ಕಂಟ್ರಿ ಅಂದ್ರೆ ಕಂಟ್ರಿ
ಅಮೇರಿಕದಲ್ಲಿ ಮೊಟ್ಟ ಮೊದಲ ದಿನದಿಂದಲೇ ಹೆಚ್ಚೂ ಕಡಿಮೆ ಎಲ್ಲರ ಗಮನ ಸೆಳೆಯೋದು ಅಂದರೆ ಇಲ್ಲಿನ ಫ್ರೀವೇಗಳು - ಅದ್ಯಾವ ಪುಣ್ಯಾತ್ಮ (ಐಸೆನ್‌ಹಾವೆರ್ ಪ್ರೆಸಿಡೆಂಟ್ ಆದ ಕಾಲದಲ್ಲಿ ಇದ್ದಿರಬೇಕು) ದೇಶದ ಉದ್ದಗಲಕ್ಕೂ ಕೋಟಿ ಕೋಟಿ ಡಾಲರ್ ಹಣ ಸುರಿದು ಈ ರಸ್ತೆಗಳ ನೆಟ್‌ವರ್ಕ್ ಅನ್ನು ಸೃಷ್ಟಿಸುವ ಬಗ್ಗೆ ಕನಸು ಕಂಡನೋ ಗೊತ್ತಿಲ್ಲ - ಇವತ್ತಿಗೂ ಇಷ್ಟೊಂದು ದೊಡ್ಡದಾದ ದೇಶವನ್ನು ಕಿರಿದು ಮಾಡಲು ಹಾಗೂ ಇಲ್ಲಿನ ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಹೆಚ್ಚಿಸಲು ಈ ಫ್ರೀವೆಗಳ ಕೊಡುಗೆಗಿಂತ ಮತ್ತಿನ್ನೇನು ನನಗೆ ಅತಿ ಅವಶ್ಯ ಕಮಾಡಿಟಿಗಳ ಗುಂಪಿನಲ್ಲಿ ಕಂಡುಬರುತ್ತಿಲ್ಲ.
ಜರ್ಸಿ ಸಿಟಿಯನ್ನು ಬಿಟ್ಟು ಪ್ರಿಸ್ಟೀನ್ ಕಂಟ್ರಿ ಬದಿಗೆ ಬಂದಂದಿನಿಂದ ಇಲ್ಲಿನ ಸಣ್ಣ ಪುಟ್ಟ ರಸ್ತೆಗಳು, ಅವುಗಳ ನೆರೆಹೊರೆ ಹೊಸ ಸ್ನೇಹಿತರಾಗಲು ಬಹಳಷ್ಟು ಶ್ರಮಿಸುತ್ತಿದ್ದರೂ ದಿನವೂ ಆಫೀಸಿಗೆ ಹೋಗಿ ಬರುವ ನಿಟ್ಟಿನಲ್ಲಿ ನಾನು ಫ್ರೀವೇಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆಂದೇ ಹೇಳಬೇಕು. ಫ್ರೀವೇಗಳಲ್ಲಿ ಟ್ರಾಫಿಕ್ ಜ್ಯಾಮ್‍ನಲ್ಲಿ ಸಿಕ್ಕು ನಿಧಾನವಾಗಿ ರಸ್ತೆಗಳನ್ನು ನೆಕ್ಕುವ ವೇಗದಿಂದ ಹಿಡಿದು ಘಂಟೆಗೆ ಅರವತ್ತು-ಎಪ್ಪತ್ತು ಮೈಲು ವೇಗದಲ್ಲಿ ದೂರವನ್ನು ಕ್ರಮಿಸುವುದನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಅದೊಂದು ಧರ್ಮ, ಫಿಲಾಸಫಿ ಅಥವಾ ಒಂದು ಸಂಸ್ಕ್ರುತಿಯೆಂದೇ ಹೇಳಬೇಕು. ಹಲವಾರು ವರ್ಷಗಳು ಇಂತಹ ವೇಗಕ್ಕೆ ಹೊಂದಿಕೊಂಡ ಮನಸ್ಸು - ಪ್ರತಿದಿನ ಕಂಟ್ರಿ ಸೈಡ್‌ನಲ್ಲಿ ಹಾವಿನ ಮರಿಯಂತೆ ನಿಧಾನವಾಗಿ ಬಳುಕಿ-ಬಾಗಿ ಸಾಗುವ ಸಣ್ಣ ಪುಟ್ಟರಸ್ತೆಗಳು, ಅವುಗಳನ್ನು ನೆಚ್ಚಿಕೊಂಡ ಸ್ಟಾಪ್ ಸೈನ್‌ಗಳು, ಎಲ್ಲ ಕಾಲಕ್ಕೂ ಇಂತಹ ರಸ್ತೆಗಳಲ್ಲಿ ಎಸ್.ಯು.ವಿ.ಗಳನ್ನು ಚಲಾಯಿಸುವ, ದೊಡ್ಡ ಮಹಲುಗಳಲ್ಲಿ ವಾಸಿಸುವ (ಹೆಚ್ಚು ಬಿಳಿಯರೇ ಇರುವ) ನೆರೆಹೊರೆಗಳು, ಎಷ್ಟೊತ್ತಿಗೆ ಬೇಕೆಂದರೆ ಅಷ್ಟೊತ್ತಿಗೆ ಎಲ್ಲಿ ಬೇಕೆಂದರಲ್ಲಿ ನಿಲ್ಲಿಸಿ ಬೆನ್ನ ಹಿಂದೆ ಎರಡು ಕೆಂಪು ದೀಪಗಳನ್ನು ಮಿಣುಕಿಸುವ ಸ್ಕೂಲ್ ಬಸ್ಸುಗಳು, ಅವುಗಳಲ್ಲಿ ಹತ್ತಿಳಿಯುವ (ಲೋಕದ ಪರಿವೆಯಿರದ) ಮಕ್ಕಳು - ಮುಂತಾದವುಗಳ ಸಹವಾಸಕ್ಕೆ ಒಗ್ಗಿಕೊಳ್ಳಲು ಬಹಳಷ್ಟು ಹಿಂದೆ-ಮುಂದೆ ನೋಡತೊಡಗುತ್ತದೆ!
***
Whatever is happening here? ಬೆಳಿಗೆ ಅದೂ ಆರೂವರೆ-ಏಳು ಘಂಟೆಗೆಲ್ಲಾ ಇನ್ನೂ ಅರವತ್ತರಲ್ಲಿರುವ ಚುಮುಚುಮು ಛಳಿಯನ್ನು ಲೆಕ್ಕಿಸದೇ ತಮ್ಮ ಗೋಲ್ಫ್ ಕಾರ್ಟುಗಳನ್ನು ತಳ್ಳಿಕೊಂಡು ಗೋಲ್ಫ್ ಆಡುವವರಿಗೆ ಕೊರತೆಯೇನು ಇಲ್ಲವಲ್ಲಾ? ಎಲ್ಲ ಆಟಗಳ ಹಿಂದಿರುವ ಮನಸ್ಥಿತಿಯಂತೆ ಗೋಲ್ಫ್ ಆಡುವವರದ್ದೊಂದು (ಭಿನ್ನವೇ ಆದ) ಮನಸ್ಥಿತಿ; ತಮ್ಮ ವೆಕೇಷನ್ ಸಮಯದಲ್ಲೂ ಎಂದಿನಂತೆ ಆಫೀಸಿಗೆ ಬೇಗನೇ ಹೋಗುವ ಈ ಎಕ್ಸಿಕ್ಯೂಟಿವ್‌ಗಳು ಐದು ಘಂಟೆಗೆಲ್ಲಾ ಎದ್ದು ಆರು-ಎಳು ಘಂಟೆಯ ಹೊತ್ತಿಗೆ ಒಬ್ಬೊಬ್ಬರಾಗಿ ಅಥವಾ ಇಬ್ಬರು-ಮೂವರೊಡಗೊಡಿ ಆಟವಾಡತೊಡಗುವುದೆಂದರೆ!
ನಾನು ಕಂಡ ಅಮೇರಿಕ ಬಹಳಷ್ಟು ವೈವಿಧ್ಯಮಯವಾಗಿದೆ - ಇದು ಹೀಗೇ ಎಂದು ನಿಖರವಾಗಿ ಎಂದೆಂದಿಗೂ ಹೇಳಲಿಕ್ಕೆ ಬಾರದಷ್ಟು. ಇಲ್ಲಿನ ಜನರ ಮನಸ್ಥಿತಿಯನ್ನು ಲೆಕ್ಕಕ್ಕಿಟ್ಟುಕೊಂಡು ಒಂದು ಕಾಮನಾಲಿಟಿಯನ್ನು ಹುಡುಕುವುದಕ್ಕೆ ಇನ್ನೂ ಅದೆಷ್ಟು ವರ್ಷಗಳನ್ನು ಸವೆಸಬೇಕೋ. ಒಂದು ಕಡೆ ಜನರ ಸಾಂದ್ರತೆ ಹೆಚ್ಚಿದ್ದು ಸಿಟಿಗಳನ್ನು ತಮ್ಮ ಮಡಿಲಿನಲ್ಲಿ ಸುತ್ತಿಕೊಂಡ ಸಂಸ್ಕೃತಿ ಮತ್ತೊಂದು ಕಡೆ ಐನೂರು-ಆರು ನೂರು ಎಕರೆಗಳಷ್ಟು ಸ್ಥಳವನ್ನು ಗೋಲ್ಫ್ ಆಡುವುದಕ್ಕೆ ಮುಡಿಪಾಡಿಷ್ಟರ ಮಟ್ಟಿಗೆ (ಅದೂ ಈ ಜರ್ಸಿ ರಾಜ್ಯದಲ್ಲಿ) ಭಿನ್ನವಾಗಿದೆ. ಆವರೇಜ್ ಜನರ ಆದಾಯ ಕಡಿಮೆ ಎಂದಿರೋ, ನನ್ನ ಕಣ್ಣಿಗೆ ಬರೀ "ಶ್ರೀಮಂತ"ರೇ ಕಾಣುತ್ತಾರೆ, ಅಥವಾ ಕಂಡಕಂಡವರೆಲ್ಲ ತಮಗಿಂತಲೂ ಹೆಚ್ಚಾದ ಜೀವನವನ್ನು ಸಾಗಿಸುತ್ತಿದ್ದಾರೆ (beyond their means ಅಂತಾರಲ್ಲ ಹಾಗೆ) ಎನ್ನಿಸುವುದು ನನ್ನ ಭ್ರಮೆಯಾಗಿದ್ದಿರಲೂ ಬಹುದು.
***
ಗ್ಯಾಸ್ (ಗ್ಯಾಸೋಲಿನ್) ಬೆಲೆ ಗ್ಯಾಲನ್ನಿಗೆ ಮೂರು ಡಾಲರ್ ಆದರೂ ಮುಂಬರುವ ಬೇಸಿಗೆ ಕಾಲಕ್ಕೆ ಜನಗಳ ಓಡಾಟವೇನೂ ಕಡಿಮೆಯಾದಂತಿಲ್ಲ - ಏಕೆ ಕಡಿಮೆಯಾಗಬೇಕು - ಎನ್ನೋದು ಮತ್ತಿಷ್ಟು ಆಲೋಚನೆಗಳನ್ನು ಹುಟ್ಟಿಸುವ, ತಿಳಿಯಾದ ನೀರಿಗೆ ಕಲ್ಲು ಹೊಡೆಯುವ ಮಾತೇ. ಕಡಿಮೆ ಜನರು ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಬಳೆಸುವ (affordability), ಜಾಗತಿಕವಾಗಿ ಹುಟ್ಟಿ ಬಳೆಯುವ ಸಮಸ್ಯೆಗಳಿಗೆ ಇಲ್ಲಿನ ಜನರು ನೀರೆರೆದು ಬೆಳೆಸುವ ಬಗ್ಗೆ ಎಷ್ಟು ಆಲೋಚಿಸದರೂ ಕಡಿಮೆಯೇ.
ನಾಯಕ ದೇಶವಾಗಬೇಕು, ತನ್ನ ಸಂಸ್ಕೃತಿಯನ್ನು ಜಗದಾದ್ಯಂತ ಹರಡುವ ಇಂಗ್ಲೀಷ್ ಪರಂಪರೆಯಂತಾಗಬೇಕು ಎನ್ನುವುದರ ಜೊತೆಗೆ - ಇತರ ಸಂಸ್ಕೃತಿಗಳನ್ನು ಹತ್ತಿಕ್ಕಬೇಕು, ತಾನು ಮೆರೆಯಬೇಕು, ಜನರನ್ನು ವಿಭಜಿಸಬೇಕು, ದಬ್ಬಾಳಿಕೆ ನಡೆಸಬೇಕು, ಆಕ್ರಮಣ-ಧಾಳಿ ನಡೆಸಬೇಕು - ಎನ್ನುವುದೂ ಸೇರಿಕೊಂಡಿರುತ್ತವೆ ಎನ್ನುವುದು ಬರೀ ಇತಿಹಾಸ ಸೃಷ್ಟಿಸಿದ ಸತ್ಯವಷ್ಟೇ ಅಲ್ಲ, ಅದು ಅನಿವಾರ್ಯ ಕೂಡ. ತನ್ನ ಪ್ರಾಭಲ್ಯವನ್ನು ಮೆರೆಯುತ್ತಿರುವುದರ ಜೊತೆಗೆ ಆಗಾಗ್ಗೆ ಗುರುಗುಟ್ಟುತ್ತಿರುವ ಸಿಂಹವಾಗದಿದ್ದರೆ ಜನರು ಹೆದರುವುದಾದರೂ ಹೇಗೆ, ಬೆಲೆ ಕೊಡುವುದಾದರೂ ಹೇಗೆ?
***
ಈ ಕಂಟ್ರಿ ರಸ್ತೆಗಳಲ್ಲಿನ ತಿರುವುಗಳು ನನ್ನನ್ನು ಸದಾ ಜಾಗೃತವಾಗಿಟ್ಟಿರುತ್ತವೆ ಎಂದು ನಂಬಿಕೊಂಡು ಗಾಡಿ ಚಲಾಯಿಸುತ್ತಿರುವವನಿಗೆ ಅಪರೂಪಕ್ಕೆ ಆಶ್ಚರ್ಯವೆನ್ನುವಂತೆ ದಾರಿ ಮಧ್ಯೆ ಬೇಕಾದಷ್ಟು ಪ್ರಾಣಿ-ಪಕ್ಷಿ ಕುಟುಂಬಗಳು ಅಡ್ಡ ಸಿಗುತ್ತವೆ - ನಾನು ತಲುಪಬೇಕಾದ ಗುರಿ (destination) ಮಹತ್ವಪೂರ್ಣವಾಗಿರುವಾಗ ನಡುವೆ ಏನಾದೀತೆಂದು ಚಿಂತಿಸಿ ಏನು ಫಲವಿದೆ, ನೀವೇ ಹೇಳಿ!