ಎಲ್ಲವೂ ಆನ್‌ಲೈನ್ ಮಯ...
ಎಲ್ಲವೂ ಆನ್‌ಲೈನ್ ಅನ್ನೋ ಕಾಲದಲ್ಲಿ ನಮ್ಮ ಭಾರತೀಯ ಬ್ಯಾಂಕಿಂಗ್ ಅಗತ್ಯಗಳಿಗೆ ಇವತ್ತಿಗೂ ಫೋನ್ ಮಾಡಿಯೋ ಅಥವಾ ಪತ್ರ ಬರೆದೋ ಮುಟ್ಟುವ ಅಗತ್ಯವಿರುವ ಹೊತ್ತಿಗೆ ಎಷ್ಟೋ ಭಾರತೀಯ ಸಂಸ್ಥೆಗಳೂ ಇತ್ತೀಚೆಗೆ ಕಂಪ್ಯೂಟರ್ ಲಾಗ್‌ಇನ್ ವ್ಯವಸ್ಥೆಯನ್ನು ಕೊಡುತ್ತಿವೆ ಎಂದು ನನಗೆ ತಿಳಿದದ್ದು ಇತ್ತೀಚೆಗೆ ಮಾತ್ರ. ವಿಶ್ವದ ಮಹಾಬ್ಯಾಂಕ್ ಸಿಟಿಬ್ಯಾಂಕ್‌ನಿಂದ ಹಿಡಿದು ನನ್ನ ಪೇವರೈಟ್ ಬ್ಯಾಂಕಾದ ಮೈಸೂರು ಬ್ಯಾಂಕಿನವರೆಗೆ ಈ ದಿನಗಳಲ್ಲಿ ಹೆಚ್ಚೂ ಕಡಿಮೆ ಎಲ್ಲ ಟ್ರಾನ್ಸಾಕ್ಷನುಗಳನ್ನು ಕಂಪ್ಯೂಟರ್ ನೆಟ್‌ವರ್ಕ್ ಮೂಲಕ ಎಲ್ಲಿದ್ದರೂ ಎಲ್ಲಿಂದಲಾದರೂ ಮಾಡಬಹುದು ಎನ್ನುವುದು ನಿಜವಾಗಲೂ ಥ್ರಿಲ್ಲಿಂಗ್ ಅನುಭವವಲ್ಲದೇ ಮತ್ತಿನ್ನೇನು?
ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿ ಈ ವ್ಯವಸ್ಥೆ ಯಾವಾಗಿನಿಂದಲೋ ಇದೆ, ಆದರೇ ಕರ್ನಾಟಕದ ರಿಮೋಟ್ ಎನ್ನುವ ಹಳ್ಳಿ, ಹೋಬಳಿಗಳಲ್ಲಿ ಎಟಿಎಮ್ ಕಾರ್ಡ್ ವ್ಯವಸ್ಥೆ ಬಂದಿದ್ದು ಇತ್ತೀಚೆಗೆ ಮಾತ್ರ. ಒಂದು ಊರಿಗೆ ಎಟಿಎಮ್ ವ್ಯವಸ್ಥೆ ಬಂದು ಅಲ್ಲಿನ ಜನರ ಜೇಬು ಪಾಕೇಟುಗಳಲ್ಲಿ ವೀಸಾ/ಮಾಸ್ಟರ್‌ಕಾರ್ಡ್ ಲೋಗೋಗಳು ಸ್ಥಳೀಯ ಬಿಸಿಲಿಗೆ ಮಿಂಚತೊಡಗಿದ್ದರ ಬಗ್ಗೆ ಉದಾರೀಕರಣ, ವ್ಯವಹಾರ, ಜಾಗತೀಕರಣ, ಬಂಡವಾಳಶಾಹಿ ವ್ಯವಸ್ಥೆ, ಅಭಿವೃದ್ಧಿ, ಕಂಪ್ಯೂಟರ್ ನೆಟ್‌ವರ್ಕ್ ಮುಂತಾದ ಯಾವುದೇ ನೆಲೆಗಟ್ಟಿನಲ್ಲೂ ಸಾಕಷ್ಟು ಚಿಂತನೆ ನಡೆಸಬಹುದು. ಒಂದು ಕಾಲದಲ್ಲಿ ಬ್ಯಾಂಕಿಗೆ ಹಣ ಸಂದಾಯ ಮಾಡಿ ನಮ್ಮ ಹಣವನ್ನೇ ನಾವು ತೆಗೆಯುವಾಗಲೂ ಅದ್ಯಾವುದೋ ಅವ್ಯಕ್ತ ಮುಜುಗರಕ್ಕೆ ಒಳಪಡಬೇಕಾಗಿದ್ದ ನಮ್ಮಲ್ಲಿ ಇಂದಿನ ಅನುಕೂಲಗಳು ಅದೆಂತಹ ಟ್ರಾನ್ಸ್‌ಪರೆನ್ಸಿಯನ್ನು ಹುಟ್ಟುಹಾಕಿವೆಯೆಂದರೆ, ನಮ್ಮ ಹಣವನ್ನು ನಾವೇ ಎಲ್ಲಿಂದ ಬೇಕಾದರೂ ಹೇಗೆ ಬೇಕಾದರೂ ಬಳಸಬಹುದು ಎನ್ನುವುದು ಇವತ್ತಿಗೆ ಹಳ್ಳಿಗಳಲ್ಲೂ ನಿಜ.
ಕೇವಲ ಹತ್ತು ಹದಿನೈದು ವರ್ಷಗಳ ಹಿಂದೆ, ಉತ್ತರ ಭಾರತದ ಕೆಲವು ಕಡೆ, ದಕ್ಷಿಣ ಭಾರತದ ಉದ್ದಗಲಕ್ಕೂ ಬ್ಯಾಂಕಿನ ಪರೀಕ್ಷೆಗಳನ್ನು (BSRB) ತೆಗೆದುಕೊಂಡು ಬ್ಯಾಂಕಿನಲ್ಲಿ ಕ್ಲರ್ಕ್ ಕಮ್ ಕ್ಯಾಷಿಯರ್ ಅಥವಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಗೊಳ್ಳುವುದು ಮಹಾನ್ ವಿಷಯವಾಗಿತ್ತು. ನಮ್ಮ ದೇಶದ ಘನತೆಯಾದ ಲಕ್ಷಾಂತರ ಪದವಿಧರರಲ್ಲಿ ಕೇವಲ ಹತ್ತು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ಜನರು ಪರೀಕ್ಷೆಗೆ ತಕ್ಕ ತಯಾರಿಯನ್ನು ನಡೆಸಿಕೊಂಡು ಅದೇ ಮೊಟ್ಟ ಮೊದಲ ಬಾರಿಗೆ ಎಂಬಂತೆ ರೀಸನಿಂಗ್, ಇಂಗ್ಲೀಷ್, ಮ್ಯಾಥ್‌ಮ್ಯಾಟಿಕ್ಸ್ ಮುಂತಾದವುಗಳಲ್ಲಿ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಸಕಾಲದಲ್ಲಿ ಎದುರಿಸಿ, ಮುಂದೆ ಸಂದರ್ಶನದ ಮಜಲನ್ನು ದಾಟಿ ಸಾಯುವವರೆಗೆ ಊಟ ಹಾಕುವ "ಬ್ಯಾಂಕ್" ಎನ್ನುವ ವ್ಯವಸ್ಥೆಯನ್ನು ಸೇರುವುದು ಬಹಳ ದೊಡ್ಡ ವಿಷಯವಾಗಿತ್ತು. ಹೀಗಿರುತ್ತಿದ್ದ ಈ ಬ್ಯಾಂಕ್ ಪರೀಕ್ಷೆಗಳು ಮೊಟ್ಟ ಮೊದಲ ಬಾರಿಗೆ ಯಾವಾಗ ಶುರುವಾದವೋ ಗೊತ್ತಿಲ್ಲ, ತೊಂಭತ್ತರ ದಶಕದಲ್ಲಂತೂ ಈ ಹುದ್ದೆಗಳಿಗೆ ಅತೀವ ಬೇಡಿಕೆ ಇತ್ತು ಎನ್ನುವ ಹಾಗೆ ಕೋಟ್ಯಾಂತರ ಜನರು ಪರೀಕ್ಷೆಯನ್ನು ಎದುರಿಸುತ್ತಿದ್ದರು, ಅದರಲ್ಲಿ ತೇರ್ಗಡೆಯಾಗಿ ಮುಂದೆ ಹೋದ ಎಷ್ಟೋ ಜನರ (ನನ್ನ ಸಹಪಾಠಿಗಳಲ್ಲಿ) ಮನೆಗಳಲ್ಲಿ ಇಂದಿಗೂ ಬ್ಯಾಂಕ್ ನೌಕರನಾಗಿರುವುದು ಬಹಳ ಹೆಮ್ಮೆಯ ವಿಷಯವೂ ಹೌದು. ಮಧ್ಯಮ ವರ್ಗವನ್ನು ಸಾಯುವವರೆಗೆ ನೆನಪಿನಲ್ಲಿಡುವಂತೆ ಮಾಡುವ, ಇನ್ನೊಬ್ಬರ ಲೆಕ್ಕಪತ್ರವನ್ನು ಬರೆದು ಜೋಪಾನ ಮಾಡಿಡುವ, ಪ್ರತಿ ಮೂರು ವರ್ಷಗಳಿಗೊಮ್ಮೆ ಊರು ಬಿಟ್ಟು ಊರು ಸೇರುವಂತೆ ಮಾಡುವ ಈ ಕಾಯಕವನ್ನು ನಾನು ದ್ವೇಷಿಸುತ್ತಿದ್ದೆ ಎಂದೇ ಹೇಳಬೇಕು. ’ನನ್ನ ಲೆಕ್ಕಗಳನ್ನು ನಾವೇ ಬರೆದಿಡೋಲ್ಲ, ಇನ್ನು ಮಂದಿಯ ಲೆಕ್ಕವನ್ನು ನಾನೇಕೆ ಬರೆದಿಡಲಿ?’ ಎನ್ನುವುದು ನನ್ನ ಚೀಪ್ ಜೋಕ್‌ಗಳಲ್ಲಿ ಒಂದು, ಅದನ್ನು ನಾನು ನನ್ನ ಬ್ಯಾಂಕ್ ಮಿತ್ರರೊಂದಿಗೆ ಹೇಳಿಕೊಂಡು ನಕ್ಕಿದ್ದಿದೆ.
ನಾನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗೆ ಯಾರೋ ಕೊಟ್ಟ ಚೆಕ್ ತೆಗೆದುಕೊಂಡು ನಮ್ಮೂರಿನ ಕರ್ನಾಟಕ ಬ್ಯಾಂಕ್ ಒಳ ಹೊಕ್ಕಾಗ ನನ್ನ ಮನದಲ್ಲಿ ತುಂಬಿಕೊಂಡ ಬೇಕಾದಷ್ಟು ಅವ್ಯಕ್ತ ಭಯಗಳು ಇವತ್ತಿಗೂ ಇಲ್ಲಿನ ಬ್ಯಾಂಕ್‌ಗಳನ್ನು ಹೊಕ್ಕಾಗ ಸತಾಯಿಸುತ್ತವೆಯೇನೋ ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ನಾನು ಚೆಕ್ ತೆಗೆದುಕೊಂಡು ಹೋಗಿ ಯಾರಲ್ಲಿ ಕೊಡುವುದು ಹೇಗೆ ಕೊಡುವುದು ಎಂದು ಮನಸ್ಸಿನಲ್ಲಿ ಸಂಘರ್ಷವನ್ನು ನಡೆಸಿಕೊಂಡು ಬ್ಯಾಂಕ್ ಒಳಹೊಕ್ಕರೆ ನಾನು ಅಲ್ಲಿನ ಕಟಕಟೆಯಷ್ಟು ಎತ್ತರವೂ ಇದ್ದಿರಲಿಲ್ಲ. ಅಲ್ಲೆಲ್ಲಾ ನನ್ನ ತಲೆ ಮಟ್ಟಕ್ಕಿಂತಲೂ ಎತ್ತರವಾದ ವಿಶಾಲವಾದ ಮೇಜುಗಳು (ಸಾಮಾನ್ಯವಾಗಿ L ಆಕಾರದಲ್ಲಿರುವವಗಳು), ಅದರ ಕೊನೆಗೆ ಒಂದು ಸಣ್ಣ ಡಿಪ್, ಅದರ ಪಕ್ಕದಲ್ಲಿ ಕ್ಯಾಷಿಯರ್ ಕುಳಿತುಕೊಳ್ಳುವ ಕಬ್ಬಿಣದ ಕಟಕಟೆ. ಹೋಗಿ ಕ್ಯಾಷಿಯರ್ ಪಕ್ಕದವರಿಗೆ ಚೆಕ್ ಕೊಟ್ಟರೆ ಕಟಕಟೆಯಲ್ಲಿರುವವರಿಗೆ ಕೊಡಿ ಎಂದರು, ಅಲ್ಲಿ ಕೊಟ್ಟರೆ ಇಲ್ಲಿ ಸಹಿ ಮಾಡಿ ಎನ್ನುವ ಆದೇಶ, ಅದರ ಬೆನ್ನಿಗೆ ಸಣ್ಣ ಕಂಡಿಯಲ್ಲಿ ತೂರಿಕೊಂಡು ಬರುವ ನಡುವೆ ತೂತವಿದ್ದ ಒಂದು ಕಾಯಿನ್ ಮಾದರಿಯ ’ಟೋಕನ್’. ಅದರ ಮೇಲೆ ಮುದ್ರಿತವಾದ ನಂಬರ್ ಅನ್ನು ಕರೆಯುವವರೆಗೆ ಕುಳಿತು ಕಾಯಿ ಎನ್ನುವ ’ನಮಗೇನ್ ಆಗಬೇಕು’ ಎನ್ನುವ ಧೋರಣೆ! ಅಂತೂ ಇಂತೂ ನಮಗೆ ಸಿಗಬೇಕಾದ ದುಡ್ಡು ಕೈಗೆ ಬಂದಾಗ ಅದೇನೋ ಅಗಾಧವಾದ ಖುಷಿ! ಚಡ್ಡಿ ಜೇಬಿನಲ್ಲಿ ಕುಳಿತ ಕ್ಯಾಷಿಯರ್ ಕೊಟ್ಟ ಗರಿಗರಿ ನೋಟನ್ನು ದಾರಿ ಉದ್ದಕ್ಕೂ ಭದ್ರವಾಗಿ ಮುಟ್ಟಿ ನೋಡಿಕೊಳ್ಳುವುದರ ಜೊತೆಗೆ ’ಅಲ್ಲಾ, ನಮ್ಮ ದುಡ್ಡನ್ನು ಬ್ಯಾಂಕ್‌ನಲ್ಲಿ ನಾವೇಕೆ ಇಡಬೇಕು, ಇಷ್ಟೆಲ್ಲಾ ಪರಿಪಾಟಲೆ ಯಾಕೆ?’ ಎನ್ನುವ ಪ್ರಶ್ನೆಗಳು ಬೇರೆ. ಮನೆಯಲ್ಲಿ ಹೋಗಿ ಕೇಳಿದರೆ ಸಂಬಳ ನೇರವಾಗಿ ಬ್ಯಾಂಕ್‌ಗೇ ಹೋಗೋದರಿಂದ ನಾವು ಅಲ್ಲಿಗೆ ಹೋಗಿಯೇ ಹಣವನ್ನು ತೆಗೆದುಕೊಳ್ಳಬೇಕು, ಇಲ್ಲವಾದರೆ ಇಲ್ಲ ಎನ್ನುವ ಧೋರಣೆಯ ’ನಮ್ಮೂರಿನ ಆರ್ಥಿಕ ವ್ಯವಸ್ಥೆಯ ಮೊದಲ ಪಾಠ.
ಸಂಬಳ ನೇರವಾಗಿ ಹೋಗಿ ಬ್ಯಾಂಕ್ ಸೇರುತ್ತದೆ ಎನ್ನುವುದರಲ್ಲಿ ಇವತ್ತಿಗೂ ಬಹಳಷ್ಟೇನೂ ಬದಲಾಗಿಲ್ಲ - ಅಲ್ಲವೇ? ಅಂದಿನ ದಿನಗಳಲ್ಲಿ ನಾವೆಲ್ಲ ’ಸಂಬಳ’ವನ್ನು ಪಡೆಯುವುದನ್ನು ದೊಡ್ಡದಾಗಿ ಪರಿಗಣಿಸಿ ಇಂದು (ಇಂದಿಗೂ) ಸಂಬಳದಾರರಾಗಿಯೇ ಉಳಿದು ಬಿಟ್ಟೆವು. ಮೊದಲತೇದಿ ಚಿತ್ರದ ’ಒಂದರಿಂದ ಇಪ್ಪತ್ತರವರೆಗೆ ಉಂಡಾಟ’ ಹಾಡನ್ನು ಕೇಳಿದ ನಮ್ಮೂರಿನ ವೈಶ್ಯ ಯುವಕರು ತಮ್ಮ ಕುಟುಂಬದ ವ್ಯವಹಾರವನ್ನು ಅನುಸರಿಸಿಕೊಂಡು ಮುಂದೆ ಹೋದರೆ ಸಂಬಳದಾರರ ಮಕ್ಕಳಾದ ನಾವು ಸಂಬಳಕ್ಕೆ ದುಡಿಯುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡೆವು.
***
ಎಲೆಕ್ಟ್ರಾನಿಕ್ ಯುಗದ ವಿಶೇಷತೆ ಏನೆಂದರೆ ಹಣಕಾಸಿನ ವ್ಯವಹಾರವೆಲ್ಲ ದಾಖಲೆಗಳಲ್ಲೇ ನಡೆದು ಹೋಗುವುದು. ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಒಂದು ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದರ ಮೂಲಕ ಮಾಡುವಂತೆ ಆಗಿರುವುದು ಒಂದು ವರದಾನವೇ ಸರಿ, ಮೊದಲೆಲ್ಲ ಆನವಟ್ಟಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುವವರು ತಮ್ಮ ಹಣವನ್ನು ದಾರಿಯಲ್ಲಿ ಕಳೆದುಕೊಂಡು ಪಜೀತಿಗೆ ಸಿಕ್ಕ ಉದಾಹರಣೆಗಳು ಈಗ ಸಿಗಲಾರವು. ಹೀಗೇ ನಿಧಾನಕ್ಕೆ ಈ ವ್ಯವಸ್ಥೆ ಬೆಳೆದೂ ಬೆಳೆದೂ ಜನರು ಹಾರ್ಡ್ ಕರೆನ್ಸಿಯನ್ನು ತಮ್ಮ ಕಬ್ಬಿಣದ ಬೀರುಗಳಲ್ಲಿ ಕೂಡಿಹಾಕುವ ಕಾಲ ಕಡಿಮೆಯಾಗಿ ಅದನ್ನು ಅಲ್ಲಲ್ಲಿ ತೊಡಗಿಸುವ ಕಾಲ ಬರಲಿ, ಜೊತೆಗೆ ಕಪ್ಪುಹಣದ ವ್ಯವಸ್ಥೆ ಕುಸಿಯಲಿ ಎಂದು ವಾದವನ್ನು ಮಾಡುತ್ತಾ, ಅದರ ಬೆನ್ನಿಗೇ ಲಂಚವೆನ್ನುವ ಶಾಪ ನಮ್ಮ ವ್ಯವಸ್ಥೆಯಿಂದ ದೂರಾಗುವಂತಿದ್ದರೆ ಎನ್ನುವುದು ನಿಜವಾಗಿಯೂ ಆಶಾದಾಯಕವಾದ ಆಲೋಚನೆ ಅಲ್ಲದೇ ಮತ್ತಿನ್ನೇನು?
ಆನ್‌ಲೈನ್ ವ್ಯವಸ್ಥೆಯ ಹಿನ್ನೆಲೆಯಲ್ಲಿನ ಒಂದೇ ಒಂದು ಬೇಸರ ಸಂಗತಿಯೆಂದರೆ - ಈ ಕಳೆದ ಹತ್ತು ವರ್ಷಗಳಿಂದ ನನಗೆ ಹಲವಾರು ರೀತಿಯ ಸಹಾಯ ಮಾಡಿದ ನಮ್ಮೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿ ವರ್ಗದವರ ಜೊತೆ ಸಂಪರ್ಕ ಕಡಿದು ಹೋಗಿದ್ದು. ನಾನು ಒಂದು ಫೋನ್ ಕಾಲ್ ಮಾಡಿ ಹೇಳಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ನಾನು ಹೇಳಿದವರಿಗೆ ತಲುಪಿಸುತ್ತಿದ್ದ ಅವರ ಸರ್ವೀಸ್ ಅನ್ನು ಅಮೇರಿಕದ ಬ್ಯಾಂಕ್‌ಗಳೂ ಕೊಡಲಾರವು ಎಂದು ನಾನು ಬೇಕಾದಷ್ಟು ಹೊಗಳಿದ್ದೇನೆ. ಪ್ರತಿವರ್ಷದ ಹಬ್ಬಕ್ಕೋ ಅಥವಾ ಮತ್ತಿತರ ಕಾರಣಗಳಿಗೋ - ಅಲ್ಲಿಂದ ಗ್ರೀಟಿಂಗ್ ಕಾರ್ಡ್‌ಗಳನ್ನು ಕಳಿಸಿದ, ಸ್ಟೇಟ್‌ಮೆಂಟ್‍ಗಳ ಜೊತೆಗೆ ಕ್ಯಾಲೆಂಡರನ್ನು ಕಳಿಸಿದ ಎಷ್ಟೋ ಘಟನೆಗಳು ನಮ್ಮೂರಿನ ಬ್ಯಾಂಕ್ ಅನ್ನು ಎತ್ತಿ ಹಿಡಿಯುತ್ತವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾದ ಮ್ಯಾನೇಜರುಗಳು ನಾನು ಅವರ ಮುಖ ನೋಡಿ ಮಾತನಾಡಿಸದಿದ್ದರೂ ನಮ್ಮೂರಿನ ಕೆಲವೇ ಕೆಲವು ಎನ್‌ಆರ್‌ಐ ಅಕೌಂಟು ಹೋಲ್ಡರುಗಳಲ್ಲಿ ಒಬ್ಬನು ಎಂಬ ಅಭಿಮಾನವನ್ನು ತಲತಲಾಂತರದಿಂದ ಇಟ್ಟುಕೊಳ್ಳುತ್ತಲೇ ಬಂದಿದ್ದಾರೆ, ನಾನು ಹೋದಾಗಲೆಲ್ಲ ಆತ್ಮೀಯವಾಗಿ ಮಾಡಿಸಿ ತಮ್ಮ ಕೈಲಾದ ಸಹಾಯವನ್ನೂ ಮಾಡಿದ್ದಾರೆ.
ಈ ಆನ್‌ಲೈನ್ ಪ್ರಪಂಚದಲ್ಲಿ ಅಂತಹ ಸೇವೆಗಳನ್ನು ಎಲ್ಲಿಂದ ಹುಡುಕಿ ತರಲಿ?