ಎಲ್ಲೆಲ್ಲೂ ಸಂಗೀತವೇ...
...ಹಾಗಂತ ಅನ್ಸಿದ್ದು ಅದರಲ್ಲೂ ಈ ಸಂಗೀತದ ವಿಶೇಷಗಳು ಗಮನ ಸೆಳೆದಿದ್ದು ಇತ್ತೀಚಿನ ಭಾರತದ ಪ್ರವಾಸದ ಸಮಯದಲ್ಲಿ ಅಂತ ಸಾರ್ಕ್ಯಾಷ್ಟಿಕ್ ಆಗಿ ಹೇಳಿಕೋ ಬೇಕು ಅಷ್ಟೇ. ಎಲ್ಲಿ ನೋಡಿದರೂ ತುಂಬಿ ತುಳುಕೋ ಜನ ಸಾಗರ, ಅಂತಹ ದೊಡ್ಡ ಸಮುದಾಯಕ್ಕೆ ಕಮ್ಮ್ಯೂನಿಕೇಷನ್ನ್ ರೆವಲ್ಯೂಷನ್ನಿನ ಕೊಡುಗೆಯಾಗಿ ಕೈಗೊಂದು ಕಾಲಿಗೊಂದು ಮೊಬೈಲು ಫೋನುಗಳು, ಆ ಕ್ರಾಂತಿಯ ಬೆನ್ನುಲೆಬಾಗಿ ಸಂಗೀತ ಸರಸ್ವತಿ!
ಮ್ಯಾನುಫ್ಯಾಕ್ಚರರ್ ಕೊಟ್ಟಿರೋ ಫೋನುಗಳನ್ನು ಅವುಗಳು ಹೊರಡಿಸೋ ಸ್ವರಗಳನ್ನು ಮಿತಿಯಾಗಿ ಕಷ್ಟಮೈಜ್ ಮಾಡಿಕೊಂಡ ಪದ್ಧತಿಯವನು ನಾನು. ಇದ್ದೊಂದು ಪರ್ಸನಲ್ ಸೆಲ್ಫೋನ್ ಅನ್ನು ಆಫೀಸಿಗೆ ಮುಡಿಪಾಗಿಡಲಾಗಿ ಈಗ ಅದೂ ಬಿಸಿನೆಸ್ಸ್ ಫೋನಾಗಿ ಬಿಜಿಯಾಗಿದೆಯೇ ಹೊರತು ಅದು ಇಂದಿನ ಯುವ ಜನಾಂಗದ ನಡವಳಿಕೆಗಳನ್ನನುಸರಿಸಿ ಬೇರೆ ಯಾವುದ್ಯಾವುದೋ ಸ್ವರವನ್ನೇನು ಹೊರಡಿಸೋದಿಲ್ಲ. ನನ್ನ ಫೋನ್ ರಿಂಗ್ ಆಗುತ್ತಿದ್ದರೆ ೧೯೯೯ರ ಮ್ಯಾಟ್ರಿಕ್ಸ್ ಸಿನಿಮಾದಲ್ಲಿ ಕಿಯಾನೋ ರೀವ್ಸ್ (The Matrix, Keanu Reeves) ಈಗಲೋ ಆಗಲೋ ಬಂದೇ ಬಿಡುತ್ತಾನೆ ಎನ್ನುವಂತೆ ಅಕ್ಕ ಪಕ್ಕದವರು ನೋಡುವಂತೆ ಕಿರುಚಿಕೊಳ್ಳುತ್ತದೆ, ಆದರೆ ನನ್ನ ಫೋನ್ ಹುಟ್ಟಿದಾಗಿನಿಂದ ಇನ್ನು ಅದು ಸಾಯುವವರೆಗೆ ಮತ್ಯಾವ ಸ್ವರವನ್ನೂ (ರಿಂಗ್ ಟೋನ್) ಅನ್ನೂ ಅನುಸರಿಸೋದಿಲ್ಲ, ಅನುಕರಿಸೋದಿಲ್ಲ ಎಂದು ಪ್ರಮಾಣವನ್ನಂತೂ ಮಾಡಲಾರೆ...ಇನ್ನು ಮುಂದೆ ಹೇಗೋ ಏನೋ ಯಾರಿಗೆ ಗೊತ್ತು?
ನಮ್ಮಣ್ಣನ ಫೋನ್ ಕರೆ ಬಂದಾಗಲೆಲ್ಲ ಎಂ. ಡಿ. ಪಲ್ಲವಿಯವರ "ನೀನಿಲ್ಲದೇ ನನಗೇನಿದೇ..." ಹಾಡನ್ನು ಹೊರಡಿಸುತ್ತಿತ್ತು, ನಾನು ಮೊದಮೊದಲು ಈ ಹಾಡನ್ನು ಕೇಳಿದಾಗ ನನಗೆ ಮನಸ್ಸಿನ್ನಲ್ಲಿ ಉದ್ಭಸಿದ ಭಾವನೆಗಳು ಪದೇ ಪದೇ ರಿಂಗ್ಟೋನ್ ನೋಪಾದಿಯಲ್ಲಿ ಬಂದೂ ಬಂದೂ ಹೊಸ ಹೊಸ ಭಾವನೆಗಳು ಮೂಡಿಸತೊಡಗಿತು. ವಿಶೇಷವೆಂದರೆ ತಾವೆಷ್ಟೇ ಅಕ್ಕರೆಯಿಂದ ಕಾಸುಕೊಟ್ಟು ಕೊಂಡೋ ಅಥವಾ ಪುಕ್ಕಟೆಯಾಗಿ ರಿಂಗ್ಟೋನ್ ಅನ್ನು ಹಾಕಿಕೊಂಡಿದ್ದರೂ ಯಾರೂ ತಮ್ಮ ಫೋನ್ ಯಾರೋ ಕರೆ ಮಾಡಿದರೆಂದು ತಮಗೆ ಬೇಕಾದ ಹಾಡನ್ನು ನುಡಿಸಿದಾಗ ಒಂದೆರಡು ಸಾಲನ್ನಾದರೂ ಅದು ಹಾಡಲಿ ಎಂದು ಸುಮ್ಮನೆ ಬಿಡೋದಿಲ್ಲ. ಕರೆ ಬಂದು ಅದು ಹಾಡು ಶುರುಮಾಡುವಾಗಲೇ ಅದರ ಗಂಟಲನ್ನು ಹಿಚುಕಿ ತಮ್ಮ ಗಂಟಲನ್ನು ತೆರೆದುಕೊಳ್ಳುತ್ತಾರೆ. ಹೀಗಿದ್ದಾಗ್ಯೂ ನನ್ನಣ್ಣನ ಫೋನು ಒಂದೆರಡು ಬಾರಿ "ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ..."ಯಲ್ಲಿಯವರೆಗೆ ನುಡಿಸಿತ್ತು, ಒಮ್ಮೆ ಎಲ್ಲದಕ್ಕಿಂತ ಮುಂದೆ ಹೋಗಿ "ಎದೆಯಾಸೆ ಏನು ಎಂದು ನೀ ಕಾಣದಾದೆ...’ ವರೆಗೆ ಹೋಗಿದ್ದು ನಿಜ.
ಅದೇನು ಸಾವಿರಾರು ವರ್ಷದ ಪರಂಪರೆಯೋ ಅಥವಾ ನಮನಮಗೆ ಅಂಟಿದ ಸಂಗೀತದ ಮೋಡಿಯೋ...ಭಾರತದಲ್ಲಿ ಹುಡುಕಿದರೆ ಎಲ್ಲ ಕಡೆ ಸಂಗೀತವಿದೆ: ಬೇಡುವ ಬಿಕ್ಷುಕನಿಂದ ಹಿಡಿದು, ರಿವರ್ಸ್ ತೆಗೆಯೋ ವಾಹನಗಳವರೆಗೆ, ಹಾಲು-ತರಕಾರಿ ಮಾರುವವರ ಸ್ವರಗಳಿಂದ ಹಿಡಿದು ಮನೆಯ ಹಳೆ ಗಡಿಯಾರಗಳವರೆಗೆ, ಹೆಚ್ಚೂ ಕಡಿಮೆ ಎಲ್ಲ ಟಿವಿ-ರೆಡಿಯೋ ಅಡ್ವರ್ಟೈಸ್ಮೆಂಟ್ಗಳಿಂದ ಹಿಡಿದು ಮೇಲೆ ಹೇಳಿದ ಹಾಗೆ ಸೆಲ್ಫೋನ್ ಸಂಭಾಷಣೆಗಳವರೆಗೆ. ಕೆಲವೊಮ್ಮೆ ಈ ರಿವರ್ಸ್ ತೆಗೆಯೋ ವಾಹನಗಳ ವಾರ್ನಿಂಗ್ ಸಿಗ್ನಲ್ ಆಗಿ ಬಳಸೋ ಸಿಂಫನಿಯ ಧ್ವನಿಗೆ ಕಾಫಿರೈಟ್ ಅನ್ನು ಕೊಟ್ಟವರು ಯಾರು? ಅದರಲ್ಲೂ ಅಂತಹ ಮಹಾನ್ ಸಿಂಫನಿಗಳ ಬಳಕೆ ಈ ರೀತಿಯಲ್ಲಿ ಇಷ್ಟು ಕೆಟ್ಟದಾಗಿ ಏಕಾಗುತ್ತಿದೆ ಅನ್ನಿಸಿ ತಲೆ ಚಿಟ್ಟು ಹಿಡಿದದ್ದೂ ಹೌದು. ಅಷ್ಟೊಂದು ಜನರಿದ್ದಾರೆ, ಅವರೆಲ್ಲರಿಗೂ ಸಂಗೀತ ಬೇಕು, ಆ ಸಂಗೀತ ಹಲವಾರು ವಿಧ ರೀತಿಗಳಲ್ಲಿ ತಿರುಚಲ್ಪಟ್ಟದ್ದಾಗಿದೆ, ಕಾಪಿ ಹೊಡೆದದ್ದಾಗಿದೆ ಅನ್ನೋ ಪರಿಜ್ಞಾನವೇ ಇಲ್ಲದಷ್ಟರ ಮಟ್ಟಿಗೆ ಬೆಳೆದು ಹೋಗಿದೆ.
ನಾನು ಸ್ವರ-ಸಂಗೀತ-ಮಾಧುರ್ಯ ಅಂತ ಇಬ್ಬರು ಗುರುಗಳ ಹತ್ತಿರ ಎರಡು ಸಾರಿ ಉತ್ತರಾದಿ-ದಕ್ಷಿಣಾದಿ ಸಂಗೀತದ ವಾಸನೆಯನ್ನು ಎಳೆದುಕೊಂಡೇ ಅಂದಿನ ಕಳವಳಗಳಿಗೆ ಸಂಗೀತದ ಕಲಿಕೆಯನ್ನು ಬಲಿಕೊಟ್ಟವನು, ನಾನಾದರೂ ಸಂಗೀತದ ಬಗ್ಗೆ ಏನು ಬರೆಯಬಲ್ಲೆ ಎನ್ನುವ ಕೆಳ ಮನೋಭಾವನೆಯವನಾದರೂ ನಿಶ್ಶಬ್ದವನ್ನು ಸೀಳುವ ಕಂಪನಗಳನ್ನಾಗಿ ಸಂಗೀತವನ್ನು ನೋಡುವುದರ ಜೊತೆಗೆ ಕಂಪನದ ಜೊತೆ ಹದವಾಗಿ ಬೆರೆತ ಸದ್ದಿಲ್ಲದ ಪರಿಸರವೂ ಸಂಗೀತದ ನೆಲೆನಿಲ್ಲುವಿಕೆ ಅಷ್ಟೇ ಮುಖ್ಯ. ಆದರೆ ಭಾರತದಲ್ಲಿ ಒಂದರ ಸಂಗೀತದ ಅಲೆ ಮತ್ತೊಂದರ ಸಂಗೀತದ ಅಲೆಗಳನ್ನು ಸೀಳುತ್ತದೆ, ನಿಶ್ಶಬ್ದ ಅನ್ನೋದು ಕೇವಲ ಬ್ರಾಹ್ಮೀ ಮಹೂರ್ತದ ಒಂದೆರಡು ಘಳಿಗೆ ಮೊದಲು ಮಾತ್ರ ಅನ್ನುವಂತಾಗಿದೆ, ಎಲ್ಲೆಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ತುಂಬಿ ತುಳುಕುವ ಸಂಗೀತ ಕೊನೆಗೆ ಒಂದು ದೊಡ್ಡ ಗದ್ದಲದ ರೀತಿಯಲ್ಲಿ ಕೇಳಿ ಬರುತ್ತದೆ ಕಾಣಸಿಗುತ್ತದೆ.
ಸುಮ್ಮನೇ ಯಾರೋ ಹಾಕಿಕೊಂಡಿರೋ ರಿಂಗ್ಟೋನಿಗೆ ನಾನು ಬೇಡವಲ್ಲದ ಮಹತ್ವವನ್ನು ಕೊಡುತ್ತೇನೆ. ಸೆಲ್ಫೋನ್ ಉತ್ಪಾದಕರು ಕೊಟ್ಟ ಧ್ವನಿಗಳು ಸಾಲವು ಎಂದು ಮೂರು ಡಾಲರ್ ಕೊಟ್ಟು ಹೊಸ ಧ್ವನಿಯನ್ನು ಪಡೆದು ಹಾಕಿಕೊಳ್ಳುವವನ ಮನಸ್ಸಿನ ಹಿಂದೇನಿರಬಹುದು ಎನ್ನುವ ಪ್ರಶ್ನೆಗಳು ಕಾಡುತ್ತವೆ. ನನ್ನಣ್ಣ ’...ನೀನಿಲ್ಲದೇ ನನಗೇನಿದೆ...’ ಎನ್ನುವ ಹಾಡನ್ನೇ ಏಕೆ ಹಾಕಿದ? ರಿಂಗ್ ಆದಾಗ ಬರುವ ಹಾಡಿಗೂ ಮತ್ತೊಬ್ಬರು ನಾವು ಫೋನ್ ಎತ್ತಿ ಆನ್ಸರ್ ಮಾಡುವವರೆಗೆ ಕಾಯುವಾಗ ಬ್ಯಾಕ್ಗ್ರೌಂಡಿನಲ್ಲಿ ರಿಂಗ್ ಬದಲಿಗೆ ಕೇಳುವ ಹಾಡಿಗೆ ಏನನ್ನುತ್ತಾರೆ? ನನಗೆ ಕರೆ ಮಾಡಿದವರು ಮಾಡುವವರು ಯಾರೋ ಅವರು ಆ ಹಾಡನ್ನೇ ಕೇಳಲಿ ಎನ್ನುವ ಉಮೇದಿನ ಆದಿ-ಅಂತ್ಯಗಳೇನು? ನನ್ನ ಉಳಿದೆಲ್ಲ ಪರ್ಸನಾಲಿಟಿ ಪ್ರತಿಬಿಂಬಿಸುವ ಅಂಶಗಳ ಜೊತೆಗೆ ತಣ್ಣಗಿದ್ದಾಗ ಜೇಬಿನ ಒಳಗಿರುವ ಈ ಎಲೆಕ್ಟ್ರಾನಿಕ್ ಉಪಕರಣ ಚಾಲೂ ಇದ್ದಾಗ ನನ್ನ ವ್ಯಕ್ತಿತ್ವದ ಪ್ರತಿಬಿಂಬವಾಗುವುದು ನಿಜವೇ? ತನಲ್ಲಿ ಇದ್ದದ್ದು ಸಾಲದು, ಮಂದಿಯದು ಬೇಕು, ಅವರ ಕೈಯಲ್ಲಿರೋದು ಒಳ್ಳೆಯದು ಎನ್ನುವ ಮೆಟೀರಿಯಲಿಸ್ಟಿಕ್ ಬದುಕನ್ನು ಸೆಲ್ಫೋನುಗಳು ಹುಟ್ಟು ಹಾಕುತ್ತಿದ್ದಾವೆಯೇ? ಎಲ್ಲದಕ್ಕಿಂತ ಮುಖ್ಯವಾಗಿ ಸಂಗೀತ ಎಲ್ಲರಿಗೂ ಇಷ್ಟವಾಗಲೇ ಬೇಕು ಎಂದೇನಾದರೂ ನಿಯಮವಿದೇಯೇ?
ಗುಬ್ಬಚ್ಚಿಯ ಹಾಗೆ ಕೂಗುವ ಧ್ವನಿಗಳಿಂದ ಹಿಡಿದು, ವಯಸ್ಸಾದವರಿಗೆ ಕೇಳದ ಧ್ವನಿಯ ಫ್ರೀಕ್ವೆನ್ಸಿಯವರೆಗೆ, ಉತ್ತರಾದಿ ಸಂಗೀತದಿಂದ ಹಿಡಿದು ದಕ್ಷಿಣಾದಿಯವರೆಗೆ, ಪೂರ್ವದಿಂದ ಹಿಡಿದು ಪಶ್ಚಿಮದ ಸಂಗೀತದ ಅಲೆಗಳ ಬಗ್ಗೆ ಬೇಕಾದಷ್ಟು ರಿಂಗ್ ಟೋನ್ಗಳಿವೆ, ಆದರೆ ಇವು ಯಾವುವೂ ಜನರ ಹಸಿವನ್ನು ಹಿಂಗಿಸಿಲ್ಲ. ಆ ಸಾಲದು ಎನ್ನುವ ಮನೋಭಾವನೆ ಅನೇಕ ಬೇಕುಗಳ ತಾಯಿಯಾಗುತ್ತಿದೆ. ಹೀಗೆ ಹುಟ್ಟುವ ತಾಯಂದಿರ ದಯೆಯಿಂದ ಮತ್ತೆ ಅನೇಕಾನೇಕ ಮಕ್ಕಳು ಸಂಗೀತ ಪ್ರಾಪ್ತಿಯನ್ನು ಹೊಂದುತ್ತಾರೆ, ಒಟ್ಟಿನಲ್ಲಿ ಸಂಗೀತವನ್ನು ಜಗತ್ತು ಎತ್ತಿಕೊಳ್ಳುತ್ತದೆ - ಸಂಗೀತ ಜನರನ್ನು ಎಚ್ಚೆರಿಸುತ್ತದೆ. ಸದ್ಯ, ಈ ಸಂಗೀತದ ಟೋನುಗಳು ಮನೆಯ ಹೊರಗೇ ಉಳಿಯುತ್ತವೆ ಹೆಚ್ಚಿನ ಮಟ್ಟಿಗೆ, ಅದ್ಯಾವ ಪುಣ್ಯಾತ್ಮನೂ ಮನೆಯ ಫೋನಿನ ರಿಂಗ್ಟೋನ್ ಅನ್ನು ಈ ರೀತಿಯ ಜನರ ಮನೋಭಿರುಚಿಗೆ ತಕ್ಕಂತೆ ಬದಲಾಯಿಸಿಲ್ಲವಲ್ಲ, ಅಷ್ಟು ಸಾಕು.