ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!
"A true friend stabs you in the front."- Oscar Wilde
'ಇವನೇನಪ್ಪಾ ಬರೀ ಇಲ್ಲಿ ತನ್ನ ಪ್ಲಾಬ್ಲಮ್ ಬಗ್ಗೆ ಕೊರೀತಾನೆ' ಅಂದುಕೋತೀರೋ ಏನೋ, ಮತ್ತೆ ನಿಮ್ಮಂಥ ಸ್ನೇಹಿತರು ಇರೋದಾದ್ರೂ ಯಾಕೆ ಹೇಳಿ?
'ಅದೇನು ಸ್ನೇಹ ಮತ್ತು ಅದರ ಬೆಲೆ, ಅದರಲ್ಲೂ ನಾಕು ಲಕ್ಷ ರೂಪಾಯಿ, ಬೇಗ ಹೇಳಿ ಬಿಡು' ಎಂದಿರೋ, ಕ್ಷಮಿಸಿ - ಈ ಅಂತರಂಗವನ್ನು ನೀವು ಸ್ವಲ್ಪ ವ್ಯವಧಾನದಿಂದ ನೋಡಲಿ ಎನ್ನುವ ಆಸೆ ನನ್ನದು.
***
ಸಾಗರದಲ್ಲಿ ನನ್ನ ಜೊತೆ ಡ್ರೈವರ್, ಕಂಡಕ್ಟರುಗಳು ಜೊತೆಯಲ್ಲಿದ್ದರೆಂದು ಈ ಮೊದಲೇ ಬರೆದಿದ್ದೆ. ಅವರಲ್ಲೆಲ್ಲ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾದ ವ್ಯಕ್ತಿಯೆಂದರೆ ಜಗದೀಶ. ಈತನ ಸಾಧು ಗುಣಗಳ ಜೊತೆಯಲ್ಲಿ ಹುದುಗಿರುವ ಹಾಸ್ಯ ಪ್ರವೃತ್ತಿಗಳ ದೆಸೆಯಿಂದ ಬಹಳಷ್ಟು ಸಾರಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇನೆ - ವೃತ್ತಿಯಲ್ಲಿ ಬಸ್ಸಿನ ಕಂಡಕ್ಟರಾದರೂ ಅವನ ಕೈ ಚಳಕ ಅದ್ಭುತವಾದದ್ದು. ಜಗದೀಶನ ಕೈಯಲ್ಲಿ ಬಸ್ಸನ್ನು ಕೊಟ್ಟು ಕಳಿಸಿದರೆ ಹಿಂತಿರುಗಿ ತಂದೇ ತರುತ್ತಾನೆ ಅನ್ನೋದು ಸಾಗರದ ಬಸ್ ಸ್ಟಾಂಡಿನಲ್ಲಿ ಜನಜನಿತವಾದ ಮಾತಾಗಿತ್ತು - ಈ ಮಾತು ಏಕೆ ಮುಖ್ಯವೆಂದರೆ, ಒಬ್ಬ ಖಾಸಗೀ ಬಸ್ ಮಾಲೀಕನ ಬಳಿ ಕೇವಲ ಒಂದು ಅಥವಾ ಎರಡು ಬಸ್ಗಳಿರಬಹುದು, ಅವು ಪ್ರತಿದಿನವೂ ತಮ್ಮ-ತಮ್ಮ ರೂಟ್ಗಳಲ್ಲಿ ಸರಿಯಾಗಿ ನಡೆಯದಿದ್ದರೆ ಅವರ ಬಂಡವಾಳಕ್ಕೆ ಸಂಚಕಾರ - ಮೇಲ್ನೋಟಕ್ಕೆ ಬಸ್ ಮಾಲೀಕರಾದರೂ 'ಇವತ್ತು ದುಡಿದು ಇವತ್ತು ತಿನ್ನುವ' ಬವಣೆ ತಪ್ಪಿದ್ದಿಲ್ಲ, ಏಕೆಂದರೆ ಬಂದ ಲಾಭಾಂಶದಲ್ಲಿ ಹೆಚ್ಚಿನಪಾಲು ಬ್ಯಾಂಕಿನ ಅಸಲು, ಬಡ್ಡಿಗೇ ಸೇರುತ್ತದೆ.
ಜಗದೀಶ ಮುಂದೆ ಡ್ರೈವಿಂಗ್ನ್ನು ಕಲಿತು, ತನ್ನ ತಮ್ಮಂದಿರೊಡಗೂಡಿ ಒಂದೆರಡು ಬಸ್ಸುಗಳನ್ನು ತಾನೇ ಇಟ್ಟುಕೊಂಡು ಅದರ ಮಾಲೀಕನೂ ಆದ. ಇತ್ತ ನಾನು ಭಾರತದ ಊರು-ಊರುಗಳನ್ನು ತಿರುಗಿ ಅಮೇರಿಕದ ಹಾದಿ ಹಿಡಿದೆ. ನನ್ನ ಮತ್ತು ಜಗದೀಶನ ಸುಮಾರು ೧೨ ವರ್ಷಗಳ ಗೆಳೆತನದಲ್ಲಿ (೧೯೮೮-೨೦೦೦), ನಾವಿಬ್ಬರೂ ಫ್ಯಾಮಿಲಿ ಸ್ನೇಹಿತರಾಗಿದ್ದೆವು, ನನ್ನ ಮದುವೆಗೆ ಅವನ ಮನೆಯವರೆಲ್ಲರೂ ಬಂದಿದ್ದರು, ಅವನ ಮನೆಗೆ ನಾನು ಹೋಗಿದ್ದಿದೆ, ಅವನೂ ನಮ್ಮ ಮನೆಗೆ ಬಂದಿದ್ದಾನೆ.
***
ನಾನು ೧೯೯೮ ರಲ್ಲಿ ಭಾರತಕ್ಕೆ ಹೋದಾಗ ಜಗದೀಶ (ಆಗಲೇ ತಾನು ಬಸ್ಸಿನ ಮಾಲಿಕನಾಗಿ ಸ್ವಯಂ ಭಡ್ತಿ ಪಡೆದಿದ್ದವ), ನನ್ನಲ್ಲಿ ತನ್ನ ಬಸ್ಸುಗಳನ್ನು ವಿಸ್ತರಿಸಿಕೊಳ್ಳುವ ಪ್ರಸ್ತಾವ ಮಾಡಿದ, ಅದಕ್ಕಾಗಿ ಹಣಕಾಸಿನ ಸಹಾಯವನ್ನೂ ಕೇಳಿದ - ತಾನು ತೆಗೆದುಕೊಂಡ ಹಣವನ್ನು ನ್ಯಾಯವಾಗಿ ಹಿಂತಿರುಗಿಸುತ್ತೇನೆಂತಲೂ, ಮತ್ತೆಲ್ಲ ಭರವಸೆಗಳನ್ನೂ ನೀಡಿದ - ನಾನು ಸ್ನೇಹದ ಕಟ್ಟಿಗೆ ಬಿದ್ದು ಹಾಗೂ ಪ್ರಪಂಚವನ್ನೂ ಇನ್ನೂ ಸರಿಯಾಗಿ ನೋಡಿರದ ನನ್ನ ಮೌಢ್ಯತೆಗೆ ಮಣಿದು 'ಸರಿ, ನಾಲ್ಕು ಲಕ್ಷ ರೂಪಾಯಿಗಳನ್ನು ಕಂತಿನಲ್ಲಿ ಕೊಡುತ್ತೇನೆ' ಎಂದು ಒಪ್ಪಿಕೊಂಡು ಮೊದಲನೇ ಕಂತಿನಲ್ಲಿ ಐವತ್ತು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಕೊಟ್ಟೆ. ಆಗ ನನ್ನ ಅಕ್ಕ ನನಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಳು, ಆದರೂ ನಾನೂ ಯಾವ ಮಾತನ್ನೂ ಕೇಳದ ಕಿವುಡನಾಗಿದ್ದೆ.
ಮುಂದೆ ರಜೆ ಮುಗಿಸಿ ಹಿಂತಿರುಗಿದ ಮೇಲೆ ಜಗದೀಶ ಮೇಲಿಂದ ಮೇಲೆ ಕರೆಗಳನ್ನು ಮಾಡುತ್ತಿದ್ದ, ಪತ್ರವನ್ನೂ ಬರೆಯುತ್ತಿದ್ದ. ನಾನು ಮುಂದಿನ ಕಂತಾಗಿ ಒಂದೂವರೆ ಲಕ್ಷ ರೂಪಾಯಿಗಳನ್ನು ೨೦೦೦ ದಲ್ಲಿ ಕೊಟ್ಟೆ. ಹಾಗೂ ಮುಂದೆ ಮದುವೆಯಾದ ಮೇಲೆ ನನ್ನ ಹೆಂಡತಿ ಬೇಡವೆಂದರೂ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದೆಂಬ ಒಂದೇ ತತ್ವಕ್ಕೆ ಮಣಿದು, ಇನ್ನುಳಿದ ಎರಡು ಲಕ್ಷ ರೂಪಾಯಿಗಳನ್ನೂ ಕೊಟ್ಟೆ.
ಈ ಹಣವನ್ನು ಪಡೆದ ಮೇಲೆ ಜಗದೀಶನ ನಡತೆಯಲ್ಲಿ ಬಹಳಷ್ಟು ಬದಲಾವಣೆಗಳಾದವು. ನನ್ನ ಕರೆಗೆ ತಪ್ಪಿಸಿಕೊಂಡು ಓಡಾಡುವ ಅವನ ಜೊಳ್ಳನ್ನು ಕಂಡು ಹಿಡಿಯಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ - ಮುಂದೆ ೨೦೦೩ ರ ಹೊತ್ತಿಗೆ ಅವನ ಬಸ್ಸಿನ ವ್ಯವಹಾರವೆಲ್ಲ ನಿಚ್ಚಳವಾಗಿ ನಷ್ಟದಲ್ಲಿತ್ತು, ನನಗೆ ಹಣ ಹಿಂದೆ ಬರುವ ಯಾವುದೇ ಲಕ್ಷಣಗಳು ಈ ವರೆಗೂ ತೋರುತ್ತಿಲ್ಲ.
ನಾನು ೨೦೦೩ ರಲ್ಲಿ ಭಾರತಕ್ಕೆ ಹೋದಾಗ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ (ಅಥವಾ ಕರೆಸಿದ್ದೆ), ಅವನು ನನ್ನನ್ನು ಮುಖ ಎತ್ತಿ ನೋಡುವ ಆತ್ಮ ಸ್ಥೈರ್ಯವನ್ನೂ ಉಳಿಸಿಕೊಂಡಿರಲಿಲ್ಲವೆಂದು ಕಾಣುತ್ತಿತ್ತು. ಮೊದಲೇ ಬರೆದಂತೆ ಸಾಧು ಸ್ವಭಾವದ ಅವನಿಗೆ ತಾನು ಮಾಡಿದ್ದು ಮೋಸ ಎನ್ನುವುದು ತಿಳಿಯಲು ಬಹಳ ಹೊತ್ತು ಬೇಕಾಗಲಿಲ್ಲ. ಆ ದಿನ ಅವನೇ ಹೇಳಿದಂತೆ ೨೦೦೩ ರ ಸೆಪ್ಟೆಂಬರ್ ಒಳಗೆ ಸ್ವಲ್ಪ ಹಣ ಹಿಂತಿರುಗಿಸುತ್ತೇನೆ ಎಂದವನು ಇವತ್ತಿಗೂ ಒಂದು ಪೈಸೆಯನ್ನೂ ಕೊಟ್ಟಿಲ್ಲ - ನಾನು ಅವನನ್ನು ಮಾತನಾಡಿಸಬೇಕೆಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ, ಅವನು ಯಾವತ್ತೂ 'ಮನೆಯಲ್ಲಿರೋಲ್ಲ'. ನನ್ನ ಎರಡನೇ ಅಣ್ಣನನ್ನೂ ಅವನ ಮನೆಗೆ ಕಳಿಸಿದ್ದೇನೆ, ಆದರೂ ಸಿಕ್ಕಿಲ್ಲ.
***
'ಅಣ್ಣಾ, ಏನಪ್ಪಾ ಮಾಡೋದೀಗ?' ಎಂದು ಯಾವತ್ತೋ ಫೋನಿನಲ್ಲಿ ನನ್ನ ಅಣ್ಣನನ್ನು ಕೇಳಿದ್ದೆ.'ಕೊಟ್ಟೋನ್ ಕೋಡಂಗಿ, ಇಸಗಂಡೋನ್ ಈರಭದ್ರ, ಈಗ ಹಣೆ ಮುಟ್ಟಿಕೋ, ಮತ್ತೇನ್ ಮಾಡ್ತೀ?' ಎಂದು ಉತ್ತರ ಬಂತು.
ಬೆಂಗಳೂರಿನ ಹಿತೈಷಿಗಳನ್ನು ಕೇಳಿದ್ದಕ್ಕೆ 'ಒಂದೇ ಕಾನೂನ್ ಪ್ರಕಾರ ಕೋರ್ಟಿಗೆ ಎಳೀರಿ, ಇಲ್ಲಾ ಗೂಂಡಾಗಳನ್ನು ಬಿಡಿ' ಎನ್ನುವ ಸಲಹೆ ಬಂತು.
ನನ್ನ ಅಮ್ಮ 'ಒಡ ಹುಟ್ದೋರಿಗೆ ದುಡ್ಡ್ ಕೊಟ್ಟಿದ್ರೆ ಅವರಾದ್ರೂ ನಿನ್ನ ಹೆಸರ್ ಹೇಳಿ ಉದ್ದಾರಾಗ್ತಾ ಇದ್ರು, ಅಲ್ವೋ ಇಷ್ಟೊಂದ್ ತಿಳುವಳಿಕೇ ಇರೋ ನೀನೇ ಹಿಂಗ್ ಮಾಡಿದ್ರೆ ಹೆಂಗೆ' ಎನ್ನುತ್ತಾಳೆ ಅಲ್ಲದೇ ನಾನು ಅವಳೊಟ್ಟಿಗೆ ಮಾತನಾಡಿದ ಹೆಚ್ಚಿನ ಕಾಲ್ಗಳು 'ಆ ಜಗದೀಶನ ಹತ್ರ ದುಡ್ಡು ಕೇಳೋ' ಎಂದು ಕೊನೆಯಾಗುತ್ತೆ, ನಾನು 'ಆಯ್ತು' ಅಂತೀನಿ.
ಇಲ್ಲಿ, ನಮ್ಮ ಮನೆಯಲ್ಲಿ ನನ್ನ ಹೆಂಡತಿ ಅವಾಗಾವಾಗ ತಿವಿತಾನೆ ಇರ್ತಾಳೆ.
ಒಟ್ಟಿನಲ್ಲಿ ಎಲ್ಲದರಲ್ಲೂ ಸರಿಯಾಗಿದ್ದ ನಾನು, ನನ್ನ ಸ್ನೇಹಿತನೊಬ್ಬನಿಗೆ ಮಾತಿಗೆ ತಪ್ಪದಂತೆ ಹಣ ಕೊಟ್ಟು, 'ಗಂಡ ಸತ್ತ ದುಕ್ಕ ಒಂದ್ ಕಡೇ, ಬಡ್ ಕೂಪಿನ ಉರಿ ಮತ್ತೊಂದ್ ಕಡೇ' ಅನ್ನೋ ಹಾಗೆ ನಾಲ್ಕು ಲಕ್ಷ ಕಳಕೊಳ್ಳ ಸ್ಥಿತಿಗೆ ಬಂದಿದ್ದೂ ಅಲ್ದೇ, 'ಎಲ್ಲದರಲ್ಲೂ ಸರಿಯಾದ ಮನುಷ್ಯ ಇದೊಂದರಲ್ಲಿ ಎಡವಿದ' ಎಂದು ಜನರಿಂದ ಅನ್ನಿಸಿಕೊಂಡೂ, ನಾಲ್ಕು ಜನ ರೌಡಿಗಳನ್ನು ಬಿಟ್ಟು ಕಾಲು ಮುರಿಸಿದರೆ ಹೆಂಗೆ ಎಂದು ನೈತಿಕವಾಗಿ ಹೀನ ಯೋಚನೆಗಳಲ್ಲಿ ತೊಡಗಿಕೊಳ್ಳೂದೂ ಅಲ್ಲದೇ, ಅಥವಾ ಒಬ್ಬ ಸ್ನೇಹಿತನಾದವನ್ನು ಕೋರ್ಟಿಗೆ ಎಳೆಯಬೇಕಾಗುತ್ತಲ್ಲಾ ಅನ್ನೋ ಜಂಜಾಟದಲ್ಲಿ ಮುಳುಗಿದ್ದೇನೆ.
***
ಈ ಸಾರಿ ಭಾರತಕ್ಕೆ ಹೋದಾಗ ಜಗದೀಶನನ್ನು ಮತ್ತೆ ಮನೆಗೆ ಬರುವಂತೆ ಹೇಳುತ್ತೇನೆ. ಒಬ್ಬ ಲಾಯರ್ಗೆ ಒಂದು ಲಕ್ಷ ರೂಪಾಯಿ ಹಣವನ್ನು ಕೊಟ್ಟರೂ ಪರವಾಗಿಲ್ಲ, ನನ್ನ ಹಣ ನನಗೆ ಬೇಕು, ಅದರ ಈಗಿನ ಮೌಲ್ಯ ಸುಮಾರು ಒಂಭತ್ತು ಸಾವಿರ ಡಾಲರ್ ಮೊತ್ತಕ್ಕಿಂತಲೂ ನಾನು ಮಾತಿಗೆ ತಕ್ಕಂತೆ ಕೊಟ್ಟ ಹಣವನ್ನು ಮಾತಿಗೆ ತಕ್ಕಂತೆ ಪಡೆದೇ ಪಡೆಯುತ್ತೇನೆ ಹಾಗೂ ನನ್ನ ವ್ಯಕ್ತಿತ್ವಕ್ಕಂಟಿದ ಕಪ್ಪು ಚುಕ್ಕೆಯನ್ನು ಹೋಗಲಾಡಿಸುತ್ತೇನೆ ಎಂಬ ಛಲದಿಂದ.
ಜಗದೀಶನ ಈ ಸಾಲದ ಪ್ರಹಸನದಿಂದ ಒಂದತ್ತೂ ಒಳ್ಳೆಯದಾಗಿದೆ, ನಾನು ಯಾರಿಗೂ ಇತ್ತೀಚೆಗೆ ಹಣವನ್ನು ಕೊಟ್ಟಿಲ್ಲ, ಕೊಟ್ಟರೂ ಅದನ್ನು ದಾನದ ಅಥವಾ ಸಹಾಯದ ರೂಪದಲ್ಲಿ ನೀಡಿರೋದರಿಂದ ನನಗೆ ಹಣಕಾಸಿಗೆ ಸಂಬಂಧಿಸಿದ ಇನ್ಯಾವ ನೋವುಗಳೂ ಇಲ್ಲ.
