ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ
'ಅರೆ! ಏನಪ್ಪಾ ಇದು ಇಷ್ಟು ಬೇಗ ಬಂದೀದೀಯಾ?' ಅನ್ನೋ ಪ್ರಶ್ನೆ ಬೇರೆ ಯಾರನ್ನೂ ಕುರಿತು ಬಂದದ್ದಲ್ಲ, ಈ ಅವಧಿಗೆ ಮುಂಚೆ ಬರಬೇಕಾದ ಛಳಿಗಾಲವನ್ನು ಕುರಿತು. ಇನ್ನೂ ಸೆಪ್ಟೆಂಬರ್ ಬಂದಿಲ್ಲಾ ಆಗ್ಲೇ ಹತ್ತ್‌ಹತ್ರ ಐವತ್ತು ಡಿಗ್ರಿ (ಫ್ಯಾರನ್‌ಹೈಟ್) ವರೆಗೆ ಪಾದರಸ ಇಳಿದು ಹೋಗಿದೆಯೆಲ್ಲಾ ಏನನ್ನೋಣ? ಅದೂ ಮೊನ್ನೆ ದಿನಾ ರಾತ್ರಿ ನಲವತ್ತೊಂದರ ಹತ್ರ ಹೋಗಿ ಬಿಟ್ಟಿತ್ತು. ಬೇಸಿಗೆ ನಂಬಿ ಬದುಕೋನ್ ನಾನು, ಛಳಿಗಾಲ ಬಂತೂ ಅಂತಂದ್ರೆ ಅದೆಷ್ಟು ಜನರಿಗೆ ಕತ್ತಲು, ಕೊರೆಯೋ ಛಳಿ, ಕಿತ್ತು ತಿನ್ನೋ ಬೇಸರ ಹೆದರಿಸೋದೂ ಅಲ್ದೇ ಡಿಪ್ರೆಷ್ಷನ್ ತರುತ್ತೋ ಯಾರಿಗ್ ಗೊತ್ತು?
ಈ ಕಂಟ್ರಿ ಲಿವಿಂಗ್ ಅಂದ್ರೆ ಸುಮ್ನೇ ಬರಲ್ಲ. ನ್ಯೂ ಯಾರ್ಕ್ ಸಿಟಿಗೂ ನಮ್ಮನೇಗೂ ಕೊನೇ ಪಕ್ಷಾ ಆರೇಳ್ ಡಿಗ್ರಿನಾದ್ರೂ ವ್ಯತ್ಯಾಸಾ ಇರುತ್ತೆ, ಬೇಸಿಗೆಯಲ್ಲಿ ಎಷ್ಟು ತಣ್ಣಗಿರುತ್ತೋ ಛಳಿಯಲ್ಲೂ ಅದಕ್ಕಿಂತ ಹೆಚ್ಚು ತಣ್ಣಗಿನ ಅನುಭವವಾಗುತ್ತೆ. ಒಂಥರಾ ಈ ಅಮೇರಿಕದ ಬೇಸಿಗೆ ಅನ್ನೋದು ಕೆಟ್ಟ ಕಾನ್ಸೆಪ್ಟಪಾ, ಯಾಕೆ ಅಂದ್ರೆ ಜೂನ್ ಇಪ್ಪತ್ತೊಂದಕ್ಕೆ ಆರಂಭವಾಗೋ ಬೇಸಿಗೆ ಅದೇ ದಿನವೇ ಹೆಚ್ಚು ದೊಡ್ಡ ದಿನವಾಗಿ (ಡೇ ಲೈಟ್ ಘಂಟೆಗಳಲ್ಲಿ) ಬೇಸಿಗೆ ಆರಂಭವಾದ ದಿನದಿಂದ್ಲೇ ದಿನಗಳು ಸಂಕುಚಿತಗೊಳ್ತಾ ಹೋಗೋದು. ಒಂಥರಾ ಬಿರು ಬೇಸಿಗೆಯಲ್ಲಿ ಐಸ್ ಕ್ಯಾಂಡಿಯನ್ನು ಡಬ್ಬದಿಂದ ಹೊರಗೆ ತೆಗೆದ ಹಾಗೆ, ತೆಗೆದ ಘಳಿಗೆಯಿಂದ್ಲೂ ಅದು ಕರಗ್ತಾನೇ ಹೋಗುತ್ತೆ - ಅನುಭವಿಸಿ ಅಥವಾ ಬಿಡಿ. ಇತ್ತೀಚೆಗೆಲ್ಲಾ ಎಷ್ಟೊಂದ್ ಕತ್ಲು ಅಂತಂದ್ರೆ ಬೆಳಿಗ್ಗೆ ಏಳ್ ಘಂಟೆ ಆದ್ರೂ ಲೈಟ್ ಹಾಕ್ಕೋಂಡೇ ಇರಬೇಕು, ಸಂಜೇನೂ ಅಷ್ಟೇ ಬೇಗ ಕತ್ಲಾಗುತ್ತೆ.
ಓಹ್, ಅಮೇರಿಕದ ಬೇಸ್ಗೇನಾ? ಇಲ್ಲ್ಯಾವನೂ ಶೇಕ್ಸ್‌ಪಿಯರ್ ಇಲ್ಲಾ - Shall I Compare Thee To A Summer's Day? ಅಂತ ಬರೆಯೋಕೆ. ಅದೂ ಅಲ್ದೇ ಈ ದೊಡ್ಡ ದೇಶದಲ್ಲಿ ಕೆಲವರು ಯಾವಾಗ್ಲೂ ಬೇಸಿಗೆಯಲ್ಲೇ ನಲುಗ್ತಾ ಇದ್ರೆ, ಇನ್ನ್ ಕೆಲವರು ಛಳಿಯಲ್ಲೇ ಮುಲುಗ್ತಾ ಇರ್ತಾರೆ - ಅದೇನ್ ದೇಶಾನೋ ಕಾಣೆ. ನಮ್ ದೇಶ್ದಲ್ಲೂ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಥರ್ಮಾಮೀಟರ್‌ನಲ್ಲಿ ಅಗಾಧವಾದ ವೇರಿಯೇಷನ್ನೇನೋ ಇತ್ತು, ಆದ್ರೆ ಆ ಹಿಮಾಲಯಾನಾ ಯಾವ್ ಯಾವ್ದೋ ದೇಶ್ದೋರು ಹತ್ತಿ ಇಳಿಯೋಕ್ ಪ್ರಾಕ್ಟೀಸ್ ಮಾಡೋ ಜಾಗ ಮಾಡ್ಕಂಡ್ರೇ ವಿನಾ ನಾವ್ ನೋಡ್ಲೇ ಇಲ್ಲಾ ಒಂದಿನಾನು. ಅಲ್ಲಿ ಕಾಣದ ಮಂಜು, ಹಿಮವನ್ನ ಇಲ್ಲಿ ಕಾಣು ಎಂದು ಯಾರೋ ಬರೆದಿಟ್ಟ ಹಾಗೆ (ಹಣೇ ಮೇಲೆ), ಅಲ್ಲಿ ಕುಡಿಯದ ನೀರನ್ನ ಇಲ್ಲಿ ಬೇರೆ ಬೇರೆ ಫಾರ್ಮಿನಲ್ಲಿ ಕುಡಿದು ಅನುಭವಿಸು ಎಂದು ಯಾವುದೋ ಕಾನೂನಿಗೆ ಒಳಪಟ್ಟವರ ಹಾಗೆ ನಮ್ಮ ಬದುಕು...ಬ್ಯಾಡಾ ಅನ್ನೋದು ಆಪ್‌ಷನ್ನಿನ್ನಲ್ಲೇ ಇಲ್ಲಾ ಅಂತ ಪರೀಕ್ಷೆಗೆ ತಯಾರಾಗ್ತಾ ಇರೋ ಹುಡುಗನ್ನ ಹೆದರಿಸೋ ವರಸೇ ಬೇರೆ ಕೇಡಿಗೆ!
'ಏನ್ ಸಾರ್ ನೀವು? ಇಷ್ಟ್ ವರ್ಷಾ ಆಯ್ತು ಇಲ್ಲಿಗ್ ಬಂದು, ಇನ್ನೂ ಸುತ್ಲನ್ನ್ ನೋಡ್ಕಂಡ್ ಕೊರಗ್ತಾನೇ ಇರ್ತೀರಲ್ಲಾ... (ನಿಮ್ ಬಂಡ್ ಬಾಳ್ವೇಗ್ ಇಷ್ಟ್ ಬೆಂಕೀ ಹಾಕಾ). ಪುಲ್ ಪ್ಯಾಕೇಜ್ ಡೀಲ್ ಅಂತ ಪಡಕಂಡ್ ಬಂದ್ ಮೇಲೆ ಅನುಭವಿಸ್ ಬೇಕಪ್ಪಾ, ಅದನ್ನ್ ಬಿಟ್ಟು ಕೊರಗಿದ್ರೆ?' ಎಂದು ಯಾವ್ದೋ ಧ್ವನಿಯೊಂದು ಕೇಳಿಸಿದಂತಾಗಿ ಸುತ್ಲೂ ನೋಡ್ದೆ ಯಾರೂ ಕಾಣ್ಲಿಲ್ಲ. 'ಹಂಗಲ್ಲ್ ರೀ...' ಎಂದು ಸಮಾಧಾನ ಹೊರಡ್ತು, ಆದ್ರೆ ಅದು ಯಾರನ್ನ್ ಉದ್ದೇಶಿಸಿ ಎನ್ನೋ ಪ್ರಶ್ನೇ ಬಂದಿದ್ದೇ ತಡಾ ಒಂಥರಾ ಹೋಟ್ಲು ಮಾಣಿ ತಪ್ಪಾಗಿ ತಂದು ದೋಸೆಯನ್ನ ನಮ್ಮ ಮುಂದೆ ಇಟ್ಟು ಹಿಂದೆ ತೆಗೆದುಕೊಂಡು ಹೋದ ಹಾಗೆ, ಆ ಸಮಜಾಯಿಷಿ ಅಲ್ಲೇ ಅಡಗಿಕೊಂಡಿತು. ಅದ್ಯಾವ್ದೋ ಗೀತೇನಲ್ಲಿ ಬರೆದವ್ರೆ ಅನ್ನೋ ಥರ ನಮ್ಮ್ ಭಾರತೀಯರ ಮನೆಗಳಲ್ಲಿ (ಎಲ್ಲೆಲ್ಲಿ ಅವರವರೇ ಗ್ಯಾಸೂ-ಕರೆಂಟ್ ಬಿಲ್ಲ್ ಕೊಡಬೇಕೋ ಅಲ್ಲಿ) ಯಾವತ್ತಿದ್ರೂ ಒಂದ್ ಡಿಗ್ರಿ ಕಮ್ಮೀನೇ ಇರುತ್ತೇ ಥರ್ಮೋಸ್ಟ್ಯಾಟು, ಸೋ ನಡುಗೋದು ನಮ್ಮ್ ಹಣೇಬರ, ಇನ್ನು ಆರು ತಿಂಗ್ಳು.
ನಮ್ಮ್ ತಲೇಲ್ ಬರೆದಿದ್ದು ಇಷ್ಟೂ ಅಂತ ಬೇಸರಾ ಮಾಡ್ಕೊಂಡು ಕಿಟಕಿಯಿಂದ ದೂರ ನೋಡಿದ್ರೆ, ನಿಧಾನವಾಗಿ ಪಕ್ಕದ ಮರಗಳಿಂದ ಎಲೆಗಳೆಲ್ಲಾ ಒಂದೊಂದೇ ನೆಲದ ಹಾದಿ ಹಿಡಿಯುತ್ತಿದ್ದವು. ಈ ತಣ್ಣಗೆ ಕೊರೆಯೋ ಗಾಳಿ ಒಂದೇ ಒಂದು ದಿನದಲ್ಲೇ ಅದೆಷ್ಟು ಎಲೆಗಳ ಬದುಕನ್ನು ಬದಲಾಯಿಸಿಬಿಡ್ತಲ್ಲಾ ಅಂತ ಅನ್ನಿಸ್ತು. ಪಾಪ, ಈ ಛಳಿಯಲ್ಲಿ ಎಲೆ ಕಳೆದುಕೊಳ್ಳೋ ಮರಗಳೂ, ಪ್ರವಾಹದಲ್ಲಿ ಕೊಚ್ಚೆ ತುಂಬಿ ಹರಿಯೋ ನದಿಗಳಿಗೂ ಅದ್ಯಾವತ್ತ್ ಮುಕ್ತಿ ಸಿಗುತ್ತೋ, ಅದ್ಯಾವ್ ಋಷಿ ಶಾಪ ಕೊಟ್ಟಿದ್ನಪಾ? ಹೂಞ್, ಇಲ್ಲಾ, ಇಲ್ಲಾ...ಈ ಮುಂದೆ ಬೀಳೋ ಛಳಿಗೆ, ಅದ್ರಲ್ಲೂ ರಾಶಿ ರಾಶಿ ಬೀಳೋ ಹಿಮಕ್ಕೆ, ಅದರ ಭಾರಕ್ಕೆ ಮರದ ಟೊಂಗೆಗಳು ಮುರಿದು ಬೀಳದಿರಲಿ ಎಂದು ನೇಚರ್ ಕಂಡುಕೊಂಡ ಪರಿಹಾರವಿದ್ದಿರಬಹುದು...ಹಗುರವಾದವನು ಎಂತಹ ಭಾರವನ್ನೂ ಸಹಿಸಬಲ್ಲ ಎನ್ನೋ ಅದರದ್ದೇ ಆದ ತತ್ವ ಅಂತ ಏನಾದ್ರೂ ಇದ್ದಿರಬಹುದಾ ಅನ್ನೋ ಶಂಕೆ ಬಂತು. ಈ ನಿತ್ಯಹರಿದ್ವರ್ಣ (ಎವರ್‌ಗ್ರೀನ್) ಗಳದ್ದು ಇನ್ನೊಂದ್ ಪರಿ - ತಾವ್ ಎವರ್‌ಗ್ರೀನ್ ಏನೋ ಆದ್ವು, ಆದ್ರೆ ಅವು ಚಿಗುರಿ ಬೆಳೆಯೋ ಬೆಳವಣಿಗೆ ಇದೇ ನೋಡಿ ಬಾಳಾ ಸ್ಲೋ ಒಂಥರಾ ಥರ್ಡ್‍ವರ್ಲ್ಡ್ ದೇಶಗಳು ಮುಂದೆ ಬರೋ ಹಾಗೆ. ನಾವು ಏನೇ ಆದ್ರೂ ಹಸಿರಾಗೇ ಇರ್ತೀವಿ ಅಂತ ಹಠವನ್ನೇನೋ ತೊಟ್ವು, ಆದ್ರೆ ಮಂಜಿನ ಭಾರಕ್ಕೆಲ್ಲಾ ಕುಬ್ಜರಾಗಿ ಹೋದ್ವು. ಆದ್ರೂ ಅವುಗಳದ್ದೂ ಒಂದು ಧೈರ್ಯಾ ಸ್ವಾಮೀ, ಎಂಥಾ ಛಳೀನಲ್ಲೂ ಬದುಕಿ ಉಳೀತಾವೆ. ಹೊರಗಡೇ ಮೈನಸ್ ಇಪ್ಪತ್ತ್ ಡಿಗ್ರಿ ಇರೋ ಛಳೀನಲ್ಲಿ ಅದೆಂಗ್ ಬದುಕ್ತಾವೋ ಯಾರಿಗ್ಗ್ ಗೊತ್ತು?
ನಿಮ್ಮೂರಲ್ಲಿ ಹೆಂಗಿದೆ ಈಗ? ಮಳೇಬೆಳೇ ಬಗ್ಗೆ ತಲೆಕೆಡಿಸಿಕೊಳ್ತೀರೋ ಇಲ್ವೋ? ಮಳೇಬೆಳೆ ಬಗ್ಗೆ ತಲೆಕೆಡಿಸಿಕೊಂಡ್ ಯಾರಿಗ್ ಏನಾಗಿದೇ ಅಂತೀರಾ, ಅದೂ ಸರೀನೇ...ನಮ್ಮೂರ್‌ನಲ್ಲ್ ನೋಡಿ, ಯಾವತ್ತಿದ್ರೂ ಜನ ಮುಗಿಲ್ ನೋಡ್ತಾನೇ ಇರ್ತಾರೆ ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ.