತ್ತು, ಎಲ್ಲಿ ಬೇಕೆಂದರಲ್ಲಿ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದಕ್ಕೆ. ಏನಾದರೂ ಹೇಳಲೇ ಬೇಕು ಎಂದು ಹೇಳುವುದಕ್ಕಿಂತ ಸುಮ್ಮನಿರುವುದನ್ನು ಕಲಿಯಬೇಕು ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ಕೆಲವೊಮ್ಮೆ ನಾನು ಬೇಕೆಂದೇ ಎರಡು ಕ್ಷಣಗಳ ಕಾಲ ಮೌನದ ಮೊರೆಯನ್ನು ಹೊಕ್ಕರೆ ಫೋನಿನಲ್ಲಿ ಮಾತನಾಡುವ ಆ ಕಡೆಯವರು ಲೈನ್ ಎಲ್ಲಿ ಡಿಸ್ಕನೆಕ್ಟ್ ಆಗಿಹೋಯಿತೋ ಎಂದು ಅರಚಿಕೊಳ್ಳುವುದನ್ನು ನೋಡಿ ಸೋಜಿಗಪಟ್ಟಿದ್ದೇನೆ. ಅಕಸ್ಮಾತ್ ನಮ್ಮ ನಡುವಿನ ಸಂಪರ್ಕದ ಎಳೆ ಒಮ್ಮೆ ಕಡಿದು ಹೋಯಿತು ಎಂತಲೇ ಅಂದುಕೊಳ್ಳೋಣ ಅದರಿಂದೇನಾಯಿತು? ಮತ್ತೆ ಫೋನ್ ಮಾಡಿದರಾಗದೇ? ಇಷ್ಟೊಂದು ಸಂವಹನ/ಸಂಪರ್ಕ ಮಾಧ್ಯಮಗಳಿಗೆ ಆದ್ಯತೆಕೊಡುವ ಜನರಿಗೆ, ಈ ಸಂತತಿಯಲ್ಲಿ ಅದೇಕೆ ಅಷ್ಟೊಂದು ಮಿಸ್-ಕಮ್ಮ್ಯೂನಿಕೇಷನ್ನುಗಳು ನಡೆಯುತ್ತವೆ ಎಂದು ಚಿಂತಿಸಿದ್ದೇನೆ. ನನ್ನ ಊಹೆಯ ಪ್ರಕಾರ ನಮ್ಮ ಸಂಬಂಧಗಳು (ಗಂಡ-ಹೆಂಡತಿ, ತಂದೆ-ತಾಯಿ-ಮಕ್ಕಳು, ಸಹೋದರರು-ಸಹೋದರಿಯರು, ಸ್ನೇಹಿತರು) ಇತ್ತೀಚಿನ ಅತಿ ಕಮ್ಮ್ಯೂನಿಕೇಶನ್ನಿನ ಮಾಧ್ಯಮಗಳಿದ್ದರೂ ಅಷ್ಟೇ ದೂರಹೋಗಿವೆ. ಎಲ್ಲಿ ಏನು ಬೆಳವಣಿಗೆಯಾದರೇನು ಬಂತು, ಅದ್ಯಾವುದೋ ಒಂದು ಅವ್ಯಕ್ತ ಪ್ರೀತಿಯಿಂದ ಬದುಕಿನ ಸಂಬಂಧಗಳನ್ನು ನೋಡದ ಹೊರತು? ನಮಗೆ ಗೊತ್ತಿರುವುದೆಲ್ಲವನ್ನೂ ನಾವು ಅನುಭವಿಸಿ ಆಚರಿಸುವುದೆಲ್ಲವನ್ನೂ ಭಾಷೆಯಲ್ಲಿ ಕಟ್ಟಿಡುತ್ತೇವೆ ಎನ್ನುವುದು ಎಂದು ಯಶೋಗಾಥೆಯಾದೀತು?

ಏನೋ, ಬಾಯಿ ಇದ್ದವರು ಹೊರಗಿನದನ್ನು ಗೆಲ್ಲುತ್ತಾರಿರಬಹುದು, ಕೊನೆಗೆ ತಮ್ಮೊಳಗಿನದನ್ನು ಅರಿತುಕೊಳ್ಳುವುದಕ್ಕಾದರೂ ಮೌನವನ್ನು ನಾವು ಆಶ್ರಯಿಸಿದ್ದೇ ಆದರೆ ಅದು ಎಲ್ಲೋ ಒಂದು ಸಮತೋಲನವನ್ನು ತಂದುಕೊಟ್ಟೀತೇನೋ ಎನ್ನುವುದು ನನ್ನ ಆಶಯ.

Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!