Sunday, June 03, 2007

ಮಳೆ-ಬೆಳೆ ದುಡ್ಡು-ಕಾಸು

ಅಬ್ಬಾ ಎಂಥಾ ದಗೆ, ಇನ್ನೂ ಮೇ ತಿಂಗಳು ಮುಗಿದು ಜೂನ್ ಆರಂಭವಾಗಿಲ್ಲ ಆಗಲೇ ನಮ್ಮೆಲ್ಲರ ಹುಲ್ಲುಹಾಸುಗಳು ಹಳದಿಯಾಗುವಷ್ಟು ಬಿಸಿಲು, ನಿಜವಾದ ಬೇಸಿಗೆ ಆರಂಭವಾಗುವುದಕ್ಕೆ ಇನ್ನೂ ೧೭ ದಿನಗಳು ಇವೆಯೆನ್ನುವಾಗಲೇ ಪಾದರಸವನ್ನು ನೂರರ ಗಡಿ ದಾಟಿಸಿಬಿಡುತ್ತೇನೆ ಎಂದು ಸೆಡ್ಡು ಹೊಡೆದು ದಿನವೂ ನಿಲ್ಲುವ ಸೂರ್ಯ ಪರಮಾತ್ಮ, ಹೀಗಿರುವಾಗ ಶುರುವಾಯಿತು ನೋಡಿ ವರುಣನ ಭರಾಟೆ ನಿನ್ನೆ...

ರಾತ್ರೀ ಇಡೀ ಮಳೇ, ಅಲ್ಲಲ್ಲಿ ಗುಡುಗು-ಮಿಂಚು, ಆಗಾಗ್ಗೆ ಜೋರಾಗಿ ಬೀಸಿ ಮಳೆಯನ್ನು ರಚ್ಚೆ ಹಿಡಿದು ಅಳುವ ಮಗುವಿನಂತೆ ಮಾಡಿದ್ದೂ ಅಲ್ಲದೇ ಸುತ್ತಮುತ್ತಲಿನ ಗಿಡ ಮರಗಳು ಕೇಕೆ ಹಾಕಿ ನಗುವಂತೆ ಮಾಡಿದ್ದು ವಾಯುದೇವನ ಕೃಪೆ. ಇನ್ನೊಂದು ವಾರಕ್ಕಾಗುವಷ್ಟು ನೀರು ಎಲ್ಲೆಡೆ, ಸೂರ್ಯನ ಅಬ್ಬರಕ್ಕೊಂದು ಕಡಿವಾಣ.

***

'ಇಲ್ಯಾರು ಮಳೆ-ಬೆಳೆ ಲೆಕ್ಕ ಹಾಕ್ಕೋತಾರ್ರೀ, ಎಲ್ಲ ದುಡ್ಡಿದ್ದವರ ದೇಶ, ಕ್ಯಾಪಿಟಲಿಸ್ಟಿಕ್ ಮೆಂಟಾಲಿಟಿ ಒಳಗೆ ಮಳೆ-ಬೆಳೆಗೂ ಯೋಚನೆ ಮಾಡೋಷ್ಟು ಸಮಯ, ವ್ಯವಧಾನವಿದೇಯೇನು?' ಎಂದು ಎಲ್ಲಿಂದಲೋ ಧ್ವನಿಯೊಂದು ಕೇಳಿ ಬಂದಾಯಿತು. ಏಕಿಲ್ಲ, ಪ್ಲೋರಿಡಾ ರಾಜ್ಯದೊಳಗೆ ಈಗಾಗ್ಲೇ ಬರದ ಬವಣೆ ಆರಂಭವಾಗಿದೆ, ಇನ್ನು ಮಳೆ ಕೈ ಕೊಟ್ಟಂತೆಲ್ಲಾ ನೀರಿನ ಅನಗತ್ಯ ಬಳಕೆಯ ಬಗ್ಗೆ ಟಿವಿ ರೇಡಿಯೋಗಳಲ್ಲಿ ಸಂದೇಶಗಳು ಆರಂಭವಾಗುತ್ತವೆ. ಲೆಟ್ಟ್ಯೂಸ್, ಸಿಟ್ರಸ್ ಫ್ರೂಟ್‌ಗಳನ್ನು ಬೆಳೆದೋರ ಲಾಬ್ಬಿ ವಾಷಿಂಗ್ಟನ್‌ನಲ್ಲಿ ತಮ್ಮ ರಾಜ್ಯ/ಕೌಂಟಿಗಳನ್ನು ಬರ ಪರಿಹಾರಕ್ಕೆ ಅನುವುಮಾಡಿಕೊಡಲಿ ಎಂದು ಹಟ ಹಿಡಿಯೋದರಿಂದ ಹಿಡಿದು, ಜನ ಸಾಮಾನ್ಯರಿಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿನ ಬರ ಪರಿಹಾರ ಬೀರುತ್ತಲ್ಲಾ ಎಂದು ಯಾರೋ ಕೇಳಿದ ಪ್ರಶ್ನೆಗೆ ನಾನೇ ಉತ್ತರಿಸಿಕೊಂಡೆ.

ನಮ್ಮನೇ ನಲ್ಲಿಯ ನೀರು ನಿಲ್ಲದ ಮಾತ್ರಕ್ಕೆ ಒಂದು ರಾಜ್ಯ-ದೇಶಕ್ಕೆ ಬರ ತಟ್ಟೋದೇ ಇಲ್ಲವೆಂದು ಸುಮ್ಮನೇ ಯಾರಾದರೂ ವಾದ ಹೂಡಿದರೆ ಅದನ್ನು ಒಪ್ಪಿಕೊಳ್ಳೋದಕ್ಕೆ ಆಗುತ್ಯೇ?

***
ಜ್ಯೇಷ್ಠ-ಅಧಿಕ-ಆಷಾಡಗಳೆಲ್ಲ ಮುಗಿದು, ಶ್ರಾವಣ ಬರೋವರೆಗೆ ವಾರಕ್ಕೆ ಕೊನೇ ಪಕ್ಷ ಒಮ್ಮೆಯಾದರೂ ಮಳೆ ಬೀಳುತ್ತಲೇ ಇರಲಿ. ಅದರಿಂದಾಗಿ ನನಗೆ ಕಡಿಮೆ ಕೆಲಸ - ಹುಲ್ಲು ಹಾಸಿಗೆ ನೀರು ಹಾಕೋದು ಬೇಡ (ಬಣಬಣ ಬೇಸಿಗೆಯಲ್ಲಿ ಹುಲ್ಲು ಬೆಳೆಸೋ ಕರ್ಮ ಬೇರೆ!), ಅದರಿಂದಾಗಿ ನನ್ನ ಕರೆಂಟು ಬಿಲ್ಲು ಕಡಿಮೆ ಬರುತ್ತೆ, ಎಂದು ಯೋಚಿಸ ತೊಡಗಿದಂತೆಲ್ಲ ಕ್ಯಾಪಿಟಲಿಷ್ಟಿಕ್ ವ್ಯವಸ್ಥೆಯಲ್ಲಿಯ ಕನ್‌ಸ್ಯೂಮರ್ ಮೆಂಟಾಲಿಟಿ ಹೊರಗೆ ಬರಲು ತೊಡಗಿತು.

ಮಳೆ-ಬೆಳೆ-ನಿಸರ್ಗ ಎಂದು ಆರಂಭವಾದ ರಾಗ ದುಡ್ಡು-ಕಾಸು-ವ್ಯವಸ್ಥೆ ಎಂದು ಸುಲಭವಾಗಿ ಬದಲಾಗಿ ಹೋಯಿತು!

3 comments: