ಟಗರು ಪಲ್ಯ: ಚಿತ್ರದ ಬಗ್ಗೆ ಅನಿಸಿಕೆ
ಹಳ್ಳಿಯ ಸೊಗಡಿರುವ ಸಿನಿಮಾ ಎಂದು ತಕ್ಷಣವೇ ಗೊತ್ತಾಗುವಷ್ಟು ಗಾಢತೆ ಈ ಸಿನಿಮಾದಲ್ಲಿದೆ. ಹಳ್ಳಿಯ ಕುರಿತ ಸಿನಿಮಾಗಳಿಗೆ "ಕೋಳಿ ಎಸ್ರು" ಎನ್ನುವ ಹೆಸರು ಇದ್ದಾಗ ಅದು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ, ಇತ್ತ ಪೂರ್ಣವಾಗಿ ಇಂಗ್ಲೀಷೂ ಅಲ್ಲದ, ಅತ್ತ ಕನ್ನಡವೂ ಅಲ್ಲದ - ಟಗರು ಪಲ್ಯ - ಎನ್ನುವ ಹೆಸರು ಅದೇಕೋ ಅಷ್ಟೊಂದು ಸೂಕ್ತ ಎನಿಸುವುದಿಲ್ಲ. ಮಟನ್ ಚಾಪ್ಸ್ ಅನ್ನೋದನ್ನ ನೇರವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ ಹಾಗಿದೆ. ತರಕಾರಿ ಪಲ್ಯಕ್ಕೆ ಹೊಂದಿಕೊಳ್ಳುವ ಹಾಗೆ, ಕುರಿ-ಕೋಳಿಗಳು ಹೊಂದಿಕೊಳ್ಳಬಹುದೇನೋ, ಆದರೆ ಟಗರು ಪದ ಹೊಂದಿಕೊಳ್ಳುವುದು ಅಸಹಜವಾಗಿ ಕಂಡುಬರುತ್ತದೆ.
ಕಥಾನಾಯಕಿ, ಅಮೃತಾಪ್ರೇಮ್ ಮೊದ ಮೊದಲು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆಯದಿದ್ದರೂ, ಅಂತಿಮ ಹಂತದಲ್ಲಿ ಅವರು ಈ ಚಿತ್ರದಲ್ಲಿ ನಟಿಸಲು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಹೊರಾಂಗಣದಲ್ಲಿ, ಅದೂ ತಮ್ಮ ಮೊದಲ ಚಿತ್ರದಲ್ಲಿ ಭಾಷೆ-ಭಾವನೆಗಳ ಅಭಿವ್ಯಕ್ತಿಯ ಮೂಲಕ ಎಲ್ಲರ ಕಣ್ಣಂಚಿನಲ್ಲಿ ನೀರೂರುವ ಸಾಹಸವನ್ನು ನಿರ್ದೇಶಕ ಉಮೇಶ್ ಅವರು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಹಾವ-ಭಾವಗಳಿಂದ ಇಷ್ಟವಾಗುವ ಅಮೃತಾ, ಇನ್ನೂ ನಟನೆಯಲ್ಲಿ ಚೆನ್ನಾಗಿ ಪಳಗಬೇಕು, ಆದರೆ ಈ ಚಿತ್ರ ಅವರಿಗೊಂದು ಸವಾಲಾಗಿದ್ದು, ಆ ಸವಾಲಿನಲ್ಲಿ ಗೆದ್ದಿದ್ದಾರೆ ಎನ್ನಬಹುದು.
ರಂಗಾಯಣ ರಘು ಮತ್ತು ತಾರಾ ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ಇಬ್ಬರೂ ನುರಿತ ಕಲಾವಿದರು, ತಮಗೆ ಪಾತ್ರ ಮತ್ತು ಜವಾಬ್ದಾರಿಯನ್ನು ನಿರೀಕ್ಷೆಗಿಂತಲೂ ಹೆಚ್ಚು ಚೆನ್ನಾಗಿ ನಡೆಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಸ್ವಲ್ಪವೂ ಸಾಮಾನ್ಯ ಜ್ಞಾನವಿರದಂತೆ ಚಿತ್ರಿಸಿದ ವಾಸುಕಿ ವೈಭವ್ ಅವರ ಟೆಕ್ಕಿ ಪಾತ್ರ ಕಿರಿಕಿರಿ ಮಾಡುತ್ತದೆ. ಕುರಿ ಹಿಕ್ಕೆಗೂ ಕಡಲೇಬೀಜಕ್ಕೂ ವ್ಯತ್ಯಾಸಗೊತ್ತಿರದ ಟೆಕ್ಕಿಗಳನ್ನು ತೋರಿಸುವ ನಿರ್ದೇಶಕರಿಗೆ, ಟೆಕ್ಕಿಗಳ ಮೇಲೆ ಹಗೆ ತೀರಿಸಿಕೊಂಡಂತಾಗಿರಬೇಕು. ಇನ್ನು, ಸಂಗೀತ ನೀಡುವ ವಾಸುಕಿ ಅವರನ್ನು ಒತ್ತಾಯಪೂರ್ವಕವಾಗಿ ನಟನೆಗೆ ದೂಡಿದ್ದಾರೆನೋ ಎಂಬ ಸಂಶಯವೂ ಮೂಡುತ್ತದೆ.
ಟೈಟಲ್ ಸಾಂಗ್ನಲ್ಲಿ ಅನಗತ್ಯವಾಗಿ "ಟಗರುಪಲ್ಯ"ವನ್ನು ತುರುಕಿರದಿದ್ದರೆ, ಒಂದು ಹಳ್ಳಿಯಗಾಥೆಯಾಗಿ ನೆನಪಿನಲ್ಲುಳಿಯುತ್ತಿತ್ತೇನೋ. ಆದರೆ, ಚಿತ್ರದುದ್ದಕ್ಕೂ ಸಂಗೀತ ಎಷ್ಟು ಪೇಲವವಾಗಿದೆಯೋ, ಹಾಡುಗಳೂ ಹಾಗೇ ಇವೆ. ಒಂದೇ ಸ್ಥಳದಲ್ಲಿ ನಡೆದದ್ದನ್ನು ಚಿತ್ರೀಕರಿಸಲು ಛಾಯಾಗ್ರಾಹಕರೇನು ಹೆಚ್ಚು ಕಷ್ಟಪಟ್ಟಂತಿಲ್ಲ, ಇದ್ದುದರಲ್ಲಿ ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದು. ಇನ್ನು ಪೋಷಕ ಪಾತ್ರಗಳಲ್ಲಿ ಬಿರಾದಾರ್ ನಟನೆ ಎದ್ದು ಕಾಣುತ್ತದೆ. ತಮಗೆ ಸಹಜವಲ್ಲದ ಭಾಷೆಯಲ್ಲೂ ಪರಿಪಕ್ವತೆಯನ್ನು ಕಂಡು, ದೊಡ್ಡಪ್ಪನಾಗಿ ನಟಿಸುವ ಅವರ ನಿಲುವು ಇಷ್ಟವಾಗುತ್ತದೆ. ಇನ್ನು ಹಾಸ್ಯದ ಹೆಸರಿನಲ್ಲಿ ಹೆಂಡ, ಹೆಂಡದ ಮತ್ತಿನಲ್ಲಿ ಹಾಸ್ಯ ಸ್ವಲ್ಪ ಅತಿ ಎನ್ನಿಸಿದರೂ, ಇಂದಿನ ಗ್ರಾಮೀಣ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸರಿಯಾಗಿವೆ. ಪೂಜಾರಪ್ಪನ ಪಾತ್ರ, ಬೆಂಗಳೂರಿನ ಸಂಬಂಧಿಕರ ಪಾತ್ರಗಳು, ಸ್ಥಳೀಯ ರೈತಾಪಿ ವರ್ಗದ ಭಕ್ತರ ಪಾತ್ರಗಳು ಎಲ್ಲವೂ ಚೆನ್ನಾಗಿ ಹೊಂದಿಕೊಂಡಿವೆ.
ಕಡಿಮೆ ಬಜೆಟ್ಟಿನಲ್ಲಿ ಮಾಡಿ ಸಂಪೂರ್ಣ ಚಿತ್ರವನ್ನು ನಿರ್ಮಿಸಿದ ತಂಡ, ಈ ಚಿತ್ರ ಬಿಡುಗಡೆಯಾಗಿ ಕರ್ನಾಟಕದುದ್ದಗಲಕ್ಕೂ ಎಲ್ಲ ಕಡೆ ನಡೆಯುತ್ತದೆ ಎಂದು ಅಂದುಕೊಂಡರೆ ಕಷ್ಟ. ಇದು, ಗ್ರಾಮೀಣ ಸೊಗಡಿನ ಚಿತ್ರ. ಅದರಲ್ಲೂ ಒಂದು ತಾಲೂಕಿನ ಭಾಷೆ, ಅದರ ಕ್ಲಿಷ್ಟತೆಯನ್ನು ಅರಗಿಸಿಕೊಂಡಿರುವುದರಿಂದ ಆ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗುವುದೇನೋ ಎನ್ನುವ ಅನುಮಾನ ಮೂಡುತ್ತದೆ. ಹಾಗೆಯೇ, ಬಿಡುಗಡೆಯಾಗಿ, ಒಂದು ವಾರದಲ್ಲೇ ಮೂಡಿಮರೆಯಾಗುವ ಚಿತ್ರಕ್ಕೆ ಇಷ್ಟೊಂದು ಕಷ್ಟಪಡಬೇಕಿತ್ತೇನೋ ಎಂದು ಬೇಸರವೂ ಆಗುತ್ತದೆ. ಈ ಚಿತ್ರವನ್ನು ನಾಟವನ್ನಾಗಿ ಮಾಡಿ ಸಂಬಂಧಪಟ್ಟ ಗ್ರಾಮೀಣ ಭಾಗಗಳಲ್ಲಿ ಪ್ರದರ್ಶಿಸಿದ್ದರೆ ಹೇಗಿರುತ್ತಿತ್ತು, ಅದರಿಂದ ಹೆಚ್ಚಿನ ಪರಿಣಾಮವೇನಾದರೂ ಆಗುತ್ತಿತ್ತೇನೋ ಎಂದು ಯೋಚಿಸಬಹುದು.
ಮುಖ್ಯವಾಗಿ ಕಥೆ ಸಾರುವ ಸಂದೇಶ ಸರಳವಾದುದು. ಹಾಗಿದ್ದಾಗ, ಈ ಚಿತ್ರದ ಸ್ವಾರಸ್ಯ ಮತ್ತು ಶಕ್ತಿ ಎಲ್ಲವೂ ಚಿತ್ರಕತೆ ಮತ್ತು ಅದರ ಭಾಷ್ಯದಲ್ಲಿಯೇ ಇದೆ ಎಂದರೆ ತಪ್ಪಾಗಲಾರದು. ಸದಾ ತಮಗೆ ಗೊತ್ತಿರದ ಸುಖದ ಸಂಪತ್ತಿನ ಮರೀಚಿಕೆಯನ್ನು ಅರಸಿ, ತಮಗೆ ಗೊತ್ತಿರದ ದೂರದ ಬೆಂಗಳೂರಿನ ಗಂಡುಗಳೇ ಬೇಕು ಎಂದು ಪೋಷಕರಿಗೆ ಗಂಟುಬೀಳುವ ಮದುವೆಗೆ ಬಂದ ಹೆಣ್ಣುಮಕ್ಕಳು ಈ ಚಿತ್ರದ ದೆಸೆಯಿಂದಲಾದರೂ ಒಂದಿಷ್ಟು ಪಾಠಗಳನ್ನು ಕಲಿತರೆ ಒಳ್ಳೆಯದು. ತಮ್ಮ ನೆರೆಹೊರೆಯಲ್ಲಿ ತಮ್ಮ ನಿಲುವು-ಅಂತಸ್ತಿಗೆ ತಕ್ಕಂತೆ ಇರುವುದನ್ನು ಆಯ್ದುಕೊಳ್ಳುವುದರ ಮೂಲಕ ಸಹಜವಾಗಿ ಬದುಕಬೇಕು ಎನ್ನುವುದು ಈ ಚಿತ್ರದ ಆಶಯ. ಚಿತ್ರದ ಕೊನೆಯಲ್ಲಿ ಬರುವ ಮಾತು, "...ನೋಡಿ ಮಾಡಿ ಹೆಣ್ ಕೊಡಿ, ಸಂಬಧಗಳಿಗೆ ಬೆಲೆ ಕೊಡಿ..." ಎನ್ನುವುದು ಅಕ್ಷರಶಃ ಸತ್ಯವಾದುದು. ಚಿತ್ರದ ಕೊನೆಯಲ್ಲಿ ತೋರಿಸುವ ಕಲಾವಿದರ ಕುಟುಂಬಗಳ ಗ್ರೂಪ್ ಫ಼ೋಟೋಗಳು, ಹಿನ್ನೆಲೆಯ ಹಾಡಿನ ಆಶಯ ಕುಟುಂಬ ಪ್ರೇಮವನ್ನು ಎತ್ತಿ ತೋರುತ್ತದೆ, ಹಾಗೂ ಕುಟುಂಬಗಳ ಅಗತ್ಯವನ್ನು ಎತ್ತಿ ಹಿಡಿಯುತ್ತವೆ. ಇಂದಿನ ಒಬ್ಬಂಟಿ ತನದ ಏಕತಾನದ ಪ್ರಪಂಚದಲ್ಲಿ ತಮ್ಮನ್ನು ತಾವೇ ಕಳೆದುಕೊಂಡಿರುವ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಹಾಡು ಛಾಟಿಯ ಏಟಿನಂತೆ ಹೊಡೆಯಬಲ್ಲದು ಕೂಡ.
ಇನ್ನು ಚಿತ್ರ ನಿರ್ಮಾಪಕ ಡಾಲಿ ಧನಂಜಯ ಅವರು ಸಾಹಸ ಪ್ರಧಾನ ಚಿತ್ರಗಳಲ್ಲಿ ಹೀರೋ ಆಗಿ ಮಿಂಚಿ-ಮೆರೆಯುವ ಜೊತೆಗೇ ಈ ಗ್ರಾಮೀಣ ಕನ್ನಡ ಚಿತ್ರಕಥನಕ್ಕೆ ಪೋಷಣೆಯನ್ನು ನೀಡಿರುವುದು ಬಹಳ ದೊಡ್ಡ ವಿಚಾರ. ಈ ಕತೆಯನ್ನು ತೆರೆಯ ಮೇಲೆ ತಂದಿರುವುದರ ಮೂಲಕ, ಕನ್ನಡದಲ್ಲಿ ಒಂದು ಕುಟುಂಬ ಪ್ರಧಾನ ಚಿತ್ರವನ್ನು ಬೆಂಬಲಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಜೊತೆಗೆ ಅವರು ಚಿತ್ರದ ಹಾಡುಗಳ ರಚನೆಯಲ್ಲೂ ತೊಡಗಿಕೊಂಡಿರುವುದು ಅವರೊಳಗಿನ ಕಲಾವಿದನ ಮನಸ್ಸಿನ ಸಂವೇದನೆಗಳಿಗೆ ಹಿಡಿದ ಕನ್ನಡಿಯಂತಿದೆ. ಹೀಗೆ ಒಂದೇ ದಿನದ ಕತೆಯನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ, ಅನೇಕ ಚಿತ್ರ ಮತ್ತು ಚಿತ್ರಣಗಳನ್ನು ಕಣ್ಣಿಗೆ ಕಟ್ಟಿ, ಹಳ್ಳಿಯ ನೇಟಿವ್ ಭಾಷೆಯ ಮಜಬೂತಾದ ಊಟವನ್ನು ಉಣಿಸಿ, "...ಸಂಬಂಧ ಅನ್ನೋದು ದೊಡ್ದು ಕಣಾ..." ಎನ್ನುತ್ತಲೇ ಚಿತ್ರ ಕೊನೆಯಾಗುತ್ತದೆ.