ಚಿತ್ರಗಳ ನೆನಪು
ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ. ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ. ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ. ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ. ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.
ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡು ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು. ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು. ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು. ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!
ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ. ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ! ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು. ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ. ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು. ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.
ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ. ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ. ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ. ನಮ್ಮ ನಿಜವಾದ ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ. ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.
ಬೂಮರ್ಸ್ ಜನರೇಷನ್ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ. ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ. ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!