ವಿಪರ್ಯಾಸ ಹಾಗೂ ವಿಶೇಷ
ನಿಮಗೆಲ್ಲಾ ನೆನಪಿದೆಯೋ ಇಲ್ವೋ ನಾವಂತೂ ಒಂದ್ ಕಾಲದಲ್ಲಿ ಯುಎಸ್‌ಗೆ ಬರಬೇಕು ಅಂತ ತಹತಹಿಸ್ತಾ ಇದ್ವಿ, ಸದಾಶಿವನಿಗೆ ಅದೇ ಧ್ಯಾನ ಅಂತ ಹಗಲೂ ರಾತ್ರೀ ಯಾವತ್ತ್ ಯುಎಸ್. ಗೆ ಹೋಗ್ತೀವೋ ಅಂತ ತಲೆ ಕೆಡಿಸಿಕೊಂಡಿದ್ದೇ ಕೊಂಡಿದ್ದು, ಇದ್ದ ಬದ್ದ ಟೆಕ್ನಾಲಜಿ ಪುಸ್ತಕಗಳನ್ನೆಲ್ಲ ಓದಿದ್ದೇ ಓದಿದ್ದು. ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ, 1995 ರ ಹೊತ್ತಿಗೆ ಪ್ರಪಂಚದಲ್ಲಿ ಇನ್ನೂ ಉಳಿದ ದೇಶದವರು ಚೇತರಿಸಿಕೊಳ್ತಾ ಇರಬೇಕಾದ್ರೆ, Y2K ಅನ್ನೋ ಬಕಾಸುರನಿಗೆ ಮುಂದುವರೆದ ದೇಶಗಳು ಆಹಾರವನ್ನು ತಯಾರಿಸಿಕೊಳ್ಳಬೇಕು ಅನ್ನೋ ಕಲ್ಪನೆಯನ್ನು ತಲೆಯನ್ನು ಹೊಕ್ಕಿಸಿಕೊಳ್ಳೋ ಮೊದಲೇ ಭಾರತದಲ್ಲಿ ಬೇಕಾದಷ್ಟು ಉದ್ದಾಮರು ಆಧುನಿಕ ತಂತ್ರಜ್ಞಾನವನ್ನು ತಂದು ಬಿಟ್ಟಿದ್ದರು. ನಾವು ಓದಿ ಕೆಲ್ಸಾ ಮಾಡ್ತಾ ಇರೋ ಮದ್ರಾಸಿನ ಹೊರವಲಯದಲ್ಲಿರೋ ಪೆಂಟಾಫೋರ್ ಸಂಸ್ಥೆಯಲ್ಲಿ ಆಗ್ಲೇ ಎಲ್ಲಾ ಥರದ ಹಾರ್ಡ್‌ವೇರುಗಳನ್ನು ಕಲೆಹಾಕಿ, ಸಿಲಿಕಾನ್ ಗ್ರಾಫಿಕ್ಸ್ ಸಿಸ್ಟಮ್ಮ್‌ಗಳನ್ನು ಹುಟ್ಟುಹಾಕಿ, ಸಿಡಿ ಬರ್ನರ್ ಉತ್ಪಾದಕ ಘಟಕವನ್ನೂ, ಟ್ರೈನಿಂಗ್ ಸೆಂಟರನ್ನೂ ಕೋಟ್ಯಾಂತರ ರೂಪಾಯಿಯ ಬಂಡವಾಳದಲ್ಲಿ ಮೇಲೆತ್ತಿ ನಿಲ್ಲಿಸಿದ ಮುತ್ಸದ್ದಿಗಳ ದೂರದೃಷ್ಟಿಯನ್ನು ಎಂಥವರೂ ಮೆಚ್ಚಲೇ ಬೇಕು.
ತಂತ್ರಜ್ಞಾನ ಕಲಿತು ಭಾರತವನ್ನು ಬಿಟ್ಟವರ ಸಂಖ್ಯೆ ಬಹಳ - ಅದಕ್ಕಿಂತ ಹಿಂದೆ ಎಪ್ಪತ್ತು ಎಂಭತ್ತರ ದಶಕದಲ್ಲಿ ಡಾಕ್ಟರುಗಳು ಹಾಗೂ ಕೆಲವೇ ಕೆಲವು ಇಂಜಿನಿಯರುಗಳು ದೂರಕ್ಕೆ ಹೋಗುತ್ತಿದ್ದರೇನೋ. ತೊಂಭತ್ತರ ದಶಕದ ಅಂತ್ಯದಲ್ಲಂತೂ H1B ಕೋಟಾವನ್ನು ದುಪ್ಪಟ್ಟು ಹೆಚ್ಚಿಸುವಷ್ಟರ ಮಟ್ಟಿಗೆ ಭಾರತದಿಂದ ಕೆಲಸಗಾರರು ಹೊರಗೆ ಹೋಗಲಾರಂಭಿಸಿದರು. ಒಂದಿಷ್ಟು ಅಂಕಿ-ಅಂಶಗಳ ಪ್ರಕಾರ ಇದ್ದಬದ್ದ ವೀಸಾ ಕೆಟಗರಿಯಲ್ಲಿ ಭಾರತದವರದ್ದೇ ಸಿಂಹಪಾಲು (೪೬%). Y2K ಕೆಲಸಗಳೆಲ್ಲ ಮುಗಿದು ಮಿಲೆನಿಯಮ್ ನಂತರ ಒಂದಿಷ್ಟು ಜನರಿಗೆ ನಿರಾಶೆಯ ಮೋಡ ಕವಿದು ಅವರು ಕೆಲಸವಿಲ್ಲದೇ/ಸಿಗದೇ ಭಾರತಕ್ಕೆ ಹಿಂತಿರುಗಿ ಹೋಗಬೇಕಾದ್ದನ್ನೂ ನಮ್ಮ ತಲೆಮಾರು ಕಂಡಿದೆ. ಉದಯವಾಣಿಯಂತಹ ಪೇಪರುಗಳಲ್ಲಿ ಅಮೇರಿಕದಿಂದ ಹಿಂತಿರುಗಿ ಬರುತ್ತಿರುವ ಕೆಲಸಗಾರರ ಬಗ್ಗೆ ಬರೆದದ್ದನ್ನು ಓದಿ ಎಷ್ಟೋ ಜನ ಕಂಗಾಲಾಗಿದ್ದೂ ಇದೆ. ಆದರೆ ಡಾಟ್ ಕಾಮ್ ಬಬಲ್ ಒಡೆದ ಹೊಡೆತವನ್ನು ಭಾರತದ ಟೆಕ್ನಾಲಜಿ ಕಂಪನಿಗಳು ಅರಗಿಸಿಕೊಳ್ಳಲು ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ, ಬಿಪಿಓ, ಬಿ.ಟಿ. ಮುಂತಾದವುಗಳ ದೆಸೆಯಿಂದ ಇಂದಿಗೂ ಬೇಕಾದಷ್ಟು ರೂಪಾಯಿ-ಡಾಲರನ್ನು ಗಳಿಸುತ್ತಲೇ ಇವೆ, ಇನ್ನೂ ಗಳಿಸುತ್ತವೆ.
***
ಎರಡು ಸೂಟ್‌ಕೇಸ್ ಹಿಡಿದುಕೊಂಡು ಎಲ್ಲಿಗೆ ಬೇಕಾದಲ್ಲಿ ಹೊರಡಲು ತಯಾರಿದ್ದ ನಮಗೆ ಸಿಗುತ್ತಿದ್ದ ಉಪದೇಶ-ಮಾರ್ಗದರ್ಶನ ಬಹಳಷ್ಟೇನೂ ಇರಲಿಲ್ಲ. ಆಗೇನೂ ವೆಬ್‌ಸೈಟ್‌ಗಳೂ ಅಷ್ಟು ಪ್ರಚಲಿತವಾಗಿರಲಿಲ್ಲ, ಇದ್ದರೂ ಎಲ್ಲಿಬೇಕಂದರಲ್ಲಿ ಈಗಿನ ಹಾಗೆ ಮಾಹಿತಿಗಳು ಅಷ್ಟೊಂದು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ಯಾರೋ ಪುಣ್ಯಾತ್ಮರು ನಮಗಿಂತ ಮೊದಲೇ ವಿದೇಶದ ನೀರಿನ ಋಣವನ್ನು ಅನುಭವಿಸಿದವರು, ವಿದ್ಯಾರ್ಥಿಗಳಾಗಿ ಹೋಗಿ ವೀದೇಶದಲ್ಲಿ ಪಳಗಿದವರು ಮೊದಲಾದವರಿಂದ ನಾವು ಅಮೇರಿಕದ ಬಗ್ಗೆ ’ಕೇಳಿ’ ತಿಳಿದುಕೊಳ್ಳುತ್ತಿದ್ದೆವು. ನನಗೆ ಬಾಂಬೆಯಲ್ಲಿ ವ್ಯಕ್ತಿಯೊಬ್ಬ ಸಿಕ್ಕಿದ್ದ, ಅವನು ಅಲಬಾಮಾದಲ್ಲಿ ಐದಾರು-ವರ್ಷಗಳನ್ನು ಕಳೆದು ಭಾರತಕ್ಕೆ ಹಿಂತಿರುಗಿದವನು, ಅಂದಿನ ಅವನ ಅನುಭವಕ್ಕೂ ಇಂದಿನ ನಮ್ಮ ನ್ಯೂ ಯಾರ್ಕ್ ಅನುಭವಕ್ಕೂ ಬಹಳಷ್ಟು ವ್ಯತ್ಯಾಸವಿದೆಯೆನ್ನುವುದನ್ನು ಆತ ಹೇಗೆ ತಾನೇ ವಿವರಿಸಿಯಾನು, ಅದನ್ನು ನಾವಾದರೂ ಹೇಗೆ ಅರ್ಥ ಮಾಡಿಕೊಳ್ಳಬಹುದಿತ್ತು?
ಅಮೇರಿಕದಲ್ಲಿ ನಾಲ್ಕೈದು ಟೈಮ್ ಝೋನ್‌ಗಳಿವೆಯಂತೆ, ಭಾರತದ ಮೂರನೇ ಒಂದರಷ್ಟು ಇರುವ ಜನತೆಗೆ ಭಾರತದ ವಿಸ್ತೀರ್ಣದ ನಾಲ್ಕು ಪಟ್ಟು ದೊಡ್ಡ ದೇಶ, ಅದಕ್ಕೆ ಅಲ್ಲಲ್ಲಿನ ಟೈಮುಗಳು, ಒಂದು ಕಡೆ ಸ್ನೋ ಬಿದ್ದರೆ ಇನ್ನೊಂದು ಕಡೆ ಬಿಸಿಲು, ಸುಮಾರು ಇನ್ನೂರು ವರ್ಷಕ್ಕೂ ಹೆಚ್ಚಿನ ರಾಜಕೀಯ ಇತಿಹಾಸ, ಬೇಕಾದಷ್ಟು ಸಿಗುವ ಮನರಂಜನೆ, ಥರಥರನ ಚರ್ಮದ ಬಣ್ಣ - ಇನ್ನೂ ಏನೇನೋ! ಈ ರೀತಿಯ ಕನ್ವರ್ಸೇಷನ್ನುಗಳನ್ನು ಎಷ್ಟು ಹೊತ್ತು ಬೇಕಾದರೂ ಮಾಡಿಕೊಂಡಿರಬಹುದಿತ್ತು, ಎಲ್ಲರಿಗೂ ಅವರವರ ಅನುಭವ, ಅದೇ ಅವರ ಆಸ್ತಿ.
***
ಇತ್ತೀಚೆಗೆ ಭಾರತಕ್ಕೆ ಕೆಲಸದ ನಿಮಿತ್ತ ಹೋಗಿ ಬರುವವರನ್ನು, ಅಲ್ಲೇ ಸ್ವಲ್ಪ ದಿನಗಳ ಇದ್ದವರನ್ನು ವಿಚಾರಿಸಲಾಗಿ ಎಲ್ಲರೂ ಹೇಳುವುದು ಒಂದೇ ಒಂದು ಮಾತು - ’ಭಾರತ ಬದಲಾಗಿದೆ, ನಿಮಗೆ ಅಮೇರಿಕೆಯಲ್ಲಿ ಏನೇನೆಲ್ಲ ಸಿಗುತ್ತದೆಯೋ ಅದೆಲ್ಲ ಇಲ್ಲಿ ಸಿಗುತ್ತದೆ!’ ವಿಪರ್ಯಾಸವೆಂದರೆ, ನನ್ನಂತಹವರು ಒಂದು ಕಾಲದಲ್ಲಿ ಯಾವ ದೇಶದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ ಎಂದುಕೊಂಡಿದ್ದೆವೋ ಅದೇ ದೇಶದ ಬಗ್ಗೆ ಇಂದು ನಮ್ಮ ನೋಟ್ಸ್ ಅನ್ನು ಚೆಕ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಂದು ಬಾಡಿಶಾಪರ್ರ್‌ಗಳ ಚಾಕಚಕ್ಯತೆಗೆ ಬಲಿಯಾಗದ ಹಾಗೆ, ಸಿಹಿಯಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿಸಿ ಬಲೆಗೆ ಬೀಳಿಸಿಕೊಳ್ಳುವ ಮೋಹಿನಿ ರಿಕ್ರ್ಯೂಟರುಗಳಿಂದ ನಮ್ಮತನ (ರೆಸ್ಯೂಮೆ)ವನ್ನು ಜೋಪಾನಮಾಡಿಕೊಳ್ಳುವ ಸೂಕ್ಷ್ಮವನ್ನು ಹರಿತ ಮಾಡಿಕೊಳ್ಳುವ ಕಾಲಬಂದೊದಗಿದೆ. ಅಂದಿನ ರೆಸ್ಯೂಮೆಗಳಲ್ಲಿ ಫೋನ್ ನಂಬರ್ ಕಾಲಮ್ ಇದ್ದರೆ ಹೆಚ್ಚಾಗುತ್ತಿತ್ತು, ಇಂದಿನ ರೆಸ್ಯೂಮೆಗಳಲ್ಲಿ ಫೋನ್ ನಂಬರ್, ಮೊಬೈಲ್ ನಂಬರ್, ಇ-ಮೇಲ್ ಇವೆಲ್ಲವೂ ಸಹಜವಾಗಿವೆ. ’ನಿಮ್ಮ ರೆಸ್ಯೂಮೆಗೆ ತಕ್ಕ ಕೆಲಸ ಬಂದಾಗ SMS ಸಂದೇಶವನ್ನು ಕಳಿಸುತ್ತೇವೆ’ ಎಂದು ಕೆಲವು ವೆಬ್ ಸೈಟ್‌ಗಳಲ್ಲಿ ನೋಡಿದಾಗ ನಾನು ಮೂರ್ಛೆ ಹೋಗದಿದ್ದುದೇ ಹೆಚ್ಚು.
ಕೈಗಾರಿಕಾ ಕ್ರಾಂತಿ, ರಾಜಕೀಯ ಕ್ರಾಂತಿ, ಧಾರ್ಮಿಕ ಕ್ರಾಂತಿ ಮುಂತಾದವುಗಳ ಯಾದಿಗೆ ಭಾರತದ ಇತ್ತೀಚಿನ ಬೆಳವಣಿಗೆಯನ್ನು ಕಮ್ಮ್ಯೂನಿಕೇಶನ್ ಕ್ರಾಂತಿಗೆ ಸೇರಿಸಿಬಿಡಬೇಕು. ಒಂದು ಕಾಲದಲ್ಲಿ ಮನೆಗೆ ಒಂದೂ ಫೋನ್ ಇರದ ಕುಟುಂಬಗಳು ಇಂದು ಎರಡೂ-ಮೂರು ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವಷ್ಟರ ಮಟ್ಟಿಗೆ ಮುಂದುವರೆದಿವೆ. ಎಸ್ಸೆಮ್ಮೆಸ್ ಸಂದೇಶಗಳು, ಕಾಲ್‌ಬ್ಲಾಕ್ ಮುಂತಾದವುಗಳನ್ನೆಲ್ಲ ನೋಡಿದ ಮೇಲೆ, ಕೇವಲ ರಿಂಗ್‌ಟೋನ್ ಆಧರಿಸಿ ಬೆಳೆದ ವ್ಯವಹಾರವನ್ನು ಗಮನಿಸಿದ ಮೇಲೆ ನನ್ನ ಬಾಯಿಯಿಂದ ನನಗೇ ಅರಿವಿರದ ಹಾಗೆ ’It is BIG!’ ಎನ್ನುವ ಉದ್ಗಾರ ಹೊರಟುಬಂತು. ನಾವು ಕಂಡ ಭಾರತ, ನಮ್ಮ ಮನಸ್ಸಿನಲ್ಲಿರುವ ಭಾರತ ಬದಲಾಗಿದೆ, ಅದಕ್ಕೆ ತಕ್ಕ ಹಾಗೆ ಅನಿವಾಸಿಗಳ ಮನಸ್ಸಿನಲ್ಲಿನ ನಾಸ್ಟಾಲ್ಜಿಯ ದೂರ ಹೋಗಲಿ, ಜೊತೆಗೆ ಬದಲಾದ ಭಾರತವನ್ನು ನೋಡಿ ಅದಕ್ಕೆ ಆದಷ್ಟು ಬೇಗ ಹೊಂದಿಕೊಳ್ಳುವ ಮನಸ್ಥಿತಿ ಬರಲಿ. ವಿಶೇಷವೆಂದರೆ, ನಮ್ಮ ಹಳೆಯ ಭಾರತದ ಟೆಕ್ನಿಕ್ಕುಗಳು ನಮ್ಮ ಅನುಭವದ ಒಂದು ಅಂಗವಾಗಿವೆಯೇ ಹೊರತು ಈಗ ಉಪಯೋಗಕ್ಕೆ ಬರುವಷ್ಟರ ಮಟ್ಟಿಗೆ ಅವುಗಳಲ್ಲಿ ಪ್ರೌಢಿಮೆ ಇಲ್ಲ, ನಮ್ಮ ವಿದೇಶಿ ಅನುಭವ ಒಂದು ವ್ಯವಸ್ಥೆಯನ್ನು ನಂಬಿಕೊಂಡು ಅದರಲ್ಲಿ ಒಂದಾಗಿ ಹೋಗುವ ಮನಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದೆ. ಹಿಂದೆಲ್ಲಾ ಒಮ್ಮೆ ಬಂದವರಿಗೆ ವಾಪಾಸು ಹೋಗುವಾಗ ಇದ್ದ ಸವಾಲುಗಳು ಇಂದಿನ ಪ್ರಗತಿಪರ ಯುಗದಲ್ಲಿ ದುಪ್ಪಟ್ಟಾಗಿರಬಹುದು ಎನ್ನುವುದು ನನ್ನ ಅನುಮಾನ.