ಕಾಫಿ ಫಿಲ್ಟರ್, ಕಿವಿಗೆ ಹಾಕುವ ಹತ್ತಿ ಹಾಗೂ ಅನಿವಾಸಿತನ
ಭಾರತದಿಂದ ಬಂದ ಹೊಸತರಲ್ಲಿ ಅಮೇರಿಕದಲ್ಲಿ ದೊರೆಯುವ ಕಾಫಿ (ಲೋಟಾಗಳ) ಸೈಜು, ಅದನ್ನು ಬಳಸುವ ಬಳಕೆದಾರರೆಲ್ಲ ನನ್ನಲ್ಲಿ ಬಹಳ ಕಳವಳವನ್ನೂ ದಿಗ್ಬ್ರಾಂತಿಯುನ್ನು ಮೂಡಿಸುತ್ತಿದ್ದರು ಎನ್ನುವುದು ನನ್ನ ಅನುಭವ ಅಥವಾ ಅನಿಸಿಕೆ. ಇಲ್ಲಿ ಎಲ್ಲವೂ ಲಾರ್ಜ್ ಸೈಜು - ಕಾಫಿ, ಸೋಡಾ, ತಿನ್ನುವ ಸ್ಯಾಂಡ್‌ವಿಚ್, ಆಹಾರ ಪದಾರ್ಥ, ಆಚಾರ-ವಿಚಾರ ಎಲ್ಲವೂ. ನಮ್ಮ ಭಾರತೀಯ ಪದ್ದತಿಯ ಪ್ರಕಾರ ನಾನು ಬೆಳಗ್ಗೆ ಒಂದು ಲೋಟಾ ಮತ್ತು ಸಂಜೆ ಒಂದು ಲೋಟಾ ಕಾಫಿ ಅಥವಾ ಚಹಾಕ್ಕೆ ಹೊಂದಿಕೊಂಡವನು. ಇಲ್ಲಿ ಬಂದ ಹೊಸತರಲ್ಲಿ ಈ ಲಾರ್ಜ್ ಸೈಜುಗಳು ಖಂಡಿತ ನನ್ನಂತಹವರಿಗಲ್ಲ ಅಲ್ಲದೇ ಎಂದೂ ನನಗೆ ಇಷ್ಟು ದೊಡ್ಡ ಸರ್ವಿಂಗ್ ಸೈಜಿನ ಅಗತ್ಯವಿಲ್ಲ ಎಂಬುದು ಅಂದಿನ ನಿಲುವಾಗಿತ್ತು.
ಭಾರತದಲ್ಲಿ ನಾವು ಫಿಲ್ಟರ್ ಕಾಫಿ ಕುಡಿಯುತ್ತಿದ್ದೆವು, ಆದರೆ ಅಲ್ಲೆಲ್ಲೂ ಹತ್ತು-ಹನ್ನೆರಡು ಕಪ್ ಕಾಫಿ ಹಿಡಿಯುವಷ್ಟು ದೊಡ್ಡ ಪ್ರಮಾಣದ ಫಿಲ್ಟರ್ ನಾನು ನೋಡಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ನಾವು ಒಂದಿಷ್ಟು ಜನ ಬ್ಯಾಚುಲರ್ಸ್ ಸೇರಿಕೊಂಡು ಕಾಫಿ ಫಿಲ್ಟರ್ ಹೆಸರಿನಲ್ಲಿ ಒಂದಿಷ್ಟು ಕಾಫಿ ಫಿಲ್ಟರುಗಳನ್ನು ತಂದು, ಈ ಪೇಪರಿನ ಕೊಟ್ಟೆಯನ್ನು ಹೇಗೆ ಉಪಯೋಗಿಸಬೇಕು ಎಂಬುದು ತಿಳಿಯದೇ ಅದನ್ನು ಹಾಗೇ ಎಸೆದ ಹಾಗೆ ನೆನಪು.
ಅದಾದ ನಂತರದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಫಿ ಕುಡಿಯುವುದಕ್ಕೆ ಒಗ್ಗಿ ಹೋದ ನಾನು ಲಾರ್ಜ್ ಕಾಫಿಗಳನ್ನು ಗಣನೀಯ ಪ್ರಮಾಣದಲ್ಲಿ ಸೇವಿಸ ತೊಡಗಿದ ಮೇಲೆ ಮಿಸ್ಟರ್ ಕಾಫಿಯ ಬಳಕೆಗೆ ಹೊಂದಿಕೊಂಡಿದ್ದು. ಹಾಗೇ ದಿನದ ಆರಂಭದಲ್ಲಿ ನಮ್ಮೂರಿನ ನಾಲ್ಕು ಲೋಟಾಗಳು ಹಿಡಿಯುವಷ್ಟು ಕಾಫಿಯನ್ನು ಅರ್ಧ ಘಂಟೆಯ ಒಳಗೆ ಒಂದು ಕೈಯಿಂದ ಕಾರನ್ನು ಡ್ರೈವ್ ಮಾಡುತ್ತಲೇ ಮತ್ತೊಂದು ಕೈಯಿಂದ ಸೇವಿಸುವುದನ್ನು ಕರತಾಮಲಕ ಮಾಡಿಕೊಂಡಿದ್ದು. ಇಲ್ಲಿ ನಮ್ಮ ಮನೆಯಲ್ಲಿ ಇಂತಹ ದಿನನಿತ್ಯ ಉಪಯೋಗಿ ವಸ್ತುವಾಗಿ ಕಾಫಿಯ ಬಳಕೆಯಾದ ಮೇಲೆ ಅದರ ಸಂಗಾತಿ ಪೇಪರ್ ಫಿಲ್ಟರ್ರೂ ಇಲ್ಲವೆಂದರೆ ಹೇಗೆ? ಜೊತೆಗೆ ಒಂದೋ ಎರಡೋ ಕಾಫಿ ವೆರೈಟಿಗೆ ಹೊಂದಿಕೊಂಡ ದೇಹಕ್ಕೆ (ಹಾಗೂ ಮನಸ್ಸಿಗೆ) ಇಲ್ಲಿನ ಹತ್ತು ಹಲವಾರು ಪ್ಲೇವರುಗಳೂ ಅವುಗಳ ಜೊತೆಗೆ ಕಾಫಿ ಬೀಜದ ರೋಸ್ಟ್ (ಲೈಟ್, ಮೀಡಿಯಂ, ಡಾರ್ಕ್) ಸೇರಿಕೊಂಡು ಆಹ್ಲಾದಕರ ಕಾಫಿಯ ಅನುಭವಕ್ಕೆ ಇನ್ನೊಂದಿಷ್ಟು ರುಚಿಗಳನ್ನು ಸೇರಿಸಿಕೊಂಡಿದ್ದು.
ಇಲ್ಲಿ ನಾವು ಹೋಲ್ ಸೇಲ್ ಮಳಿಗೆಗಳಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳುವಲ್ಲಿ ಕೇವಲ ಎರಡೂವರೆ ಡಾಲರ್‌ಗೆ ಆರು ನೂರು (೬೦೦) ಫಿಲ್ಟರುಗಳನ್ನು ತಂದು ಬಳಸುವುದು ರೂಢಿ. ಆದರೆ ಒಮ್ಮೆ ಖರೀದಿಸಿದ ಈ ಫಿಲ್ಟರ್ ಖಾಲಿ ಆಗುವಾಗ ದಿನಕ್ಕೊಂದರಂತೆ ಬಳಸಿದರೂ ಮನಯಲ್ಲಿ ಕಾಫಿ ಕುದಿಸದ ವರ್ಷದ ಇತರ ದಿನಗಳನ್ನು ಲೆಕ್ಕ ಹಾಕಿದರೆ ಕೊನೇ ಪಕ್ಷ ಆರು ನೂರು ಫಿಲ್ಟರ್ ಪೇಪರುಗಳು ಎರಡು ವರ್ಷದ ಮಟ್ಟಿಗಾದರೂ ಬಂದಾವು. ಆದರೆ ನಾನು ಕಾಫಿ ಹೀರುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗೆ ಮಾತ್ರ ಹಾಗಾಗಿ ಐದು ವರ್ಷಗಳ ಹಿಂದೆ ತಂದ ಫಿಲ್ಟರ್ ಪೇಪರುಗಳು ಖಾಲಿಯಾಗಿ ಹೀಗೆ ಈ ಘಳಿಗೆಯಲ್ಲಿ ಅವುಗಳ ಬಗ್ಗೆ ಬರೆಯುವಂತಾಯಿತು.
ಕಾಫಿ ಫಿಲ್ಟರುಗಳಿಗೆ ಅನ್ವಯವಾಗುವ ಇತಿಹಾಸ ಹಾಗೂ ವಾಸ್ತವದ ಅನುಭವಗಳು ಕಿವಿಗೆ ಹಾಕುವ ಹತ್ತಿಯ ಕಡ್ಡಿಗೂ ಅನ್ವಯಿಸುತ್ತವೆ ಎಂದೇ ಹೇಳಬೇಕು. ಐದು ಡಾಲರುಗಳಿಗೆ ಸಾವಿರದ ಇನ್ನೂರು (೧೨೦೦) ಹತ್ತಿ ಕಡ್ಡಿಯನ್ನು ತಂದು ಅದೆಷ್ಟೋ ವರ್ಷಗಳ ಹಿಂದೆ ಮನೆಯಲ್ಲಿಟ್ಟು ಈಗ ಖಾಲಿ ಆಗಿ ಹೋಗಿದೆ. ಮತ್ತೆ ಫಿಲ್ಟರುಗಳ ಹಾಗೆ ಒಂದು ದೊಡ್ಡ ಪ್ರಮಾಣದ ಖರೀದಿಯನ್ನು ಸಣ್ಣ ಬೆಲೆಗೆ ಮಾಡಬೇಕಾಗಿ ಬಂದಿದೆ, ಅವಿನ್ನು ಖಾಲಿಯಾಗುವುದು ಇನ್ನೆಷ್ಟು ವರ್ಷಗಳ ನಂತರವೋ. ನಾವೇನು ಭಾರತದಲ್ಲಿ ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಿವಿಯೊಳಗೆ ಹತ್ತಿಯನ್ನು ತೂರಿಸಿ ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲ, ಹಾಗೇ ಇಲ್ಲೂ ಕೂಡ. ಕಿವಿಗೆ ಹಾಕುವ ಹತ್ತಿ ಕಡ್ಡಿಯ ಉಪಯೋಗ ಅಪರೂಪಕ್ಕೊಮ್ಮೆ, ಅದೂ ಕೆಲವೊಮ್ಮೆ ಸೈನ್‌ಫೆಲ್ಡ್‌ನ ಕ್ರೇಮರ್ ಕಿವಿಯೊಳಗೆ ನೀರು ತುಂಬಿಸಿಕೊಂಡು ಕುಣಿದಾಡುವ ಪ್ರಸಂಗ ಬಂದ ಹಾಗೆ ನಮಗೂ ಈ ಹತ್ತಿ ಕಡ್ಡಿಯ ಬಳಕೆಗೂ ನಂಟು.
ಈ ಅನಿವಾಸಿತನಕ್ಕೂ ಈ ಕಾಫಿ ಫಿಲ್ಟರ್-ಹತ್ತಿ ಕಡ್ಡಿಯ ಅವಿನಾಭಾವ ಸಂಬಂಧದ ಬಗ್ಗೆ ಬರೆಯೋದಕ್ಕೂ ಒಂದು ಕಾರಣವಿದೆ. ಸಂಪನ್ಮೂಲಗಳು ಕಡಿಮೆ ಇದ್ದು ಅವು ಹೆಚ್ಚು-ಹೆಚ್ಚು ಮಟ್ಟದಲ್ಲಿ ಸಿಗದ ಅಥವಾ ಅಭಾವದ ಪರಿಸ್ಥಿತಿ ಒಂದು ಕಡೆ, ಆದರೆ ಇಲ್ಲಿ ಹಣವೊಂದಿದ್ದರೆ ಸಾಕು ಬೇಕಾದಷ್ಟು ಸಿಗುವುದು ಮತ್ತೊಂದು ಕಡೆ. ಚಿಕ್ಕ ಸೈಜಿನ ಕಾಫಿ ಲೋಟಾಗಳಿಂದ ಹಿಡಿದು ಕಿವಿಗೆ ಹಾಕುವ ಹತ್ತಿಯ ಬಳಕೆಯ ಪ್ರಮಾಣ ಕಡಿಮೆಯಿತ್ತು, ಆದರೆ ಇಲ್ಲಿ ಎಲ್ಲವೂ ಲಾರ್ಜ್ ಸೈಜು. ಒಂದೋ ಎರಡೋ ಎಕರೆ ಗದ್ದೆ-ಭೂಮಿ ಪ್ರಮಾಣ ನನ್ನಂಥವರ ಮಧ್ಯಮ ವರ್ಗದವರಿಗೆ ದೊಡ್ಡವಾಗಿದ್ದವು, ಆದರೆ ಇಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಎರಡು-ಮೂರು ಸಾವಿರ ಎಕರೆಗಳ ಒಡೆಯರು. ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ನನ್ನ ಸಹೋದ್ಯೋಗಿ ಇತ್ತೀಚೆಗೆ ಇಪ್ಪತ್ತು ಎಕರೆಗಳನ್ನು ತನ್ನ ಸ್ವಂತ ಊರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಲ್ಲ. ನಮ್ಮ ಕಾರುಗಳ ಇಂಜಿನ್ ದೊಡ್ಡವು. ನಿನ್ನೆ ಗಾರ್‌ಫೀಲ್ಡ್ ಪರಿಚಿಯಿಸಿದ ಸಾಧಾರಣ ಗಾತ್ರದ ಅವನ ಮೋಟಾರ್ ಸೈಕಲ್ ಇಂಜಿನ್ ೧೫೦೦ ಸಿ.ಸಿ. (1500 cc), ಭಾರತದಲ್ಲಿ ಎಷ್ಟೋ ಕಾರುಗಳ ಇಂಜಿನ್ ಇದಕ್ಕಿಂತ ಚಿಕ್ಕವು. ದೊಡ್ಡ ರಸ್ತೆಗಳು. ದೊಡ್ಡ ದೇಶ - ಎಲ್ಲವೂ ದೊಡ್ಡದೇ.
ಆದರೆ ಈ ಮಹಾನ್ ಗಾತ್ರ ಹಾಗೂ ಮಹಾನ್ ಸಂಸ್ಕೃತಿಗೆ ನಮ್ಮ ಚಿಕ್ಕ ಅಥವಾ ಮೀಡಿಯಮ್ ಸೈಜಿನ ಮನಸ್ಸುಗಳಾಗಲೀ, ಆಚಾರ-ವಿಚಾರಗಳಾಗಲಿ ದಿಢೀರನೆ ಹೇಗೆ ಹೊಂದಿಕೊಂಡಾವು. ಇವತ್ತೋ ನಿನ್ನೆಯೋ ಭಾರತದಿಂದ ಬಂದವರಿಗೆ ಒಂದು ಲಾರ್ಜ್ ಸ್ಟಾರ್‌ಬಕ್ಸ್ ಕಾಫಿ ಕೊಟ್ಟು ನೋಡಿ, ಅದನ್ನು ಅವರು ಪೂರ್ತಿ ಮುಗಿಸುತ್ತಾರೆಯೇ ಎಂದು. ಈ ಚಿಕ್ಕ-ದೊಡ್ಡ ವಿಚಾರಗಳು ಮೊದಲಿನಿಂದ ಕೊನೆಯವರೆಗೆ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ ಎನ್ನೋದು ಈ ಹೊತ್ತಿನ ನನ್ನ ತತ್ವ.
ಇಂದು ಖರೀದಿಸಿ ಆದಷ್ಟು ಬೇಗನೇ ಬಳಸಿ ಮತ್ತೆ ಹೊಸತನ್ನು ಖರೀದಿಸುವುದು ಒಂದು ವಿಧ, ನಮ್ಮಲ್ಲಿ ಉಗ್ರಾಣಗಳಿವೆ ಎಂದು ಬೇಕಾದ್ದನ್ನೆಲ್ಲ ಹೋಲ್‌ಸೇಲ್ ದರದಲ್ಲಿ ಕೊಂಡು ಹಲವು ವರ್ಷಗಳ ವರೆಗೆ ಅನುಭವಿಸುವುದು ಮತ್ತೊಂದು ವಿಧ. ಪ್ರೆಸೆಂಟ್ ವ್ಯಾಲ್ಯೂ ಫ್ಯೂಚರ್ ವ್ಯಾಲ್ಯೂನಿಂದಾನಾದರೂ ಲೆಕ್ಕ ಹಾಕಿ, ಬೇಕಾಗಿದ್ದು ಸಾಕಾದಷ್ಟು ಇರಲಿ ಎಂದಾದರೂ ಸಮಜಾಯಿಸಿ ಕೊಟ್ಟುಕೊಳ್ಳಿ.
ಅವೇ ಲಾರ್ಜ್ ಕಾಫಿಗಳನ್ನು ಬಿಕರಿ ಮಾಡುವ ಪೇಪರ್ ಫಿಲ್ಟರುಗಳು, ಸಾವಿರಗಟ್ಟಲೆ ಸಿಗುವ ಕಿವಿಗೆ ಹಾಕುವ ಹತ್ತಿ ಕಡ್ಡಿಗಳು ಅಗಾಧ ಪ್ರಮಾಣದಲ್ಲಿ ಸಿಗುವ ಇವುಗಳನ್ನು ನಿಯಂತ್ರಣಕ್ಕೆ ತಂದುಕೊಂಡು ದಿನ-ವಾರ-ವರ್ಷಗಳನ್ನು ದೂಡುವ ಅನಿವಾಸಿ ಬದುಕು. ಇವುಗಳ ಮುಂದೆ ಹರಿದು ಹೋಗುವವರೆಗೆ ಉಪಯೋಗಕ್ಕೆ ಬರುವ ನಮ್ಮ ಅಲ್ಯುಮಿನಮ್ ಅಥವಾ ಪ್ಲಾಸ್ಟಿಕ್ ಜಾಲರಿ ಇರುವ ಫಿಲ್ಟರುಗಳು ಹಳೆಯವಾಗುತ್ತವೆ, ಅಮೇರಿಕದ ಮಿಸ್ಟರ್ ಕಾಫಿ ಇಳಿಸಲು ಭಾರತದ ಫಿಲ್ಟರ್ ಕೆಲಸ ಮಾಡದಾಗುತ್ತದೆ. ಇಲ್ಲಿನ ಹೆಚ್ಚು ಧೂಳಿಲ್ಲದ ಏರ್ ಕಂಡೀಷನ್ನ್ ವಾತಾವರಣದಲ್ಲಿ ಬೆಳೆಯುತ್ತಿದ್ದರೂ ಕಿವಿಯಲ್ಲಿ ಸೇರಿದ ಕೊಳೆ ತೆಗೆಯಲು ಸಾವಿರ ಸಂಖ್ಯೆಯಲ್ಲಿ ಸಿಗುವ ಕಡ್ಡಿ ಸರದಾರರು ನೆರವಿಗೆ ಬರುತ್ತಾರೆ, ಹಿಂದೆ ಹಗಲೂ-ರಾತ್ರಿ ಧೂಳಿನಲ್ಲೇ ಜೀವನ ಸಾಗಿಸಿ ಬಂದು ಯಾವತ್ತೋ ಕಿವಿಯ ಕೊಳೆಯನ್ನು ತೆಗೆದಿದ್ದು ಗೌಣವಾಗುತ್ತದೆ.