ಅದು ಅವರವರ ಕರ್ಮ
’ಅದು ಅವರವರ ಕರ್ಮ’ ಅನ್ನೋ ಮಾತನ್ನ ಅವರೂ ಇವರೂ ಬಳಸಿದ್ದನ್ನ ಕೇಳಿ ಅಭ್ಯಾಸವಿದ್ದ ನನಗೆ ಇತ್ತೀಚೆಗೆ ರಿಪೀಟ್ ಆಗುವಷ್ಟರ ಮಟ್ಟಿಗೆ ಈ ವಾಕ್ಯವನ್ನು ನಾನೇ ಬಳಸುತ್ತಿದ್ದೇನೆ ಎಂಬುದು ನಂಬಲಾಗದ ಮಾತೇ ಸರಿ. ಯಾವುದೇ ಕೆಟ್ಟ ಸುದ್ದಿ ಇರಲಿ ಒಳ್ಳೆಯ ಸುದ್ದಿ ಇರಲಿ, ಅವೆಲ್ಲಕ್ಕೂ ’ಅದನ್ನು ಅವರು ಪಡೆದುಕೊಂಡು ಬಂದಿದ್ದಾರೆ’ ಎನ್ನುವ ಅರ್ಥದಲ್ಲಿ ಬಳಸುವಂತೆ ’ಕರ್ಮ’ವೆಂಬ ಪದವನ್ನು ನಾನು ಉಪಯೋಗಿಸಿದ್ದು ನೋಡಿ ನನಗೇ ನಗು ಹಾಗೂ ಆಶ್ಚರ್ಯವೂ ಆಯಿತು.
ಭಾರತ ದೇಶದಲ್ಲಿ ಬೆಳೆದು ಬಂದ ಹಿನ್ನೆಲೆಯವರಿಗೆ ತಮ್ಮ ಫಿಲಾಸಫಿಯಲ್ಲಿ ಸಿಕ್ಕುವ ಉಪಮೆ, ರೂಪಕ, ಉಪಮಾನ, ತತ್ವ, ಆದರ್ಶಗಳ ಪಟ್ಟಿಯನ್ನು ಮಾಡುತ್ತಲೇ ಹೋದರೆ ಎಂಥ ಪುಸ್ತಕವೂ ಸಾಕಾಗದು. ನಮ್ಮ ತತ್ವಗಳೇ ಬೇರೆ, ನಮ್ಮ ಆದರ್ಶಗಳೇ ಬೇರೆ. ಭಾರತವೆನ್ನುವುದು ಹೀಗೇ ಇದೆ ಎಂದು ಒಂದೆರಡು ಹೋಲಿಕೆ, ಉದಾಹರಣೆಗಳನ್ನು ಕೊಟ್ಟು ಮುಗಿಸಲಾರದ ಮಾತು. ನಮ್ಮ ದೇಶ ಒಂದು ಅಗಾಧವಾದ ಸಾಗರ ಅಥವ ಸಮುದ್ರ, ಅದರ ಅಲೆಗಳನ್ನು ನೋಡಿ ಸಾಗರವನ್ನು ಅಳೆಯಲಾಗುವುದೇ? ವಿಶೇಷವೆಂದರೆ, ಒಂದು ಬಹುರಾಷ್ಟ್ರೀಯ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಆಫ್ರಿಕಾದಿಂದ ಹಿಡಿದು ಚೀನಾದವರೆಗೆ, ಇಸ್ರೇಲ್‌ನಿಂದ ಹಿಡಿದು ಚಿಲಿಯವರೆಗಿನ ಜನರನ್ನು ಕಂಡು ಮಾತನಾಡಿಸಿ, ಅವರೊಡನೆ ವ್ಯವಹರಿಸಿ ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ನಮಗೆಲ್ಲ ನಮ್ಮ ಬೆನ್ನ ಮೇಲೆ ಮೂಟೆಗಳು ಇರುವ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಂಸ್ಕೃತಿಯ ಹಿನ್ನೆಲೆ ಇದೆ, ಜೊತೆಗೆ ಅದು ನಮಗಿಂತಲೂ ಬೇರೆಯದೇ ಆಗಿದೆ ಎನ್ನುವುದು ಗಮನಕ್ಕೆ ಬರುವ ಅಂಶ. ಉದಾಹರಣೆಗೆ, ಭಾರತದ ಹಿನ್ನೆಲೆಯಿಂದ ಬಂದವರಿಗೆ ಒಂದು ಕಡೆ ಶ್ರೀ ರಾಮಚಂದ್ರ ಮರ್ಯಾದಾಪುರುಷೋತ್ತಮನೆಂಬ ಆದರ್ಶವೂ ಮತ್ತೊಂದು ಕಡೆ ವಿಭಿನ್ನ ನೆಲೆಯ ಶ್ರೀಕೃಷ್ಣನೂ ಇಬ್ಬರೂ ಒಂದೇ ವ್ಯಕ್ತಿಯ ಆದರ್ಶಗಳಾಗಿ ಕಂಡುಬರುವುದು ಸಾಮಾನ್ಯವಾಗಿ ಕಾಣಬಹುದು. ಅದೇ ಅಂಶವನ್ನು ನೈಜೀರೀಯಾದವರಿಗೋ, ರಷ್ಯನ್ನರಿಗೋ ವಿವರಿಸಿ ಹೇಳುವಾಗ ’ಹೌದಲ್ಲಾ!’ ಎನ್ನುವ ಲೈಟ್‌ಬಲ್ಬ್ ಎಷ್ಟೋ ಜನರ ಮನಸ್ಸಿನ್ನಲ್ಲಿ ಹೊತ್ತಿಕೊಳ್ಳಬಹುದು. ’...ಇತರರ ಸಂಸ್ಕೃತಿಯನ್ನು ಪ್ರೀತಿಸು’ ಎಂದು ಎಷ್ಟೋ ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಿದ ಗಾಂಧಿ ಮುಂಬರುವ ಗ್ಲೋಬಲೈಜೇಷನ್ನಿನ್ನ ಬಗ್ಗೆ ಆಲೋಚಿಸಿದ್ದರೇ ಅಥವಾ ನಮ್ಮೊಳಗೇ ಇರುವ ಅಪಾರ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದರೇ?
ನಿಮ್ಮ ಕುಟುಂಬದಲ್ಲಿ ಯಾರಾದರೂ ಪೊಲೀಸ್ ಇಲಾಖೆಯಲ್ಲೋ, ವೈದ್ಯಕೀಯ ವೃತ್ತಿಯಲ್ಲೋ ಕೆಲಸ ಮಾಡುತ್ತಿದ್ದರೆ ದಿನಕ್ಕೊಂದು ಬಗೆಯ ಮನಕರಗುವ ವರದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾರೋ ಸತ್ತರು, ಯಾರೋ ಧಾರುಣವಾಗಿ ಅಪಘಾತದಲ್ಲಿ ಅನುಭವಿಸಿದರು, ಇಂಥವರು ತಮ್ಮ ಮಕ್ಕಳಿಂದ ನರಳುತ್ತಿದ್ದಾರೆ, ಅಂಥವರು ತಮ್ಮ ಪೋಷಕರಿಂದ ಕಂಗಾಲಾಗಿ ಹೋಗಿದ್ದಾರೆ ಇತ್ಯಾದಿ ಇತ್ಯಾದಿ - ಈ ಮನಕಲಕುವ ಸಂಗತಿಗಳು ನಿಲ್ಲುವುದೇ ಇಲ್ಲ. ಮೇಲಿಂದ ಮೇಲೆ ಒಂದಲ್ಲ ಒಂದು ಘಟನೆಯನ್ನು ನೋಡುತ್ತ ನೋಡುತ್ತಲೇ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರ ಮನಸ್ಸು ರೋಸಿ ಹೋಗಿ, ’ಅದು ಅವರವರ ಕರ್ಮ’ ಎಂಬ ಜನರಲೈಸ್ಡ್ ಹೇಳಿಕೆಗಳು ಹೊರಬರುವುದೂ ಸಾಮಾನ್ಯವಾಗಿ ಹೋಗಿರಬಹುದು. ನಮ್ಮಲ್ಲಿ ಹೇಳೋ ಹಾಗೆ ’ದಿನಾ ಸಾಯೋರಿಗೆ ಅಳೋರು ಯಾರು?’. ಮೊನ್ನೆ ಇಲ್ಲಿ ಯಾವುದೋ ಒಂದು ಆಸ್ಪತ್ರೆಯ ಬಗ್ಗೆ ಓದುತ್ತಿದ್ದೆ ದಿನಕ್ಕೆ ಹದಿನಾರರಿಂದ-ಇಪ್ಪತ್ತು ಮಕ್ಕಳಿಗೆ ಹೆರಿಗೆ ಮಾಡಿಸುವ ಫೆಲಿಲಿಟಿ ಅದಂತೆ, ಅಲ್ಲಿ ಕೆಲಸ ಮಾಡುವ ನರ್ಸ್ ಅಥವಾ ಆಯಾಗಳ ಬದುಕನ್ನು ಊಹಿಸಿಕೊಂಡು ನೋಡಿ - ಮುಂಜಾನೆಯಿಂದ ಸಂಜೆ ಡ್ಯೂಟಿ ಮುಗಿಯುವವರೆಗೆ ಮಕ್ಕಳನ್ನು ಹೆರುವವರಿಗೆ ಸಹಾಯ ಮಾಡುವುದೇ ಕಾಯಕ - ಅವರ ಮನಸ್ಸಿನ ಚರ್ಮ ಅದೆಷ್ಟು ದಪ್ಪವಿರಬೇಡ!
***
’ಏನಮ್ಮಾ, ಒಂದಿಷ್ಟು ಹಾಲೂ ಮೊಸರನ್ನು ಚೆನ್ನಾಗಿ ತಗೋ, ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ...’ ಅನ್ನೋದು ನಾನು ನನ್ನಮ್ಮನಿಗೆ ವಾರಕ್ಕೊಮ್ಮೆ ಹೇಳೋ ಮಾತು. ಎಷ್ಟು ಹೇಳಿದ್ರೂ ನಮ್ಮಮ್ಮ ದಿನಕ್ಕೆ ಅರ್ಧ ಲೀಟರ್ ಹಾಲಿಗಿಂತ ಹೆಚ್ಚು ತೆಗೆದುಕೊಳ್ಳೋದೇ ಇಲ್ಲ, ಅದೂ ಸ್ಥಳೀಯ ಗೌಳಿಗರು ಕೊಡೋ ನೀರು ಹಾಲು (ಸಹಜವಾಗಿ ಫ್ಯಾಟ್ ಫ್ರೀ). ಅಯ್ಯೋ ನಾವಿಲ್ಲಿ ಎಷ್ಟೊಂದು ಐಶಾರಾಮದಲ್ಲಿ ಇದ್ದೇವೆ, ಅವರು ಅಲ್ಲಿ ಬಡವರಾಗಿ ಬದುಕುತ್ತಾರಲ್ಲ ಅನ್ನೋ ಒಂದು ನೋವು ನನ್ನ ಮನದಲ್ಲಿ ಯಾವತ್ತೂ ಇದ್ದೇ ಇರುತ್ತೆ. ನನ್ನನ್ನು ಹತ್ತಿರದಿಂದ ಬಲ್ಲವರು ಆ ನೋವನ್ನು ’ನೀವೇನೂ ನಿಮ್ಮ ಕುಟುಂಬಕ್ಕೆ ಮಾಡಿಲ್ಲ’ ಅನ್ನೋದು ನಿಮ್ಮ ಗಿಲ್ಟಿ ಮನೋಭಾವನೆ ಎಂದು ಸುಲಭವಾಗಿ ಹೇಳಿ ಬಿಡುತ್ತಾರಾದರೂ ನಾನು ಅಷ್ಟೊಂದು ಸುಲಭವಾಗಿ ಆ ಪಂಥದ ವಾದವನ್ನು ಒಪ್ಪಿಕೊಂಡಿಲ್ಲ. ದುಡ್ಡು ಕಳಿಸಿದರೂ ಎಷ್ಟೊಂದು ಹೇಳಿದರೂ ನನ್ನ ಅಮ್ಮ ಹಳ್ಳಿಯಲ್ಲಿನ ಬದುಕಿಗೆ ಒಗ್ಗಿ ಹೋಗಿದ್ದಾಳೆ, ಆಕೆಗೆ ಅದನ್ನು ಬಿಟ್ಟು ಬೇರೇನೇ ಇದ್ದರೂ ಅದು ಅಸಹಜ ಹಾಗೂ ಅಸಾಮಾನ್ಯ ಎನಿಸುವಾಗ ನಾನು ಏನೇ ಮಾಡಿದರೂ ಅದು ಹೊರಗೇ ಉಳಿದು ಹೋಗುತ್ತದೆ, ಹೋಗುತ್ತಿದೆ. ಆಫೀಸಿನಲ್ಲಿ ಬರೀ ಲೋಟಸ್ ನೋಟ್ಸ್‌ನಿಂದ ಔಟ್‌ಲುಕ್‌ಗೆ ಇ-ಮೇಲ್ ಬದಲಾಯಿಸಿದರೆನ್ನುವ ಬದಲಾವಣೆಯನ್ನು ಸ್ವೀಕರಿಸುವಾಗಲೇ ನನಗೆ ರೋಸಿ ಹೋಗುವಷ್ಟರ ಮಟ್ಟಿಗೆ ಉರಿದುಕೂಳ್ಳುವಾಗ ಇನ್ನು ಹಳ್ಳಿಯಲ್ಲೇ ತನ್ನ ಬದುಕನ್ನು ಸವೆಸಿದವಳನ್ನು ತೆಗೆದು ಪಟ್ಟಣದ ಬಂಗಲೆಯಲ್ಲಿ ಬಿಟ್ಟೆನಾದರೆ ಇಳಿ ವಯಸ್ಸಿನ ಆಕೆಯ ಮನಸ್ಸಿನ ಮೇಲೆ ಏನೇನು ಪರಿಣಾಮಗಳಾಗಲಿಕ್ಕಿಲ್ಲ? ಆ ಒಂದು ಸೆನ್ಸಿಟಿವಿಟಿಯಿಂದಲೇ ಆಕೆ ತನಗೆ ಬೇಕಾದ ಹಾಗೆ ಬದುಕಲಿ ಎಂದು ಸುಮ್ಮನಿದ್ದೇನೆ. ಅಲ್ಲಿ ಹೋಗಿ ಆಕೆಯ ಜೊತೆಯಲ್ಲಿ ಜೀವಿಸುವುದು ನನಗಾಗದ ವಿಚಾರ, ಆಕೆ ಇಲ್ಲಿಗೆ ಬಂದೋ ಅಥವಾ ನಾನಿರುವಲ್ಲಿಗೆ ಬಂದು ಬದುಕುವುದು ಆಗದ ಮಾತು. ಅದೇ ಅವರವರ ಕರ್ಮ, ಅದು ಅವರವರು ಪಡೆದುಕೊಂಡು ಬಂದುದು.
ನಿಮ್ಮ ಸುತ್ತ ಮುತ್ತಲೂ ’ಪರಾಕ್’ ಹೇಳುವ ಏನೇನೇ ವ್ಯವಸ್ಥೆಗಳಿದ್ದರೂ ಕೊನೆಗೆ ನಿಮ್ಮನ್ನು ಸರಳತೆಯಲ್ಲದೇ ಮತ್ತೆನೇ ಆವರಿಸಿಕೊಂಡರೂ ನಿಮ್ಮ ಬದುಕು ಅಷ್ಟೇ ಸಂಕೀರ್ಣವಾಗಿ ಹೋಗುತ್ತದೆ. ಒಂದು ಕಾಲದಲ್ಲಿ ಹಳ್ಳಿಯ ಬದುಕು ಹಾಗಿದ್ದವು, ಬಹಳ ಸರಳವಾಗಿ ಒಮ್ಮುಖವಾಗಿ ಹೋಗುತ್ತಿದ್ದವು. ದಿನಕ್ಕೆ ಹತ್ತು ಬಾರಿ ಗಡಿಯಾರ ನೋಡದೆಯೂ, ಆಧುನಿಕ ಬದುಕು ಸೃಷ್ಟಿಸಿದ ಹಣಕಾಸು ಎಂಬ ಗೊಂದಲವಿರದೆಯೂ ಬದುಕು ನಡೆಯುತ್ತಲೇ ಇತ್ತು. ಹಾಗಂತ ಕಷ್ಟ-ನಷ್ಟಗಳು ಇರಲಿಲ್ಲವೆಂದೇನಲ್ಲ: ಮೇಷ್ಟ್ರಾಗಿ ಇಬ್ಬರೂ-ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದವರಿಗೆ ಗೊತ್ತು, ಮಕ್ಕಳನ್ನು ಕಾಲೇಜಿನವರೆಗೆ ಜನರಲ್ ಮೆರಿಟ್‌ನಲ್ಲಿ ಓದಿಸಿದವರಿಗೆ ಗೊತ್ತು, ಜೀವನ ಪರ್ಯಂತ ಒಂದು ದಮಡಿ ಸಾಲವೆನ್ನದೇ ಇದ್ದಷ್ಟು ಚಾಚಿಕೊಂಡಿದ್ದವರಿಗೆ ಗೊತ್ತು ಕಷ್ಟಗಳು ಏನೆಂಬುದು. ನಮ್ಮ ಕಾಲದ ಜೀವನ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿವೆ ಎನ್ನುವುದಕ್ಕೆ ಮೊನ್ನೆ ರೆಡಿಯೋದಲ್ಲಿ ಕೇಳಿದ ಒಂದೆರಡು ಅವತರಣಿಕೆಗಳು ಸಾಕ್ಷಿಯಾಗಿದ್ದವು: ನಾವು ಹಿಂದಿಗಿಂತಲೂ ಅಧಿಕ ಮಾನಸಿಕ ಒತ್ತಡದಲ್ಲಿ ಬದುಕನ್ನು ಸವೆಸುತ್ತೇವೆ, ನಮ್ಮ ವಯೋಮಾನದಲ್ಲಿ ತಡವಾಗಿ ಮದುವೆಯಾಗಿ ಮಕ್ಕಳಾಗುತ್ತಿವೆ, ಹಿಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಅಗತ್ಯ ನಮಗಿದೆ. ಹಳೆಯದೆಲ್ಲ ಒಳ್ಳೆಯದು ಎನ್ನುವ ಮಾತಿನ ಹಿಂದೆ ಬರೀ ಇನ್‌ಫ್ಲೇಷನ್ನ್ ಸಂಬಂಧದ ಸುಖ ನೆನಪುಗಳನ್ನು ಮೆಲುಕು ಹಾಕುತ್ತಿದ್ದವನಿಗೆ ಬರೀ ಹಣದುಬ್ಬರವೊಂದೇ ಅಲ್ಲ, ಕೆಸರಿನಲ್ಲಿ ನಮ್ಮನಡರಿಕೊಂಡ ಬಳ್ಳಿಯ ಹಾಗಿನ ಅನೇಕ ಬೆಳವಣಿಗೆಗಳೂ ಕಾರಣ ಎನ್ನುವುದು ಹೊಳೆಯಿತು. ಇಪ್ಪತ್ತು ವರ್ಷದ ಹಿಂದೆ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತರುತ್ತಿದ್ದವನು ಈಗ ಒಂದು ಕೆಜಿ ಅಕ್ಕಿಗೆ ಮೂವತ್ತು ರುಪಾಯಿ ಕೊಡಬೇಕಾಗಿ ಬಂದುದು ದೊಡ್ಡ ವಿಷಯ, ಆದರೆ ಆಗಿನ ವ್ಯವಸ್ಥೆ ಅಲ್ಲಿ ಒಬ್ಬ ಮನೆಯ ಯಜಮಾನ/ನಿಯ ಮನದಲ್ಲಿ ಆಗುತ್ತಿದ್ದ ಮಾನಸಿಕ ಕ್ಷೋಭೆಗಳಿಗೂ ಈಗಿನ ಕುಟುಂಬದ ಆರೋಗ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಅಭ್ಯಸಿಸಿದ ಇಂಥ ವಿಷಯಗಳನ್ನು ಈ ಬ್ಲಾಗ್ ಪರಿಧಿಯಲ್ಲಿ ಹೇಳುವುದಕ್ಕಾಗಲೀ ಕೇಳುವುದಕ್ಕಾಗಲೀ ಸರಿಯಾದ ವೇದಿಕೆ ಅಲ್ಲವೆಂಬುದರ ಅರಿವು ನನಗಿದೆ, ನನ್ನ ಸೋಲುತ್ತಿರುವ ಭಾಷೆಯಲ್ಲೇ ’ಅವರವರು ಪಡೆದುಕೊಂಡು ಬಂದದ್ದರ’ ಬಗ್ಗೆ, ನಮ್ಮ ಕರ್ಮದ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೇ.
ಇದನ್ನು ಓದುವುದೂ ಬಿಡುವುದೂ ನಿಮಗೆ ಬಿಟ್ಟಿದ್ದು!