Tuesday, November 27, 2007

ದಾರೇಶ್ವರಿ ಎಂಬ ಜೊತೆಗಾತಿ

13% of 226 ಎಷ್ಟು ಎನ್ನೋ ಲೆಕ್ಕಗಳನ್ನು ಮೊದಲೆಲ್ಲಾ ನಾವು ತಲೆಯಲ್ಲೇ ಲೆಕ್ಕ ಮಾಡಿಕೊಳ್ಳುತ್ತಿದ್ದೆವು, ಇತ್ತೀಚೆಗಂತೂ ಅದೇನ್ ಆಗ್ತಾ ಇದೆಯೋ ಗೊತ್ತಿಲ್ಲ ತಲೆ ದಡ್ಡು ಬಿದ್ದು ಹೋಗಿದ್ದು ನನ್ನ ಆಫೀಸಿನ ಮೇಜಿನ ಮೇಲೆ ಯಾವಾಗ್ಲೂ ಒಂದು ಕ್ಯಾಲ್ಕುಲೇಟರ್ ಬಾಯಿ ತೆಗೆದುಕೊಂಡು ಬಿದ್ದೇ ಇರುತ್ತೆ. ಪರ್ಸೆಂಟ್ ಕ್ಯಾಲ್ಕುಲೇಷನ್ ಇರ್ಲಿ, ಉಳಿದೆಲ್ಲ ಸರಳ ಲೆಕ್ಕಗಳಿಗೂ ನಾನು ಕ್ಯಾಲ್ಕುಲೇಟರ್ ಮೊರೆ ಹೋದಾಗಲೇ ನನಗೂ ವಯಸ್ಸಾದ ಬಗ್ಗೆ ಗ್ಯಾರಂಟಿ ಆಗಿತ್ತು. ವಯಸ್ಸಾಗೋದಕ್ಕೂ ಮನಸ್ನಲ್ಲೇ ಲೆಕ್ಕಾ ಮಾಡ್ದೇ ಇರೋದಕ್ಕೂ ಏನ್ ಸಂಬಂಧಾ ಅಂತ ನೀವ್ ತಲೆ ತುರಿಸಿಕೊಳ್ಳೋಲ್ಲ ಅಂತ ನನಗೂ ಗೊತ್ತು, ’ಎಲ್ಲದಕು ಕಾರಣನು ಈ ಸೋಮಾರಿ ಪರಮಾತ್ಮಾ’ ಎಂಬು ಬಭ್ರುವಾಹನ ಶೈಲಿಯಲಿ ನುಡಿದು ಅದಕ್ಕಿನ್ನೊಂದು ಕೊಂಕನ್ನು ಸೇರಿಸಿಕೊಳ್ಳಬಹುದು ನೋಡಿ.

ಈ ನನ್ನ ಗ್ಯಾಡ್ಜೆಟ್ಟುಗಳ ಲಿಸ್ಟಿಗೆ ಹೊಸದಾಗಿ ಸೇರಿಕೊಂಡ ಪುಣ್ಯಾತ್‌ಗಿತ್ತೀನೇ ದಾರೇಶ್ವರಿ. ನನ್ನ ಸ್ನೇಹಿತರೊಬ್ಬರು ಅವರ ಬಳಿ ಇರೋ ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲ ’ಣಿ’ ಯಿಂದ ಅಂತ್ಯಗೊಳ್ಳುವಂತೆ ಹೆಸರಿಟ್ಟುಕೊಂಡು ಮನಪೂರ್ವಕವಾಗಿ ಅವುಗಳ ಜೊತೆ ಸಂಭಾಷಣೆ ನಡೆಸುತ್ತಿದ್ದುದನ್ನು ನೋಡಿದ ನಂತರ ನಾನು ನನ್ನ ಬಳಿ ಇರುವ ವಸ್ತುಗಳನ್ನೆಲ್ಲ ’ಏಶ್ವರಿ’ಯಿಂದ ಅಂತ್ಯಗೊಳ್ಳುವ ಹೆಸರಿಟ್ಟು ಕರೆಯುವುದು ಮನವರಿಕೆಯಾಯಿತು. ಉದಾಹರಣೆಗೆ, MP3 ಪ್ಲೇಯರ್ ಸಿಂಗಿಣಿ, ಸಿಂಗೇಶ್ವರಿಯರಾದರೆ, ಡೇಟಾ ಸ್ಟೋರ್ ಮಾಡುವ ಮೀಡಿಯಮ್‍ಗಳು (USB drive) ಸ್ಟೋರಿಣಿ, ಸ್ಟೋರೇಶ್ವರಿಯರಾಗಬಹುದು. ಅದೇ ರೀತಿ ಹೆಜ್ಜೆ ಹೆಜ್ಜೆಗೆ ನಮ್ಮ ದಾರಿಯನ್ನು ಕಾಯ್ದುಕೊಂಡು ದಾರಿ ತೋರಿಸುವ GPS Navigator ಸಿಸ್ಟಮ್ ದಾರಿಣಿ, ದಾರೇಶ್ವರಿಯರಾಗುತ್ತಾರೆ!

ಮೊದಲೆಲ್ಲಾ ಈ ಆನ್‌ಲೈನ್ ಮ್ಯಾಪ್‌ಗಳೆಲ್ಲ ಬರುವುದಕ್ಕಿಂತ ಮುನ್ನ ಡ್ರೈವಿಂಗ್ ಹೇಗೆ ಮಾಡುತ್ತಿದ್ದಿರಿ ಎಂದು ಎಷ್ಟೋ ಜನರನ್ನು ಕೇಳಿದ್ದೇನೆ, ಆಗ ಇನ್ನೂ ಸೆಲ್/ಮೊಬೈಲ್ ಫೋನ್ ಕೂಡಾ ಇರದಿದ್ದ ಕಾಲ. ಜನರು ಮನೆ ಬಿಡುವ ಮೊದಲೇ ತಾವು ತಲುಪಬೇಕಾದ ಸ್ಥಳ, ಕ್ರಮಿಸ ಬೇಕಾದ ದಾರಿಯ ಬಗ್ಗೆ ಮೊದಲೇ ತಿಳಿದುಕೊಂಡೋ ಬರೆದುಕೊಂಡೋ ಹೋಗುತ್ತಿದ್ದರಂತೆ. ಮಧ್ಯೆ ಎಲ್ಲಾದರೂ ದಾರಿ ತಪ್ಪಿದರೆ ಅಲ್ಲಲ್ಲಿ ಸಿಗುವ ಗ್ಯಾಸ್ ಸ್ಟೇಷನ್ನುಗಳಲ್ಲಿ ದಾರಿ ಕೇಳುವುದಾಗಲೀ ಪೇ ಫೋನ್‌ನಿಂದ ಕರೆ ಮಾಡುವುದಾಗಲೀ ಸಾಮಾನ್ಯವಾಗಿತ್ತಂತೆ. ಆದರೆ ಈಗೆಲ್ಲ ಕಾಲ ಬದಲಾಗಿದೆ, ನಿನ್ನೆ ಮೊನ್ನೆಯವರೆಗೆ ನಾನೂ ಸಹ ಆನ್‌ಲೈನ್ ಮ್ಯಾಪ್‌ಗಳಲ್ಲಿ ದಾರಿಯನ್ನು ಗುರುತಿಸಿಕೊಂಡೋ ಅಥವಾ ಪ್ರಿಂಟ್ ಹಾಕಿಕೊಂಡು ಮನೆ ಬಿಡುತ್ತಿದ್ದವನು ಈ ಎರಡು ಮೂರು ದಿನಗಳಲ್ಲಿ ಪರಿಚಯವಾದ ದಾರೇಶ್ವರಿಗೆ ಸಂಪೂರ್ಣ ಶರಣಾಗಿ ಹೋಗಿದ್ದೇನೆ. ಆಕೆಯದ್ದೇ ಆದ ’ನಯ’ವಾದ ಧ್ವನಿಯಲ್ಲಿ ’ಅಲ್ಲಿ ತಿರುಗು, ಇಲ್ಲಿ ತಿರುಗು’ ಎಂದು ಸದಾ ಆದೇಶಿಸುವ ಉಪದೇಶಿಸುವ ಈ ಜೊತೆಗಾತಿ ಯಾವುದಾದರೂ ದೊಡ್ಡ ಕೆರೆಗೆ ನನ್ನ ಕಾರನ್ನೆಲ್ಲಾದರೂ ಹಾಯಿಸಿ ಬಿಡುತ್ತಾಳೋ ಅಥವಾ ದೊಡ್ಡ ಸೇತುವೆಯೊಂದರಿಂದ ಹಾರುವಂತೆ ಹೇಳುತ್ತಾಳೋ ಎಂದು ಒಮ್ಮೊಮ್ಮೆ ಹೆದರಿಕೆಯಾದರೂ ಅಂಗೈನಲ್ಲಿ ಉಪಯೋಗಕ್ಕೆ ಬರಬಹುದಾದ ಹೊಸ ತಂತ್ರಜ್ಞಾನವನ್ನು ನೋಡಿ ನಾನಂತೂ ಬೆರಗಾಗಿ ಹೋಗಿದ್ದೇನೆ. ನನಗೆ ನಾನು ಹೋಗಬೇಕಾದ ದಾರಿ ಗೊತ್ತಿದ್ದರೂ ಅಕ್ಕಪಕ್ಕದ ರಸ್ತೆಗಳು, ಅಲ್ಲಲ್ಲಿ ಸಿಗಬಹುದಾದ ಸ್ಥಳೀಯ ಅಟ್ರಾಕ್ಷನ್ನುಗಳನ್ನು ನೋಡೋದಕ್ಕಾದರೂ ದಾರೇಶ್ವರಿಯನ್ನು ಕಾರಿನಲ್ಲಿ ಕೊಂಡೊಯ್ಯುತ್ತೇನೆ.

ನಾವು ಹೋದಲೆಲ್ಲ ನಮ್ಮ ಕಾರಿಗೆ ಅಂಟಿಕೊಂಡಂತಹ ಒಂದು ಉಪಗ್ರಹ ಸಂವಾದೀ ಎಳೆ, ಅದು ನಾವು ಹೋದ ದಿಕ್ಕನ್ನು ತೋರಿಸುತ್ತೆ, ನಮ್ಮ ವೇಗದ ಇತಿ-ಮಿತಿಗಳನ್ನು ಅಳೆಯುತ್ತೆ, ನಾವು ಹೋಗಿ ಬಂದದ್ದೆಲ್ಲವನ್ನು ಟ್ರೇಸ್ ಮಾಡುತ್ತೆ, ಎಲ್ಲೇ ತಪ್ಪಿಸಿಕೊಂಡರೂ ನಮ್ಮನ್ನು ಸುಸ್ಥಿತಿಗೆ ತಂದು ನಿಲ್ಲಿಸುವ ಪಣವನ್ನು ಹೊತ್ತುಕೊಂಡಿರುತ್ತೆ ಎನ್ನುವುದನ್ನು ಕೇಳಿಯೇ ಪುಳಕಗೊಂಡಿದ್ದ ನಾನು, ಮೊದಮೊದಲ ದಾರೇಶ್ವರಿಯ ಬಳಕೆಯಿಂದಲೇ ಕೃತಾರ್ಥನಾಗಿ ಹೋದೆ. ಇನ್ನು ಮೇಲೆ ಕತ್ತನ್ನು ಮೇಲೆತ್ತಿ ಮುಗಿಲನ್ನು ನೋಡಿ ದಿಕ್ಕನ್ನು ಹೇಳುವ ಬದಲು ನನ್ನ ಪಕ್ಕದಲ್ಲಿ ಉಪಸ್ಥಿತಳಿರುವ ದಾರೇಶ್ವರಿಗೆ ಒಂದು ಓರೆನೋಟವನ್ನು ಕೊಟ್ಟರೆ ಸಾಕು ಆಕೆ ಎಲ್ಲವನ್ನೂ ಹೇಳಿಬಿಡುತ್ತಾಳೆ. ಎಲ್ಲೆಲ್ಲಿ ಯಾವ ಯಾವ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಿದೆ ಎಂದು ರೇಡಿಯೋವನ್ನು ಕೇಳಿ ತಿಳಿದುಕೊಳ್ಳುವ ಬದಲು ದಾರೇಶ್ವರಿ ನೀನೇ ಗತಿ ಎಂದು ಆಕೆಗೆ ಮೊರೆ ಹೋದರೆ ಸಾಕು, ಎಲ್ಲವನ್ನು ಸುಲಲಿತವಾಗುವಂತೆ ಮಾಡುತ್ತಾಳೆ. ಮಧ್ಯೆ ಎಲ್ಲಾದರೂ ದಾರಿ ತಪ್ಪಿಸಿಕೊಂಡರೆ, ಹೆಚ್ಚು ಟ್ರಾಫಿಕ್ ಇರುವುದನ್ನು ತಪ್ಪಿಸಿ ಬೇರೆ ದಾರಿಯಲ್ಲಿ ಹೋಗಬೇಕೆಂದರೆ ಮತ್ತೆ ದಾರೇಶ್ವರಿಯೇ ಸಹಾಯ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿಬಿಟ್ಟಿದ್ದಾಳೆ.

ಅದ್ಯಾವ ಉಪಗ್ರಹವೋ ಅದೆಲ್ಲಿದೆಯೋ ಅದನ್ನು ಯಾರು ಎಂದು ಹಾರಿಬಿಟ್ಟಿದ್ದಾರೋ ಯಾರು ಬಲ್ಲರು? ನಾನು ಕೊಟ್ಟ ಕೆಲವೇ ಕೆಲವು ನೂರು ಡಾಲರುಗಳ ಬೆಲೆಗೆ ಹಾಗೂ ಜೀವನ ಪರ್ಯಂತ ಬ್ಯಾಟರಿ ಚಾರ್ಜ್ ಮಾಡಿ ಹೊಟ್ಟೆ ತುಂಬಿಸುತ್ತೇನೆ ಎನ್ನುವ ಆಶ್ವಾಸನೆಗೆ ನನಗೆ ಸಿಕ್ಕ ಮೌಲ್ಯ ದೊಡ್ಡದೇ. ಕ್ಯಾಲ್ಕುಲೇಟರನ್ನು ಬಳಸುವ ಮಂದಿ ಒಂದು ರೀತಿ ಸ್ನಾನಕ್ಕೆ ಬಿಸಿ ನೀರು ಸಿಕ್ಕರೂ ತಣ್ಣೀರನ್ನೇ ಮಾಡುತ್ತೇವೆ ಎಂದು ಹಠ ತೊಟ್ಟವರ ಹಾಗಿನವರು ಎನ್ನುವುದು ನನ್ನ ಸಿದ್ಧಾಂತಗಳಲ್ಲೊಂದು, ಹಾಗೆಯೇ ದಾರೇಶ್ವರಿಯಂಥವರನ್ನು ಬಳಸದೇ ಮುಗಿಲ ಮಾರಿಯನ್ನು ನೋಡಿ ಪ್ರಯಾಣ ಬೆಳೆಸುತ್ತೇವೆ ಎನ್ನುವವರೂ ಅಷ್ಟೇ ಕಟ್ಟು ನಿಟ್ಟಿನ ಉಗ್ರರು. ಬರೀ ದಾರಿ ತೋರಿಸುವ ದಾರೇಶ್ವರಿಯಷ್ಟೇ ಅಲ್ಲ, ಅಕೆಯಲ್ಲೂ ಇನ್ನೂ ಅನೇಕಾನೇಕ ಮರ್ಮಗಳಿವೆಯಂತೆ, ಆಕೆಯ ಒಡಲಿನಲ್ಲಿ ಒಂದು ಕಾದಂಬರಿಯ ಆಡಿಯೋವನ್ನು ಹಾಕಿದ್ದೇ ಆದರೆ ಅದನ್ನೂ ದಾರಿ ಉದ್ದಕ್ಕೂ ಬೊರ್ ಹೊಡೆಸದಂತೆ ಓದಿ ಹೇಳುತ್ತಾಳಂತೆ! ಮಧ್ಯೆ ಪೆಟ್ರೋಲ್ ಖಾಲಿ ಆದರೆ, ಹೊಟೇಲ್ ಬೇಕಾದರೆ, ಬ್ಯಾಂಕಿಗೆ ಹೋಗಬೇಕೆಂದೆನಿಸಿದರೆ ಅವು ಎಲ್ಲದರ ವಿಳಾಸ ಹಾಗೂ ಫೋನ್ ನಂಬರನ್ನೂ ಆಕೆ ಬಲ್ಲಳಂತೆ. ಯಾವುದೇ ಅಡ್ರಸ್ಸನ್ನು ಸ್ವಲ್ಪ ತೋರಿಸಿದರೂ ಸಾಕು, ಸು ಎಂದರೆ ಸುಕ್ಕಿನುಂಡೆ ಎನ್ನುವ ಹಾಗೆ ಆಕೆ ಸಂಪೂರ್ಣ ವಿಳಾಸವನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ Go! ಎನ್ನುವ ಹಸಿರು ನಿಶಾನೆಯನ್ನು ಮುಖದ ಮೇಲೆ ಬಿಂಬಿಸಿ ನಗುತ್ತಾಳಂತೆ!

ಈ ದಾರೇಶ್ವರಿಯ ಮೋಡಿಗೆ ನಾನಂತೂ ಒಂದೇ ದಿನದಲ್ಲಿ ಬಿದ್ದು ಹೋಗಿದ್ದೇನೆ, ಇದುವರೆಗೆ ಮಾಡಿರದಿದ್ದರೆ ನೀವೂ ಈ ಈಶ್ವರಿ, ಇಂಗಿಣಿಯರ ಸಹವಾಸ ಮಾಡಿ ನೋಡಿ ನಾನು ಹೇಳುತ್ತಿರುವುದು ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ!

3 comments:

ಸುಪ್ತದೀಪ್ತಿ suptadeepti said...

ಏನಪ್ಪಾ!? ಎಲ್ಲರಿಗೂ "ಇಂಗಿಣಿ" "ಈಶ್ವರಿ"ಯರ ಸಹವಾಸ ಮಾಡೋಕೆ ಉಪದೇಶ ಕೊಡ್ತಿದ್ದೀರಲ್ಲಾ, ನಿಮಗೆ ಹೇಳೋರು ಕೋಳೋರು ಯಾರೂ ಇಲ್ವಾ? ನಿಮ್ಮನೆಯವರು ಸುಮ್ಮನಿದ್ದಾರೆ ಅಂದ ಮಾತ್ರಕ್ಕೆ ನಮ್ಮನೆಯವರನ್ನೂ ಕೆರೆಗೋ ಕಟ್ಟೆಗೋ ಹೋಗು ಅನ್ನೋದು ಎಷ್ಟು ಸರಿ? ಅದೂ ಅಲ್ದೆ, "ಗಂಡಸರು ದಾರಿ ಮಾಹಿತಿಯನ್ನು ಇನ್ನೊಬ್ಬರ ಬಳಿ, ಅದೂ ಹೆಂಗಸರಿಂದ, ಕೇಳಿ ತಿಳಿಯೋದಿಲ್ಲ" ಅನ್ನುವ ಮಾತನ್ನು ಪೂರಾ ಪೂರಾ ಸುಳ್ಳು ಮಾಡಬೇಕಂತ ಇದ್ದೀರೇನು? ಇವೆಲ್ಲಾ ಉಪದ್ವ್ಯಾಪ ಬೇಡ, ನೋಡಿ!
:D :)

ಮನಸ್ವಿನಿ said...

'ಈ ದಾರೇಶ್ವರಿಯ ಮೋಡಿಗೆ ನಾನಂತೂ ಒಂದೇ ದಿನದಲ್ಲಿ ಬಿದ್ದು ಹೋಗಿದ್ದೇನೆ ' -- ಅಂತು ಹೆಂಗಸರ direction skills-ಗೆ ಒಂದು ಹೊಗಳಿಕೆ. :)

Satish said...

ಸುಪ್ತದೀಪ್ತಿ, ಮನ,

ಹೆಂಗಸರಿಂದ ದಾರಿ ಕೇಳಿ ತಿಳಿಯುವುದನ್ನು ಮತ್ತೆ ಯೋಚಿಸಿ ತೊಡಗಿದೆ, ನಿಜ ಜೀವನದಲ್ಲಿ ಹೇಗೋ ಗೊತ್ತಿಲ್ಲ, ಆದರೆ ಎಲೆಕ್ಟ್ರಾನಿಕ್ ವಿಷಯಕ್ಕೆ ಬಂದಾಗ ’ದಾರೇಶ್ವರಿ’ ಸರಿಯಾಗಿಯೇ ಹೇಳುತ್ತಾಳೆ. ಸರಿಯಾಗಿ ದಾರಿ ತೋರಿಸಿದ್ರೆ ಆಯಿತು, ಯಾರಾದರೇನು?!

ಹೌದು, ನನ್ನ ಪ್ರಕಾರ ಎಲ್ಲರೂ ’ಈಶ್ವರಿ’, ’ಇಣಿ’ಯರ ಸಹವಾಸ ಮಾಡಬೇಕು, ಅದರಿಂದ ಕೆಟ್ಟದ್ದೇನಾದರೂ ಇದೆಯೇ ಹೇಳಿ :-)