Thursday, January 01, 2009

ಹೊಸತು ಹಳೆಯದರ ನಡುವೆ

2008 ಅನ್ನೋದು ಈಗ ಇತಿಹಾಸ, ಇಷ್ಟೊತ್ತಿಗಾಗಲೇ ವಿಶ್ವದೆಲ್ಲಾಕಡೆ ಗಡಿಯಾರಗಳು ೨೦೦೯ ನ್ನು ತೋರಿಸ್ತಿರೋ ಹೊತ್ತಿನಲ್ಲಿ ಒಬ್ಬರೊನ್ನೊಬ್ಬರು ಕರೆ ಮಾಡಿ ’ಹೊಸ ವರ್ಷದ ಹಾರ್ಧಿಕ ಶುಭಾಶಯಗಳು’ ಎಂದು ವಿಶ್ ಮಾಡೋದು ನಿಂತು ಹೋಗಿರಬಹುದು. ಈ ಹಿಂದೆ ಹಲವಾರು ಸಾರಿ ಬರೆದ ಹಾಗೆ ನಾವು ನಮ್ಮನ್ನು ಇಂಗ್ಲೀಷ್ ಕ್ಯಾಲೆಂಡರಿಗೆ ಸಮರ್ಪಿಸಿಕೊಂಡಿದ್ದೇವೆ. ನಮ್ಮ ಮಾರ್ಚ್-ಏಪ್ರಿಲ್ ತಿಂಗಳ ನಡುವೆ ಎಲ್ಲೋ ಬರುವ ಚಂದ್ರಮಾನ ಯುಗಾದಿ, ಚೈತ್ರ ಮಾಸ ವಸಂತ ಋತು ಉತ್ತರಾಯಣ ಪುಣ್ಯಕಾಲಾರಂಭ ಇವೆಲ್ಲವೂ ನಿಧಾನವಾಗಿ ಮರೆಯಾಗುತ್ತಿವೆ. ಇದೇ ಹಾಡನ್ನು ಸ್ವಲ್ಪ ಜೋರಾಗಿ ಹಾಡಿದರೆ ’ಹಿಂದೂ ಮೂಲಭೂತವಾದಿ’ಯಾಗಿ ಬಿಡಬಹುದಾದ ಸಾಧ್ಯತೆಗಳೂ ಇವೆ, ಹಾಡನ್ನು ಹಾಡದೇ ಸುಮ್ಮನಿದ್ದರೆ ನಮ್ಮತನವನ್ನು ಕಳೆದುಕೊಂಡ ಅನುಭವಾಗುವುದೂ ನಿಜವೇ ಹೌದು.

ನಿನ್ನೆ ರಾತ್ರಿಯ ಇಪ್ಪತ್ತರ ಡಿಗ್ರಿ ಫ್ಯಾರನ್‌ಹೈಟ್ ಛಳಿಯಲ್ಲಾಗಲೀ ಇಂದು ಹೊಸ ವರ್ಷದ ದಿನದಲ್ಲಾಗಲೀ ಹೆಚ್ಚಿನ ಬದಲಾವಣೆಯೇನೂ ಇಲ್ಲ. ಬೇವುಗಳು ಇನ್ನೂ ಚಿಗುರಿಲ್ಲ, ಬೆಲ್ಲ ಮಾಡುವ ಸೀಜನ್ನೂ ಅಲ್ಲ. ಮರಗಳೆಲ್ಲ ಮರಗಟ್ಟಿ ಹೋಗೀ ನಿತ್ಯ ಹರಿದ್ವರ್ಣಿಗಳ ಮೇಲಿನ ಹಸಿರನ್ನು ಹೊರತುಪಡಿಸಿದರೆ ಮತ್ತೆಲ್ಲಾ ಛಳಿಯ ಬಣ್ಣವನ್ನು ಹೊದ್ದಿರುವ ಹೊರಗಿನ ವಾತಾವರಣ. ಅಲ್ಲಲ್ಲಿ ಬಿದ್ದ ಹಿಮ, ಮತ್ತೆ ಅದೇ ಅದರ ಛಳಿಗೆ ಹರಳುಗಟ್ಟಿ ಘನೀಭವಿಸಿ ಮತ್ತಿನ್ನಷ್ಟು ಶೀತಲತೆಯನ್ನು ಮುಖದ ಮೇಲೆ ತಂದುಕೊಂಡು ನೋಡೋಕೆ ಪುಡಿಯಂತೆ ಕಂಡುಬಂದರೂ ಒಳಗೆ ಗಟ್ಟಿಪದರವನ್ನು ಕಟ್ಟಿಕೊಂಡು ತನ್ನ ಮೈ ಶಾಖದಲ್ಲಿ ತಾನು ಯಾವುದೋ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಹೆಮ್ಮೆಯಿಂದ ಬೀಗುತ್ತಿರುವ ಹಾಗೆ ಕಂಡುಬಂತು. ಬೇಕಾದಷ್ಟು ಬೀಸುತ್ತಿರುವ ಗಾಳಿಗೆ ತಲೆ ತೂಗೀ ತೂಗೀ ಕಂಗಾಲಾದ ಮರಗಳು ಯಾವುದೋ ದಿಕ್ಕಿನಲ್ಲಿ ಅವಿತುಕೊಂಡ ವಾಯು-ವರುಣರಿಗೆ ಚಪ್ಪೆ ಮುಖವನ್ನು ತೋರಿಸುವಷ್ಟು ದೀನರಾಗಿ ಹೋಗಿದ್ದರೆ, ಕಪ್ಪಾದ ರಸ್ತೆಯ ಮೇಲ್ಮೈ ಸಹ ಇಂದು ಬೀಳದ ಬಿಸಿಲಿಗೆ ಶಪಿಸುತ್ತಾ ತಮ್ಮ ಕಳೆದುಕೊಂಡ ಕಾವಿಗೆ ಚಡಪಡಿಸಿ ತಮ್ಮ ಮೈ ಮೇಲೆ ತೆಳ್ಳಗೆ ಸವರಿದ ಬಿಳಿಯ ಮಂಜಿನ ಪುಡಿಗೆ ಹೆದರಿಕೊಂಡಿದ್ದವು. ನಿನ್ನೆ-ಇಂದಿಗೆ ಹೆಚ್ಚು ವ್ಯತ್ಯಾಸ ಕಂಡು ಬರದ ನನ್ನ ಹಾಗಿನ ಉಳಿದವೆಲ್ಲವೂ ಇದೊಂದು ದಿನ ಮತ್ತೊಂದು ದಿನ ಎಂದುಕೊಂಡು ಸುಮ್ಮನಿದ್ದವು.

ಹಳೆಯ ವರ್ಷ ಗೆದ್ದವರು ಬಿದ್ದವರೆದ್ದೆಲ್ಲವನ್ನು ಟಿವಿ ಪರದೆ ತಾನು ತೋರಿಸಿಯೇ ತೀರುತ್ತೇನೆ ಎಂದು ಸೆಡ್ಡು ಹೊಡೆದುಕೊಂಡು ನಿಂತಿತ್ತು. ಈ ವರ್ಷದ ಆರಂಭದ ಕ್ಷಣಗಣನೆ ಮುಗಿದು ಘಂಟೆಗಳೇ ಕಳೆದಿದ್ದರೂ ಹೊಸತಕ್ಕೆ ಈಗಾಗಲೇ ಹೋದವರಿಗಿಂತಲೂ ಹಳೆಯದ್ದಕ್ಕೆ ಅಂಟಿಕೊಂಡವರಿಗಿಂತಲೂ ಇನ್ನೂ ಹಳೆಯದು-ಹೊಸತರ ನಡುವೆ ಓಲಾಡುತ್ತಿರುವವರು ಓಲಾಡುತ್ತಲೇ ಇರುವವರ ಹಾಗೆ ಕೆಲವು ಚಿತ್ರಗಳಲ್ಲಿ ಕಂಡುಬಂತು. ಕ್ಯಾಲೆಂಡರಿನ ದಿನ ಬದಲಾದಂತೆ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ತೊಲಗಿ ಹೋದವು ಎಂದುಕೊಂಡು ಬೀಗಿ ನಿಂತವರು ಈ ಮೊದಲು ಹೇಳಿದ ಯಾವುದೇ ಗುಂಪಿನಲ್ಲಿ ಸೇರದೇ ತಮ್ಮದೇ ಒಂದು ಪಂಥವನ್ನು ಕಟ್ಟಿಕೊಂಡವರಂತೆ ಕಂಡುಬಂದರು. ’ಹಾಗಾದರೆ ನಮ್ಮೆಲ್ಲ ಕಷ್ಟಗಳೆಲ್ಲ ತೊಲಗಿದವೇನು ಇಂದಿಗೆ?’ ಎಂದು ನಾನೆಸೆದ ಪ್ರಶ್ನೆಯೊಂದಕ್ಕೆ ನಮ್ಮ ಬ್ಯಾಂಕಿನ ಮ್ಯಾನೇಜರಿಣಿ ’ಇದು ಕೇವಲ ಐಸ್‌ಬರ್ಗಿನ ತುದಿ ಮಾತ್ರ!’ ಎಂದು ಈಗಾಗಲೇ ಕುಸಿದ ವ್ಯವಸ್ಥೆ ಮತ್ತಿನ್ನಷ್ಟು ಕುಸಿದು ಹೋಗುವ ಮುನ್ಸೂಚನೆಯನ್ನು ನೀಡಿದಳು. ಅದೇ ಐಸ್‌ಬರ್ಗ್ - ಅದೆಷ್ಟೋ ವರ್ಷಗಳಿಂದ ಹರಳುಕಟ್ಟಿದ ಹಿಮ, ನೀರಿನ ಒಳಗೇ ತನ್ನದೊಂದು ಪುಟ್ಟ ಪ್ರಪಂಚದ ವಾಸ್ತ್ಯವ್ಯವನ್ನು ಸ್ಥಾಪಿಸಿಕೊಂಡಿರುವ ಅದು ಅಷ್ಟು ಸುಲಭವಾಗಿ ಕರಗಲಾರದು, ಅದು ಪುಡಿಯಾಗಿ-ಕರಗುವ ಮೊದಲು ಅದೆನ್ನೆಷ್ಟು ಟೈಟಾನಿಕ್ ವ್ಯವಸ್ಥೆಗಳನ್ನು ಬಲಿತೆಗೆದುಕೊಳ್ಳಬೇಕೋ ಬಲ್ಲವರಾರು?

ನಿನ್ನೆಗೆ ಕೊರಗಬಾರದು, ನಾಳೆಗೆ ನರಳಬಾರದು, ಇಂದಿನದನ್ನು ಇಂದೇ ನೋಡಿ ಅನುಭವಿಸಿ ತೀರುವ ಪುಟ್ಟದೊಂದು ತಂತ್ರ. ಆ ತಂತ್ರದಲ್ಲಿನ ಸೂತ್ರದಾರನ ಬೆನ್ನಿಗೆ ಎಲ್ಲೆಲ್ಲಿಂದಲೋ ಹೊತ್ತು ತಂದ ಈವರೆಗೆ ಶೇಖರಿಸಿಕೊಂಡ ಒಂದಿಷ್ಟು ಬ್ಯಾಗುಗಳು. ನಾಗಾಲೋಟದ ಮನಸು, ಅದಕೆ ವ್ಯತಿರಿಕ್ತವಾಗಿ ಗಟ್ಟಿಯಾದ ಭೂಮಿಗೆ ಅಂಟಿಕೊಂಡು ಅದರಲ್ಲಿನ ಘರ್ಷಣೆ ಅದರ ಮೇಲ್ಮೈ ಎತ್ತಿ ಕೊಡುವ ವಿರುದ್ಧ ಬಲದ ಸಹಾಯದಿಂದ ನಿಧಾನವಾಗಿ ಚಲಿಸುವ ಕಾಲುಗಳು, ಹೊಟ್ಟೆಗಾಗಿ ಏನೇನೋ ಮಾಡೋ ಜೀವದ ಸಂತೃಪ್ತಿಗೆ ಮತ್ತೆ ಅದೇ ನೆಲದಲ್ಲಿ ಸಿಕ್ಕ ಅಂಶಗಳಿಂದ ಪೋಷಣೆ. ಮತ್ತೆ ಎಲ್ಲರಿಗೂ ಇದ್ದು ಯಾರಿಗೂ ಸಿಗದಿರುವ ಪಂಚಭೂತಗಳು. ಈ ತಂತ್ರಗಾರಿಕೆಯ ವ್ಯವಸ್ಥೆಯನ್ನು ಚಲಾಯಿಸೋದಕ್ಕೆ ಅವರವರ ದುಡ್ಡೂ-ಕಾಸು, ಅದಕ್ಕೆ ತಕ್ಕನಾದ ಮೋಜು-ಮಸ್ತಿ. ಮನೆಯಲ್ಲಿದ್ದರೆ ಕೆಲಸದ ಬಗ್ಗೆ, ಕೆಲಸದಲ್ಲಿದ್ದರೆ ಮನೆಯ ಬಗ್ಗೆ ಚಿಂತಿಸುವ ಕೊರಗು. ಅದ್ಯಾರೋ ದೊಡ್ಡ ಮನುಷ್ಯರು ಹೇಳಿದ ಹಾಗೆ ಇರೋದನ್ನೆಲ್ಲ ಬಿಟ್ಟು ಇರುದುದರೆಡೆಗೆ ತುಡಿವ ಮರುಗು.

ಈ ಆಸೆಯದ್ದೇ ವಿಶೇಷ - ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವ ಹೋಪ್ ಬಹಳ ಪ್ರಭಲವಾದದ್ದು. ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಹಲವಾರು ವರ್ಷಗಳಲ್ಲಿ ಬಿದ್ದ ದಿನಗಳಿಗಿಂತಲೂ ಮೇಲೆ ಎದ್ದ ದಿನಗಳೇ ಹೆಚ್ಚಾದರೂ ಕಳೆದುಕೊಳ್ಳುವವರಿಗೆ ಕಳೆದುಕೊಂಡವರಿಗೇನೂ ಕಡಿಮೆ ಇಲ್ಲ. ಒಬ್ಬರು ಕಳೆದುಕೊಂಡರೆ ತಾನೇ ಮತ್ತೊಬ್ಬರು ಗಳಿಸೋದು - ಆದರೆ ಅದು ಯಾವ ನ್ಯಾಯ? ಹಾಗಾದರೆ ಈ ಪ್ರಪಂಚದಲ್ಲಿ ಕೂಡುವವರು ಇದ್ದಾರೆಂದರೆ ಕಳೆಯುವವರೂ ಇದ್ದಾರೆ ಎಂತಲೇ ಅರ್ಥವೇ? ಇದೆಲ್ಲದರ ಒಟ್ಟು ಮೊತ್ತ ಯಾವಾಗಲೂ ಶೂನ್ಯವೇ? ಹಾಗಿದ್ದ ಮೇಲೆ ಕೊಡು ಕೊಳ್ಳುವ ವ್ಯವಹಾರವಾದರೂ ಏಕೆ ಬೇಕು? ಕೂಡುವುದು ನಿಜವಾದ ಮೇಲೆ, ಅದರ ಜೊತೆಗೆ ಕಳೆದುಕೊಳ್ಳುವುದೂ ನಿಜವೆಂದ ಮೇಲೆ ಶ್ರೀ ಕೃಷ್ಣ ಉಪದೇಶ ಮಾಡಿದ ಸ್ಥಿತಪ್ರಜ್ಞ ಸ್ಥಿತಿಯನ್ನು ಜನರು ಅದೇಕೆ ತಲುಪೋದಿಲ್ಲ? ಸಾಕು ಎನ್ನುವುದು ಹೆಚ್ಚು ಕೇಳಿ ಬರದಿರುವಾಗ ಬೇಕು ಎನ್ನುವುದು ಪ್ರಭಲವಾಗಿ ಕಂಡರೆ ಅದೊಂದೇ ಅನನ್ಯವಾದರೆ, ಅದೇ ಸ್ಥಿತಿ ಎಲ್ಲರಲ್ಲೂ ಸೇರಿಕೊಂಡರೆ, ಬೇಕು ಎನ್ನುವುದೇ ಬದುಕಾದರೆ...ಬೇಕು ಎನ್ನುವ ಆಸೆಗೆ ಕೂಡುವುದು ಇದೇ ಜೊತೆಗೆ ಕಳೆಯುವುದೂ ಇದೆ ಎಂದ ಮೇಲೆ ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವುದು ಎಷ್ಟರ ಮಟ್ಟಿಗೆ ಸರಿ; ಜೊತೆಗೆ ಒಬ್ಬರ ಒಳಿತು ಇನ್ನೊಬ್ಬರ ಒಳಿತಾಗಬೇಕೆಂದೇನೂ ಇಲ್ಲ ಎಂದು ಯೋಚಿಸಿಕೊಂಡಾಗ ಅದೇ ಶೂನ್ಯದ ಸಂಭ್ರಮ, ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ತುಂಬಿಕೊಂಡ ಶುಷ್ಕ ನಗೆ.

Tuesday, December 30, 2008

ಛಳಿಗಾಲದ ಕುರುಕು

ಡಿಸೆಂಬರ್ ೨೧ ಬಂತು ಅಂದ್ರೆ ಛಳಿಗಾಲದ ಆರಂಭ ಅಂತ ಕೊರಗೋದು ಒಂದು ರೀತಿ, ಅದರ ಬದಲಿಗೆ ಅದೇ ದಿನವನ್ನ ವರ್ಷದ ಲಾಂಗೆಷ್ಟ್ ನೈಟ್ ಎಂದುಕೊಂಡರೆ ಇನ್ನೊಂದು ವಿಚಾರವೂ ಸಿಗುತ್ತೆ, ಅದೇ ನಂತರದ ದಿನಗಳಲ್ಲಿ ದಿನೇದಿನೇ ಹೆಚ್ಚುವ ಡೇ ಲೈಟ್ ಸಮಯ, ಹಾಗೂ ಜೂನ್ ೨೧ ರ ವರೆಗೆ ದಿನೇದಿನೇ ಹೆಚ್ಚುವ ಡೇ ಲೈಟ್ ಸಮಯ ಛಳಿಗೆ ಅಷ್ಟೊಂದು ಹೊಂದಿಕೊಂಡಿರದ ನಮ್ಮನ್ನು ಕೊನೇಪಕ್ಷ ರಾತ್ರಿ ಒಂಭತ್ತರ ವರೆಗೆ ಬೆಳಕಿರುವ ದಿನಗಳಲ್ಲಿ ಹೊರಗೆ ಕಳೆಯುವಂತೆ ಮಾಡುವ ಸಿಗುವ ಅವಕಾಶಗಳು.

ನಾವೆಲ್ಲ ಶಾಲೆಗೆ ಹೋಗಿ ಬರುತ್ತಿದ್ದ ಕಾಲದಲ್ಲಿ ಹೇಮಂತ ಋತುವಿನಲ್ಲಿ ಶನಿವಾರ ಬೆಳಗ್ಗೆ ಎಂಟು ಘಂಟೆಗೆ ಎಳೆಬಿಸಿಲಿನಲ್ಲಿ ಹೋಗಿ ನಿಲ್ಲುವ ಮನಸ್ಸಾಗುತ್ತಿತ್ತು. ನಮ್ಮ ಮೇಷ್ಟ್ರು ಪಿ.ಟಿ. ತರಗತಿಗಳನ್ನು ಬಯಲಿನಲ್ಲಿ ನಡೆಸುತ್ತಿದ್ದು ಮುಂಜಾವಿನ ಛಳಿಯಲ್ಲಿ ಅದು ಬಹಳ ಹಿತವನ್ನು ನೀಡುತ್ತಿತ್ತು. ನಾವು ಭಾರತದಲ್ಲಿ ಬಲ್ಲ ಹಾಗೆ ಶಿವಮೊಗ್ಗದ ಹತ್ತರಿಂದ ಹನ್ನೆರಡು ಡಿಗ್ರಿ ಡಿಸೆಂಬರ್ ಛಳಿ ದೊಡ್ದದು - ಜಮ್ಮು-ಕಾಶ್ಮೀರದ ಹಿಮಾವೃತ ದೃಶ್ಯಗಳನ್ನು ಟಿವಿಯಲ್ಲಿ ನೋಡಿದರೆ ಛಳಿಯ ಅನುಭವವೇನೂ ಆಗುತ್ತಿರಲಿಲ್ಲ!

ಇಲ್ಲಿಗೆ ಬಂದ ಮೇಲೆ ಫಾಲ್ ಮತ್ತು ವಿಂಟರ್ ಸೀಸನ್‌ಗಳನ್ನು ವಿಶೇಷವಾಗಿ ನೋಡುವ ಭಾಗ್ಯ ಒದಗಿ ಬಂದಿದ್ದು. ಉದಾಹರಣೆಗೆ ಈ ವರ್ಷವನ್ನೇ ತೆಗೆದುಕೊಳ್ಳೋಣ, ಲೇಟ್ ಫಾಲ್‌ನಲ್ಲಿ, ಅಂದರೆ ನವಂಬರ್ ಕೊನೆ ಮತ್ತು ಡಿಸೆಂಬರ್ ಮೊದಲೆರಡು ವಾರಗಳಲ್ಲಿ ವಿಪರೀತ ಛಳಿ. ನೂರಾ ಹದಿಮೂರು ವರ್ಷದ ಇತಿಹಾಸದಲ್ಲಿ ಈ ವರ್ಷಾ ಹ್ಯಾಲೋವಿನ್ (ಅಕ್ಟೋಬರ್ ೩೧) ಮೊದಲು ನಾವು ಎಂಟು ಇಂಚು ಸ್ನೋ ನೋಡಿದ್ದೂ ಆಯಿತು. ಫಾಲ್‌ನಲ್ಲೇ ಪೂರ್ತಿ ಛಳಿಗಾಲವನ್ನು ಅನುಭವಿಸುವ ಸುಖ ಸಿಕ್ಕಮೇಲೆ ಇನ್ನು ನಿಜವಾದ ಛಳಿಗಾಲಕ್ಕೇನು ಬೆಲೆ ಕೊಡೋಣ ಹೇಳಿ? ಒಂದು ರೀತಿ ನೀರಿನಲ್ಲಿ ಮುಳುಗಿದೋನಿಗೆ ಛಳಿಯೇನು ಮಳೆಯೇನು ಅಂದಹಾಗೆ ಈ ಫಾಲ್ ವಾತಾವರಣವೇ ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡಿರುವಾಗ ಇನ್ನು ವಿಂಟರ್‌ಗೆ ಹೆದರುವುದಾದರೂ ಏಕೆ?

ನಾವೆಲ್ಲ ಸೂರ್ಯವಂಶದವರು, (ಅಂದರೆ ಸೂರ್ಯ ಹುಟ್ಟಿದ ಮೇಲೆ ಎದ್ದೇಳುವವರು ಅಂತಲ್ಲ), ಬೆಳಗಿನ ಎಳೆ ಬಿಸಿಲಿನಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿಕೊಂಡು ಕೈಯಲ್ಲಿ ಕಾಫೀ ಮಗ್ಗ್ ಅನ್ನು ಹಿಡಿದುಕೊಂಡು ಆಫೀಸಿಗೆ ಹೊರಡುವ ಉತ್ಸಾಹವೇ ಬೇರೆ. ಅದರ ಬದಲಿಗೆ ಫಾಲ್‌ನಲ್ಲಿ ಕತ್ತಲೋ ಕತ್ತಲು. ಮುಂಜಾನೆ ಎಂಟರಿಂದ ಸಂಜೆ ಐದರವರೆಗೆ ಮಾತ್ರ ಸೂರ್ಯ ಕಿರಣಗಳು ನೋಡೋಕೆ ಸಿಕ್ಕರೆ ಪುಣ್ಯ. ನಮ್ಮನ್ನು ಹೈರಾಣಾಗಿಸಲೆಂದೇ ಇಲ್ಲಿಯವರು ವರ್ಷಕ್ಕೆರಡು ಸಲ ಟೈಮ್ ಛೇಂಜ್ ಮಾಡೋದು - ಡೇ ಲೈಟ್ ಸೇವಿಂಗ್ ನೆಪದಲ್ಲಿ. ಈ ಅಮೇರಿಕದಲ್ಲಿ ನೆಟ್ಟಗೆ ನಡೆಯುತ್ತಿರುವ ಗಡಿಯಾರವೂ ತನ್ನನ್ನು ತಾನು ವರ್ಷಕ್ಕೆ ಎರಡು ಸಲ ತಿದ್ದಿಕೊಳ್ಳಬೇಕು - ಔಟ್ ಡೇಟೆಡ್ ಆಗದೇ ಇರಲು!

ನಿನ್ನೆ ವೆದರ್ ಚಾನೆಲ್‌ನಲ್ಲಿ ಅರವತ್ತು ವರ್ಷಗಳ ಹಿಂದೆ ಡಿಫ್ಟೀರಿಯಾ ವ್ಯಾಕ್ಸೀನ್ ಅನ್ನು ಅಲಾಸ್ಕಾದ ಹಿಮಾವೃತ ಪ್ರದೇಶದ ಪಟ್ಟಣಗಳಿಗೆ ತಲುಪಿಸಲು ಸಬ್ ಝೀರೋ ಟೆಂಪರೇಚರ್‌ನಲ್ಲಿ ಜನರು ಕಷ್ಟಪಟ್ಟದ್ದನ್ನು ನೋಡಿದಂದಿನಿಂದ ನಮ್ಮಲ್ಲಿನ ೩೦ ರ ಆಸುಪಾಸಿನ (ಫ್ಯಾರನ್‌ಹೈಟ್ ಸ್ಕೇಲಿನಲ್ಲಿ) ಛಳಿ ಏನು ಮಹಾ ದೊಡ್ಡದು ಎನ್ನಿಸಿದೆ. ಅದಕ್ಕೇ ಈ ಉಷ್ಣ-ಛಳಿ ಮನೋಭಾವನೆ ಎಲ್ಲ ರಿಲೇಟಿವ್ ಅನ್ನೋದು - ಮೈನಸ್ ಐವತ್ತರ ಹತ್ತಿರದ ಉಷ್ಣತೆಯನ್ನು ಬಲ್ಲವರಿಗೆ ಸೊನ್ನೆಯ ಹತ್ತಿರದ ಛಳಿ ಛಳಿಯೇ ಅಲ್ಲ!

ಈ ಯೂನಿಟ್‌ಗಳು ಮತ್ತು ಅವುಗಳ ಬಳಕೆಯನ್ನು ಕುರಿತು ಈ ಕೆಳಗಿನ ಅಂಶವನ್ನು ಗಮನಿಸಿ:
- ಅಮೇರಿಕದಲ್ಲಿ ಪೌಂಡು-ಮೈಲು-ಇಂಚುಗಳನ್ನು ಬಳಸುವ ವ್ಯವಸ್ಥೆಯಲ್ಲಿ ಕ್ಯಾಮೆರಾದ ಲೆನ್ಸ್‌ ವಿಚಾರಕ್ಕೆ ಬಂದಾಗ ಮಿಲಿ ಮೀಟರ್ ಅನ್ನೇ ಜನರು ಬಳಸೋದು, ಜೊತೆಗೆ ಟೆಂಪರೇಚರ್ ಸ್ಕೇಲ್ (ಫ್ಯಾರನ್‌ಹೈಟ್) ಬಳಕೆ ಇಲ್ಲಿಯ ಉಷ್ಣತೆಯ ವೇರಿಯೇಷನ್ನಿಗೆ ಸೂಕ್ತವಾಗೇ ಇದೆ.
- ಭಾರತದಲ್ಲಿ ಕೆಜಿ-ಕಿಲೋಮೀಟರು-ಸೆಂಟಿಮೀಟರ್‌ಗಳನ್ನು ಬಳಸುವ ವ್ಯವಸ್ಥೆಯಲ್ಲಿ ಉಳಿದೆಲ್ಲ ಟೆಂಪರೇಚರ್ರ್‌ಗೆ ಸೆಲ್ಸಿಯಸ್ ಸ್ಕೇಲು ಬಳಸಿದರೂ ಮನುಷ್ಯನ ದೇಹದ ಉಷ್ಣತೆಯನ್ನು ಫ್ಯಾರನ್‌ಹೈಟ್ ಸ್ಕೇಲಿನಲ್ಲೇ ಬಳಸೋದು.

ಈ ವೆದರ್ರು, ಟೆಂಪರೇಚರ್ರು ಇವೆಲ್ಲ ಜನರಲ್ ವಿಷಯ - there is nothing you can do about it! ಅನ್ನೋದು ಒಂದು ವಿಚಾರ. ಮಳೆ ಬರುತ್ತೆ ಅಂತ ಫೋರ್‌ಕಾಸ್ಟ್ ನೋಡಿಕೊಂಡು ಛತ್ರಿ/ರೈನ್ ಕೋಟ್ ತೆಗೆದುಕೊಂಡು ಹೋಗೋದು ಬಿಡೋದು ಅವರವರ ಡಿಸಿಷನ್ನಿಗೆ ಸೇರಿದ್ದು ಅನ್ನೋದು ಮತ್ತೊಂದು ವಿಚಾರ.

Friday, December 26, 2008

ಗಿರಕಿ ಹೊಡೆಯೋ ಲೇಖನಗಳು...

ಯಾಕೋ ಈ ವರ್ಷ ಆಲೋಚನೆಗಳ ಒರತೆಯಲ್ಲಿ ಬರೆಯುವಂತಹ ವಿಚಾರಗಳ ಸೆಲೆ ಉಕ್ಕಿ ಬಂದಿದ್ದೇ ಕಡಿಮೆ ಎನ್ನಬಹುದು, ಕಳೆದ ಒಂದೆರಡು ವರ್ಷಗಳಿಗೆ ಹೋಲಿಸಿದರೆ ೨೦೦೮ ರಲ್ಲಿ ಬರೆದ ಬರಹಗಳ ಪಟ್ಟಿ ಅವುಗಳ ಅರ್ಧದಷ್ಟೂ ಇಲ್ಲ ಎಂದು ಗೊತ್ತಾದ ಮೇಲಂತೂ ಏಕೆ ಹೀಗೆ ಎನ್ನುವ ಆಲೋಚನೆಗಳು ಹುಟ್ಟತೊಡಗಿದವು.

ಈ ವರ್ಷ ಜನವರಿ ೨೦ ರಂದು "ಅಂತರಂಗ-೩೦೦" ರ ಲೇಖನದಲ್ಲಿ ಬರೆದ ಮುಂದಿನ ಗುರಿ/ಒತ್ತಾಸೆಗಳೆಲ್ಲ ಇನ್ನೂ ಹಾಗೇ ಇವೆ. ಬರಹಗಳ ಸಂಖ್ಯೆ ಇಳಿಮುಖವಾದರೂ ಅವುಗಳ ಗುಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದೆಲ್ಲ ಅಂದುಕೊಂಡಿದ್ದಷ್ಟೇ ಬಂತು, ’ಅಂತರಂಗ’ದಲ್ಲಿ ಯಾವತ್ತಿದ್ದರೂ ಒಂದೇ ರೀತಿ ಬರಹಗಳು ಎಂದು ಕೆಲವು ಪ್ರಯೋಗಗಳನ್ನು ಮಾಡಿದ್ದು ಆಯ್ತು. ಇನ್ನು ಈ ಬ್ಲಾಗಿಗೆ ಪ್ರತ್ಯೇಕ ವೆಬ್‌ಸೈಟ್ ಬೇರೆ (ಕೇಡಿಗೆ); ಈ ಪುಕ್ಕಟೆ ಬ್ಲಾಗನ್ನು ಅಪ್‌ಡೇಟ್ ಮಾಡಿಕೊಂಡಿದ್ದರೆ ಸಾಲದೂ ಅಂತ ಸ್ವತಂತ್ರ ವೆಬ್‍ಸೈಟ್ ಅನ್ನು ಮ್ಯಾನೇಜ್ ಮಾಡೋ ಕಷ್ಟ ಬೇರೆ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು


’ಅಂತರಂಗ’ದಲ್ಲಿ ನೀವು ಪ್ರಕಟಿಸೋ ಬರಹದಂತಿರುವವುಗಳನ್ನು ನಾವು ನಮ್ಮ ಸೈಟ್‌ನಲ್ಲಿ ಪ್ರಕಟಿಸೋದಿಲ್ಲ ಅಂತ ಬೇರೆ ಹೇಳಿಸಿಕೊಳ್ಳಬೇಕಾಗಿ ಬಂತು - ಅದೂ ನನಗೆ ದಶಕಗಳಿಂದ ಪರಿಚಯವಿರುವ ಸಂಪಾದಕರೊಬ್ಬರಿಂದ - ಅದೂ ಈ ಲೇಖನಗಳು ಉದ್ದವಾದುವು ಈಗಿನ ಚೀಪ್ ಸ್ಟೋರೇಜ್ ಯುಗದಲ್ಲೂ ನಮ್ಮಲ್ಲಿ ನಿಮ್ಮ ಲೇಖನಗಳಿಗೆ ಸ್ಥಳಾವಕಾಶವಿಲ್ಲ ಎಂಬುದಾಗಿ - I think he was just being decent, in saying so.

***

- ಯಾಕೆ ನಮ್ಮ ಲೇಖನಗಳು ನಮ್ಮ ಮಕ್ಕಳ ಹಾಗೆ ಯಾವಾಗಲೂ ನಮ್ಮ ಸುತ್ತಲೇ ಗಿರಕಿ ಹೊಡಿತಾ ಇರ್ತವೆ?
- ಯಾಕೆ ನಮ್ಮ ಲೇಖನಗಳಲ್ಲಿ ಇನ್ನೊಬ್ಬರ ಹೃದಯಸ್ಪರ್ಶಿ ಅಂಶಗಳು ಕಡಿಮೆಯಾಗಿ ಹೋಗಿವೆ?
- ಯಾಕೆ ನಮ್ಮ ಸೃಜನಶೀಲತೆ ಅನ್ನೋದು ಮಳೆಗಾಲದಲ್ಲಿ ಮಂಡಕ್ಕಿ ಮಾರೋ ಸಾಬಿಯ ಪ್ಯಾಂಟಿನ ಹಾಗೆ ಮಂಡಿಗಿಂತ ಮೇಲೆ ಮಡಿಚಿಕೊಂಡಿದೆ?
- ನಮ್ಮ ಲೇಖನಗಳಲ್ಲಿ ಬಡತನ, ನೋವು, ಬದಲಾವಣೆಗಳಿಗೆ ಸ್ಪಂದನವೇ ಸಿಗೋದಿಲ್ಲವೆ?
- ಈ ಆನ್‌ಲೈನ್ ಮಾಧ್ಯಮಗಳ ಓದುಗರಿಗೆ ಏನು ಬೇಕೋ ಅದನ್ನು ಕೊಡೋದಕ್ಕೆ ನಮ್ಮ ಕೈಯಲ್ಲಾಗೋದಿಲ್ಲವೇನು?
- ನಮ್ಮ ವರದಿಗಳಾಗಲೀ, ನಮ್ಮ ಭಾಷಣಗಳಾಗಲೀ ಮೊನಟನಸ್ ಆಗಿ ಹೋಗೋದೇಕೆ?

****

ಆಫೀಸಿನಲ್ಲಿ ವಿಪರೀತ ಕೆಲಸ ಸಾರ್, ಜೊತೆಗೆ ಅನಿವಾಸಿತನ ಬೇರೆ. ಈ ವರ್ಷವನ್ನೇ ತೊಗೊಳ್ಳಿ, ಪ್ರತೀವಾರ ಐವತ್ತೈದು ಅರವತ್ತು ಘಂಟೆಗಳ ಕೆಲಸ ಮಾಡೋದು ನಮ್ಮ ಕರ್ಮ ಜೀವ(ನ); ಯಾವ ಪುಸ್ತಕವನ್ನೂ ಓದಿಲ್ಲ, ಯಾರೊಬ್ಬ ಸ್ನೇಹಿತರ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡಿದ ನೆನಪಿಲ್ಲ. ಹೀಗೇ ಆಗ್ತಾ ಹೋದ್ರೆ ನಮ್ಮ ಪ್ರೇರಣೆಗಳು, ಸೃಜನಶೀಲತೆ ಬದುಕಿದ ಹಾಗೇ. ಆನ್‌ಲೈನ್ ಮಾಧ್ಯಮದಲ್ಲಿ ಬೇಕಾದಷ್ಟು ಓದೋ ಹಾಗಿದ್ದರೂ ಓದೋಕೆ ಸಮಯವಿಲ್ಲವೋ ಅಥವಾ ಓದೋಕೆ ಸಾಧ್ಯವೇ ಇಲ್ಲವೋ ಅನ್ನೋ ಹಾಗೆ ಆಗಿದೆ.

ಇದಕ್ಕೆಲ್ಲ ನಮ್ಮ ಬೆಳವಣಿಗೆಯೂ ಕಾರಣ ಅನ್ನಬೇಕು. ಈ ಹಾಳಾದ ಇ-ಮೇಲ್‌ ಗಳನ್ನು ಓದೀ-ಓದಿ ಉದ್ದವಾದದ್ದನ್ನು ಬೇರೆ ಏನೂ ಓದೋಕ್ಕೇ ಸಾಧ್ಯವಿಲ್ಲವೆನ್ನುವ ಹಾಗೆ ಆಗಿದೆ. ಆಫೀಸಿನಲ್ಲಿ ಯಾರಾದರೂ ಬರೆದ ಉದ್ದವಾದ ಇ-ಮೇಲ್ ಅನ್ನೋ ಅಥವಾ ಡಾಕ್ಯುಮೆಂಟ್ ಅನ್ನೋ ಓದಿ ಅರ್ಥ ಮಾಡಿಕೊಂಡು ಉತ್ತರ ಕೊಡೋದಾಗಲೀ ಅಥವಾ ತಿದ್ದೋದಾಗಲೀ ಪೀಕ್ ಅವರ್ ನಲ್ಲಿ ಸಾಧ್ಯವೇ ಇಲ್ಲದ ಚಟುವಟಿಕೆಯಾಗಿ ಹೋಗಿದೆ. ನಾವೆಲ್ಲ (ಅಥವಾ ನಾನು) ಅಲ್ಪತೃಪ್ತರಾಗಿ ಹೋಗಿದ್ದೇವೆ, ಏನಾದರೊಂದನ್ನು ಹಿಡಿದುಕೊಂಡು ಹಠ ಸಾಧಿಸುವುದಿರಲಿ ಒಂದು ಪುಸ್ತಕಕ್ಕೆ ಅರ್ಧ ಘಂಟೆ ಮನಸ್ಸು ಕೊಡದವರಾಗಿ ಹೋಗಿದ್ದೇವೆ. ಒಂದು ಒಳ್ಳೆಯ ಪದ್ಯವನ್ನು ಓದಿ, ಒಂದು ಉತ್ತಮವಾದ ಕಾದಂಬರಿಯನ್ನು ಮೆಲುಕು ಹಾಕಿ ಜಮಾನವಾಗಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ನನ್ನ ತಿಳುವಳಿಕೆ ಸೀಮಿತವಾಗಿದೆ.

ಮೊದಲೆಲ್ಲ ಒಂದಿಷ್ಟು ಟೆಕ್ನಿಕಲ್ ಸ್ಕಿಲ್ಸ್ ಆದರೂ ಇತ್ತು - ಜಾವಾದಲ್ಲಿ ಬರೆದು ಡಿಬಿ೨ (DB2) ಡೇಟಾ ತೆಗೆದು ಅನಲೈಸ್ ಮಾಡುವುದಾಗಲೀ, ಸಿಐಸಿಎಸ್ (CICS) ನಲ್ಲಿ ಮಲ್ಟಿ ಯೂಸರ್ ಸೆಷನ್ನುಗಳನ್ನು ಕ್ರಿಯೇಟ್ ಮಾಡಿ ಅದನ್ನು ಈ ದೇಶದ ನಾನಾ ಭಾಗಗಳಿಂದ ಯೂಸರ್‌ಗಳು ಟೆಸ್ಟ್ ಮಾಡಿ ಸಾಧಿಸಿಕೊಂಡಿದ್ದಾಗಲೀ ಇವತ್ತು ಇತಿಹಾಸವಾಗಿ ಹೋಗಿದೆ. ಒಂದು ಸಣ್ಣ HTML ಟ್ಯಾಗ್‌ಗೆ ಕೂಡಾ ರೆಫೆರೆನ್ಸ್ ಬೇಕಾಗಿದೆ. ನನ್ನ ಇಂಡಷ್ಟ್ರಿ ಸ್ಕಿಲ್ಸ್ ಅನ್ನುವುದು ಏನೇ ಇದ್ದರೂ ಕರಿಮಣಿ ಸರದ ನಡುವೆ ಇರುವ ತಾಳಿಯ ಹಾಗೆ, ಈ ಕಂಪನಿಯಿಂದ ಹೊರಗೆ ಬಂದು ಮತ್ತೊಂದು ಕಂಪನಿಯ ಹಿತಾಸಕ್ತಿಯಿಂದ ನೋಡಿದರೆ ಅದಕ್ಕಷ್ಟು ಮೌಲ್ಯವಿಲ್ಲ. ಈ ಹದಿಮೂರು ವರ್ಷಗಳ ಎಕ್ಸ್‌ಪೀರಿಯನ್ಸ್ ಅನ್ನುವುದು ಎರಡೂ ಕಡೆ ಹರಿತವಾದ ಕತ್ತಿಯ ಹಾಗೆ, ಅದರ ಬಳಕೆಯ ಬಗ್ಗೆ ಹುಷಾರಾಗಿರುವುದೇ ಒಳ್ಳೆಯದು. ಮೊದಲೆಲ್ಲ ಕನ್ಸಲ್‌ಟೆಂಟ್ ಆಗಿದ್ದಾಗ ಒಂದು ಕಂಪನಿಯಿಂದ ಮತ್ತೊಂದಕ್ಕೆ ಹಾರಲು ಅನುಕೂಲವಾದ ಸ್ಕಿಲ್‌ಗಳೆಲ್ಲ ಇಂದು ಒಂದೇ ಕಂಪನಿಯಲ್ಲಿ ಇದ್ದ ಪ್ರಯುಕ್ತ ಸಾಣೆ ಹಿಡಿಯದ ಕತ್ತಿಯಾಗಿ ಹೋಗಿದೆ. ಆಫೀಸಿನಲ್ಲಿ ನಾನು ಮಾಡುವ ತಪ್ಪುಗಳು ಅವು ಹುಟ್ಟಿದ ಹಾಗೇ ಮುಚ್ಚಿಯೂ ಹೋಗುತ್ತವೆ.

***
You have to get your ass kicked once in a while... ಅಂತಾರಲ್ಲ ಹಾಗೆ. ಏನಾದರೊಂದು ಛಾಲೆಂಜ್ ಇರಬೇಕು ಬದುಕಿನಲ್ಲಿ. ಯಾವುದೋ ಕಷ್ಟಕರವಾದ ಕಾದಂಬರಿಯನ್ನು ಹತ್ತು ಸಾರಿ ಓದಿ ಆಯಾ ಪಾತ್ರಗಳ ಹಿಂದಿನ ಸಂವೇದನೆಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನವಾಗಲೀ; ಇಂದಿನ ಕಷ್ಟಕರವಾದ ಎಕಾನಮಿಯಲ್ಲಿ ಎಲ್ಲೂ ಇದ್ದು ಬದುಕಬಲ್ಲೆ ಎನ್ನುವ ಛಲಕ್ಕೆ ಬೇಕಾದ ಸ್ಕಿಲ್ಲುಗಳನ್ನು ಬೆಳೆಸಿಕೊಳ್ಳುವುದಾಗಲೀ; ನಿರಂತರವಾಗಿ ಒಂದಿಷ್ಟು ಪುಸ್ತಕಗಳನ್ನು ಅಭ್ಯಸಿಸುವ ರೂಢಿಯಾಗಲೀ ಅಥವಾ ಸ್ನೇಹಿತರ-ಸಂಬಂಧಿಕರ-ಒಡನಾಡಿಗಳಿಗೆ ಸ್ಪಂದಿಸುವ ಮನಸ್ಥಿತಿಯಾಗಲೀ...ಹೀಗೆ ಒಂದಿಷ್ಟು ತೊಡಗಿಕೊಳ್ಳುವುದು ಯೋಗ್ಯ ಅನ್ನಿಸೋದು ಈ ಹೊತ್ತಿನ ತತ್ವ. ಅಂತೆಯೇ ಈ ಮುಂದಿನ ವರ್ಷಕ್ಕೆ ಯಾವುದೇ ಗುರಿ/ಒತ್ತಾಸೆಗಳು ಇಲ್ಲದಿರುವುದೇ ಇಂದಿನ ವಿಶೇಷ!

Saturday, December 06, 2008

ಈ ತತ್ವಗಳ ಹಣೇಬರಾನೇ ಇಷ್ಟು...

...ಅಂತ ಅನ್ಸಿದ್ದು ಇತ್ತೀಚೆಗಷ್ಟೇ ಏನಲ್ಲ, ಆದ್ರೆ ಈ ಹೊತ್ತಿನ ತತ್ವದ ಹಿನ್ನೆಲೆಗೆ ಒಂದು ಸಮಜಾಯಿಷಿಯಂತೂ ಖಂಡಿತ ಇದೆ. ನಾನು ನನ್ನ ಕ್ರೆಡಿಟ್ ಕಾರ್ಡ್ ಬಿಲ್ಲುಗಳನ್ನ ಸಮಯ ಸಿಕ್ಕಾಗ ರಿವ್ಯೂವ್ ಮಾಡ್ತಾ ಇದ್ದಾಗ ಒಂದು ಸಂಗತಿ ಗೊತ್ತಾಯಿತು, ಆದೇನಂದರೆ ನನ್ನ ಸಂಬಳದ ಒಂದು ಅಂಶ ನಿಯಮಿತವಾಗಿ ವಾಲ್‌ಮಾರ್ಟ್ ಹಾಗೂ ಸಾಮ್ಸ್‌ಕ್ಲಬ್‌ಗೆ ಹೋಗ್ತಾ ಇರೋದು! ಅಂದ್ರೆ ಅದೇನು ಇಲ್ಲೀಗಲ್ ಟ್ರಾನ್ಸಾಕ್ಷನ್ನ್ ಅಲ್ಲ, ನಾನೇ ಹೋಗಿ ಬಂದು ಅಲ್ಲಿ ಖರೀದಿ ಮಾಡಿದ ಸಾಮಾನಿನ ಪ್ರತಿಯಾಗಿ ಅವರು ನನ್ನ ಕ್ರೆಡಿಟ್ ಕಾರ್ಡಿನಿಂದ ಎಳೆದುಕೊಂಡ ಹಣ, ಎಲ್ಲ ನ್ಯಾಯವಾದ್ದೇ ಅದ್ರಲ್ಲೇನೂ ತಪ್ಪಿಲ್ಲ ಬಿಡಿ. ಆದ್ರೆ, ಇತ್ತೀಚೆಗೆ ಪ್ರತೀ ತಿಂಗಳು ವಾಲ್‌ಮಾರ್ಟ್, ಸ್ಯಾಮ್ಸ್‌ಕ್ಲಬ್ಬಿಗೆ ಹೋಗಿ ಅಲ್ಲಿ ಖರೀದಿ ಮಾಡಿ ತರುವ ಸಾಮಾನುಗಳ ಪಟ್ಟಿ ಬೆಳೆದಿದ್ದು ಹೇಗೆ? ಮೊದ್ಲೆಲ್ಲ ಆ ಸ್ಟೋರುಗಳಿಂದ ದೂರವಿರಬೇಕು ಎಂಬ ಪಣತೊಟ್ಟ ತ್ರಿವಿಕ್ರಮನಂತೆ ನಾನು ದೂರವಿದ್ದು ಕೊನೆಗೆ ಬೇತಾಳನ ಸವಾಲಿಗೆ ಸರಿಯಾಗಿ ಉತ್ತರ ಹೇಳಿಯೂ ಅದು ಹೆಗಲು ಬಿಟ್ಟು ಹಾರಿ ಹೋಗಿ ಕೊನೆಗೆ ಕೊಂಬೆಗೆ ನೇತಾಡುವ ರೀತಿಯಲ್ಲಿ ನಾನು ವಾಲ್‌ಮಾರ್ಟ್ ಅಂಗಡಿಯಿಂದ ದೂರವಿದ್ದಷ್ಟೂ ಅದಕ್ಕೆ ಹತ್ತಿರ ಹತ್ತಿರ ಹೋಗಿ ಕೊನೆಗೆ ನನ್ನ ಹೆಚ್ಚಿನ ಪರ್ಚೇಸುಗಳೆಲ್ಲ ಅವೇ ಅಂಗಡಿಯಿಂದ ಆಗುತ್ತಿದೆ ಏನಾಶ್ಚರ್ಯ!

ವಾಲ್‌ಮಾರ್ಟ್ ಅಂದರೆ ನನಗೇನೂ ಅಲರ್ಜಿ ಇಲ್ಲ, ಆದರೆ ಅದು ಅಮೇರಿಕನ್ ಕ್ಯಾಪಿಟಲಿಸಮ್ ಅನ್ನು ಪರಮಾವಧಿ ಮುಟ್ಟಿಸಿರುವ ಕಂಪನಿ ಎಂದೂ; ಆ ಅಂಗಡಿಗಳಲ್ಲಿ ಸಾಮಾನುಗಳನ್ನು ಕಡಿಮೆ ದರದಲ್ಲಿ ಮಾರಬೇಕಾಗುವಲ್ಲಿ ಬೇಕಾದಷ್ಟು ತಂತ್ರಗಳನ್ನು ಅಳವಡಿಸಿ ಅದನ್ನು ಅನುಸರಿಸಿರುತ್ತಾರೆಂತಲೂ; ನಮ್ಮ ಊರಿನ ಹಾಗೂ ನೆರೆಹೊರೆಯವರು ನೆಲಸಮಾಧಿಯಾಗುವಷ್ಟು ಮಟ್ಟಿನ ಸ್ಪರ್ಧೆಯನ್ನು ಒಡ್ಡುವುದರಲ್ಲಿ ನಿಸ್ಸೀಮರೆಂತಲೂ, ಮಿಲಿಯನ್ನ್‌ಗಟ್ಟಲೆ ಜನರನ್ನು ಎಂಪ್ಲಾಯ್ ಮಾಡಿಕೊಂಡಿದ್ದರೂ ಗ್ರಾಹಕರಿಗೆ ಬೇಕಾದ ಸಮಯದಲ್ಲಿ ಕಷ್ಟಮರ್ ಸರ್ವೀಸ್ ಹೇಳ ಹೆಸರಿಲ್ಲದೇ ನೀಲಿ ಓವರ್‌ಕೋಟ್ ಧರಿಸಿದ ಯಾವೊಬ್ಬರೂ ಕಣ್ಣಿಗೆ ಬೀಳೋದೇ ಇಲ್ಲವೆಂತಲೂ; ಗೋಲ್ಡ್‌‌ಫಿಶ್‌ನಿಂದ ಹಿಡಿದು ಒಣ ಸಗಣಿಯವರೆಗೆ (ಉತ್ಪ್ರೇಕ್ಷೆ) ಒಂದೇ ಸೂರಿನಡಿಯಲ್ಲಿ ಉದ್ದಾನುದ್ದ ಸ್ಟೋರುಗಳಲ್ಲಿ ಮಾರಿ ಗ್ರಾಹಕರಿಗೆ ತಲೆಕೆಡಿಸುತ್ತಾರೆಂತಲೂ; ಘಂಟೆಗೆ ಎಂಟು-ಹತ್ತು ಡಾಲರ್‌ ಕೊಟ್ಟು ಬೆನಿಫಿಟ್ ಹೆಸರಿನಲ್ಲಿ ಎಂಪ್ಲಾಯಿಗಳನ್ನು ಶೋಷಿಸುತ್ತಾರೆಂತಲೂ, ಇತ್ಯಾದಿ ಇತ್ಯಾದಿಯಾಗಿ ಬಹಳಷ್ಟು ಹೇಳಲಾಗದ ಕಾರಣಗಳಿಂದ ನಾನು ದೂರವಿರಬೇಕು ಎಂಬುದು ನನ್ನ ತತ್ವವಾಗಿತ್ತು.

ಈ ಹೇಟ್ರೆಡ್ ಹಿಂದೆ ಕೆಲವು ನಿಜ ಅಂಶಗಳೂ ಇನ್ನು ಕೆಲವು ನಾನೇ ಕಲ್ಪಿಸಿಕೊಂಡವುಗಳೂ ಇರಲಿಕ್ಕೆ ಸಾಕು, ಕೈಲಾಗದವನು ಮೈಯೆಲ್ಲಾ ಪರಚಿಕೊಂಡನಂತೆ ಹಾಗೆ. ನಾನು ಯಾವುದನ್ನು ಬಹಳಷ್ಟು ದ್ವೇಷಿಸುತ್ತೇನೆಯೋ ಅದಕ್ಕೇ ನಾನು ಹೆಚ್ಚು ಹೆಚ್ಚು ಜೋತು ಬೀಳುವ ನಿದರ್ಶನ ಇವತ್ತು ನಿನ್ನೆಯದಲ್ಲ - ಆ ಪಟ್ಟಿಗೆ ಇಂದು ವಾಲ್‌ಮಾರ್ಟ್ ಅನ್ನೂ ಸೇರಿಸಿಕೊಂಡಿದ್ದೇನೆ. (ಆ ಪಟ್ಟಿಯ ಇನ್ನುಳಿದವುಗಳೆಂದರೆ - ನಾನು ಮದ್ರಾಸ್ ಅನ್ನು ಮನಸಾ ದ್ವೇಷಿಸಿದ್ದ ಪಾಡಿನಿಂದಾಗಿ ಮದ್ರಾಸಿನ ಹೊರವಲಯದಲ್ಲಿ ಹದಿನೆಂಟು ತಿಂಗಳು ಕಳೆಯುವಂತಾಗಿದ್ದು, ಅಮೇರಿಕದ ಹಾದಿಯೇ ಬೇಡವೆಂದವನಿಗೆ ಈಗ ಹತ್ತಿರ ಹತ್ತಿರ ಹನ್ನೆರಡು ವರ್ಷ "ವನವಾಸ" ತಾಗಿಕೊಂಡಿದ್ದು, ಬೆಂಗಳೂರಿನ ಕನ್ನಡಿಗರೋ, ದೇವಾ, ಅವರನ್ನು ನೀನೇ ಕಾಪಾಡಬೇಕು ಎಂದು ದ್ವೇಷಿಸಿದಂತೆ ಬೆಂಗಳೂರಿನ ಕನ್ನಡತಿಯೇ ನನ್ನ ಅರ್ಧಾಂಗಿಯಾಗಿದ್ದು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ). (ನಾನು ದ್ವೇಷಿಸಿದ್ದಲ್ಲ ಹತ್ತಿರವಾಗುತ್ತಿರುವ ನಿದರ್ಶನಗಳನ್ನು ಕಂಡರೆ ನಾಳೆಯಿಂದ ಮಿಲಿಯನ್ನುಗಟ್ಟಲೆ ಹಣಗೆಲ್ಲುವ ಲಾಟರಿ ಟೆಕೇಟ್ ಅನ್ನು ದ್ವೇಷಿಸಿದರೆ ಹೇಗೆ ಎನ್ನುವುದು ಈ ಹೊತ್ತಿನ ತತ್ವಗಳ ಉಪತತ್ವ, ಆ ಮಾತು ಬೇರೆ).

***

ಏಪ್ರಿಲ್, ೨೦೦೮ ರ ಹೊತ್ತಿಗೆಲ್ಲ ಒಂದು ಗ್ಯಾಲನ್ ಗ್ಯಾಸೋಲಿನ್ ಬೆಲೆ ಡಾಲರ್ 3.41 ಇದ್ದಿತ್ತು. ಅದು ಕ್ರಮೇಣ ನಂತರದ ಐದಾರು ತಿಂಗಳಲ್ಲಿ ಗ್ಯಾಲನ್‌ಗೆ ಡಾಲರ್ 3.99 ಆಗಿ ಹೋಗಿತ್ತು. ನಾನು ಒಮ್ಮೆ ನನ್ನ ಕಾರನ್ನು ಫಿಲ್ ಮಾಡಿಸಿದರೆ ಸುಮಾರು 65 ಡಾಲರ್ ಕೊಡಬೇಕಾದ ಪರಿಸ್ಥಿತಿ, ಎಲ್ಲರಂತೆ ನಾವೂ ಕೂಡ ಅನಗತ್ಯ ಪ್ರಯಾಣಗಳಿಗೆ ಕತ್ತರಿ ಹಾಕಿದ್ದೆವು. ಈ ಏರುತ್ತಿರುವ ಗ್ಯಾಸೋಲಿನ್ ಬೆಲೆಗೂ ಸ್ಯಾಮ್ಸ್‌ಕ್ಲಬ್ಬಿನಲ್ಲಿ ಮಾರುವ ಜೋಡಿ ಬ್ರೆಡ್ಡುಗಳ ಕಂತೆಗೂ ಎಲ್ಲೋ ಅವಿನಾಭಾವ ಸಂಬಂಧ. ಮೊದಲು ಜೋಡಿ ಬ್ರೆಡ್ ಲೋಫ್‌ಗೆ $2.07 ಇದ್ದಿದ್ದು ಮುಂದೆ $3.40 ಆಗಿ ಹೋಯಿತು. ಏನೇ ಆದ್ರೂ ಸ್ಯಾಮ್ಸ್‌ಕ್ಲಬ್ಬ್‌ನಲ್ಲಿ ದೊರೆಯುವ ಹಾಲು, ಬ್ರೆಡ್ಡುಗಳಷ್ಟು ಕಡಿಮೆ ಬೇರೆ ಯಾರೂ ಮಾರಲಿಕ್ಕಿಲ್ಲ. ಇಲ್ಲಿನ ಗೌಳಿಗರ ಮನೆಯಲ್ಲಿನ ಹಾಲೂ ಅದಕ್ಕಿಂತ ತುಟ್ಟಿಯಾಗಿದ್ದಿರಬಹುದು! ಮೊದಲೆಲ್ಲ, ಇಷ್ಟು ಎಕಾನಮಿ ಹದಗೆಟ್ಟಿರಲಿಲ್ಲ; ಒಂದು ವರ್ಷದ ಮೊದಲು ನನ್ನ ಪೋರ್ಟ್‌ಫೋಲಿಯೋ ಡಬಲ್ ಡಿಜಿಟ್ ಗೈನ್ ಮಾಡಿಕೊಂಡು ನಗುತ್ತಿತ್ತು (ಅವೆಲ್ಲ ಪೇಪರ್ ಹಣ ಮಾತ್ರ). 2008 ರ ಮಧ್ಯ ಭಾಗದಿಂದ ಶುರುವಾಯಿತು ನೋಡಿ ಕಷ್ಟಗಳು - ಒಂದೇ, ಎರಡೇ...ಬೇಕಾದಷ್ಟು. ನಾವು ಪೇ ಚೆಕ್ ನಂಬಿಕೊಂಡವರದೆಲ್ಲ ಆದಾಯ ಅಷ್ಟೇ, ಆದರೆ ಖರ್ಚು ಮಾತ್ರ ಮುಗಿಲೆತ್ತರ. ಈ ದಿನಗಳಲ್ಲೇ ಇರಬೇಕು ನಾನು ಬೇರೆಲ್ಲ ಅಂಗಡಿ ಮುಗ್ಗಟ್ಟುಗಳಿಗೆ ಹೋಗೋದನ್ನು ನಿಲ್ಲಿಸಿ ಇದ್ದುದರಲ್ಲಿ ಕಡಿಮೆ ಬೆಲೆಗೆ ಮಾರುವ ಸ್ಯಾಮ್ಸ್‌ಕ್ಲಬ್/ವಾಲ್‌ಮಾರ್ಟ್ ನಂಬಿಕೊಂಡಿದ್ದು. ಮುಂಬರುವ ದಿನಗಳು ಹೇಗೋ ಏನೋ, ಕೆಲಸವಿದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ - ಅದಕ್ಕಾಗಿ ಎಲ್ಲರೂ ಉಳಿಸುವವರೇ, ಮಿತವಾಗಿ ಖರ್ಚು ಮಾಡುವವರೇ. ನಮ್ಮ ಮನೆಗೆ ಹತ್ತಿರವಿರುವ ಎಕ್ಸಾನ್‌ನಲ್ಲಿ ಕೆಲಸ ಮಾಡುವ ಪಟೇಲ ಒಂದೇ ಶಿಫ್ಟಿನಲ್ಲಿ ಹದಿನೈದು ಸಾವಿರ ಡಾಲರ್ ವ್ಯಾಪಾರಮಾಡಿ ದೊಡ್ಡ ರೆಕಾರ್ಡ್ ಮಾಡಿದ್ದನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದ, ಆದರೆ ಇಲ್ಲಿ ಬರುವ ವಾಹನಗಳು ಕಡಿಮೆಯಾಗಿವೆ ಇತ್ತೀಚೆಗೆ ಅನ್ನೋದನ್ನೂ ಮರೆಯದೇ ಹೇಳಿದ್ದ. ಪಕ್ಕದಲ್ಲಿನ ಡಂಕಿನ್ ಡೋನಟ್ಸ್ ಅಂಗಡಿಯಲ್ಲಿ ನಾನು ಸರತಿ ಸಾಲಿನಲ್ಲಿ ನಿಂತಿರುವಂತೇ ಇಬ್ಬರು ತಮ್ಮ ಕೆಲಸ ಇತ್ತೀಚೆಗಷ್ಟೇ ಕಳೆದುಕೊಂಡಿದ್ದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೆ ಬಿತ್ತು - ಹೀಗೆ ಎಲ್ಲರದೂ ಕಷ್ಟದ ಪರಿಸ್ಥಿತಿ.

ಇನ್ನೊಬ್ಬರ ಕಷ್ಟಕ್ಕೆ ಲಘುವಾಗಿ ಸ್ಪಂದಿಸುವ ನಾನು, ಅವರ ಕಷ್ಟಗಳು ನನಗೇನಾದರೂ ಬಂದರೆ ಎಂದು ಯೋಚಿಸಿಕೊಂಡಂತೆಲ್ಲ ನನ್ನಲ್ಲಿ ಹಲವಾರು ಬದಲಾವಣೆಗಳಾಗ ತೊಡಗಿದವು: ನಮ್ಮ ಪಟ್ಟಣದ ಒಂದು ಫ್ಯಾಮಿಲಿ ಬೇಕರಿಗೆ ನಾನು ಭೇಟಿಕೊಡೋದನ್ನೇ ನಿಲ್ಲಿಸಿ ಬಿಟ್ಟೆ (ಖರೀದಿ ಮಾಡುವ ಸಾಮಾನುಗಳು ಬರೀ ಫ್ರೆಶ್ ಆಗಿದ್ದರೆ ಮಾತ್ರ ಸಾಲದು); ಅಗತ್ಯ ವಸ್ತುಗಳಿಗೆ ಈ ಕಡಿಮೆ ಬೆಲೆಯ ವಾಲ್‌ಮಾರ್ಟ್ ನಿಯಮಿತ ಭೇಟಿ ಕೊಡುವ ಸಂಗತಿಯಾಗಿ ಹೋಯಿತು; ಹೂವು/ಹಣ್ಣಿನ ಅಂಗಡಿಗಳಿಗೆ ಕಾಲಿಟ್ಟು ಎಷ್ಟೋ ತಿಂಗಳುಗಳಾಯಿತು; ಇಂಡಿಯನ್ ಫುಡ್ ಇಡುವ ಫಾಸ್ಟ್‌ಫುಡ್ ರೆಸ್ಟೋರೆಂಟುಗಳಿಗೆ ಇಂಡಿಯನ್ ಹೋಟೆಲುಗಳಿಗೆ ಹೋಗೋ ದಾರಿಯನ್ನೇ ಮರೆತದ್ದಾಯಿತು; ನನ್ನಲ್ಲಿ ಹುದುಗಿದ್ದ ಅಪ್ಪಟ ಕ್ಯಾಪಿಟಲಿಸ್ಟ್ ವಿರೋಧಿ ಮನಸ್ಥಿತಿ ಇತಿಹಾಸವಾಯಿತು; ಲೋಕಲ್ ಅಂಗಡಿಗಳು ಬದುಕಿದರೆಷ್ಟು ಬಿಟ್ಟರೆಷ್ಟು ಎನ್ನುವ ಧೋರಣೆ ತಲೆದೋರಿ ಮುಂದೆ ಅದೇ ಬದುಕಾಯಿತು; ಈ ಅಂಗಡಿಗಳಿಗೆ ಹೆಚ್ಚೆಚ್ಚು ಹೋಗಿ ಬಂದ ಫಲವಾಗಿ ಅಲ್ಲಿನ ಜಾಗೃತಿಯಂತಹ ಎಂಪ್ಲಾಯಿಗಳು ಪರಿಚಿತರಾದರು; ಆ ದೊಡ್ಡ ಅಂಗಡಿಗಳಲ್ಲೂ ಯಾವ ಯಾವ ವಸ್ತುವನ್ನು ಎಲ್ಲೆಲ್ಲಿ ಇಟ್ಟಿರುತ್ತಾರೆ ಎನ್ನುವ ಇಮೇಜ್ ತಲೆಯಲ್ಲಿ ಕೂತು ಹೋಯಿತು...ಹೀಗೆ ಅಥವಾ ಒಟ್ಟಾರೆ ನಾನು ಸಂಪೂರ್ಣ ವಾಲ್‌ಮಾರ್ಟ್ ಮಯವಾಗಿ ಹೋಗುವಂತಾಯಿತು.

***

ಅದಕ್ಕೇ ಹೇಳಿದ್ದು, ಈ ತತ್ವಗಳ ಹಣೇಬರಹವೇ ಇಷ್ಟು ಎಂದು. ನೀವು ಕೇಳಿಲ್ವೇ - ಆಚಾರ ಹೇಳೋರು ಬದನೇಕಾಯಿ ತಿನ್ನೋ ವಿಚಾರಾನ? ಈ ಬರಹ ಅದರ ಹಿಂದಿನ ಸ್ಪಂದಿಸೋ ಮನಸ್ಥಿತಿ ಇವೆಲ್ಲ ಬರೀ ಹೊಟ್ಟೆ ತುಂಬಿದ ಮೇಲಿನ ವಿಚಾರಗಳ ಆಟ್ರಿಬ್ಯೂಟ್ ಸಾರ್. ಅದ್ರಲ್ಲೇನು ಹುರುಳಿಲ್ಲ ಬಿಡಿ. ನಮ್ಮದು ನಮ್ಮ ತತ್ವ ಅಂತ ಜೋತು ಬೀಳೋದರ ಗುಂಗು ಹಾಗಿರಲಿ, ಗಾಳಿ ಬಂದಾಗ ತೋರಿಕೊಳ್ಳೋದೇ ಜಾಣತನವಾಗಿ ಹೋಗಿದೆ (ಅಷ್ಟು ಧಮ್ ಇದ್ರೆ ಗಾಳಿ ಇಲ್ದಾಗ ತೂರು ನೋಡೋಣ ಅನ್ನೋದು ಮತ್ತೊಂದು ದಿನದ ಚಾಲೆಂಜ್, ನಮಗೇ ನಾವು ಬೀಸುವ ಗಾಳಿಯನ್ನು ಸೃಷ್ಟಿ ಮಾಡೋ ತಾಕತ್ತಿದ್ದರೆ ತೂರೋ ಕಷ್ಟವೆಲ್ಲಿಂದ ಬರುತ್ತಿತ್ತು). ಆಫೀಸಿನಲ್ಲಿ struggle for existence ಆಗಿ ಹೋಗಿದೆ - ಕೆಲಸ ಕಳೆದುಕೊಂಡವರ ಬಗ್ಗೆ ಮೊದಲೆಲ್ಲ ಹಲ್ಲಿಯ ಹಾಗೆ ಲೊಚಗುಟ್ಟುತ್ತಿದ್ದವನಿಗೆ ಈಗ ಅವನು ಕಳೆದುಕೊಳ್ಳದಿದ್ದರೆ ಇನ್ಯಾರಾದರೂ (ನಾನೂ ಸೇರಿ) ಕಳೆದುಕೊಳ್ಳಬೇಕಿತ್ತು, ಅವನು ಹೋಗಿದ್ದೇ ಒಳ್ಳೆಯದಾಯ್ತು (ಎಲ್ಲಿ ನನ್ನ ಕುತ್ತಿಗೆಗೆ ಬಂದು ಬಿಡುತ್ತೋ ಎಂದು) ಎನ್ನುವ ಸಮಜಾಯಿಷಿ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುತ್ತೆ. ದುಡಿಮೆಯನ್ನು ನಂಬಿಕೊಂಡು ಬಂದ ನಮಗೆ ಇಲ್ಯಾರೂ ಇಲ್ಲಾ ಸಾರ್ ನಮ್ಮನ್ನು ಬಿಟ್ರೆ. ಊರಿನಲ್ಲಾದ್ರೆ ಆರಾಮಾಗಿ ಅಣ್ಣ ಅಕ್ಕನ ಮನೆಗೆ ಹೋಗಿ ಒಂದು ವಾರ ಇದ್ದು ಬರಬಹುದಿತ್ತು, ಇಲ್ಲಿ ಆ ಭಾಗ್ಯ ಇಲ್ಲ. ಕೆಲಸವನ್ನು ನಂಬಿಕೊಂಡು ಬದುಕೋ ನಮಗೆ ಅದೇ ಎಲ್ಲ - ನಮಗೆ ಕಣ್ಣು ತುಂಬಿ ಬರೋ ನಿದ್ರೆಯಿಂದ ಹಿಡಿದು ನಮ್ಮನ್ನು ಕಾಡುವ ಚಿಂತೆಗಳವರೆಗೆ ಕೆಲಸದ ಕುರಿತ ವಿಷಯಗಳ ಕಾರುಭಾರು. (ಹಾಗಿದ್ರೆ ಇದನ್ನೆಲ್ಲ ಬಿಟ್ಟು ಬಂದು ಬಿಡಿ, ಅನ್ನೋದು ಸುಲಭ - ಆ ಪ್ರಾಜೆಕ್ಟ್ ಕೈಗೂಡೋದಕ್ಕೆ ಕೊನೇಪಕ್ಷ ಒಂದು ವರ್ಷದ ತಯಾರಿ ಆದ್ರೂ ಬೇಕು).

ಅಷ್ಟೇ, ಮತ್ತೆನಿಲ್ಲ - ಈ ಹೊತ್ತಿನ ತತ್ವ ಅಂತ ಬರೆದೂ ಬರೆದೂ ಅವುಗಳ ಲಿಮಿಟೇಷನ್ನ್ ನಿಮಗೆ ಗೊತ್ತಾದ್ರೆ ಸಾಕು.

Sunday, November 23, 2008

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ


ವರ್ಷದ ಆಗಷ್ಟು ಎರಡರ ಮಧ್ಯಾಹ್ನ 1:11:25 (August 02, 08) ಇದ್ದ ನ್ಯಾಷನಲ್ ಸಾಲದ ಗಡಿಯಾರದ ಪ್ರಕಾರ US ನ ಪ್ರತಿಯೊಂದು ಫ್ಯಾಮಿಲಿಯ ದೇಶದ ಸಾಲದ ಪಾಲು ಸುಮಾರು 81 ಸಾವಿರ ಡಾಲರುಗಳು. ಟೈಮ್ ಸ್ಕ್ವಯರ್ ಹತ್ತಿರದಲ್ಲಿದ್ದ ಈ ಗಡಿಯಾರದ ಚಿತ್ರವನ್ನು ನಾನು ಬಹಳ ವರ್ಷಗಳಿಂದ ತೆಗೆಯಬೇಕು ಎಂದುಕೊಂಡರೂ ಆಗದಿದ್ದುದು ಕೊನೆಗೆ ೨೦೦೮ ರಲ್ಲಿ ಕೈಗೂಡಿತು, ಆದರೆ ಏನಾಶ್ಚರ್ಯ ಈ ಗಡಿಯಾರದ ಅವಧಿಯೂ ಮುಗಿಯುತ್ತ ಬಂದಹಾಗಿದೆಯಲ್ಲ ಎಂದುಕೊಂಡವನಿಗೆ ನನ್ನ ಊಹೆಗೆ ತಕ್ಕಂತೆ ಈ ಗಡಿಯಾರದ ಡಿಜಿಟ್ಟುಗಳೆಲ್ಲ "ಖಾಲಿ" ಆಗಿ ಮತ್ತೆ ಈ ಗಡಿಯಾರದ ಡಿಜಿಟ್ಟುಗಳನ್ನು ಹೆಚ್ಚಿಸಬೇಕಾಗಿ ಬಂದಿತೆಯಂತೆ. ಅಂದರೆ ಈ ದೇಶದ ಸಾಲ ಹತ್ತು ಟ್ರಿಲಿಯನ್ ಡಾಲರ್‌ಗಳಿಗೂ ಹೆಚ್ಚು!

ಈ ಗಡಿಯಾರದ ಮೂಲ Durst Organization ಹೇಳಿಕೆ ಪ್ರಕಾರ ಮುಂದಿನ ವರ್ಷ ಇದರಲ್ಲಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾರಂತೆ, ಹೀಗೆ ಹೆಚ್ಚಿಸುವ ಸಂಖ್ಯೆಗಳ ಬಳಕೆ ಇನ್ನೆಷ್ಟು ಬರುತ್ತದೋ ಕಾದು ನೋಡಬೇಕು.

ಅಂದಹಾಗೆ ಈ ಗಡಿಯಾರದ ಹಿಂದಿನ ತತ್ವವನ್ನು ಪಂಡಿತರಿಗೆ ಬಿಡೋಣ, ಅಂಥವರು ಈ ಬರಹದ ಓದುಗರ ಸಮುದಾಯದಲ್ಲಿದ್ದಲ್ಲಿ ನಮಗೂ ಒಂದಿಷ್ಟು ವಿವರವನ್ನು ತಿಳಿಸಬಾರದೇಕೆ?

Friday, November 21, 2008

ದೇವ್ರು ಇಲ್ಲಾ ಅಂತ ಅಂದೋರು ಯಾರು

ನಾವೆಲ್ಲಾ ಚಿಕ್ಕವರಿದ್ದಾಗ ದೇವ್ರು-ದೆವ್ವಗಳು ಇದ್ದಾವೋ ಇಲ್ಲವೋ ಅಂತ ಚಿಂತೆ-ಚಿಂತನೆ ನಡ್ಸಿ ನಡ್ಸಿ ಬಹಳ ಟೈಮು ಕಳೀತಿದ್ವಿ, ನಮ್ಮ ನಮ್ಮ ಮಟ್ಟಿನ ತತ್ವಗಳು ತರ್ಕಗಳು ನಮ್ಮನ್ನು ವಾದ-ವಿವಾದಗಳಲ್ಲಿ ತೊಡಗಿಸಿ ಕೆಲವೊಂದು ಕಥೆಗಳನ್ನು ಬಹಳ ರೋಚಕಗೊಳಿಸಿ (ಅಂದ್ರೆ ಮಸಾಲೆ ಸೇರಿಸಿ) ಹೇಳಿ ಹಂಚಿಕೊಳ್ಳುತ್ತಿದ್ದೆವು. ಪ್ರಪಂಚದಲ್ಲಿ ಇದ್ದ ಇಲ್ಲದ ದೆವ್ವ ಭೂತಗಳು, ಕೊಳ್ಳಿ ದೆವ್ವಗಳು ಇವೆಲ್ಲಾ ನಮ್ಮ ತಂಡದ ಅನುಪಸ್ಥಿತ ಸದಸ್ಯರಾಗಿದ್ದವು. ನಮ್ಮ ನಮ್ಮ ದೇವರುಗಳ ಜೊತೆಗೆ ನಮ್ಮೂರಿನ ಶ್ಮಶಾನದಲ್ಲಿದ್ದ ದೆವ್ವಗಳು ಹಾಗೂ ಅವುಗಳ ಕಥೆಗಳು ನಮ್ಮ ಜೊತೆಗೆ ಅಮೇರಿಕಕ್ಕೆ ಹೇಗೆ ಬಂದ್ವು, ಅವುಗಳಿಗೆ ವೀಸಾ ಕೊಟ್ಟೋರು ಯಾರು ಅನ್ನೋ ಪ್ರಶ್ನೆಗಳು ಇನ್ನು ಪ್ರಶ್ನೆಗಳಾಗೇ ಉಳಿದಿವೆ ಬಿಡಿ.

ಈ ತಣ್ಣನೆ ಹೊತ್ತಿನಲ್ಲಿ ದೇವ್ರ ಬಗ್ಗೆ ನೆನೆಸಿಕೊಳ್ಳೋದಕ್ಕೆ ಏನು ಕಾರಣ ಅಂತ ನನಗೇ ಅನ್ಸಿ ಒಂದು ನಗು ಹೊರಗೆ ಬಂತು, ಅದರ ಹಿಂದೇನೇ ದೇವ್ರ ಹೆಸರನ್ನ ಹಿಡಿದು ಒಂದಿಷ್ಟು ಕೀಟಲೆ ಮಾಡೋಣ ಅಂತ್ಲೂ ಅಂದುಕೊಂಡೆ, after all ಯಾವ ದೇವ್ರ ತಂಡವೂ ನಮ್ಮನ್ನೇನು sue ಮಾಡೋಲ್ಲ ಅಲ್ವೇ?

***

Thanks to my three year old - ಪ್ರತಿಯೊಂದು ಆಲ್ಟರ್‌ನೇಟ್ ಪದ ಇಂಚರಳ ಬಾಯಿಯಿಂದ ಹೊರಡೋದು "Why?" (but why, ಮತ್ತೆ ಅದಕ್ಕೆ ಅಮೇರಿಕನ್ ಆಕ್ಸೆಂಟಿನ ಟಚ್ ಜೊತೆ ಹಲವಾರು ವೇರಿಯೇಷನ್ನುಗಳೂ ಇವೆ!). ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋ ಹಿನ್ನೆಲೆ ಅಥವಾ ನೆಪದಲ್ಲಿ ಈ ಕೆಳಗಿನ ಪ್ರಶ್ನೆಗಳು ಅಷ್ಟೇ...(ತಮಾಷೆಗೆಂದು)

- ದೇವ್ರು ಬ್ಲಾಕೋ ವೈಟೋ ಅಥವಾ ಮಿಕ್ಸೋ? ಅಥ್ವಾ ಕಲರ್ಡ್ ಸ್ಕಿನ್ನೋ? ಹೌದೌದು, ರಾಮ-ಕೃಷ್ಣರ ಚಿತ್ರಗಳನ್ನು ನೋಡಿ ಸ್ವಲ್ಪ ನೀಲಿಯಾಗಿರುತ್ವೆ, ಶಿವನ ಕಂಠವೂ ಕೂಡಾ ನೀಲಿ.
- ಈ ಬ್ರಹ್ಮನ ತಲೆ ಕೂದಲನ್ನು ಕತ್ತರಿಸೋ ಪ್ರವೀಣ ಕಲಾವಿದ ಯಾರು? ಆ ನಾಲ್ಕು ತಲೆಗಳ ನಡುವೆ ಅವನ ಕತ್ತರಿ ಹೇಗೆ ಸಲೀಸಾಗಿ ಹರಿದಾಡುತ್ತೆ? ಯಾವ ಬಾಯಿಯಿಂದ ಹರಿಯೋ ಸಂವಾದಕ್ಕೆ ಆ ನಾಪಿತ ಯಾವ ಉತ್ತರ ಕೊಡ್ತಾನೆ?
- ಈ ನಾಲ್ಕು ಕೈ ಇರೋ ದೇವತೆಗಳಿಗೆ ಬಟ್ಟೆ ಹೊಲಿದು ಕೊಡೋರು (ಅಂದ್ರೆ ಡಿಸೈನರ್ಸ್) ಯಾರು?
- ಹತ್ತು ತಲೆ ಇರೋ ರಾವಣ ಯಾವ ಬಾಯಲ್ಲಿ ಅನ್ನಾ ಹಾಕ್ತಿದ್ದ?
- ಶಂಕರ ಕೋಪದಲ್ಲಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದ (why?), ಭಂಟರು ಹೋಗಿ ಉತ್ತರಕ್ಕೆ ತಲೆ ಹಾಕಿ ಮಲಗಿದ ಆನೆ ತಲೆಯನ್ನು ಕತ್ತರಿಸಿ ತಂದರು (why?), ಹಾರ್ಟು, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡೋದನ್ನ ಕೇಳಿದ್ದೇವೆ, ಪ್ರಾಣಿಯಿಂದ ಮನುಷ್ಯನಿಗೆ ತಲೆ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು ಯಾವ ಸರ್ಜನ್ನು? ಅನಸ್ತೇಷಿಯಾ ಕೊಟ್ಟೋರು ಯಾರು? ಆ ಬಾಲಕನ ಕಡಿದು ಹೋದ ತಲೆಯನ್ನೇ ಹುಡುಕಿ ಮತ್ತೇಕೆ ಜೋಡಿಸಲಿಲ್ಲ, ಆ ಆನೆಯ ಮುಂಡ ಏನಾಯ್ತು? ಇಡೀ ಬ್ರಹ್ಮಾಂಡದಲ್ಲಿ ಬರೀ ಅದೊಂದು ಬಡಪಾಯಿ ಆನೆ ಮಾತ್ರ ಉತ್ತರಕ್ಕೆ ತಲೆ ಹಾಕಿ ಮಲಗಿತ್ತೇ?
- ಈ ಕ್ಲೀನ್ ಶೇವನ್ನ್ ವಿಷ್ಣು ಬಳಸೋ ಬ್ಲೇಡ್ ಯಾವ್ದು? ಕೇವಲ ಶಿವ, ರಾಘವೇಂದ್ರ ಸ್ವಾಮಿ, ಹನುಮಂತ ಗಡ್ಡ ಬೆಳೆಸಿಕೊಂಡಿರೋ ಚಿತ್ರ ಮಾತ್ರ ನೋಡೋಕೆ ಯಾಕೆ ಸಿಗುತ್ತೆ?

ಈ ಮೇಲಿನ ಏನೆಲ್ಲ ಪ್ರಶ್ನೆಗಳು (ಹಾಗೂ ಅವುಗಳ ಉತ್ತರಗಳು) ಇದ್ರೂ ನಾವು ದೇವರನ್ನ ಘಟ್ಟಿಯಾಗಿ ನಂಬಿದವರೇ, ಪ್ರತಿನಿತ್ಯ ಶ್ರೀ ಗಣೇಶಾಯ ನಮಃ ಅಂದೇ ನಮ್ಮ ಜೀವನಗತಿಯನ್ನು ಆರಂಭಿಸುವವರೇ. ಈ ಪ್ರಶ್ನೆಗಳನ್ನ ನಾನು ಯಾವತ್ತೂ ಯಾರಿಗೂ ಕೇಳಿದ್ದಿಲ್ಲ (ಇಲ್ಲಿಯವರೆಗೆ), ಇವುಗಳೆಲ್ಲ ಹೀಗೆ ಬಾಲಿಶ ಅನ್ನಿಸಿದ್ರೂ ಪ್ರಶ್ನೆ ಕೇಳಬೇಕಾದ ವಯಸ್ಸಿನಲ್ಲಿ ಕೇಳಿದ್ರೆ ಉತ್ತರ ಕೊಡೋ ಬದಲು ’ಹೋಗೋ ತಲೆಹರಟೆ, ಅಧಿಕಪ್ರಸಂಗಿ...’ ಅಂತ ಯಾರಾದ್ರೂ ಬೈತಾರೆ ಅನ್ನೋ ಅವ್ಯಕ್ತ ಭಯವನ್ನು ಯಾರು ಹುಟ್ಟಿಹಾಕಿದ್ರೋ ಯಾರಿಗೆ ಗೊತ್ತು?

***

ಹೀಗೇ ಒಂದು ದಿನ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಮನೆಯಲ್ಲಿ ನಮ್ಮ ಮನೆಯ ಗೋಡೆಗಳಿಗೆ ಬಣ್ಣ ಹಚ್ಚೋಣ ಅನ್ನೋ ಆಲೋಚನೆ ಬಂದಿದ್ದೇ ತಡ ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನೆಲ್ಲ ಜೋಡಿಸಿಕೊಂಡು ಸುಸಜ್ಜಿತನಾದೆ, ಮೊದಮೊದಲು ಇದ್ದ ಉತ್ಸಾಹ ಕೆಲ್ಸಾ ಮಾಡ್ತಾ ಮಾಡ್ತಾ ಬತ್ತಿ ಹೋಗೋದರ ಜೊತೆಗೆ ದೊಡ್ಡ ತಲೆನೋವು ಇದು ಅನ್ನೋ ಭಾವನೆ ಬಲವಾಗಿ ಮುತ್ತಿಕೊಳ್ಳತೊಡಗಿತು. ದಿನಗಳೆದ ಮೇಲೆ ಇನ್ನೇನು ಸುಮಾರಾಗಿ ಎಲ್ಲ ಕೆಲ್ಸ ಮುಗಿದು ಫಯರ್ ಪ್ಲೇಸಿನ ಮೇಲೆ ಇದ್ದ ಗೋಡೆಯನ್ನು ಅರ್ಧ ಪೈಂಟ್ ಮಾಡುವ ಹೊತ್ತಿಗೆ ಅಚಾನಕ್ಕಾಗಿ ಏರ್‌ಪೋರ್ಟಿನಿಂದ ನನ್ನ ಸ್ನೇಹಿತನ ಕರೆ ಬಂತು.

’I am hungry, tired, jet lagged, cold - come and get me out of here!' ಅನ್ನೋ ಆಜ್ಞೆ. ನಮ್ಮ ಮನೆಯಿಂದ ಡಲ್ಲಸ್ ಏರ್‌ಪೋರ್ಟಿಗೆ ಕನಿಷ್ಠ ಒಂದು ಘಂಟೆ ದೂರ, ಮೊದಲೇ ಕೆಲಸ ಕಳ್ಳ ನಾನು (ಬಣ್ಣ ಹಚ್ಚೋ ಕೆಲಸ) ಒಂದು ನೆವ ಸಿಕ್ಕಿತೆಂದು ಕೆಲಸವನ್ನು ಅಲ್ಲೇ ಬಿಟ್ಟು ಏರ್‌ಪೋರ್ಟಿನ ಕಡೆ ಹೊರಟೆ. ನಾನು ಬರುವ ಹೊತ್ತಿಗೆ ಸುಮಾರು ಮೂರ್ನಾಲ್ಕು ಘಂಟೆ ಕಳೆದು ಹೋಗಿತ್ತು, ಟ್ರೇನಲ್ಲಿ ಇದ್ದ ಪೈಂಟೂ ಹಾಗೂ ನನ್ನ ರೋಲರ್ರುಗಳು, ಬ್ರಷ್ಷೂ ಇವೆಲ್ಲ ಒಣಗಿ ಹೋಗಿ ಉಪಯೋಗಕ್ಕೆ ಬಾರದವಾಗಿತ್ತು. ನೀರಿನಲ್ಲಿ ತೊಳೆದು ಅದೇನೇನು ಮಾಡಿದರೂ ಮೊದಲಿನ ಹಾಗೆ ಬಣ್ಣ ಹಚ್ಚಲು ಬಾರದವಾಗಿ ಹೋಗಿದ್ದವು. ಅದೇ ತಾನೆ ಮನೆಗೆ ಬಂದ ನನ್ನ ಸ್ನೇಹಿತನಿಗೆ ಸಹಸ್ರ ನಾಮ ಹಾಕುತ್ತಲೇ ಮತ್ತೆ ಇದ್ದ ಬದ್ದ ಒಣಗಿ ಕೃಶವಾದ ರೋಲರುಗಳಿಂದಲೇ ಬಣ್ಣ ಹಚ್ಚುವ ಬುದ್ಧಿವಂತ ಸಾಹಸಕ್ಕೆ ತೊಡಗಿದ್ದ ನನಗೆ ಬುದ್ಧಿ ಕಲಿಸುವ ಸಲುವಾಗಿ ಫೈಯರ್ ಪ್ಲೇಸಿನ ಮೇಲಿನ ಗೋಡೆಯ ಬಣ್ಣ ಬರೆಬರೆಯಾಗಿ ಹೋಯಿತು, ಮೊದಲು ಇದ್ದದ್ದಕ್ಕಿಂತಲೂ ಹಾಳಾಗಿ ಹೋಯಿತು. ಅದೂ ಸೆಮಿ ಗ್ಲಾಸ್ ಪೈಂಟು, ಅದರ ಸ್ಥಿತಿ ಇನ್ನೂ ಕಷ್ಟವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನನ್ನ ಎಲ್ಲ ಕರ್ಮಾಕರ್ಮಗಳನ್ನು ಹಳಿಯುತ್ತ ಇದನ್ನೆಲ್ಲ ಹೇಗೆ ಸರಿಪಡಿಸಲಿ ಎಂದು ಯೋಚಿಸುತ್ತಿದ್ದ ನನಗೆ ಮರುದಿನ ಬಹಳ ಆಶ್ಚರ್ಯವೊಂದು ಕಾದಿತ್ತು.

ನಮ್ಮ ಮಹಡಿಯ ಮನೆಯ ಮೇಲೆ ಆಟಿಕ್‌ನಲ್ಲಿ ಆ ವರ್ಷ ಇದ್ದ ಮಹಾನ್ ಛಳಿಯಲ್ಲಿ ನೀರಿನ ಪೈಪುಗಳು ಒಡೆದು ಹೋಗಿ ಒಂದೆರಡು ಮಹಡಿಗಳ ಮನೆಗಳಲ್ಲೆಲ್ಲಾ ನೀರು-ನೀರು ಹರಿದುಹೋಗಿತ್ತು. ಎರಡು ಮಹಡಿ ಕೆಳಗಿರುವ ನಮ್ಮ ಮನೆಯಲ್ಲೂ ನೀರಿನ ಪ್ರಭಾವ ಕಾಣುತ್ತಿತ್ತು. ವಿಶೇಷವೆಂದರೆ ನಮ್ಮ ಮನೆಯ ಎಲ್ಲಾ ಗೋಡೆಯನ್ನು ಹೊರತುಪಡಿಸಿ ಕೇವಲ ಆ ಫೈಯರ್ ಪ್ಲೇಸಿನ ಮೇಲೆ ನಾನು ಕೆಟ್ಟದಾಗಿ ಪೈಂಟ್ ಮಾಡಿದ್ದೆನಲ್ಲ, ಅಲ್ಲಿ ಮಾತ್ರ ನೀರಿನ ಕಲೆ ಬಿದ್ದಿತ್ತು! It is true, ನನ್ನ ಕಣ್ಣನ್ನೇ ನಾನು ನಂಬದ ನಿಜ!

Thanks to america, it is not my problem any more! ನಮ್ಮ ಕಾಂಡೋ ಅಸೋಸಿಯೇಷನ್ನಿನ್ನ ಇನ್ಷೂರೆನ್ಸ್ ಪಾಲಿಸಿಯ ದಯೆಯಿಂದ ಎಲ್ಲೆಲ್ಲಿ ನೀರಿನ ಡ್ಯಾಮೇಜ್ ಇತ್ತೋ ಅದನ್ನೆಲ್ಲ ಅಸೋಸಿಯೇಷನ್ನ್ ನವರು ಸರಿಮಾಡಿಸಿಕೊಟ್ಟರು, ನಮ್ಮ ಫಯರ್ ಪ್ಲೇಸಿನ ಗೋಡೆಯನ್ನೂ ಸೇರಿ! ಅವತ್ತೇ ಅಂದುಕೊಂಡಿದ್ದು ನಾನು, ನನ್ನ ಆಕ್ರಂದನ ಆದ್ಯಾವ ಮುಗಿಲು (celing) ಮುಟ್ಟಿತೋ ಆ ದೇವರು ಕಣ್ಣು ಬಿಟ್ಟು ನಮ್ಮ ಗೋಡೆಯ ಬಣ್ಣವನ್ನು ಸರಿ ಮಾಡಿಕೊಟ್ಟನಲ್ಲ ಎಂದು. ಅವತ್ತಿಂದ ಇವತ್ತಿನವರೆಗೆ ದೇವರು ಇದ್ದಾನೆ ಅಂತ್ಲೇ ಅಂದುಕೊಂಡಿರೋದು ನಾನು, ಆದ್ರೆ ಅವತ್ತಿನಿಂದ ಮುಗಿಲು ನೋಡಿ ಆರ್ತನಾಗಿ ಮೊರೆ ಇಡುವಾಗ ಮನೆಯಿಂದ ಹೊರಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ, the last thing you want is another broken water pipe in the middle of a winter - that is below freezing weather.

Sunday, November 16, 2008

ತುಮಕೂರಿನ ಶಾಲೆಯೂ ಬಡ್‌ಲೇಕಿನ ವೈನ್ ಅಂಗಡಿಯೂ...

ನವೆಂಬರ್ ಮಾಸದಲ್ಲಿ ಕನ್ನಡ-ಕನ್ನಡಿಗರ ಬಗ್ಗೆ ಬರೆಯದಿದ್ದರೆ ಅಪಚಾರವಾದಂತಲ್ಲವೇ?! ನಮ್ಮ ಕನ್ನಡಿಗರು ಯಾರು ಎಂದು ವ್ಯಾಖ್ಯಾನಿಸೋದು ಹಾಗಿರಲಿ, ದೇಶ-ವಿದೇಶಗಳ ಜನರಿಗೆ ವಿದ್ಯೆ ಹಂಚುವ ನಮ್ಮ ಕರುನಾಡಿನ ಸಂಸ್ಥೆಗಳಲ್ಲಿ ಓದಿದವರನ್ನು, ಕೊನೇಪಕ್ಷ ಕರ್ನಾಟಕದಲ್ಲಿ ಒಂದೈದು ವರ್ಷ ಕಳೆದವರನ್ನು ಕನ್ನಡಿಗರು ಎಂದು ನಾವು ಗಣನೆಗೆ ತೆಗೆದುಕೊಂಡಿದ್ದೇ ಆದರೆ ಐದು ಕೋಟಿ ಕನ್ನಡಿಗರ ಸಂಖ್ಯೆ ಬೆಳೆಯೋದಂತೂ ನಿಜ, ಆದರೆ ಕರ್ನಾಟಕದಲ್ಲಿ ಒಂದೈದು ವರ್ಷ ಓದಿ ಬೆಳೆದರೂ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಅನ್ನೋ ಅಷ್ಟು ಮಟ್ಟಿಗೆ ಮಾತ್ರ ನಮ್ಮಲ್ಲಿಯ ವಿಸಿಟರುಗಳಿಗೆ ಕನ್ನಡ ಕಲಿಸೋದು ನಮ್ಮ ಉದಾರತೆ ಅಲ್ಲದೇ ಮತ್ತಿನ್ನೇನು?

ನಾವಿರುವ ಫ್ಲಾಂಡರ್ಸ್ ಊರಿನ ಅದೇ ಮೌಂಟ್ ಆಲಿವ್ ಟೌನ್‌ಶಿಪ್‌ಗೆ ಹೊಂದಿಕೊಂಡಿಂತಿರುವ ಊರೇ ಬಡ್ ಲೇಕ್. ಒಂದು ಎಂಟು ಸಾವಿರ ಜನರಿರುವ ಪುಟ್ಟ ಊರು, ಇಲ್ಲಿ ನಾವು ಕೆಲವು ಅಂಗಡಿಗಳಿಗೆ ಹೋಗಿ ಬರೋದು ಇದೆ, ಅವುಗಳಲ್ಲಿ ಸ್ಯಾಂಡಿಸ್ ಡಿಸ್ಕೌಂಟ್ ಲಿಕರ್ ಶಾಪ್ (Sandy's) ಕೂಡಾ ಒಂದು. ನಾನು ಮೊದಲು ಹೋದಾಗ ಇದು ಭಾರತೀಯ ಮೂಲದವರೊಬ್ಬರು ನಡೆಸುತ್ತಿರುವ ಸಣ್ಣ ಬಿಸಿನೆಸ್ ಎಂದು ಗೊತ್ತೇ ಇರಲಿಲ್ಲ, ಆ ಬಗ್ಗೆ ತಲೆಕೆಡಿಸಿಕೊಂಡಿರಲೂ ಇಲ್ಲ. ನಂತರ ಭೇಟಿ ನೀಡಿದಾಗ ಅಂಗಡಿಯ ಓನರ್ ಅನ್ನು ಕೇಳಿಯೇ ಬಿಟ್ಟೆ (ನಮ್ಮ ಸಂಭಾಷಣೆ ಇಂಗ್ಲೀಷ್-ಹಿಂದಿ ಮಿಶ್ರ ಭಾಷೆಯಲ್ಲಿ ನಡೆಯುತ್ತಿತ್ತು) - ತಾವು ಎಲ್ಲಿಯವರು ಎಂಬುದಾಗಿ. ಅವರು ಗುಜರಾತಿನ ಮೂಲದವರು ಎಂಬುದು ಗೊತ್ತಾಯಿತು. ನನ್ನ ಬಗ್ಗೆ ವಿಚಾರಿಸಿದ್ದಕ್ಕೆ ನಾವು ಕರ್ನಾಟಕದವರು ಎಂದು ಪರಿಚಯಿಸಿಕೊಂಡೆ. ’ಕರ್ನಾಟಕದಲ್ಲಿ ಎಲ್ಲಿ?’ ಎಂದು ಕೇಳಿದ್ದಕ್ಕೆ ಆಶ್ಚರ್ಯವಾಗಿ ’ಶಿವಮೊಗ್ಗ’ ಎಂದು ಉತ್ತರಕೊಡಲು, ’I know that place!' ಎಂಬ ಉತ್ತರ ಬಂತು.

ಶಿವಮೊಗ್ಗದ ಬಗ್ಗೆ ಹೇಗೆ ಗೊತ್ತು ಎಂದು ಕೆದಕಿ ಕೇಳಲು, ಅವರು ತುಮಕೂರಿನ ಸಿದ್ಧಗಂಗಾ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದೂ ತಿಳಿಯಿತು. ಉದ್ದೇಶ ಪೂರ್ವಕವಾಗಿ ಕೇಳಿದ ನನ್ನ ಮುಂದಿನ ಪ್ರಶ್ನೆ - ಕನ್ನಡದ ಪೆನೆಟ್ರೇಷನ್ ಅಥವಾ ಪ್ರಚಾರದ ಬಗ್ಗೆ - ’ಹಾಗಾದರೆ ನಿಮಗೆ ಕನ್ನಡ ಬರುತ್ತೆ!’ ಎನ್ನುವುದಕ್ಕೆ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಎನ್ನುವ ಉತ್ತರ ಬಂತು. ಅವರ ಶ್ರೀಮತಿಯವರ ಹೆಸರು ಸಂಧ್ಯಾ ಎಂದು, ಅದನ್ನೇ ಬದಲಾಯಿಸಿ Sandy ಮಾಡಿಕೊಂಡಿದ್ದೂ ಗೊತ್ತಾಯಿತು.

***

ನಮ್ಮ ಹುಟ್ಟು-ಬೆಳವಣಿಗೆ-ವಿದ್ಯಾಭ್ಯಾಸ ಹಾಗೂ ನಾವು ಎಲ್ಲಿ (ಎಲ್ಲೆಲ್ಲಿ) ನೆಲೆಸುತ್ತೇವೆ ಎನ್ನೋದನ್ನು ಯೋಚಿಸಿಕೊಂಡಾಗ ಬಹಳಷ್ಟು ವಿಚಾರಗಳು ತಲೆತಿನ್ನತೊಡಗುತ್ತವೆ. ಭಾರತೀಯ ಸಂಜಾತ ಇಂಜಿನಿಯರ್ ಒಬ್ಬರು ಅಮೇರಿಕದ ಒಂದು ಸಣ್ಣ ಪಟ್ಟಣದಲ್ಲಿ ಡಿಸ್ಕೌಂಟ್ ಲಿಕರ್ ಎನ್ನುವ ಸ್ಮಾಲ್ ಬಿಸಿನೆಸ್ ನಡೆಸುತ್ತಿರುವುದು ಇಲ್ಲಿಯ ಚರ್ಚೆಯ ವಿಷಯ. ಪ್ರತಿಯೊಬ್ಬರದೂ ಅವರವರ ಜೀವನ ಶೈಲಿ - ಅದರಲ್ಲಿ ತಪ್ಪೇನೂ ಇಲ್ಲ.

ಇಲ್ಲಿಗೆ ನನಗೆ ಹೊಳೆದ ಅಂಶಗಳನ್ನು ಇಲ್ಲಿ ಬರೆದು ಹಾಕುತ್ತೇನೆ, ಅವುಗಳು ಯಾವುದೇ ರೀತಿಯ ಚರ್ಚೆಯನ್ನು ಮೂಡಿಸಲೂ ಬಹುದು, ಇರದೆಯೂ ಇರಬಹುದು:
- ನಾನು ಇಂಜಿನಿಯರ್ ಆಗುತ್ತೇನೆ ಎಂದು ಕನಸುಕಂಡು ಭಾರತೀಯ ವ್ಯವಸ್ಥೆಯಲ್ಲಿ ಇಂಜಿನಿಯರ್ ಆಗಿ ಹೊರಬಹುದಾದ ಪಧವೀದರನ ಹಿನ್ನೆಲೆ
- ಭಾರತದಲ್ಲಿ ಒಬ್ಬ ಇಂಜಿನಿಯರ್ ಅನ್ನು ಹೊರತರಲು ಸಮಾಜ ತೊಡಗಿಸುವ ಸಂಪನ್ಮೂಲಗಳು
- ಅಮೇರಿಕಕ್ಕೆ ಕನಸುಗಳನ್ನು ಹೊತ್ತುಕೊಂಡು ಬಂದು ಇಲ್ಲಿಯ ವ್ಯವಸ್ಥೆಯಲ್ಲಿ ಒಂದು ಸಣ್ಣ ಉದ್ಯಮವನ್ನು ಹುಡುಕಿಕೊಂಡು ಇಲ್ಲೇ ನೆಲೆಸುವ ನಿರ್ಧಾರವನ್ನು ಕೈಗೊಳ್ಳುವುದರ ಹಿಂದಿರುವ ಮನಸ್ಥಿತಿ
- ’ತಾನೇನು ಆಗಬೇಕು’ ಎನ್ನುವ ಗುರಿ ಹಾಗೂ ’ತಾನೆಲ್ಲಿ ತಲುಪಬಲ್ಲೆ / ತಲುಪಿದ್ದೇನೆ’ ಎನ್ನುವ ನಿಜ ಸ್ಥಿತಿಗಳ ವ್ಯತ್ಯಾಸ, if any
- ಅಮೇರಿಕದಲ್ಲಿದ್ದವರದೆಲ್ಲ ಗ್ರ್ಯಾಂಡ್ ಜೀವನವವಲ್ಲ ಎನ್ನುವ ಸಮಜಾಯಿಷಿ, ಒಂದು ಸಣ್ಣ ಉದ್ಯಮ ಬಹಳ ಫ್ರಾಫಿಟೆಬಲ್ ಆಗಿಯೂ ಇರಬಹುದು ಹಾಗೆ ಇರದಿರಲೂ ಬಹುದು
- ಹೀಗೆ ವಲಸೆಗಾರರಾಗಿ ಬಂದವರು ಮತ್ತು ಅವರ ಮುಂದಿನ ಸಂತತಿಗಳು ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ನೆಲೆನಿಲ್ಲಬಹುದಾದ ಬೆಳವಣಿಗೆ (ಒಬ್ಬ ಉದ್ಯಮದಾರ ಅಥವಾ ಪ್ರೊಫೆಷನಲ್ ಕುಟುಂಬದ ಹಿನ್ನೆಲೆಯವರ ಸಂತತಿ ಹಾಗೇ ಮುಂದುವರೆಯಬಹುದು ಎನ್ನುವ ಕಲ್ಪನೆಯ ವಿರುದ್ಧ ಹಾಗೂ ಪೂರಕವಾಗಿ)

***

’ನೀನು ದೊಡ್ಡವನಾದ ಮೇಲೆ ಏನಾಗ್ತೀಯೋ?’ ಅಂದ್ರೆ ನಾನಂತೂ ಮೊದಲೆಲ್ಲ ’ಪೈಲಟ್!’ ಅಂತಿದ್ದೆ. ನಮ್ಮ ವಂಶದವರು ಯಾವತ್ತೂ ಹತ್ತಿ ಕೂರದಿದ್ದ ಆಕಾಶಪಕ್ಷಿಯನ್ನು ನಡೆಸುವ ಕಾಯಕವೆಂದರೆ ಸುಮ್ಮನೆಯೇ? ಅವೆಲ್ಲ ನಾಲ್ಕನೇ ಕ್ಲಾಸು ಮುಗಿಸಿ ಮಾಧ್ಯಮಿಕ ತರಗತಿಗಳನ್ನು ತಲುಪುತ್ತಿದ್ದ ಹಾಗೆ ಬದಲಾದ ಹಾಗೆ ನೆನಪು. ನಾನು ಇವತ್ತು ನಡೆಸಿಕೊಂಡು ಬರುತ್ತಿರುವ ಪ್ರಾಜೆಕ್ಟ್ ಮ್ಯಾನೇಜರ್ ಕೆಲಸವನ್ನಂತೂ ನಾನೂ ಒಂದು ದಿನ ಮಾಡಿಕೊಂಡಿರುತ್ತೇನೆ ಎಂದು ಕನಸನ್ನಂತೂ ಕಂಡಿದ್ದಿಲ್ಲ ಆದರೆ ಎಲ್ಲೋ ಇದ್ದವನು ನಾನು ಇಲ್ಲಿಗೆ ಬಂದು ತಲುಪಿದ್ದು ಈ ಸ್ಥಿತಿಯಲ್ಲಿ ಈಗ ಇರೋದಂತೂ ನಿಜವೇ.

ನಮ್ಮ ಡೆಸ್ಟಿನಿ ನಮ್ಮ ಮೂಲ ಇವುಗಳ ಬಗ್ಗೆ ನಿಮಗಂತೂ ನಂಬಿಕೆ ಇದೆಯೋ ಇಲ್ಲವೋ. ಎಲ್ಲೋ ಅಹಮದಾಬಾದಿನ ಆಸುಪಾಸಿನಲ್ಲಿ ಹುಟ್ಟಿ ಬೆಳೆದು ತುಮಕೂರಿನಲ್ಲಿ ಪದವೀಧರನಾಗಿ ಮುಂದೆ ಈ ಬಡ್‌ಲೇಕಿನ ಅಂಗಡಿಯಿಂದ ಜನರಿಗೆ ಮದ್ಯ ಸರಬರಾಜು ಮಾಡುವ Sandy's Liquor ಅಂಗಡಿಯ ಮಾಲಿಕನ ನಸೀಬನ್ನು ನೆನೆದು ಹೀಗೆ ಬರೆಯಬೇಕಾಯಿತಷ್ಟೇ.

Tuesday, November 04, 2008

ಇತ್ತೀಚಿನ ಮೂರು ಬೆಳವಣಿಗೆಗಳು ಹಾಗೂ ಪ್ರತಿಕ್ರಿಯೆ

ದಿನಗಳಲ್ಲಿ ರೆಪ್ಪೆ ಮಿಟುಕಿಸುವುದರೊಳಗೆ ಏನೇನೆಲ್ಲ ಆಗಿ ಹೋಗೋ ಸಾಧ್ಯತೆಗಳಿರುವಾಗ ಪ್ರತಿಕ್ರಿಯೆಯನ್ನು ಒಡನೆಯೇ ದಾಖಲಿಸಬೇಕಾದ ಅಗತ್ಯ ಒಮ್ಮೊಮ್ಮೆ ಕಂಡು ಬರೋದು ನಿಜ. ಅಂದರೆ ಎಲ್ಲವೂ ಆಗಿ ಹೋದ ಮೇಲೆ ಅಲ್ಲಲ್ಲಿ ಸಿಗೋ ಪ್ರತಿಕ್ರಿಯೆ ವರದಿಗಳನ್ನು ಓದಿಕೊಂಡು ನಮ್ಮ ಅನಿಸಿಕೆ ಅಭಿಪ್ರಾಯವನ್ನು ದಾಖಲಿಸೋದು ಒಂದು ರೀತಿ, ಇಲ್ಲವೇ ಎಲ್ಲವೂ ಆಗಿ ಹೋಗುತ್ತಿರುವಾಗಲೇ ನಮ್ಮ ನಿಲುವು ಅಭಿಪ್ರಾಯವನ್ನು ದಾಖಲಿಸೋದು ಮತ್ತೊಂದು ರೀತಿ.

೧. ಉತ್ತರ ಅಮೇರಿಕದ ಮುಂದಿನ ಅಧ್ಯಕ್ಷರು ಯಾರು?
ನನ್ನ ಪ್ರಕಾರ ಸೆನೆಟರ್ ಮೆಕ್ಕೈನ್ ಪಾಪ್ಯುಲಾರಿಟಿ ಮತವನ್ನು ಗೆಲ್ಲದಿದ್ದರೂ ಟ್ರೆಡಿಷನಲ್ ರಿಪಬ್ಲಿಕನ್ ಪಕ್ಷದ ಸ್ಟ್ರಾಂಗ್‌ಹೋಲ್ಡ್ ದೆಸೆಯಿಂದ ಹಾಗೂ ಇಂಡಿಯಾನ, ಫ್ಲೋರಿಡಾ, ಒಹಾಯೋ, ಪೆನ್ಸಿಲ್‌ವೇನಿಯಾ ಮೊದಲಾದ ಸ್ವಿಂಗ್ ಸ್ಟೇಟ್‌ಗಳಲ್ಲಿ ಬೇಕಾದ ಮತವನ್ನು ಗಳಿಸಿದ್ದೇ ಆದರೆ ಮುಂದಿನ ಪ್ರೆಸಿಡೆಂಟ್ ಆಗುವುದು ಖಂಡಿತ.

ಸದ್ಯದ ಸಮೀಕ್ಷೆಗಳ ಪ್ರಕಾರ ಸೆನೆಟರ್ ಒಬಾಮಾ ಪಾಪ್ಯುಲರ್ ಮತವನ್ನು ಗೆಲ್ಲುವಂತೆ ಕಂಡರೂ ಮತ್ತೆ ಈ ಸ್ವಿಂಗ್ ಸ್ಟೇಟ್‌ಗಳಲ್ಲಿಯ ಮತವೇ ಮುಖ್ಯವಾಗುತ್ತದೆ. ಈ ವರ್ಷದ ಚುನಾವಣೆಯಲ್ಲಿ ಬಹಳ ಹೆಚ್ಚಿನ ಜನರು ಮತಕಟ್ಟೆಗಳಿಗೆ ಬರುತ್ತಿರುವುದನ್ನು ನೀವೂ ಗಮನಿಸಿರಬಹುದು. ಮೊಟ್ಟ ಮೊದಲನೇ ಬಾರಿಗೆ ಅಮೇರಿಕಕ್ಕೆ ಆಫ್ರಿಕನ್ ಅಮೇರಿಕನ್ ಪ್ರೆಸಿಡೆಂಟ್ ಇರಲಿ ಎಂದು ಎಷ್ಟೋ ಜನರು ಪೋಲ್‌ಗಳಲ್ಲಿ ಹೇಳಿದ್ದರೂ ಸಹ ಕೆಲವರ ಮನಸ್ಸಿನಲ್ಲಿ ತಮ್ಮನ್ನು ರೇಷಿಯಲ್ ಎಂದು ತಿಳಿದುಕೊಳ್ಳದಿರಲಿ ಎಂದು ಸುಳ್ಳು ಸಮೀಕ್ಷೆಗಳಿಗೆ ಉತ್ತರ ಕೊಟ್ಟಿರಬಹುದು ಎಂಬ ಸಂದೇಹವೂ ಮನಸ್ಸಿನಲ್ಲಿದೆ.

ಚುನಾವಣೆಯ ಉತ್ತರವೇನಾದರೂ ಇರಲಿ - ಆಫ್ರಿಕನ್ ಅಮೇರಿಕದ ಮೂಲದ ಪ್ರೆಸಿಡೆಂಟ್ ಚುನಾಯಿತರಾದಲ್ಲಿ ಅಮೇರಿಕದ ಜನರ ಮನೋವೈಶಾಲ್ಯತೆಯನ್ನು ಜಗತ್ತಿಗೆ ಸಾರುವುದರ ಜೊತೆಗೆ ಉತ್ತರ ಅಮೇರಿಕದ ಕಾಂಗ್ರೆಸ್, ಸೆನೆಟ್ ಹಾಗೂ ಪ್ರೆಸಿಡೆನ್ಸಿ ಎಲ್ಲವೂ ಡೆಮೋಕ್ರಾಟ್‌ಮಯವಾಗುವುದು ನಿಜ. ಅಲ್ಲದೇ ಯಾವ ಪ್ರೆಸಿಡೆಂಟ್ ಹಾಗೂ ಸರ್ಕಾರ ಮುಂದೆ ಬಂದರೆ ನಮ್ಮ ದೇಶಕ್ಕೆ ಅದರಿಂದ ಏನು ಅನುಕೂಲ/ಅನಾನುಕೂಲ ಎನ್ನುವುದು ಇನ್ನೂ ದೊಡ್ಡ ಪ್ರಶ್ನೆ.

೨. ಕನ್ನಡ ಹಾಗೂ ಶಾಸ್ತ್ರೀಯ ಸ್ಥಾನಮಾನ
ಓಹ್, ಉತ್ತರ ಅಮೇರಿಕದಿಂದ ನೇರವಾಗಿ ಕರ್ನಾಟಕ್ಕೆ ಬರೋಣ. ತಮಿಳರ ಭಾಷಾ ವ್ಯಾಮೋಹ ಹಾಗೂ ಅವರು ಅಳವಡಿಸಿಕೊಂಡ ತಂತ್ರಗಳು ಕನ್ನಡದ ಔದಾರ್ಯಗಳಿಗೆ ಅನ್ವಯವಾಗುವಲ್ಲಿ ಇಷ್ಟು ಕಾಲ ಬೇಕಾಯಿತು. ಈ ಬೆಳವಣಿಗೆ ನಿಜವಾಗಿಯೂ ಸ್ವಾಗತಾರ್ಹ. ನಮಗೂ ನಮ್ಮತನವಿದೆ, ನಮ್ಮ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಸಿಗುವ ಮನ್ನಣೆ, ಕನ್ನಡ ಸಂಬಂಧಿ ಯೋಜನಗೆಗಳು ಅಭಿವೃದ್ಧಿಗಳು ಇವೆಲ್ಲವೂ ನಮಗೆ ಬೇಕಾಗಿತ್ತು. ಕೊನೆಗೆ ಏನಿಲ್ಲವೆಂದರೂ ೨೦೦೮ ರಲ್ಲಾದರೂ ಕೇಂದ್ರದ ಅಸ್ತು ಸಿಕ್ಕಿತಲ್ಲ ಅದು ಮುಖ್ಯ.

೩. ಭಾರತ ಹಾಗೂ ನ್ಯೂಕ್ಲಿಯರ್ ಎನರ್ಜಿ ಸಂಬಂಧಿ ಬೆಳವಣಿಗೆಗಳು
ಇತ್ತೀಚೆಗಷ್ಟೇ ಅಮೇರಿಕದ ಅಪ್ರೂವಲ್ ಮೊಹರನ್ನು ಒತ್ತಿಕೊಂಡ ಕಾಗದ ಪತ್ರಗಳು ಹಾಗೂ ಮನಮೋಹನ್ ಸಿಂಗ್ ಆಡಳಿತಕ್ಕೆ ಸಿಕ್ಕ ಜಯ ವಿಶ್ವದಾದ್ಯಂತ ಭಾರತವನ್ನು ನ್ಯೂಕ್ಲಿಯರ್ ಅಪ್ರೂವ್ಡ್ ದೇಶವನ್ನಾಗಿ ನೋಡಲು ಸಹಾಯ ಮಾಡಿದವು. ಈ ಹಿಂದೆ ಅಂತರಂಗದಲ್ಲಿ ಬರೆದ ಹಾಗೆ ಹೆಚ್ಚಿನ ಎನರ್ಜಿ ಬೇಡಿಕೆಗೆ ನ್ಯೂಕ್ಲಿಯರ್ ಮೂಲ ಬೇಕೇ ಬೇಕು ಎನ್ನುವ ಪರಿಸ್ಥಿತಿ ಇರುವಾಗ ಕನ್ವೆನ್ಷನಲ್ ಹಾಗೂ ಉಳಿದ ಸೋರ್ಸ್‌ಗಳ ಜೊತೆ ನ್ಯೂಕ್ಲಿಯರ್ ತಂತ್ರಜ್ಞಾನವನ್ನು ನಾವು ಬಳಸುವಂತಾಗುವುದು ಬಹಳ ಮಹತ್ವದ ವಿಷಯ ಹಾಗೂ ಬೆಳವಣಿಗೆ. ನಾವೆಲ್ಲ ಮುಂದೆ ಏನಾಗುವುದೋ ಎಂದು ಕಾದು ನೋಡಬೇಕಷ್ಟೆ.

Friday, October 31, 2008

ಗಂಟಲ ಒಳಗಿನ ಪದಗಳು

ನಾವೆಲ್ಲ ಹಾಗೇ ನಮ್ಮ ಬಾಯಲ್ಲಿ ಪದಗಳೇ ಹೊರಡೋದಿಲ್ಲ, ಯಾರೋ ನಮ್ಮ ಗಂಟಲಿನಲ್ಲಿ ಶವೆಲ್ಲನ್ನು ತೆಗೆದು ಪದಗಳನ್ನು ಗೋಚಿ ಬದಿಗೆ ಎತ್ತಿ ಹಾಕಿದ ಹಾಗೆ ಒಂದು ರೀತಿ ಛಳಿಗಾಲದಲ್ಲಿ ರಸ್ತೆಯ ಬದಿ ಗೋಚಿಹಾಕಿದ ಬಿಳಿಯ ಹಿಮದಂತೆ. ನಮ್ಮಲ್ಲಿನ ಪದಗಳೋ ಹಿಮದ ಹಾಗೆ ಕಪ್ಪು ಮಣ್ಣಿನ ಬಣ್ಣ ಕಂಡು ಬಿಸಿಲಿಗೆ ಕರಗಿ ಮತ್ತೆ ನೀರಾಗಿ ಇಂದಲ್ಲ ನಾಳೆ ಮತ್ತೆ ಬಿಳಿಯ ಹಿಮವಾಗುವ ಪ್ರಕ್ರಿಯೆಯಂತೆ ಹಿಂದೆ ಬಾರದೇ ಎಲ್ಲೋ ಅನತಿ ದೂರದ ಮೋಡಗಳ ಹಾಗೆ ದೂರವೇ ಉಳಿದು ಬಿಡುತ್ತವೆ. ನಾವು ನಮ್ಮ ಭಾಷೆ ನಮ್ಮತನವೆನ್ನುವುದು ಪದೇ ಪದೇ ಅವುಗಳ ಅಸ್ತಿತ್ವವನ್ನು ಹುಡುಕಿಕೊಳ್ಳುವ ಎಂದೂ ಮುಗಿಯದ ಲೂಪ್‌ನಲ್ಲಿ ಸೇರಿಕೊಂಡು ಮತ್ತೆ ಬರೋದೇ ಇಲ್ಲ.

ನಮಗೆ ನಮ್ಮತನ ನಮ್ಮದರ ನಡುವೆ ಇರೋದು ಭಾಷೆಯ ಸಮಸ್ಯೆಯೋ, ಅಭಿರುಚಿಯ ಸಮಸ್ಯೆಯೋ ಅಥವಾ ನಮ್ಮ ಸಂಸ್ಕೃತಿಯೇ ಹಾಗೋ? ಇಲ್ಲಿ ದಿನಕ್ಕೆ ನೂರು ಬಾರಿ ’ಧನ್ಯವಾದಗಳು’ ಎಂದು ಒಣಗಂಟಲಿನಲ್ಲಿ ಅನ್ನುವ ನಾವು ನಮ್ಮೂರುಗಳಲ್ಲಿ ಅಂದದ್ದಿಲ್ಲ. ಎಂದೋ ಯಾರದ್ದೋ ಕೈ ಹಿಡಿದುಕೊಂಡು ಕೃತಾರ್ಥರಾಗಿದ್ದೇವೆ, ನಿಂತು ಹೋದ ಮದುವೆಯನ್ನು ನಡೆಸಿಕೊಟ್ಟವರ ಕುರಿತು ಕನ್ಯಾಪಿತೃಗಳು ಗದ್ಗದರಾದ ಹಾಗೆ ಮಂಜುಕಣ್ಣಿನವರಾಗಿದ್ದೇವೆ, ದೊಡ್ಡವರು-ದೇವರ ಮುಂದೆ ಆರ್ತರಾಗಿದ್ದೇವೆ, ಅಷ್ಟೇ. ನಮ್ಮೂರಿನ ಮೇಷ್ಟ್ರುಗಳೋ ಬರೀ ಬೈಯುತ್ತಲೇ ಕಲಿಸುತ್ತಾ ಹೋದರು, ಬೈಗಳು ಮಾಮೂಲಿ ಸಂವಹನಾ ಶಬ್ದಗಳಾದವು. ನಮ್ಮ ಹಿರಿಯರು ನಮ್ಮನ್ನು ಕಣ್ಣಿನಿಂದಲೇ ಹೆದರಿಸುತ್ತಾ ಬಂದರು, ಅವರನ್ನು ನೋಡಿದಾಗಲೆಲ್ಲ ತಾಯ ಮಡಿಲಿನಲ್ಲಿ ಮಗು ಕಂಡು ಕೇಳರಿಯದ ಗುಮ್ಮನ ಹೆಸರನ್ನು ಕೇಳಿ ಮುದುರಿಕೊಳ್ಳುವ ಹಾಗೆ ಮಾಡಿದರು, ಶಕ್ತಿ ಸಾಧಿಸುವವರು ಸಾಧಿಸಿ ತೋರಿಸಿದರು, ಇಲ್ಲದವರು ಇದ್ದವರ ವ್ಯತ್ಯಾಸವನ್ನು ಗುರುತಿಸುತ್ತಲೇ ಬಂದರು.

ನಮ್ಮ ಭಾಷೆ, ಪದ ಬಂಡಾರ ಬೆಳೆಯಲೇ ಇಲ್ಲ. ನಮ್ಮ ಸ್ನೇಹಿತರು ವಾರಿಗೆಯವರು ಇಂಗ್ಲೀಷೇ ಸರ್ವಸ್ವ ಎಂದುಕೊಂಡು ಊಟ ಮಾಡಿದವರು ಕೈತೊಳೆದುಕೊಂಡಷ್ಟು ಸಲೀಸಾಗಿ ಉತ್ತಮವಾಗೇ ಮಾತನಾಡುತ್ತಿದ್ದ ಕನ್ನಡವನ್ನು ಮರೆತು, ಹರಿದು-ಬೆರೆತು-ಅರಿಯದೇ ಇಂಗ್ಲೀಷಿಗೆ ತೊಡಗಿಕೊಂಡರು. ನಮ್ಮ ಸಹಪಾಠಿಗಳಿಗಾಗಲೇ ಇಂಗ್ಲೀಷು ಓದಿನ ಹುಚ್ಚು ಹತ್ತಿ ಹೋಗಿತ್ತು, ಇಂಗ್ಲೀಷು ಸಿನಿಮಾಗಳು ಸರ್ವವ್ಯಾಪಿಗಳಾಗಿ ಹೋಗಿದ್ದವಾಗಲೇ. ಕನ್ನಡ ಸಿನಿಮಾಗಳ ಕೌಟುಂಬಿಕ ಚಿತ್ರಣಕ್ಕೆ ಮೀರಿ ನಮ್ಮ ಪಡ್ಡೆತನಕ್ಕೆ ಇಂಗ್ಲೀಷಿನ ಬೆತ್ತಲೆ ಚೆಲುವೆಯರು ಉತ್ತರ ಕೊಡತೊಡಗಿದ್ದರು, ನಮಗೆ ಗೊತ್ತಿಲ್ಲದೇ ನಾವೇ ಮಾರು ಹೋಗಿದ್ದೆವು - ನಮ್ಮ ಭಾಷೆ, ಔಚಿತ್ಯ, ಗಾಂಭೀರ್ಯತೆಯನ್ನು ಮೀರಿ ಮತ್ತೆಂದೂ ಹಿಂದೆ ಬರದಷ್ಟು ದೂರಕ್ಕೆ. ನಾವು ಬಳಸುವ ಶಾಲೆ ಮೇಜು ಪಡಸಾಲೆ ಕಾಲುಚೀಲ ಎನ್ನುವ ಪದಗಳು ನಮ್ಮ ಓರಗೆಯವರ ಹುಬ್ಬೇರುವುದಕ್ಕೆ ಕಾರಣವಾದವು. ಈ ಕಡೆ ಕನ್ನಡವನ್ನೂ ಓದದ ಆ ಕಡೆ ಇಂಗ್ಲೀಷನ್ನೂ ಸರಿಯಾಗಿ ತಿಳಿಯದವರ ಜೊತೆ ನಾವು ಕನ್ನಡವನ್ನು ಬಲ್ಲ ಕೆಲವರು ಅಲ್ಪರಾದೆವು. ನಮ್ಮೊಳಗೆ ನಾವು ಅಂತರ್ಮುಖರಾಗಿಕೊಂಡು ವರ್ಷಕ್ಕೊಮ್ಮೆ ಕಷ್ಟಪಟ್ಟು ಸಂಪಾದಿಸಿಕೊಳ್ಳುವ ಕಾಲೇಜು ವಾರ್ಷಿಕೋತ್ಸವದ ಮ್ಯಾಗಜೀನಿನಲ್ಲಿ ಒಂದು ಕವನ ಲೇಖನ ಬರೆಯುವಷ್ಟರಲ್ಲಿ ಸ್ಖಲಿತರಾಗಿ ಹೋಗುವಲ್ಲಿ ನಮ್ಮ ಅಂತಃಸತ್ವ ಮಿತಗೊಂಡಿತು. ಹಾಗೆ ಬರೆದ ಲೇಖನ ನಮ್ಮ ನಡುಗೆ ಉಡುಗೆ ಮಾತುಕಥೆಗಳು ಓರಗೆಯವರಿಗೆ ಗಾಂಧೀತನವಾಗಿ ಕಂಡಿತು. ರೆಟ್ಟೆಗಳನ್ನು ಬಲಿಸಿಕೊಳ್ಳದ ನಾವು ಮಿದುಳನ್ನು ಬಲಿಸಿಕೊಳ್ಳುವತ್ತ ವಾಲಿಕೊಂಡಾಗ ರೆಕ್ಕೆ ಬಲಿತ ಕೆಲವು ಪಡ್ಡೆ ಹುಡುಗರು ನಮ್ಮಕ್ಕ ತಂಗಿಯರನ್ನು ಕೀಟಲೆ ಮಾಡಿ ನಕ್ಕರೆ ಅವರಿಗೆರಡೇಟು ಬಿಡದಿರುವುದು ಮೇಲ್ನೋಟಕ್ಕೆ ಆದರ್ಶವೆಂದುಕೊಂಡರೂ ಅದು ನಮ್ಮ ಕೈಲಾಗದ ಮಾತು ಎನ್ನುವುದು ನಮ್ಮ ಹೊಟ್ಟೆಯಲ್ಲೇ ಹುಟ್ಟಿ ಸತ್ತ ಸತ್ಯವಾಗಿ ಹೋಗಿತ್ತು.

***

ಹೀಗೇ ಒಂದು ತಣ್ಣನೆ ಸೋಮವಾರದ ಸಂಜೆ. ಅಮೇರಿಕದಲ್ಲಿ ನಮ್ಮ ಬದುಕಿನ ಸುಗಮ ಸಂಗೀತವೆನ್ನುವುದು ಆರಂಭ ಹಾಗೂ ಅಂತ್ಯವಾಗುವುದು ವಾರಾಂತ್ಯಗಳಲ್ಲೇ ಎಂದು ಯಾರೋ ಬರೆದು ಶಾಸನ ಮಾಡಿಟ್ಟು ಹೋದ ಹಾಗಿದ್ದುದನ್ನು ಉಲ್ಲಂಘಿಸಿ ಸೋಮವಾರ ಆಫೀಸಿನ ತರುವಾಯ ನಡೆದ ಮುಖಾಮುಖಿ ಮಾತುಕಥೆಯೊಂದರಲ್ಲಿ ಜಯಂತ ಕಾಯ್ಕಿಣಿ ನನ್ನನ್ನು ಕೇಳಿದರು, ’ನಿಮ್ಮ ತಲೆಮಾರುಗಳಲ್ಲಿ ಮೇಷ್ಟ್ರುಗಳೇ ಇಲ್ಲ, ಭಾರತದಲ್ಲಿ ಚೆನ್ನಾಗಿ ಅಂಕಪಡೆದ ಎಲ್ಲರೂ ಉದ್ಯಮವನ್ನು ಕುರಿತ ಶಿಕ್ಷಣವನ್ನು ಪಡೆಯಲು ಸ್ಪರ್ಧಿಸಿದಂತೆ ಮೂಲ ಶಿಕ್ಷಣ - ಹ್ಯುಮಾನಿಟೀಸ್, ಬೇಸಿಕ್ ಸೈನ್ಸ್, ಎಜುಕೇಷನ್, ಆರ್ಥಶಾಸ್ತ್ರ ಮುಂತಾದವುಗಳು - ಎನ್ನುವುದನ್ನು ಕಲಿಯುವರೂ ಇಲ್ಲ, ಕಲಿಸುವವರೂ ಇಲ್ಲ. ಹೀಗಾದರೆ ಮುಂಬರುವ ತಲೆಮಾರು ಹೇಗಿದ್ದಿರಬಹುದು?’

ನಾನೆಂದೆ, ’ಬೇಕಾದಷ್ಟು ಹೊಸ ಶಾಲೆಗಳಿವೆ, ಖಾಸಗಿಯವರು ಜೋರಾಗಿಯೇ ಇದ್ದಾರೆ, ಇವುಗಳ ನಡುವೆ ಗುರುಗಳೇ ಇಲ್ಲವೇ?’

ಅವರೆಂದರು, ’ಇಲ್ಲ, ಚೆನ್ನಾಗಿ ಓದುವವರು ವೃತ್ತಿನಿರತ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡರೆ ಉಳಿದ ಶಿಕ್ಷಣ ಕ್ಷೇತ್ರಗಳಿಗೆ ಕಾಲಿರುಸುವವರು ಮೊದಲಿನವರು ಕಷ್ಟಪಡುತ್ತಿದ್ದಷ್ಟಂತೂ ಕಷ್ಟಪಡುತ್ತಿಲ್ಲ.’

ಇದು ನಿಜ, ನಾವು ಹತ್ತನೇ ತರಗತಿ ಪಾಸ್ ಮಾಡುತ್ತಿದ್ದ ಹೊತ್ತಿಗೇನೇ ಫಸ್ಟ್ ಕ್ಲಾಸ್ ಪಡೆದವರು ಪಿಯುಸಿ ಸೈನ್ಸ್ ಅಥವಾ ಡಿಪ್ಲೋಮಾ ವಿಭಾಗ, ಸೆಕೆಂಡ್ ಹಾಗೂ ಥರ್ಡ್ ಕ್ಲಾಸ್ ಪಾಸ್ ಮಾಡಿದವರು ಕಾಮರ್ಸ್ ಅಥವಾ ಆರ್ಟ್ಸ್ ತೆಗೆದುಕೊಳ್ಳುತ್ತಿದ್ದುದು ಸಹಜವಾಗಿತ್ತು. ಅಲ್ಲಲ್ಲಿ ಎಕ್ಸೆಪ್ಷನ್ನುಗಳನ್ನು ನೋಡಿದ್ದೇನೆ, ತುಂಬ ಬುದ್ಧಿವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮಗೆ ಬೇಕಾದ ವಾಣಿಜ್ಯ, ಅರ್ಥಶಾಸ್ತ್ರವನ್ನು ತೆಗೆದುಕೊಂಡು ಅದನ್ನು ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗಿಂತಲೂ ಅವರೇ ಹೆಚ್ಚು ಓದಿಕೊಂಡಿದ್ದ ಪ್ರಸಂಗಗಳನ್ನು.

ಕಾಯ್ಕಿಣಿಯವರ ನಡುವಿನ ಮಾತುಕಥೆಯಲ್ಲಿ ಮತ್ತೊಂದು ವಾಸ್ತವಾಂಶ ಸ್ಪಷ್ಟವಾಗಿತ್ತು: ಇಂದಿನ ಜನ ಅದೆಷ್ಟು ಬೇಗ ಪ್ರತಿಫಲವನ್ನು ಆಶಿಸುತ್ತಾರೆ ಎಂಬುದು ಆಶ್ಚರ್ಯ ಮೂಡಿಸಿತ್ತು. ಟಿವಿ ಕಾರ್ಯಕ್ರಮಗಳಿಗೆ ತಯಾರಾಗಲೆಂದೇ ಮಕ್ಕಳಿಗೆ ಸಂಗೀತ ಕಲಿಸಿಕೊಡುವ ವ್ಯವಸ್ಥೆ ಹುಟ್ಟಿದೆ, ಒಂದು ವಾರ-ತಿಂಗಳು ಅಥವಾ ಕೆಲವೇ ತಿಂಗಳುಗಳಲ್ಲಿ ಮಕ್ಕಳಲ್ಲಿ ಸಂಗೀತವನ್ನು ತುಂಬುತ್ತೇವೆನ್ನುವ ಗ್ಯಾರಂಟಿ ಕೊಡುವ ವ್ಯವಸ್ಥೆ ಬಂದಿದೆ ಅಥವಾ ಹಾಗಿರುವುದಕ್ಕೆ ಡಿಮ್ಯಾಂಡ್ ಇದೆ ಎನ್ನುವ ಮಾತು ಆಶ್ಚರ್ಯ ಮೂಡಿಸಿತ್ತು. ಎಲ್ಲವೂ ವೇಗವಾಗಿ ಆಗಬೇಕೆನ್ನುವ ವ್ಯವಸ್ಥೆಯಲ್ಲಿ ಸಾಧನೆಗೆ ಸ್ಥಳವಿಲ್ಲ. ಸಾನ್ಯಾ ಮಿರ್ಜಾ ಲಿಯಾಂಡರ್ ಪೇಸ್ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ಕಠಿಣ ಪರಿಶ್ರಮ ಪಟ್ಟು ಮುಂದೆ ಬರುವುದನ್ನು ನೋಡಿಕೊಂಡೂ ಜನರು ಒಂದೇ ಉಸಿರಿನಲ್ಲಿ ಚಾಂಪಿಯನ್ನರಾಗುವ ಕನಸು ಕಂಡರೆ ಅದಕ್ಕೇನೆನ್ನೋಣ? ನಮ್ಮ ಗುರುಗಳು ತಮ್ಮ ಜೀವನ ಪರ್ಯಂತ ಹಿಂದೂಸ್ತಾನೀ ಸಂಗೀತ ಸಾಧನೆ ಮಾಡಿಯೂ ಸಂಗೀತವೆನ್ನುವುದು ಒಂದು ಸಾಗರ ಅದರಲ್ಲಿ ನಾನು ಕುಡಿದದ್ದು ಒಂದು ಬೊಗಸೆ ಉಪ್ಪು ನೀರು ಅಷ್ಟೇ ಎನ್ನುವುದನ್ನು ಇಂದಿನ ವೇಗಮಯ ಜೀವನದ ಮುಂದೆ ಸರಳವಲ್ಲದ್ದು ಎನ್ನೋಣವೆ?

***

ಏಕೋ ಅಶ್ವಥ್ ತಮ್ಮ ಹಾಡಿನ ನಡುವೆ ’ನಾವು ಭಾರತೀಯರು...’ ಎಂದಾಗ ಸ್ವಲ್ಪ ಹೊತ್ತಿನ ಮೊದಲು ’...ಇವರು ನಿಮ್ಮ ದೇಶದವರು!’ ಎಂದು ಯಾರನ್ನೋ ಪರಿಚಯಿಸಿಕೊಟ್ಟ ನನ್ನನ್ನೇ ನೋಡಿ ಕೈ ಮಾಡಿ ’ನಾವು ಭಾರತೀಯರು...’ ಎಂದು ಹಾಡಿದಂತಾಯಿತು. ನಾವು ಭಾರತೀಯರು ಎನ್ನುವುದರಲ್ಲಿ ಹುರುಳಿದೆ ತಿರುಳಿದೆ, ಒಂದೇ ಒಂದು ಮಾತಿನಲ್ಲಿ ಎಲ್ಲವೂ ಇದೆ. ಅಮೇರಿಕದಲ್ಲೇ ಹುಟ್ಟಿ ಬೆಳೆದವನಂತಿರುವ ನನ್ನ ಸಹೋದ್ಯೋಗಿ ನಮ್ಮ ಕಾನ್‌ಫರೆನ್ಸ್ ಕಾಲಿನ ನಡುವೆ ಇನ್ಯಾರನ್ನೋ ಕುರಿತು, ’ಅದೊಂದು ಆರ್ಡರನ್ನು ಹೇಗೋ ತಳ್ಳಿಬಿಡು, ಸ್ವಲ್ಪ ಅಡ್ಜಷ್ಟ್ ಮಾಡಿಕೋ...’ ಎಂದು ಹೇಳಿದಾಗ ನನ್ನ ಪಕ್ಕೆಗೆ ತಿವಿದಂತಾಗಿ ಒಂದು ಕಡೆ ರಿಪೀಟಬೆಲ್ ಪ್ರಾಸೆಸ್ಸುಗಳನ್ನು ಎಸ್ಟಾಬ್ಲಿಷ್ ಮಾಡುವುದು ನನ್ನ ಜವಾಬ್ದಾರಿ ಅಂತಹುದರಲ್ಲಿ ’ಸ್ವಲ್ಪ ಅಡ್ಜಷ್ಟ್ ಮಾಡಿಕೊಳ್ಳುವುದನ್ನು’ ಅದು ಹೇಗೆ ರಿಪೀಟ್ ಮಾಡಲಿ? ಅಥವಾ ಅದು ನಮ್ಮ ಕ್ರೋಮೋಸೋಮು, ಡಿಎನ್‍ಎ ಗಳಲ್ಲಿ ಯಾವತ್ತೂ ರಿಪೀಟ್ ಆಗುತ್ತಲೆಯೇ ಇದೆಯೋ?

ನಮ್ಮ ಗುರುಗಳೆಲ್ಲ ಇಂಗ್ಲೀಷನ್ನು ಗಾಢವಾಗಿ ಓದಿಕೊಂಡ ಪಂಡಿತರು ಅಥವಾ ಅಂತಹ ಪಂಡಿತರನ್ನು ಬಲ್ಲವರು. ಅವರು ಇಂಗ್ಲೀಷನ್ನು ಓದಿಕೊಂಡ ಹಿನ್ನೆಲೆಗೆ ತಕ್ಕಂತೆ ಕನ್ನಡದ ಗಂಧ-ಗಾಳಿಯನ್ನೂ ಬಲ್ಲವರು ಒಂದು ರೀತಿ ಫ್ಲ್ಯಾಷ್ ಲೈಟ್‌ನ ನೇರಕ್ಕೆ ಒಂದು ಒಂದು ಬೆಳಕಿನ ವರ್ತುಲ ಬಿದ್ದರೆ ಅದಕ್ಕೆ ಸುತ್ತಲಿನ ಪ್ರಭಾವಳಿ ಇದ್ದಂತೆ. ನಾವುಗಳೆಲ್ಲ ನಮಗೆ ಬೇಕಾದುದನ್ನು ಓದಿಕೊಂಡು ಬೇಕಾದಷ್ಟು ಅಂಕಗಳನ್ನು ಗಳಿಸಿ ಮುಂದೆ ಬಂದೆವು. ಇಲ್ಲಿಯವರೆಗೂ ನಮ್ಮ ಸಬ್ಜೆಕ್ಟಿನ ಬಗ್ಗೆಯೇ ಯಾರೇ ಪ್ರಶ್ನೆ ಕೇಳಿದರೂ ’ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎನ್ನುವ ಉತ್ತರವನ್ನು ಆ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಿಂತ ಮೊದಲು ಯೋಚಿಸಿಕೊಳ್ಳುತ್ತಿದ್ದೆವು. ಒಂದು ದಿನವೂ ನಾವು ಕಲಿಯುವುದರ ಹಿನ್ನೆಲೆ ಮುಂದೆ ಅದನ್ನು ಜೀವನದಲ್ಲಿ ಬಳಸುವ ಬಗ್ಗೆ ತಲೆ ಕೆಡಿಸಿಕೊಂಡು ಗೊತ್ತಿಲ್ಲದವರಾಗಿದ್ದೆವು. ನಮಗೆ ಗೊತ್ತಿರದೆಯೋ ಗೊತ್ತಿದ್ದೋ ಮುಂದಿನ ಜಗತ್ತಿಗೆ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುತ್ತಿದ್ದೆವು ಆದರೆ ಅದರ ವೇಗ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದ್ದುದೂ ಇತ್ತು.

ಮತ್ತದೇ ಮಾತು, ಕೆಲವೊಂದು ಭಾವನೆಗಳು ಭಾಷೆಯನ್ನೂ ಮೀರುತ್ತವೆಯಂತೆ, ಆದರೆ ಆ ಸಮಸ್ಯೆಯ ಆಳ ನಮಗೆಂದೂ ಅರಿವಾಗದು ಏಕೆಂದರೆ ನಮ್ಮ ಭಾಷೆಯ ಆಳವೇ ಅಷ್ಟು. ಯಾರಾದರೊಡನೆ ಮುಖ ಕೊಟ್ಟು ಮಾತನಾಡೋಣವೆಂದರೆ ಅವರು ಇಂಗ್ಲೀಷಿನ ಮೊರೆ ಹೊಕ್ಕು ಕೊನೆಗೆ ಮಾತೇ ನಿಂತು ಹೋಗುವ ಸ್ಥಿತಿ ಬರುವ ಹಾಗೆ ನಮಗೆ ನಮ್ಮತನವೇ ದೊಡ್ಡದಾಗಿ ಯಾವತ್ತೂ ಎಲ್ಲೂ ಕಾಣೋದಕ್ಕೆ ಒಂದು ಕಾರಣ ಹುಟ್ಟಿಕೊಳ್ಳುತ್ತದೆ. ನಮ್ಮ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಹಲವಾರು ಧ್ವನಿಗಳು ಹುಟ್ಟೋದೇನೋ ನಿಜ, ಆದರೆ ಅವುಗಳು ರಾಗವಾಗಿ ಬೆಳೆಯೋದೇ ಇಲ್ಲ, ಒಂದು ಆಲಾಪನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಹಾಗೆ ಮತ್ತೊಂದು ಹುಟ್ಟಿದರೂ ಹುಟ್ಟಬಹುದು ಎನ್ನುವ ನಿರೀಕ್ಷೆಯಲ್ಲೇ ಬದುಕು-ಭಾವನೆ-ಬಂಡವಾಳವೆಲ್ಲವೂ ಕಳೆದು ಹೋದ ಹಾಗೆ. ಹ್ಞೂ, ನಮ್ಮ ನಮ್ಮ ಮುಸುಡಿಯನ್ನು ನಾವು ನಾವೇ ನೋಡಿಕೊಂಡು ನಮ್ಮ ಪ್ರಪಂಚದಲ್ಲಿ ನಾವೇ ತೇಲಾಡಿ ಓಲಾಡಿಕೊಂಡು ನಾವೇ ಬರೆದು ಸಂಪಾದಿಸಿ ಪ್ರಕಟಿಸುವ ಸಾಹಿತ್ಯದಲ್ಲಾದರೂ ಅದೇನು ಮಹತ್ತವಿದ್ದಿರಬಹುದು? ತೀಡಿ ಗಂಧವಾಗಲಿಲ್ಲ, ಕಾಯಿಸಿ ಬಗ್ಗಿ ಹೊಳೆಯಲಿಲ್ಲ ಎನ್ನುವ ಸಂಬಂಧಗಳಲ್ಲಿ ಸೂಕ್ಷ್ಮವಾದರೂ ಎಲ್ಲಿಂದ ಬಂದೀತು? ನಿಜವಾದ ನೋವಿಗೆ ಸ್ಪಂದಿಸದೇ ಅದೆಷ್ಟು ದಿನ ಎಲ್ಲವನ್ನೂ ಮುಂದೆ ತಳ್ಳಲಾದೀತು?

Wednesday, October 22, 2008

If you elect me as a president...

ಪ್ರೆಸಿಡೆಂಟ್ ಆಫ್ ವಾಟ್? ಅಂತ ಪ್ರಶ್ನೆ ಬರೋದು ಸಹಜ, ಪ್ರೆಸಿಡೆಂಟ್ ಆಫ್ ವಾಟ್‌ಎವರ್...ಎಂದುಕೊಂಡು ಮುಂದೆ ಹೋಗೋಣ...ನಾವೆಲ್ಲ ಶಾಲಾ ದಿನಗಳಲ್ಲಿ ’ಎಲೈ ಹುಚ್ಚರ ಸಂಘದ ಅಧ್ಯಕ್ಷನೇ...’ ಎಂದು ನಮ್ಮ್ ನಮ್ಮೊಳಗೆ ಬೈದುಕೊಳ್ಳುತ್ತಿದ್ದುದೂ ನೆನಪಿಗೆ ಬಂತು.

ಏನೇ ಇರಲಿ ರಾಜಕಾರಣ ಹಾಗೂ ಆಶ್ವಾಸನೆ ಎನ್ನುವುವುಗಳು ಒಂದೇ ತಾಯಿಯ ಮಕ್ಕಳ ಹಾಗೆ, ನಮ್ಮ ಸುತ್ತ ಮುತ್ತ ನಡೆಯೋ ಬೇಕಾದಷ್ಟು ಚುನಾವಣೆಗಳ ಕ್ಯಾಂಪೇನುಗಳಲ್ಲಿ ’ನೀವು ನನ್ನನ್ನು ಆರಿಸಿ ತಂದಿದ್ದೇ ಆದರೆ...’ ಎನ್ನುವ ಪ್ರಣಾಳಿಕೆಗಳು ಪುಂಖಾನುಪುಂಕವಾಗಿ ಹೊರಬರುತ್ತಲೇ ಇವೆ. ಹಾಗೆ ಮಾನವಕುಲದಲ್ಲಿ ಪ್ರಚುರಗೊಂಡ ಆಶ್ವಾಸನೆಗಳಲ್ಲಿ ಶೇಕಡಾ ಹತ್ತರಷ್ಟು ಈಡೇರಿದ್ದರೂ ಇಂದು ನಾವು ಈ ಸ್ಥಿತಿಯಲ್ಲಿರುತ್ತಿರಲಿಲ್ಲ ಎನ್ನುವುದು ಬೇರೆ ವಿಷಯ. (ಸುಮ್ಮನೇ ಆರೋಪ ಹೊರಿಸ್ತೀನಿ, ಆದ್ರೆ ಅದಕ್ಕೆ ತಕ್ಕ ದಾಖಲೆ ಕೊಡೋದಿಲ್ಲ ಅನ್ನೋದಕ್ಕೆ ಈ ವಾಕ್ಯವೇ ಸಾಕ್ಷಿ - ದಾಖಲೆಗಳನ್ನು ಪೋಣಿಸಿ ಯಾರು ಉದ್ದಾರವಾಗಿದ್ದಾರೆ ನೀವೇ ಹೇಳಿ).

ಹೀಗೇ ದಿನನಿತ್ಯದ ಘಟನಾವಳಿಗಳನ್ನು ಅವಲೋಕಿಸಿ ಈ ಕೆಳಗಿನ ಅಣಿಮುತ್ತುಗಳನ್ನು ನಾನು ನನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇನೆ, ನೀವು ಓದಿನೋಡಿ ನಂತರ ನಿಮ್ಮ ಅಧ್ಯಕ್ಷನನ್ನು ನೀವೇ ಗುರುತಿಸಿ ಮತ ನೀಡಿ!

***
ನೀವು ನನ್ನನ್ನು ಅಧ್ಯಕ್ಷನನ್ನಾಗಿ ಚುನಾಯಿತನನ್ನಾಗಿ ಮಾಡಿದರೆ....
- I will eliminate all school buses from the roads for one week!
Oh, school buses! ಅಮೇರಿಕದ ಶಾಲಾ ವಾಹನಗಳು ಎಂದರೆ ’ಅಯ್ಯಪ್ಪಾ’ ಅನ್ನೋ ಹಾಗೆ, ಒಂದು ರೀತಿ ರಸ್ತೆ ಮೇಲಿನ ಟ್ಯಾಂಕರುಗಳು ಅವು. ನನ್ನ ಒಂದು ಊಹೆಯ ಪ್ರಕಾರ ಪ್ರತಿ ಶಾಲಾ ಬಸ್ಸಿಗೆ ಇಲ್ಲಿ ಕನಿಷ್ಟ ಇಪ್ಪತ್ತೈದು ಕನ್ನಡಿಗಳಾದರೂ ಇರಬಹುದು ಜೊತೆಗೆ ಒಂದು ಸಾವಿರ ಮಿನುಗುವ ಲೈಟ್‌ಗಳು (ಉತ್ಪ್ರೇಕ್ಷೆ). ಶಾಲಾ ಬಸ್ಸಿಗೆ ರಸ್ತೆಗಳ ಮೇಲೆ ಆದ್ಯತೆ, ಅವು ನಿಂತರೆ ಎಲ್ಲರೂ ನಿಲ್ಲಬೇಕು, ಅದೂ ನಾನು ಬಳಸೋ ಒನ್ ಲೇನ್ ರಸ್ತೆಯ ಕಥೆ ದೇವರೇ ಗತಿ. ಶಾಲಾ ಬಸ್ಸುಗಳ ಲೀಡರ್‌ಶಿಪ್ ನಲ್ಲಿ ನಾವೆಲ್ಲ ಅವುಗಳ ಹಿಂದೆ, ಮೇಷ್ಟ್ರು ನಾಯಕತ್ವದಲ್ಲಿ ವಿದ್ಯಾರ್ಥಿಗಳೇನೋ ಹಿಂದೆ ಸಾಲುಗಟ್ಟುತ್ತಾರೆ ಆದರೆ ಶಾಲೆಪಾಲೆ ಮುಗಿಸಿ ಅವುಗಳಿಗೆಲ್ಲ ಗುಡ್‌ಬೈ ಹೇಳಿರೋ ನನಗೇಕೆ ಈ ಶಿಕ್ಷೆ, ಅದಕ್ಕೆಂದೇ ಐವತ್ತೆರಡು ವಾರಗಳ ವರ್ಷಗಳಲ್ಲಿ ನನ್ನ ಆಡಳಿತದಲ್ಲಿ ಒಂದು ವಾರ ಸ್ಕೂಲ್ ಬಸ್ಸುಗಳು ರಸ್ತೆಯ ಮೇಲೆ ಬಾರದಂತೆ ಮಾಡುವ ಆಶ್ವಾಸನೆ.

- I will iradicate "retirement" (the word) from the dictionary!
ನಮ್ಮ ಕಾಲದವರು ರಿಟೈರ್ ಆಗುವ ಮಾತೇ ಬರೋದಿಲ್ಲ ಬಿಡಿ. ನಾವೆಲ್ಲ ಬಲ್ಲ ಹಾಗೆ ಬೇಬಿ ಬೂಮರ್ಸ್ ತಲೆಮಾರಿನವರು ಮತ್ತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳೋ ಹಾಗೆ ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮೆಲ್ಲ ಅಲ್ಪಸ್ವಲ್ಪ ಉಳಿತಾಯಗಳು ದಿನೇದಿನೇ ಕರಗುತ್ತಿರುವ ಶೋಚನೀಯ ಸ್ಥಿತಿಯನ್ನು ಕಂಡರೆ ನಮ್ಮ ತಲೆಮಾರಿಗೆ ’ನಿವೃತ್ತ’ ಅನ್ನೋ ಪದವೇ ದೂರವಾಗುವ ಹಾಗೆ ಕಾಣುತ್ತದೆ. ಆದ್ದರಿಂದ ಈ ಪದವನ್ನು ನಿಘಂಟಿನಿಂದ ತೆಗೆಯೋಣ ಎಂದು ಸಂಕಲ್ಪಿಸಿಕೊಂಡಿದ್ದೇನೆ.

- I will eliminate the 8 O'clock from the dial!
ಇದು ಒಂಥರ ಇಂಟರೆಸ್ಟಿಂಗ್ ಕಾನ್ಸೆಪ್ಟ್. ಗಡಿಯಾರದ ಡಯಲಿನಲ್ಲಿ ಏಳು ಘಂಟೆಯ ನಂತರ ಒಂಭತ್ತು ಘಂಟೆ ಬರುವಂತೆ ಮಾಡುವುದು. ಒಂದು ರೀತಿ ಸೀನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿಯ ನಂತರ ಒಂದೇ ಸಮನೆ ಜ್ಯೂನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿ ಬಂದ ಹಾಗೆ ಮಧ್ಯೆ ಬರುವ ಕ್ಲಿಂಟನ್ ನ ಎಂಟು ವರ್ಷಗಳ ಆಡಳಿತವನು ಇತಿಹಾಸದಿಂದ ಡಿಲ್ಲೀಟ್ ಮಾಡಿದ ಹಾಗೆ...

ಪ್ರತಿ ದಿನ ಒಂದಲ್ಲ ಒಂದು ಎಂಟು ಘಂಟೆಯ ಮೀಟಿಂಗ್ ಇಟ್ಟೇ ಇರ್ತಾರೆ ನಮ್ಮ್ ಆಫೀಸಿನಲ್ಲಿ. ನಾನೋ ಎಷ್ಟು ಬೇಗ ಹೊರಟರೂ ಒಂದಲ್ಲ ಒಂದು ಕಾರಣದಿಂದ ಟ್ರಾಫಿಕ್ ಗೊಂದಲದಲ್ಲಿ ಸಿಕ್ಕು ಹಾಕಿಕೊಳ್ಳುವುದೇ ಹೆಚ್ಚು (again, thanks to school buses noted above). ಅದಕ್ಕೆಂದೇ ನಾನು ಕಾಫಿ ಕುಡಿಯಲಿ ಬಿಡಲಿ ನನ್ನ ರಕ್ತದೊತ್ತಡ ಮುಂಜಾನೆ ಏಳರಿಂದ ಒಂಭತ್ತು ಘಂಟೆಯವರೆಗೆ ಹೆಚ್ಚು ಇರೋದು ಖಾಯಂ. ಆದ್ದರಿಂದಲೇ ನಾನು ವಾಚಿನ ಡಯಲಿನಲ್ಲಿ ಫಾರ್ ಎವರ್ ಎಂಟು ಘಂಟೆ ಎನ್ನುವ ಕಾನ್ಸೆಪ್ಟ್ ಅನ್ನೇ ತೆಗೆದು ಹಾಕಿ ಬೆಳಿಗ್ಗೆ ಏಳರಿಂದ ಒಂಭತ್ತರವರೆಗೆ ಆಫೀಸಿಗೆ ತಲುಪಿದರೆ ಸಾಕು ಎನ್ನುವ ಹೊಸ ಕಾನೂನನ್ನು ಜಾರಿಗೆ ತರೋದು.

- I will convert Shareholders into Chair holders!
ಇದು ಸಂಪೂರ್ಣ ರೆಬೆಲಿಯಸ್ ಅಪ್ರೋಚ್...ನಾವೆಲ್ಲ ಕಂಪನಿಗಳ ಸ್ಟಾಕ್ ಅಥವಾ ಶೇರುಗಳನ್ನು ಕೊಂಡುಕೊಂಡು ಬಡವರಾಗಿರೋದು ನಿಮಗೆಲ್ಲ ಗೊತ್ತೇ ಇರೋ ವಿಚಾರ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶೇರ್ ಹೋಲ್ಡರ್ ಕೂಡ ಆ ಕಂಪನಿಯ ತಕ್ಕಮಟ್ಟಿನ ಪಾಲುದಾರ. ಆದ್ದರಿಂದ ಇಂದಿದ್ದು ನಾಳೆ ಮರೆಯಾಗುವ ನಮ್ಮ ಪೇಪರ್ ಹಣ ಹಾಗೂ ಅದಕ್ಕೆ ಬರುವ ಇಮ್ಯಾಜಿನರಿ ಓನರ್‌ಶಿಪ್‌ಗೆ ಪ್ರತಿಯಾಗಿ ಕಂಪನಿ ಬೀಳುವ ಹೊತ್ತಿಗೆ ಹಣ ಬಾರದಿದ್ದರೂ ಆ ಕಂಪನಿಗಳ ಕುರ್ಚಿ, ಮೇಜು, ಅಲ್ಲಿನ ಫಿಕ್ಸ್‌ಚರುಗಳು ಮೊದಲಾದವುಗಳನ್ನು ನಾವು ಹಳೆಯ ಶತಮಾನದಲ್ಲಿ ಮಾಡುತ್ತಿದ್ದ ಹಾಗೆ ದಂಗೆ ಎದ್ದು ಕಿತ್ತುಕೊಳ್ಳಬೇಕು ಎನ್ನುವುದು ನನ್ನ ವಾದ. ಶೇರುಗಳು ಹೋದರೂ ಹೋಗಲಿ ಒಂದು ಚೇರ್ ಆದರೂ ಸಿಗಲಿ ಎನ್ನುವುದು ನನ್ನ ಅಭಿಮತ.

***
ನಿಮ್ಮ ಓಟ್ ಅನ್ನು ಖಂಡಿತ ನನಗೇ ಹಾಕ್ತೀರಿ ತಾನೆ?

Tuesday, October 14, 2008

ವಿಶ್ವದ ವ್ಯಾಪಾರದ ಅಲ್ಲೋಲ ಕಲ್ಲೋಲ

’ನಾವು ಐತಿಹಾಸಿಕವಾಗಿ ಒಂದು ಮಹತ್ವದ ಕ್ಷಣದಲ್ಲಿದ್ದೇವೆ’ ಎಂತಲೇ ನಾನು ನನ್ನ ಪರಿಚಯದವರಿಗೆ ಹೇಳೋದು.

ಇದು ಖಂಡಿತವಾಗಿಯೂ ಸೆಲೆಬ್ರೇಷನ್ ವಿಷಯವಂತೂ ಅಲ್ಲವೇ ಅಲ್ಲ, ವಿಶ್ವದ ಮಾರುಕಟ್ಟೆಗಳು ದುಸ್ಥಿತಿಯಲ್ಲಿರುವಾಗ ಅಂಕಣ-ಬ್ಲಾಗ್-ಮೊದಲಾದ ಸ್ವರೂಪಗಳಲ್ಲಿ ಆ ಬಗ್ಗೆ ಒಂದೆರಡು ಹನಿ ಕಣ್ಣೀರು ಸುರಿಸದೇ ಹೋದರೆ ನಾವು ಸಮಕಾಲೀನವಾಗಿ ಏನೂ ಸ್ಪಂದಿಸಿದಂತೆ ಆಗೋದೆ ಇಲ್ಲ. ಯಾವ ಬರಹಕ್ಕಾದರೂ ಆ ಒಂದು ಸಮಕಾಲೀನ ಸ್ಪಂದನಕ್ಕೆ ಅವಕಾಶವಿದ್ದಾಗಲೇ ಅದು ಪ್ರಸ್ತುತವೆನಿಸೋದಂತೆ. ಅದೇ - ನಮ್ಮತನ, ನಾವು, ನಮ್ಮ ಹಣೇ ಬರಹ - ಅಂತ ಬರೀತಾ ಹೋದರೆ ಬೇಕಾದಷ್ಟು ಬರೀತಲೇ ಹೋಗಬಹುದು. ಅಂತಹ ಬರಹ ನಾಸ್ಟಾಲ್ಜಿಯ, ಮಣ್ಣೂ-ಮಸಿ ರೂಪ ಪಡೆದು ಓದೋರಿಗೆ ಹಾಗೂ ಬರೆಯೋರಿಗೆ ಚಿಟ್ಟು ಹಿಡಿಸೋದು ನಿಜ.

***

ಅವೇ ಫೈನಾನ್ಷಿಯಲ್ ವೆಬ್‌ಸೈಟ್‌ಗಳಲ್ಲಿ ಅಥವಾ ಇತರ ವರದಿಗಳಲ್ಲಿ ಅನುರಣಿಸಿದ್ದನ್ನ ಇಲ್ಲಿ ಮಕ್ಕೀಕಾ ಮಕ್ಕಿ ಬರೆದು ಬಿಸಾಡಿದರೆ ಅವುಗಳಿಗೆ ರೆಫೆರೆನ್ಸ್ ನೀಡಿದರೆ ಏನು ಗುಣ ಬಂತು ಹೇಳಿ? ಅದರ ಬದಲು ನಮ್ಮ ನಿಮ್ಮ ಮನಸ್ಸುಗಳಲ್ಲಿರೋ ಒಂದಿಷ್ಟು ಪ್ರಶ್ನೆಗಳಿಗೆ ಸಾಂತ್ವನ ಸಿಗುವ ಮಾತೇನಾದರೂ ಇದ್ದರೆ ಹೊತ್ತಿ ಉರಿಯೋ ಬೆಂಕಿಗೆ ಒಂದು ಲೋಟ ನೀರನ್ನಾದರೂ ಹಾಕಿದಂತಾಗಬಹುದು. ನಾನು ಸಿಂಪಡಿಸೋ ನೀರು ಅದು ಬೆಂಕಿಯನ್ನು ತಲುಪುತ್ತಿದ್ದ ಹಾಗೇ ಅಷ್ಟೇ ವೇಗವಾಗಿ ಆವಿಯಾಗಿ ಮುಗಿಲಿನೆಡೆಗೆ ಪಯಣಿಸಿದಂತೂ ನಿಜ - ಅದೇ ಹಗುರವಾದದ್ದು ಮೇಲಕ್ಕೆ ಹೋಗೋ ನಿಸರ್ಗದ ತರ್ಕ!

ನನಗೆ ’ಪಿಂಗ್’ ಮಾಡಲಾದ, ನಾನು ಇ-ಮೇಲ್‌ನಲ್ಲಿ ಓದಲಾದ ಕನ್ನಡ ಮನಸ್ಥಿತಿಯನ್ನು ವಿಶ್ಲೇಷಿಸಲಾಗಿ - ’ಸ್ಟಾಕ್ ಮಾರ್ಕೆಟ್ಟಿನಲ್ಲಿ ಟೋಪಿ ಹಾಕಿಸಿಕೊಂಡೆವು!’ ಎನ್ನುವ ಪಕ್ಕಾ ಕನ್ನಡಿಗರ ಅಂಬೋಣ ಏನು ಹೇಳಲಿ. ಮಾರ್ಕೆಟ್ಟಿನಲ್ಲಿ ಇಂದು ನೂರು ರೂಪಾಯಿ ಹಾಕಿ ನಾಳೆ ಅದು ಸಾವಿರವಾಗಲಿ ಎನ್ನುವ ತಿರುಕನ ಕನಸನ್ನಂತೂ ಈ ಕಾಲದಲ್ಲಿ ನಾವು ಕಾಣದಿದ್ದರೆ ಸಾಕು. ನನ್ನ ವೈಯಕ್ತಿಕ ಫೈನಾನ್ಷಿಯಲ್ ಪೋರ್ಟ್‌ಫೋಲಿಯೋ ಒಬ್ಬ ಪ್ರೊಫೆಷನಲ್ ಅಡ್ವೈಸರ್‌ನಿಂದ ಮ್ಯಾನೇಜ್‌ಮಾಡಲ್ಪಟ್ಟದ್ದು, ಸಾಕಷ್ಟು ಡೈವರ್ಸಿಫಿಕೇಷನ್ನು ಹಾಗೂ ವಿಧವಿಧವಾದ ಇನ್‌ವೆಷ್ಟ್‌ಮೆಂಟ್ ವೆಹಿಕಲ್ಲ್‌ಗಳಗೊಂಡಿದ್ದೂ ಈ ನಮ್ಮ ಇಂಡೆಕ್ಸ್‌ಗಳು ಕಳೆದವಾರ (ಅಕ್ಟೋಬರ್ ಹತ್ತು, ೨೦೦೮) ಬುಡತಲುಪಿದ ಪರಿಣಾಮವಾಗಿ ಸುಮಾರು ಶೇಕಡಾ ನಲವತ್ತರಷ್ಟು ಮೌಲ್ಯವನ್ನು ಕಳೆದುಕೊಂಡು ಬಹಳ ದುಸ್ಥಿತಿಯಲ್ಲಿತ್ತು. ಅಯ್ಯೋ, ಏನು ಮಾಡೋದು ಎಂದುಕೊಂಡು ಮುವತ್ತರ ದಶಕದ (೧೯೩೦) ಗ್ರೇಟ್ ಡಿಪ್ರೆಷನ್ನ್ ಹಾಗೂ ಅದರ ಕುರಿತ ಆರ್ಟಿಕಲ್ಲುಗಳನ್ನು ದನ ಬಯಲಿನಲ್ಲಿ ಮೆಂದಂತೆ ಕುಳಿತು ಓದಿದ ಪರಿಣಾಮವಾಗಿ ನನ್ನ ಪಕ್ಕದಲ್ಲಿದ್ದ ನೋಟ್ಸ್‌ನಲ್ಲಿ ಏನೇನು ದಿನಸಿ ಹಾಗೂ ದಿನಬಳಕೆ ಸಾಮಾನುಗಳನ್ನು ತಂದು ಬೇಸ್‌ಮೆಂಟ್‌ನಲ್ಲಿ ಸಂಗ್ರಹಿಸಿ ಇಡಬಹುದು ಎಂದು ಪಟ್ಟಿ ಮಾಡಲು ಒಟ್ಟು ಹದಿನಾರು (೧೬) ಸಾಮಾನುಗಳ ಹೆಸರುಗಳು ದಾಖಲಾದವು. ಅದರಲ್ಲಿ ಬಿಡಿ ಚಿಲ್ಲರೆ, ಕ್ಯಾಷ್‌ನಿಂದ ಹಿಡಿದು ಕ್ಯಾನ್ಡ್ ಗೂಡ್ಸ್ ಹಾಗೂ ಅಕ್ಕಿ-ಬೇಳೆಗಳು ಸೇರಿಕೊಂಡಿದ್ದವು. ಅಕಸ್ಮಾತ್, ಆ ಅನ್‌ಥಿಂಕೇಬಲ್ ಇವೆಂಟ್ - ಅದೇ ಗ್ರೇಟ್ ಡಿಪ್ರೆಶ್ಷನ್ನ್ ಅದರ ಜೊತೆಗಿನ ಅರಾಜಕತೆ - ಏನಾದರೂ ಆಗೇ ಹೋದರೆ ಏನು ಮಾಡಲಿ ಎನ್ನುವ ಕೊರಗು ನಾನು ಬೇಡವೆಂದರೂ ನನ್ನ ಬೆನ್ನು ಬಿಡದಾಯಿತು. ಕಳೆದ ಶುಕ್ರವಾರ ಬೆಳಿಗ್ಗೆ (ಅಕ್ಟೋಬರ್ ೧೦, ೨೦೦೮) ಒಂಭತ್ತೂವರೆ ಹೊತ್ತಿಗೆ ಡಾವ್‌ಜೋನ್ಸ್ ಒಂದು ಸಾವಿರ ಪಾಯಿಂಟ್ ಕುಸಿದು ಬಿದ್ದಿತ್ತು, ಇನ್ನೂ ಮಾರ್ಕೆಟ್ ಓಪನ್ ಆಗುವುದಕ್ಕೆ ಮೊದಲೇ - ಯಾವತ್ತಾದರೂ ಬೇಕಾದೀತು ಎಂದು ಅದರ ಸ್ಕ್ರೀನ್‌ಶಾಟ್ ಅನ್ನೂ ಸಹ ತೆಗೆದಿಟ್ಟುಕೊಂಡೆ.

ಪುಣ್ಯ - ಸೋಮವಾರ ಬೆಳಿಗ್ಗೆ ಎಲ್ಲೆಡೆ ಚೇತರಿಕೆ ಮೂಡತೊಡಗಿದ್ದು ಇಂದು ಮಂಗಳವಾರದ ಕೊನೆಗೆ ಅಲ್ಲಲ್ಲಿ ಕೆಂಪು (ಬೀಳು) ಕಾಣಿಸಿಕೊಂಡರೂ ಹೆಚ್ಚು ಹಸಿರು (ಏಳು) ಗಮನಕ್ಕೆ ಬಂದಿದ್ದು ನಮ್ಮೆಲ್ಲರ ಪುಣ್ಯ. ಈ ಕ್ರೆಡಿಟ್ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಕ್ರೈಸಿಸ್ ಬಗೆ ಹರಿಯೋದಕ್ಕೆ ಇನ್ನೂ ಹಲವಾರು ತಿಂಗಳುಗಳೇ ಬೇಕು. ಸದ್ಯ, ಇಂದಿನ ಕಮ್ಮ್ಯೂನಿಕೇಷನ್ನ್ ಯುಗದಲ್ಲಿ ವಿಶ್ವದ ಅನೇಕ ದೇಶಗಳು ಮಾತುಕಥೆಗೆ ತೊಡಗಿಕೊಂಡು ಒಂದು ಯೂನಿವರ್ಸಲ್ ಸೊಲ್ಯೂಷನ್ ಕಂಡುಹಿಡಿದುಕೊಂಡಿದ್ದು ನಮಗಂತೂ ಸಾಕಪ್ಪಾ ಸಾಕು ಎನ್ನಿಸುವಷ್ಟರ ಮಟ್ಟಿಗೆ ಬಂದಿತ್ತು.

***

ಇವತ್ತು ಮಾರ್ಕೆಟ್ ಬೀಳುತ್ತಾ ಏಳುತ್ತಾ ಅಂತ ಯೋಚಿಸ್ತಾ ಕೂರೋದಕ್ಕೆ ಸಮಯವಂತೂ ಖಂಡಿತವಿಲ್ಲ, ಹಾಗೆ ಮಾಡೋದರಿಂದ ನಮ್ಮ ನಮ್ಮ ಮಾನಸಿಕ ಸ್ವ್ಯಾಸ್ಥ್ಯ ಹಾಳೋಗೋದು ಖಂಡಿತ, ಅದಕ್ಕೇ ಮನಿ ಮ್ಯಾನೇಜ್‌ಮೆಂಟ್ ಅನ್ನೋದನ್ನ ನಾನು ಔಟ್‌ಸೋರ್ಸ್ ಮಾಡಿರೋದು. ಅಮೇರಿಕದ ಒಳ್ಳೆಯ ಯೂನಿವರ್ಸಿಟಿಯಲ್ಲಿ ಫೈನ್ಯಾನ್ಷಿಯಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ’ಎ’ ಗ್ರೇಡ್ ತೆಗೆದುಕೊಂಡಿದ್ದೇನೆ ಎನ್ನುವ ಹುಂಬ ಧೈರ್ಯದ ನನ್ನ ಮೊದಲಿನ ಇನ್‌ವೆಷ್ಟ್‌ಮೆಂಟ್ ದಿನಗಳಲ್ಲಿ ನಾನು ಕೊರಗಿದ್ದು ಹಾಗೂ ಕಳೆದುಕೊಂಡದ್ದೇ ಹೆಚ್ಚು. ಅದೇ ಕಳೆದ ಆರೇಳು ವರ್ಷಗಳ ಪೊಫೆಷನಲ್ ಸಹಾಯ ತೆಗೆದುಕೊಂಡ ಹಿನ್ನೆಲೆಯಲ್ಲಿ ನನಗೆ ಗಳಿಕೆ ಖಂಡಿತ ಇದೆ, ಜೊತೆಗೆ ನನ್ನ ಕಡಿಮೆಯಾದ ಕೊರಗಿನ ಬಗ್ಗೆ ಹೆಗ್ಗಳಿಕೆ ಕೂಡ.

ಒಂದು ಮುಖ್ಯವಾದ ಅಂಶವೆಂದರೆ - ನಿಮ್ಮ ಹಣವನ್ನು ನೀವೇ ಮ್ಯಾನೇಜ್‌ ಮಾಡದೇ (ಅಂದರೆ ಹೂಡಿಕೆ-ತೊಡಿಗೆ ವಿಚಾರದಲ್ಲಿ), let a professional do his/her job, pay them good! Outsourcing ನಿಂದ ಅಷ್ಟೂ ಕಲಿಯಲಿಲ್ಲವೆಂದರೆ - ನಮ್ಮ core competence ಅಲ್ಲದ ವಿಷಯವನ್ನು ನಾವು ಹೇಗೆ ತಾನೇ ಸಂಬಾಳಿಸಬಲ್ಲೆವು?

ಜೊತೆಗೆ ನಿಮ್ಮ ನಿಮ್ಮ ರಿಸ್ಕ್ ತೆಗೆದುಕೊಳ್ಳುವ ವಿಷಯದಲ್ಲಿ ಲಾಂಗ್ ಟರ್ಮ್ ಗುರಿಗಳನ್ನೂ ಇಟ್ಟುಕೊಳ್ಳಿ, ಶಾರ್ಟ್ ಟರ್ಮ್‌ನಲ್ಲಿ ಆದಾಯ ಬರೋದು ಉತ್ತಮ, ಆದರೆ ನೀವು ಹೂಡಿದ ಹಣ ಐದು-ಹತ್ತು-ಇಪ್ಪತ್ತು ವರ್ಷಗಳಲ್ಲಿ ಹಣದುಬ್ಬರ (ಇನ್‌ಫ್ಲೇಷನ್) ಕ್ಕೆ ಹೊಂದಿಕೊಂಡು ಹೇಗೆ ಬೆಳೆಯಬಲ್ಲದು ಎನ್ನುವುದೂ ಮುಖ್ಯವಲ್ಲವೇ?

ಕೊನೆಗೆ - ಜನಪ್ರಿಯವಾದದ್ದರ ಬೆನ್ನು ಹತ್ತುವುದರ ಬದಲು ಫಂಡಮೆಂಟಲ್ಸ್ ಮೊರೆ ಹೋಗಿ ಹಾಗೂ ಸಾಲಿಡ್ ಕಂಪನಿಗಳಲ್ಲಿ ಹಣ ತೊಡಗಿಸಿ - ಅಂದರೆ ಅವರ ಉತ್ಪನ್ನ, ಬ್ಯಾಲೆನ್ಸ್ ಶೀಟ್, ಡಿವಿಡೆಂಡ್, ಮೊದಲಾದವುಗಳನ್ನೂ ಗಮನಿಸಿ. ಉದಾಹರಣೆಗೆ ಗೂಗಲ್, ಮೈಕ್ರೋಸಾಫ್ಟ್ ಟೆಕ್ನಾಲಜಿ ಕಂಪನಿಗಳಾಗಿ ಜನಪ್ರಿಯವಿರಬಹುದು, ನೀವು ತೊಡಗಿಸಿದ ಒಂದು ಸಾವಿರ ಡಾಲರ್ ಅಥವಾ ರೂಪಾಯಿ ಐದು ಹತ್ತು ವರ್ಷಗಳಲ್ಲಿ ಯಾವ ಉತ್ಪನ್ನವನ್ನು ತರಬಹುದು ಎನ್ನುವುದನ್ನು ನೋಡಿ, ಜೊತೆಗೆ ಜಾನ್‌ಸನ್ ಎಂಡ್ ಜಾನ್ಸನ್, ಮೆಕ್‌ಡಾನಲ್ಡ್ ಮೊದಲಾದ ಕಂಪನಿಗಳನ್ನೂ ನೋಡಿ. ನೀವು ಪೆಟ್ರೋ ಕಜಕಸ್ಥಾನ್ ಅನ್ನೋ ಸ್ಟಾಕ್ ಬಗ್ಗೆ ಕೇಳಿದಯೇ ಇರಬಹುದು, ಇನ್ಯಾವುದೋ ಎನರ್ಜಿ ಕಂಪನಿ ಇರಬಹುದು, ಆಯಿಲ್ ಕಂಪನಿ ಇರಬಹುದು (ಸುಮ್ಮನೇ ಉದಾಹರಣೆಗೆ ಈ ಕಂಪನಿಗಳ ಹೆಸರು ಹೇಳುತ್ತಿದ್ದೇನೆ ಅಷ್ಟೆ).

Sunday, October 05, 2008

ಜಾಗೃತಿ ಆರ್ಯಾವತಿ ಹಾಗೂ ನಮ್ಮತನ

’ಏಕೆ ನಿನ್ನ ಹೆಸರನ್ನು J J ಅಂತ ಬದಲಾಯಿಸಿಕೊಂಡಿದ್ದೀಯಾ?’ ಎಂದು ಇಂದು ವಾಲ್‌ಮಾರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸೊಬ್ಬಳನ್ನು ಕೇಳಿದೆ. ಭಾರತೀಯ ಮೂಲದ ಆಕೆ ಅಪರೂಪಕ್ಕೊಮ್ಮೆ ನಾನು ಶಾಪ್ಪಿಂಗ್ ಹೋದಾಗಲೆಲ್ಲ ಸಿಕ್ಕು ಮುಖ ಪರಿಚಯವಿದ್ದಂತೆ ’ನಾವು ಭಾರತೀಯರು’ ಎನ್ನುವ ಸಂಬಂಧವೂ ನಮಗೆ ಹೇಳದ ಹಾಗೆ ಬೆಳೆದು ಬಂದಿದೆ. ಆಕೆಯ ನೇಮ್ ಟ್ಯಾಗ್‌ನಲ್ಲಿದ್ದದ್ದು ’ಜಾಗೃತಿ’ ಎಂಬುದಾಗಿ, ಇಂದು ಅದರ ಮೇಲೆ ಮತ್ತೊಂದು ಹೊಸ ಹೆಸರಿನ ಟ್ಯಾಗ್ ಮುದ್ರಿಸಿಕೊಂಡು ಜೆಜೆ ಎಂದು ಓಡಾಡಿಕೊಂಡಿದ್ದಾಳೆ.

’ಏನಾಯ್ತು?’ ಎಂದರೆ ಆಕೆ ’ಅವರಿಗೆಲ್ಲ ನನ್ನ ಹೆಸರನ್ನು ಉಚ್ಛರಿಸುವುದಕ್ಕೆ ಕಷ್ಟವಾಗುತ್ತಿತ್ತು, ಅದಕ್ಕೇ ಈ ಹೆಸರು ಕೊಟ್ಟಿದ್ದಾರೆ...’
ನಾನು ಆಕೆಯ ಮಾತನ್ನು ಮಧ್ಯದಲ್ಲಿ ತುಂಡು ಮಾಡಿ ಕೇಳಿದೆ, ’ಜಾಗೃತಿ ಅನ್ನೋ ಪದ ಕಷ್ಟವೇ? ನೀನು ಹಾಗೆ ಆಗೋದಿಲ್ಲ ಎನ್ನಬೇಕಿತ್ತು...’ ಎನ್ನುವಾಗ, ಆಕೆ ಚಿಕ್ಕ ಮುಖ ಮಾಡಿಕೊಂಡು ಹೇಳಿದಳು, ’ಪುಸ್ತಕದಲ್ಲೆಲ್ಲಾ ಜಾಗೃತಿ ಅಂತಲೇ ಇದೆ, ಆದರೆ ಕರೆಯುವುದಕ್ಕೆ ಈ ಹೆಸರನ್ನು ಕೊಟ್ಟರು ನಾನೇನು ಹೇಳಲಿಲ್ಲ’.

ನಮ್ಮ ಒಂದು ನಿಮಿಷದ ಭೇಟಿಯಲ್ಲಿ ನಾನೇನೂ ಹೆಚ್ಚು ಮಾತು ಬೆಳೆಸಲಿಲ್ಲ, ಬದಲಿಗೆ ’ಮತ್ತೆ ಹೇಳಿ ನೋಡಿ, ಜಾಗೃತಿ ಅನ್ನೋ ಹೆಸರು ನಿಜವಾಗಿಯೂ ಚೆನ್ನಾಗಿದೆ, ಜೊತೆಗೆ ಅಮೇರಿಕನ್ನರಿಗೆ ಹೇಳುವುದಕ್ಕೆ ಅಷ್ಟೊಂದು ಕಷ್ಟವಾದುದೇನೂ ಅಲ್ಲ’ ಎಂದು ಹೇಳಿ ನನ್ನ ದಾರಿ ಹಿಡಿದೆ.

ನನ್ನ ಈ ಹೆಸರಿನ ಉಚ್ಛಾರಕ್ಕೆ ಪುಷ್ಟಿಕೊಡುವ ಹಾಗೆ ಆಗಷ್ಟೇ ಲೈಬ್ರರಿಯಲ್ಲಿ ಬಾರೋ ಮಾಡಿದ ಸಿಎನ್‌ಎನ್ ನ ಆಂಡರ್‌ಸನ್ ಕೂಪರ್ (Anderson Cooper) ನ ಟಿಪ್ಪಣಿಗಳ ಆಡಿಯೋ ಸಿಡಿ ಕಾರಿನಲ್ಲಿ ನಡೆಯುತ್ತಿತ್ತು, ಅದರಲ್ಲಿ ಆತ ಶ್ರೀಲಂಕಾದಲ್ಲಿ ಸುನಾಮಿಯ ಅನುಭವಗಳನ್ನು ದಾಖಲು ಮಾಡಿದ ಬಗ್ಗೆ ಓದುತ್ತಾ ಹೋಗುತ್ತಿದ್ದಾಗ ಅಲ್ಲಿ ಸುನಾಮಿಯ ತರುವಾಯ ಆಕ್ಸಿಡೆಂಟ್‌ಗೆ ಒಳಗಾದ ರೈಲಿನ ಅವಶೇಷವೊಂದನ್ನು ವಿವರಿಸುತ್ತಾ ಆರ್ಯವಾಟಿಯ ಕಣ್ಣೆದುರೇ ಆಕೆಯ ಮಗ ಹಾಗೂ ಅಮ್ಮ ಕಾಣೆಯಾದುದರ ಬಗ್ಗೆ ವಿವರಿಸುವ ಒಂದು ಪ್ಯಾರಾಗ್ರಾಫ್ ಬಂತು. ಆರ್ಯ...ವಾಟಿ...ಯ ಬಗ್ಗೆ ಮತ್ತಷ್ಟು ಚಿಂತಿಸಲಾಗಿ ಅದು ಆರ್ಯಾವತಿ ಇದ್ದಿರಬಹುದೇನೋ ಅನ್ನೋ ಕಲ್ಪನೆ ಮೂಡಿಬಂತು. Mom Yes, Son No...ಎಂದು ಹೇಳುತ್ತಾ ಇಬ್ಬರನ್ನೂ ಕಳೆದುಕೊಂಡು ಒಬ್ಬರ ಕಳೇಬರವನ್ನಷ್ಟೇ ಕಳೆದುಕೊಂಡ ದುಃಖದಲ್ಲಿದ್ದ ಆರ್ಯಾವತಿಯ ಪ್ರೈಯಾರಿಟಿಗಳು ಖಂಡಿತವಾಗಿಯೂ ಬೇರೆಯೇ ಇದ್ದಿರುತ್ತವೆ. ಆಂಡರ್‍ಸನ್ ಕೂಪರ್ ಎನ್ನುವ ರಿಪೋರ್ಟರ್ ತನ್ನ ಹೆಸರನ್ನು ಒಂದು ದಿನ ಹೀಗೆ ಬಳಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಆಕೆಗೆ ಇರಲಿಕ್ಕಿಲ್ಲ.

***

ನಮಗೆ ನಮ್ಮತನ ನಮ್ಮದರಲ್ಲಿ ಏನೋ ಕೊರತೆ ಇದೆ. ಆ ಕೊರತೆ ನಮಗೆ ಕೀಳು ಮನೋಭಾವನೆಯನ್ನು ತಂದುಕೊಟ್ಟಿದೆ. ಜಾಗೃತಿಯ ಹೆಸರನ್ನು ಇದ್ದ ಹಾಗೆ ಹೇಳುವಷ್ಟು ನಾಲಿಗೆ ತಿರುಗಿಸುವುದಕ್ಕೆ ಆಕೆಯ ವಾಲ್‌ಮಾರ್ಟ್ ಸಹೋದ್ಯೋಗಿಗಳು ಕಷ್ಟಪಡಬೇಕಾಗಿಲ್ಲ, ಆಕೆಯೇ ಬದಲಾಗಿದ್ದಾಳೆ. ವಿಶ್ವದ ದೊಡ್ಡ ಕಾರ್ಪೋರೇಟ್ ವ್ಯವಸ್ಥೆಯ ಮುಂದೆ ಘಂಟೆಗೆ ಇಂತಿಷ್ಟು ಎಂದು ಕೆಲಸ ಮಾಡುವ ಆಕ್ರಂದನವೆಲ್ಲಿ ನಡೆದೀತು? ಇದರಲ್ಲಿ ಘಂಟೆಗೆ ಇಂತಿಷ್ಟು ಕೆಲಸ ಮಾಡುವ ಮಿತಿಯಾಗಲೀ ನಮ್ಮ ಪದವಿ ಹುದ್ದೆಗಳ್ಯಾವುವೂ ಲೆಕ್ಕಕ್ಕೆ ಬಾರದವು. ನಾನು ’ಹೊಸನಗರ’ ಎಂದು ಅಮೇರಿಕನ್ನರಿಗೆ ಹೇಳುವಲ್ಲಿ ನನ್ನ ಉಚ್ಛಾರಣೆಯಲ್ಲಿ ಏನನ್ನಾದರೂ ಬದಲಾಯಿಸಿಕೊಳ್ಳುತ್ತೇನೆಯೇ? ಏಕೆ?

ನಿನ್ನೆ ನಮ್ಮ ಮನೆಯಿಂದ ಅರವತ್ತು ಮೈಲು ದೂರದಲ್ಲಿರೋ ನ್ಯೂ ಯಾರ್ಕ್ ನಗರದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅನ್ನು ನೋಡಿಕೊಂಡು ಬರಲು ನಮ್ಮ ಮನೆಯವರೊಂದಿಗೆ ಹೋಗಿದ್ದೆ. ಅಲ್ಲಿ ಹೆಚ್ಚು ಜನ ಬರೋ ಪ್ರವಾಸಿಗರಿಗೆ ಆಡಿಯೋ ಉಪಕರಣವನ್ನು ಕೊಡುತ್ತಿದ್ದವ ನೀವು ಯಾವ ದೇಶದವರು ಎಂದು ಔಪಚಾರಿಕವಾಗೇ ಮಾತನಾಡುತ್ತಾ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದ. ಇದೇ ಕಟ್ಟದ ಪಕ್ಕದಲ್ಲೇ ದಿನವೂ ನಡೆದುಕೊಂಡು ಹೋಗಿ ಸುಮಾರು ನಾಲ್ಕು ವರ್ಷ ಕೆಲಸ ಮಾಡಿದ್ದೇನೆ ಎನ್ನುವ ಕನ್ಸೆಷನ್ನ್ ಕೂಡಾ ಇಲ್ಲದೇ ’ನೀವು ಭಾರತೀಯರು!’ ಎಂದು ಅವನೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದ. ಅವನ ಕಣ್ಣೆದುರಿನಲ್ಲಿ ನಾನು ಭಾರತೀಯನೇ, ಇಂದಿಗೂ ಎಂದಿಗೂ. ನಾನು ಕುಡಿದ ಅದೆಷ್ಟೋ ಸ್ಟಾರ್‌ಬಕ್ಸ್ ಕಾಫಿಯ ಗತ್ತು, ನಾನು ಓದಿದ ಅದೆಷ್ಟೋ ವಾಲ್ ಸ್ಟ್ರೀಟ್ ಜರ್ನಲ್ಲ್‌ನ ಕಿಮ್ಮತ್ತು, ನಾನು ಟ್ರೇನಿನಲ್ಲಿ ಮುಖದ ಮೇಲೆ ಆಗಾಗ್ಗೆ ಸೃಷ್ಟಿಸಿಕೊಂಡ ಹುಸಿಗಾಂಭೀರ್ಯದ ಚಹರೆ ಹಾಗೂ ಅದರ ಹಿಂದಿನ ಮೆದು ಧ್ವನಿ, ಇಲ್ಲಿ ಎಲ್ಲರಂತೆ ನಾನೂ ಟ್ಯಾಕ್ಸ್ ಕೊಟ್ಟು ಅನುಭವಿಸುವ ಹಸಿರು ಕಾರ್ಡಿನ ವೈಭವದ ದ್ವಂದ್ವ ಇವೆಲ್ಲವನ್ನೂ ಎಂಭತ್ತನೇ ಮಹಡಿಯಿಂದ ಎತ್ತಿ ಹಲವಾರು ಆಶಾವಾದಗಳೆನ್ನುವ ತರಗೆಲೆಗಳನ್ನು ಅದೆಲ್ಲಿಂದಲೋ ಸುತ್ತಿ ಸುಳಿದು ತರುತ್ತಿದ್ದ ಗಾಳಿಗೆ ಎಸೆದ ಹಾಗಾಯಿತು.

’ಹೌದು, ನಾನು ಭಾರತೀಯನೇ!’ ಅಷ್ಟೇ ಗಟ್ಟಿಯಾಗಿ ಹೇಳಿದೆ. ’ಬೇಕಾಗಿಲ್ಲ ನಿಮ್ಮ ಪರಂಪರೆಯನ್ನು ಸಾರಿ ಹೇಳುವ ಕಿವಿ ಮಾತು (ಆಡಿಯೋ ಯಂತ್ರ), ಅದರ ಬಗ್ಗೆಯೂ ಸಾಕಷ್ಟು ಬಲ್ಲೆ’ ಎಂದು ಹೇಳಿದವನೇ ಬಿರುಬಿರನೆ ನಡೆದು ಮುಂದೆ ಹೋದೆ. ಭೂಮಿಗೂ ಆಕಾಶಕ್ಕೂ ನಡುವೆ ಸಂಪರ್ಕ ಏರ್ಪಡಿಸುವಂತೆ ಬೆಳೆಸಿದ ಕಟ್ಟಡವನ್ನು ಅದೆಲ್ಲೆಲ್ಲಿಂದಲೋ ಬಂದು ಹತ್ತೊಂಭತ್ತು ಡಾಲರ್ರನ್ನು ಕೊಟ್ಟು ನೋಡುವ ಜನರಿಗೆ ಮೂರು ಡಾಲರಿಗೊಂದರಂತೆ ಆಡಿಯೋ ಉಪಕರಣವನ್ನು ಬಾಡಿಗೆಗೆ ಕೊಡುವ ಮೂರು ಕಾಸಿನವನ ಬಳಿ ನನ್ನದೇನು ಅಹವಾಲು? ನೀನು ಕರಿ ಕಪ್ಪಗಿನವನು, ಮೊದಲು ನಿನ್ನ ಮೂಲ ಹಾಗೂ ಮರ್ಮವನ್ನು ಕೆದಕಿಕೊಂಡು ನೋಡು ಎಂದು ನಮ್ಮೂರಿನಲ್ಲಾಗಿದ್ದರೇ ಗಟ್ಟಿಯಾಗಿ ಹೇಳಿಯೇ ಬಿಡುತ್ತಿದ್ದೆ.

ಎಂಭತ್ತಾರನೇ ಮಹಡಿಯ ಹೊರಗೆ ಮೌನವಿದೆ! ಬೆಳೆದು ಆಕಾಶವನ್ನು ಉಳಿದವರೆಲ್ಲರಿಗಿಂತ ಹೆಚ್ಚು ಮುಟ್ಟಿದ ಗಾಂಭೀರ್ಯತೆ ಇದೆ. ದಿನಕ್ಕೊಂದಿಷ್ಟು ಬೆರಗು ಕಣ್ಣಿನವರನ್ನು ಸಮಾಧಾನಗೊಳಿಸಿದ ಸಾಂತ್ವನ ಮನಸ್ಥಿತಿ ಇದೆ. ಅದೇ ಮುಗಿಲು ಅಲ್ಲಿ ಭಾರತೀಯರು-ಅಮೇರಿಕನ್ನರು ಎಂಬ ಬೇಧ-ಭಾವವಿಲ್ಲ. ಆದರೆ ನೆಲಕ್ಕಿದೆ, ನೆಲದ ಮೇಲೆ ನಿಂತ ನಮಗಿದೆ ನಮ್ಮ ಜೊತೆಗಿನ ಕಟ್ಟಡಕ್ಕೂ ಇದೆ. ಮೇಲೆ ಹಾರಬೇಕೆನ್ನುವ ಕನಸುಗಳಿಗೆ ಯಾವ ಬಂಧನವಿಲ್ಲ, ಅಡ್ಡಿ ಆತಂಕಗಳಿಲ್ಲ; ಕೆಳಗೆ ಬದುಕಬೇಕೆನ್ನುವ ಬದುಕಿಗೆ ಹಲವಾರು ಬಂಧನಗಳಿವೆ, ಹೀಗಿರಬೇಕು ಎನ್ನುವವರಿದ್ದಾರೆ. ಹೀಗಿರುವ ನೆಲ ಮುಗಿಲುಗಳಲ್ಲಿ ನಾನು ಯಾವತ್ತಿದ್ದರೂ ಭಿನ್ನನೇ, ಎಲ್ಲಿದ್ದರೂ ನನ್ನ ಸ್ವಂತಿಕೆ ಎನ್ನುವುದು ಇದ್ದೇ ಇದೆ. ಅದಕ್ಕೇನಾದರೂ ಯಾರಾದರೂ ಅಡ್ಡಿ ಬಂದಾರೆಂದರೆ ಅಲ್ಲಿಂದ ಕಂಬಿ ಕೀಳುವಂತೆ ಪ್ರಚೋದಿಸುವುದು ನನ್ನತನವೇ. ಎಲ್ಲ ಕಡೆಯೂ ಇದ್ದು, ಎಲ್ಲೂ ಇರದಿರುವುದೇ ನಮ್ಮತನ.

Sunday, September 28, 2008

ನಾವು ಮಹಾ ಬುದ್ಧಿವಂತರು ಸಾರ್!

ಸೆಪ್ಟೆಂಬರ್ ಗಾಳಿ ತೇವ ಹಾಗೂ ತಂಪನ್ನು ಅದೆಲ್ಲಿಂದಲೋ ಹೊತ್ತು ತರುತ್ತಿದ್ದಂತೆ ಹೆಚ್ಚು ವಿಡಂಬನೆಗಳನ್ನು ’ಅಂತರಂಗ’ದಲ್ಲಿ ತುಂಬುವಂತೆ ಮಾಡುತ್ತಿದೆ. ಈ ವಿಡಂಬನೆಗಳ ವ್ಯಾಪ್ತಿ (ಕೊರಗು) ನಿಮಗೆ ಗೊತ್ತೇ ಇದೆ, ಈವರೆಗೆ ಬರೆದವುಗಳ ಬೆನ್ನಲ್ಲಿ ಇನ್ನೂ ಒಂದು.

***

ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್‌ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.

ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.

’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.

ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್‌ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.

ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.

***

ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:
- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್‌ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?

- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್‌ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್‌ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್‌ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.

ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!

ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?

- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್‌ಮೆಂಟೇ ಸರಿ.

ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್‌ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!

Thursday, September 18, 2008

ನಿಮ್ ಮಕ್ಳೆಲ್ಲಾ ಎಸ್ಸೆಮ್ಮೆಸ್ಸ್ ಮೆಸ್ಸೇಜುಗಳಲ್ಲೇ ಅಳ್ತಾವೇನು?

ನಮ್ ಆಫೀಸಿನಲ್ಲಿ ಒಬ್ರು ಇತ್ತೀಚೆಗೆ ಹೊಸ್ತಾಗಿ ಪರಿಚಯವಾದ ಕನ್ನಡಿಗರು, ಈಗಾಗ್ಲೇ ನಮ್ಮ್ ಮಾತುಕಥೆಗಳು ಎರಡೂ ಮೂರನೇ ಭೇಟಿಯಲ್ಲಿ ಬೆಳೆಯುತ್ತಿದ್ದವುಗಳಾಗಿದ್ದರಿಂದ ಅವೇ ಕನ್ನಡಿಗರ ಸಂಕೋಚಭರಿತ ’ನಮಸ್ಕಾರ, ಚೆನ್ನಾಗಿದೀರಾ!’ ಅನ್ನೋ ಹಲ್ಲು ಗಿಂಜೋ ಪದಪುಂಜಗಳಿಂದ ಸ್ವಲ್ಪ ದೂರವಾಗಿತ್ತು ಅಂತ್ಲೇ ಹೇಳ್ಬೇಕು. ’ಏನ್ಸಾರ್ ಮತ್ತೆ ಇತ್ತೀಚೆಗೆ ಏನ್ ಓದ್ತಾ ಇದ್ದೀರಾ?’ ಎನ್ನೋ ನನ್ನ ಹುಂಬ ಪ್ರಶ್ನೆಗೆ ಅವರು ’ಏನೂ ಇಲ್ಲ, ಈ ಬ್ಲ್ಯಾಕ್‌ಬೆರ್ರಿಯಲ್ಲಿ ಬರೋವನ್ನು ಜೋಕ್‌ಗಳನ್ನ ಬಿಟ್ರೆ ಮತ್ತೇನನ್ನೂ ಓದೋದೇ ಇಲ್ಲ!’ ಎಂದು ಬಿಡಬೇಕೆ.

ಶುರುವಾಯ್ತು ತಗಳಪ್ಪ, ಅದೇ ತಾನೇ ಬೆಚ್ಚಗೆ ಕಾಫಿ ಕುಡಿದಿದ್ನಾ ಎಲ್ಲಾ ಹೊರಕ್ಕ್ ಬಂತ್ ನೋಡಿ...ಕ್ಷಮಿಸಿ ಅವ್ರಿಗೇನೂ ಬೈದಿಲ್ಲಪ್ಪ ನಾನು - ನಮ್ಮ ಕನ್ನಡಿಗರ ಜಾಯಮಾನದಂತೆ ನಕ್ಕು ಸುಮ್ಮನಾಗ್ಬಿಟ್ಟೆ.

***

ಈ ವೇಗಮಯ ಜೀವನದಲ್ಲಿ ಎಲ್ಲವೂ ಕಿರುತೆರೆಗಳಿಗೆ ಮಾತ್ರ ಸೀಮಿತವಾಗೋ ಹಾಗೆ ಕಾಣ್ತಿದೆ. ದೊಡ್ಡ ಸಿನಿಮಾ ಪರದೆ ಚಿಕ್ಕ ಟಿವಿಗೆ ಮೀಸಲಾಗೋಯ್ತು, ಈಗ ಅದರಿಂದ ಸಣ್ಣ ಮೊಬೈಲ್ ಫೋನಿನ ಮಟ್ಟಿಗೆ ಇಳಿದು ಹೋಯ್ತು. ಸೋ, ಚಿಕ್ಕದಾಗಿರದೇ ಇರೋದು ಬ್ಯಾಡವೇ ಬ್ಯಾಡಾ...ಅನ್ನೋದು ಈ ಕಾಲದ ಘೋಷಣೆ.

ಯಕ್ಷಗಾನ ಅನ್ನೋದ್ ಯಾಕೆ ಬೇಕು ಹಾಗಾದ್ರೆ? ಒಂದೇ ಒಂದು ಕ್ಷಣದಲ್ಲಿ ಪಾತಾಳ, ಭೂಲೋಕ, ಮತ್ಸ್ಯಲೋಕ, ಯಮಲೋಕ, ಸರ್ಪಲೋಕಗಳನ್ನೆಲ್ಲವನ್ನು ಯಶಸ್ವಿಯಾಗಿ ಕಲ್ಪಿಸಿಕೊಳ್ಳುವ ವೇದಿಕೆ ಇರೋವಾಗ. ಒಂದು ರಾಗ-ತಾಳದ ಹಿಮ್ಮೇಳದ ಹಾಡಿನಿಂದ ಮತ್ತೊಂದಕ್ಕೆ ಡೈನಾಮಿಕ್ ಆಗಿ ಬದಲಾವಣೆ ಇರೋವಾಗ. ಹಿಮ್ಮೇಳಕ್ಕೆ ತಕ್ಕಂತೆ ಅದೇ ಕಾಲಕ್ಕೆ ಸಂದರ್ಭವನ್ನು ಶುದ್ಧ ಕನ್ನಡ-ಸಂಸ್ಕೃತದಲ್ಲಿ ಅರ್ಥೈಸುವ ಅಭಿವ್ಯಕ್ತಿ ಇರೋವಾಗ. ಗಾನ-ನಾಟ್ಯ-ಸರ್ವ ರಸಗಳೂ ಒಂದೇ ಒಂದು ರಂಗದಲ್ಲಿ ಮೇಳೈಸುವಾಗ.

ಎಲ್ರೂ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತಾ ಇದ್ರೆ ಸಾಕಲ್ವ - ಅವೇ ಟೇಕು ರೀಟೇಕುಗಳು ಸ್ಪೆಷಲ್ ಎಫೆಕ್ಟ್‌ಗಳೆಲ್ಲ ಇರೋವಾಗ ಅದರ ಮುಂದೆ ಬಯಲು ಸೀಮೆಯಲ್ಲಿನ ನಾಟಕ ಯಾವ ಮೂಲೆಯ ಲೆಕ್ಕ. ಎಂಟು ಡಾಲರ್ ಕೊಟ್ಟು ಒಂದೂವರೆ ಘಂಟೇಲಿ ಹಾಲಿವುಡ್ಡು ಸಿನಿಮಾಗಳು ನೋಡೋಕ್ ಸಿಗೋವಾಗ ಈ ನ್ಯೂ ಯಾರ್ಕಿನ ಬ್ರಾಡ್ ವೇ ಶೋಗಳಿಗೆ ನೂರು ಡಾಲರ್ ಯಾವನ್ನ್ ಹೋಗ್ತಾನೆ ಹೇಳಿ? ಸಿನಿಮಾದಲ್ಲಿರೋ ಮತ್ತು-ಗಮ್ಮತ್ತು ಈ ಪ್ಲೇನ್ ನಾಟಕ-ಮ್ಯೂಸಿಕಲ್ಲುಗಳಲ್ಲಿರುತ್ತೇ ಅಂತ ಅಂದೋರ್ ಯಾರು?

***

ರಾಮಾಯ್ಣ ಅಂದ್ರೆ ಸುಮ್ನೇ ಹೀಗ್ ಬರೆದ್ರೆ ಸಾಕಲ್ಪ:
ರಾಮಾ ಅನ್ನೋ ರಾಜಕುಮಾರ ಮೀನ್ ಮೈಂಡೆಡ್ ಮಂಥರೆ ಹಾಗೋ ಸ್ಟೆಪ್ ಮದರ್ ಕೈಕೆಯಿ ಮಾಡಿರೋ ಕರಾಮತ್ತಿನಿಂದಾಗಿ ತನ್ನ ಹೆಂಡ್ತಿ ಜೊತೆ ಕಾಡ್ ಸೇರ್ತಾನಂತೆ. ಆ ಹದಿನಾಲ್ಕು ವರ್ಷದ ವನವಾಸ್‌ದಲ್ಲಿ ಸುಂದರವಾದ ಹೆಂಡ್ತೀನ ಶ್ರೀಲಂಕಾದ ಒಬ್ಬ ರಾಕ್ಷಸ ಅಪಹರಿಸ್ತಾನಂತೆ. ರಾಮಾ ಮತ್ತ್ ಅವನ ತಮ್ಮ ಜೊತೆಗೆ ಕಾಡಲ್ಲೇ ಸಿಗೋ ಕಪಿ ಸೈನ್ಯದ ಸಹಾಯದಿಂದ ಲಂಕೆಗೆ ಹೋಗಿ ಆ ರಾಕ್ಷಸನನ್ನು ಕೊಂದು ಸತ್ಯಾ-ಧರ್ಮಕ್ಕೆ ಇವತ್ತೂ ಕಾಲಾ ಇದೇ ಅಂತ ಸಾಧಿಸಿ ತೋರಿಸ್ತಾರಂತೆ. ಹಂಗೇ ಹೆಣ್ತೀನೂ ಕರಕಂಡ್ ಬರ್ತಾನಂತೆ, ಆದ್ರೆ ಅವಳು ಯಾರೋ ಏನೋ ಅಂದ್ರೂ ಅಂತ ಬೆಂಕಿ ಹಾರಿ ಬೀಳ್ತಾಳಂತೆ!

ಪಾಪ ಯಾಕ್ ಆ ಕುವೆಂಪು ರಾಮಕೃಷ್ಣಾಶ್ರಮದಲ್ಲಿ ಕುತಗೊಂಡು ರಾಮಾಯಣ ದರ್ಶನಂ ಬರೀಬೇಕಿತ್ತು. ಅದೂ ಸಾಲ್ದೂ ಅಂತ ವೀರಪ್ಪ ಮೊಯಿಲಿ ಯಾಕೆ ತಮ್ಮದೇ ಆದ ಒಂದು ವರ್ಷನ್ನನ್ನ ಕುಟ್ಟಬೇಕಿತ್ತು. ಒಂದೇ ರಾಮಾಯ್ಣ ಅದನ್ನ ಹೇಳೋಕ್ ಹತ್ತಾರ್ ಭಾಷೇನಾದ್ರೂ ಯಾಕ್ ಬೇಕು, ಎಲ್ಲಾನು ಇಂಗ್ಲೀಷಿಗೆ ಟ್ರಾನ್ಸ್ಲೇಟ್ ಮಾಡಿದ್ರೆ ಆಯ್ತು, ನಾವೆಲ್ಲ ಇಂಗ್ಲೀಷ್ನಲ್ಲೇ ಓದ್‌ಕಂತೀವಲ್ಲ ಅಷ್ಟೇ ಸಾಕು. ಆ ನಾರಾಯಣಪ್ಪ ಯಾಕೆ ಕುಮಾರವ್ಯಾಸ ಭಾರತ ಬರೆದ, ಅದೂ ಸಾಲ್ದೂ ಅಂತ ಭೈರಪ್ಪನೋರು ಯಾಕೆ ತಮ್ಮ ಪರ್ವ ಕೊರೆದ್ರು? ಆ ಕಾರಂತ್ರು ನಲವತ್ತರ ಮೇಲೆ ಕಾದಂಬ್ರಿ ಬರೆದ್ರಂತೆಲ್ಲ ಅದ್ರಿಂದ ಏನಾಯ್ತು? ಅದ್ರ ಬದ್ಲಿ ಒಂದಿಷ್ಟು ಹಾಸ್ಯವಾಗಿ ಮಾತಾಡಿದ್ರೆ ಸಾಲ್ತಿತಿರ್ಲಿಲ್ವಾ?

ಯಾರೂ ಓದದ ಕೇಳದ ಕಂದಪದ್ಯಗಳು ಬೇಡವೇ ಬೇಡ. ರಗಳೆಗಳ ರಗಳೆ ಹಾಗೇ ಇರಲಿ. ಚಂಪೂ ಕಾವ್ಯ ಅಂತಂದ್ರೆ ಏನು, ಚಂದ್ರಶೇಖರ ಪಾಟೀಲರ ಹೊಸ ಕಾವ್ಯ ನಾಮಾನಾ? ಷಟ್ಪದಿ-ಗಿಟ್ಪದಿ ಅಷ್ಟೇ ಅಲ್ಲಲ್ಲೇ ಇರ್ಲಿ - ವೀರರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ ತಾತಂಗರ್ಘ್ಯವನು ಕೊಡುತ - ಅಂತ ಮತ್ತಿನ್ನೆಲಾದ್ರೂ ಭಾಮಿನಿನಲ್ಲಿ ಹಾಡಿ ಬಿಟ್ಟೀರ. ದೊಡ್ಡ ನಾವೆಲ್ಲುಗಳನ್ನೆಲ್ಲ ಈ ಸರ್ತಿ ಛಳಿಗಾಲಕ್ಕೆ ಸುಟ್ಟು ಮೈ ಬೆಚ್ಚಗೆ ಮಾಡಿಕೊಳ್ಳೋಣ. ನಮ್ಮ ಸುತ್ತ ಮುತ್ಲ ಇರೋ ಲೈಬ್ರರಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಆನ್‌ಲೈನ್‌ಗೆ ಹಾಕಿ ನಾವು ಓದ್ತೀವಿ. ಸೋಬಾನೇ ಪದ, ಸೋ ವಾಟ್? ಜನಪದ ಗೀತೆ ಹಳ್ಳಿಯೋರ್ ಗಾಥೆ ನಮಗಲ್ಲಪ್ಪ. ’ಹೊನ್ನ ಗಿಂಡಿಯ ಹಿಡಿದು ಕೈಯಲಿ...’ ಅಂದ್ರೆ ಏನ್ರಿ, ಈ ಮದ್ರಾಸಲ್ಲಿ ಗಿಂಡಿ ಇದೆಯಲ್ಲ ಅದಾ? ಆ ಡಿವಿ ಗುಂಡಪ್ಪೋರಿಗೆ ತಲೆ ನೆಟ್ಟಗಿತ್ತೋ ಇಲ್ವೋ ಅಷ್ಟೊಂದು ಬರೆಯೋದಾ? ಲೈಫು ಅಂದ್ರೆ ಸಿಂಪಲ್ಲು ಗೊತ್ತಿರಲಿಲ್ಲ ಅವ್ರಿಗೆ? ಪ್ರತಿಯೊಂದಕ್ಕೂ ಮಂಕುತಿಮ್ಮ ಅಂತ ಬರಕೊಂಡೋರ್ ಬೇರೆ, ಮಂಕುದಿಣ್ಣೇ ಅಂತ ಬರೀಲಿಲ್ಯಾಕೆ? ವಚನಾ - ಯಾರಿಗ್ ಯಾರ್ ಕೊಡೋ ಭಾಷೇ ಅದೂ?

ರೀ, ನಾಟ್ಕ ಯಾವನ್ರೀ ಬರೀತಾನೆ ಮತ್ತೆ ಅದನ್ನ ಓದೋರ್ ಯಾರು? ಸುಮ್ನೇ ಯಾವ್ದಾದ್ರೂ ಬ್ಲಾಗ್‌ನಲ್ಲೋ ಪೋರ್ಟಲಿನಲ್ಲೋ ಹಾಸ್ಯಮಯವಾಗಿ ಬರೀರಿ ಒಂದಿಷ್ಟ್ ಜನಾನಾದ್ರೂ ಓದ್ತಾರೆ. ಬಟ್, ನಿಮ್ ಬರಹ ಕೇವ್ಲ ಮುನ್ನೂರು ಪದಗಳಿಗೆ ಮಾತ್ರ ಇರ್ಲಿ, ಒಂದೊಂದು ಸಾಲೂ ಅದ್ರದ್ದೇ ಆದ ಪ್ಯಾರಾವಾಗಿರ್ಲಿ. ’ಅಂತಃಕರಣ’, ’ಅಶ್ಲೀಲ’ ಅನ್ನೋಪದಳನ್ನೇನಾದ್ರೂ ಉಪಯೋಗಿಸಿ ಬಿಟ್ಟೀರಾ ಮತ್ತೆ. ಈ ಪೋರ್ಟಲುಗಳ ಕ್ಲೈಂಟೆಲ್ಲುಗಳಿಗೆ ಗಂಟಲು ಕಟ್ಟಿಬಿಡುತ್ತೆ ಹುಷಾರು. ಮತ್ತೇ...ನಿಮ್ಮ್ ಟೈಟಲ್ಲು ಜನಪ್ರಿಯವಾಗಿರ್ಲಿ, ಯಾವ್ದಾದ್ರೂ ಹಾಡಿನ ಪಂಕ್ತಿ, ಅಲ್ಲ ಸಾಲಿದ್ರೆ ಒಳ್ಳೇದು - ’ಅನಿಸುತಿದೆ ಯಾಕೋ ಇಂದು...ಹೀಗೇ ಸುಮ್ಮನೇ’ ಅಂತ ಹಾಕಿ, ಅದು ಪ್ಯಾಪುಲ್ಲರ್ರು. ಈ ಸಾಲನ್ನು ಬರೆದ ಕವಿ ಅಂತ ಜನ ಕಾಯ್ಕಿಣಿಯವ್ರನ್ನ ಕೊಂಡಾಡೋದನ್ನ ನೋಡಿಲ್ಲ ನೀವು?

ಉತ್ತರ ಕರ್ನಾಟಕದ ಬಾಷೆ-ಮಾತು ಅದೊಂದ್ ಭಾಷೇನೇನ್ರಿ? ಏನ್ ಹೇಳೋದಿದ್ರೂ ಬೆಂಗ್ಳೂರ್ ಕನ್ನಡದಲ್ಲಿ ಹೇಳಿ. ’ನೀ ಹೀಂಗs ನೋಡಬ್ಯಾಡಾ ನನ್ನ’ ಅಂದ್ರೆ ಅದು ಕನ್ನಡಾನಾ? ಬೀದರ್-ಬೆಳಗಾವಿ ಎಲ್ಲಿವೆ? ಅಲ್ಲಿ ಯಾವ್ ಭಾಷೇ ಮಾತಾಡ್ತಾರೆ, ಜೈ ಸಿದನಾಯ್ಕ-ಮಾವೋತ್ಸೇ ತುಂಗಾ ಅಂತಾ ಕಂಬಾರರು ಅದೇನೇನೋ ಬರೆದಾರಂತಲ್ಲ?

***

ನಾವೇನೂ ಓದೋದಿಲ್ಲ ಅನ್ನೋದು ನಮ್ ಫ್ಯಾಷನ್ನ್ ಸಾರ್. ನಮ್ಮ ಸರ್ವತೋಮುಖ ಬೆಳವಣಿಗೆಗೆ ನಮ್ ನಮ್ ಮೊಬೈಲು-ಕಂಪ್ಯೂಟರ್ ಸ್ಕ್ರೀನ್‌ಗಳೇ ಸಾಕು ಸಾರ್. ಎರಡೇ ಎರಡು ಸಾಲಲ್ಲಿ ಹೇಳದ ಕಥೆ ಅದೂ ಕಥೇನಾ? ಎಸ್ಸೆಮೆಸ್ಸ್ ಮೆಸ್ಸೇಜುಗಳನ್ನು ಬಿಟ್ಟು ಇರೋವೆಲ್ಲಾ ಜೋಕಾ? ಸಂತಾ ಸಿಂಗ್, ಬಂತಾ ಸಿಂಗ್, ಕೋಲ್ಯಾ, ಸರ್ದಾರ್‌ ಜೀಗಳ ಅಜ್ಜ-ಮುತ್ತಾತರೆಲ್ಲ ಬಾವಿಯಲ್ಲಿ ಬಿದ್ದಿರೋ ಮಂದೀ ಗಡಿಯಾರಕ್ಕೆ ಕೀಲಿ ಕೊಡ್ತಾನೇ ಇದಾರ್ ಸಾರ್. ಅಲ್ಲಿಂದ ಕದ್ದು ಇಲ್ಲಿ, ಇಲ್ಲಿಂದ ತಂದು ಅಲ್ಲಿ ತುಂಬಿಸೋ ಫಾರ್ವಡ್ ಮಾಡಿರೋ ಸ್ಪ್ಯಾಮ್‌ ಸಂದೇಶಗಳೇ ಈ ಶತಮಾನದ ಅಂತಃಸತ್ವಾ ಸಾರ್...ಓಹ್ ಕ್ಷಮಿಸಿ, ಅಂತಃಸತ್ವಾ ಅಂದ್ರೆ ಏನು ಅಂತ ಯಾರಿಗ್ಗ್ ಗೊತ್ತು?

ನನ್ನದೊಂದು ಹೊಸಾ ಕವ್ನ ಬರ್ದಿದೀನಿ ಕೆಳಗೆ ನೋಡಿ: (ಪದಗಳ ಕೆಳಗೆ ಪದಗಳು ಬಂದ್ರೆ ಪದ್ಯಾ ಅಲ್ವಾ? ಪದ್ಯಾ-ಗದ್ಯಾ ಎಲ್ಲಾ ಒಂದೇ ಬಿಡಿ)
ಅಮೇರಿಕದಲ್ಲಿ ಇದೀವಿ ಕನ್ನಡ ಸಿನಿಮಾ ನೋಡಲ್ಲ
ಅಮೇರಿಕದಲ್ಲಿ ಇದೀವಿ ಕನ್ನಡ ಕಾನ್ಸರ್ಟ್ ಬ್ಯಾಡವೇ ಬ್ಯಾಡ.
ಕನ್ನಡ ಸಿಡಿ ಮಾರೋರ್ ಇದ್ರೆ ಅವರಿಂದ್ಯಾಕೆ ಕೊಳ್ಬೇಕು?
ಕನ್ನಡ ಪುಸ್ತಕ ಅನ್ನೋ ವಸ್ತೂನ ಕೊಂಡ್ ಕೊಂಡ್ ಯಾಕೆ ಓದ್ಬೇಕು?
ನಾವ್ ಇತ್ಲಾಗ್ ಕನ್ನಡ ಪ್ರೊಗ್ರಾಮ್ ನೋಡಲ್ಲ, ಇಂಗ್ಲೀಷ್ ಕಾನ್ಸರ್ಟ್ ತಿಳಿಯಲ್ಲ.
ಹಗ್ಲೂ ರಾತ್ರೀ ದುಡ್ದೂ ದುಡ್ದೂ, ಸ್ಟ್ರೆಸ್ಸಿನಿಂದ ಸೊರಗಿರೋ ಭುಜಕ್ಕೆ ಅಮೃತಾಂಜನ್ ಸ್ಟ್ರಾಂಗ್ ಲೇಪಿಸ್ಕೊಂಡು,
ನಲವತ್ತ್ ಆಗೋಕ್ಕಿಂತ ಮುಂಚೆ ಚಾಳೀಸ್ ತಗಲಾಡಿಸ್ಕೊಂಡ್
ನರನಾಡಿಗಳಲ್ಲೆಲ್ಲ ಕೊಬ್ಬು-ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡು
ನಮ್ಮೂರಿನ ದನಕಾಯೋ ಕೆಲಸ ಮಾಡೋರಿಗಿಂತ
ಐದೇ ಐದು ವರ್ಷ ಹೆಚ್ಗೆ ಬದುಕೋ ಬವಣೇನಾದ್ರೂ ಯಾತಕ್ಕೆ?

ಹೆಂಗಿದೆ? ನಿಮ್ಮ್ ಕಾಮೆಂಟ್ ಹಾಕಿ, ಸಕತ್ತಾಗಿದೆ ಕವ್ನಾ ಅಂತ ಬರೀರಿ. ನಿಮಿಗೆ ನಾನ್ ಕಾಮೆಂಟ್ ಹಾಕ್ತೀನಿ, ನನಿಗೆ ನೀವ್ ಹಾಕಿ. ಅದೇ ಸಂಬಂಧ ಹಂಗೇ ಬೆಳೀಲಿ. ನಾನು ಬರ್ದಾಗ್ಲೆಲ್ಲ ನೀವ್ ಬ್ಯಾಡಾ ಅಂದ್ರೂ ತಿಳಸ್ತೀನಿ - ಓದಿ, ಕಾಮೆಂಟ್ ಹಾಕಿ, ನಾನು ಅಷ್ಟೇ - ನಮ್ ಬಳಗಾ ಹಿಂಗೇ ಬೆಳೀಲಿ - ನಾಳೆ ನಮಗೆಲ್ಲರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ. ಒಂದ್ ಸ್ಟೇಜ್‌ ಮೇಲೆ ಅದೆಷ್ಟು ಜನಗಳಿಗೆ ನಿಲ್ಲೋಕ್ ಆಗುತ್ತೋ ಅವರಿಗೆಲ್ಲ ಪ್ರಶಸ್ತಿ ಸಿಗುತ್ತೆ. ಜಿಲ್ಲೆಗೊಂದೊಂದು, ಜಾತಿಗೊಂದೊಂದು, ಭೀತಿಗೊಂದೊಂದು, ಸರ್ಕಾರದ ಮಿನಿಷ್ಟ್ರುಗಳ ಶಿಫಾರಸ್ಸಿಗೊಂದೊಂದು. ನಾನು ಬರೆದಿದ್ದನ್ನೆಲ್ಲ ಬುಕ್ ಮಾಡಿಸ್ತೀನಿ. ಅದ್ರ ಬಿಡುಗಡೆಗೆ ನಿಮ್ಮನ್ನ್ ಕರ್ದು ಊಟ ಹಾಕಿಸ್ತೀನಿ. ನನ್ನ ಬುಕ್ಕ್ ಕೊಂಡು ಒಂದೈದು-ಹತ್ತು ಡಾಲರ್ ಕಳ್ಸಿ! ಯಾವ್ ಶಿವರಾಮ ಕಾರಂತ್ರೂ-ಬೈರಪ್ಪಾ-ಬೇಂದ್ರೆ ಮಾಡ್ದೇ ಇರೋ ರೆಕಾರ್ಡ್ ನನ್ನ ಪುಸ್ತಕಗಳು ಮಾಡಿವೆ, ಗೊತ್ತಿಲ್ಲಾ ನಿಮಗೇ - ನಾನೇ ಬೆಶ್ಟ್ ಸೆಲ್ಲರ್ರು.

***

ನಿಮ್ಮ್ ಮಕ್ಳು, ಅಲ್ಲ ಮಕ್ಳುಗಳು, ಕನ್ನಡದಲ್ಲೇ ಮಾತಾಡ್ತಾವಾ? ಎಲ್ರೂ ಅತ್ತಂಗೇ ಅಳ್ತಾವಾ ಅಥವಾ ಅದಕ್ಕೂ ಎಸ್ಸೆಮ್ಮೆಸ್ಸ್ ವರ್ಷನ್ನ್ ಬಂದಿದೆಯಾ? ಕನ್ನಡ ಮಾಧ್ಯಮವೇ ಬ್ಯಾಡ ಅಂತ ಕೋರ್ಟುಗಳೇ ತೀರ್ಪು ಕೊಟ್ವಂತೆ? ಪ್ರಪಂಚದ ಸಾವ್ರಾರು ಭಾಷೆ ಫೈಲುಗಳನ್ನೆಲ್ಲ ಡಿಲ್ಲೀಟ್ ಮಾಡಿ ಬಿಡಿ, ಇಂಗ್ಲೀಷ್ ಒಂದೇ ಸಾಕು. ಇನ್ನೂ ಈಗ್ತಾನೆ ಕಣ್ಣ್ ಬಿಟ್ಟು ನೋಡ್ತಾ ಇರೋ ಹುಡುಗ್ರಿಗೆ ಲೋಕಲ್ ಸಿಲಬಸ್ ಬ್ಯಾಡಾ, ಸಿಬಿಎಸ್ಸಿ-ಐಸಿಎಸ್ಸಿ ಕೊಡ್ಸಿ. ದೊಡ್ಡ ಸ್ಕೂಲಲ್ಲಿ ಓದ್ಸಿ ದೊಡ್ಡ ಮನ್ಷರಾಗ್ತಾರೆ. ಪಬ್ಲಿಕ್ ಸ್ಕೂಲ್ ಅಂತ ಹೆಸ್ರು ಇಟಗೊಂಡಿರೋ ಪ್ರೈವೇಟ್ ಸ್ಕೂಲ್‌ಗಳೇ ಚೆಂದ. ವರ್ಷವಿಡೀ ಇರೋ ಉರಿಬಿಸ್ಲಲ್ಲೂ ಮಕ್ಳು ಟೈ ಕಟ್ಲಿ, ಎಷ್ಟ್ ಚೆಂದ ಕಾಣ್ತಾರ್ ಗೊತ್ತಾ? ಅಮ್ಮ-ಅಪ್ಪ ಅನ್ನೋಕ್ ಮುಂಚೆ ಮಮ್ಮೀ-ಡ್ಯಾಡೀ ಅನ್ಲೀ ಆಗ್ಲೇ ನಮಗೊಂದ್ ಘನತೆ. ಅಯ್ಯೋ ಎಲ್ಲಾದ್ರೂ ಮಕ್ಳು ಓಡಾಡೋದು ಉಂಟೇ, ಕೈ ಕಾಲ್ ಸವದು-ಗಿವದು ಹೋದ್ರೆ ಕಷ್ಟಾ - ಹೋಗ್ ಕಾರಲ್ಲ್ ಬಿಟ್ಟ್ ಬನ್ನಿ, ಏನು?

ತಪ್ಪ್ ಮಾಡ್ದೇ ಸಾರ್ ನಾನು, ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಹುಟ್ಟಬೇಕಿತ್ತು. ನಮ್ಮ್ ಜನರೇಷನ್ನಲ್ಲಿರೋಷ್ಟು ಟೆನ್ಷನ್ನ್ ಎಲ್ಲಿದೆ ಹೇಳಿ...ನಾವೇ ದೊಡ್ಡೋರು, ನಾವೇ ಸರ್ವಸ್ವ, ನಮ್ಮದೇ ದೊಡ್ದು, ಗೊತ್ತಾಯ್ತಾ?

(Take it easy now)

Sunday, September 14, 2008

ನಿಮ್ standard ನಿಮಗೆ, ನಮ್ standard ನಮಿಗೆ

ಸಾರ್‍, ನೀವಾದ್ರೂ ಒಂದಿಷ್ಟ್ ಸಹಾಯಾ ಮಾಡ್ತೀರಾ? ನಾನು ನಮ್ ದೇಶದಲ್ಲಿರೋ ಕಂಪನಿಗಳ ಬಗ್ಗೆ, ಶಾಲೆಗಳ ಬಗ್ಗೆ ಅವರ ವೆಬ್‌ಸೈಟ್‌ನಲ್ಲಿ ಓದಿದ ಹಾಗೆಲ್ಲ ಎಲ್ರೂ ’State of the art', 'Best in class', 'Best of the breed' ಮುಂತಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನ ಹೇಳ್ಕೋತಾರಲ್ಲ, ಇವುಗಳನ್ನೆಲ್ಲ ಅದರ ಫೇಸ್‌ ವ್ಯಾಲ್ಯೂ ಅಂತ ತೆಗೊಂಡ್ರೆ ಹೇಗೆ? ತೆಗೊಳ್ಳೋ ಬೇಡವೋ ಅನ್ನೋ ಸಂಕಷ್ಟ ನನ್ನದು.

State of the art - ಅಂತ ಇವ್ರಿಗೆಲ್ಲ ಯಾರು ಬಿರ್ದು ಕೊಟ್ಟೋರು? ನನ್ನ ತಲೇಲೀ ಬರೀ ಪ್ರಶ್ನೆಗಳೇ ತುಂಬಿ ಬರ್ತವೆ ನೋಡಿ - ಭಾರತದ ಕಂಪ್ನಿಗಳು-ಶಾಲೆಗಳೆಲ್ಲ ಸ್ಟೇಟ್ ಆಫ್ ದಿ ಆರ್ಟ್ ಆದ್ರೆ, ಭಾರತ ಯಾಕೆ ಇನ್ನೂ ಬಿದ್ದು ಕೊಳೀತಾನೇ ಇರೋದೂ ಅಂತ?

ನನ್ ಸ್ನೇಹಿತ್ರ ಹತ್ರ ಹೇಳಿದ್ರೆ ನಿನಗೆ ತಲೆ ಸಮ ಇದೆಯಾ ಅಂತ ನಂಗೇ ಬೈತಾರೆ! ಅದ್ಯಾವ್ದೋ ISO ಅಂತ ಸ್ಟ್ಯಾಂಡರ್ಡ್ ಹೇಳಿ ತಲೆ ತಿಂತಾರೆ. ISO-CMM ಅವೆಲ್ಲಾ ನಮ್ ದೇಶದ ಸ್ಟ್ಯಾಂಡರ್ಡುಗಳಲ್ಲ ಕಣ್ರೋ, ನಮಿಗೆ ನಮ್ ದೇಶದ ಸ್ಟ್ಯಾಂಡರ್ಡೇ ಚೆಂದ, ಆ ಅಳತೇ ಕೋಲಿನಲ್ಲಿ ಅಳೆಯೋದೇನಾದ್ರೂ ಇದ್ರೆ ಹೇಳ್ರಿ ಅಂತಂದ್ರೆ ಬೆಬ್ಬೆಬ್ಬೆ ಅಂತಾರೆ. ನಮ್ಮನ್ನ ಅಳೆಯೋದಿಕೆ ಮಂದೀ ಕೋಲ್ಯಾಕೆ? ಮಂದೀ ಕೋಲಿನ್ಯಾಗ್ ನಮ್ಮನ್ ಅಳಕೊಂಡು ನಾವು ಯಾರನ್ನ ಹೆಂಗ್ ಕಂಪೇರ್ ಮಾಡೋದು ಅಂತ ಯೋಚ್ಸೀ ಯೋಚ್ಸೀ ತಲೆ ನುಣ್ಣಗಾತೇ ಹೊರತು ಅವರಪ್ಪನಾಣೆ ಇವತ್ತಿಗೂ ಉತ್ರಾ ಹೋಳೆದಿಲ್ಲಾ ನೋಡ್ರಿ.

ನಮ್ ದೇಶದಾಗೋ ನೂರು ಕೋಟಿ ಭರ್ತಿ ಜನಾ ಸಾರ್. ನೂರು ಕೋಟಿ ಜನಕ್ಕೆ ಸಾವಿರ ಕೋಟಿ ಮನಸು ಕೊಟ್ಟಾನೆ ಆ ದೇವ್ರು. ಅಂತರದಾಗೆ ನಾನು ಅದೆಲ್ಲೋ ಕುತಗಂಡು ಈ ಇಂಟರ್ನೆಟ್ಟು ಅನ್ನೋ ಪ್ರಪಂಚದೊಳಗಿಂದ ಇಣಕಿ ಹಾಕಿ ನೋಡಿದ್ರೆ ಈ ವೆಬ್‌ಸೈಟ್‌ಗಳನ್ನ ಬರೆಯೋರು ಬರೆಸೋರಿಗೆ ಒಂದಿಷ್ಟು ಕಾಮನ್ ಸೆನ್ಸ್ ಬ್ಯಾಡಾ? ತಮಿಗೆ ಏನೇನು ಬೇಕೋ ಅವನ್ನೆಲ್ಲ ಬರಕಂಡವರೆ ಅದರ ಪ್ರಕಾರ ಎಲ್ಲರ ಶಾಲೀನೂ ಬೆಸ್ಟ್ ರೀ. ಎಲ್ಲರ ಹತ್ರನೂ ’ದ ಬೆಸ್ಟ್’ ಟೀಚರ್ಸ್ ಇದಾರ್ ರೀ. ಎಲ್ಲಾ ಕಂಪನೀ ಒಳಗೂ ’ದ ಬೆಸ್ಟ್’ ಎಂಪ್ಲಾಯೀಸ್ ಇರೋರ್ ರೀ. ಹಿಂಗೆಲ್ಲಾ ಅಂದೂ ಅಂದೂ (ಬರೆದೂ ಬರೆದೂ) ಮೂಗಿಗೆ ತುಪ್ಪಾ ಸವರೋದ್ರಲ್ಲಿ ಶ್ಯಾಣ್ಯಾರ್ ನೋಡ್ರಿ ನಮ್ ಜನ. ನನ್ ಕೇಳಿದ್ರೆ ಈ ವೆಬ್‌ಸೈಟ್‌ಗಳ ಕಂಟೆಂಟ್ ಸ್ಕ್ರೂಟಿನಿ ಮಾಡೋಕ್ ಒಂದಿಷ್ಟ್ ಜನ ಇರಬೇಕ್ರಿ ಅಪ್ಪಾ. ಹಂಗೇನಾರಾ ಸುಳ್ಳೂ-ಪಳ್ಳೂ ಬರಕೊಂಡೋರನ್ನ ಇರಾಕ್-ಇರಾನ್‌ನ್ಯಾಗೆ ಹೊಡೆದು ಕೊಂದಂಗೆ ಕಲ್‌ನ್ಯಾಗ್ ಹೊಡೀಬಕು ಅಂತೀನಿ.

ಯಾರ್ ಹತ್ರ ದ ಬೆಸ್ಟ್ ಪ್ರಾಸೆಸ್ಸ್ ಇದಾವ್ರೀ? ಮನ್ಷಾ ಆದೋನು ಭೂಮಿಯಿಂದ ಚಂದ್ರಂಗೆ ರಾಕೇಟ್ ಕಳ್ಸಿ ಆರಾಮಾಗಿ ವಾಪಾಸ್ ತರಸೋದನ್ನ ಬಲ್ಲ, ಆದ್ರೆ ನೆಟ್ಟಗೆ ಸಾಫ್ಟ್‌ವೇರ್ ಡೆವಲಪ್ ಮಾಡೋದ್ ಕಲೀಲಿಲ್ಲ ಅಂತೀನಿ. ಎಲ್ಲೆಲ್ಲಿ ಕೋಡ್ ಮಾಡ್ತಾರೋ ಅಲ್ಲಲ್ಲಿ ಬಗ್‌ಗಳು ಇರ್ತಾವೆ, ಎಲ್ಲೆಲ್ಲಿ ಬಗ್‌ಗಳು ಇರ್ತಾವೋ ಅಲ್ಲಲ್ಲಿ ಬ್ರೇಕ್‌ಗಳು ಇರ್ತಾವೆ. ಇವೆಲ್ಲ ಮನುಜಕುಲ ಅನ್ನೋದು ತಮ್ಮ ಜಾಬ್ ಸೆಕ್ಯೂರಿಟಿಗೆ ಮಾಡಿಕೊಂಡಿರೋ ಒಂದು ವ್ಯವಸ್ಥೆ ಅನ್ಸೋಲ್ಲ? ನನ್ ಕೇಳಿದ್ರೆ ನೆಟ್ಟಗೆ ಒಂದು ತುಣುಕು ಕೋಡ್ ಬರೀದಿರೋ ಜನಕ್ಕೆ ಇನ್ನೇನು ಬಂದೀತು? ಇವತ್ತೇನಾದ್ರೂ ಇದೇ ಜನ ಪಿರಮಿಡ್ಡುಗಳನ್ನ ಕಟ್ಟಿದ್ರೆ ಇಷ್ಟೊತ್ತಿನ ಮಳೀಗೆ ಆ ಸೂರು ಸೋರಿ ಹೋಗ್ತಿತ್ತೋ ಏನೋ ಯಾರಿಗ್ ಗೊತ್ತು?

ನಂಗ್ ಗೊತ್ತು ನಾನೊಬ್ಬ ಹುಂಬಾ ಅಂತಂದು. ಎಲ್ರೂ ಒಳ್ಳೊಳ್ಳೇ ಪೊಗದಸ್ತಾದ ವೆಬ್‍ಸೈಟುಗಳನ್ನ ಕಟ್ಟಿಕೊಂಡು ಅದು ಹೇಗಿದೆಯೋ ಹಾಗೇ ನಾವಿದ್ದೇವೆ ಅಂತ ನಂಬಿಸೊದಕ್ಕೆ ಹೋಗ್ತಿದ್ದಾರೆ ಆದ್ರೆ ನಾನು ಅದನ್ನೆಲ್ಲ ನಂಬೋಲ್ಲ ಅಂತ. ಚರ್ಮದ ಕೆಳಗೆ ಅದೆಷ್ಟರ ಮಟ್ಟಿಗೆ ಇವರಿವರ ತರ್ಕ ಇಳಿದಿದೆ ಅಂತ ಕೆರೆದು ನೋಡಬೇಕು ಅನ್ಸುತ್ತೆ, ಆದ್ರೆ ಏನ್ ಮಾಡ್ಲಿ ವೆಬ್ ಸೈಟಿಗೆ ಚರ್ಮಾ ಅನ್ನೋದೇ ಇಲ್ವೇ? ಚರ್ಮ ಅಂತಿಲ್ಲದ ವೆಬ್‌ಸೈಟಿನ ಮೂಲ್ಕ ಜನರನ್ನ ನಂಬಿಸಿ ಆಕರ್ಷಿಸಿ ಬಿಸಿನೆಸ್ಸು ಮಾಡೋ ಇವರಿಗೆಲ್ಲ ನನ್ನಂಥ ದಡ್ರು ಗಿರಾಕಿಗಳ್ಯಾಕ್ ಆಗ್ಬೇಕು. ಈ ಬುದ್ಧಿವಂತ ಕಂಪ್ನಿಗಳಿಗೆ ಶಾಲೆಗಳಿಗೆ ಬುದ್ಧಿವಂತ ಕಷ್ಟಮರುಗಳೇ ಇರ್ಲಿ, ನಮ್ಮಂತ ದಡ್ಡರೆಲ್ಲ ಇನ್ಯಾವ್ದೋ ಮೂಲೆ ಸೇರ್ಲಿ ಏನಂತೀರಿ?

ನಿಮ್ standard ಏನೋ ಎಂತೋ, ನಮ್‌ದಂತೂ ಫೈವ್ ಸ್ಟಾರೂ ಅಲ್ಲ, ಸ್ಟೇಟ್ ಆಫ್ ದಿ ಆರ್ಟ್ ಇರ್ಲಿ ಕಾಮರ್ಸೂ ಅಲ್ಲ. ಅದಿರ್ಲಿ ಈ best of the class ಅನ್ನೋದಕ್ಕೆ state of the science ಅನ್ನೋದನ್ನ ಬಿಟ್ಟು art ಅಂತ ಯಾಕ್ ಅಂತಾರೆ? ನಾವು ಯಾವ್ದೂ ಜರ್ಮನ್ನೂ-ಜಪಾನರ ISO ಗೂ ತಲೆ ತೂಗೋಲ್ಲ. ನಮಿಗೆ ಬದುಕನ್ನ ಕಲ್ಸೋ ಪಾಠಗಳನ್ನ ಹೇಳ್ಕೊಡೋ ಬೇಸಿಕ್ ಎಜುಕೇಶನ್ ಇರ್ಲಿ ಅಂತ ಗುರುಕುಲದ ಕಥೆ ಹೇಳ್ತಿಲ್ಲ ನಾನು, ಇದ್ದಿದ್ದರಲ್ಲಿ ತಮ್ಮ ತಮ್ಮ ವೆಬ್‌ಸೈಟುಗಳಲ್ಲಿ ’ನಮ್ ಎಂಪ್ಲಾಯಿಗಳು ಹಂಗೆ-ಹಿಂಗೆ’ ಅಂತ ನಿಜವನ್ನಾದ್ರೂ ಹೇಳ್ಲಿ ಅಂತ ಅಷ್ಟೇ. ಕಪ್ಪೆಗಳನ್ನ ತಕ್ಕಡಿಯಲ್ಲಿಟ್ಟು ತೂಕಾ ಮಾಡೋರ್ ಹಾಗೆ ಎಂಪ್ಲಾಯಿಗಳನ್ನ ಹೈರು-ಫೈರು ಮಾಡೋ ಕಂಪನಿಗಳಲ್ಲಿ ಬಿಸಿನೆಸ್ಸು ಪ್ರಾಸೆಸ್ಸುಗಳು ಹೇಗೆ ನೆಲೆ ನಿಲ್ಲುತ್ವೆ? ಎಲ್ಲಿ ಬಿಸಿನೆಸ್ಸ್ ನೆಟ್ಟಗೆ ಗೊತ್ತಿರಲ್ವೋ ಅಲ್ಲಿ ತುಂಬಿ ತುಳುಕೋ ಟೆಕ್ನಾಲಜಿ ತಗೊಂಡು ಯಾವನ್ ಉದ್ದಾರಾಗಿದಾನೆ ನೀವೇ ಹೇಳಿ.