ನಮ್ ಆಫೀಸಿನಲ್ಲಿ ಒಬ್ರು ಇತ್ತೀಚೆಗೆ ಹೊಸ್ತಾಗಿ ಪರಿಚಯವಾದ ಕನ್ನಡಿಗರು, ಈಗಾಗ್ಲೇ ನಮ್ಮ್ ಮಾತುಕಥೆಗಳು ಎರಡೂ ಮೂರನೇ ಭೇಟಿಯಲ್ಲಿ ಬೆಳೆಯುತ್ತಿದ್ದವುಗಳಾಗಿದ್ದರಿಂದ ಅವೇ ಕನ್ನಡಿಗರ ಸಂಕೋಚಭರಿತ ’ನಮಸ್ಕಾರ, ಚೆನ್ನಾಗಿದೀರಾ!’ ಅನ್ನೋ ಹಲ್ಲು ಗಿಂಜೋ ಪದಪುಂಜಗಳಿಂದ ಸ್ವಲ್ಪ ದೂರವಾಗಿತ್ತು ಅಂತ್ಲೇ ಹೇಳ್ಬೇಕು. ’ಏನ್ಸಾರ್ ಮತ್ತೆ ಇತ್ತೀಚೆಗೆ ಏನ್ ಓದ್ತಾ ಇದ್ದೀರಾ?’ ಎನ್ನೋ ನನ್ನ ಹುಂಬ ಪ್ರಶ್ನೆಗೆ ಅವರು ’ಏನೂ ಇಲ್ಲ, ಈ ಬ್ಲ್ಯಾಕ್‌ಬೆರ್ರಿಯಲ್ಲಿ ಬರೋವನ್ನು ಜೋಕ್‌ಗಳನ್ನ ಬಿಟ್ರೆ ಮತ್ತೇನನ್ನೂ ಓದೋದೇ ಇಲ್ಲ!’ ಎಂದು ಬಿಡಬೇಕೆ.
ಶುರುವಾಯ್ತು ತಗಳಪ್ಪ, ಅದೇ ತಾನೇ ಬೆಚ್ಚಗೆ ಕಾಫಿ ಕುಡಿದಿದ್ನಾ ಎಲ್ಲಾ ಹೊರಕ್ಕ್ ಬಂತ್ ನೋಡಿ...ಕ್ಷಮಿಸಿ ಅವ್ರಿಗೇನೂ ಬೈದಿಲ್ಲಪ್ಪ ನಾನು - ನಮ್ಮ ಕನ್ನಡಿಗರ ಜಾಯಮಾನದಂತೆ ನಕ್ಕು ಸುಮ್ಮನಾಗ್ಬಿಟ್ಟೆ.
***
ಈ ವೇಗಮಯ ಜೀವನದಲ್ಲಿ ಎಲ್ಲವೂ ಕಿರುತೆರೆಗಳಿಗೆ ಮಾತ್ರ ಸೀಮಿತವಾಗೋ ಹಾಗೆ ಕಾಣ್ತಿದೆ. ದೊಡ್ಡ ಸಿನಿಮಾ ಪರದೆ ಚಿಕ್ಕ ಟಿವಿಗೆ ಮೀಸಲಾಗೋಯ್ತು, ಈಗ ಅದರಿಂದ ಸಣ್ಣ ಮೊಬೈಲ್ ಫೋನಿನ ಮಟ್ಟಿಗೆ ಇಳಿದು ಹೋಯ್ತು. ಸೋ, ಚಿಕ್ಕದಾಗಿರದೇ ಇರೋದು ಬ್ಯಾಡವೇ ಬ್ಯಾಡಾ...ಅನ್ನೋದು ಈ ಕಾಲದ ಘೋಷಣೆ.
ಯಕ್ಷಗಾನ ಅನ್ನೋದ್ ಯಾಕೆ ಬೇಕು ಹಾಗಾದ್ರೆ? ಒಂದೇ ಒಂದು ಕ್ಷಣದಲ್ಲಿ ಪಾತಾಳ, ಭೂಲೋಕ, ಮತ್ಸ್ಯಲೋಕ, ಯಮಲೋಕ, ಸರ್ಪಲೋಕಗಳನ್ನೆಲ್ಲವನ್ನು ಯಶಸ್ವಿಯಾಗಿ ಕಲ್ಪಿಸಿಕೊಳ್ಳುವ ವೇದಿಕೆ ಇರೋವಾಗ. ಒಂದು ರಾಗ-ತಾಳದ ಹಿಮ್ಮೇಳದ ಹಾಡಿನಿಂದ ಮತ್ತೊಂದಕ್ಕೆ ಡೈನಾಮಿಕ್ ಆಗಿ ಬದಲಾವಣೆ ಇರೋವಾಗ. ಹಿಮ್ಮೇಳಕ್ಕೆ ತಕ್ಕಂತೆ ಅದೇ ಕಾಲಕ್ಕೆ ಸಂದರ್ಭವನ್ನು ಶುದ್ಧ ಕನ್ನಡ-ಸಂಸ್ಕೃತದಲ್ಲಿ ಅರ್ಥೈಸುವ ಅಭಿವ್ಯಕ್ತಿ ಇರೋವಾಗ. ಗಾನ-ನಾಟ್ಯ-ಸರ್ವ ರಸಗಳೂ ಒಂದೇ ಒಂದು ರಂಗದಲ್ಲಿ ಮೇಳೈಸುವಾಗ.
ಎಲ್ರೂ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತಾ ಇದ್ರೆ ಸಾಕಲ್ವ - ಅವೇ ಟೇಕು ರೀಟೇಕುಗಳು ಸ್ಪೆಷಲ್ ಎಫೆಕ್ಟ್‌ಗಳೆಲ್ಲ ಇರೋವಾಗ ಅದರ ಮುಂದೆ ಬಯಲು ಸೀಮೆಯಲ್ಲಿನ ನಾಟಕ ಯಾವ ಮೂಲೆಯ ಲೆಕ್ಕ. ಎಂಟು ಡಾಲರ್ ಕೊಟ್ಟು ಒಂದೂವರೆ ಘಂಟೇಲಿ ಹಾಲಿವುಡ್ಡು ಸಿನಿಮಾಗಳು ನೋಡೋಕ್ ಸಿಗೋವಾಗ ಈ ನ್ಯೂ ಯಾರ್ಕಿನ ಬ್ರಾಡ್ ವೇ ಶೋಗಳಿಗೆ ನೂರು ಡಾಲರ್ ಯಾವನ್ನ್ ಹೋಗ್ತಾನೆ ಹೇಳಿ? ಸಿನಿಮಾದಲ್ಲಿರೋ ಮತ್ತು-ಗಮ್ಮತ್ತು ಈ ಪ್ಲೇನ್ ನಾಟಕ-ಮ್ಯೂಸಿಕಲ್ಲುಗಳಲ್ಲಿರುತ್ತೇ ಅಂತ ಅಂದೋರ್ ಯಾರು?
***
ರಾಮಾಯ್ಣ ಅಂದ್ರೆ ಸುಮ್ನೇ ಹೀಗ್ ಬರೆದ್ರೆ ಸಾಕಲ್ಪ:
ರಾಮಾ ಅನ್ನೋ ರಾಜಕುಮಾರ ಮೀನ್ ಮೈಂಡೆಡ್ ಮಂಥರೆ ಹಾಗೋ ಸ್ಟೆಪ್ ಮದರ್ ಕೈಕೆಯಿ ಮಾಡಿರೋ ಕರಾಮತ್ತಿನಿಂದಾಗಿ ತನ್ನ ಹೆಂಡ್ತಿ ಜೊತೆ ಕಾಡ್ ಸೇರ್ತಾನಂತೆ. ಆ ಹದಿನಾಲ್ಕು ವರ್ಷದ ವನವಾಸ್‌ದಲ್ಲಿ ಸುಂದರವಾದ ಹೆಂಡ್ತೀನ ಶ್ರೀಲಂಕಾದ ಒಬ್ಬ ರಾಕ್ಷಸ ಅಪಹರಿಸ್ತಾನಂತೆ. ರಾಮಾ ಮತ್ತ್ ಅವನ ತಮ್ಮ ಜೊತೆಗೆ ಕಾಡಲ್ಲೇ ಸಿಗೋ ಕಪಿ ಸೈನ್ಯದ ಸಹಾಯದಿಂದ ಲಂಕೆಗೆ ಹೋಗಿ ಆ ರಾಕ್ಷಸನನ್ನು ಕೊಂದು ಸತ್ಯಾ-ಧರ್ಮಕ್ಕೆ ಇವತ್ತೂ ಕಾಲಾ ಇದೇ ಅಂತ ಸಾಧಿಸಿ ತೋರಿಸ್ತಾರಂತೆ. ಹಂಗೇ ಹೆಣ್ತೀನೂ ಕರಕಂಡ್ ಬರ್ತಾನಂತೆ, ಆದ್ರೆ ಅವಳು ಯಾರೋ ಏನೋ ಅಂದ್ರೂ ಅಂತ ಬೆಂಕಿ ಹಾರಿ ಬೀಳ್ತಾಳಂತೆ!
ಪಾಪ ಯಾಕ್ ಆ ಕುವೆಂಪು ರಾಮಕೃಷ್ಣಾಶ್ರಮದಲ್ಲಿ ಕುತಗೊಂಡು ರಾಮಾಯಣ ದರ್ಶನಂ ಬರೀಬೇಕಿತ್ತು. ಅದೂ ಸಾಲ್ದೂ ಅಂತ ವೀರಪ್ಪ ಮೊಯಿಲಿ ಯಾಕೆ ತಮ್ಮದೇ ಆದ ಒಂದು ವರ್ಷನ್ನನ್ನ ಕುಟ್ಟಬೇಕಿತ್ತು. ಒಂದೇ ರಾಮಾಯ್ಣ ಅದನ್ನ ಹೇಳೋಕ್ ಹತ್ತಾರ್ ಭಾಷೇನಾದ್ರೂ ಯಾಕ್ ಬೇಕು, ಎಲ್ಲಾನು ಇಂಗ್ಲೀಷಿಗೆ ಟ್ರಾನ್ಸ್ಲೇಟ್ ಮಾಡಿದ್ರೆ ಆಯ್ತು, ನಾವೆಲ್ಲ ಇಂಗ್ಲೀಷ್ನಲ್ಲೇ ಓದ್‌ಕಂತೀವಲ್ಲ ಅಷ್ಟೇ ಸಾಕು. ಆ ನಾರಾಯಣಪ್ಪ ಯಾಕೆ ಕುಮಾರವ್ಯಾಸ ಭಾರತ ಬರೆದ, ಅದೂ ಸಾಲ್ದೂ ಅಂತ ಭೈರಪ್ಪನೋರು ಯಾಕೆ ತಮ್ಮ ಪರ್ವ ಕೊರೆದ್ರು? ಆ ಕಾರಂತ್ರು ನಲವತ್ತರ ಮೇಲೆ ಕಾದಂಬ್ರಿ ಬರೆದ್ರಂತೆಲ್ಲ ಅದ್ರಿಂದ ಏನಾಯ್ತು? ಅದ್ರ ಬದ್ಲಿ ಒಂದಿಷ್ಟು ಹಾಸ್ಯವಾಗಿ ಮಾತಾಡಿದ್ರೆ ಸಾಲ್ತಿತಿರ್ಲಿಲ್ವಾ?
ಯಾರೂ ಓದದ ಕೇಳದ ಕಂದಪದ್ಯಗಳು ಬೇಡವೇ ಬೇಡ. ರಗಳೆಗಳ ರಗಳೆ ಹಾಗೇ ಇರಲಿ. ಚಂಪೂ ಕಾವ್ಯ ಅಂತಂದ್ರೆ ಏನು, ಚಂದ್ರಶೇಖರ ಪಾಟೀಲರ ಹೊಸ ಕಾವ್ಯ ನಾಮಾನಾ? ಷಟ್ಪದಿ-ಗಿಟ್ಪದಿ ಅಷ್ಟೇ ಅಲ್ಲಲ್ಲೇ ಇರ್ಲಿ - ವೀರರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ ತಾತಂಗರ್ಘ್ಯವನು ಕೊಡುತ - ಅಂತ ಮತ್ತಿನ್ನೆಲಾದ್ರೂ ಭಾಮಿನಿನಲ್ಲಿ ಹಾಡಿ ಬಿಟ್ಟೀರ. ದೊಡ್ಡ ನಾವೆಲ್ಲುಗಳನ್ನೆಲ್ಲ ಈ ಸರ್ತಿ ಛಳಿಗಾಲಕ್ಕೆ ಸುಟ್ಟು ಮೈ ಬೆಚ್ಚಗೆ ಮಾಡಿಕೊಳ್ಳೋಣ. ನಮ್ಮ ಸುತ್ತ ಮುತ್ಲ ಇರೋ ಲೈಬ್ರರಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಆನ್‌ಲೈನ್‌ಗೆ ಹಾಕಿ ನಾವು ಓದ್ತೀವಿ. ಸೋಬಾನೇ ಪದ, ಸೋ ವಾಟ್? ಜನಪದ ಗೀತೆ ಹಳ್ಳಿಯೋರ್ ಗಾಥೆ ನಮಗಲ್ಲಪ್ಪ. ’ಹೊನ್ನ ಗಿಂಡಿಯ ಹಿಡಿದು ಕೈಯಲಿ...’ ಅಂದ್ರೆ ಏನ್ರಿ, ಈ ಮದ್ರಾಸಲ್ಲಿ ಗಿಂಡಿ ಇದೆಯಲ್ಲ ಅದಾ? ಆ ಡಿವಿ ಗುಂಡಪ್ಪೋರಿಗೆ ತಲೆ ನೆಟ್ಟಗಿತ್ತೋ ಇಲ್ವೋ ಅಷ್ಟೊಂದು ಬರೆಯೋದಾ? ಲೈಫು ಅಂದ್ರೆ ಸಿಂಪಲ್ಲು ಗೊತ್ತಿರಲಿಲ್ಲ ಅವ್ರಿಗೆ? ಪ್ರತಿಯೊಂದಕ್ಕೂ ಮಂಕುತಿಮ್ಮ ಅಂತ ಬರಕೊಂಡೋರ್ ಬೇರೆ, ಮಂಕುದಿಣ್ಣೇ ಅಂತ ಬರೀಲಿಲ್ಯಾಕೆ? ವಚನಾ - ಯಾರಿಗ್ ಯಾರ್ ಕೊಡೋ ಭಾಷೇ ಅದೂ?
ರೀ, ನಾಟ್ಕ ಯಾವನ್ರೀ ಬರೀತಾನೆ ಮತ್ತೆ ಅದನ್ನ ಓದೋರ್ ಯಾರು? ಸುಮ್ನೇ ಯಾವ್ದಾದ್ರೂ ಬ್ಲಾಗ್‌ನಲ್ಲೋ ಪೋರ್ಟಲಿನಲ್ಲೋ ಹಾಸ್ಯಮಯವಾಗಿ ಬರೀರಿ ಒಂದಿಷ್ಟ್ ಜನಾನಾದ್ರೂ ಓದ್ತಾರೆ. ಬಟ್, ನಿಮ್ ಬರಹ ಕೇವ್ಲ ಮುನ್ನೂರು ಪದಗಳಿಗೆ ಮಾತ್ರ ಇರ್ಲಿ, ಒಂದೊಂದು ಸಾಲೂ ಅದ್ರದ್ದೇ ಆದ ಪ್ಯಾರಾವಾಗಿರ್ಲಿ. ’ಅಂತಃಕರಣ’, ’ಅಶ್ಲೀಲ’ ಅನ್ನೋಪದಳನ್ನೇನಾದ್ರೂ ಉಪಯೋಗಿಸಿ ಬಿಟ್ಟೀರಾ ಮತ್ತೆ. ಈ ಪೋರ್ಟಲುಗಳ ಕ್ಲೈಂಟೆಲ್ಲುಗಳಿಗೆ ಗಂಟಲು ಕಟ್ಟಿಬಿಡುತ್ತೆ ಹುಷಾರು. ಮತ್ತೇ...ನಿಮ್ಮ್ ಟೈಟಲ್ಲು ಜನಪ್ರಿಯವಾಗಿರ್ಲಿ, ಯಾವ್ದಾದ್ರೂ ಹಾಡಿನ ಪಂಕ್ತಿ, ಅಲ್ಲ ಸಾಲಿದ್ರೆ ಒಳ್ಳೇದು - ’ಅನಿಸುತಿದೆ ಯಾಕೋ ಇಂದು...ಹೀಗೇ ಸುಮ್ಮನೇ’ ಅಂತ ಹಾಕಿ, ಅದು ಪ್ಯಾಪುಲ್ಲರ್ರು. ಈ ಸಾಲನ್ನು ಬರೆದ ಕವಿ ಅಂತ ಜನ ಕಾಯ್ಕಿಣಿಯವ್ರನ್ನ ಕೊಂಡಾಡೋದನ್ನ ನೋಡಿಲ್ಲ ನೀವು?
ಉತ್ತರ ಕರ್ನಾಟಕದ ಬಾಷೆ-ಮಾತು ಅದೊಂದ್ ಭಾಷೇನೇನ್ರಿ? ಏನ್ ಹೇಳೋದಿದ್ರೂ ಬೆಂಗ್ಳೂರ್ ಕನ್ನಡದಲ್ಲಿ ಹೇಳಿ. ’ನೀ ಹೀಂಗs ನೋಡಬ್ಯಾಡಾ ನನ್ನ’ ಅಂದ್ರೆ ಅದು ಕನ್ನಡಾನಾ? ಬೀದರ್-ಬೆಳಗಾವಿ ಎಲ್ಲಿವೆ? ಅಲ್ಲಿ ಯಾವ್ ಭಾಷೇ ಮಾತಾಡ್ತಾರೆ, ಜೈ ಸಿದನಾಯ್ಕ-ಮಾವೋತ್ಸೇ ತುಂಗಾ ಅಂತಾ ಕಂಬಾರರು ಅದೇನೇನೋ ಬರೆದಾರಂತಲ್ಲ?
***
ನಾವೇನೂ ಓದೋದಿಲ್ಲ ಅನ್ನೋದು ನಮ್ ಫ್ಯಾಷನ್ನ್ ಸಾರ್. ನಮ್ಮ ಸರ್ವತೋಮುಖ ಬೆಳವಣಿಗೆಗೆ ನಮ್ ನಮ್ ಮೊಬೈಲು-ಕಂಪ್ಯೂಟರ್ ಸ್ಕ್ರೀನ್‌ಗಳೇ ಸಾಕು ಸಾರ್. ಎರಡೇ ಎರಡು ಸಾಲಲ್ಲಿ ಹೇಳದ ಕಥೆ ಅದೂ ಕಥೇನಾ? ಎಸ್ಸೆಮೆಸ್ಸ್ ಮೆಸ್ಸೇಜುಗಳನ್ನು ಬಿಟ್ಟು ಇರೋವೆಲ್ಲಾ ಜೋಕಾ? ಸಂತಾ ಸಿಂಗ್, ಬಂತಾ ಸಿಂಗ್, ಕೋಲ್ಯಾ, ಸರ್ದಾರ್ ಜೀಗಳ ಅಜ್ಜ-ಮುತ್ತಾತರೆಲ್ಲ ಬಾವಿಯಲ್ಲಿ ಬಿದ್ದಿರೋ ಮಂದೀ ಗಡಿಯಾರಕ್ಕೆ ಕೀಲಿ ಕೊಡ್ತಾನೇ ಇದಾರ್ ಸಾರ್. ಅಲ್ಲಿಂದ ಕದ್ದು ಇಲ್ಲಿ, ಇಲ್ಲಿಂದ ತಂದು ಅಲ್ಲಿ ತುಂಬಿಸೋ ಫಾರ್ವಡ್ ಮಾಡಿರೋ ಸ್ಪ್ಯಾಮ್ ಸಂದೇಶಗಳೇ ಈ ಶತಮಾನದ ಅಂತಃಸತ್ವಾ ಸಾರ್...ಓಹ್ ಕ್ಷಮಿಸಿ, ಅಂತಃಸತ್ವಾ ಅಂದ್ರೆ ಏನು ಅಂತ ಯಾರಿಗ್ಗ್ ಗೊತ್ತು?
ನನ್ನದೊಂದು ಹೊಸಾ ಕವ್ನ ಬರ್ದಿದೀನಿ ಕೆಳಗೆ ನೋಡಿ: (ಪದಗಳ ಕೆಳಗೆ ಪದಗಳು ಬಂದ್ರೆ ಪದ್ಯಾ ಅಲ್ವಾ? ಪದ್ಯಾ-ಗದ್ಯಾ ಎಲ್ಲಾ ಒಂದೇ ಬಿಡಿ)
ಅಮೇರಿಕದಲ್ಲಿ ಇದೀವಿ ಕನ್ನಡ ಸಿನಿಮಾ ನೋಡಲ್ಲ
ಅಮೇರಿಕದಲ್ಲಿ ಇದೀವಿ ಕನ್ನಡ ಕಾನ್ಸರ್ಟ್ ಬ್ಯಾಡವೇ ಬ್ಯಾಡ.
ಕನ್ನಡ ಸಿಡಿ ಮಾರೋರ್ ಇದ್ರೆ ಅವರಿಂದ್ಯಾಕೆ ಕೊಳ್ಬೇಕು?
ಕನ್ನಡ ಪುಸ್ತಕ ಅನ್ನೋ ವಸ್ತೂನ ಕೊಂಡ್ ಕೊಂಡ್ ಯಾಕೆ ಓದ್ಬೇಕು?
ನಾವ್ ಇತ್ಲಾಗ್ ಕನ್ನಡ ಪ್ರೊಗ್ರಾಮ್ ನೋಡಲ್ಲ, ಇಂಗ್ಲೀಷ್ ಕಾನ್ಸರ್ಟ್ ತಿಳಿಯಲ್ಲ.
ಹಗ್ಲೂ ರಾತ್ರೀ ದುಡ್ದೂ ದುಡ್ದೂ, ಸ್ಟ್ರೆಸ್ಸಿನಿಂದ ಸೊರಗಿರೋ ಭುಜಕ್ಕೆ ಅಮೃತಾಂಜನ್ ಸ್ಟ್ರಾಂಗ್ ಲೇಪಿಸ್ಕೊಂಡು,
ನಲವತ್ತ್ ಆಗೋಕ್ಕಿಂತ ಮುಂಚೆ ಚಾಳೀಸ್ ತಗಲಾಡಿಸ್ಕೊಂಡ್
ನರನಾಡಿಗಳಲ್ಲೆಲ್ಲ ಕೊಬ್ಬು-ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡು
ನಮ್ಮೂರಿನ ದನಕಾಯೋ ಕೆಲಸ ಮಾಡೋರಿಗಿಂತ
ಐದೇ ಐದು ವರ್ಷ ಹೆಚ್ಗೆ ಬದುಕೋ ಬವಣೇನಾದ್ರೂ ಯಾತಕ್ಕೆ?
ಹೆಂಗಿದೆ? ನಿಮ್ಮ್ ಕಾಮೆಂಟ್ ಹಾಕಿ, ಸಕತ್ತಾಗಿದೆ ಕವ್ನಾ ಅಂತ ಬರೀರಿ. ನಿಮಿಗೆ ನಾನ್ ಕಾಮೆಂಟ್ ಹಾಕ್ತೀನಿ, ನನಿಗೆ ನೀವ್ ಹಾಕಿ. ಅದೇ ಸಂಬಂಧ ಹಂಗೇ ಬೆಳೀಲಿ. ನಾನು ಬರ್ದಾಗ್ಲೆಲ್ಲ ನೀವ್ ಬ್ಯಾಡಾ ಅಂದ್ರೂ ತಿಳಸ್ತೀನಿ - ಓದಿ, ಕಾಮೆಂಟ್ ಹಾಕಿ, ನಾನು ಅಷ್ಟೇ - ನಮ್ ಬಳಗಾ ಹಿಂಗೇ ಬೆಳೀಲಿ - ನಾಳೆ ನಮಗೆಲ್ಲರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ. ಒಂದ್ ಸ್ಟೇಜ್ ಮೇಲೆ ಅದೆಷ್ಟು ಜನಗಳಿಗೆ ನಿಲ್ಲೋಕ್ ಆಗುತ್ತೋ ಅವರಿಗೆಲ್ಲ ಪ್ರಶಸ್ತಿ ಸಿಗುತ್ತೆ. ಜಿಲ್ಲೆಗೊಂದೊಂದು, ಜಾತಿಗೊಂದೊಂದು, ಭೀತಿಗೊಂದೊಂದು, ಸರ್ಕಾರದ ಮಿನಿಷ್ಟ್ರುಗಳ ಶಿಫಾರಸ್ಸಿಗೊಂದೊಂದು. ನಾನು ಬರೆದಿದ್ದನ್ನೆಲ್ಲ ಬುಕ್ ಮಾಡಿಸ್ತೀನಿ. ಅದ್ರ ಬಿಡುಗಡೆಗೆ ನಿಮ್ಮನ್ನ್ ಕರ್ದು ಊಟ ಹಾಕಿಸ್ತೀನಿ. ನನ್ನ ಬುಕ್ಕ್ ಕೊಂಡು ಒಂದೈದು-ಹತ್ತು ಡಾಲರ್ ಕಳ್ಸಿ! ಯಾವ್ ಶಿವರಾಮ ಕಾರಂತ್ರೂ-ಬೈರಪ್ಪಾ-ಬೇಂದ್ರೆ ಮಾಡ್ದೇ ಇರೋ ರೆಕಾರ್ಡ್ ನನ್ನ ಪುಸ್ತಕಗಳು ಮಾಡಿವೆ, ಗೊತ್ತಿಲ್ಲಾ ನಿಮಗೇ - ನಾನೇ ಬೆಶ್ಟ್ ಸೆಲ್ಲರ್ರು.
***
ನಿಮ್ಮ್ ಮಕ್ಳು, ಅಲ್ಲ ಮಕ್ಳುಗಳು, ಕನ್ನಡದಲ್ಲೇ ಮಾತಾಡ್ತಾವಾ? ಎಲ್ರೂ ಅತ್ತಂಗೇ ಅಳ್ತಾವಾ ಅಥವಾ ಅದಕ್ಕೂ ಎಸ್ಸೆಮ್ಮೆಸ್ಸ್ ವರ್ಷನ್ನ್ ಬಂದಿದೆಯಾ? ಕನ್ನಡ ಮಾಧ್ಯಮವೇ ಬ್ಯಾಡ ಅಂತ ಕೋರ್ಟುಗಳೇ ತೀರ್ಪು ಕೊಟ್ವಂತೆ? ಪ್ರಪಂಚದ ಸಾವ್ರಾರು ಭಾಷೆ ಫೈಲುಗಳನ್ನೆಲ್ಲ ಡಿಲ್ಲೀಟ್ ಮಾಡಿ ಬಿಡಿ, ಇಂಗ್ಲೀಷ್ ಒಂದೇ ಸಾಕು. ಇನ್ನೂ ಈಗ್ತಾನೆ ಕಣ್ಣ್ ಬಿಟ್ಟು ನೋಡ್ತಾ ಇರೋ ಹುಡುಗ್ರಿಗೆ ಲೋಕಲ್ ಸಿಲಬಸ್ ಬ್ಯಾಡಾ, ಸಿಬಿಎಸ್ಸಿ-ಐಸಿಎಸ್ಸಿ ಕೊಡ್ಸಿ. ದೊಡ್ಡ ಸ್ಕೂಲಲ್ಲಿ ಓದ್ಸಿ ದೊಡ್ಡ ಮನ್ಷರಾಗ್ತಾರೆ. ಪಬ್ಲಿಕ್ ಸ್ಕೂಲ್ ಅಂತ ಹೆಸ್ರು ಇಟಗೊಂಡಿರೋ ಪ್ರೈವೇಟ್ ಸ್ಕೂಲ್‌ಗಳೇ ಚೆಂದ. ವರ್ಷವಿಡೀ ಇರೋ ಉರಿಬಿಸ್ಲಲ್ಲೂ ಮಕ್ಳು ಟೈ ಕಟ್ಲಿ, ಎಷ್ಟ್ ಚೆಂದ ಕಾಣ್ತಾರ್ ಗೊತ್ತಾ? ಅಮ್ಮ-ಅಪ್ಪ ಅನ್ನೋಕ್ ಮುಂಚೆ ಮಮ್ಮೀ-ಡ್ಯಾಡೀ ಅನ್ಲೀ ಆಗ್ಲೇ ನಮಗೊಂದ್ ಘನತೆ. ಅಯ್ಯೋ ಎಲ್ಲಾದ್ರೂ ಮಕ್ಳು ಓಡಾಡೋದು ಉಂಟೇ, ಕೈ ಕಾಲ್ ಸವದು-ಗಿವದು ಹೋದ್ರೆ ಕಷ್ಟಾ - ಹೋಗ್ ಕಾರಲ್ಲ್ ಬಿಟ್ಟ್ ಬನ್ನಿ, ಏನು?
ತಪ್ಪ್ ಮಾಡ್ದೇ ಸಾರ್ ನಾನು, ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಹುಟ್ಟಬೇಕಿತ್ತು. ನಮ್ಮ್ ಜನರೇಷನ್ನಲ್ಲಿರೋಷ್ಟು ಟೆನ್ಷನ್ನ್ ಎಲ್ಲಿದೆ ಹೇಳಿ...ನಾವೇ ದೊಡ್ಡೋರು, ನಾವೇ ಸರ್ವಸ್ವ, ನಮ್ಮದೇ ದೊಡ್ದು, ಗೊತ್ತಾಯ್ತಾ?
(Take it easy now)