Monday, December 31, 2007

Byteಗಳು bite ಮಾಡುವ ಮೊದಲು...

ವರ್ಷದ ಕೊನೆಯಲ್ಲಿ ಇ-ಮೇಲ್‌ ಮೆಸ್ಸೇಜು, ಫೈಲು, ಫೋಲ್ಡರುಗಳನ್ನ ಆರ್ಗನೈಜ್ ಮಾಡಿಬಿಡೋಣವೆಂದುಕೊಂಡು ಉತ್ಸಾಹದಿಂದ ಬೇಕಾದಷ್ಟು ವಿಂಡೋಸ್‌ಗಳನ್ನು ತೆರೆದಿಟ್ಟುಕೊಂಡೋನಿಗೆ ಕಳೆದ ಆರು ತಿಂಗಳಲ್ಲಿ ಆಕೈವ್ ಫೈಲು 1.7 GB ಅಷ್ಟು ಬೆಳೆದಿರೋದು ನೋಡಿ ಆಶ್ಚರ್ಯವಾಯಿತು. ಮೊದಲೆಲ್ಲ ಕೆಲವೇ ಕೆಲವು ಕಿಲೋ ಬೈಟುಗಳಷ್ಟು ದೊಡ್ಡದಿರುತ್ತಿದ್ದ ಮೆಸ್ಸೇಜುಗಳು ಆಪರೇಟಿಂಗ್ ಸಿಸ್ಟಮ್ ಬದಲಾದ ಹಾಗೆ ಟೂಲ್ಸ್‌ಗಳು ಅಭಿವೃದ್ಧಿಗೊಂಡ ಹಾಗೆ ತಾವೂ ಬೇಕಾದಷ್ಟು ಬೆಳೆದಿರೋದು ನಿಜ. ಕೇವಲ ಹತ್ತು ವರ್ಷಗಳಲ್ಲಿ ಇಷ್ಟೊಂದು ದೊಡ್ಡದಾಗಿ ಬೆಳೆಯೋ ಮೆಸ್ಸೇಜುಗಳಾಗಲೀ, ಅಪ್ಲಿಕೇಷನ್ನುಗಳಾಗಲೀ ಇನ್ನೊಂದು ಇಪ್ಪತೈದು ವರ್ಷಗಳಲ್ಲಿ ಏನೇನು ಬೆಳೆಯುತ್ತವೋ ಎಂದು ಯೋಚಿಸಿಕೊಂಡಂತೆಲ್ಲ ಸೈನ್ಸ್ ಫಿಕ್ಷನ್ ಮೂವಿಯೊಂದು ತಲೆಯಲ್ಲಿ ಅನ್‌ವೈಂಡ್ ಆಗತೊಡಗಿತು, ಮೊಬೈಲು ಡಿವೈಸುಗಳಲ್ಲಿ ಟೆರ್ರಾಬೈಟುಗಳ ಸಾಗಣೆಯ ವ್ಯವಸ್ಥೆ ಬರುವ ಕಾಲ ದೂರವೇನೂ ಇಲ್ಲ!

ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಇ-ಮೇಲ್ ಅನ್ನು ದಿನನಿತ್ಯವೂ ಬಳಸೀ ಬಳಸೀ ನನಗೆ ಬೇಕಾದ ಮೆಸ್ಸೇಜುಗಳನ್ನೆಲ್ಲ (ಅಂದರೆ ಎಲ್ಲ ಇ-ಮೇಲುಗಳನ್ನೂ) ಒಂದಲ್ಲ ಒಂದು ಫಾರ್ಮ್/ಡಿವೈಸಿನಲ್ಲಿಡಲು ಪ್ರಯತ್ನಿಸಿ ನಾನಂತೂ ಸೋತು ಹೋಗುತ್ತಿದ್ದೇನೆ ಎನ್ನಿಸಿತು. ಪ್ರತಿ ಆರು ತಿಂಗಳಿಗೊಮ್ಮೆ ಫೈಲು, ಮೆಸ್ಸೇಜುಗಳನ್ನೆಲ್ಲ ಆರ್ಕೈವ್ ಮಾಡಿಡುವುದು ಜಾಣ ಪದ್ದತಿಯಾಗಿತ್ತು, ಈಗ ಅದು ಉಲ್ಬಣವಾಗದ ರೋಗವಾಗಿದೆ. ಅಷ್ಟೂ ಮಾಡಿ ೧೯೯೭ ರಿಂದ ಉಳಿಸಿಕೊಂಡ ಮೆಸ್ಸೇಜುಗಳನ್ನು ಒಮ್ಮೆಯೂ ನೋಡಿರದಿದ್ದರೂ ಇಟ್ಟುಕೊಂಡಿರಬೇಕೇಕೆ ಎನ್ನುವುದು ಒಂದು ಬಣದ ವಾದ, ಇವತ್ತಲ್ಲ ನಾಳೆ ಬೇಕಾದೀತು ಇರಲಿ ಎನ್ನುವುದು ಮತ್ತೊಂದು ಬಣದ ಆಚರಣೆ.

ನನಗೆ ಕಂಡದ್ದೆಲ್ಲವನ್ನು ಉಳಿಸುವ ಖಾಯಿಲೆ ಆರಂಭವಾದದ್ದು ೨೦೦೦ ದ ಇಸ್ವಿಯ ಹೊತ್ತಿಗೆ Y2K ಜ್ವರ ಬಂದು ಅಮೇರಿಕನ್ ಕಂಪನಿಗಳು ನಲುಗುವ ಸಮಯದಲ್ಲೇ ಎಂದರೆ ತಪ್ಪಾಗಲಾರದು. ಅದು ಹೀಗೇ ಒಂದು ಮಾಮೂಲಿ ಡಿಸೆಂಬರ್ ೩೧ ರ ದಿನವಾಗಿರಲಿ, ಆಗಬಹುದು ಎನ್ನುವುದು ಆಗ ಒಂದು ಉತ್ಸಾಹಬರಿತ ನಿರೀಕ್ಷೆ ಆಗಿತ್ತು ಎಂದರೆ ತಪ್ಪಲ್ಲ. ನ್ಯೂ ಝೀಲ್ಯಾಂಡಿನಿಂದ ಹಿಡಿದು ಯೂರೋಪಿನವರೆಗೆ ಎಲ್ಲ ದೇಶದವರೂ ಹೊಸ ವರ್ಷವನ್ನು ಆಚರಿಸಿಕೊಂಡು ಬಂದರೂ ಅಮೇರಿಕದ ಈಸ್ಟ್ ಕೋಸ್ಟ್‌ನಲ್ಲಿ ರಾತ್ರಿ ಹನ್ನೆರಡು ಬಜಾಯಿಸುವವರೆಗೆ ತದನಂತರದ ಕೆಲವು ಘಂಟೆಗಳವರೆಗೆ ಇಲ್ಲಿನ ಕಾರ್ಪೋರೇಟ್ ವ್ಯವಸ್ಥೆ ನಿದ್ರೆ ಮಾಡಿದ್ದೇ ಇಲ್ಲ. ಕಂಪನಿಯ ಮೇಲ್ ರೂಮಿನಿಂದ ಹಿಡಿದು ಸಿಇಓ ವರೆಗೆ ಎಲ್ಲರೂ ಹೊಸ ವರ್ಷದ ನಿರೀಕ್ಷೆಯಲ್ಲಿದ್ದವರೇ, ಆದರೆ ಆ ನಿರೀಕ್ಷೆಯ ಕಣ್ಣುಗಳಲ್ಲಿ ಕುತೂಹಲದ ಜೊತೆಗೆ ಚಿಂತೆಯೂ ಮನೆಮಾಡಿತ್ತು ಎಂದರೆ ತಪ್ಪಲ್ಲ. ಪಾಪ, ಹಗಲೂ-ರಾತ್ರಿ ದುಡಿದ ಪ್ರಾಜೆಕ್ಟ್ ಟೀಮುಗಳು ಹೆಚ್ಚಿನ ವ್ಯವಸ್ಥೆಯನ್ನು ಸುಗಮವಾಗಿಸುವಲ್ಲಿ ಪಟ್ಟ ಕಷ್ಟ ಬಹಳಷ್ಟು ಕೆಲಸ ಮಾಡಿತ್ತು. ಮನುಕುಲ ಕಂಪ್ಯೂಟರ್ ಸಿಸ್ಟಮ್ ಮೇಲೆ ಅವಲಂಭಿತವಾದ ಒಂದು ದೊಡ್ಡ ಸಂಬಂಧಕ್ಕೆ ಹಾಗೂ ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಸವಾಲಾಗಿದ್ದ ಆ ರಾತ್ರಿಯೂ ಬಂದಿತು, ಮತ್ತೆ ಅದು ಹೋಗಿ ಈಗ ಏಳು ವರ್ಷಗಳು ಮುಗಿಯುತ್ತಾ ಬಂತು.

ಒಂದು ಕಾಲದಲ್ಲಿ ಸರಳವಾಗಿದ್ದ ಡಾಸ್ ವ್ಯವಸ್ಥೆ ಈಗಿಲ್ಲ, ಈಗೇನಿದ್ದರೂ ಪ್ರಭಲವಾದ ವಿಸ್ತಾದಂತಹ ಕಾರ್ಯಾಚರಣ ವ್ಯವಸ್ಥೆ. ದೊಡ್ಡ ಮನುಷ್ಯರ ಸಹವಾಸದಲ್ಲೆಲ್ಲ ದೊಡ್ಡವು ಎನ್ನುವ ಹಾಗೆ ಒಂದೇ ರೀತಿಯ ಫೈಲ್‌ (ಸ್ಪ್ರೆಡ್‌ಶೀಟ್) ಅನ್ನು ಮೈಕ್ರೋಸಾಫ್ಟಿನ ಎರಡು ಎಕ್ಸೆಲ್ ವರ್ಷನ್‌ಗಳಲ್ಲಿ ಸೇವ್ (ಉಳಿಸಿ) ಮಾಡಿದರೆ ಅದರ ಸೈಜ್‌ನಲ್ಲಿ ಹೆಚ್ಚಿನ ವ್ಯತ್ಯಾಸ. ನನ್ನ ಬಳಿ ಇರೋ ಆಫೀಸ್ ೨೦೦೩ ರ ಫೈಲುಗಳಿಗೂ ಅವೇ ಆಫೀಸ್ ೨೦೦೭ ರಲ್ಲಿ ಉಳಿಸಿದ ಫೈಲುಗಳಿಗೂ ಕನ್ಸಿಡರೆಬಲ್ ವ್ಯತ್ಯಾಸವಿದೆ ಫೈಲ್ ಸೈಜ್‌ನಲ್ಲಿ ಎಂದರೆ ನಂಬಲಾಗದು. ದಿನೇ ದಿನೇ ಟೆಕ್ನಾಲಜಿ ಹೆಚ್ಚಿದಂತೆ ನನ್ನ ಕೆಲಸದ ಅಗತ್ಯಗಳಲ್ಲಿ ಬರೀ ಇ-ಮೇಲ್ ಓದುವುದು, ಬರೆಯುವುದನ್ನು ಬಿಟ್ಟರೆ ಉಳಿದ ಅಪ್ಲಿಕೇಶನ್ನು ಗಳನ್ನು ಹೆಚ್ಚು ಕಲಿಯುವುದಾಗಲೀ ಬಳಸುವುದಾಗಲೀ ನಿಂತೇ ಹೋಗಿರುವಾಗ ಫೈಲ್ ಹಾಗೂ ಇ-ಮೇಲ್ ಮ್ಯಾನೇಜ್‌ಮೆಂಟೇ ಬದುಕಾಗಿ ಹೋಗಿದೆ. ಆಶ್ಚರ್ಯವೆನ್ನುವಂತೆ ಒಂದು ಕಾಲದಲ್ಲಿ ಚೆನ್ನಾಗೇ ಓಡುತ್ತಿದ್ದ ಹಳೆಯ ಕಂಪ್ಯೂಟರ್ ಈಗ ಯಾವುದೋ ತಗಡು ಡಬ್ಬವಾಗಿ ಕಂಡುಬರುತ್ತಿರೋದು.

ಹಾರ್ಡ್ ಡಿಸ್ಕೇ ಇಲ್ಲದ ಕಂಪ್ಯೂಟರುಗಳಿಂದ ಹಿಡಿದು ಐವತ್ತು MB ಹಾರ್ಡ್‌ಡಿಸ್ಕ್ ಇರುವ ಪರ್ಸನಲ್ ಕಂಪ್ಯೂಟರ್ ಅನ್ನು ಬಳಸಿದವರಿಗೆ ಇಂದಿನ ಟೆರ್ರಾಬೈಟುಗಳನ್ನು ನೋಡಿ ಏನನಿಸುತ್ತೋ ಏನೋ. ಹಾಗಾದರೆ ನಮ್ಮ ಬದುಕಿನಲ್ಲಿ ಅಷ್ಟೊಂದು ಬದಲಾವಣೆಗಳಾಗಿವೆಯೇ? ಉದಾಹರಣೆಗೆ ಒಂದು ಕಾಲದಲ್ಲಿ ಒಂದು ಮೆಗಾಪಿಕ್ಸೆಲ್ ಕ್ಯಾಮರಾಗಳನ್ನು ಬಳಸಿ ಚಿತ್ರ ತೆಗೆಯುತ್ತಿದ್ದ ಫೋಟೋಗ್ರಾಫರುಗಳು ಇಂದಿನ ಹತ್ತು ಮೆಗಾಪಿಕ್ಸೆಲ್ ಕ್ಯಾಮಾರಾದಲ್ಲಿ ಅಂತಹದನ್ನೇನು ಅಚೀವ್ ಮಾಡುತ್ತಿದ್ದಾರೆ ಎನ್ನುವುದು ನನ್ನಲ್ಲಿನ ಗೊಂದಲ. ನಾನು ಚಿತ್ರವನ್ನು ಪ್ರಿಂಟ್ ಮಾಡಿದರೂ 8X10 ಸೈಜ್ ಬಿಟ್ಟು ಬೇರೆ ಸೈಜ್ ನಲ್ಲಿ ಪ್ರಿಂಟ್ ಹಾಕಿಸಿಲ್ಲ, ಅಂದ ಹಾಗೆ ಮೊದಲೆಲ್ಲ ಫಿಲ್ಮ್ ರೀಲುಗಳನ್ನು ಸಂಸ್ಕರಿಸುತ್ತಿದ್ದ ನಮಗೆ ಎಷ್ಟು ಮೆಗಾಪಿಕ್ಸೆಲ್ಲುಗಳು ಸಿಗುತ್ತಿದ್ದವು, ಇಂದಿನ ಡಿಜಿಟಲ್ ಯುಗದ ಚಿತ್ರಗಳು ಯಾವ ರೀತಿ ಭಿನ್ನ? ನನ್ನ ಸಹೋದ್ಯೋಗಿ ತನ್ನ ಆಫೀಸಿನಲ್ಲಿ ತನಗೆ ಬೇಕಾದ ಹಲವಾರು ಚಿತ್ರಗಳನ್ನು ಪ್ರಿಂಟ್‌ಹಾಕಿಸಿ ಇಟ್ಟುಕೊಂಡಿದ್ದಾನೆ, ಆತನ ಪ್ರಕಾರ ಸಾವಿರಾರು ಚಿತ್ರಗಳನ್ನು ತೆಗೆದರೆ ಒಂದಿಷ್ಟು ಚಿತ್ರಗಳು ಚೆನ್ನಾಗಿ ಬರುತ್ತವೆ, ಹಾಗಿದ್ದ ಮೇಲೆ ಇಂದಿನ ಡಿಜಿಟಲ್ ಯುಗದ ಕ್ಯಾಮೆರಾಗಳು ಟ್ರೈಯಲ್-ಎಂಡ್-ಎರರ್ ಮೆಥೆಡ್ಡುಗಳನ್ನು ಪುರಸ್ಕರಿಸುತ್ತವೆಯೆಂದು ಅರ್ಥವೇ? ಒಂದು ಕಾಲದಲ್ಲಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತಿದ್ದವರು, ಇಂದು ಅನೇಕ ಮೆಗಾಬೈಟುಗಳಲ್ಲಿ ನಮ್ಮನ್ನು ಅವಿಷ್ಕರಿಸಿಕೊಳ್ಳುತ್ತಿದ್ದೇವಷ್ಟೇ. ಆದರೆ, ಇತ್ತೀಚೆಗೆ ಬಳಕೆಗೆ ಬಂದಿರುವ HD ವಿಡಿಯೋ ಕಾರ್ಯಕ್ರಮಗಳನ್ನು ನೋಡಿದವರಿಗೆ ಗೊತ್ತು, ಸೆಕೆಂಡಿಗೆ 13.5 ರಿಂದ 19.8 (ಕಡಿಮೆ ಎಂದರೆ 13.5) ಮೆಗಾಬೈಟುಗಳನ್ನು ಹೊತ್ತು ತರುವ ಕಮ್ಮೂನಿಕೇಷನ್ ಮಾಧ್ಯಮ, ಅಲ್ಲಿನ ಚಿತ್ರ, ಸೌಂಡಿನ ಕ್ಲಾರಿಟಿಗೆ ಎಂಥವರ ಮನಸೋತು ಹೋಗೋದು ಖಂಡಿತ. ಸ್ಟ್ಯಾಂಡರ್ಡ್ ಡೆಫಿನಿಷನ್ನ್‌ನಲ್ಲಿ (ಸೆಕೆಂಡಿಗೆ 1.2 ಇಂದ 3.8 ಮೆಗಾಬೈಟುಗಳನ್ನು ಭಿತ್ತರಿಸುವ ಕಾರ್ಯಕ್ರಮಗಳು) ನೋಡುವ ಕಾರ್ಯಕ್ರಮಗಳು ಸೆಪ್ಪೆ ಎನಿಸೋದು ನಿಜ. ಎಲ್ಲ ಕಾರ್ಯಕ್ರಮಗಳೂ ಹೈ ಡಿಫನಿಷನ್ನಲ್ಲಿರೋದೇನೂ ಬೇಕಾಗಿಲ್ಲ, ಆದರೆ ಕೆಲವೊಂದು ಡಿಸ್ಕವರಿ ಕಾರ್ಯಕ್ರಮಗಳು, ಆಟೋಟಗಳನ್ನು ಹೈ ಡೆಫನಿಷನ್ನಿನ್ನಲ್ಲಿ ನೋಡಿದಾಗ ಅದರ ಅನುಭವವೇ ಬೇರೆ.

ತಂತ್ರಜ್ಞಾನ ಬದಲಾಗುತ್ತದೆ, ಆದರೆ ನಾವು? ನಾವು ಬದಲಾಗದಿದ್ದರೆ ಉಳಿಗಾಲವಿಲ್ಲ ಎನ್ನುವಂತಾಗಿದೆ, ವೈಯಕ್ತಿಕವಾಗಲ್ಲದಿದ್ದರೂ ಆಫೀಸಿನ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ, ಇಲ್ಲವೆಂದರೆ ಬದಲಾವಣೆಗಳನ್ನು ಎದುರಿಸಿ ಸೋತ ಹಣೆಪಟ್ಟಿ ನಮ್ಮನ್ನು ಅಂಟಿಕೊಂಡು ಬಿಡುತ್ತದೆ.

ಈಗಾಗಲೇ ನ್ಯೂ ಝೀಲ್ಯಾಂಡಿನವರು ಹೊಸವರ್ಷವನ್ನು ಆಚರಿಸಿ ನಾಳೆ ಇರುವುದನ್ನು ಸಾಭೀತುಪಡಿಸಿದ್ದಾರಾದ್ದರಿಂದ ನನಗೆ ನಾಳೆಯ ಬಗ್ಗೆ ಚಿಂತೆ ಇಲ್ಲವೇ ಇಲ್ಲ. ಬೇಡವೆಂದರೂ ಬರುವ ನಾಳೆಗಳು ಎಂದು ಭವಿಷ್ಯವನ್ನು ಸೂಚಿಸುವ ವಿಚಾರ ನಿಜ - ಈ ಕೆಳಗಿನ ನೈಜ ಘಟನೆಯನ್ನು ನೋಡಿ:
ನನ್ನ ಸಹೋದ್ಯೋಗಿ ಮೈಕಲ್ ತನ್ನ ಐದು ವರ್ಷದ ಮಗಳನ್ನು ನಿದ್ರೆ ಮಾಡಿಸುವಾಗ, ’ಹನಿ, ನೀನು ಕಣ್ಣು ಮುಚ್ಚಿ ಮಲಗಿಕೋ, ಕಣ್ಣು ಬಿಟ್ಟು ನೋಡುವಾಗ ನಾಳೆಯಾಗುತ್ತದೆ’ ಎಂದನಂತೆ. ಮಗಳು ಮರುದಿನ ಎದ್ದು ತಂದೆಯನ್ನು ಕೇಳಿದಳಂತೆ, ’ಡ್ಯಾಡೀ, is it tomorrow now?'
ಮೈಕಲ್, ’No, it is not tomorrow, it is Today!'
ಮಗಳು, ’then you lied to me! you said when I wake up it will be tomorrow, where is it?!'

***

Happy New Year everyone!
(I think I have given up...)

December 07, 2006 ರ ಬರಹ, ಸೂರ್ಯ-ಚಂದ್ರರ ನೆರಳಿನಲಿ ಇಂದ ಆಯ್ದುಕೊಂಡಿದ್ದು...

'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.

Saturday, December 29, 2007

ಕ್ರಿಸ್‌ಮಸ್ ಲೈಟೂ ಕ್ಲೀನ್ ಶೇವನ್ ಡ್ಯಾಡೂ...

೨೦೦೧ ನೇ ಸೆಪ್ಟೆಂಬರ್ ಹೊತ್ತಿಗೆ ನಾವಿನ್ನೂ ವಾಷಿಂಗ್ಟನ್ ಡಿಸಿ ಪ್ರಾಂತ್ಯದ ಹತ್ತಿರವೇ ಇದ್ದೆವು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಿಂದ ಡಿಸಿಯ ಜಾರ್ಜ್‌ಟೌನ್ ಯೂನಿವರ್ಸಿಟಿಗೆ ರೆಫೆರೆನ್ಸ್ ಪುಸ್ತಕಗಳಿಗೆಂದು ಹೋಗುತ್ತಿದ್ದ ನಮಗೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಮ್ ಯುವಕ ಯಾವಾಗಲೂ ಕಣ್ಣಿಗೆ ಬೀಳುತ್ತಿದ್ದ. ಈತ ನಮಗೆ ಬೇಕಾದಷ್ಟು ಸಲ ನಾವು ಡಿಸಿ ಗೆ ಹೋಗುವ ಟ್ರೈನ್‌ನಲ್ಲಿ ಸಿಕ್ಕಿದ್ದೂ ಇದೆ. ಅಮೇರಿಕಾದ ಮೇಲೆ ಸೆಪ್ಟೆಂಬರ್ ೧೧ರ ಭಯೋತ್ಪಾದಕರ ಧಾಳಿ ನಡೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ಹೇಟ್‌ಕ್ರೈಮ್‌ಗಳ ಬಗ್ಗೆ ವರದಿಗಳು ಬರುತ್ತಿದ್ದು, ಸ್ಥಳೀಯರ ಹಾಗೆ ಎಷ್ಟೋ ಜನ ಭಾರತ ಅಥವಾ ಇತರೆ ದೇಶದ ಮೂಲದಿಂದ ಬಂದವರು ತಮ್ಮ ತಮ್ಮ ಕಾರು ಮನೆಯ ಮುಂದೆ ಅಮೇರಿಕನ್ ಧ್ವಜವನ್ನು ಹಾಕಿಕೊಳ್ಳುತ್ತಿದ್ದುದೂ ಕಂಡು ಬರುತ್ತಿದ್ದವು. ಸ್ಥಳೀಯರು ಸಾಲಿಡ್ಯಾರಿಟಿಗೆಂದು ಅಮೇರಿಕ ಧ್ವಜಗಳನ್ನು ತಮ್ಮ ಕಾರಿಗೆ ತಗುಲಿಸಿಕೊಂಡಿದ್ದರೆ ವಲಸೆ ಬಂದವರು ಹಲವಾರು ಕಾರಣಗಳಿಗೆ ಆ ರೀತಿ ತೋರಿಸಿಕೊಳ್ಳುತ್ತಿದ್ದುದು ಎದ್ದು ಕಾಣುತ್ತಿತ್ತು. ಯಾರೇ ತಮ್ಮ ತಮ್ಮ ಸ್ವರೂಪಗಳಲ್ಲಿ ಅದೇನೇ ಬದಲಾವಣೆಗಳನ್ನು ಮಾಡಿಕೊಂಡರೂ ಈ ಲೈಬ್ರರಿಯಲ್ಲಿ ಕೆಲಸ ಮಾಡುವ ಯುವಕ - ಆರು ಅಡಿಗಿಂತಲೂ ಎತ್ತರದ ನಿಲುವು, ಉದ್ದನೆಯ ಗಡ್ದದಾರಿ, ಯಾವಾಗಲೂ ಬಿಳಿ ನಿಲುವಂಗಿ (ಕುರ್ತಾ) ಧರಿಸಿರುವ, ಅವನದ್ದೇ ಆದ ಆಳವಾದ ಶುಭ್ರ ಕಣ್ಣುಗಳಲ್ಲಿ ಅದಮ್ಯ ಶಾಂತಿಯನ್ನು ಅಡಗಿಸಿಕೊಂಡು - ತಾನಾಯಿತು ತನ್ನ ಕೆಲಸವಾಯಿತು ಎಂದು ಬಾಹ್ಯ ನೋಟಕ್ಕೆ ನಿರ್ಲಿಪ್ತವಾಗಿದ್ದುದು ನನಗಂತೂ ಬಹಳ ಆಶ್ಚರ್ಯವನ್ನುಂಟುಮಾಡಿತ್ತು. ಆಗಷ್ಟೇ ಮಾಧ್ಯಮಗಳಲ್ಲಿ ತೋರಿಸುತ್ತಿದ್ದ ಬಿನ್ ಲಾಡೆನ್ ಚಿತ್ರಗಳಿಗೂ ಈ ಯುವಕನ ಗುರುತಿಗೂ ಬಹಳಷ್ಟು ಸಾಮ್ಯತೆಗಳಿದ್ದವು. ಅಪರೂಪಕ್ಕೆ ಟ್ರೈನ್‌ನಲ್ಲಿ ಸಿಕ್ಕುವ ಈತನನ್ನು ಸುತ್ತಲಿನ ಜನರು ಕಣ್ಣಿಟ್ಟು ನೋಡುವುದನ್ನು ನೋಡಿ ನನಗೇ ಮುಜುಗರವಾಗುತ್ತಿತ್ತು. ತನ್ನ ಸುತ್ತ ಮುತ್ತಲು ಅದೆಷ್ಟೇ ಕೋಲಾಹಲ ನಡೆದುಕೊಂಡಿದ್ದರೂ ಈತ ತನ್ನತನವನ್ನು ಬಿಡದೇ ಸಹಜವಾಗಿದ್ದುದು ನನಗೆ ಇಂದಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ ಜೊತೆಗೆ ಆತನ ಮೇಲಿನ ಅಭಿಮಾನವೂ ಹೆಚ್ಚುತ್ತದೆ.

***

ನಾವು ಜರ್ಸಿ ಸಿಟಿಯಿಂದ ಪ್ಲಾಂಡರ್ಸ್‌ಗೆ ಬಂದ ವರ್ಷ ಇದು. ನಾವಿರುವ ಮನೆಯ ಮೂಲ ಓನರ್ ಕ್ರಿಸ್‌ಮಸ್ ಸಮಯದಲ್ಲಿ ಬಹಳ ಚೆನ್ನಾಗಿ ಮನೆಯ ಹೊರಗೆ ಮತ್ತು ಒಳಗೆ ಲೈಟ್ ಹಾಕಿ ಅಲಂಕಾರ ಮಾಡಿರುತ್ತಿದ್ದರಂತೆ. ನಮಗೆ ಗೊತ್ತಿರುವ ಎಷ್ಟೋ ಜನ ಸ್ಥಳೀಯರು - ’ನೀವು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡುವುದಿಲ್ಲವೇ?’, ’ಹಿಂದಿನವರು ಚೆನ್ನಾಗಿ ಲೈಟ್ ಅಲಂಕಾರ ಮಾಡಿರುತ್ತಿದ್ದರು!’ ಎನ್ನುವ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಥ್ಯಾಂಕ್ಸ್‌ಗಿವಿಂಗ್ ಗಿಂತಲೂ ಮುಂಚೆಯೇ ಬರುವ ದೀಪಾವಳಿ ಸಂದರ್ಭದಲ್ಲಿ ನಾವು ಹೊರಗಡೆ ಹೊತ್ತಿಸಿದ ಲೈಟ್, ದೀಪಗಳನ್ನು ಪ್ರಶ್ನಿಸಿಯೂ ಇದ್ದಾರೆ. ನಮ್ಮ ನಂಬಿಕೆ ಸಂಪ್ರದಾಯಗಳ ಪ್ರಕಾರ ನಾವು ನಮ್ಮ ನಮ್ಮ ಹಬ್ಬ ಹರಿದಿನಗಳಿಗೆ ಬೇಕಾದ ಅಲಂಕಾರ ಮಾಡುವುದು ನಮಗೆ ಸೇರಿದ್ದು, ಜೊತೆಗೆ ನಮ್ಮ ನೆರೆಹೊರೆಯ ಆಚಾರ-ವಿಚಾರಗಳಿಗೆ ತಕ್ಕಂತೆ ಸ್ಪಂದಿಸಬೇಕಾದದ್ದೂ ನಮ್ಮ ಕರ್ತವ್ಯಗಳಲ್ಲೊಂದು ಎಂದು ನಂಬಿ ಥ್ಯಾಂಕ್ಸ್‌ಗಿವಿಂಗ್‌ನಿಂದ ಇಂದಿನವರೆಗೂ ಹೊರಗಡೆ ದೀಪಾಲಂಕಾರವನ್ನು ಮಾಡಿ ಅದನ್ನು ಉರಿಸಿಕೊಂಡೇ ಬಂದಿದ್ದೇವೆ. ಹಿಂದಿನ ಮನೆಯ ಮಾಲಿಕನಿಗೆ ಹೋಲಿಸಿದರೆ ನಮ್ಮ ಅಲಂಕಾರವೇನೂ ಇರಲಾರದು, ನಾವು ಕ್ರಿಸ್‌ಮಸ್ ಟ್ರೀ ಅನ್ನೂ ಇಟ್ಟಿಲ್ಲ ಆದರೆ ನಮ್ಮ ಕೈಲಾದಂತೆ ಸುತ್ತಲಿನವರಲ್ಲಿ ಒಂದಾಗಿ ಇರುವ ಪ್ರಯತ್ನವಷ್ಟೇ.

***

ನಮ್ಮ ಆಫೀಸಿನಲ್ಲಾಗಲೀ ಅಥವಾ ಹೊರಗಡೆ ಮತ್ತಿನ್ನೆಲ್ಲಾದರೂ ಸರದಾರ್‌ಜೀ ಗಳನ್ನು ನೋಡಿದಾಗ ಅವರ ಮೇಲೆ ಪ್ರಶಂಸೆಯೂ ಹಾಗೂ ಹಲವಾರು ಪ್ರಶ್ನೆಗಳು ಮನದಲ್ಲೇಳುತ್ತವೆ. ನಿಜವಾಗಿಯೂ ಪಗಡಿ ಧಾರಣೆ ಮಾಡಿರುವ ಮೀಸೆ-ಗಡ್ಡ-ತಲೆ ಕೂದಲನ್ನು ಹುಟ್ಟಿದಂದಿನಿಂದ ಬೋಳಿಸದಿರುವ ಇವರನ್ನು ತಮ್ಮ ಸಂಪ್ರದಾಯ ಹಾಗೂ ತಮ್ಮ ನೆರೆಹೊರೆ ಇವುಗಳ ನಡುವೆ ತೂಗಿ ನೋಡಿದಾಗ ದೈಹಿಕವಾಗಿ ಕೂದಲನ್ನು ಬೆಳೆಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಧರಿಸಿಕೊಂಡಿರುವುದು ಹುಟ್ಟಿದಂದಿನಿಂದ ಬಂದ ಅಭ್ಯಾಸವಾದರೂ ನಾವಿರುವ ನೆರೆಹೊರೆಯಲ್ಲಿ ’ಕ್ಲೀನ್‌ಶೇವನ್‍’ ಜನರಿಗೆ ಸಿಗುವ ಪ್ರಾಶಸ್ತ್ಯಗಳನ್ನು ನೋಡಿದಾಗ ಹಲವಾರು ರೀತಿಯಲ್ಲಿ ತರ್ಕಿಸಬಹುದು. ವಾಷಿಂಗ್ಟನ್ ಡಿಸಿಯ ಲೈಬ್ರರಿ ನೌಕರನಾಗಲೀ, ಅನ್‌ಶೇವನ್ ಸರ್ದಾರ್‌ಜೀಗಳಾಗಲೀ ನಿಜವಾಗಿಯೂ ತಮ್ಮ ಪರಂಪರೆಯನ್ನು ಪ್ರತಿಕ್ಷಣವೂ ಹೊತ್ತುಕೊಂಡೇ ತಿರುಗುತ್ತಾರೆ ಅನ್ನಿಸೋದಿಲ್ಲವೇ?

ನಾವು ಕಂಡ ನಮ್ಮ ದಕ್ಷಿಣ ಭಾರತದ ಆಚರಣೆ/ವಿಧಿಗಳ ಪ್ರಕಾರ ನಮ್ಮಲ್ಲಿನ ಗಂಡಸರು ಮುಖದ ಮೇಲೆ ಮೀಸೆಯೊಂದನ್ನು ಇಟ್ಟುಕೊಳ್ಳುವುದು ಸಹಜ. ಮೀಸೆಯ ಹೊರತಾಗಿ ಗಡ್ಡವೇನಾದರೂ ಇದ್ದರೆ ಅದು ರೋಗಿಗಳ, ವೈರಾಗಿಗಳ, ಸೋಮಾರಿಗಳ ಹಾಗೂ ಬುದ್ಧಿಜೀವಿಗಳ ಸೂಚಕವಾಗಿತ್ತಷ್ಟೇ. ನಮ್ಮಲ್ಲಿನ ಯುವಕರನ್ನು ಅವರು ಎಂದಾದರೂ ಮೀಸೆಯನ್ನು ಬೋಳಿಸಿಕೊಂಡರೆ ಉತ್ತರ ಭಾರತದ ಅಥವಾ ಹಿಂದಿ ಸಿನಿಮಾಗಳ ಹೀರೋಗಳಿಗೆ ಹೋಲಿಸಿ ಜನರು ಛೇಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈಗಲೂ ಸಹ ಅಮೇರಿಕದಲ್ಲಿಯೂ ದಕ್ಷಿಣ ಭಾರತ ಮೂಲದ ಯುವಕರು ಮೀಸೆಯನ್ನು ಇಟ್ಟುಕೊಂಡಿರುವುದು ನಮ್ಮ ಕಣ್ಣಿಗೆ ಬೀಳುತ್ತದೆ, ಅದರ ಮತ್ಯಾವುದೇ ವೇರಿಯೇಷನ್ನುಗಳೂ ಸಹ ಉಳಿದ ಕಡೆಗಳಿಂದ ಅವರವರು ಪಡೆದ ಇನ್‌ಫ್ಲುಯೆನ್ಸ್‌ಗಳ ಮೇಲೆ ಅವಲಂಭಿತವಾರುತ್ತದೆ. ಭಿನ್ನ ಪ್ರಪಂಚ ಹಾಗೂ ಸಂಸ್ಕೃತಿಯ ಸಂಗಮದಲ್ಲಿ ಬೆಳೆಯುವ ನಮ್ಮ ಮುಂದಿನ ತಲೆಮಾರಿಗೆ ಅನ್ನಿಸಬಹುದು - ನಮ್ಮ ತಂದೆಯೂ ಇಲ್ಲಿಯವರ ಹಾಗೆ ಕ್ಲೀನ್ ಶೇವನ್ ಯಾಕಿರಬಾರದೆಂದು. ಬಾಹ್ಯವಾಗೇಳುವ ಅಂತಹ ಪ್ರಶ್ನೆಗಳಿಗೆ ನಮ್ಮ ಮುಖದ ಮೀಸೆ ಏಕಿದೆ ಎಂದು ಹಲವಾರು ರೀತಿಯ ವಿವರವನ್ನು ಕೊಡಬಹುದಾದರೂ ಮನದೊಳಗಿನ ವ್ಯಾಪಾರವನ್ನು ನಾವು ಯಾವತ್ತಿಗೂ ನಿಯಂತ್ರಿಸಲಾಗೋದೇ ಇಲ್ಲ.

***

ನಾನೂ ಒಂದು ಕ್ರಿಸ್‌ಮಸ್ ಟ್ರೀ ಅನ್ನು ಇಡಬಲ್ಲೆ, ಅದನ್ನು ವಿಧವಿಧವಾಗಿ ಅಲಂಕಾರ ಮಾಡಬಲ್ಲೆ, ಅದನ್ನು ದುಡ್ಡಿನಿಂದಲೇ ಮುಚ್ಚಬಲ್ಲೆ, ಅದರ ಕೆಳಗೆ ಗಿಫ್ಟ್‌ಗಳನ್ನು ಥರಥರವಾಗಿ ಪೇಪರ್‌ಗಳಿಂದ ರ್ಯಾಪ್ ಮಾಡಿ ಅದನ್ನು ಸ್ಯಾಂಟಾಕ್ಲಾಸ್ ಹೆಸರಿನಲ್ಲಿ ಮಕ್ಕಳಿಗೆ ಹಂಚಬಲ್ಲೆ. ಆದರಿಂದ ನಮ್ಮ ಮನೆಯ ಕ್ರಿಸ್‌ಮಸ್ ಟ್ರೀಗೂ ಡಿಪಾರ್ಟ್‌ಮೆಂಟ್ ಸ್ಟೋರ್ ಕ್ರಿಸ್‌ಮಸ್ ಟ್ರೀಗೂ ಏನು ವ್ಯತ್ಯಾಸ ಉಳಿಯಿತು? ನಮ್ಮ ಮನೆಯಲ್ಲಿ ಅಲಂಕೃತಗೊಂಡ ಟ್ರೀ ನೋಡಲು ಚೆನ್ನಾಗಿರಬಹುದು, ಆದರೆ ಅದರಲ್ಲಿ ಯಾವುದೇ ಪರಂಪರೆಯಿಲ್ಲ, ಸಂಪ್ರದಾಯವಿಲ್ಲ, ಹಿನ್ನೆಲೆಯಿಲ್ಲ. ಶಾಲೆಯಲ್ಲಿ ನಮ್ಮ ಮಕ್ಕಳನ್ನು ಅವರ ಸಹಪಾಠಿಗಳು ಕೇಳಿಯಾರು ಎಂಬ ಒಂದೇ ಕಾರಣಕ್ಕೆ, ನಾವು ನಮ್ಮ ನೆರೆಹೊರೆಯವರಲ್ಲಿ ಮಿಳಿತವಾಗಿ ಬದುಕಬೇಕು ಎಂಬುದಕ್ಕೆ ನಾವು ಇನ್ನೂ ಏನೇನನ್ನು ತ್ಯಾಗ ಮಾಡಬೇಕು, ಎಷ್ಟರ ಮಟ್ಟಿಗೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಅಮೇರಿಕದಲ್ಲೇ ಬೇಕಾದಷ್ಟು ಕಡೆ ಇರುವ ಭಾರತೀಯ ಮೂಲದ ಜನರು ಬೇಕಾದಷ್ಟು ಉತ್ತರಗಳನ್ನು ಕಂಡುಕೊಳ್ಳಬಹುದು. ನ್ಯೂ ಜೆರ್ಸಿ, ನ್ಯೂ ಯಾರ್ಕ್ ಅಂತ ಪ್ರದೇಶಗಳಲ್ಲಿ ಹೆಚ್ಚು ಜನರಿರುವ ದೇಸೀ ಸ್ಥಳಗಳಲ್ಲಿ ನಮ್ಮ ಆಚರಣೆಗಳಿಗೆ ಸಂವೇದನೆಗಳಿಗೆ ಆದ್ಯತೆ ಪ್ರಾಧಾನ್ಯತೆ ಸಿಕ್ಕರೆ ಅದೇ ಅಮೇರಿಕದ ಉಳಿದೆಡೆ ಹೆಚ್ಚು ಭಾರತೀಯರಿಲ್ಲದ ಕಡೆ ಅಂತಹ ಪ್ಲೆಕ್ಸಿಬಿಲಿಟಿ ಇರದೇ ಇರಬಹುದು. ನಾವೆಲ್ಲಿ ಹೋದರೂ ಅಲ್ಲಿಯವರಾಗಿರುವುದು ಒಂದು ರೀತಿಯ ಸೂಕ್ಷ್ಮ, ನಾವು ಭಿನ್ನರಾಗಿದ್ದುಕೊಂಡೇ ನಮ್ಮ ತನವನ್ನು ಬೆಳೆಸಿ ಪೋಷಿಸಿಕೊಂಡು ಹೋಗುವುದು ಮತ್ತೊಂದು ರೀತಿಯ ಅಗತ್ಯ.

ನಮ್ಮತನವೆನ್ನುವುದನ್ನು ನಾವು ಬಿಡುವುದೋ ಹಿಡಿದುಕೊಳ್ಳುವುದೋ ಎನ್ನುವುದು ಕೆಲವರಿಗೆ ಅನಿವಾರ್ಯತೆಯ ಪ್ರಶ್ನೆ, ಇನ್ನು ಕೆಲವರಿಗೆ ಅದು ಬದಲಾವಣೆಗಳ ಅಗತ್ಯ - ಬೇರೆಲ್ಲಿ ಹೇಗಾದರೂ ಇರಲಿ ನಮ್ಮ ಮನೆಯಲ್ಲಿನ ಅನ್-ಕ್ಲೀನ್‌ಶೇವನ್ ಡ್ಯಾಡ್ ಬದಲಾಗದಿದ್ದರೆ ಸಾಕು!

Thursday, December 27, 2007

ಮರೆಯಾದಳು ಭುಟ್ಟೋ

(photo source unknown)

ನಾಡಿನ ಕತ್ತಲೆ ಎಳೆಗಳು ಕಳೆದೇ ಹೋದವು
ಇನ್ನೇನು ಸುಂದರ ದಿನಗಳು ಬಂದೆ ಬಂದವು
ಸೂರ್ಯನು ಮುಳುಗಿ ಮರುದಿನ ಹುಟ್ಟೋ
ಮೊದಲೇ ಮರೆಯಾದಳು ಭುಟ್ಟೋ.

ಕಂಬಳಿ ಹುಳುವಿನ ಹಾಗೆ ಎಂಟು ವರ್ಷ
ಕೊರೆದು ತಿಂದ ಮನದಾಳದ ಬುತ್ತಿಯ ಹರ್ಷ
ಅರವತ್ತೊಂಭತ್ತು ದಿನದ ಬಣ್ಣದ ಹಾಯಿ
ಚಿಟ್ಟೆಯನ್ನ ಕೊಂದೇ ಬಿಟ್ಟರಲ್ಲ ತಾಯಿ.

ಅಪ್ಪ ತಮ್ಮಂದಿರ ಒಡಗೂಡಿ ಕಟ್ಟಿದ ಸೇನೆಗೆ
ಶೋಷಿತ ಜನರ ಸರ್ಕಾರವನು ಎತ್ತಿ ಬಾನಿಗೆ
ಸೇನಾಡಳಿತದ ವಿರೋಧವನೇ ಎದುರಿಸಿ
ಕೊನೆಗೆ ಎಲ್ಲರನ್ನೂ ಬಲಿಗೊಟ್ಟ ಕಸಿವಿಸಿ.

ಎರಡೆರಡು ಬಾರಿ ಅಧಿಕಾರ ಕಿತ್ತುಕೊಂಡೂ
ಕಾರಾಗೃಹ ವಾಸದ ನೋವ ನುಂಗಿಕೊಂಡೂ
ಸಗಣಿಯೊಳಗಿನ ಹುಳುಗಳ ಮೇಲುತ್ತುವ ತಾಯೆ
ಮತ್ತಾರಿಗೂ ಬರದು ನೀನೆಸೆಯುವ ಮಾಯೆ.

ನಿನ್ನ ಕನಸುಗಳ ನುಂಗಿ ನೀರು ಕುಡಿದ ನಾಡನ್ನು ಬಿಟ್ಟು
ಮುಂದಿನ ಜನುಮದಲ್ಲಾದರೂ ನಮ್ಮ ನಾಡಲ್ಲಿ ಹುಟ್ಟು.
***
October 18, 2007 ರಂದು ಪ್ರಕಟಿಸಿದ ಈ ಲೇಖನವನ್ನೂ ಓದಿ: ಭುಟ್ಟೋ ಬಂದಳು ಶಾಂತಿ ತಂದಳು!
...ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

Wednesday, December 26, 2007

...ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ

ನಾನು ಒಣದ್ರಾಕ್ಷಿ ಡಬ್ಬದ ಮುಚ್ಚಳ ತೆಗೆಯೋದಕ್ಕೂ ಅದರ ಒಳಗಿನಿಂದ ಮುಂದುವರೆಯುತ್ತಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಸರಿಯಾದ ಸಮಯ ಬಂದಿತ್ತು, ’...ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಅನಿವಾಸಿಗಳ ಥರ ಬರೀ ನಿಮ್ಮದೇ ರಾಗದ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ನಿ ಕಾರ್ಯಕ್ರಮ ಆರಂಭ ಮಾಡೋಣ’.

ಎಲಾ ಇವನಾ, ಅನಿವಾಸಿಗಳ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರ್ ಯಾರಪ್ಪಾ ಎಂದು ಬೆಳಕಿಗೆ ಡಬ್ಬವನು ಬಗ್ಗಿಸಿ ನೋಡಿದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೆಚ್ಚು ಮೋರೆಯ ದರ್ಶನ ಕೊಟ್ಟು ಕೊನೆಗೆ ದಿಢೀರನೆ ಗುಂಪಿನಲ್ಲಿ ಕರಗಿ ಹೋಗಿದ್ದ ಒಣದ್ರಾಕ್ಷಿದ್ವಯರು ಕಂಡು ಬಂದರು. ಸುಮಾರು ಇಪ್ಪತ್ತು ಉಳಿದ ದ್ರಾಕ್ಷಿಗಳನ್ನು ಒಂದೆಡೆ ಆಯೋಜಿಸಿ ಅದೇನೋ ’ಕಾರ್ಯಕ್ರಮ’ವನ್ನು ಆರಂಭಿಸುವ ಗುಂಗಿನಲ್ಲಿದ್ದವರು ಆ ಮಟ್ಟಿಗೆ ವ್ಯಸ್ತರಾಗಿ ಕಂಡುಬಂದುದು ನನಗೆ ಸ್ವಲ್ಪ ಖುಷಿ ತಂದಿತು. ಏನಿಲ್ಲವೆಂದರೂ ಈ ಹಿಂದಿನ ಅಳುಮೋರೆಗೆ ಉತ್ತರ ಕೊಡಬೇಕಾಗಿಲ್ಲವಲ್ಲ ಎಂದು ನನ್ನೊಳು ನಾನೇ ಹೇಳಿಕೊಂಡಿರುವಾಗ ನಾನು ಡಬ್ಬದ ಮುಚ್ಚಳ ತೆಗೆದ ಫಲವಾಗಿ ದಿಢೀರನೆ ಹೆಚ್ಚಿದ ಬೆಳಕನ್ನು ಕಂಡು ತಮ್ಮ ಕಾರ್ಯಕ್ರಮಕ್ಕೆ ಅದ್ಯಾರಪ್ಪಾ ಭಂಗ ತಂದವರು ಎಂದು ಹುಬ್ಬೇರಿಸುತ್ತಲೇ ನನ್ನತ್ತ ನೋಡಿದ ದ್ರಾಕ್ಷೀದ್ವಯರು, ’ಓಹ್, ಏನ್ಸಾರ್ ಬಾಳಾ ಅಪರೂಪ ಆಗಿದ್ದೀರಾ ಇತ್ತೀಚಿಗೆ!?’ ಎಂದು ಒಕ್ಕೊರಲಿನಿಂದಲೇ ತಮ್ಮ ಆಶ್ಚರ್ಯವನ್ನು ಸೂಚಿಸುತ್ತಲೇ ಪ್ರಶ್ನೆಯೊಂದನ್ನು ಎಸೆದವು.

ನಾನಿದ್ದೋನು, ’ಹೌದಲ್ವಾ, ಹೇಗಿದ್ದೀರಾ ಮತ್ತೆ? ಏನ್ಸಮಾಚಾರಾ, ಏನೋ ಗಡಿಬಿಡಿ ನಡೀತಾ ಇರೋ ಹಾಗಿದೆ?’ ಎಂದೆ.

ಆ ದ್ರಾಕ್ಷಿಗಳಲ್ಲಿ ಬಲಗಡೆ ಇದ್ದುದು ಉತ್ತರ ಕೊಡುವ ಹವಣಿಕೆ ಮಾಡುತ್ತಾ, ’ಹೀಗಿದೀವ್ ನೋಡಿ, ಸದ್ಯ ಕಳೆದ ಸರ್ತಿ ಡಬ್ಬ ಖಾಲಿ ಆದ ಹಾಗೆ ಈ ಸರ್ತಿ ಆಗ್ಲಿಲ್ಲವಲ್ಲಾ, ಒಂದಿಷ್ಟು ಜನ ಉಳಿದಿರೋದೇ ಹೆಚ್ಚು’ ಎಂದು ಸಿನಿಕತನದ ಹಾರಿಕೆ ಉತ್ತರಕೊಡುವ ಹೊತ್ತಿಗೆ ಅದರ ಜೊತೆಗಾರ, ’ಊರ್ ತುಂಬಾ ಎಷ್ಟ್ ಜನಾ ಬೇಕಾದ್ರೂ ಇರ್ಲಿ ನೋಡ್ರಿ ಕೊನೆಗೆ ನಮ್ ಕಾರ್ಯಕ್ರಮ ಅಂತಂದ್ರೆ ಇಷ್ಟೇ ಜನಾ ಬರೋದು!’ ಎಂದು ಅಸಮಧಾನವನ್ನು ವ್ಯಕ್ತಪಡಿಸಿತು.

ನಾನು, ’ಅದೇನೋ ಅನಿವಾಸಿಗಳ ಬಗ್ಗೆ ಹೇಳ್ತಾ ಇದ್ರಲ್ಲ, ಅವರುಗಳ ಬಗ್ಗೆ ನಿಮಗೇನ್ ಗೊತ್ತಿರೋದು?’ ಎಂದೆ ಕೆದಕಿ ನೋಡಿದ್ದಕ್ಕೆ,

ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಏನ್ ಹೇಳೋದೂ ಬಿಡೋದು ಗೊತ್ತಾಗದೇ ಒಂದು ಕ್ಷಣ ಅಮೇರಿಕಕ್ಕೆ ಬಂದ ಪ್ರವಾಸಿಯ ಹಾಗೆ ಗರ ಬಡೆದು ನಿಂತುಕೊಂಡವು, ಸ್ವಲ್ಪ ಸುಧಾರಿಸಿಕೊಂಡು ಬಲಗಡೆ ಇದ್ದ ದ್ರಾಕ್ಷಿ ಹೇಳಿತು, ’ನಮಗೇನ್ ಗೊತ್ತೂ ಸಾರ್, ನಾವ್ ನಮಗೆ ಕಂಡದ್ದು ಹೇಳಿದ್ವಿ ಅಷ್ಟೇ, ಅನಿವಾಸಿಗಳು ಯಾವಾಗ್ ನೋಡುದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ, ಒಂದ್ ರೀತಿ ಗಮ್ಮನ್ ಗುಸಕಗಳ ಥರಾ ಯಾವಾಗ್ ನೋಡುದ್ರೂ ಅವರದ್ದೇ ಅವರಿಗೆ ಅತಿಯಾಗಿ ಹೋಗಿರುತ್ತೇ, ತಮ್ಮದೇ ದೊಡ್ಡದು ಅನ್ನೋ ಥರಾ ಆಡೋ ಅಂತಾ ಸ್ವಾರ್ಥಿಗಳನ್ನು ನಾನು ಯಾವತ್ತೂ ನೋಡೇ ಇಲ್ಲ, ಅದಕ್ಕೇ ಹಂಗದ್ದದ್ದು!’ ಎಂದು ದೊಡ್ಡ ವಾಗ್ದಾಳಿಯೊಂದನ್ನು ಮಾಡಿ ಸುಮ್ಮನಾಯಿತು.

ಆ ದ್ರಾಕ್ಷಿ ಹೀಗೆಂದ ಕೂಡಲೇ ನಾನೇನ್ ಹೇಳೋದು ಅಂತ ತಲೆ ತುರಿಸಿಕೊಂಡ್ರೆ ಏನೂ ಹೋಳೀಲಿಲ್ಲ, ಮ್ಯಾನೇಜ್‌ಮೆಂಟ್ ಎಂಪ್ಲಾಯಿ ಹೇಳೋ ಹಾಗೆ, ’ಅದು ನಿಮ್ಮ ನಿಮ್ಮ ಅನಿಸಿಕೆ ಅಭಿಪ್ರಾಯ ಅದಕ್ಕೆ ನೀವೇ ಬಾಧ್ಯಸ್ಥರು...ಅದು ಸುಳ್ಳೋ ನಿಜಾನೋ ಅಂತ ಮಾತಾಡ್ತಾ ಹೋದ್ರೇ ದೊಡ್ಡ ವಾದಾನೇ ನಡೆದು ಹೋಗುತ್ತೆ, ಅದರ ಬದಲಿಗೆ ಅದನ್ನ ಅಲ್ಲಿಗೆ ಬಿಡೋದೇ ವಾಸಿ’ ಎಂದು ಹೇಳಿ ಕೈ ತೊಳೆದುಕೊಳ್ಳಲು ನೋಡಿದೆ.

ಆಗ ಎಡಗಡೆ ಇದ್ದ ದ್ರಾಕ್ಷಿ, ’ಅಲ್ರಿ, ಹೀಗೆ ಒಂದು ಸಮೂಹದ ಮೇಲೆ ನಾವ್ ಏನಾದ್ರೂ ಹೇಳ್ಲಿ ಅದನ್ನ ಅವರವರ ಅಭಿಪ್ರಾಯ ಅಂತ ಹೇಳಿಬಿಟ್ಟು ಸುಮ್ನೇ ಕೈ ತೊಳಕೊಳಕ್ಕೆ ನೋಡ್ತೀರಲ್ಲಾ, ನಿಮಗೆ ಕೆಚ್ಚು ಅಭಿಮಾನಾ ಅನ್ನೋದ್ ಸ್ವಲ್ಪಾನೂ ಇಲ್ವೇ ಮತ್ತೆ? ಏನು ಅದನ್ನೆಲ್ಲಾ ಬಂಡವಾಳಶಾಹಿ ವ್ಯವಸ್ಥೆಯ ಏಣಿಯ ಮೆಟ್ಟಿಲುಗಳಿಗೆ ಆಪೋಷನ ಕೊಟ್ಟೋರಂಗೆ ಆಡ್ತೀರಲ್ಲಾ, ನಿಮ್ಮಂತೋರುನ್ನಾ ನಮ್ಮೂರ್ನಲ್ಲಿ ಏನಂತಾ ಕರೀತಾರೆ ಗೊತ್ತಾ?...’ ಎಂದು ಸುಮ್ಮನಾಯಿತು.

ನಾನು, ’ಏನಂತ ಕರೀತಾರೆ?’ ಎಂದರೆ,

’ಬ್ಯಾಡಾ ಬಿಡಿ, ನಾನ್ಯಾಕೆ ಹೇಳಿ ನನ್ನ ಬಾಯನ್ನ ಹೊಲ್ಸು ಮಾಡ್ಕೊಳ್ಳೀ?’ ಎನ್ನುವ ಉತ್ತರ ದೊರೆಯಿತು, ಮತ್ತೆ ಮುಂದುವರೆಸುತ್ತಾ, ’ನಾವ್ ಹೆಂಗಾರೂ ಇರ್ಲಿ ನಮ್ಮನ್ನ ಯಾವಾನಾದ್ರೂ ಸ್ವಾರ್ಥಿ ನನಮಕ್ಳು ಅಂತ ಹೇಳಿದ್ದಿದ್ರೆ ಅವರನ್ನ ಒಂದ್ ಕೈ ನೋಡಿಕಂತಿದ್ವಿ, ಏನೋ?’ ಎಂದು ಪಕ್ಕದವನ ಪಕ್ಕೆಗೆ ತಿವಿಯಿತು.

ನಾನು, ’ಥೂ, ಇದೇನಪ್ಪಾ ಗ್ರಹಚಾರ’ ಎಂದು ಮನಸ್ಸಿನಲ್ಲೇ ಶಪಿಸಿಕೊಂಡೆ, ಶಾವಿಗೆ ಪಾಯಸ ಮಾಡೋದಕ್ಕೆ ಒಣದ್ರಾಕ್ಷಿ ಹಾಕೋಣ ಅಂತ ಮುಚ್ಚಳ ತೆಗೆದೋನಿಗೆ ಈ ಇಬ್ಬರ ಜೊತೆ ವಾದಾ ಮಾಡಿ ಮೈ ಮನಸ್ಸು ಕೆದರಿಕೊಳ್ಳೋ ಕಷ್ಟಾ ಯಾವನಿಗೆ ಬೇಕಿತ್ತು?

ನಾನು ಸುಮ್ಮನಿದ್ದುದನ್ನು ನೋಡಿ ಎಡಗಡೆ ಇದ್ದ ದ್ರಾಕ್ಷಿ ಬಲಗಡೆಯವನ ಕುರಿತು, ’ಏ ಬಿಡೋ, ಈ ಅನಿವಾಸಿಗಳನ್ನ ಯಾರು ಉದ್ದಾರ ಮಾಡಿದಾರೆ. ನಮ್ಮ ಕೆಲಸ ನೋಡೋಣ ನಡಿ, ಜನಗಳು ಕಾಯ್ತಾ ಇದಾರೆ ಕಾರ್ಯಕ್ರಮಾನಾದ್ರೂ ಶುರು ಮಾಡೋಣ’ ಎಂದು ಹೇಳುತ್ತ ಇನ್ನೇನು ಅಲ್ಲಿ ಮೂಲೆಯಲ್ಲಿ ಸೇರಿದ್ದ ಉಳಿದ ದ್ರಾಕ್ಷಿಗಳ ಕಡೆಗೆ ತಿರುಗಬೇಕು ಎನ್ನುವಾಗ ನಾನೆಂದೆ,

’ಅಲ್ರೋ, ಅನಿವಾಸಿಗಳನ್ನ ಕಂಡ್ರೆ ನಿಮಗ್ಯಾಕೆ ಅಷ್ಟೊಂದು ಹೊಟ್ಟೇಕಿಚ್ಚು? ಎಲ್ಲೋ ಒಂದು ದೃಷ್ಟಿಕೋನದಿಂದ ಅವರುಗಳನ್ನು ನೋಡಿರಬಹುದಾದ ನೀವು ಪ್ರಪಂಚವನ್ನೇ ತಿಳಿದುಕೊಂಡಿರೋ ತಿಕ್ಕಲುಗಳ ಥರಾ ಆಡೋದ್ ಯಾಕೆ? ಊರು-ಮನೇ-ದೇಶ ಬಿಟ್ಟು ಬಂದು ತಮ್ಮ್ ತಮ್ಮ ಕಷ್ಟದಲ್ಲಿ ಸಿಕ್ಕಿ ಒದ್ದಾಡ್ತಿರೋರನ್ನ ಪೂರ್ತಿ ಅರ್ಥ ಮಾಡಿಕೊಳ್ಳದೇ ಬರೀ ಅವರನ್ನ ದೊಡ್ಡ ಸ್ವಾರ್ಥಿಗಳು ಅಂತೀರಲ್ಲಾ ಇದು ಯಾವ ನ್ಯಾಯ?’ ಎಂದು ಮೂರ್ನಾಲ್ಕು ಪ್ರಶ್ನೆಗಳನ್ನ ಒಂದೇ ಉಸಿರಲ್ಲಿ ಕೇಳಿ ದಂಗುಬಡಿಸಿದೆ.

ಎಡಗಡೆ ದ್ರಾಕ್ಷಿಗೆ ನನ್ನ ಮಾತೇ ಕೇಳಿ ಸಿಟ್ಟೇ ಬಂದಿತು ಅಂತ ಕಾಣ್ಸುತ್ತೆ, ’ ಅವರವರ ತೆವಲಿಗೆ ಬಂದವರು ಅವರವರ ಕಷ್ಟಗಳನ್ನ ಅನುಭವಿಸಲೇ ಬೇಕಾದ್ ನ್ಯಾಯಾ ತಾನೆ? ಯಾವಾಗ್ ನೋಡಿದ್ರೂ ಸೆಲ್ಫ್ ಸೆಂಟರ್ಡ್ ಜನ ಅಂತ ಹೇಳ್ದೇ ಇನ್ನೇನ್ ಹೇಳೋಕ್ ಆಗುತ್ತೇ? ಒಂದ್ ದಿನಾನಾದ್ರೂ ಹೊರಗಿನ ಪ್ರಪಂಚದ ಬಗ್ಗೆ ಯೋಚ್ನೇ ಮಾಡಿ ಗೊತ್ತೇನ್ರೀ ಅವರಿಗೆ? ತಾವ್ ಆಡಿದ್ದೇ ಆಟ ತಾವ್ ಮಾಡಿದ್ದೇ ಮಾಟಾ ಅನ್ನೋ ಗುಂಗ್ನಲ್ಲಿ ತಮ್ಮಲ್ಲಿರೋ ಡಾಲರ್ರೂ-ಪೌಂಡೂ-ಯೂರೋಗಳನ್ನ ಝಳಪಿಸ್ತಾನೇ ನಮ್ಮಲ್ಲಿರೋ ರುಪಾಯಿ ಎಣಿಸೋ ಜನಗಳನ್ನ ಕೊಂದು ಬಿಟ್ಟಿರೋದು. ಕಷ್ಟಾ ಇರ್ಲಿ, ಸುಖಾ ಇರ್ಲಿ ಕಂಡಿದ್ದನ್ನೆಲ್ಲ ರೊಕ್ಕದಿಂದ ಕೊಳ್ತೀವಿ ಅನ್ನೋ ಮಾತು ಎಲ್ಲೀವರೆಗೆ ನಡೆಯುತ್ತೇ ನೀವೇ ಹೇಳಿ’ ಎಂದು ನನಗೇ ತಿರುಮಂತ್ರ ಹಾಕಲು ನೋಡಿತು.

ನಾನು, ’ಓಹ್, ಪ್ರತಿಯೊಂದೂ ದುಡ್ಡಿನ ಸುತ್ಲೂ ತಿರುಗುತ್ತೇ, ಅಲ್ವೇನು?’ ಅಂದು ಸುಮ್ಮನಾದೆ.

’ನೋಡಿ ನೋಡಿ, ನಮಗೇನೋ ಅರ್ಥ ಆಗದ ಹೀಗೆ ದೊಡ್ಡದೊಂದು ವಾಕ್ಯವನ್ನ ಮಧ್ಯೆ ಸೇರಿಸಿ ಏನೂ ಎಕ್ಸ್‌ಪ್ರೆಶ್ಶನ್ನೇ ಇಲ್ದಿರೋ ಮುಖವನ್ನ ಮಾಡೋ ಕಲೆ ಅನಿವಾಸಿಗಳಿಗಲ್ದೇ ಇನ್ಯಾರಿಗೆ ಬರುತ್ತೇ?’ ಎಂದು ಬಲಗಡೆ ದ್ರಾಕ್ಷಿ ಸೊಪ್ಪು ಹಾಕಿತು.

’ದುಡ್ದಿನ ವಿಷ್ಯಾ ಎತ್ತಿದೋನು ನಾನಂತೂ ಅಲ್ಲಾ!’ ಎಂದು ಒಂದು ಕ್ಷಣ ತಡೆದು, ’ನಿಮ್ಮಗಳಲ್ಲೇ ಅಡಗಿರೋ ಭಿನ್ನತೆ, ಭಿನ್ನಾಭಿಪ್ರಾಯದ ಮಸೂರದಲ್ಲಿ ಎಲ್ರುನ್ನೂ ನೋಡೋ ಹಾಗೆ ಅನಿವಾಸಿಗಳನ್ನೂ ನೋಡಿ, ಅದರಲ್ಲಿ ಕಾಣೋದೇನಿದ್ರೂ ನಿಮಗೆ ಹಳದಿಯೇ, ಕಾಮಾಲೆ ರೋಗ ನನಗಂತೂ ಬಂದಿಲ್ಲ’ ಎಂದು ಮತ್ತೆ ಸುಮ್ಮನಾದೆ.

ಎಡಗಡೆ ಇದ್ದ ದ್ರಾಕ್ಷಿಗೆ ಈಗಂತೂ ಸಿಟ್ಟೇ ಬಂದಿತು ಅಂತಾ ಕಾಣ್ಸುತ್ತೆ, ’ಬಾರಿ ಶಾಣ್ಯಾ ಇದೀರ್ ನೋಡ್ರಿ, ಅದೆಷ್ಟು ಬೇಗ ನಮ್ಮ ಆರ್ಗ್ಯುಮೆಂಟೇ ತೆಗೆದು ನಮ್ಮ ಮೇಲೇ ಗೂಬೇ ಕೂರಿಸಿ ತಮ್ಮನ್ನ ತಾವೇ ಸರಿ ಅಂತ ಸಾಧಿಸಿಕೊಳ್ಳೋ ನಿಮ್ಮಂತೋರಿಗೆಲ್ಲಾ ಒಂದ್ ಗತಿ ಕಾಣ್ಸದೇ ಇದ್ರೆ ನೋಡಿ ಮತ್ತೆ?’ ಎಂದು ಕತ್ತಿ ಮಸೆಯಿತು.

’ಓಹ್, ಏನು...ಅನಿವಾಸಿಗಳ ನಡೆನುಡಿಯ ಬಗ್ಗೆ ಪುಸ್ತಕಾ ಬರೀತೀರೇನು?’ ಎಂದು ಜೋರಾಗಿ ನಗುವ ಧ್ವನಿಯನ್ನು ಮಾಡಿ ಕೈಯಲ್ಲಿನ ಚಮಚೆಯಿಂದ ಪಕ್ಕೆಗೆ ತಿವಿದೆ, ’ಬರೀರಿ, ಬರೀರಿ - ನಿಮ್ಮಗಳ ಸಾಹಿತ್ಯವೇ ದೊಡ್ದು, ನೀವ್ ಬರ್ದಿರೋದೇ ರಾಮಾಯಣ!’

ಆ ಎರಡೂ ದ್ರಾಕ್ಷಿಗಳು ಒಕ್ಕೊರಲಿನಿಂದ, ’ದಯವಿಟ್ಟು ಈಗ ನಮ್ಮನ್ನ ಸುಮ್ನೇ ಬಿಟ್ ಬಿಡಿ ಸಾರ್, ಕಾರ್ಯಕ್ರಮ ಶುರುವಾಗೋ ಹೊತ್ತಾಯ್ತು’ ಎಂದು ಆರ್ತರಾಗಿ ಬೇಡಿಕೊಂಡವು.

ನಾನಿದ್ದೋನು, ’ಇನ್ನೊಬ್ರ ಬದುಕಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಅದೇನೋ ಕಾರ್ಯಕ್ರಮ ಅಂತ ಸಾಯ್ತಿರೋ ನಿಮಗೆ ಸಮಯದ ಪ್ರಜ್ಞೇ ಬೇರೆ ಕೇಡಿಗೆ’ ಎನ್ನುತ್ತಾ ಇವತ್ತು ಪಾಯಸಕ್ಕೆ ದ್ರಾಕ್ಷಿ ಹಾಕದಿದ್ರೇನೇ ಲೇಸು ಎಂದು ದ್ರಾಕ್ಷೀ ಡಬ್ಬದ ಮುಚ್ಚಳವನ್ನು ಹಾಕಿದರೂ, ದ್ರಾಕ್ಷಿ ಸ್ನೇಹಿತರು ಹೇಳಿದ ’ಅನಿವಾಸಿಗಳು ಯಾವಾಗ್ ನೋಡಿದ್ರೂ ತಮ್ ತಮ್ ಗುಂಗ್ನಲ್ಲೇ ಇರ್ತಾರೇ’ ಎನ್ನುವ ವಾಕ್ಯಗಳು ನನ್ನ ಮನದಲ್ಲಿ ಅನುರಣಿಸತೊಡಗಿದವು.

Sunday, December 23, 2007

ಅದು ಅವರವರ ಕರ್ಮ

’ಅದು ಅವರವರ ಕರ್ಮ’ ಅನ್ನೋ ಮಾತನ್ನ ಅವರೂ ಇವರೂ ಬಳಸಿದ್ದನ್ನ ಕೇಳಿ ಅಭ್ಯಾಸವಿದ್ದ ನನಗೆ ಇತ್ತೀಚೆಗೆ ರಿಪೀಟ್ ಆಗುವಷ್ಟರ ಮಟ್ಟಿಗೆ ಈ ವಾಕ್ಯವನ್ನು ನಾನೇ ಬಳಸುತ್ತಿದ್ದೇನೆ ಎಂಬುದು ನಂಬಲಾಗದ ಮಾತೇ ಸರಿ. ಯಾವುದೇ ಕೆಟ್ಟ ಸುದ್ದಿ ಇರಲಿ ಒಳ್ಳೆಯ ಸುದ್ದಿ ಇರಲಿ, ಅವೆಲ್ಲಕ್ಕೂ ’ಅದನ್ನು ಅವರು ಪಡೆದುಕೊಂಡು ಬಂದಿದ್ದಾರೆ’ ಎನ್ನುವ ಅರ್ಥದಲ್ಲಿ ಬಳಸುವಂತೆ ’ಕರ್ಮ’ವೆಂಬ ಪದವನ್ನು ನಾನು ಉಪಯೋಗಿಸಿದ್ದು ನೋಡಿ ನನಗೇ ನಗು ಹಾಗೂ ಆಶ್ಚರ್ಯವೂ ಆಯಿತು.

ಭಾರತ ದೇಶದಲ್ಲಿ ಬೆಳೆದು ಬಂದ ಹಿನ್ನೆಲೆಯವರಿಗೆ ತಮ್ಮ ಫಿಲಾಸಫಿಯಲ್ಲಿ ಸಿಕ್ಕುವ ಉಪಮೆ, ರೂಪಕ, ಉಪಮಾನ, ತತ್ವ, ಆದರ್ಶಗಳ ಪಟ್ಟಿಯನ್ನು ಮಾಡುತ್ತಲೇ ಹೋದರೆ ಎಂಥ ಪುಸ್ತಕವೂ ಸಾಕಾಗದು. ನಮ್ಮ ತತ್ವಗಳೇ ಬೇರೆ, ನಮ್ಮ ಆದರ್ಶಗಳೇ ಬೇರೆ. ಭಾರತವೆನ್ನುವುದು ಹೀಗೇ ಇದೆ ಎಂದು ಒಂದೆರಡು ಹೋಲಿಕೆ, ಉದಾಹರಣೆಗಳನ್ನು ಕೊಟ್ಟು ಮುಗಿಸಲಾರದ ಮಾತು. ನಮ್ಮ ದೇಶ ಒಂದು ಅಗಾಧವಾದ ಸಾಗರ ಅಥವ ಸಮುದ್ರ, ಅದರ ಅಲೆಗಳನ್ನು ನೋಡಿ ಸಾಗರವನ್ನು ಅಳೆಯಲಾಗುವುದೇ? ವಿಶೇಷವೆಂದರೆ, ಒಂದು ಬಹುರಾಷ್ಟ್ರೀಯ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಆಫ್ರಿಕಾದಿಂದ ಹಿಡಿದು ಚೀನಾದವರೆಗೆ, ಇಸ್ರೇಲ್‌ನಿಂದ ಹಿಡಿದು ಚಿಲಿಯವರೆಗಿನ ಜನರನ್ನು ಕಂಡು ಮಾತನಾಡಿಸಿ, ಅವರೊಡನೆ ವ್ಯವಹರಿಸಿ ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ನಮಗೆಲ್ಲ ನಮ್ಮ ಬೆನ್ನ ಮೇಲೆ ಮೂಟೆಗಳು ಇರುವ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಂಸ್ಕೃತಿಯ ಹಿನ್ನೆಲೆ ಇದೆ, ಜೊತೆಗೆ ಅದು ನಮಗಿಂತಲೂ ಬೇರೆಯದೇ ಆಗಿದೆ ಎನ್ನುವುದು ಗಮನಕ್ಕೆ ಬರುವ ಅಂಶ. ಉದಾಹರಣೆಗೆ, ಭಾರತದ ಹಿನ್ನೆಲೆಯಿಂದ ಬಂದವರಿಗೆ ಒಂದು ಕಡೆ ಶ್ರೀ ರಾಮಚಂದ್ರ ಮರ್ಯಾದಾಪುರುಷೋತ್ತಮನೆಂಬ ಆದರ್ಶವೂ ಮತ್ತೊಂದು ಕಡೆ ವಿಭಿನ್ನ ನೆಲೆಯ ಶ್ರೀಕೃಷ್ಣನೂ ಇಬ್ಬರೂ ಒಂದೇ ವ್ಯಕ್ತಿಯ ಆದರ್ಶಗಳಾಗಿ ಕಂಡುಬರುವುದು ಸಾಮಾನ್ಯವಾಗಿ ಕಾಣಬಹುದು. ಅದೇ ಅಂಶವನ್ನು ನೈಜೀರೀಯಾದವರಿಗೋ, ರಷ್ಯನ್ನರಿಗೋ ವಿವರಿಸಿ ಹೇಳುವಾಗ ’ಹೌದಲ್ಲಾ!’ ಎನ್ನುವ ಲೈಟ್‌ಬಲ್ಬ್ ಎಷ್ಟೋ ಜನರ ಮನಸ್ಸಿನ್ನಲ್ಲಿ ಹೊತ್ತಿಕೊಳ್ಳಬಹುದು. ’...ಇತರರ ಸಂಸ್ಕೃತಿಯನ್ನು ಪ್ರೀತಿಸು’ ಎಂದು ಎಷ್ಟೋ ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಿದ ಗಾಂಧಿ ಮುಂಬರುವ ಗ್ಲೋಬಲೈಜೇಷನ್ನಿನ್ನ ಬಗ್ಗೆ ಆಲೋಚಿಸಿದ್ದರೇ ಅಥವಾ ನಮ್ಮೊಳಗೇ ಇರುವ ಅಪಾರ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದರೇ?

ನಿಮ್ಮ ಕುಟುಂಬದಲ್ಲಿ ಯಾರಾದರೂ ಪೊಲೀಸ್ ಇಲಾಖೆಯಲ್ಲೋ, ವೈದ್ಯಕೀಯ ವೃತ್ತಿಯಲ್ಲೋ ಕೆಲಸ ಮಾಡುತ್ತಿದ್ದರೆ ದಿನಕ್ಕೊಂದು ಬಗೆಯ ಮನಕರಗುವ ವರದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾರೋ ಸತ್ತರು, ಯಾರೋ ಧಾರುಣವಾಗಿ ಅಪಘಾತದಲ್ಲಿ ಅನುಭವಿಸಿದರು, ಇಂಥವರು ತಮ್ಮ ಮಕ್ಕಳಿಂದ ನರಳುತ್ತಿದ್ದಾರೆ, ಅಂಥವರು ತಮ್ಮ ಪೋಷಕರಿಂದ ಕಂಗಾಲಾಗಿ ಹೋಗಿದ್ದಾರೆ ಇತ್ಯಾದಿ ಇತ್ಯಾದಿ - ಈ ಮನಕಲಕುವ ಸಂಗತಿಗಳು ನಿಲ್ಲುವುದೇ ಇಲ್ಲ. ಮೇಲಿಂದ ಮೇಲೆ ಒಂದಲ್ಲ ಒಂದು ಘಟನೆಯನ್ನು ನೋಡುತ್ತ ನೋಡುತ್ತಲೇ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರ ಮನಸ್ಸು ರೋಸಿ ಹೋಗಿ, ’ಅದು ಅವರವರ ಕರ್ಮ’ ಎಂಬ ಜನರಲೈಸ್ಡ್ ಹೇಳಿಕೆಗಳು ಹೊರಬರುವುದೂ ಸಾಮಾನ್ಯವಾಗಿ ಹೋಗಿರಬಹುದು. ನಮ್ಮಲ್ಲಿ ಹೇಳೋ ಹಾಗೆ ’ದಿನಾ ಸಾಯೋರಿಗೆ ಅಳೋರು ಯಾರು?’. ಮೊನ್ನೆ ಇಲ್ಲಿ ಯಾವುದೋ ಒಂದು ಆಸ್ಪತ್ರೆಯ ಬಗ್ಗೆ ಓದುತ್ತಿದ್ದೆ ದಿನಕ್ಕೆ ಹದಿನಾರರಿಂದ-ಇಪ್ಪತ್ತು ಮಕ್ಕಳಿಗೆ ಹೆರಿಗೆ ಮಾಡಿಸುವ ಫೆಲಿಲಿಟಿ ಅದಂತೆ, ಅಲ್ಲಿ ಕೆಲಸ ಮಾಡುವ ನರ್ಸ್ ಅಥವಾ ಆಯಾಗಳ ಬದುಕನ್ನು ಊಹಿಸಿಕೊಂಡು ನೋಡಿ - ಮುಂಜಾನೆಯಿಂದ ಸಂಜೆ ಡ್ಯೂಟಿ ಮುಗಿಯುವವರೆಗೆ ಮಕ್ಕಳನ್ನು ಹೆರುವವರಿಗೆ ಸಹಾಯ ಮಾಡುವುದೇ ಕಾಯಕ - ಅವರ ಮನಸ್ಸಿನ ಚರ್ಮ ಅದೆಷ್ಟು ದಪ್ಪವಿರಬೇಡ!

***

’ಏನಮ್ಮಾ, ಒಂದಿಷ್ಟು ಹಾಲೂ ಮೊಸರನ್ನು ಚೆನ್ನಾಗಿ ತಗೋ, ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ...’ ಅನ್ನೋದು ನಾನು ನನ್ನಮ್ಮನಿಗೆ ವಾರಕ್ಕೊಮ್ಮೆ ಹೇಳೋ ಮಾತು. ಎಷ್ಟು ಹೇಳಿದ್ರೂ ನಮ್ಮಮ್ಮ ದಿನಕ್ಕೆ ಅರ್ಧ ಲೀಟರ್ ಹಾಲಿಗಿಂತ ಹೆಚ್ಚು ತೆಗೆದುಕೊಳ್ಳೋದೇ ಇಲ್ಲ, ಅದೂ ಸ್ಥಳೀಯ ಗೌಳಿಗರು ಕೊಡೋ ನೀರು ಹಾಲು (ಸಹಜವಾಗಿ ಫ್ಯಾಟ್ ಫ್ರೀ). ಅಯ್ಯೋ ನಾವಿಲ್ಲಿ ಎಷ್ಟೊಂದು ಐಶಾರಾಮದಲ್ಲಿ ಇದ್ದೇವೆ, ಅವರು ಅಲ್ಲಿ ಬಡವರಾಗಿ ಬದುಕುತ್ತಾರಲ್ಲ ಅನ್ನೋ ಒಂದು ನೋವು ನನ್ನ ಮನದಲ್ಲಿ ಯಾವತ್ತೂ ಇದ್ದೇ ಇರುತ್ತೆ. ನನ್ನನ್ನು ಹತ್ತಿರದಿಂದ ಬಲ್ಲವರು ಆ ನೋವನ್ನು ’ನೀವೇನೂ ನಿಮ್ಮ ಕುಟುಂಬಕ್ಕೆ ಮಾಡಿಲ್ಲ’ ಅನ್ನೋದು ನಿಮ್ಮ ಗಿಲ್ಟಿ ಮನೋಭಾವನೆ ಎಂದು ಸುಲಭವಾಗಿ ಹೇಳಿ ಬಿಡುತ್ತಾರಾದರೂ ನಾನು ಅಷ್ಟೊಂದು ಸುಲಭವಾಗಿ ಆ ಪಂಥದ ವಾದವನ್ನು ಒಪ್ಪಿಕೊಂಡಿಲ್ಲ. ದುಡ್ಡು ಕಳಿಸಿದರೂ ಎಷ್ಟೊಂದು ಹೇಳಿದರೂ ನನ್ನ ಅಮ್ಮ ಹಳ್ಳಿಯಲ್ಲಿನ ಬದುಕಿಗೆ ಒಗ್ಗಿ ಹೋಗಿದ್ದಾಳೆ, ಆಕೆಗೆ ಅದನ್ನು ಬಿಟ್ಟು ಬೇರೇನೇ ಇದ್ದರೂ ಅದು ಅಸಹಜ ಹಾಗೂ ಅಸಾಮಾನ್ಯ ಎನಿಸುವಾಗ ನಾನು ಏನೇ ಮಾಡಿದರೂ ಅದು ಹೊರಗೇ ಉಳಿದು ಹೋಗುತ್ತದೆ, ಹೋಗುತ್ತಿದೆ. ಆಫೀಸಿನಲ್ಲಿ ಬರೀ ಲೋಟಸ್ ನೋಟ್ಸ್‌ನಿಂದ ಔಟ್‌ಲುಕ್‌ಗೆ ಇ-ಮೇಲ್ ಬದಲಾಯಿಸಿದರೆನ್ನುವ ಬದಲಾವಣೆಯನ್ನು ಸ್ವೀಕರಿಸುವಾಗಲೇ ನನಗೆ ರೋಸಿ ಹೋಗುವಷ್ಟರ ಮಟ್ಟಿಗೆ ಉರಿದುಕೂಳ್ಳುವಾಗ ಇನ್ನು ಹಳ್ಳಿಯಲ್ಲೇ ತನ್ನ ಬದುಕನ್ನು ಸವೆಸಿದವಳನ್ನು ತೆಗೆದು ಪಟ್ಟಣದ ಬಂಗಲೆಯಲ್ಲಿ ಬಿಟ್ಟೆನಾದರೆ ಇಳಿ ವಯಸ್ಸಿನ ಆಕೆಯ ಮನಸ್ಸಿನ ಮೇಲೆ ಏನೇನು ಪರಿಣಾಮಗಳಾಗಲಿಕ್ಕಿಲ್ಲ? ಆ ಒಂದು ಸೆನ್ಸಿಟಿವಿಟಿಯಿಂದಲೇ ಆಕೆ ತನಗೆ ಬೇಕಾದ ಹಾಗೆ ಬದುಕಲಿ ಎಂದು ಸುಮ್ಮನಿದ್ದೇನೆ. ಅಲ್ಲಿ ಹೋಗಿ ಆಕೆಯ ಜೊತೆಯಲ್ಲಿ ಜೀವಿಸುವುದು ನನಗಾಗದ ವಿಚಾರ, ಆಕೆ ಇಲ್ಲಿಗೆ ಬಂದೋ ಅಥವಾ ನಾನಿರುವಲ್ಲಿಗೆ ಬಂದು ಬದುಕುವುದು ಆಗದ ಮಾತು. ಅದೇ ಅವರವರ ಕರ್ಮ, ಅದು ಅವರವರು ಪಡೆದುಕೊಂಡು ಬಂದುದು.

ನಿಮ್ಮ ಸುತ್ತ ಮುತ್ತಲೂ ’ಪರಾಕ್’ ಹೇಳುವ ಏನೇನೇ ವ್ಯವಸ್ಥೆಗಳಿದ್ದರೂ ಕೊನೆಗೆ ನಿಮ್ಮನ್ನು ಸರಳತೆಯಲ್ಲದೇ ಮತ್ತೆನೇ ಆವರಿಸಿಕೊಂಡರೂ ನಿಮ್ಮ ಬದುಕು ಅಷ್ಟೇ ಸಂಕೀರ್ಣವಾಗಿ ಹೋಗುತ್ತದೆ. ಒಂದು ಕಾಲದಲ್ಲಿ ಹಳ್ಳಿಯ ಬದುಕು ಹಾಗಿದ್ದವು, ಬಹಳ ಸರಳವಾಗಿ ಒಮ್ಮುಖವಾಗಿ ಹೋಗುತ್ತಿದ್ದವು. ದಿನಕ್ಕೆ ಹತ್ತು ಬಾರಿ ಗಡಿಯಾರ ನೋಡದೆಯೂ, ಆಧುನಿಕ ಬದುಕು ಸೃಷ್ಟಿಸಿದ ಹಣಕಾಸು ಎಂಬ ಗೊಂದಲವಿರದೆಯೂ ಬದುಕು ನಡೆಯುತ್ತಲೇ ಇತ್ತು. ಹಾಗಂತ ಕಷ್ಟ-ನಷ್ಟಗಳು ಇರಲಿಲ್ಲವೆಂದೇನಲ್ಲ: ಮೇಷ್ಟ್ರಾಗಿ ಇಬ್ಬರೂ-ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದವರಿಗೆ ಗೊತ್ತು, ಮಕ್ಕಳನ್ನು ಕಾಲೇಜಿನವರೆಗೆ ಜನರಲ್ ಮೆರಿಟ್‌ನಲ್ಲಿ ಓದಿಸಿದವರಿಗೆ ಗೊತ್ತು, ಜೀವನ ಪರ್ಯಂತ ಒಂದು ದಮಡಿ ಸಾಲವೆನ್ನದೇ ಇದ್ದಷ್ಟು ಚಾಚಿಕೊಂಡಿದ್ದವರಿಗೆ ಗೊತ್ತು ಕಷ್ಟಗಳು ಏನೆಂಬುದು. ನಮ್ಮ ಕಾಲದ ಜೀವನ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿವೆ ಎನ್ನುವುದಕ್ಕೆ ಮೊನ್ನೆ ರೆಡಿಯೋದಲ್ಲಿ ಕೇಳಿದ ಒಂದೆರಡು ಅವತರಣಿಕೆಗಳು ಸಾಕ್ಷಿಯಾಗಿದ್ದವು: ನಾವು ಹಿಂದಿಗಿಂತಲೂ ಅಧಿಕ ಮಾನಸಿಕ ಒತ್ತಡದಲ್ಲಿ ಬದುಕನ್ನು ಸವೆಸುತ್ತೇವೆ, ನಮ್ಮ ವಯೋಮಾನದಲ್ಲಿ ತಡವಾಗಿ ಮದುವೆಯಾಗಿ ಮಕ್ಕಳಾಗುತ್ತಿವೆ, ಹಿಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಅಗತ್ಯ ನಮಗಿದೆ. ಹಳೆಯದೆಲ್ಲ ಒಳ್ಳೆಯದು ಎನ್ನುವ ಮಾತಿನ ಹಿಂದೆ ಬರೀ ಇನ್‌ಫ್ಲೇಷನ್ನ್ ಸಂಬಂಧದ ಸುಖ ನೆನಪುಗಳನ್ನು ಮೆಲುಕು ಹಾಕುತ್ತಿದ್ದವನಿಗೆ ಬರೀ ಹಣದುಬ್ಬರವೊಂದೇ ಅಲ್ಲ, ಕೆಸರಿನಲ್ಲಿ ನಮ್ಮನಡರಿಕೊಂಡ ಬಳ್ಳಿಯ ಹಾಗಿನ ಅನೇಕ ಬೆಳವಣಿಗೆಗಳೂ ಕಾರಣ ಎನ್ನುವುದು ಹೊಳೆಯಿತು. ಇಪ್ಪತ್ತು ವರ್ಷದ ಹಿಂದೆ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತರುತ್ತಿದ್ದವನು ಈಗ ಒಂದು ಕೆಜಿ ಅಕ್ಕಿಗೆ ಮೂವತ್ತು ರುಪಾಯಿ ಕೊಡಬೇಕಾಗಿ ಬಂದುದು ದೊಡ್ಡ ವಿಷಯ, ಆದರೆ ಆಗಿನ ವ್ಯವಸ್ಥೆ ಅಲ್ಲಿ ಒಬ್ಬ ಮನೆಯ ಯಜಮಾನ/ನಿಯ ಮನದಲ್ಲಿ ಆಗುತ್ತಿದ್ದ ಮಾನಸಿಕ ಕ್ಷೋಭೆಗಳಿಗೂ ಈಗಿನ ಕುಟುಂಬದ ಆರೋಗ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಅಭ್ಯಸಿಸಿದ ಇಂಥ ವಿಷಯಗಳನ್ನು ಈ ಬ್ಲಾಗ್ ಪರಿಧಿಯಲ್ಲಿ ಹೇಳುವುದಕ್ಕಾಗಲೀ ಕೇಳುವುದಕ್ಕಾಗಲೀ ಸರಿಯಾದ ವೇದಿಕೆ ಅಲ್ಲವೆಂಬುದರ ಅರಿವು ನನಗಿದೆ, ನನ್ನ ಸೋಲುತ್ತಿರುವ ಭಾಷೆಯಲ್ಲೇ ’ಅವರವರು ಪಡೆದುಕೊಂಡು ಬಂದದ್ದರ’ ಬಗ್ಗೆ, ನಮ್ಮ ಕರ್ಮದ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೇ.

ಇದನ್ನು ಓದುವುದೂ ಬಿಡುವುದೂ ನಿಮಗೆ ಬಿಟ್ಟಿದ್ದು!

Tuesday, December 18, 2007

ನೀರಿನ ಮತ್ತೊಂದು ಹೆಸರು

ಎಲ್ಲರ ಮಹಾತಾಯಿ ನೀರಿನ ಹಲವಾರು ರೂಪಗಳು ನಮಗೆಲ್ಲಾ ಪರಿಚಿತವೇ, ವಿಶ್ವದ ತುಂಬೆಲ್ಲಾ ತುಂಬಿಕೊಂಡು ಅನೇಕಾನೇಕ ರೂಪಗಳಲ್ಲಿ ಜೀವಕುಲದ ಬೆಳವಣಿಗೆಯ ಮಾಧ್ಯಮವಾಗಿರುವ ಅಪಾರ ಜಲರಾಶಿ ಹಾಗೂ ಅದರ ವಿಶ್ವಸ್ವರೂಪವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಘನ ಗಾಳಿ ಹಾಗೂ ದ್ರಾವಕ ರೂಪ (ಸ್ಥಿತಿ) ದಲ್ಲಿ ಮಾತ್ರ ಇರಬಹುದಾದ ಒಂದು ವಸ್ತು, ರುಚಿ ಇಲ್ಲದ್ದು, ಬಣ್ಣವಿಲ್ಲದ್ದು ಎಂದೇನೇ ಓದಿಕೊಂಡು ಬಂದು ನಮ್ಮ ಗಂಟು ಮೂಟೆಗಳ (Bags) ಸಮೇತ ಅಮೇರಿಕಕ್ಕೆ ಬಂದರೂ ಇಲ್ಲಿಗೆ ಬಂದ ಮೇಲೆ ಇವೇ ಇಷ್ಟು ಸ್ಥಿತಿಗಳಲ್ಲಿ ಇನ್ನೂ ಹಲವಾರು ರೀತಿಯ ನೀರಿನ ದರ್ಶನವಾಗಿದ್ದು ಮಹದಾಶ್ಚರ್ಯಗಳಲ್ಲೊಂದು.

ಭಾರತದಲ್ಲೂ ಹಿಮಾಲಯವಿದೆ, ಕಾಶ್ಮೀರವಿದೆ - ಆದರೆ ನಾವು ಕಂಡ ಹಿಮವೇನಿದ್ದರೂ ಚಿತ್ರ ಅಥವಾ ಟಿವಿ ಪರದೆಯ ನೋಟಕ್ಕೆ ಮಾತ್ರ ಸೀಮಿತವಾಗಿತ್ತು. ಇಲ್ಲಿಗೆ ಬಂದ ಮೇಲೇನೇ ಅದು "ಸ್ನೋ" ಎನ್ನುವ ಬೃಹತ್ ಆಕಾರವನ್ನು ತಳೆದು ವರ್ಷದ ಆರು ತಿಂಗಳ ಛಳಿಯ ವಾತಾವರಣದ ಅನುಭವಗಳ ಅವಿಭಾಜ್ಯ ಅಂಗವಾಗಿ ಹೋಯಿತು. ಸ್ನೋ, ಸ್ಲೀಟ್, ಫ್ರೀಜಿಂಗ್ ರೈನ್, ಬ್ಲ್ಯಾಕ್ ಐಸ್, ಪೌಡರಿ ಸ್ನೋ, ಸ್ಟಿಕ್ಕಿಂಗ್ ಸ್ನೋ, ಸ್ನೋ ಫ್ಲೇಕ್ಸ್, ಹೇಯಿಲ್ (Hail), ಗ್ರಾಪೆಲ್ (Graupel), ರೈಮ್ (Rime), ಸ್ಲಷ್ (Slush) ಇನ್ನೂ ಹಲವಾರು ರೀತಿ/ರೂಪಗಳಲ್ಲಿ ಕಂಗೊಳಿಸುವ ಈ ತಾಯಿಯ ವಿಶ್ವರೂಪವನ್ನು ವರ್ಣಿಸುವುದೇ ಅಸದಳ, ಅದು ನನ್ನ ಭಾಷೆಗೆ ಮೀರಿದ ಮಾತು.

***

ಮನೆಯ ಬದಿಯಲ್ಲಿನ ಕರಿಯ ಡ್ರೈವ್ ವೇ ಮುಖದ ಮೇಲೆ ನಿಸರ್ಗ ಅಗಾಧವಾದ ಸ್ನೋ ಪ್ಲೇಕ್ಸ್‌ಗಳನ್ನು ಒಂದರ ಹಿಂದೆ ಒಂದರಂತೆ ಸುರಿಸುತ್ತಲೇ ಇತ್ತು, ಈ ಮಹಾಲೀಲೆಯ ಮುಂದೆ ನಾನು ಹೋಮ್‌ಡಿಪೋದಲ್ಲಿ ಖರೀದಿಸಿ ಹರಡುತ್ತಿರುವ ಸಣ್ಣ ಸಣ್ಣ ಬಿಳಿಯ ಉಪ್ಪಿನ ಹರಳಿನ ಗುಂಡುಗಳು ಹೊಳೆಯಲ್ಲಿ ಹುಣಿಸೇಹಣ್ಣು ಕಲಿಸಿದ ಆಗಿ ಹೋಗಿಹೋಗಿತ್ತು. ಶಾಲೆಯಲ್ಲಿ ಓದಿದ ಹಾಗೆ ನೀರಿಗೆ ಉಪ್ಪು ಸೇರಿಸಿದಾಗ ಅದು ಕುದಿಯುವ ತಾಪಮಾನವನ್ನು ಹೆಚ್ಚಿಸುತ್ತದೆ, ಘನೀಭವಿಸುವ ತಾಪಮಾನವನ್ನು ಕುಗ್ಗಿಸುತ್ತದೆ ಎಂಬುದನ್ನು ಇಲ್ಲಿ ಅಕ್ಷರಷಃ ನಂಬಿಕೊಂಡು ನಿಧಾನವಾಗಿ ಉಪ್ಪಿನ ಹರಳುಗಳನ್ನು ಹರಡುತ್ತಲೇ ಹೋದೆ (elevation of boiling point, depression of freezing point), ಈ ನಿಯಮಗಳನ್ನು ನಾನು ನೆನಪಿನಲ್ಲಿಟ್ಟುಕೊಂಡಿದ್ದೆನೇನ್ನುವ ಒಂದು ಸರಳ ಅಭಿಮಾನವನ್ನೂ ಪ್ರಶಂಸಿಸದ ನಿರ್ದಯಿ ಮುಗಿಲು ನಮ್ಮ ಮನೆಯ ಮುಂದೆ ಸ್ನೋ ಸುರಿಸುತ್ತಲೇ ಹೋಯಿತು. ಇದೀಗ ಬಿದ್ದ ಸ್ನೋವನ್ನು ತೆಗೆಯುವಲ್ಲಿ ಕೆಲವೇ ಘಂಟೆಗಳ ವಿಳಂಬಕ್ಕೆ ಮನಸೋತ ನಾನು, ಕೊನೆಗೆ ಅದನ್ನು ತೆಗೆಯಲು ಒದ್ದಾಡೀ ಒದ್ದಾಡೀ ಅದನ್ನು ಹಾಗೆ ಬಿಟ್ಟು ಕರಿಯ ಡ್ರೈವ್ ವೇ ಮೇಲೆ ಬಿಳಿಯ ಕಾಂಕ್ರೀಟಿನ ಹಾಗೆ ಬಿದ್ದುಕೊಂಡು ಕಲ್ಲಿಗಿಂತಲೂ ಗಟ್ಟಿಯಾದ ಐಸ್ ಅನ್ನು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡಿ ಅನುಭವಿಸುವ ಆಸಕ್ತಿಯಿಂದ ಚೂಪಾದ ಉಕ್ಕಿನ ಶೆವೆಲ್ ತೆಗೆದುಕೊಂಡು ಕೆದಕುತ್ತಲೇ ಹೋದರೆ ಜಪ್ಪಯ್ಯಾ-ಜುಪ್ಪಯ್ಯಾ ಎಂದರೂ ಒಂದಿಂಚೂ ಕದಲಲಿಲ್ಲ!

ಅದು ಅಲ್ಲಿಯೇ ಬಿದ್ದು ಸಾಯಲಿ ಎಂದುಕೊಂಡು ಎಷ್ಟು ಸಾಧ್ಯವೋ ಅಷ್ಟನ್ನು ಮನೆಯ ಮುಂದೆ ಹಾಗೂ ಬದಿಗೆ ಸ್ವಚ್ಛ ಮಾಡಿಕೊಂಡು ಅದರ ಮೇಲೆ ಕಾರನ್ನು ಓಡಿಸಿಕೊಂಡು ಇವತ್ತಿಗೂ ಇರುವ ನನ್ನನ್ನು ನನ್ನ ನೆರೆಹೊರೆಯವರು ಮಹಾ ಸೋಂಬೇರಿ ಎಂದು ಈಗಾಗಲೇ ಹಣೆಪಟ್ಟಿ ಕಟ್ಟಿಕೊಂಡಿರಬಹುದು, ಅವರು ಏನೆಂದುಕೊಳ್ಳುತ್ತಾರೆ ಎಂದು ನಾನಾದರೂ ಏಕೆ ಯೋಚಿಸಲಿ? ಹಾಗೆ ಯೋಚಿಸಿದ ಮಾತ್ರಕ್ಕೆ ಅವರೇನಾದರೂ ಬಂದು ಸ್ವಚ್ಛ ಮಾಡಿಕೊಡುತ್ತಾರೇನು? ಅಕ್ಕಪಕ್ಕದವರ ಮನೆಯ ಮುಂದಿನ ಲಾನ್ ಅನ್ನು ನೋಡಿದರೆ ಅಲ್ಲಿ ಈಗಷ್ಟೇ ಸಗಣಿ ಸಾರಿಸಿಟ್ಟ ಹಾಗೆ ನುಣುಪಾಗಿ ಐಸ್‌ನಿಂದ ಮಾಡಿದ ಜಗುಲಿ ಕಂಡುಬರುತ್ತಿತ್ತು. ಕೊನೇಪಕ್ಷ ಈ ಜಗುಲಿಯ ರೂಪದಲ್ಲಾದರೂ ಎಲ್ಲರ ಮನೆಯ ಮುಂದೆ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಎನ್ನುವ ಸಮಾಧಾನವೂ ಮನದಲ್ಲಿ ಮನೆ ಮಾಡಿಕೊಂಡಿತು.

ಕಾರನ್ನು ತೆಗೆದುಕೊಂಡು ಆಫೀಸಿಗೆ ಹೋಗುವ ಮಾರ್ಗದಲ್ಲಿ ಈಗಾಗಲೇ ಎಲೆಗಳನ್ನು ಕಳೆದುಕೊಂಡು ಬೋಳಾದ ಮರಗಳ ನಡುವೆ ಸೂರ್ಯನ ಕಿರಣಗಳು ಹೊರಗೆ ಬರಲೋ ಬೇಡವೋ ಎನ್ನುವ ಮುಜುಗರದಿಂದಲೋ ಎನ್ನುವಂತೆ ಸಾವಕಾಶವಾಗಿ ಹರಡುತ್ತಿದ್ದವು. ಹಸಿರಿನ ಹಿನ್ನೆಲೆಯಲ್ಲಿ ಕಂಗೊಳಿಸಬೇಕಾದ ಬಿಳಿಯ ಬೆಳಕು ಎತ್ತ ನೋಡಿದರತ್ತ ಬಿದ್ದ ಬಿಳಿಯ ಸ್ನೋ, ಐಸ್ ಮೇಲೆ ಬಿದ್ದು ಪ್ರತಿಫಲನವಾಗುತ್ತಲೇ ನಾನು ಇದ್ದಲ್ಲೇ ದ್ವಿಗುಣ, ತ್ರಿಗುಣನಾಗುತ್ತೇನೆ ಎಂದು ಒಮ್ಮೆ ಹೆಮ್ಮೆಯಿಂದ ಬೀಗುವಂತೆ ಕಂಡುಬಂದರೂ, ಕಾರಿನ ಡಯಲಿನಲ್ಲಿ ತೋರಿಸುತ್ತಿದ್ದ 23 ಡ್ರಿಗ್ರಿ ಫ್ಯಾರನ್‌ಹೈಟ್ ಉಷ್ಣತೆ - ನಿಮ್ಮ ಆಟವೇನೂ ನಡೆಯೋದಿಲ್ಲ - ಎಂದು ಸೂರ್ಯ ಕಿರಣಗಳ ಬಿಮ್ಮನ್ನು ಕುಸಿಯುವಂತೆ ಮಾಡಿತ್ತು. ಮರಗಳ ಮೇಲೆ ತಲೆಯೆತ್ತಿ ನೋಡುತ್ತೇನೆ, ಪ್ಲಾಟಿನಮ್‌ನಲ್ಲಿ ಮಾಡಿದ ಜುಮುಕಿ ತೊಟ್ಟ ಮದುವಣಗಿತ್ತಿಯಂತೆ ಮರಗಳ ತುದಿಗಳು ತಮ್ಮ ಮೇಲೆ ಹರಳುಕಟ್ಟಿದ ಐಸ್ ಕ್ರಿಸ್ಟಲ್ಲುಗಳನ್ನು ಹೊತ್ತುಕೊಂಡು ಬಿಸಿಲಿಗೆ ಕಂಗೊಳಿಸುತ್ತಿವೆ. ಇನ್ನೂ ಕೆಲವು ಬೃಹದಾದ ಮರದ ತುದಿ ಅದ್ಯಾವುದೋ ದೊಡ್ಡ ಹೊಟೇಲೋ ಕ್ಯಾಸಿನೋಗಳಲ್ಲಿರುವ (ಚಾ)ಶಾಂಡಲೀಯರ್‌ಗಳನ್ನು ನೆನಪಿಸುತ್ತಿದ್ದವು. ಹೊರಗಡೆ ಛಳಿ ಇದ್ದು ಈ ಮರಗಳು ಸುರುಟಿ ಹೋಗುವುದಂತೂ ನಿಜ, ಜೊತೆಗೆ ತಮ್ಮ ಮೇಲಿನ ಐಸ್‌ನ ಭಾರವನ್ನೂ ಹೊತ್ತುಕೊಂಡಿರಬೇಕಲ್ಲ ಎಂದು ಮೊದಲ ಬಾರಿಗೆ ಮರಗಳ ಬಗ್ಗೆ ಅನುಕಂಪ ಮೂಡಿತು, ಜೊತೆಗೆ ಅವರವರ ಕರ್ಮ ಅವರಿಗೆ ಎಂಬ ವೇದಾಂತದ ಅಲೋಚನೆಯೂ ಹೊರಗೆ ಬಂತು.

***

ಪುಷ್ಪಕ ವಿಮಾನ ಸಿನಿಮಾದಲ್ಲಿ ಖಳನೊಬ್ಬ ಐಸ್‌ನಲ್ಲಿ ಮಾಡಿದ ಚೂರಿಯಿಂದ ಇರಿದು ಕೊಲ್ಲಲು ಪ್ರಯತ್ನಿಸುವ ದೃಶ್ಯ ನೆನಪಿಗೆ ಬಂತು. ಆ ಸಿನಿಮಾವನ್ನು ಭಾರತದಲ್ಲಿ ನೋಡಿದವರಿಗೆ ಮಂಜು ಕಟ್ಟಿದ ನೀರು ಉಕ್ಕಿನಷ್ಟು ಗಟ್ಟಿ ಇರಬಲ್ಲದೇ ಎಂಬ ಸಂಶಯ ಮೂಡಿರಲೂಬಹುದು. ಆದರೆ ಅತಿ ಕಡಿಮೆ ತಾಪಮಾನದಲ್ಲಿ ಹರಳುಗಟ್ಟಿದ ಮಂಜೂ ಸಹ ಉಕ್ಕಿನಷ್ಟೇ ಕಠಿಣವಾದದ್ದು ಎಂದು ನೋಡಿ ಅನುಭವಿಸಿದವರಿಗೇ ಗೊತ್ತು. ವೆದರ್ ಚಾನೆಲ್ಲ್ ಅನ್ನು ತಿರುಗಿಸಿ ನೋಡಿದರೆ ಅಲ್ಲಿ ಒಮಾಹಾ, ನೆಬ್ರಾಸ್ಕಾದಲ್ಲಿ 1 ಡಿಗ್ರಿ ಫ್ಯಾರನ್‌ಹೈಟ್ ತಾಪಮಾನವನ್ನು ತೋರಿಸುತ್ತಿದ್ದರು, ಅದರ ಮುಂದೆ ನಮ್ಮೂರಿನ 26 ಡಿಗ್ರಿ ಫ್ಯಾರನ್‌ಹೈಟ್ ಭಿಕ್ಷುಕರ ಮುಂದೆ ಲಕ್ಷಾಧೀಶ್ವರನ ಹಾಗೆ ಕಾಣಿಸುತ್ತಿತ್ತು.

ಈ ನೀರು ಎನ್ನುವುದಾಗಲೀ, ಅದರ ಅಸಾಧಾರಣ ರೂಪಗಳಾಗಲೀ, ಅದರ ವಿಭಿನ್ನ ಸ್ಥಿತಿಗಳಾಗಲೀ ನನ್ನ ಮನಸ್ಸಿನಲ್ಲಿ ಯಾವತ್ತೂ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡೇ ಇರುತ್ತೆ. ನನ್ನ ಪ್ರಕಾರ ಹೊರಗಿನ ತಾಪಮಾನದ ಹಿನ್ನೆಲೆಯಲ್ಲಿ ನೀರು ಹರಳುಗಟ್ಟುವ ರೀತಿಯನ್ನು ಹಲವಾರು ವರ್ಷಗಳಿಂದ ಅನುಭವಿಸಿ ಬಲ್ಲವರು ಪ್ರಕೃತಿಯ ವಿಶೇಷವಾದ ವ್ಯವಸ್ಥೆಯೊಂದನ್ನು ಹತ್ತಿರದಿಂದ ಬಲ್ಲವರು, ನೀರನ್ನಾಗಲೀ ಅದರ ವಿಭಿನ್ನ ನೆಲೆಗಳನ್ನಾಗಲೀ ಜಯಿಸಿದವರಿಗೆ ಸೋಲೆನ್ನುವುದು ಖಂಡಿತ ಇಲ್ಲ!

ನಾವು ಓದಿದ ಓಡರ್‌ಲೆಸ್ ಕಲರ್‌ಲೆಸ್ ಟೇಸ್ಟ್‌ಲೆಸ್ ಎನ್ನುವ ಒಂದು ಮೂಲಭೂತ ಅಂಶ, ನನ್ನ ಕಣ್ಣ ಮುಂದೆಯೇ ಹಲವಾರು ವಿಸ್ತೃತ ಸ್ವರೂಪವನ್ನು ಧರಿಸಿದ್ದನ್ನು ನೋಡಿದ್ದೇನೆ. ಬಣ್ಣವಿಲ್ಲದ ನೀರು, ಘನೀಭವಿಸಿ ಬಿಳಿಯಾಗಿ ಎಲ್ಲ ಬಣ್ಣವನ್ನೂ ತನ್ನಲ್ಲಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಬಿಳಿಯ ಮೋಡಗಳು ಮಳೆಯನ್ನು ತಾರವು, ಕರಿಯ ಮೋಡಗಳು ಬಿಳಿಯ ಮೋಡಗಳಿಗಿಂತ ದೊಡ್ಡ ದೊಡ್ಡ ಕಣಗಳನ್ನು ಹೊಂದಿರುತ್ತವೆ, ಅವೇ ಮೋಡಗಳಿಗೂ ಬಣ್ಣವನ್ನು ಬದಲಾಯಿಸುತ್ತವೆ ಎಂದು ಓದಿಕೊಂಡು ವಿಜೃಂಭಿಸಿದ್ದೇನೆ. ನೀರಿಗೆ ಹಲವಾರು ರೂಪವಿದೆ, ಭೋಗೋಳದ ಪ್ರತಿಶತ ಎಂಭತ್ತು ಭಾಗವನ್ನು ನೀರು ಅಥವಾ ನೀರಿನ ರೂಪ ಆವರಿಸಿದೆ ಎಂದೆಲ್ಲಾ ಡಿಸ್ಕವರಿ ಚಾನೆಲ್ಲುಗಳಲ್ಲಿ ನೋಡಿದಾಗ ಹುಬ್ಬೇರಿಸಿದ್ದೇನೆ. ನಮ್ಮ ನಿಮ್ಮಲ್ಲೂ ನೀರಡಗಿದೆ, ಈ ನೀರು ನಿಜವಾಗಿಯೂ ಸರ್ವಾಂತರ್ಯಾಮಿ, ಎಲ್ಲರಿಗೂ ಜೀವಜಲವಾದ ನೀರೇ ದೇವರು! (ಬೇಸಿಗೆಯಲ್ಲಿ ಈ ಮಾತು ಬದಲಾಗಿ ಗಾಳಿ, ಮಣ್ಣು, ಅಗ್ನಿ ಮೊದಲಾದ ಪಂಚಭೂತಗಳಿಗೆ ಆದ್ಯತೆಕೊಟ್ಟರಾಯಿತು, ಈಗ ಛಳಿಗಾಲ, ಅದು ನೀರಿನ ಕಾಲ!)

Sunday, December 16, 2007

ಎಲ್ಲವೂ ಆನ್‌ಲೈನ್ ಮಯ...

ಎಲ್ಲವೂ ಆನ್‌ಲೈನ್ ಅನ್ನೋ ಕಾಲದಲ್ಲಿ ನಮ್ಮ ಭಾರತೀಯ ಬ್ಯಾಂಕಿಂಗ್ ಅಗತ್ಯಗಳಿಗೆ ಇವತ್ತಿಗೂ ಫೋನ್ ಮಾಡಿಯೋ ಅಥವಾ ಪತ್ರ ಬರೆದೋ ಮುಟ್ಟುವ ಅಗತ್ಯವಿರುವ ಹೊತ್ತಿಗೆ ಎಷ್ಟೋ ಭಾರತೀಯ ಸಂಸ್ಥೆಗಳೂ ಇತ್ತೀಚೆಗೆ ಕಂಪ್ಯೂಟರ್ ಲಾಗ್‌ಇನ್ ವ್ಯವಸ್ಥೆಯನ್ನು ಕೊಡುತ್ತಿವೆ ಎಂದು ನನಗೆ ತಿಳಿದದ್ದು ಇತ್ತೀಚೆಗೆ ಮಾತ್ರ. ವಿಶ್ವದ ಮಹಾಬ್ಯಾಂಕ್ ಸಿಟಿಬ್ಯಾಂಕ್‌ನಿಂದ ಹಿಡಿದು ನನ್ನ ಪೇವರೈಟ್ ಬ್ಯಾಂಕಾದ ಮೈಸೂರು ಬ್ಯಾಂಕಿನವರೆಗೆ ಈ ದಿನಗಳಲ್ಲಿ ಹೆಚ್ಚೂ ಕಡಿಮೆ ಎಲ್ಲ ಟ್ರಾನ್ಸಾಕ್ಷನುಗಳನ್ನು ಕಂಪ್ಯೂಟರ್ ನೆಟ್‌ವರ್ಕ್ ಮೂಲಕ ಎಲ್ಲಿದ್ದರೂ ಎಲ್ಲಿಂದಲಾದರೂ ಮಾಡಬಹುದು ಎನ್ನುವುದು ನಿಜವಾಗಲೂ ಥ್ರಿಲ್ಲಿಂಗ್ ಅನುಭವವಲ್ಲದೇ ಮತ್ತಿನ್ನೇನು?


ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿ ಈ ವ್ಯವಸ್ಥೆ ಯಾವಾಗಿನಿಂದಲೋ ಇದೆ, ಆದರೇ ಕರ್ನಾಟಕದ ರಿಮೋಟ್ ಎನ್ನುವ ಹಳ್ಳಿ, ಹೋಬಳಿಗಳಲ್ಲಿ ಎಟಿಎಮ್ ಕಾರ್ಡ್ ವ್ಯವಸ್ಥೆ ಬಂದಿದ್ದು ಇತ್ತೀಚೆಗೆ ಮಾತ್ರ. ಒಂದು ಊರಿಗೆ ಎಟಿಎಮ್ ವ್ಯವಸ್ಥೆ ಬಂದು ಅಲ್ಲಿನ ಜನರ ಜೇಬು ಪಾಕೇಟುಗಳಲ್ಲಿ ವೀಸಾ/ಮಾಸ್ಟರ್‌ಕಾರ್ಡ್ ಲೋಗೋಗಳು ಸ್ಥಳೀಯ ಬಿಸಿಲಿಗೆ ಮಿಂಚತೊಡಗಿದ್ದರ ಬಗ್ಗೆ ಉದಾರೀಕರಣ, ವ್ಯವಹಾರ, ಜಾಗತೀಕರಣ, ಬಂಡವಾಳಶಾಹಿ ವ್ಯವಸ್ಥೆ, ಅಭಿವೃದ್ಧಿ, ಕಂಪ್ಯೂಟರ್ ನೆಟ್‌ವರ್ಕ್ ಮುಂತಾದ ಯಾವುದೇ ನೆಲೆಗಟ್ಟಿನಲ್ಲೂ ಸಾಕಷ್ಟು ಚಿಂತನೆ ನಡೆಸಬಹುದು. ಒಂದು ಕಾಲದಲ್ಲಿ ಬ್ಯಾಂಕಿಗೆ ಹಣ ಸಂದಾಯ ಮಾಡಿ ನಮ್ಮ ಹಣವನ್ನೇ ನಾವು ತೆಗೆಯುವಾಗಲೂ ಅದ್ಯಾವುದೋ ಅವ್ಯಕ್ತ ಮುಜುಗರಕ್ಕೆ ಒಳಪಡಬೇಕಾಗಿದ್ದ ನಮ್ಮಲ್ಲಿ ಇಂದಿನ ಅನುಕೂಲಗಳು ಅದೆಂತಹ ಟ್ರಾನ್ಸ್‌ಪರೆನ್ಸಿಯನ್ನು ಹುಟ್ಟುಹಾಕಿವೆಯೆಂದರೆ, ನಮ್ಮ ಹಣವನ್ನು ನಾವೇ ಎಲ್ಲಿಂದ ಬೇಕಾದರೂ ಹೇಗೆ ಬೇಕಾದರೂ ಬಳಸಬಹುದು ಎನ್ನುವುದು ಇವತ್ತಿಗೆ ಹಳ್ಳಿಗಳಲ್ಲೂ ನಿಜ.

ಕೇವಲ ಹತ್ತು ಹದಿನೈದು ವರ್ಷಗಳ ಹಿಂದೆ, ಉತ್ತರ ಭಾರತದ ಕೆಲವು ಕಡೆ, ದಕ್ಷಿಣ ಭಾರತದ ಉದ್ದಗಲಕ್ಕೂ ಬ್ಯಾಂಕಿನ ಪರೀಕ್ಷೆಗಳನ್ನು (BSRB) ತೆಗೆದುಕೊಂಡು ಬ್ಯಾಂಕಿನಲ್ಲಿ ಕ್ಲರ್ಕ್ ಕಮ್ ಕ್ಯಾಷಿಯರ್ ಅಥವಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಗೊಳ್ಳುವುದು ಮಹಾನ್ ವಿಷಯವಾಗಿತ್ತು. ನಮ್ಮ ದೇಶದ ಘನತೆಯಾದ ಲಕ್ಷಾಂತರ ಪದವಿಧರರಲ್ಲಿ ಕೇವಲ ಹತ್ತು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ಜನರು ಪರೀಕ್ಷೆಗೆ ತಕ್ಕ ತಯಾರಿಯನ್ನು ನಡೆಸಿಕೊಂಡು ಅದೇ ಮೊಟ್ಟ ಮೊದಲ ಬಾರಿಗೆ ಎಂಬಂತೆ ರೀಸನಿಂಗ್, ಇಂಗ್ಲೀಷ್, ಮ್ಯಾಥ್‌ಮ್ಯಾಟಿಕ್ಸ್ ಮುಂತಾದವುಗಳಲ್ಲಿ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಸಕಾಲದಲ್ಲಿ ಎದುರಿಸಿ, ಮುಂದೆ ಸಂದರ್ಶನದ ಮಜಲನ್ನು ದಾಟಿ ಸಾಯುವವರೆಗೆ ಊಟ ಹಾಕುವ "ಬ್ಯಾಂಕ್" ಎನ್ನುವ ವ್ಯವಸ್ಥೆಯನ್ನು ಸೇರುವುದು ಬಹಳ ದೊಡ್ಡ ವಿಷಯವಾಗಿತ್ತು. ಹೀಗಿರುತ್ತಿದ್ದ ಈ ಬ್ಯಾಂಕ್ ಪರೀಕ್ಷೆಗಳು ಮೊಟ್ಟ ಮೊದಲ ಬಾರಿಗೆ ಯಾವಾಗ ಶುರುವಾದವೋ ಗೊತ್ತಿಲ್ಲ, ತೊಂಭತ್ತರ ದಶಕದಲ್ಲಂತೂ ಈ ಹುದ್ದೆಗಳಿಗೆ ಅತೀವ ಬೇಡಿಕೆ ಇತ್ತು ಎನ್ನುವ ಹಾಗೆ ಕೋಟ್ಯಾಂತರ ಜನರು ಪರೀಕ್ಷೆಯನ್ನು ಎದುರಿಸುತ್ತಿದ್ದರು, ಅದರಲ್ಲಿ ತೇರ್ಗಡೆಯಾಗಿ ಮುಂದೆ ಹೋದ ಎಷ್ಟೋ ಜನರ (ನನ್ನ ಸಹಪಾಠಿಗಳಲ್ಲಿ) ಮನೆಗಳಲ್ಲಿ ಇಂದಿಗೂ ಬ್ಯಾಂಕ್ ನೌಕರನಾಗಿರುವುದು ಬಹಳ ಹೆಮ್ಮೆಯ ವಿಷಯವೂ ಹೌದು. ಮಧ್ಯಮ ವರ್ಗವನ್ನು ಸಾಯುವವರೆಗೆ ನೆನಪಿನಲ್ಲಿಡುವಂತೆ ಮಾಡುವ, ಇನ್ನೊಬ್ಬರ ಲೆಕ್ಕಪತ್ರವನ್ನು ಬರೆದು ಜೋಪಾನ ಮಾಡಿಡುವ, ಪ್ರತಿ ಮೂರು ವರ್ಷಗಳಿಗೊಮ್ಮೆ ಊರು ಬಿಟ್ಟು ಊರು ಸೇರುವಂತೆ ಮಾಡುವ ಈ ಕಾಯಕವನ್ನು ನಾನು ದ್ವೇಷಿಸುತ್ತಿದ್ದೆ ಎಂದೇ ಹೇಳಬೇಕು. ’ನನ್ನ ಲೆಕ್ಕಗಳನ್ನು ನಾವೇ ಬರೆದಿಡೋಲ್ಲ, ಇನ್ನು ಮಂದಿಯ ಲೆಕ್ಕವನ್ನು ನಾನೇಕೆ ಬರೆದಿಡಲಿ?’ ಎನ್ನುವುದು ನನ್ನ ಚೀಪ್ ಜೋಕ್‌ಗಳಲ್ಲಿ ಒಂದು, ಅದನ್ನು ನಾನು ನನ್ನ ಬ್ಯಾಂಕ್ ಮಿತ್ರರೊಂದಿಗೆ ಹೇಳಿಕೊಂಡು ನಕ್ಕಿದ್ದಿದೆ.

ನಾನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗೆ ಯಾರೋ ಕೊಟ್ಟ ಚೆಕ್ ತೆಗೆದುಕೊಂಡು ನಮ್ಮೂರಿನ ಕರ್ನಾಟಕ ಬ್ಯಾಂಕ್ ಒಳ ಹೊಕ್ಕಾಗ ನನ್ನ ಮನದಲ್ಲಿ ತುಂಬಿಕೊಂಡ ಬೇಕಾದಷ್ಟು ಅವ್ಯಕ್ತ ಭಯಗಳು ಇವತ್ತಿಗೂ ಇಲ್ಲಿನ ಬ್ಯಾಂಕ್‌ಗಳನ್ನು ಹೊಕ್ಕಾಗ ಸತಾಯಿಸುತ್ತವೆಯೇನೋ ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ನಾನು ಚೆಕ್ ತೆಗೆದುಕೊಂಡು ಹೋಗಿ ಯಾರಲ್ಲಿ ಕೊಡುವುದು ಹೇಗೆ ಕೊಡುವುದು ಎಂದು ಮನಸ್ಸಿನಲ್ಲಿ ಸಂಘರ್ಷವನ್ನು ನಡೆಸಿಕೊಂಡು ಬ್ಯಾಂಕ್ ಒಳಹೊಕ್ಕರೆ ನಾನು ಅಲ್ಲಿನ ಕಟಕಟೆಯಷ್ಟು ಎತ್ತರವೂ ಇದ್ದಿರಲಿಲ್ಲ. ಅಲ್ಲೆಲ್ಲಾ ನನ್ನ ತಲೆ ಮಟ್ಟಕ್ಕಿಂತಲೂ ಎತ್ತರವಾದ ವಿಶಾಲವಾದ ಮೇಜುಗಳು (ಸಾಮಾನ್ಯವಾಗಿ L ಆಕಾರದಲ್ಲಿರುವವಗಳು), ಅದರ ಕೊನೆಗೆ ಒಂದು ಸಣ್ಣ ಡಿಪ್, ಅದರ ಪಕ್ಕದಲ್ಲಿ ಕ್ಯಾಷಿಯರ್ ಕುಳಿತುಕೊಳ್ಳುವ ಕಬ್ಬಿಣದ ಕಟಕಟೆ. ಹೋಗಿ ಕ್ಯಾಷಿಯರ್ ಪಕ್ಕದವರಿಗೆ ಚೆಕ್ ಕೊಟ್ಟರೆ ಕಟಕಟೆಯಲ್ಲಿರುವವರಿಗೆ ಕೊಡಿ ಎಂದರು, ಅಲ್ಲಿ ಕೊಟ್ಟರೆ ಇಲ್ಲಿ ಸಹಿ ಮಾಡಿ ಎನ್ನುವ ಆದೇಶ, ಅದರ ಬೆನ್ನಿಗೆ ಸಣ್ಣ ಕಂಡಿಯಲ್ಲಿ ತೂರಿಕೊಂಡು ಬರುವ ನಡುವೆ ತೂತವಿದ್ದ ಒಂದು ಕಾಯಿನ್ ಮಾದರಿಯ ’ಟೋಕನ್’. ಅದರ ಮೇಲೆ ಮುದ್ರಿತವಾದ ನಂಬರ್ ಅನ್ನು ಕರೆಯುವವರೆಗೆ ಕುಳಿತು ಕಾಯಿ ಎನ್ನುವ ’ನಮಗೇನ್ ಆಗಬೇಕು’ ಎನ್ನುವ ಧೋರಣೆ! ಅಂತೂ ಇಂತೂ ನಮಗೆ ಸಿಗಬೇಕಾದ ದುಡ್ಡು ಕೈಗೆ ಬಂದಾಗ ಅದೇನೋ ಅಗಾಧವಾದ ಖುಷಿ! ಚಡ್ಡಿ ಜೇಬಿನಲ್ಲಿ ಕುಳಿತ ಕ್ಯಾಷಿಯರ್ ಕೊಟ್ಟ ಗರಿಗರಿ ನೋಟನ್ನು ದಾರಿ ಉದ್ದಕ್ಕೂ ಭದ್ರವಾಗಿ ಮುಟ್ಟಿ ನೋಡಿಕೊಳ್ಳುವುದರ ಜೊತೆಗೆ ’ಅಲ್ಲಾ, ನಮ್ಮ ದುಡ್ಡನ್ನು ಬ್ಯಾಂಕ್‌ನಲ್ಲಿ ನಾವೇಕೆ ಇಡಬೇಕು, ಇಷ್ಟೆಲ್ಲಾ ಪರಿಪಾಟಲೆ ಯಾಕೆ?’ ಎನ್ನುವ ಪ್ರಶ್ನೆಗಳು ಬೇರೆ. ಮನೆಯಲ್ಲಿ ಹೋಗಿ ಕೇಳಿದರೆ ಸಂಬಳ ನೇರವಾಗಿ ಬ್ಯಾಂಕ್‌ಗೇ ಹೋಗೋದರಿಂದ ನಾವು ಅಲ್ಲಿಗೆ ಹೋಗಿಯೇ ಹಣವನ್ನು ತೆಗೆದುಕೊಳ್ಳಬೇಕು, ಇಲ್ಲವಾದರೆ ಇಲ್ಲ ಎನ್ನುವ ಧೋರಣೆಯ ’ನಮ್ಮೂರಿನ ಆರ್ಥಿಕ ವ್ಯವಸ್ಥೆಯ ಮೊದಲ ಪಾಠ.

ಸಂಬಳ ನೇರವಾಗಿ ಹೋಗಿ ಬ್ಯಾಂಕ್ ಸೇರುತ್ತದೆ ಎನ್ನುವುದರಲ್ಲಿ ಇವತ್ತಿಗೂ ಬಹಳಷ್ಟೇನೂ ಬದಲಾಗಿಲ್ಲ - ಅಲ್ಲವೇ? ಅಂದಿನ ದಿನಗಳಲ್ಲಿ ನಾವೆಲ್ಲ ’ಸಂಬಳ’ವನ್ನು ಪಡೆಯುವುದನ್ನು ದೊಡ್ಡದಾಗಿ ಪರಿಗಣಿಸಿ ಇಂದು (ಇಂದಿಗೂ) ಸಂಬಳದಾರರಾಗಿಯೇ ಉಳಿದು ಬಿಟ್ಟೆವು. ಮೊದಲತೇದಿ ಚಿತ್ರದ ’ಒಂದರಿಂದ ಇಪ್ಪತ್ತರವರೆಗೆ ಉಂಡಾಟ’ ಹಾಡನ್ನು ಕೇಳಿದ ನಮ್ಮೂರಿನ ವೈಶ್ಯ ಯುವಕರು ತಮ್ಮ ಕುಟುಂಬದ ವ್ಯವಹಾರವನ್ನು ಅನುಸರಿಸಿಕೊಂಡು ಮುಂದೆ ಹೋದರೆ ಸಂಬಳದಾರರ ಮಕ್ಕಳಾದ ನಾವು ಸಂಬಳಕ್ಕೆ ದುಡಿಯುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡೆವು.

***

ಎಲೆಕ್ಟ್ರಾನಿಕ್ ಯುಗದ ವಿಶೇಷತೆ ಏನೆಂದರೆ ಹಣಕಾಸಿನ ವ್ಯವಹಾರವೆಲ್ಲ ದಾಖಲೆಗಳಲ್ಲೇ ನಡೆದು ಹೋಗುವುದು. ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಒಂದು ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದರ ಮೂಲಕ ಮಾಡುವಂತೆ ಆಗಿರುವುದು ಒಂದು ವರದಾನವೇ ಸರಿ, ಮೊದಲೆಲ್ಲ ಆನವಟ್ಟಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುವವರು ತಮ್ಮ ಹಣವನ್ನು ದಾರಿಯಲ್ಲಿ ಕಳೆದುಕೊಂಡು ಪಜೀತಿಗೆ ಸಿಕ್ಕ ಉದಾಹರಣೆಗಳು ಈಗ ಸಿಗಲಾರವು. ಹೀಗೇ ನಿಧಾನಕ್ಕೆ ಈ ವ್ಯವಸ್ಥೆ ಬೆಳೆದೂ ಬೆಳೆದೂ ಜನರು ಹಾರ್ಡ್ ಕರೆನ್ಸಿಯನ್ನು ತಮ್ಮ ಕಬ್ಬಿಣದ ಬೀರುಗಳಲ್ಲಿ ಕೂಡಿಹಾಕುವ ಕಾಲ ಕಡಿಮೆಯಾಗಿ ಅದನ್ನು ಅಲ್ಲಲ್ಲಿ ತೊಡಗಿಸುವ ಕಾಲ ಬರಲಿ, ಜೊತೆಗೆ ಕಪ್ಪುಹಣದ ವ್ಯವಸ್ಥೆ ಕುಸಿಯಲಿ ಎಂದು ವಾದವನ್ನು ಮಾಡುತ್ತಾ, ಅದರ ಬೆನ್ನಿಗೇ ಲಂಚವೆನ್ನುವ ಶಾಪ ನಮ್ಮ ವ್ಯವಸ್ಥೆಯಿಂದ ದೂರಾಗುವಂತಿದ್ದರೆ ಎನ್ನುವುದು ನಿಜವಾಗಿಯೂ ಆಶಾದಾಯಕವಾದ ಆಲೋಚನೆ ಅಲ್ಲದೇ ಮತ್ತಿನ್ನೇನು?

ಆನ್‌ಲೈನ್ ವ್ಯವಸ್ಥೆಯ ಹಿನ್ನೆಲೆಯಲ್ಲಿನ ಒಂದೇ ಒಂದು ಬೇಸರ ಸಂಗತಿಯೆಂದರೆ - ಈ ಕಳೆದ ಹತ್ತು ವರ್ಷಗಳಿಂದ ನನಗೆ ಹಲವಾರು ರೀತಿಯ ಸಹಾಯ ಮಾಡಿದ ನಮ್ಮೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿ ವರ್ಗದವರ ಜೊತೆ ಸಂಪರ್ಕ ಕಡಿದು ಹೋಗಿದ್ದು. ನಾನು ಒಂದು ಫೋನ್ ಕಾಲ್ ಮಾಡಿ ಹೇಳಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ನಾನು ಹೇಳಿದವರಿಗೆ ತಲುಪಿಸುತ್ತಿದ್ದ ಅವರ ಸರ್ವೀಸ್ ಅನ್ನು ಅಮೇರಿಕದ ಬ್ಯಾಂಕ್‌ಗಳೂ ಕೊಡಲಾರವು ಎಂದು ನಾನು ಬೇಕಾದಷ್ಟು ಹೊಗಳಿದ್ದೇನೆ. ಪ್ರತಿವರ್ಷದ ಹಬ್ಬಕ್ಕೋ ಅಥವಾ ಮತ್ತಿತರ ಕಾರಣಗಳಿಗೋ - ಅಲ್ಲಿಂದ ಗ್ರೀಟಿಂಗ್ ಕಾರ್ಡ್‌ಗಳನ್ನು ಕಳಿಸಿದ, ಸ್ಟೇಟ್‌ಮೆಂಟ್‍ಗಳ ಜೊತೆಗೆ ಕ್ಯಾಲೆಂಡರನ್ನು ಕಳಿಸಿದ ಎಷ್ಟೋ ಘಟನೆಗಳು ನಮ್ಮೂರಿನ ಬ್ಯಾಂಕ್ ಅನ್ನು ಎತ್ತಿ ಹಿಡಿಯುತ್ತವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾದ ಮ್ಯಾನೇಜರುಗಳು ನಾನು ಅವರ ಮುಖ ನೋಡಿ ಮಾತನಾಡಿಸದಿದ್ದರೂ ನಮ್ಮೂರಿನ ಕೆಲವೇ ಕೆಲವು ಎನ್‌ಆರ್‌ಐ ಅಕೌಂಟು ಹೋಲ್ಡರುಗಳಲ್ಲಿ ಒಬ್ಬನು ಎಂಬ ಅಭಿಮಾನವನ್ನು ತಲತಲಾಂತರದಿಂದ ಇಟ್ಟುಕೊಳ್ಳುತ್ತಲೇ ಬಂದಿದ್ದಾರೆ, ನಾನು ಹೋದಾಗಲೆಲ್ಲ ಆತ್ಮೀಯವಾಗಿ ಮಾಡಿಸಿ ತಮ್ಮ ಕೈಲಾದ ಸಹಾಯವನ್ನೂ ಮಾಡಿದ್ದಾರೆ.

ಈ ಆನ್‌ಲೈನ್ ಪ್ರಪಂಚದಲ್ಲಿ ಅಂತಹ ಸೇವೆಗಳನ್ನು ಎಲ್ಲಿಂದ ಹುಡುಕಿ ತರಲಿ?

Tuesday, December 11, 2007

ನಮ್ಮ ತಂತ್ರ ’ದೂರದೃಷ್ಟಿ’ಗಳೇ ಬೇರೆಯವೋ?

There is something wrong in the equation ಅಂತ ಅನ್ನಿಸಿದ್ದು ಇತ್ತೀಚೆಗೆ ಮಾತ್ರ - ನಮ್ಮ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಹಬ್ಬಿಕೊಂಡ ಬೀಚುಗಳಿಗೇಕೆ ಬಾಂಬೆ, ಗೋವಾ ಹಾಗೂ ಕೇರಳದ ಬೀಚುಗಳಿಗೆ ಮುತ್ತಿಕೊಂಡಂತೆ ಜನರೇಕೆ ಬರುವುದಿಲ್ಲ? (ಏನೂ ಇಲ್ಲದ) ಮರುಭೂಮಿಯ ರಾಜಸ್ತಾನದವರು, ಚಿಕ್ಕ ರಾಜ್ಯದವರಾದ ಕೇರಳದವರು ಬೆಳೆಸಿದಂತೆ ನಾವೇಕೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಲಿಲ್ಲ? ಔದಾರ್ಯತೆಗೆ ಇನ್ನೊಂದು ಹೆಸರಾದ ಕನ್ನಡಿಗರಿಗೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಗ್ಗಳಿಕೆ ಪಡೆದ ಬೆಂಗಳೂರಿಗೆ ಬಂದ ಜನರನ್ನು ರಾಜ್ಯದ ಇತರೆಡೆ ಪ್ರವಾಸಿಗಳಾಗಿ ಬಿಟ್ಟುಕೊಳ್ಳುವಲ್ಲಿ ಯಾವ ಅಡೆತಡೆಗಳಿರಬಹುದು? ನ್ಯೂ ಯಾರ್ಕ್‌ನಿಂದ ವಾಷಿಂಗ್ಟನ್‌ಗೆ ಹೋದಷ್ಟೇ ಬೆಂಗಳೂರಿನಿಂದ 240 ಮೈಲು ದೂರದಲ್ಲಿರುವ ದೂರದಲ್ಲಿರುವ ಜೋಗ ಜಲಪಾತಕ್ಕಾಗಲೀ ಹತ್ತಿರದ ಹಳೇಬೀಡಿಗಾಗಲೀ ಹಂಪೆಗಾಗಲೀ ನಾವೂ ಏಕೆ ಜನರನ್ನು (ಹೆಚ್ಚೆಚ್ಚು) ಬರಮಾಡಿಕೊಳ್ಳಬಾರದು? ನಮ್ಮ ಪ್ರವಾಸೋದ್ಯಮಕ್ಕೆ ಯಾವ ದಾಡಿ ಹಿಡಿದಿದೆ, ನಮ್ಮ ಮಂದಮತಿಗೆ ಏನು ಮಂಕು ಕವಿದಿದೆ?

ಕೇರಳದ ಜನ ಉಳಿದೆಲ್ಲ ಪ್ರಯೋಗಗಳನ್ನು ಮಾಡಿ ಈ ವರ್ಷದಿಂದ ಮಾನ್ಸೂನ್ ಸೀಜನ್ನಲ್ಲಿ ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವ ಬಗ್ಗೆ ಇತ್ತೀಚೆಗಷ್ಟೇ NPR ನಲ್ಲಿ ವರದಿಯೊಂದು ಕೇಳಿದ್ದು ನನ್ನ ಮನಸ್ಸಿನಲ್ಲಿ ವಾರಗಟ್ಟಲೇ ಹುಳುವಾಗಿ ಕೊರೆಯುತ್ತಲೇ ಇತ್ತು, ಈವರೆಗೂ ಅದೆಷ್ಟೇ ತಲೆತುರಿಸಿಕೊಂಡರೂ ಮೇಲಿನ ಏಕೆ/ಹೇಗೆ ಪ್ರಶ್ನೆಗಳಿಗೆ ಉತ್ತರಗಳಂತೂ ಸಿಕ್ಕಿಲ್ಲ. ನಮ್ಮಲ್ಲಿನ ಜನರ ನೀತಿ, ನಿಯತ್ತು ನಿಯಮಗಳು ಕಾರಣಗಳೇ? ಅಥವಾ ನಮ್ಮಲ್ಲಿನ ಅತಂತ್ರ ರಾಜಕೀಯ ಪರಿಸ್ಥಿತಿ ಬಂದು ಹೋಗುವ ಪ್ರವಾಸಿಗರನ್ನು ದೂರ ನಿಲ್ಲಿಸುತ್ತಿದೆಯೇ? ಎಲ್ಲಕ್ಕಿಂತ ಮುಖ್ಯವಾಗಿ ಇನ್‌ಫ್ರಾಸ್ಟ್ರಕ್ಷರ್ ಇರದಿರುವುದು ದೊಡ್ಡ ಕೊರತೆಯೇ? ಒಂದೂ ಗೊತ್ತಾಗುತ್ತಿಲ್ಲ.

ಕೆಲವು ವರ್ಷಗಳ ಹಿಂದೆ ಜೋಗವನ್ನು ನೋಡಲು ಹೋದಾಗ ಅಲ್ಲಿ ಮೊದಲಿನ ಹಾಗೆ ಎಲ್ಲಿ ಬೇಕೆಂದರಲ್ಲಿ ಕಸ ನೋಡಲು ಧಾರಾಳವಾಗಿ ಸಿಗುತ್ತಿತ್ತು, ನಮ್ಮ ಮಾಮೂಲಿನ ಕಸದ ಜೊತೆಗೆ ಈಚೆಗೆ ಅತಿಯಾಗಿ ಬಳಸಲ್ಪಡುವ ಪ್ಲಾಸ್ಟಿಕ್ ಲೋಟಾಗಳ ಹಾವಳಿ ಒಂದು ಕಡೆಯಾದರೆ ಯುವಕರು ಕುಡಿದು ಬಿಸಾಡುವ ಮದ್ಯ-ಬಿಯರ್ ಬಾಟಲಿಗಳದ್ದು ಮತ್ತೊಂದು. ಅಲ್ಲಿ ಹೋಗಿ ಬಂದವರಿಗೆ ತಂಗುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲವೆಂದು ಕೇಳಿದ್ದೆ. ಸರ್ಕಾರದವತಿಯಿಂದಾಗಲೀ ಸ್ಥಳೀಯ ಸಂಘ ಸಂಸ್ಥೆಗಳಿಂದಾಗಲೀ ಹೋಗಿ ಬರುವವರಿಗೆ ಯಾವುದೇ ಸಹಾಯವೆಂಬುದೇನೂ ದೊರಕಿದಂತೆ ನನಗೆ ಕೇಳಿ ಕಂಡು ಗೊತ್ತಿಲ್ಲ. ಸಾಗರದ ಬಸ್‌ಸ್ಟ್ಯಾಂಡ್‌‍ನಲ್ಲಿ ’ಜೋಗಾ ಜೋಗಾ ಜೋಗಾ...’ ಎಂದು ಅರಚಿಕೊಳ್ಳುವ ಟಿಕೇಟ್ ಕೊಡುವ ಏಜೆಂಟರುಗಳು ಬಂದು ಹತ್ತುವ ಪ್ರಯಾಣಿಕರೆಲ್ಲರೂ ಸ್ಥಳೀಯರು ಎಂಬಂತೆ ಧಾರಾಳತೆಯಿಂದ ಬಸ್ಸು ತುಂಬುವ ದಂಧೆಗಳಲ್ಲಿ ಸಹಜವಾಗಿ ತೊಡಗಿಕೊಂಡಿದ್ದರೆ, ಒಂದು ತಾಲ್ಲೂಕು-ಜಿಲ್ಲಾ ಕೇಂದ್ರದ ಬಸ್‌ನಿಲ್ದಾಣದ ಮೂತ್ರಾಲಯಕ್ಕೆ ಒಮ್ಮೆ ದರ್ಶನ ನೀಡಿದವರು ಇನ್ನು ಜೋಗಾದ ವಿಷಯವಿರಲಿ ಸಾಗರ-ಶಿವಮೊಗ್ಗದ ಕಡೆಗೆ ತಲೆ ಹಾಕಿಯೂ ಮಲಗಲಾರರು.

ಬಹಳ ವರ್ಷಗಳಿಂದ ನನ್ನನ್ನು ಈ ಪ್ರಶ್ನೆ ಬಾಧಿಸುತ್ತಿದೆ - ನಮ್ಮ ಪರಂಪರೆಯಲ್ಲಿ ತಿಂದುಕುಡಿಯುವುದಕ್ಕೆ ಆದ್ಯತೆ ಕೊಡುವ ನಾವು ಶೌಚಾಲಯದ ವಿಚಾರಕ್ಕೆ ಬಂದಾಗ ಅದನ್ನು ಕಡೆಗಣಿಸುವುದಾದರೂ ಏಕೆ? ಎಂಥಾ ಶ್ರೀಮಂತರ ಮನೆಯನ್ನೇ ನೋಡಿ ಅಲ್ಲಿನ ಶೌಚಾಲಯ ಕಿರಿದಾಗಿ ಯಾವುದೋ ಮೂಲೆಯಲ್ಲಿರುವುದು ಸಾಮಾನ್ಯ ನೋಟವಾಗಬಹುದು, ಎಂಥಾ ಅದ್ದೂರಿ ಹೊಟೇಲನ್ನೇ ನೋಡಿ ಅಲ್ಲಿನ ಸಾರ್ವಜನಿಕ ಮೂತ್ರಾಲಯಗಳು ಶಿಥಿಲಗೊಂಡು ಹದಗೆಟ್ಟು ಹೋದರೂ ಅದನ್ನು ದುರಸ್ತಿ ಮಾಡಿಸುವುದಕ್ಕೆ ಸಂಬಂಧಪಟ್ಟವರು ನೆಗ್ಲೆಕ್ಟ್ ಮಾಡುವುದು ನಾನು ನೋಡಿದ ಭಾರತದಲ್ಲಂತೂ ಇತ್ತು.

ಪ್ರವಾಸೋದ್ಯಮವೆನ್ನುವುದು ಕೇವಲ ಪ್ರವಾಸಿಗರನ್ನು ಒಂದು ಟೂರಿಸ್ಟ್ ಡೆಸ್ಟಿನೇಷನ್ನ್ ಕಡೆಗೆ ದೂರದಿಂದ ಆಕರ್ಷಿಸುವುದಷ್ಟೇ ಅಲ್ಲ, ಹಾಗೆ ಬಂದವರನ್ನು ನಮ್ಮ ಮನೆಯ ಅತಿಥಿಗಳ ಹಾಗೆ ನೋಡಿಕೊಳ್ಳುವುದು, ಅವರು ತರುವ ವ್ಯಾಪಾರ-ವಹಿವಾಟು-ಸಂಸ್ಕೃತಿಯಲ್ಲಿ ಒಂದಾಗುವುದೂ ಸೇರಿಕೊಂಡಿದೆ. ದೂರದಿಂದ ಭಾಷೆ ಬರದ ವಿದೇಶೀ ಪ್ರಯಾಣಿಕರ ಪರ್ಸ್ ಒಂದನ್ನು ನಮ್ಮೂರಿನ ನಿಪುಣ ಪಿಕ್‌ಪಾಕೇಟ್ ತಜ್ಞರು ಏಮಾರಿಸಿಕೊಂಡು ಹೋದರೆ ಆ ಪ್ರಯಾಣಿಕರನ್ನು ರಕ್ಷಿಸುವುದು, ಪ್ರವಾಸಿಗರ ಆಸಕ್ತಿಗಳನ್ನು ಬೆಳೆಸುವುದೂ ನಮ್ಮ ಕರ್ತವ್ಯವೆಂಬುದನ್ನು ಜನಸಾಮಾನ್ಯರಿಗೆ ಮನನ ಮಾಡಿಕೊಡುವುದು ಹೇಗೆ?

ಭಾರತವನ್ನು ಸಿಂಗಪುರಕ್ಕೋ ಮತ್ಯಾವುದೋ ದೇಶಕ್ಕೆ ಹೋಲಿಸಿಕೊಳ್ಳುವುದಕ್ಕಿಂತ ಭಾರತದ ಇತರ ರಾಜ್ಯಗಳಲ್ಲಿ ಬಳಕೆಗೆ ಬಂದ ಹಾಗೂ ಯಶಸ್ವಿಯಾದ ತಂತ್ರಗಳನ್ನು ಬಳಸಿ ನಮ್ಮಲ್ಲಿಯೂ ವ್ಯವಸ್ಥಿತವಾದ ಪ್ರವಾಸೋದ್ಯಮವನ್ನು ಹುಟ್ಟು ಹಾಕಲು ಬೆಳೆಸಲು ಮುತ್ಸದ್ದಿಗಳು ಬೇಕು, ಸ್ಥಳೀಯ ನಾಗರಿಕರ ಕಷ್ಟ ಕಾರ್ಪಣ್ಯಗಳು ಎಂದಿಗೂ ಇರುವವೇ, ಈ ಪ್ರವಾಸಿಗರು ತರಬಹುದಾದ ಬಿಸಿನೆಸ್ ಅನ್ನು ಪ್ರತಿಯೊಬ್ಬರಿಗೂ ತಿಳಿಸಿ ಲೋಕಲ್ ಮಟ್ಟದಲ್ಲಿ ಪ್ರವಾಸಿಗರ ಹೆಚ್ಚಳದಿಂದಾಗುವ ಅನುಕೂಲಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವುದು ಮೊಟ್ಟ ಮೊದಲ ಹೆಜ್ಜೆಯಾಗಬೇಕು. ಯಾವುದೇ ಸರ್ಕಾರ ಬಂದರೂ ಜನಪರ ಯೋಜನೆಗಳ ಯಾದಿಯಲ್ಲಿ ಪ್ರವಾಸೋದ್ಯಮವನ್ನೂ ನಿಲ್ಲಿಸಬೇಕು, ಜೊತೆಗೆ ಪ್ರವಾಸೀ ಕೇಂದ್ರಗಳು ಮುಖ್ಯವಾಗಿ ಉಳಿದೆಲ್ಲೆಡೆ ಹಬ್ಬಿರುವ ರಸ್ತೆಜಾಲವನ್ನು ಅಭಿವೃದ್ಧಿಗೊಳಿಸುವ ಧೀಮಂತ ಯೋಜನೆಗಳು ಬರಬೇಕು. ಪ್ರವಾಸಿಗರಿಗೆ ಸಹಾಯ ಮಾಡುವ ವಾಲಂಟರಿ ಸಂಸ್ಥೆಗಳಿಂದ ಹಿಡಿದು, ಪ್ರವಾಸಿಗರ ಮಟ್ಟವನ್ನು ’ಅಳೆ’ದು ಅನುಕೂಲ/ಅನಾನುಕೂಲವನ್ನು ಕೂಲಂಕಷವಾಗಿ ಯೋಚಿಸುವ ಬುದ್ಧಿಜೀವಿಗಳೂ, ಜೊತೆಗೆ ಪ್ರವಾಸಿಗರಿಗೆ ಕಂಟಕಗಳನ್ನೊಡ್ಡುವ ಪ್ರತಿಯೊಬ್ಬರನ್ನೂ ಕಾನೂನಿಗೆ ಸಿಲುಕಿಸುವ ವ್ಯವಸ್ಥೆಯೂ ಬೆಳೆಯಬೇಕು.

ಸ್ವಾತಂತ್ರ್ಯ ಬಂದು ಐದು ದಶಕಗಳು ಸಂದರೂ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿದ್ದರೂ, ಜನ ಸಾಮಾನ್ಯರಲ್ಲಿ ನಗರೀಕರಣ ಮನೋಭಾವನೆ ಬೆಳೆದಂತೆ ವಿಶ್ವದ ಪ್ರತಿಯೊಂದು ಹಳ್ಳಿಯೂ ಟೆಕ್ನಾಲಜಿಯಿಂದ ಆವೃತ್ತವಾದಂತೆ ಪ್ರವಾಸೋದ್ಯಮದ ಬೆಳವಣಿಗೆ ಕರ್ನಾಟಕದಂತಹ ರಾಜ್ಯಗಳಿಗೆ ಸಹಜವಾಗಬೇಕು. ’ಅಯ್ಯೋ, ನಮ್ಮ ಸಮಸ್ಯೆಗಳಿಗೆಲ್ಲ ಮೊದಲು ಉತ್ತರ ಸಿಗಲಿ!’ ಎನ್ನುವ ಮನೋಭಾವವನ್ನು ಬಿಟ್ಟು ಮೂಲ ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಆಧುನಿಕತೆಯನ್ನು ಸ್ವಾಗತಿಸುವ ಔದಾರ್ಯ ಹುಟ್ಟಲಿ. ಕೇರಳಿಗರು ಮಾಡಿದ್ದಾರೆ, ರಾಜಸ್ತಾನದವರು ಮಾಡಿದ್ದಾರೆ ಎನ್ನುವುದಕ್ಕಿಂತಲೂ ನಮ್ಮಲ್ಲೂ ಪ್ರವಾಸೋದ್ಯಮಕ್ಕೆ ಲಾಯಕ್ಕಾದ ಸೌಂದರ್ಯವಿದೆ ಸೊಬಗಿದೆ ಎನ್ನುವ ಮನೋಭಾವ ಬೆಳೆದು ಅದರಿಂದ ನಾಡಿನ ಆದಾಯ ಹೆಚ್ಚಲಿ. ದೂರದ ಜೋಗ ಹಂಪೆಗಳು ಹಾಗಿರಲಿ ಬೆಂಗಳೂರಿಗೆ ವರ್ಷಕ್ಕೆ ಬಂದು ಹೋಗುವ ಸಾವಿರಾರು ಜನರನ್ನು ಹತ್ತಿರದ ಮೈಸೂರಿಗೆ ಮೈಸೂರಿನ ಅರಮನೆಗೆ ಪ್ರವಾಸಿಗಳಾಗಿ ಕರೆತರಲು ಏನೇನೆಲ್ಲವನ್ನು ಮಾಡಬಹುದು? ಹಾಗೆ ಮೈಸೂರಿಗೆ ಬಂದವರನ್ನು ಒಳನಾಡಿಗೆ ಕರೆದುಕೊಂಡು ಹೋಗಲು ಹಾಸನ-ಶ್ರವಣಬೆಳಗೊಳ-ಹಳೇಬೀಡು-ಚಿಕ್ಕಮಗಳೂರು-ಶಿವಮೊಗ್ಗ ಮೂದಲಾದವನ್ನು ತೋರಿಸಲು ಯಾವ ತಂತ್ರವನ್ನು ಅನುಸರಿಸಬಹುದು? ಇದಕ್ಕೂ ಮಿಗಿಲಾಗಿ ಉತ್ತರ ಕರ್ನಾಟಕದ ಹಲವು ರಮಣೀಯ ಸ್ಥಾನಗಳಿಗೆ ಪ್ರವಾಸಿಗರನ್ನು ಕೊಂಡೊಯ್ಯುವುದು ಹೇಗೆ? ಕೇರಳಿಗರು ಮಾನ್ಸೂನನ್ನೇ ದೊಡ್ಡ ಸೇಲ್ಸ್ ಪಾಯಿಂಟ್ ಮಾಡಿಟ್ಟುಕೊಂಡು ತಮ್ಮ ಪ್ರವಾಸಿ ಸಂಬಂಧಿಸಿದ ವೆಬ್‌ಸೈಟುಗಳಲ್ಲಿ ವೀದೇಶಿಯರನ್ನು ಕೈ ಬೀಸಿ ಕರೆಯುತ್ತಿದ್ದಾರೆ - ಪಕ್ಕದ ರಾಜ್ಯಕ್ಕೆ ಬಂದವರನ್ನು ನಾವೂ ಆಮಂತ್ರಿಸೋಣವೇ? ಅಥವಾ ನಮ್ಮ ತಂತ್ರ ’ದೂರದೃಷ್ಟಿ’ಗಳೇ ಬೇರೆಯವೋ?

Monday, December 10, 2007

Inbox ಎನ್ನುವ ಹೊಸ ಸವಾಲು!

ನಿಮ್ಮ ಅಸ್ತಿತ್ವದ ಎಲ್ಲಾ ಮಜಲುಗಳಲ್ಲಿಯೂ ಸಂದೇಶಗಳು ತೂರಿಕೊಂಡು ಬರುತ್ತಿವೆಯೇ, ನಿಮ್ಮ ಇರುವಿಕೆಯ ಪ್ರಾಧಾನ್ಯತೆಯನ್ನು ದಿಢೀರನೆ ಈ ಸಂದೇಶಗಳು ಹೆಚ್ಚುವಂತೆ ಮಾಡಿವೆಯೇ? ನೀವೊಬ್ಬರೇ ಅಲ್ಲ, ಉಳಿದೆಲ್ಲರಿಗೂ ಹಾಗೇ ಅನಿಸುವಂತೆ ಮಾಡಿವೆ ಈ Inbox ಎನ್ನುವ ಮಾಂತ್ರಿಕ. ಗ್ಲೋಬಲ್ ವಿಲೇಜ್ ಎಂಬ ವರ್ಚುವಲ್ ಪ್ರಪಂಚದಲ್ಲಿ ನಾವೂ-ನೀವೂ ಎಲ್ಲರೂ ಒಂದೊಂದು ವಿಶೇಷ ತುಣುಕುಗಳು (entity), ನಮ್ಮ ಅಸ್ತಿತ್ವವನ್ನು ಸದಾಕಾಲ ಪ್ರಶ್ನಿಸಿಕೊಂಡೇ ನಮ್ಮನ್ನು ಕುರ್ಚಿಯ ತುದಿಗೆ ಕೂರುವಂತೆ ಮಾಡುವುದೂ ಅಲ್ಲದೇ ಪ್ರತಿ ದಿನವೂ ಯಾವ ದೇವರನ್ನು ನೋಡುವುದು ತಪ್ಪಿದರೂ ಈ Inbox ಎಂಬ ದೇಗುಲಗಳನ್ನು ನೋಡುವುದನ್ನೇನಾದರೂ ತಪ್ಪಿಸಿಕೊಂಡರೆ ಅದಕ್ಕೆ ಕೊಡಬೇಕಾದ ಬೆಲೆ ಯಾರಿಗೂ ಹೇಳಿ ವಿವರಿಸಲಾಗದ ಒಂದು ರೀತಿಯ ವಿರಹ (ಸಂಕಟ)ವನ್ನು ಎದುರಿಸಬೇಕಾಗಿ ಬಂದೀತು!

ಈ ವೆಬ್ ತಾಣಗಳು ಎಂಬ ಸನ್ನಿಧಿಯಲ್ಲಿ ನಿಮಗಿರುವ ಥರಾವರಿ ಅವತಾರಗಳ ಒಂದು ಹೆಸರು ಮತ್ತು ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವುದೇ ಮೊಟ್ಟ ಮೊದಲ ಸಾಧನೆ; ಯಾಹೂ, ಗೂಗಲ್, ರಿಡಿಫ್, ಆಫೀಸ್, ಪರ್ಸನಲ್, ಬಿಸಿನೆಸ್ ಮುಂತಾಗಿ ಇರುವ ಹಲವಾರು ಇ-ಮೇಲ್ ಅಕೌಂಟುಗಳಲ್ಲಿ ಯಾವುದನ್ನೂ ಓದುವುದು, ಯಾವುದನ್ನು ಬಿಡುವುದು. ಹಿಂದಿನವರಿಗೆಲ್ಲಾ ತಮ್ಮ ವೈಯಕ್ತಿಕ ವಿಷಯಗಳನ್ನು ನೆನಪಿನ್ನಲ್ಲಿಟ್ಟುಕೊಂಡು ವ್ಯವಹರಿಸುವುದು ಮಹಾಸಾಧನೆಯಾಗಿತ್ತೇನೋ, ಆದರೆ ನಮ್ಮ ಕಾಲದವರಿಗೆ ಕಂಪ್ಯೂಟರಿನಲ್ಲಿ ಯೂಸರ್ ಐಡಿ, ಪಾಸ್‌ವರ್ಡ್ ಅನ್ನು ನೆನಪಿನಲ್ಲಿಟ್ಟುಕೊಳ್ಳುವುದೇ ಕಷ್ಟದ ಕೆಲಸ. ಬರೀ ಇ-ಮೇಲ್ ಅಕೌಂಟುಗಳಷ್ಟೇ ಅಲ್ಲ, ನೀವು ನನ್ನ ಹಾಗೆ ಬಂದ ಪ್ರತಿಯೊಂದು ಬಿಲ್ ಅನ್ನೂ ವೆಬ್ ಸೈಟ್ ಮೂಲಕವೇ ಕಟ್ಟುತ್ತಿದ್ದರೆ ಇನ್ನು ಅವುಗಳ ವೆಬ್‌ಸೈಟಿನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೆನಪಿನಲ್ಲಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯವಾದೀತು.

Avatar ಅನ್ನೋದನ್ನ ಇಂಗ್ಲೀಷ್ ಪದಮಾಲೆಗೆ ಸೇರಿಸಿಕೊಳ್ಳುವಷ್ಟರ ಮಟ್ಟಿಗೆ ಈ ಅವತಾರಗಳ ವ್ಯಾಪ್ತಿ ನಿಜ. ಮಹಾವಿಷ್ಣು ಅದೆಷ್ಟೋ ಅವತಾರಗಳನ್ನು ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ ತಾಳಿಕೊಂಡು ಅದೆನೇನೋ ಮಹಾಸಾಧನೆಗಳನ್ನು ಮಾಡಿಕೊಂಡು ಬಂದಿದ್ದರೆ ನಮಗೆ ಈಗಿನ ಜನ್ಮದಲ್ಲಿಯೇ ಅದೆಷ್ಟೊಂದು ಅವತಾರಗಳು! ಪ್ರತಿಯೊಂದು ಅವತಾರದಲ್ಲಿಯೂ ಅಲ್ಲಿನ ಒಂದು ಸಮೂಹ - ಬೇಕೋ ಬೇಡವೋ ನಮ್ಮನ್ನು ಯಾವಾಗಲೂ ಪರಿಷ್ಕರಿಸಿಕೊಂಡೇ ಇರುತ್ತದೆ, ಅಂಥ ಒಂದು ಸಮೂಹವೆಂಬ ವ್ಯವಸ್ಥೆಯಲ್ಲಿನ ಸಂಬಂಧಗಳನ್ನು ಜೀವಂತವಾಗಿಟ್ಟುಕೊಳ್ಳುವುದು, ಅದನ್ನು ಕಾಪಾಡಿಕೊಂಡು ಹೋಗುವುದು ಸಾಧನೆಯಲ್ಲದೇ ಮತ್ತೇನು? ನಿಮಗೆ ಎಂದಾದರೂ ಮೂರ್ನಾಲ್ಕು ದಿನಗಳ ಮಟ್ಟಿಗೆ ಕಂಪ್ಯೂಟರ್ ಆಕ್ಸೆಸ್ ಸಿಗಲಿಲ್ಲವೆಂದುಕೊಳ್ಳಿ, ಎಂಥಾ ಕಾಫಿಯ ವಿತ್‌ಡ್ರಾವಲ್ ಎಫೆಕ್ಟಾನ್ನಾದರೂ ಸಹಿಸಿಕೊಂಡಿರಬಹುದು, ಆದರೆ ಈ ಇ-ಮೇಲ್ ಅನ್ನು ಒಂದು ದಿನವೂ ಬಿಡಲಾಗದೇ ಹೇಗಿರಬಹುದು ಎಂದು ಯೋಚಿಸಿ, ನಿಮಗಾಗಲೇ ಸಣ್ಣಗೆ ತಲೆನೋವು ಆವರಿಸಿಕೊಳ್ಳುತ್ತದೆ. ಇನ್ಸ್ಟಂಟ್ ಮೆಸ್ಸೇಜುಗಳಿಗೆ ಒಂದೇ ಒಂದು ಇಂಟರ್‌ಫೇಸ್‌ Meebo ನಲ್ಲಿ ಇರೋ ಹಾಗೆ ಯಾರಾದರೂ ಒಂದೇ ಒಂದು ಇ-ಮೇಲ್ ಇಂಟರ್‌ಫೇಸ್ ಕಂಡುಹಿಡಿಯಬಾರದೇಕೆ ಎಂದು ಎಷ್ಟೋ ಸಲ ಅನ್ನಿಸಿದೆ. ಔಟ್‌ಲುಕ್ ಥರದ ಅಪ್ಲಿಕೇಷನ್ನುಗಳಿಗೆ ಅಳವಡಿಸಿಕೊಳ್ಳೋಣವೆಂದರೆ ಎಲ್ಲರೂ ಪಾಪ್ ಇ-ಮೇಲ್ ಆಕ್ಸೆಸ್ ಕೊಡೋದಿಲ್ಲ, ಹಾಗೆ ಕೊಟ್ಟರೂ ಅದನ್ನು ಡೌನ್‌ಲೋಡ್ ಮಾಡಿಕೊಂಡು ಒಂದೇ ಕಂಪ್ಯೂಟರ್‌ನಿಂದ ಓದುವ ಹಾಗೆ ಮಾಡುವುದೂ ಕಷ್ಟ, ಒಂದು ವೇಳೆ ಸರ್ವರ್‌ಗಳಲ್ಲಿ ಮೆಸ್ಸೇಜುಗಳನ್ನು ಬಿಟ್ಟುಕೊಂಡರೆ ಅವೆಲ್ಲವೂ Unread ಕಾಣುವುದರಿಂದ ಯಾವುದನ್ನು ಎಲ್ಲಿ ಓದಿದ್ದೇವೆ, ಬಿಟ್ಟಿದ್ದೇವೆ, ಉತ್ತರಿಸಿದ್ದೇವೆ, ಇಲ್ಲ ಎನ್ನುವುದನ್ನು ಕಾಯ್ದುಕೊಂಡು ಹೋಗುವುದೇ ಕಷ್ಟದ ಕೆಲಸ.

ನಮ್ಮೊಡನೆ ಸದಾ ಇರುವ ಈ ವರ್ಚುವಲ್ ಪ್ರಪಂಚದ ಇನ್‌ಫರ್‌ಮೇಷನ್ ಟೆಕ್ನಾಲಜಿಯನ್ನು ಎಷ್ಟರ ಮಟ್ಟಿಗೆ ನಾವು ಅಳವಡಿಸಿಕೊಂಡಿದ್ದೇವೆ ಎಂದರೆ ಕಂಪ್ಯೂಟರ್ ಪ್ರೋಗ್ರಾಮುಗಳಲ್ಲಿ ಇರುವ ವೇರಿಯಬಲ್ಲುಗಳ ಹಾಗೆ ನಮ್ಮ ಮನಸ್ಸಿನಲ್ಲೂ ಬೇಕಾದಷ್ಟು ಗ್ಲೋಬಲ್, ಲೋಕಲ್, ಆಬ್ಜೆಕ್ಟ್ ರಿಲೇಟಡ್ ವೇರಿಯಬಲ್ಲುಗಳನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಎಷ್ಟೋ ಜನರ ಇ-ಮೇಲ್ ಅಡ್ರೆಸ್ಸುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು, ಆಯಾ ವೆಬ್‌ಸೈಟ್‌ಗೆ ಸಂಬಂಧಿಸಿದಂತೆ ಅವರವರ ಯೂಸರ್ ‍ಐಡಿಯನ್ನು, ಪಾಸ್‌ವರ್ಡ್ ಅನ್ನೂ ನೆನಪಿನಲ್ಲಿಟ್ಟುಕೊಂಡು, ತಮ್ಮ ಬಳಗದ ಎಲ್ಲರನ್ನೂ ಗುರುತಿಸಿ, ಕಲೆಹಾಕಿಕೊಳ್ಳುವುದನ್ನು ನಿಧಾನವಾಗಿ ಯೋಚಿಸಿ ನೋಡಿ ಅದೇ ಒಂದು ಮಹಾಕೆಲಸ. ಒಮ್ಮೆ ಒಂದೊಂದು ಇ-ಮೇಲ್ ಸಿಸ್ಟಮ್ಮುಗಳಿಗೆ ಆಕ್ಸೆಸ್ ದೊರೆತೊಡನೆ ಅಲ್ಲಿನ Unread ಮೆಸ್ಸೇಜುಗಳ ಕೌಂಟ್ ಅನ್ನು ಸೊನ್ನೆಗೆ ಹತ್ತಿರ ತಂದಿಟ್ಟುಕೊಳ್ಳುವುದು ಮತ್ತೊಂದು ಸಾಧನೆ. ಬಂದಿರುವ ಇ-ಮೇಲ್‌ಗಳಿಗೆ ಯಾರಿಗೆ ಯಾವ ರೀತಿಯಲ್ಲಿ ಉತ್ತರ ಕೊಡಬೇಕು, ಒಳ್ಳೆಯ ಇ-ಮೇಲ್‌ಗಳನ್ನು ಸ್ಪ್ಯಾಮ್‌ಗಳಿಂದ ಮುಕ್ತವಾಗಿಸಿ ಹೇಗೆ ಇಟ್ಟುಕೊಳ್ಳೋದು ಇಂಥವುಗಳನ್ನು ಯೋಚಿಸುವಲ್ಲೇ ನಮ್ಮ ನಮ್ಮ ಶಕ್ತಿ ಕರಗಿ ಹೋದೀತು. ಹಿಂದಿನವರು ಅದೆಷ್ಟು ಓದುತ್ತಿದ್ದರು, ಬರೆಯುತ್ತಿದ್ದರು ಎಂದು ಹಳೆಯದನ್ನು ಮೆಲುಕು ಹಾಕುವವರಿಗೆ ಹೇಳಿ - ನಾವು ಓದಿ ಬರೆಯುವ ಇ-ಮೇಲ್‌ಗಳನ್ನೇ ಉದ್ದಕ್ಕೆ ಪಬ್ಲಿಷ್ ಮಾಡಿ ನೋಡಿದರೆ ಅದು ದಿನಕ್ಕೊಂದು ಗ್ರಂಥವಾಗದೇ ಮತ್ತಿನ್ನೇನಾದೀತು?

ನಾನು ಮಹಾನ್ ಆಶಾವಾದಿಯೇ, ಇವತ್ತಲ್ಲ ನಾಳೆ ನನಗೆ ಎಲ್ಲ ಅಕೌಂಟುಗಳಿಗೆ ಬಂದು ಸೇರುವ ಇ-ಮೇಲ್‌ಗಳು ಹಣಕಾಸಾಗಿ ಪರಿವರ್ತಿತವಾಗಿ ನಾನು ಕೋಟ್ಯಾಧೀಶ್ವರನಾಗುತ್ತೇನೆ ಎಂದು ಕನಸು ಕಾಣುವುದೇ ಹೆಚ್ಚು! ಯೋಚಿಸಿ ನೋಡಿ, ನಿಮಗೆ ಬರುವ ಒಂದೊಂದು ಇ-ಮೇಲ್‌ಗೆ ಒಂದೊಂದು ಪೈಸೆಯಂತೆ ಸಿಕ್ಕಿದರೂ ನೀವು ಆರಾಮವಾಗಿ ರಿಟೈರ್ ಆಗಿಕೊಂಡಿರುವ ಕಾಲ ದೂರವಲ್ಲದೇ ಇನ್ನೇನಾದೀತು? ದಿನಕ್ಕೆ ಮಿಲಿಯನ್‌ಗಟ್ಟಲೆ ಸ್ಪ್ಯಾಮ್ ಇ-ಮೇಲ್ ಕಳಿಸುವವರಿಗೆ ಅದೇ ಬಿಸಿನೆಸ್ ಆಗಿ ಅವರು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿರುವಾಗ ಅಂತಹ ಇ-ಮೇಲ್ ಅನ್ನು ಸ್ವೀಕರಿಸುವವರಿಗೂ ಆ ಹಣದ ಒಂದು ಪಾಲು ಸಿಗದಿರುವುದು ವಿಪರ್ಯಾಸವೇ ಸರಿ. ನನಗೆ ಬರುವ ಅದೆಷ್ಟೋ "ಲಾಟರಿ ವಿನ್" ಇ-ಮೇಲ್‌ಗಳನ್ನು ನೋಡಿದರೆ ಆಫ್ರಿಕಾದಲ್ಲಿ ಕೋಟ್ಯಾಂತರ ಡಾಲರುಗಳು ದಿನವಿಡೀ ಅವಿಷ್ಕಾರವಾಗುತ್ತಲೇ ಇರುವ ಸತ್ಯ ತಿಳಿಯುತ್ತದೆ. ಹಾಗೆ ಬಂದ ಪ್ರತಿಯೊಂದು ಇ-ಮೇಲ್ ಅನ್ನೂ ಹಿಡಿದುಕೊಂಡು ಸಂಬಂಧಿಸಿದವರನ್ನು ಸಂಪರ್ಕಿಸಿ ದಿಢೀರ್ ಶ್ರೀಮಂತನಾಗಲೇ ಎಂದು ಒಂದು ಮನಸ್ಸು ಹೇಳಿದರೂ, ಅದು ಸತ್ಯವಲ್ಲ ಸ್ಪ್ಯಾಮ್ ಎಂದು ತಿಳಿದಾಗ ನಿರಾಶೆಯಾದ ದಿನಗಳೇ ಹೆಚ್ಚು.

ಒಂದು ಕಾಲದಲ್ಲಿ ವ್ಯಕ್ತಿಯೊಬ್ಬರ ಯೋಗ್ಯತೆಯನ್ನು ಅವರವರ ಬ್ಯಾಂಕ್ ಬ್ಯಾಲೆನ್ಸುಗಳಲ್ಲಿ ಅಳೆಯಲಾಗುತ್ತಿತ್ತಂತೆ! ಆದರೆ ಇಂದಿನ ಯೋಗ್ಯತೆಯ ಅಳತೆಯ ಮಟ್ಟವೇ ಬೇರೆ, ನಿಮ್ಮ Inbox ಗಳಲ್ಲಿ ಅದೆಷ್ಟು Unread ಮೆಸ್ಸೇಜುಗಳಿವೆ ಎಂಬುದರಿಂದ ನೀವು ಅದೆಷ್ಟು Uptodate ಎನ್ನುವುದು ಗೊತ್ತಾಗುತ್ತದೆ, ಅದೇ ನಿಮ್ಮ ಯೋಗ್ಯತೆ. ನಾನು ಈಗಷ್ಟೇ ನನ್ನ ಮೆಸ್ಸೇಜುಗಳೆಲ್ಲವನ್ನೂ ನೋಡಿ "zero" ಸ್ಟ್ಯಾಟಸ್ ಗಳಿಸಿಕೊಂಡಿದ್ದೇನೆ, ಅದು ಕ್ಷಣಿಕವಾದದ್ದು, ಇನ್ನೊಂದು ಘಳಿಗೆಯಲ್ಲೇ ಮತ್ತಿನ್ನೆಲ್ಲಿಂದಲೋ ಸಂದೇಶಗಳು ಬಂದು ಬೀಳುತ್ತವೆ, ಮತ್ತೆ ಅವುಗಳಿಗೆ ಉತ್ತರ ಕೊಡುತ್ತೇನೆ, ಆ ಉತ್ತರಗಳು ಇನ್ನಷ್ಟು ಸಂದೇಶಗಳನ್ನು ಸೃಷ್ಟಿ ಮಾಡುತ್ತವೆ, ಮತ್ತಷ್ಟು ಉತ್ತರಗಳನ್ನು ಕೊಡುತ್ತೇನೆ - ಹೀಗೆ ಇದು ನಿಲ್ಲದ ಪಯಣ. ನಿಮ್ಮ Inbox ಎನ್ನುವುದು ನಿಮ್ಮ ಸ್ವಚ್ಛತೆಯ ಸವಾಲಾದೀತು, ಆರೋಗ್ಯದ ಕುರುಹಾದೀತು, ನಿಮ್ಮ ಅಂತಸ್ತಾದೀತು, ಆಸ್ತಿಯಾದೀತು - ಹೀಗೆ ಸರ್ವಸ್ವವನ್ನೂ ವ್ಯಾಪಿಸಿಕೊಳ್ಳುವ ವರ್ಚುವಲ್ ಪ್ರಪಂಚದಲ್ಲಿ ಇ-ಮೇಲ್ ಎನ್ನುವುದೇ ದೊಡ್ಡದು, ಅದನ್ನು ಮ್ಯಾನೇಜ್ ಮಾಡಿಕೊಂಡು ಹೋಗುವುದು ಇನ್ನೂ ದೊಡ್ಡದು.

ನೀವೇನೇ ಕಲಿತಿರಿ ಬಿಡಿ, ನಿಮ್ಮ ಇ-ಮೇಲ್‌ಗಳಲ್ಲಿ ನೀವು ಹೇಗೆ ಸಂವಾದಿಸುತ್ತೀರಿ ಎನ್ನುವುದು ನಿಮ್ಮ ಸರ್ವಸ್ವವನ್ನೂ ನಿರ್ಣಯಿಸಬಹುದು. ಶಾಲಾ-ಕಾಲೇಜುಗಳಲ್ಲಿ ಕಮ್ಮ್ಯೂನಿಕೇಷನ್ನು ಸ್ಕಿಲ್ಲುಗಳಿಗೆ ನಮ್ಮ ಕಾಲದಲ್ಲಂತೂ ಒತ್ತು ನೀಡುತ್ತಿರಲಿಲ್ಲ, ಈಗಾದರೂ ಅವುಗಳನ್ನು ಕಲಿಸುತ್ತಾರೋ ಏನೋ? ನೀವು ಎಷ್ಟರ ಮಟ್ಟಿಗೆ On top of your email ಇರುತ್ತೀರೋ ಅಷ್ಟೇ ಮೇಲಕ್ಕೆ ಹೋಗುವ ಸಾಧ್ಯತೆಗಳಿವೆ. ಲಕ್ಷಾಂತರ ಡಾಲರುಗಳನ್ನು ಗಳಿಸುವವರಿಗೂ ಕಾಲೇಜು ವಿದ್ಯಾರ್ಥಿಗಳಿಗೂ ಇ-ಮೇಲ್ ಎನ್ನುವುದು ಒಂದೇ ಮಾಧ್ಯಮವಾಗಿ ಕಂಡುಬಂದೀತು, ಆದರೆ ಅದರಲ್ಲಿನ ಸಂವಹನ ಕ್ರಮ ಅದರ ಪರಿಣಾಮ ಬಹಳ ಭಿನ್ನವಾದದ್ದು. ಒಬ್ಬ ಅಧಿಕಾರಿ ತನ್ನ ಕೈ ಕೆಳಗಿನವರಿಗೆ ಕಳಿಸುವ ಸಂದೇಶ ಒಂದು ಕ್ರಿಟಿಕಲ್ ಬಿಸಿನೆಸ್ ಡಿಸಿಷನ್ನ್ ಅನ್ನು ಪ್ರತಿನಿಧಿಸಬಹುದು, ಕೆಳಗಿನವರು ಅದನ್ನು ಹೇಗೆ ಅರ್ಥೈಸಿಕೊಂಡು ಕಾರ್ಯ ರೂಪಕ್ಕೆ ತರುತ್ತಾರೆ ಎನ್ನೋದು ಒಂದು ಕಂಪನಿಯ ಅಸ್ತಿತ್ವವನ್ನೇ ಪ್ರಶ್ನಿಸಬಹುದು.

ನಿಮ್ಮ Inbox ನಲ್ಲಿ ಅದೆಷ್ಟು ಸಂದೇಶಗಳು ಇನ್ನೂ ಓದದೇ ಹಾಗೇ ಇವೆ? ಅವುಗಳನ್ನು ಯಾವಾಗ ಓದಿ-ಉತ್ತರಿಸಿ ಮುಗಿಸುತ್ತೀರಿ?

Saturday, December 08, 2007

ವಿಪರ್ಯಾಸ ಹಾಗೂ ವಿಶೇಷ

ನಿಮಗೆಲ್ಲಾ ನೆನಪಿದೆಯೋ ಇಲ್ವೋ ನಾವಂತೂ ಒಂದ್ ಕಾಲದಲ್ಲಿ ಯುಎಸ್‌ಗೆ ಬರಬೇಕು ಅಂತ ತಹತಹಿಸ್ತಾ ಇದ್ವಿ, ಸದಾಶಿವನಿಗೆ ಅದೇ ಧ್ಯಾನ ಅಂತ ಹಗಲೂ ರಾತ್ರೀ ಯಾವತ್ತ್ ಯುಎಸ್. ಗೆ ಹೋಗ್ತೀವೋ ಅಂತ ತಲೆ ಕೆಡಿಸಿಕೊಂಡಿದ್ದೇ ಕೊಂಡಿದ್ದು, ಇದ್ದ ಬದ್ದ ಟೆಕ್ನಾಲಜಿ ಪುಸ್ತಕಗಳನ್ನೆಲ್ಲ ಓದಿದ್ದೇ ಓದಿದ್ದು. ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ, 1995 ರ ಹೊತ್ತಿಗೆ ಪ್ರಪಂಚದಲ್ಲಿ ಇನ್ನೂ ಉಳಿದ ದೇಶದವರು ಚೇತರಿಸಿಕೊಳ್ತಾ ಇರಬೇಕಾದ್ರೆ, Y2K ಅನ್ನೋ ಬಕಾಸುರನಿಗೆ ಮುಂದುವರೆದ ದೇಶಗಳು ಆಹಾರವನ್ನು ತಯಾರಿಸಿಕೊಳ್ಳಬೇಕು ಅನ್ನೋ ಕಲ್ಪನೆಯನ್ನು ತಲೆಯನ್ನು ಹೊಕ್ಕಿಸಿಕೊಳ್ಳೋ ಮೊದಲೇ ಭಾರತದಲ್ಲಿ ಬೇಕಾದಷ್ಟು ಉದ್ದಾಮರು ಆಧುನಿಕ ತಂತ್ರಜ್ಞಾನವನ್ನು ತಂದು ಬಿಟ್ಟಿದ್ದರು. ನಾವು ಓದಿ ಕೆಲ್ಸಾ ಮಾಡ್ತಾ ಇರೋ ಮದ್ರಾಸಿನ ಹೊರವಲಯದಲ್ಲಿರೋ ಪೆಂಟಾಫೋರ್ ಸಂಸ್ಥೆಯಲ್ಲಿ ಆಗ್ಲೇ ಎಲ್ಲಾ ಥರದ ಹಾರ್ಡ್‌ವೇರುಗಳನ್ನು ಕಲೆಹಾಕಿ, ಸಿಲಿಕಾನ್ ಗ್ರಾಫಿಕ್ಸ್ ಸಿಸ್ಟಮ್ಮ್‌ಗಳನ್ನು ಹುಟ್ಟುಹಾಕಿ, ಸಿಡಿ ಬರ್ನರ್ ಉತ್ಪಾದಕ ಘಟಕವನ್ನೂ, ಟ್ರೈನಿಂಗ್ ಸೆಂಟರನ್ನೂ ಕೋಟ್ಯಾಂತರ ರೂಪಾಯಿಯ ಬಂಡವಾಳದಲ್ಲಿ ಮೇಲೆತ್ತಿ ನಿಲ್ಲಿಸಿದ ಮುತ್ಸದ್ದಿಗಳ ದೂರದೃಷ್ಟಿಯನ್ನು ಎಂಥವರೂ ಮೆಚ್ಚಲೇ ಬೇಕು.

ತಂತ್ರಜ್ಞಾನ ಕಲಿತು ಭಾರತವನ್ನು ಬಿಟ್ಟವರ ಸಂಖ್ಯೆ ಬಹಳ - ಅದಕ್ಕಿಂತ ಹಿಂದೆ ಎಪ್ಪತ್ತು ಎಂಭತ್ತರ ದಶಕದಲ್ಲಿ ಡಾಕ್ಟರುಗಳು ಹಾಗೂ ಕೆಲವೇ ಕೆಲವು ಇಂಜಿನಿಯರುಗಳು ದೂರಕ್ಕೆ ಹೋಗುತ್ತಿದ್ದರೇನೋ. ತೊಂಭತ್ತರ ದಶಕದ ಅಂತ್ಯದಲ್ಲಂತೂ H1B ಕೋಟಾವನ್ನು ದುಪ್ಪಟ್ಟು ಹೆಚ್ಚಿಸುವಷ್ಟರ ಮಟ್ಟಿಗೆ ಭಾರತದಿಂದ ಕೆಲಸಗಾರರು ಹೊರಗೆ ಹೋಗಲಾರಂಭಿಸಿದರು. ಒಂದಿಷ್ಟು ಅಂಕಿ-ಅಂಶಗಳ ಪ್ರಕಾರ ಇದ್ದಬದ್ದ ವೀಸಾ ಕೆಟಗರಿಯಲ್ಲಿ ಭಾರತದವರದ್ದೇ ಸಿಂಹಪಾಲು (೪೬%). Y2K ಕೆಲಸಗಳೆಲ್ಲ ಮುಗಿದು ಮಿಲೆನಿಯಮ್ ನಂತರ ಒಂದಿಷ್ಟು ಜನರಿಗೆ ನಿರಾಶೆಯ ಮೋಡ ಕವಿದು ಅವರು ಕೆಲಸವಿಲ್ಲದೇ/ಸಿಗದೇ ಭಾರತಕ್ಕೆ ಹಿಂತಿರುಗಿ ಹೋಗಬೇಕಾದ್ದನ್ನೂ ನಮ್ಮ ತಲೆಮಾರು ಕಂಡಿದೆ. ಉದಯವಾಣಿಯಂತಹ ಪೇಪರುಗಳಲ್ಲಿ ಅಮೇರಿಕದಿಂದ ಹಿಂತಿರುಗಿ ಬರುತ್ತಿರುವ ಕೆಲಸಗಾರರ ಬಗ್ಗೆ ಬರೆದದ್ದನ್ನು ಓದಿ ಎಷ್ಟೋ ಜನ ಕಂಗಾಲಾಗಿದ್ದೂ ಇದೆ. ಆದರೆ ಡಾಟ್ ಕಾಮ್ ಬಬಲ್ ಒಡೆದ ಹೊಡೆತವನ್ನು ಭಾರತದ ಟೆಕ್ನಾಲಜಿ ಕಂಪನಿಗಳು ಅರಗಿಸಿಕೊಳ್ಳಲು ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ, ಬಿಪಿಓ, ಬಿ.ಟಿ. ಮುಂತಾದವುಗಳ ದೆಸೆಯಿಂದ ಇಂದಿಗೂ ಬೇಕಾದಷ್ಟು ರೂಪಾಯಿ-ಡಾಲರನ್ನು ಗಳಿಸುತ್ತಲೇ ಇವೆ, ಇನ್ನೂ ಗಳಿಸುತ್ತವೆ.

***

ಎರಡು ಸೂಟ್‌ಕೇಸ್ ಹಿಡಿದುಕೊಂಡು ಎಲ್ಲಿಗೆ ಬೇಕಾದಲ್ಲಿ ಹೊರಡಲು ತಯಾರಿದ್ದ ನಮಗೆ ಸಿಗುತ್ತಿದ್ದ ಉಪದೇಶ-ಮಾರ್ಗದರ್ಶನ ಬಹಳಷ್ಟೇನೂ ಇರಲಿಲ್ಲ. ಆಗೇನೂ ವೆಬ್‌ಸೈಟ್‌ಗಳೂ ಅಷ್ಟು ಪ್ರಚಲಿತವಾಗಿರಲಿಲ್ಲ, ಇದ್ದರೂ ಎಲ್ಲಿಬೇಕಂದರಲ್ಲಿ ಈಗಿನ ಹಾಗೆ ಮಾಹಿತಿಗಳು ಅಷ್ಟೊಂದು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ಯಾರೋ ಪುಣ್ಯಾತ್ಮರು ನಮಗಿಂತ ಮೊದಲೇ ವಿದೇಶದ ನೀರಿನ ಋಣವನ್ನು ಅನುಭವಿಸಿದವರು, ವಿದ್ಯಾರ್ಥಿಗಳಾಗಿ ಹೋಗಿ ವೀದೇಶದಲ್ಲಿ ಪಳಗಿದವರು ಮೊದಲಾದವರಿಂದ ನಾವು ಅಮೇರಿಕದ ಬಗ್ಗೆ ’ಕೇಳಿ’ ತಿಳಿದುಕೊಳ್ಳುತ್ತಿದ್ದೆವು. ನನಗೆ ಬಾಂಬೆಯಲ್ಲಿ ವ್ಯಕ್ತಿಯೊಬ್ಬ ಸಿಕ್ಕಿದ್ದ, ಅವನು ಅಲಬಾಮಾದಲ್ಲಿ ಐದಾರು-ವರ್ಷಗಳನ್ನು ಕಳೆದು ಭಾರತಕ್ಕೆ ಹಿಂತಿರುಗಿದವನು, ಅಂದಿನ ಅವನ ಅನುಭವಕ್ಕೂ ಇಂದಿನ ನಮ್ಮ ನ್ಯೂ ಯಾರ್ಕ್ ಅನುಭವಕ್ಕೂ ಬಹಳಷ್ಟು ವ್ಯತ್ಯಾಸವಿದೆಯೆನ್ನುವುದನ್ನು ಆತ ಹೇಗೆ ತಾನೇ ವಿವರಿಸಿಯಾನು, ಅದನ್ನು ನಾವಾದರೂ ಹೇಗೆ ಅರ್ಥ ಮಾಡಿಕೊಳ್ಳಬಹುದಿತ್ತು?

ಅಮೇರಿಕದಲ್ಲಿ ನಾಲ್ಕೈದು ಟೈಮ್ ಝೋನ್‌ಗಳಿವೆಯಂತೆ, ಭಾರತದ ಮೂರನೇ ಒಂದರಷ್ಟು ಇರುವ ಜನತೆಗೆ ಭಾರತದ ವಿಸ್ತೀರ್ಣದ ನಾಲ್ಕು ಪಟ್ಟು ದೊಡ್ಡ ದೇಶ, ಅದಕ್ಕೆ ಅಲ್ಲಲ್ಲಿನ ಟೈಮುಗಳು, ಒಂದು ಕಡೆ ಸ್ನೋ ಬಿದ್ದರೆ ಇನ್ನೊಂದು ಕಡೆ ಬಿಸಿಲು, ಸುಮಾರು ಇನ್ನೂರು ವರ್ಷಕ್ಕೂ ಹೆಚ್ಚಿನ ರಾಜಕೀಯ ಇತಿಹಾಸ, ಬೇಕಾದಷ್ಟು ಸಿಗುವ ಮನರಂಜನೆ, ಥರಥರನ ಚರ್ಮದ ಬಣ್ಣ - ಇನ್ನೂ ಏನೇನೋ! ಈ ರೀತಿಯ ಕನ್ವರ್ಸೇಷನ್ನುಗಳನ್ನು ಎಷ್ಟು ಹೊತ್ತು ಬೇಕಾದರೂ ಮಾಡಿಕೊಂಡಿರಬಹುದಿತ್ತು, ಎಲ್ಲರಿಗೂ ಅವರವರ ಅನುಭವ, ಅದೇ ಅವರ ಆಸ್ತಿ.

***

ಇತ್ತೀಚೆಗೆ ಭಾರತಕ್ಕೆ ಕೆಲಸದ ನಿಮಿತ್ತ ಹೋಗಿ ಬರುವವರನ್ನು, ಅಲ್ಲೇ ಸ್ವಲ್ಪ ದಿನಗಳ ಇದ್ದವರನ್ನು ವಿಚಾರಿಸಲಾಗಿ ಎಲ್ಲರೂ ಹೇಳುವುದು ಒಂದೇ ಒಂದು ಮಾತು - ’ಭಾರತ ಬದಲಾಗಿದೆ, ನಿಮಗೆ ಅಮೇರಿಕೆಯಲ್ಲಿ ಏನೇನೆಲ್ಲ ಸಿಗುತ್ತದೆಯೋ ಅದೆಲ್ಲ ಇಲ್ಲಿ ಸಿಗುತ್ತದೆ!’ ವಿಪರ್ಯಾಸವೆಂದರೆ, ನನ್ನಂತಹವರು ಒಂದು ಕಾಲದಲ್ಲಿ ಯಾವ ದೇಶದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ ಎಂದುಕೊಂಡಿದ್ದೆವೋ ಅದೇ ದೇಶದ ಬಗ್ಗೆ ಇಂದು ನಮ್ಮ ನೋಟ್ಸ್ ಅನ್ನು ಚೆಕ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಂದು ಬಾಡಿಶಾಪರ್ರ್‌ಗಳ ಚಾಕಚಕ್ಯತೆಗೆ ಬಲಿಯಾಗದ ಹಾಗೆ, ಸಿಹಿಯಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿಸಿ ಬಲೆಗೆ ಬೀಳಿಸಿಕೊಳ್ಳುವ ಮೋಹಿನಿ ರಿಕ್ರ್ಯೂಟರುಗಳಿಂದ ನಮ್ಮತನ (ರೆಸ್ಯೂಮೆ)ವನ್ನು ಜೋಪಾನಮಾಡಿಕೊಳ್ಳುವ ಸೂಕ್ಷ್ಮವನ್ನು ಹರಿತ ಮಾಡಿಕೊಳ್ಳುವ ಕಾಲಬಂದೊದಗಿದೆ. ಅಂದಿನ ರೆಸ್ಯೂಮೆಗಳಲ್ಲಿ ಫೋನ್ ನಂಬರ್ ಕಾಲಮ್ ಇದ್ದರೆ ಹೆಚ್ಚಾಗುತ್ತಿತ್ತು, ಇಂದಿನ ರೆಸ್ಯೂಮೆಗಳಲ್ಲಿ ಫೋನ್ ನಂಬರ್, ಮೊಬೈಲ್ ನಂಬರ್, ಇ-ಮೇಲ್ ಇವೆಲ್ಲವೂ ಸಹಜವಾಗಿವೆ. ’ನಿಮ್ಮ ರೆಸ್ಯೂಮೆಗೆ ತಕ್ಕ ಕೆಲಸ ಬಂದಾಗ SMS ಸಂದೇಶವನ್ನು ಕಳಿಸುತ್ತೇವೆ’ ಎಂದು ಕೆಲವು ವೆಬ್ ಸೈಟ್‌ಗಳಲ್ಲಿ ನೋಡಿದಾಗ ನಾನು ಮೂರ್ಛೆ ಹೋಗದಿದ್ದುದೇ ಹೆಚ್ಚು.

ಕೈಗಾರಿಕಾ ಕ್ರಾಂತಿ, ರಾಜಕೀಯ ಕ್ರಾಂತಿ, ಧಾರ್ಮಿಕ ಕ್ರಾಂತಿ ಮುಂತಾದವುಗಳ ಯಾದಿಗೆ ಭಾರತದ ಇತ್ತೀಚಿನ ಬೆಳವಣಿಗೆಯನ್ನು ಕಮ್ಮ್ಯೂನಿಕೇಶನ್ ಕ್ರಾಂತಿಗೆ ಸೇರಿಸಿಬಿಡಬೇಕು. ಒಂದು ಕಾಲದಲ್ಲಿ ಮನೆಗೆ ಒಂದೂ ಫೋನ್ ಇರದ ಕುಟುಂಬಗಳು ಇಂದು ಎರಡೂ-ಮೂರು ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವಷ್ಟರ ಮಟ್ಟಿಗೆ ಮುಂದುವರೆದಿವೆ. ಎಸ್ಸೆಮ್ಮೆಸ್ ಸಂದೇಶಗಳು, ಕಾಲ್‌ಬ್ಲಾಕ್ ಮುಂತಾದವುಗಳನ್ನೆಲ್ಲ ನೋಡಿದ ಮೇಲೆ, ಕೇವಲ ರಿಂಗ್‌ಟೋನ್ ಆಧರಿಸಿ ಬೆಳೆದ ವ್ಯವಹಾರವನ್ನು ಗಮನಿಸಿದ ಮೇಲೆ ನನ್ನ ಬಾಯಿಯಿಂದ ನನಗೇ ಅರಿವಿರದ ಹಾಗೆ ’It is BIG!’ ಎನ್ನುವ ಉದ್ಗಾರ ಹೊರಟುಬಂತು. ನಾವು ಕಂಡ ಭಾರತ, ನಮ್ಮ ಮನಸ್ಸಿನಲ್ಲಿರುವ ಭಾರತ ಬದಲಾಗಿದೆ, ಅದಕ್ಕೆ ತಕ್ಕ ಹಾಗೆ ಅನಿವಾಸಿಗಳ ಮನಸ್ಸಿನಲ್ಲಿನ ನಾಸ್ಟಾಲ್ಜಿಯ ದೂರ ಹೋಗಲಿ, ಜೊತೆಗೆ ಬದಲಾದ ಭಾರತವನ್ನು ನೋಡಿ ಅದಕ್ಕೆ ಆದಷ್ಟು ಬೇಗ ಹೊಂದಿಕೊಳ್ಳುವ ಮನಸ್ಥಿತಿ ಬರಲಿ. ವಿಶೇಷವೆಂದರೆ, ನಮ್ಮ ಹಳೆಯ ಭಾರತದ ಟೆಕ್ನಿಕ್ಕುಗಳು ನಮ್ಮ ಅನುಭವದ ಒಂದು ಅಂಗವಾಗಿವೆಯೇ ಹೊರತು ಈಗ ಉಪಯೋಗಕ್ಕೆ ಬರುವಷ್ಟರ ಮಟ್ಟಿಗೆ ಅವುಗಳಲ್ಲಿ ಪ್ರೌಢಿಮೆ ಇಲ್ಲ, ನಮ್ಮ ವಿದೇಶಿ ಅನುಭವ ಒಂದು ವ್ಯವಸ್ಥೆಯನ್ನು ನಂಬಿಕೊಂಡು ಅದರಲ್ಲಿ ಒಂದಾಗಿ ಹೋಗುವ ಮನಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದೆ. ಹಿಂದೆಲ್ಲಾ ಒಮ್ಮೆ ಬಂದವರಿಗೆ ವಾಪಾಸು ಹೋಗುವಾಗ ಇದ್ದ ಸವಾಲುಗಳು ಇಂದಿನ ಪ್ರಗತಿಪರ ಯುಗದಲ್ಲಿ ದುಪ್ಪಟ್ಟಾಗಿರಬಹುದು ಎನ್ನುವುದು ನನ್ನ ಅನುಮಾನ.

Wednesday, December 05, 2007

ಪಾಪಾಸ್ ಕಳ್ಳಿಯೂ, ಬೆಲ್ ಬಾಟಮ್ ಪ್ಯಾಂಟೂ...

ಹೀಗೇ ಏನ್ ಬರೀಲೀ, ಯಾವುದರ ಬಗ್ಗೇ ಬರೀಲೀ ಅಂತ ಯೋಚಿಸ್ತಾ ಕುಳಿತಿರಬೇಕಾದ್ರೆ ಮೊನ್ನೆ ಮೊನ್ನೇ ಉದಯ ಟಿವಿಯಲ್ಲಿ ನೋಡಿದ ’ಸಿಂಗಪುರದಲ್ಲಿ ರಾಜಾಕುಳ್ಳ’ ಹಳೆಯ ಸಿನಿಮವೊಂದರ ನೆನಪಾಗಿ ಅದರಲ್ಲಿ ವಿಷ್ಣುವರ್ಧನ್-ದ್ವಾರಕೀಶ್ ಧರಿಸಿರೋ ಬೆಲ್ ಬಾಟಮ್ ಪ್ಯಾಂಟು ನೆನಪಿಗೆ ಬಂತು. ನೀವೆಲ್ಲಾ ಪ್ಯಾಂಟು ಹಾಕೋ ಜಮಾನ ಬಂದಿರೋವಾಗ ಆಗ್ಲೇ ಮುಲಂಗಿ ಪ್ಯಾಂಟಿನ ಕಾಲ ಬಂದಿತ್ತೋ ಏನೋ, ನಾನು ಹಾಕಿದ ಮೊದಲೇ ಪ್ಯಾಂಟಂತೂ ಬೆಲ್ ಬಾಟಮ್ ಪ್ಯಾಂಟೇ, ಅದೂ ಅದರ ವ್ಯಾಸ ಅಥವಾ ಬುಡ ಮುವತ್ತಾರು ಇಂಚು ಅಗಲವಾಗಿತ್ತು ಅನ್ನೋದನ್ನ ಇವತ್ತಿಗೂ ನೆನಸಿಕೊಂಡ್ರೆ ನಗುವೇ ಬರುತ್ತೆ.

ಹಿಂದೆ ಬೆಲ್ ಬಾಟಮ್ ಪ್ಯಾಂಟು ಧರಿಸಿ ಯುವ ಪೀಳಿಗೆಯಲ್ಲಿ ರೋಚಕತೆಯನ್ನು ಹೆಚ್ಚಿಸುತ್ತಿದ್ದ ರಜನೀಕಾಂತರೂ, ವಿಷ್ಣುವರ್ಧನ್ನರೂ ಕನ್ನಡದಲ್ಲಿ ಹೆಚ್ಚಿರಲಿಲ್ಲ. ಅಪರೂಪಕ್ಕೊಮ್ಮೆ ನೋಡೋ ಅಮಿತಾಬ್ ಬಚ್ಚನ್ನುಗಳ ಪರಿಣಾಮ ನಮ್ಮ ಮೇಲೆ ಆಗುತ್ತಿರಲಿಲ್ಲವೆಂದಲ್ಲ, ಆದರೂ ನಮ್ಮ ಕನ್ನಡ ನಾಯಕರ ಮುಂದೆ ಅವರುಗಳೆಲ್ಲ ಸಪ್ಪೆಯೇ ಅಲ್ಲವೇ? ನನ್ನ ಅಣ್ಣ ದೊಡ್ಡ ದೊಗಲೇ ಪ್ಯಾಂಟು ಹಾಕಿಕೊಳ್ಳುತ್ತಿದ್ದನೆಂದು ನಾನೂ ಹೈ ಸ್ಕೂಲು ಮೆಟ್ಟಿಲು ಹತ್ತುವ ಹೊತ್ತಿಗೆ ಮನೆಯಲ್ಲಿ ಹಠ ಹಿಡಿದದ್ದೇ ಬಂತು. ಅಣ್ಣನ ಪ್ಯಾಂಟುಗಳಿಗೆ ವಿಸ್ತಾರವಾದ ಬೆಲ್ ಇರೋದೂ, ಮುಂದೆ ಜೇಬುಗಳು ಇರೋದೂ, ಜೊತೆಯಲ್ಲಿ ಕೆಳಗೆ ತೂಕಕ್ಕೆಂದೋ ಅಥವಾ ಪ್ಯಾಂಟಿನ ಬುಡ ಸವೆಯ ಬಾರದೆಂದೋ ಹಾಕಿದ ಮೆಟಲ್ ಜಿಪ್ಪಿನ ತುಂಡುಗಳೋ ಇವೆಲ್ಲವೂ ಒಂದು ರೀತಿಯ ಬೆರಗನ್ನು ಹುಟ್ಟಿಸುವವೇ. ಇಂಥ ಹಿನ್ನೆಲೆಯಲ್ಲಿ ಹೈ ಸ್ಕೂಲಿಗೆ ನಾನು ಪ್ಯಾಂಟು ಧರಿಸದೇ ಹೋಗೋದು ಅಂದರೆ...

ಆನವಟ್ಟಿಯ ಬಟ್ಟೆ ಅಂಗಡಿಯಲ್ಲಿ ಬಟ್ಟೆ ತೆಗೆದಿದ್ದೂ ಆಯ್ತು, ಅದನ್ನು ದರ್ಜಿಗೆ ಕೊಟ್ಟಿದ್ದೂ ಆಯ್ತು, ’ಬೆಲ್ ಎಷ್ಟು ಬೇಕೋ?’ ಎಂದು ಕೊಟ್ಟರೂ ಕೊಡದಿದ್ದ ಹಾಗೆ ಚಾಯ್ಸ್ ಅನ್ನು ಕೊಟ್ಟ ದರ್ಜಿಗೆ ’ಮುವತ್ತಾರು ಇಂಚ್’ ಎಂದು ಉತ್ತರ ಕೊಡುವ ಧೈರ್ಯ ಬಂದಾಗಲೇ ಒಳಗೊಳಗೇ ನನಗೂ ಸಂತೋಷವಾಗಿತ್ತು. ’ಯಾವತ್ತ್ ಕೊಡ್ತೀರಿ?’ ಅಂದ್ರೆ ಅವನು ಕೊನೇಪಕ್ಷ ಎರಡು ವಾರಾನಾದ್ರೂ ಬಿಟ್ಟು ಬರ್ರಿ ಅನ್ನೋದೇ, ನನ್ನ ಪರಿಸ್ಥಿತಿಯಂತೂ ರಥದ ಗಾಲಿಗೆ ಸಿಕ್ಕ ನಿಂಬೇಹಣ್ಣಿನ ಹಾಗೆ ಆಗಿ ಹೋಗಿತ್ತು, ಅದರೂ ಕಾಯದೇ ಕೆನೆ ಕಟ್ಟುವುದೇ ಎಂದು ಮನಸ್ಸಿನಲ್ಲೇ ಅಂದುಕೊಂಡು ಮನೆಯ ಹಾದಿ ಹಿಡಿದದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.

***

ಕುತಂತ್ರಿಗಳ ಕೈಗೆ ಸಿಕ್ಕು ಆನವಟ್ಟಿ ಮಲೆನಾಡಿದ್ದುದು, ಅರೆ ಮಲೆನಾಡಾಗಿ, ಕೊನೆಗೆ ಬಯಲು ಸೀಮೆಯ ಎಲ್ಲ ಲಕ್ಷಣವನ್ನೂ ತಲುಪುವ ಹೊತ್ತಿಗೆ ನಮ್ಮೂರಿನ ಬೇಲಿಗಳಲ್ಲಿ ಬೆಳೆದುಕೊಳ್ಳುತ್ತಿದ್ದುದೇ ಹಲವಾರು ಕಳ್ಳಿ ಗಿಡಗಳು. ರಕ್ಕಸಕಳ್ಳಿ, ಪಾಪಾಸ್ ಕಳ್ಳಿ, ಆ ಕಳ್ಳಿ, ಈ ಕಳ್ಳೀ ಎಂದು ಹಲವಾರು ವಿಧಗಳನ್ನು ಗುರುತಿಸುತ್ತಿದ್ದೆವು, ಅದರಲ್ಲೇ ಕೆಲವೊಂದರಿಂದ ಎಷ್ಟೋ ಉಪಯೋಗವನ್ನೂ ಕಂಡುಕೊಂಡಿದ್ದೆವು. ಉದಾಹರಣೆಗೆ ರಕ್ಕಸಕಳ್ಳಿಯ ಎಲೆಗಳನ್ನು ಕತ್ತರಿಸಿ, ಅದನ್ನು ಉದ್ದುದ್ದವಾಗಿ ತೆಳ್ಳಗೆ ಸೀಳಿ ಅದನ್ನು ಹಗ್ಗದಂತೆ ಬಳಸುತ್ತಿದ್ದೆವು, ಹಾಗೆ ಹೊಸೆದ ಹಗ್ಗಗಳಿಂದ ಕಟ್ಟಿಗೆ ಹೊರೆಯನ್ನೋ ಅಥವಾ ಬೇಲಿಯ ಗೂಟಗಳನ್ನು ಮುಳ್ಳಿನ ಕಂಟಿಗಳಿಗೆ ಸೇರಿಸಿ ಕಟ್ಟುತ್ತಿದ್ದೆವು. ಎಂತಲ್ಲೂ ಸ್ವಚ್ಛಂದವಾಗಿ ಬೆಳೆಯುತ್ತಿದ್ದ ಈ ಕಳ್ಳಿಗಳಲ್ಲೂ ಹಾಲು ಒಸರುತ್ತಿತ್ತು, ಅಂತಹ ಹಾಲು ಕಣ್ಣಿನ ಮೇಲಾನಾದರೂ ಬಿದ್ದರೆ ಅಷ್ಟೇ ಎನ್ನುವ ಹೆದರಿಕೆಯೂ ನಮ್ಮಲ್ಲಿ ಮನೆ ಮಾಡಿತ್ತಾದರೂ ಇವತ್ತಿಗೂ ಮುಳ್ಳಿನ ಕಳ್ಳಿಗಳನ್ನು ಬರೀ ಕೈಯಲ್ಲಿ ಕತ್ತರಿಸಿ ಒಟ್ಟು ಮಾಡಿ ಗೊತ್ತೇ ವಿನಾ ಅದರಿಂದಾಗಬಹುದಾದ ಹಲವಾರು ದುಷ್ಪರಿಣಾಮಗಳಿಂದ ನಾವು ಯಾವತ್ತೂ ರಕ್ಷಣೆಯನ್ನು ಪಡೆಯದೇ ನೆಟ್ಟಗೆ ಕೈ ಕಾಲು ಮೈಯನ್ನು ಅದು ಹೇಗೆ ಇಲ್ಲಿಯವರೆಗೆ ಇರಿಸಿಕೊಂಡು ಬಂದೆವೆನ್ನುವುದು ಇವತ್ತಿಗೂ ನಿಗೂಢ.

***

ನಮ್ಮೂರಿನ ದರ್ಜಿಗಳು ಇಂದಿನ ಪ್ರಾಜೆಕ್ಟ್ ಮ್ಯಾನೇಜರುಗಳ ಹಾಗೆ ಯಾವತ್ತೂ ತಮ್ಮ ಸ್ಕೆಡ್ಯೂಲನ್ನು ಮುಂದೂಡತ್ತಲೇ ಇರುತ್ತಾರೆ ಅನ್ನೋ ಹಾಗೆ, ಎರಡು ವಾರ ಬಿಟ್ಟು ಹೋದ್ರೆ ಅವನೆಲ್ಲಿ ನನ್ನ ಪ್ಯಾಂಟನ್ನು ಕೊಟ್ಟಾನು? ಗಾಯದ ಮೇಲೆ ಉಪ್ಪು ಸವರೋ ಹಾಗೆ ಎರಡು ವಾರವಾದರೂ ನ್ಯಾಲೆಯ ಮೇಲಿನ ಬಟ್ಟೆ ನಾವು ಇಟ್ಟ ದಿನದಿಂದ ಹಾಗೇ ಧೂಳು ತಿನ್ನುತ್ತಲೇ ಕೂತಿದೆಯೇ ಹೊರತು, ಅದನ್ನವನು ಅಲುಗಾಡಿಸಿಯೂ ನೋಡಿಲ್ಲವೆಂದು ನನಗೆ ಗೊತ್ತಾದಾಗ ಇನ್ನು ಸ್ವಲ್ಪವಾದರೆ ಕೋಡಿ ತುಂಬಿ ಹರಿಯುವ ಕೆರೆಯ ಹಾಗೆ ಕಣ್ಣಾಲಿಗಳು ತುಂಬಿ ಬಂದಿದ್ದವು. ಆ ದರ್ಜಿಯನ್ನು ಫೈರ್ ಮಾಡಿ ನನ್ನ ಬಟ್ಟೆಯನ್ನು ನಾನೇ ನ್ಯಾಲೆಯಿಂದೆಳೆದುಕೊಂಡು ’ನಿನ್ನ ಸರ್ವೀಸ್ ಯ್ಯಾವನಿಗೆ ಬೇಕಲೇ?’ ಎಂದು ನಾನೇದರೂ ಅಂದು ಗಂಡೆದೆಯನ್ನು ತೋರಿಸಿದ್ದರೆ ಇಷ್ಟೊತ್ತಿಗೆ ಇಲ್ಲಿ ಕುಳಿತು ಈ ಬರಹವನ್ನೇಕೆ ಬರೆಯುತ್ತಿದ್ದೆ?! ಹಾಗಾಗಲಿಲ್ಲ ಬದಲಿಗೆ ಬದುಕು ಎಲ್ಲಿ ಹೋದರೂ ನಿರೀಕ್ಷಿಸಬಹುದಾದ ತಾಳ್ಮೆಯನ್ನು ಮೈಗೂಡಿಕೊಂಡು, ಬಾಯಿಗೆ ಬಂದ ಬೈಗಳನ್ನೂ ಎತ್ತಿ ಹೊಡೆಯಬೇಕೆಂಬ ಕೈಯನ್ನೂ ಅವರವರೊಳಗೇ ಸಮಾಧಾನ ಮಾಡಿ ನಮ್ಮ ದುಡ್ಡು, ಬಟ್ಟೆಯನ್ನು ತೆಗೆದುಕೊಂಡು ಅವನು ಹೇಳಿದ ಹೊತ್ತಿಗೆ ಹೊಲಿದು ಕೊಡುವ ದರ್ಜಿಗೂ ಬಾಯಿ/ಕೈ ತೋರಿಸದೆ ಮನೆಗೆ ಬಂದ ದಿನವೇ ದೊಡ್ಡದು. ಎರಡು ವಾರವಾಯಿತು, ಒಂದು ತಿಂಗಳಾದರೂ ’ಆ ನನ್ಮಗ ಕೊಡಂಗಿಲ್ಲ’ ಎಂದು ಎಲ್ಲರ ಎದುರು ಅವನಿಗೆ ಸಹಸ್ರನಾಮಾರ್ಚನೆ ಮಾಡಿದ್ದೇ ಬಂತು.

***

ಯಾರ ಮನೆಯಲ್ಲಿ ಏನನ್ನು ಬೆಳೆಸಿದರೂ ಕ್ಯಾಕ್ಟಾಸ್ ಅನ್ನು ಬೆಳೆಸಬಾರದು ಎನ್ನುವ ನಂಬಿಕೆ ನನ್ನ ಮನಸ್ಸಿನಲ್ಲಿ ಅದೆಲ್ಲಿಂದ ಬಂತೋ ಗೊತ್ತಿಲ್ಲ. ನಾನು ಬೇಡವೆಂದರೂ ನಮ್ಮನೆಯೊಳಗೆ ನುಸುಳಿದ ಎಲೆಯಂತಿರುವ ಅದ್ಯಾವುದೋ ಪ್ರಬೇಧವೂ ಅಪರೂಪಕ್ಕೊಮ್ಮೆ ನನ್ನನ್ನೇ ಅಣಗಿಸುತ್ತಿತ್ತು. ಡೈನಿಂಗ್ ರೂಮಿನ ಕಿಟಕಿಯ ಬಳಿ ಆ ಕಡೆಗೊಂದು ಈ ಕಡೆಗೊಂದು ಎಂದು ಇಟ್ಟ ಗಿಡಗಳು ನಳಿನಳಿಸುತ್ತಲೇನೋ ಇದ್ದವು. ಆದರೆ ನಾನು ಅದೆಷ್ಟೋ ದಿನಗಳಿಗೊಮ್ಮೆ ನಮ್ಮ ಮನೆಯಲ್ಲಿನ ತುಳಸಿ, ಮಲ್ಲಿಗೆ, ಬಸಳೆ, ಕೆಸುವು, ಅರಿಶಿಣ ಗಿಡಗಳಿಗೆ ನೀರು ಹಾಕುವ ಪದ್ದತಿಯ ಪ್ರಕಾರ ಈ ಕ್ಯಾಕ್ಟಸ್ ಗಿಡಗಳಿಗೆ ನೀರು ಹಾಕಿದ್ದೇ ಬಂತು, ಒಂದು ಮಾರನೇ ದಿನವೇ ನೆಗೆದು ಬಿದ್ದು ಹೋಯಿತು. ಈ ಸಗಣಿಯಲ್ಲಿರುವ ಹುಳುವನ್ನು ತೆಗೆದು ಮೇಲೆ ತೆಗೆದು ಬಿಟ್ಟರೆ ಮತ್ತೆ ಅದು ಸಗಣಿಯೊಳಗೇ ಹೋಗಿ ಸೇರಿಕೊಳ್ಳುತ್ತದೆಯಂತೆ ಹಾಗೇ ಈ ಮರುಭೂಮಿಯಲ್ಲಿ ಬೆಳೆದು ಹಿಗ್ಗಬೇಕಾದ ಕಳ್ಳಿ (ಕ್ಯಾಕ್ಟಸ್) ಸಸ್ಯ ಪ್ರಬೇಧಕ್ಕೆ ನಾನು ಅಪರೂಪಕ್ಕೊಮ್ಮೆ ನೀರುಣಿಸಿದ್ದೇ ತಪ್ಪಾಗಿ ಹೋಯಿತು! ಎರಡರಲ್ಲಿ ಒಂದು ಗಿಡ ನೆಗೆದು ಬಿದ್ದೇ ಹೋಯಿತು. ’ಅಂದು ನನ್ನ ಪ್ಯಾಂಟಿಗೆ ಒಂದು ಗತಿಯನ್ನು ಕಾಣಿಸಿದ ನಿಮ್ಮ ವಂಶದವರು ನನಗೆ ಕೊಡಬೇಕಾದ ಬೆಲೆಯನ್ನು ವಸೂಲಿ ಮಾಡಿದ್ದೇನೆ ಹೋಗ್’ ಎಂದು ಸತ್ತ ಗಿಡಕ್ಕೆ ನನ್ನ ಮನಸ್ಸು ಒಳಗೊಳಗೇ ಬೈದುಕೊಂಡಿದ್ದು ಸತ್ಯ.

***

ಎರಡು ವಾರ ಅಂದ ಪುಣ್ಯಾತ್ಮ ಕೊನೆಗೂ ಕೊಟ್ನಪಾ (ಸತ್ನಪಾ), ನನ್ನ ಪ್ಯಾಂಟು ಬಂತು, ಅಂಗಡಿಯಲ್ಲೇ ಹಾಕಿ ನೋಡು ಅಂತ ಅವನು ಕಿರುಚಿಕೊಂಡ್ರೆ ನನಗೂ ಮಾನಾ ಮರ್ಯಾದೆ ಅನ್ನೋದಿಲ್ವೇ, ಅಲ್ಲೇ ಎಲ್ಲರ ಮುಂದೆ ತೆಗೆದು ಹಾಕೋಕೇ? ಅಲ್ಲೇನಾದ್ರೂ ಡ್ರೆಸ್ಸಿಂಗ್ ರೂಮ್ ಗಳು ಅನ್ನೋದು ಇರೋಕೇ ನಮ್ಮೂರಿನ ಟೈಲರ್ ಅಂಗಡಿಗಳು ಮೇಸೀಸ್ ಕೆಟ್ಟೋದ್ವೇ? (ನಾನು ಮಂಡ್ಯಾ-ಮೈಸೂರಿನವರಿಂದ ಕಲಿತ ಈ ವಾಕ್ಯದ ಬಳಕೆ ಇವತ್ತಿಗೂ ನನ್ನನ್ನು ದಂಗುಬಡಿಸುತ್ತೆ, ಜೊತೆಗೆ ಒಂದು ಅವ್ಯಕ್ತ ಖುಷಿಯನ್ನೂ ಮೂಡಿಸುತ್ತೆ!). ದರ್ಜಿಯ ಅಂಗಡಿಯಿಂದ ಅವನು ಪ್ಯಾಂಟನ್ನು ತುರುಕಿಕೊಟ್ಟ ಪ್ಲಾಸ್ಟಿಕ್ ಚೀಲವನ್ನು ಹಿಡಿದು ಒಂದೇ ಉಸಿರಿಗೆ ಓಡಿದ್ದೇ ಓಡಿದ್ದು. ಮನೆಗೆ ಬಂದು ಯಾರಿಗೂ ಕಾಣದ ಜಾಗೆಯಲ್ಲಿ ನಿಂತು ಪ್ಯಾಂಟು ಹಾಕಿ ನನ್ನನ್ನು ನಾನೇ ಉದ್ದಾನುದ್ದಕ್ಕೆ ನೋಡಿಕೊಂಡಿದ್ದೇ ಕೊಂಡಿದ್ದು. ’ಓ ಪ್ರಿಯಾ...’ ಎಂದು ರಜನೀಕಾಂತ್ ಹಾಡುವಂತೆ ಹೆಜ್ಜೆ ಹಾಕಿದಲ್ಲೆಲ್ಲಾ ಓಲಾಡುವ ಬೆಲ್ ಬಾಟಮ್ ಪ್ಯಾಂಟ್ ನನ್ನನ್ನು ಬಹಳಷ್ಟು ಎತ್ತರದವನನ್ನಾಗಿ ಮಾಡಿತ್ತು. ಈ ಪ್ಯಾಂಟ್ ಹಾಕಿಕೊಂಡು ಯಾವ ಬಸ್ಸ್ ಹತ್ತಿದರೂ ಅರ್ಧ ಟಿಕೇಟ್ ಅನ್ನುವುದು ಕನಸೇ ಎಂದು ಮತ್ತೊಂದು ಥರ ಬೇಗನೇ ಬೆಳೆದು ದೊಡ್ಡವನಾಗಿ ಬಿಟ್ಟ ಹೆದರಿಕೆ ಕಾಡ ತೊಡಗಿತ್ತು.

ನೋಡಲು ಚಪಾತಿಯಂತಿದ್ದರೂ ಯ್ಯಾವನೂ ತಿನ್ನದ ಯಾವನೂ ಮುಟ್ಟದ ಈ ಕಳ್ಳಿ ಗಿಡಗಳಿಗೇಕೆ ಮುಳ್ಳು ಎನ್ನುವುದನ್ನು ಆ ಎವಲ್ಯೂಷನ್ನ್ ಪಿತಾಮಹರನ್ನೇ ಕೇಳಬೇಕು. ನನ್ನ ವಯಸ್ಸಿನ ಹುಡುಗರು ಗೋಲಿ, ಬುಗುರಿ, ಲಗೋರಿ, ಚಿಣ್ಣಿದಾಂಡುಗಳನ್ನು ಆಡುತ್ತಿದ್ದುದು ಸಾಮಾನ್ಯವಾದರೂ ಅಂದಿನ ಆಟ ಕಳ್ಳಾ-ಪೋಲೀಸ್! ಇನ್ನೇನ್ ಕೇಳೋದು, ಬೇಲಿ, ಸಂದಿಗೊಂದಿಗಳಲ್ಲಿ ಹುದುಗಿಕೊಳ್ಳೋದೇ ಆಟ. ವಿಶೇಷವೆಂದರೆ ಕಳ್ಳನಾಗಲೀ ಪೋಲೀಸಾಗಲೀ ಯಾವುದೇ ಗುಂಪಿಗೆ ಸೇರಿದರೂ ಒಬ್ಬರನ್ನೊಬ್ಬರು ಹುಡುಕೋದೆಂದೂ ತಪ್ಪಿದ್ದಿಲ್ಲ. ಹೀಗೇ ಒಂದು ಕತ್ತಲಿನ ಸೂಕ್ಷ್ಮ ಸನ್ನಿವೇಶದಲ್ಲಿ ಇನ್ನೇನು ಕಳ್ಳ ಸಿಕ್ಕಿಯೇ ಬಿಟ್ಟ ಎಂದು ನಾನು ಹುಮ್ಮಸ್ಸಿನಲ್ಲಿ ಓಡುವ ಹೊತ್ತಿಗೆ ಬೇಲಿಗೆ ಸಿಕ್ಕು ಪಾಪಾಸ್ ಕಳ್ಳಿಯ ಮುಳ್ಳಿಗೆ ಬಲಿಯಾದ ನನ್ನ ಬಲಗಾಲಿನ ಬೆಲ್ ಬಾಟಮ್ ಪ್ಯಾಂಟಿನ ಬಾಟಮ್ ಹರಿದೇ ಹೋಗೋದೇ? ಹರಿದದ್ದನ್ನು ಯಾರಿಗೂ ಗೊತ್ತಾಗದ ಹಾಗೆ ಹೇಗೆ ರಿಪೇರಿ ಮಾಡಿಸೋದು? ಅದನ್ನು ಮನೆಯಲ್ಲಿ ಹೇಳಿ ಯಾರ್ಯಾರು ಎಷ್ಟು ಹೊಡೆತವನ್ನು ಹೊಡೆಯುತ್ತಾರೋ? ಇನ್ನು ಈಗಷ್ಟೇ ಕೊಟ್ಟ ಟೈಲರ್ ಹತ್ತಿರ ಮತ್ತೆ ಹರಿದದ್ದನ್ನು ಯಾವ ಮುಖ ಹೊತ್ತುಕೊಂಡು ಹೋಗಲಿ ಎನ್ನುವ ಮೈಕ್ರೋ ಮಿನಿ ಆಲೋಚನೆಗಳೇ ತಲೆಯ ತುಂಬ. ಕಳ್ಳರನ್ನು, ಪೋಲೀಸರನ್ನೂ, ಅಂತಹವರನ್ನು ಸೃಷ್ಟಿಸಿದ ದೇವರನ್ನು ಎಲ್ಲರನ್ನು ಬೈದರೂ ನನ್ನ ಹರಿದ ಪ್ಯಾಂಟಿನ ಕಾಲು ಒಂದಾಗುವುದು ಹೇಗೆ?

ಇವತ್ತಿಗೂ ಕಳ್ಳಿಗೆ ನನ್ನ ಮನಸ್ಸಿನಲ್ಲಿ ಒಂದು ಕೋಣೆಯಲ್ಲಿ ಸ್ಥಾನವಿದೆ, ಜೊತೆಗೆ ಮನೆಯ ಮೂಲೆಯಲ್ಲಿ ಇನ್ನೂ ಅಳಿದುಳಿದ ಒಂದೇ ಒಂದು ಕಳ್ಳಿಯ ಗಿಡ ತನ್ನ ವಂಶದ ಹಿರಿಯರು ಮಾಡಿದ ತಪ್ಪಿನ ಫಲವನ್ನು ಒಬ್ಬೊಂಟಿಯಾಗಿ ಅನುಭವಿಸುತ್ತಲೇ ಇದೆ.

Sunday, December 02, 2007

ಇಂದು ರಾತ್ರಿ ಮತ್ತೆ ಆ ಮಿಣಿಮಿಣಿ ದೀಪಗಳು ಬೆಳಗದಿದ್ದರೆ ಸಾಕು!

ಈಗ್ಗೆ ಒಂದು ತಿಂಗಳಿನಿಂದ ನಾವಿರುವ ಊರಿನ ರಸ್ತೆಗಳನ್ನು ಸ್ಥಳೀಯ ಕೆಲಸಗಾರರು ಉದ್ದಕ್ಕೂ ಅಗೆಯುತ್ತಾ ಬಂದಿದ್ದಾರೆ, ಯಾವುದೋ ಪೈಪ್ ಹಾಕುವುದಕ್ಕೋ ಮತ್ತಿನ್ಯಾವುದಕ್ಕೋ ಇರಬೇಕು. ಇದರಲ್ಲಿ ಕೆಲಸ ಮಾಡುವವರದ್ದು ಕೇವಲ ರಾತ್ರಿ ಮಾತ್ರ ಡ್ಯೂಟಿ, ಹಗಲೆಲ್ಲ ರಸ್ತೆ ಅಗೆಯಲು ತೊಡಗಿದರೆ ಟ್ರಾಫಿಕ್ ನಿಲ್ಲುತ್ತದೆ, ಮತ್ತೇನೋ ಆಗುತ್ತದೆ ಎಂದು ರಾತ್ರಿ ಇಡೀ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಲೇ ಇದೆ.

ಇಂದು ಮುಂಜಾನೆ ಎರಡೂವರೆ ಹೊತ್ತಿಗೆ ಕಿಟಕಿ ಮೂಲಕ ಏನೋ ಮಿಣಿಮಿಣೀ ಬೆಳಕು ಕಂಡಿತೆಂದು ಪರದೇ ಸರಿಸಿ ನೋಡಿದರೆ ಅವರೇ ರಸ್ತೆ ಕೆಲಸಗಾರರು, ಉದ್ದಕ್ಕೂ ರಸ್ತೆಯನ್ನು ಅಗೆದು ಮುಚ್ಚುತ್ತಾ ಈಗ ನಮ್ಮ ಮನೆಯ ಮುಂದೆ ಬಂದಿದ್ದಾರೆ, ಇನ್ನು ಸ್ವಲ್ಪ ಹೊತ್ತಿನಲ್ಲೇ ಅವರ ಪಯಣ ಮತ್ತೆ ಅವ್ಯಾಹತವಾಗಿ ಮುಂದೆ ಸಾಗುತ್ತಲೇ ಇರುತ್ತದೆ, ಎಲ್ಲಿಯವರೆಗೆ ಹಿಡಿದ ಗುರಿ ಮುಟ್ಟುವವರೆಗೆ. ಬೆಳಗ್ಗೆ ಸ್ನೋ ಬೀಳುತ್ತದೆ ಎಂದು ಎಲ್ಲರೂ ಪ್ರಿಡಿಕ್ಟ್ ಮಾಡಿದ್ದರಿಂದ ವೆದರ್ ಚಾನೆಲ್ ನೋಡೋಣವೆಂದು ಟಿವಿಯನ್ನು ಚಾಲೂ ಮಾಡಿದೆ, ಅಲ್ಲಿ ನಮ್ಮೂರಿನ ದಿನದ ಉಷ್ಣಾಂಶವನ್ನು ತೋರಿಸುತ್ತಿದ್ದರು, ಅಲ್ಲಿನ ನಂಬರುಗಳನ್ನು ನೋಡಿ ಶಾಕ್ ಆದಂತಾಯಿತು - ಈ ದಿನದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಫ್ಯಾರನ್‌ಹೈಟ್ - ಜೊತೆಗೆ ಬೀಸುವ ಗಾಳಿಯ ಹೊಡೆತಕ್ಕೆ ಬದಲಾಗುವ ವಿಂಡ್‌ಚಿಲ್ (feels like) ಫ್ಯಾಕ್ಟರ್ ಬೇರೆ.

ಹೀಗೆ ರಾತ್ರಿ ಇಡೀ ಕೆಲಸ ಮಾಡೋ ಕೆಲಸಗಾರರು ಅದೇನೇ ಕೋಟನ್ನು ಧರಿಸಿದ್ದರೂ ಅವರು ಒಳಗೆಳೆದುಕೊಳ್ಳುವ ಗಾಳಿಯ ಉಷ್ಣತೆ ಸೊನ್ನೆಗಿಂತ (ಸೆಂಟಿಗ್ರೇಡ್) ಕಡಿಮೆ, ಅದನ್ನವರು ಹೊರಗೆ ಬಿಡುವಾಗ 37 ಡಿಗ್ರಿ ಸೆಂಟಿಗ್ರೇಡ್ (98 ಡಿಗ್ರಿ ಫ್ಯ್ರಾರನ್‌ಹೈಟ್) ಆಗಿ ಪರಿವರ್ತಿಸಿ ಬಿಡಬೇಕಾಗುತ್ತದೆ ಎಂಬುದನ್ನು ಯೋಚಿಸಿಕೊಂಡೇ ನನ್ನ ಮೈಯಲ್ಲಿ ನಡುಕ ಹುಟ್ಟಿತು. ಎಷ್ಟೊಂದು ಅಗಾಧವಾದ ಬದಲಾವಣೆ ಉಷ್ಣತೆಯಲ್ಲಿ, ಹೀಗೆ ಪ್ರತಿ ಕ್ಷಣಕ್ಕೂ ಕಳೆದುಕೊಳ್ಳುವ ಶಕ್ತಿಯನ್ನು ಈ ಕೆಲಸಗಾರರು ಅದೆಲ್ಲಿಂದ ತುಂಬಿಕೊಳ್ಳುತ್ತಾರೋ, ಛೇ - ಪಾಪ ಎನಿಸಿತು. ನನ್ನ ಸ್ನೇಹಿತ ಕೆನ್ ಹೇಳುತ್ತಿದ್ದ ಹಾಗೆ ಅವನು ಬಲ್ಲ ಕನಷ್ಟ್ರಕ್ಷನ್ ಕೆಲಸಗಾರರು ದಿನಕ್ಕೆ ಹಲವಾರು ಊಟಗಳನ್ನು ಮಾಡುತ್ತಾರೆ, ಮುಖ್ಯವಾಗಿ ಡೋ ನಟ್ (ಸಿಹಿ) ಅನ್ನು ಬಹಳ ತಿನ್ನುತ್ತಾರೆ, ಹೀಗೆ ತಿನ್ನುವ ಹೆಚ್ಚಿನ ಗ್ಲೂಕೋಸ್ ಅಂಶ ಅವರು ಬಳಸುವ ಶಕ್ತಿಯಾಗಿ ಬದಲಾಗುತ್ತದೆ, ಮೇಲಾಗಿ ಪ್ರತಿದಿನವೂ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಳ್ಳುವ ಅವರ ದೇಹ ಮನಸ್ಸು ಎಲ್ಲವೂ ಛಳಿಗೆ ಹೊಂದಿಕೊಂಡಿರುತ್ತದೆ ಎಂಬುದು ನೆನಪಿಗೆ ಬಂದಿತು. ಅದೇನೇ ತಿನ್ನಲಿ ಬಿಡಲಿ, ಒಬ್ಬ ವ್ಯಕ್ತಿ ಸಬ್ ಝೀರೋ ಉಷ್ಣತೆಯಲ್ಲಿ ಘಂಟೆಗಟ್ಟಲೆ ದುಡಿಯುವುದು ಅಮಾನವೀಯ ಎಂದೆನಿಸಿದ್ದು ಆ ಮಟ್ಟಿಗಂತೂ ನಿಜ. ಇದೇ ಕನ್‌ಷ್ಟ್ರಕ್ಷನ್ ಕೆಲಸಗಾರರು, ತಾವು ಮಿಲಿಯನ್‌ಗಟ್ಟಲೆ ಹಣವನ್ನಂತೂ ದುಡಿಯೋದಿಲ್ಲ, ಮಧ್ಯ ವಯಸ್ಸು ದಾಟುತ್ತಲೇ ಇಂತಹ ಘೋರ ವಾತಾವರಣದಲ್ಲಿ ಕೆಲಸವನ್ನು ಮಾಡಿದ್ದರ ಪರಿಣಾಮವಾಗಿ ಅದೇನೇನು ಖಾಯಿಲೆಗಳು ಬರುತ್ತವೆಯೋ ಯಾರು ಬಲ್ಲರು?

ನಾನಂತೂ ವೆದರ್ ಚಾನೆಲ್ ನೋಡಿ, ಟಿಎಮ್‌ಸಿಯಲ್ಲಿ ಬರುತ್ತಿದ್ದ ಚಾರ್ಲ್ ಚಾಪ್ಲಿನ್ ಗೋಲ್ಡ್ ರಶ್ ಸಿನಿಮಾ ನೋಡಿಕೊಂಡೇನೋ ಕಾಲ ಕಳೆದು ಬೆಳಗು ಮಾಡಿದೆ, ಆದರೆ ಆ ಕನ್‌ಷ್ಟ್ರಕ್ಷನ್ ವಾಹನದ ಮಿಣಿಮಿಣಿ ದೀಪಗಳು ನಮ್ಮನೆಯ ಕಿಟಕಿಯಿಂದ ಮರೆಯಾಗುವವರೆಗೂ ಹೊರ ಮುಖ ಚಾಪ್ಲಿನ್ ಕಷ್ಟದಲ್ಲಿ ಸಿಕ್ಕಿಕೊಂಡಾಗಲೆಲ್ಲ ನಗುತ್ತಿದ್ದರೆ, ಒಳಗಡೆಯ ಮನಸ್ಸು ಆ ಕೆಲಸಗಾರರ ಬಗ್ಗೆ ಯೋಚಿಸುತ್ತಲೇ ಇತ್ತು. ಸಿನಿಮಾದಲ್ಲಿ ಚಾಪ್ಲಿನ್, ಹೊರಗಡೆ ಆ ಕೆಲಸಗಾರರು ಇಬ್ಬರೂ ಛಳಿಯಲ್ಲಿ ನಡುಗುತ್ತಿದ್ದರೆ ಒಂದು ಮನೋರಂಜನೆಯಾಗಿತ್ತು, ಮತ್ತೊಂದು ವಾಸ್ತವದ ಚಿತ್ರಣ ನೀಡುತ್ತಿತ್ತು.

ಮುಂಜಾನೆ ಎಲ್ಲಿಗೋ ವಾಹನವನ್ನು ತೆಗೆದು ಅವರುಗಳು ಕೆಲಸ ಮಾಡಿದ್ದ ರಸ್ತೆಯ ಮೇಲೆ ಚಲಿಸುವಾಗ ಸೂಕ್ಷ್ಮವಾಗಿ ಗಮನಿಸಿದೆ, ಅಗೆದು ಮುಚ್ಚಿದ್ದ ರಸ್ತೆಯ ಉದ್ದಾನುದ್ದಕ್ಕೆ ಗುಂಡಿ ಬಹಳ ಚೆನ್ನಾಗಿ ಮೈ ತುಂಬಿಕೊಂಡಿತ್ತು, ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಗಲೀಜಾಗಲೀ, ಕಸಕಡ್ಡಿಗಳಾಗಲಿ ಇದ್ದಿರಲಿಲ್ಲ. ರಸ್ತೆಯ ಬದಿಯಿಂದ ಸುಮಾರು ಒಂದು ಅಡಿ ಪಕ್ಕಕ್ಕೆ ಯಾವುದೋ ಪೈಪ್ ಅನ್ನು ಹುಗಿಯಲು ತೆಗೆದ ಕಾಲುವೆ, ಮುಚ್ಚಿದ ಮೇಲೆ ತನ್ನ ಮೇಲಿನ ಹೊಸ ಟಾರ್ ಅನ್ನು ಅಲ್ಲಲ್ಲಿ ಬೀಳುವ ಬೆಳಕಿಗೆ ಪ್ರತಿಫಲಿಸಿ ಜಗಜ್ಜಾಹೀರು ಮಾಡುವ ಮುಖವನ್ನು ಹೊತ್ತುಕೊಂಡಿತ್ತು. ಹೊಳೆಯದ ಕಡೆ ಅದು ಕಷ್ಟಪಟ್ಟು ಕೆಲಸ ಮಾಡುವ ಕೆಲಸಗಾರರ ಮುಂಗೈ ಮೇಲಿನ ನರದ ಹಾಗೆ ಕಂಡುಬರುತ್ತಿತ್ತು. ಹಗಲಾಗಲೀ ರಾತ್ರಿಯಾಗಲೀ ದಿನದ ಉಷ್ಣಾಂಶದಲ್ಲೇನೂ ಅಂತಹ ಬದಲಾವಣೆ ಇಲ್ಲ, ಪ್ರಪಂಚದ ಅದ್ಯಾವ ಸೂರ್ಯರೂ ತಮ್ಮ ಬಿಸಿಯನ್ನು ತಟ್ಟಿಸದ ಹಾಗೆ ಈ ಲೋಕ ದೂರವಾಗಿದೆಯೇನೋ ಎಂದೆನಿಸಿ ಅಕಸ್ಮಾತ್ ಆ ದೂರ ಹಾಗೇ ಉಳಿದರೆ ಎಂದು ಹೆದರಿಕೆಯಾಗಿದ್ದಂತೂ ನಿಜ.

ಬಿಡಿ, ಇನ್ಯಾವತ್ತೂ ಹೇಳೋದಿಲ್ಲ ನಾನು ಮಾಡುವುದೇ ಕಷ್ಟದ ಕೆಲಸವೆಂದು. ಒಬ್ಬ ವಾಚ್‌ಮನ್‌ನಿಂದ ಹಿಡಿದು ಅಧಿಕಾರಿಯವರೆಗೆ ಆಯಾ ಕೆಲಸದ ಮಟ್ಟದ ಗೌರವವನ್ನು ನಾನು ಈ ದೇಶದಲ್ಲೇ ಕಂಡಿದ್ದು ಹಾಗೂ ಅನುಭವಿಸಿದ್ದು. ಒಬ್ಬ ಜಾನಿಟರ್‌ನ ಕೆಲಸವನ್ನು ಕೀಳು ಎಂಬುದಾಗಿ ನೋಡುವ ಮನಸ್ಥಿತಿ ನನಗೆ ಒಂದು ಕಾಲದಲ್ಲಿ ಖಂಡಿತ ಇತ್ತು, ಆದರೆ ಅದು ಬದಲಾಗಿ ಬಹಳ ವರ್ಷಗಳಾದವು. ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯನ್ನು ಕೆಲಸ ಮಾಡದಿದ್ದರೆ ಪ್ರಪಂಚ ಪೂರ್ಣವಾಗುವುದೆಂದು, ಹಾಗಿದ್ದ ಮೇಲೆ ಪ್ರತಿಯೊಬ್ಬರ ಕೆಲಸವೂ ಅಷ್ಟೇ ಮುಖ್ಯ ಹಾಗೂ ಮಹತ್ವಪೂರ್ಣವಾದುದಲ್ಲವೇ?

ಈ ಛಳಿ ಅಥವಾ ಛಳಿಗಾಲದ ವಿಶೇಷವೇ ಹಾಗೆ, ಮೂಳೆ ಕೊರೆಯುವ ಛಳಿ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ, ನಮ್ಮ ಚರ್ಮ ಅದರಡಿಯಲ್ಲಿರುವ ಚರಬಿಯನ್ನು ಮೀರಿ ಹೋಗಬಲ್ಲುದು ಛಳಿ ಮಾತ್ರ, ಬಿಸಿಲಿಗೆ ಆ ತುಲನೆ ಸಲ್ಲದು. ವರ್ಷದ ಆರು ತಿಂಗಳ ಛಳಿ ಇಲ್ಲಿನವರಿಗೆ ಅವಿಭಾಜ್ಯ ಅಂಗ, ಅದಕ್ಕನುಗುಣವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲೇ ಬೇಕು, ಹಾಗೆ ನಡೆಯಲೇ ಬೇಕು ಎಂದು ಯೋಚಿಸಿಕೊಂಡಾಗ ಮನಸ್ಸು ತುಸು ಹಗುರವಾದಂತೆನಿಸಿತು. ಸದ್ಯ, ಇಂದು ರಾತ್ರಿ ಮತ್ತೆ ಆ ಕನ್‌ಷ್ಟ್ರಕ್ಷನ್ ವಾಹನಗಳ ಮಿಣಿಮಿಣಿ ದೀಪಗಳು ಬೆಳಗದಿದ್ದರೆ ಸಾಕು!