Saturday, April 30, 2016

ಶಾಂತವಕ್ಕನ ಸಡಗರ

ಇನ್ನೇನು ಶ್ರಾವಣ ಮಾಸ ಹತ್ರ ಬಂತು ಅಂತ ಊರಿನ ಹೆಂಗಳೆಯರೆಲ್ಲ ಮನೆ ಜಗಲಿ, ಅಂಗಳ ಸಾರ್ಸಿ ಶುಭ್ರವಾಗಿಟ್ಟುಕೊಂಡಿದ್ರು.  ಎವರೆಡಿ ಶೆಲ್ಲಿನ ಒಳಗಿನಾಗಿರೋ ಕರ್ರಗಿನ ಪೌಡರ್ರ್ ಹಾಕಿ ತಿಕ್ಕಿಂದ್ರಿಂದ್ಲೋ ಏನೋ ಕೆಲವರ ಮನಿ ಮುಂದಿನ ಅಂಗಳ ಟಾರ್ ರಸ್ತೆಗಿಂತ ಕಪ್ಪಗಿತ್ತು ನೋಡ್ರಿ.  ಇತ್ಲಾಗೆ ಶಾಲೇಗ್ ಹೋಗೋ ಮಕ್ಳು ಸಧ್ಯ ಛಳೀ ಹೊಂಟೋಯ್ತು ಅಂತ ತಮ್ಮ ತಮ್ಮ ಚಿಕ್ಕ ಚಿಕ್ಕ ಯೂನೀಫಾರ್ಮಿನೊಳಗೆ ತಮ್ಮನ್ನ ತುರುಕಿಕೊಂಡಿದ್ರು, ಮೇಲ್ನಿಂದ ಕೊರೆಯೋ ಮಳೆಗೋ ಬಿಸಿಲಿಗೋ ರಕ್ಷಣೆ ಇರ್ಲೀ ಅಂತ ಹೆಂಗಳೆಯರಲ್ಲಿ ಕೆಲವ್ರು ಆಶ್ಚರ್ಯ ಸೂಚಕ ಮಾರ್ಕಿನಂಗಿರೋ ಛತ್ರಿ ಹಿಡಕೊಂಡು ಓಡಾಡ್ತಿದ್ರು.  ಕೆಲವೊಮ್ಮೆ ಪುಷ್ಯಾ ಮಳಿಯಿಂದ ತಪ್ಪಿಸಿಕೊಂಡ್ರೂ ಆರ್ದ್ರೀ ಮಳಿ ಬಿಡ್ಲಿಲ್ಲಾ ಅನ್ನೋ ಹಂಗೆ ಜಿಟಿಪಿಟಿ ಮಳೆ ಎಷ್ಟೊತ್ತಿಗೆ ಬರುತ್ತೆ ಅಂತ ಹೇಳೋಕಾಗ್ದಿದ್ರೂ, ಅದರ ಪರಿಣಾಮ ಅನ್ನೋ ಹಂಗೆ ಕೆಂಪನೆ ಕಿಚಿಪಿಚಿ ಕೆಸರು ಕಾಲು-ಪ್ಯಾಂಟುಗಳಿಗೆ ಅಂಟೋದು ಗ್ಯಾರಂಟಿ ಆಗಿತ್ತು.

ಇದೇ ಹೊತ್ತಲ್ಲಿ ಊರ್‌ನಾಗಿರೋ ಬ್ರಾಂಬ್ರ ಓಣಿಯಲ್ಲಿ ಏನೋ ಒಂಥರ ಸಂಭ್ರಮ.  ಅದೇ ಮಗ್ಗಲ ಮನಿ ಶಾಂತವ್ವಕ್ಕ ಇದಾಳಲ್ಲ ಅಕಿ ನೂರಾ ನಾಕನೇ ವರ್ಷಕ್ಕೆ ಕಾಲಿಟ್ಟ ಸಂಬಂಧ ಊರ್‌ನಾಗಿನ ಮುಖಂಡ್ರು ಎಲ್ಲಾ ಸೇರಿ ಹುಟ್ಟಿದ ಹಬ್ಬಾನ ದೊಡ್ಡದಾಗಿ ಆಚರ್‌ಸಬೇಕು ಅಂತ ಒಂದು ಕಾರ್ಯಕ್ರಮ ಹಮ್ಮಿಕೊಂಡಾರಂತ.  ಭಾನುವಾರ ಮಟಮಟ ಮಧ್ಯಾಹ್ನ ಎರಡು ಘಂಟಿಗೆ ಶುರುವಾಗೋ ಕಾರ್ಯಕ್ರಮ ಇನ್ನೂ ಸ್ಥಳೀಯ ಎಮ್ಮೆಲ್ಲೆ ಬರ್ಲಿ ಅಂತ ಕಾಯ್ಕೊಂಡ್ ಕುಂತು ಘಂಟೆ ಮೂರ್ ಆದ್ರೂ ಶುರೂ ಆಗೋ ಭಾಗ್ಯ ಬಂದಂಗಿರ್ಲಿಲ್ಲ.  ಆದ್ರೂ ರಗಡು ಮಂದಿ ಸೇರಿದ್ರು.  ಎಲ್ಲೆಲ್ಲಿಂದಾನೋ ಬಂದಿದ್ರು.  ಅವರಾಗೆ ಬಾಳ ಮುಖ್ಯ ಅಂದ್ರ, ಶಾಂತವಕ್ಕನ್ನ ಗಿರಿಮಗಳು ಮೋಹಿನಿ - ದೂರ ದೇಶ ಅಮೇರಿಕಾದಾಗೆ ಅದೇನೋ ಕಾಯ್ಕ ಮಾಡ್ಕಂಡು ಅಲ್ಲೇ ಇದಾರಂತೆ, ಅದ್ರೂ ಅತ್ಯಂತ ಮುತುವರ್ಜಿ ವಹಿಸಿ ಶಾಂತವಕ್ಕನ್ನ ಬರ್ತ್‌ಡೇ ಆಚರಿಸಾಕ ಹದಿಮೂರು ಸಾವಿರ ಕಿಲೋಮೀಟರ್ ದೂರದಿಂದ ಬಂದಿರೋದು ನಮ್ಮೂರಿಗೆ ಹೆಚ್ಚೇ ಬಿಡ್ರಿ.  ಆದ್ರೂ ಅವನವ್ವನ, ಇದೇ ತಾಲೂಕಿನಾಗೆ ಬಿದ್ದು ಎದ್ದು ಸಾಯೋ ಈ ಎಮ್ಮೆಲ್ಲೆ ಮಂದಿಗೆ ಏನ್ ಅಂತಾದ್ ಬಂದೀತು? ಇನ್ನೂ ಸುದ್ದೀನೇ ಇಲ್ಲಲ!

ಹಂಗೂ ಮಾಡಿ ಶಾಂತವ್ವಕ್ಕನ ವಯಸ್ಸು ಇಷ್ಟೇ ಹಿಂಗೇ ಎಂದು ಯಾರೂ ಬರ್ದಿಟ್ಟಂಗಿದ್ದಿದ್ದು ಯಾರಿಗೂ ನೆನಪಿಲ್ಲ ನೋಡ್ರಿ.  ಅದರಾಗೂ ಒಂದ್ ಸರ್ತಿ ನೂರರ ಹತ್ರಾ ಹೋದ್ರಿ ಅಂದ್ರ ನಿಮ್ಮ ಜೀವಮಾನದಾಗೆ ಬಂದ್ ಹೋಗಿರೋ ಮುಕ್ಕಾಲ್ ಜನ ಆಗ್ಲೇ ಟಿಕೇಟ್ ತಗೊಂಡಂಗೇ ಲೆಕ್ಕ!  ಅದ್ರಾಗೂ ನೂರ್ ವರ್ಷದ ಹಿಂದೇ ಜಾತ್ಕಾ ಪಾತ್ಕಾ ಬರೀತಿದ್ರೋ ಏನೋ ಆದ್ರೂ, ಜನನಪತ್ರಿಕೆ ಮರಣ ಪತ್ರಿಕೆ ಅಂಥಾ ಯಾರೂ ಪ್ರಿಂಟ್ ಹಾಕಿದ್ದು ನಾನಂತೂ ಕಂಡಿಲ್ಲ.  ಅದೂ ಹೋಗೀ ಹೋಗಿ ಬ್ರಿಟೀಷ್ ಸರಕಾರದಾಗ ಹುಟ್ಟಿರೋ ಮುದುಕಿ ಒಂಥರಾ ಬ್ರಿಟೀಷರ ಹಂಗಾ ಗರ್ವದಾಕಿ ಬಿಡ್ರಿ.  ಶಾಂತವ್ವಕ್ಕ ಈಗ್ಲೇ ಇಷ್ಟು ಉರೀತಾಳೆ, ಆಗ ಹೆಂಗಿದ್ಲೋ ಅಂತ ಕೆಲವು ಹೆಣ್ ಮಕ್ಳು ಕೈ ಮುರ್ದು ಲಟಗಿ ತಗೊಂಡಿದ್ದಂತೂ ನಿಜ.  ಒಂದ್ ಹತ್ತ್ ವರ್ಷದ ಹಿಂದಿನ್ ವರೆಗೂ ಈ ಮುದುಕಿ ಕಡಿಮೀ ಏನ್ ಇರ್ಲಿಲ್ಲ.  ದಿನಾ ಅಗಸೀ ಬಾಗ್ಲು ಮಟಾ ನಡ್ದು ಬಾವೀ ನೀರ್ ಸೇದಿ ತರೋದೇನೋ, ಬಾಗ್ಲೂ ಬಳ್ದು, ರಂಗೋಲಿ ಹಾಕಿದ್ದಷ್ಟೇ ಅಲ್ದೇ, ಒಂದೇ ಒಂಚೂರು ಬಿಡದೇ ದೊಡ್ಡ ಹಿತ್ಲು ಗುಡುಸ್ತಿತ್ತ್ ನೋಡ್ರಿ ಈ ಮುದುಕಿ.  ದರ್ಲೆ ತೆಗೆದು ಒಲೀ ಮ್ಯಾಲೆ ದನಗಳಿಗೆ ಬಾಯಾರು ಬಿಸಿಮಾಡಿ ಕೊಟ್ಟು, ಕೊಟಗಿ ಶುದ್ದಾ ಮಾಡಿ ಹಾಲ್ ಕರಕಂಡ್ ಬಂದು ಸುರ್ ಅಂತಾ ಒಂದು ಲೋಟಾ ಕಾಪೀ ಹೀರೋದ್ರೊಳಗೆ ಹತ್ತ್ ಘಂಟ್ ಆಗಿತ್ತು.  ನಾವ್ ಇವತ್ತಿನ ದಿನಾ ವಾರಕ್ಕ ನಲವತ್ತು ಘಂಟಿ ಅಂತ ಏನ್ ಕೆಲ್ಸಾ ಮಾಡ್ತೀವಿ, ಈ ವಮ್ಮ, ಭಾನುವಾರದಿಂದ ಮಂಗಳವಾರದೊಳಗೇ ನಲವತ್ತೇನು ಐವತ್ತು ಘಂಟಿ ದುಡಿಯೋದ್ ನೋಡ್ರಿ.  ಜಿಮ್ಮು-ಗಿಮ್ಮು ಅಂತ ಒಂದ್ ದಿನ ಅದರ ಬಗ್ಗೆ ಕೇಳದಿದ್ರೂ ಮೈಯಾಗೆ ಒಂದು ಚೂರು ನೆಣಾ ಅಂತ ಇದ್ದಂಗಿಲ್ಲ ನೋಡ್ರಿ, ಯಾವತ್ತಿದ್ರೂ ಒಂದೇ ಒಂದ್ ಲಕ್ಷಣಾ.  ಇಂದಿನ ಕಾಲದ ಹೆಣ್ಣ್ ಮಕ್ಳು ಒಂದೊಂದು ಹಡದು ಹತ್ತು ವರ್ಷ ಹಳೇದಾದ ಎಸ್.ಟಿ. ಬಸ್ಸಿನ ಹಂಗೆ ನಡೆಯೋದಾದ್ರೆ ಈವಮ್ಮ ಎಂಟು ಮಕ್ಳನ್ನ ಹಡದು ಅದೆಷ್ಟೋ ಬಾಣಂತನಾನ ಮಾಡಿ ಇನ್ನೂ ಒಂಚೂರೂ ಬೆನ್ನ್ ಬಾಗಿಸದೇ ನಡೀತಾಳ ಅಂದ್ರ ಅದೊಂದು ದೊಡ್ಡ ಪವಾಡನೇ ಬಿಡ್ರಿ.  ಈ ವಮ್ಮನ ಗಂಡಾ ಅದ್ಯಾವಾಗೆ ಟಿಕೇಟ್ ತೆಗೆಂಡು ಹೋದನೋ ನನಗೆ ಗೊತಿಲ್ಲಾ, ಅದ್ರೂ ಈವಮ್ಮ ಮರೆ-ಮೈಲಿಗೆ-ಮಡಿ ಅಂತಾ ಇಡೀ ಊರಿಗೆ ಫೇಮ್ಮಸ್ಸು ನೋಡ್ರಿ.  ಶಾಂತವಕ್ಕನ ಉಪ್ಪಿನಕಾಯಿ, ಹಪ್ಪಳಾ, ಸಂಡಿಗೆ ಅವರ ಸಂಬಂಧಿಕರ ದೆಸೆಯಿಂದ ಎಲ್ಲೆಲ್ಲೋ ಹೊಗ್ತಿತ್ತು.  ಆಕಿ ಕೈ ರುಚೀನೇ ಬ್ಯಾರೆ.  ಆರು ತಿಂಗಳೇನು, ಅರು ವರ್ಷಾ ಅದ್ರೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಕಡದ್ರ ಇನ್ನೂ ಕಟುಂ ಅನ್ನೋದು ನೋಡ್ರಿ!

ಕೊನೀಗೂ ಎಮ್ಮೆಲ್ಲೆ ಸಾಹೇಬ್ರು ಬಂದ್ರೂ ಅಂತ ಕಾರ್ಯಕ್ರಮ ಶುರೂ ಆಗೂ ಹಂಗ ಕಾಣಸ್ತು.  ಶಾಂತವಕ್ಕನ ಮನಿ ಮುಂದೆ ನಾಲ್ಕು ಅಡಕೆ ಮರದ ಕಂಬಾ ನೆಟ್ಟು ಒಂದು ಸಣ್ಣ ಚಪ್ರ ಕಟ್ಟಿದ್ರು.  ಅದರ ಮ್ಯಾಲೆ ಸ್ವಲ್ಪಾನೂ ಬಿಸಿಲು ಬರದೇ ಇರ್ಲಿ ಅಂತ ತೆಂಗಿನ ಮಡ್ಲು ಹೆಣೆದು ಕಟ್ಟಿದ್ರು.  ಮದುವೀ ಮನೆ ಅಷ್ಟು ದೊಡ್ಡು ಚಪ್ರಾ ಅಲ್ದಿದ್ರೂ ಮೂರು ಜನ ಕೂರೋ ಹಂಗ ಅನುಕೂಲ ಮಾಡಿದ್ರು.  ಮಧ್ಯ ಶಾಂತವ್ವಕ್ಕ, ಅಕಿ ಬಗಲಿಗೆ ಊರಿನ ಮಹಿಳಾ ಕಲ್ಯಾಣ ಇಲಾಖೆ ಸೂಪರ್‌ವೈಸರ್ರು ಸುಶೀಲಮ್ಮೋರು, ಮತ್ತೊಂದು ಕಡೆ ಎಮ್ಮೆಲ್ಲೆ ಮಹಾಂತೇಶಪ್ಪೋರು ಕುಂತಿದ್ರು.  ನೂರಾ ನಾಲ್ಕು ಮುಟ್ಟಿರೋ ಶಾಂತವಕ್ಕ ತನ್ನ ಬಗಲಿಗೆ ಕುಂತೋರಿಗಿಂತಲೂ ನೆಟ್ಟಗೆ ಬೆನ್ನ ಮಾಡಿ ಕುಂತಿದ್ಲು.  ಅವಳು ಉಟ್ಟಿರೋ ಅದೆಷ್ಟೋ ವರ್ಷದಿಂದ ಹಳೇ ಟ್ರಂಕಿನಾಗಿರೋ ಕಂದು ಬಣ್ಣದ ಪಟ್ಟೇ ಸೀರೇ ಇವತ್ತು-ನಿನ್ನೇ ಅಂಗಡಿಯಿಂದ ತಂದ ಹಾಗೆ ಮಡಿಕೇನೂ ಮುರೀದೇ ತನ್ನ ಮೈ ಮೇಲೆ ಗೆರೆಗಳನ್ನ ಹಂಗೇ ಜೋಪಾನವಾಗಿ ಉಳಿಸಿಕೊಂಡಿತ್ತು.

ಊರಿನ ಕಾರ್ಯಕ್ರಮ, ಆದ್ರೆ ಬಂದೋರಿಗೆ ತಿಂಡೀ-ಗಿಂಡೀ ಮಾಡೋರು ಯಾರು? ಅದ್ಯಾವ್ದೋ ಸೊರಬದ ಬೇಕ್ರಿ ಇಂದ ಸುಮಾರು ದೊಡ್ಡ ಕೇಕ್ ತರಸ್ಯಾರಂತ, ಅದು ಬಿಸಲಿಗೆ ಕರಗೀತು ಅಂತ ಇನ್ನೂ ಒಳಗೇ ಇಟ್ಟಿದ್ರು.  ಮೈಕೂ ಪೈಕೂ ಏನೂ ಬ್ಯಾಡ, ಸುಮ್ನೇ ದುಡ್ಡು ಖರ್ಚು ಅಂತ ಹಂಗೇ ಸುತ್ಲೂ ಸೇರಿರೋ ಜನ್ರನ್ನ ಕುರುತು ಮೊದಲಿಗೆ ಸುಶೀಲಮ್ಮೋರು ಮಾತಾಡಿದ್ರು.  ಇವತ್ತಿನ ದಿನಾ ನೂರೇನು ಎಪ್ಪತ್ತು ವರ್ಷ ನೋಡೋ ಮಂದಿ ಭಾಳಾ ಇಲ್ಲ, ಅಂತಾದ್ರಾಗೆ ನಮ್ಮೂರಿನ ಶಾಂತವ್ವಕ್ಕ ನೂರಾ ನಾಕು ಮುಟ್ಟೈತಿ ಅಂದ್ರ ಅದೊಂದು ರಾಜ್ಯದ ವಿದ್ಯಮಾನ ಅಂತ ಭಾಳ ಚೊಲೋ ಭಾಷ್ಣ ಮಾಡಿದ್ರು.  ಅವರ ನಂತ್ರ ಮಹಾಂತೇಶಪ್ಪೋರು ನಾನು ವಿಧಾನ ಸಭೆ ಕಾರ್ಯಕಲಾಪದಾಗ ಈ ಸಂಬಂಧ ಚರ್ಚೇ ಮಾಡ್ಸಿ, ಶಾಂತವಕ್ಕಂಗ ಒಂದ್ ಅವಾರ್ಡ್ ಕೊಡಸ್ತೀನಿ ಅಂತ ಆಶೋತ್ತರ ಮೂಡಿಸಿ ಆಸೆ ತೋರ್ಸಿದ ಕೂಡ್ಲೇ ಅವರ ಚೇಲಾಗಳೆಲ್ಲ ದೊಡ್ಡದಾಗಿ ಚಪ್ಪಾಳೆ ಹೊಡ್ದಿದ್ದು ನೋಡಿ ನಾವೂ ಹೊಡದ್ವಿ.  ಅಮ್ಯಾಲೆ ಶಾಂತವಕ್ಕನ ಮನೆ ಮಂದೀ ಎಲ್ಲ ಬಂದೂ ಅರತೀ ಮಾಡಿದ್ರು.  ಅವರ ಮನೇ ಮಂದೀನೇ ಸುಮಾರು ನೂರು ಜನ ಇದ್ದಂಗಿದ್ರು ನೋಡ್ರಿ.  ಎಲ್ಲ ಮಕ್ಳೂ, ಮೊಮ್ಮಕ್ಳು, ಮರಿಮಕ್ಳು, ಗಿರಿಮಕ್ಳು ಇವರ್ದ್ರೆಲ್ಲಾ ಲೆಕ್ಕಾ ಹಾಕ್ಕೊಂಡಿರೋರು ಯಾರು? ಕುದ್ದು ಶಾಂತವಕ್ಕಂಗೇ ಇವರೆಲ್ಲ ನೆನಪಿದಾರೋ ಇಲ್ವೋ!  ಶಾಂತವ್ವಕ್ಕಾ ನೀನೂ ಒಂದಿಷ್ಟು ಮಾತಾಡು ಅಂದ್ರು.  "ನನ್ದೇನೂ ಬ್ಯಾಡಾ, ಎಲ್ಲಾ ಚೆನ್ನಾಗಿರ್ರಿ!" ಅಂತ ಅದ್ರಾಗೂ ಬಿನ್ನಾಣ ತೋರಿಸ್ತು ಮುದುಕಿ.

ಇನ್ನೇನು ಕೇಕ್ ಕಟ್ ಮಾಡೋಣ ಅಂತ ಎಲ್ರೂ ಅಂದ್ರೂ.  ಅಷ್ಟ್ರೊಳಗ ಶಾಂತವಕ್ಕನ ಅಮೇರಿಕದಿಂದ ಬಂದ ಗಿರಿಮಗಳು ಮೋಹಿನಿ, ಅದೇನೋ ಇಂಗ್ಲೀಷ್ನಾಗೆ ಅಂದ್ಲು, ಅದರ ಪ್ರಕಾರ ಶಾಂತವಕ್ಕನ್ನೂ ಒತ್ತಾಯ ಮಾಡಿ ಸ್ವಲ್ಪ ಮಾತಾಡಕ್ ಬಿಟ್ರು ನೋಡ್ರಿ.  ಶಾಂತವಕ್ಕ ಹೆಚ್ಗೆ ಏನೂ ಹೇಳ್ಲಿಲ್ಲ,  "ಎಲ್ರೂ ಸುಖವಾಗಿರ್ರಿ, ಜಗಳಾಪಗಳಾ ಮಾಡಬೇಡ್ರಿ.  ಮನಸು ಚೆನ್ನಾಗಿದ್ರೆ ದೇಹ ಚೆನ್ನಾಗಿರ್ತತಿ.  ವ್ಯಾಯಾಮಾ ಪಾಯಾಮಾ ಎನೂ ಬ್ಯಾಡ, ನೀವ್ ಏನ್ ತಿಂತೀರಿ, ಎಷ್ಟು ತಿಂತೀರಿ ಮತ್ತ ಯಾವಾಗ ತಿಂತೀರಿ ಅನ್ನೋದರ ಬಗ್ಗೆ ನಿಗಾ ಇರ್ಲಿ" ಅಂದ್ಲು.  ಎಲ್ರೂ ಮತ್ತೆ ದೊಡ್ಡ ಚಪ್ಪಾಳೆ ಹೊಡೆದ್ರು.  ಮೋಹಿನಿ ತನ್ನ ಅಮ್ಮನ ಹತ್ರ ಅದೇನೋ ಇಂಗ್ಲೀಷಿನಾಗೆ ಅಂದ್ಲು.  ಅದನ್ನ ಅವರಮ್ಮ ತರ್ಜುಮೆ ಮಾಡಿ -"ಶಾಂತವಕ್ಕ, ನಿನ್ನ್ ಜೀವನದಾಗೆ ಇದೂವರೆಗೆ ಕಂಡಿರೋ ಮಹಾ ಅವಿಷ್ಕಾರ ಅಂದ್ರೆ ಯಾವ್ದು?" ಅಂತ ದೊಡ್ಡದಾಗಿ ಕೇಳಿದ್ರು.  ಅವರು ಹೇಳೋದನ್ನ ಮೋಹಿನಿ ತನ್ನ ಬಂಗಾರ ಬಣ್ಣದ ಐಫೋನಿನ್ಯಾಗೆ ರೆಕಾರ್ಡ್ ಮಾಡಿಕೊಂತಿದ್ಲು.

ಶಾಂತವಕ್ಕ ಒಂದ್ ಸರ್ತಿ "ಹ್ಞೂ..." ಅಂತ ದೊಡ್ಡದಾಗಿ ಉಸಿರು ಎಳಕೊಂಡು ಒಂದು ಹತ್ತು ಸೆಕೆಂಡು ಯೋಚ್ನೇ ಮಾಡಿದ್ಲು.  ನಾವೆಲ್ಲ ಕಂಪ್ಯೂಟರ್ರೋ, ಫೋನೋ, ಸಿನಿಮಾನೋ, ಮೋಟಾರೋ-ರೈಲೋ ಅಂತಾಳೆ ಅಂದುಕೊಂಡು ಖಾತರದಿಂದ ನೋಡ್ತಾ ಇದ್ವಿ.  ಮೋಹಿನಿನೂ ತನಗೆ ಕನ್ನಡ ಬರುತ್ತೆ ಅಂತ ತೋರಿಸ್ ಬೇಕು ಅಂತ "ನನ್ ಕಡೇ ನೋಡು..., ಹೇಳಜ್ಜಿ ಹೇಳು..." ಅಂತಾ ಜೋಗಕ್ಕೆ ಬರೋ ಬಿಳಿ ಟೂರಿಸ್ಟ್‌ಗಳ ಧ್ವನಿಯಲ್ಲಿ ದೊಂಬಾಲು ಹಾಕಿದ್ಲು.  ಶಾಂತವಕ್ಕ ಒಂಥರಾ ಟಿವಿ ನೈನಿನ ರಿಪೋರ್ಟರುಗಳು ಕ್ಯಾಮೆರಾ ನೋಡಿಕೊಂಡೇ ಮಾತಾಡ್ತಾವಲ್ಲ ಹಂಗೆ ಕ್ಯಾಮೆರಾನ ದಿಟ್ಟಿಸಿ ನೋಡಿ, "ನಮ್ಮೂರಿಗೆ...     ಕರೆಂಟ್ ಬಂತು ನೋಡ್ರಿ, ಎಲ್ಲಕ್ಕಿಂತ ಅದೇ ದೊಡ್ದು!  ಅದ್ಯಾವ ಪುಣ್ಯಾತ್ಮ ಕರೆಂಟ್ ಕಂಡ್ ಹಿಡಿದ್ನೋ ಅದೇ ದೊಡ್ಡ ವಿಷ್ಯಾ, ಕರೆಂಟ್ ಇಲ್ಲಾ ಅಂತಂದ್ರೆ ನಿಮ್ಮ ಆಟ ಏನೂ ನಡೆಯಂಗಿಲ್ಲ!" ಅಂದು ಬಿಡ್ತು.

ತನ್ನ್ ಐಫೋನೇ ದೊಡ್ಡು ಅಂತ ಅಂದಕಂಡಿದ್ದ ಮೋಹಿನಿ ಮುಖಾ ಸಪ್ಪಗಾಯ್ತು.  ಎಮ್ಮೆಲ್ಲೆ ಸಾಹೇಬ್ರು ಮುಖದ ಮ್ಯಾಲೆ ಇದುವರೆಗೆ ತೇಲಾಡ್ತಿದ್ದ ತೆಳು ನಗೆ ಒಂದು ಕ್ಷಣಾ ನಿಲ್ತು.  ಸೇರಿದ್ದ ಜನ ಭೂತ ನೋಡಿದ್ರೇನೋ ಅನ್ನೋ ಹಂಗೆ ಒಂಥರಾ ಸ್ತಂಭೀಭೂತರಾದ್ರು.  ಇಷ್ಟರಾಗೆ ಸುಧಾರಿಸಿಕೊಂಡ ಸುಶೀಲಮ್ಮ ಚಪ್ಪಾಳೆ ಹೊಡ್ದು, "ಭಾಳಾ ಸತ್ಯವಾದ ಮಾತು..., ಸತ್ಯವಾದ ಮಾತು" ಅಂದು, ಮುಂದೆ "...ಕೇಕ್ ಕಟ್ ಮಾಡ್ರಿ?..." ಅಂತ ಆದೇಶ ಕೊಟ್ರು.  ಈ ಜನಗಳ ಈ ಪ್ರತಿಕ್ರಿಯೆಯನ್ನ ನಿರೀಕ್ಷೆ ಮಾಡಿರದ ಶಾಂತವಕ್ಕ ತನ್ನ ಮನಸ್ಸಿನೊಳಗೇ - "ಇವೆಲ್ಲ ನಿಮಗೆ ಈ ಜನಮದಾಗ ತಿಳಿಯಂಗಿಲ್ಲ ಬಿಡ್ರಿ" ಅಂದುಕೊಂಡ ಹಂಗಾಯ್ತು.

***
ಈ ಲೇಖನ ಏಪ್ರಿಲ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Sunday, April 03, 2016

...ಸಂಡಾಸ್ ರೂಮ್ ನೋಡೀರೇನು?

ನಾವು ದೋಡ್ಡೋರ್ ಆದ ಮ್ಯಾಲೆ ನಮ್ಮನಿ ಚಿಕ್ಕ್ ಮಕ್ಕಳಿಗೆ "ಹಂಗ್ ಮ್ಯಾಡಬ್ಯಾಡs", "ಹಿಂಗ್ ಮಾಡ್‌ಬ್ಯಾಡಾs" ಅಂತ ಭಾರೀ ಉಪದೇಶ ಏನೋ ಮಾಡ್ತೀವಿ.  ಆದ್ರ, ನಾವು ಚಿಕ್ಕೋರಾಗಿದ್ದಾಗ ಮಾಡಿದ ಚ್ಯಾಷ್ಟೇ-ಕುಚೇಷ್ಟೇಗಳಿಗೆ ಲೆಕ್ಕ ಇಟ್ಟೋರಾರು ಅಂತ ಒಂದ್ ಸರ್ತೀನಾರ್ದೂ ಯೋಚ್ನೇ ಮಾಡೇವೇನು?

"ಹಂಗ್ ಮಾಡಬ್ಯಾಡೋ ತಮ್ಮಾ..." ಅಂತ ನಮ್ಮನಿ ಮಕ್ಕಳಿಗೆ ಈಗ ಹೇಳೋದೇನೋ ಭಾಳ ಐತ್ರಿ, ಆದ್ರ ನಾವ್ ಆಗಿನ್ ಕಾಲದಾಗ ಮಾಡಿದ್ದು ಒಂದೊಂದ್ ಅಲ್ಲ, ಅವನ್ನೆಲ್ಲ ನೆನೆಸಿಕೊಂಡ್ರೆ ಈಗ್ಲೂ ನಗೂ ಬರ್ತತ್ ನೋಡ್ರಿ.
ನಮ್ ಪಾಳ್ಯಾದೊಳಗ ಗಿರಿ ನಮ್ ಲೀಡರ್ರು. ಅವನ ಹಿಂಬಾಲಕರಾಗಿ ನಾವು ನಾಲ್ಕು ಮಂದಿ: ಸುನೀಲ, ರಮೇಶ, ಸುರೇಶ ಮತ್ತ ಹಸುವಿನ ಪ್ರತಿರೂಪ ಅನ್ನೋ ಹಂಗs ನಾನೂ, ಒಂಥರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗs.  ಗಿರಿ ಆಗಿನ ಕಾಲದ ಬ್ರೇಕ್ ಥ್ರೂ ಮನುಷ್ಯಾ ರೀ.  ಬ್ರೇಕ್ ಥ್ರೂ ಅಂದ್ರ ಬ್ರೇಕೂ ಹೌದು ಥ್ರೂ ನೂ ಹೌದು!  ಅವನ್ದೆಲ್ಲಾ ಕಪಿಚೇಷ್ಟೆಗಿಂತ ಅದರ ಅಪ್ಪನ್ನದ್ದು ಅಂತಾರಲ್ಲ ಹಂಗs.  ಅವನ ಚೇಷ್ಟಿ ಒಳಗ ಕೆಲವೊಂದಿಷ್ಟು ಫಸ್ಟ್ ಕ್ಲಾಸು, ಇನ್ನು ಕೆಲವೊಂದು ಥರ್ಡ್ ಕ್ಲಾಸು.  ಮಂಗ್ಯಾನಂಗ್ ಆಡಬ್ಯಾಡ ಅಂಥಾ ನೀವ್ ಏನ್ ಕರೀತಿರಿ ಅವೆಲ್ಲ ಫಸ್ಟ್ ಕ್ಲಾಸು, ಅವನ ಚೇಷ್ಟೀ ಇಂದ ಯಾವನಾರಾs ಅಳಂಗ್ ಆದ್ರೆ, ಅದು ಥರ್ಡ್ ಕ್ಲಾಸು.  ಇನ್ನು ನಾವಂತೂ ಎಂದೂ ಸೆಕೆಂಡ್ ಕ್ಲಾಸ್ ಚೇಷ್ಟೇ ಅಂದ್ರ ಏನು ಅಂತ ಯಾವತ್ತೂ ಯಾರ್‌ನೂ ಕೇಳಿದ್ದಿಲ್ಲ!

ಗಿರಿ ಮತ್ತು ಅವನ ಗ್ಯಾಂಗಿನ ಕುತಂತ್ರಗಳಿಗೆ ಬಲಿ ಬೀಳದ ನಮ್ಮೂರಿನಾಗ ಜನರೇ ಇಲ್ಲ ಅನ್ನಬಕು. ನೀವು ನಮ್ ಬಂಡ್ ಭಾಳ್ವಿಗಿ ಸಾಕ್ಷಿ ಆಗಿಲ್ಲ ಅಂದ್ರs ಒಂಥರಾ ನಮ್ಮೂರಿನ ಸಿಟಿಜನ್‌ಶಿಪ್ ಪರೀಕ್ಷಾದಾಗ ಫೇಲ್ ಆದಂಗ್ ನೋಡ್ರಿ!  ಒಂದ್ ಊರು ಅಂದ್ರ ಎಲ್ಲಾ ಥರದ ಮಂದಿ ಇರ್ತಾರ, ಆದ್ರ ನಮ್ ಗಿರಿ ಅಂಥಾ ಮನ್ಶ್ಯಾರು ಬಾಳ್ ಮಂದಿ ಇದ್ದಂಗಿಲ್ಲ ಅನ್ನೋದು ನಮ್ ಅಂಬೋಣ.

ನಿಮಗೂ ನಮ್ಮ ತಂಡಕ್ಕೂ ಯಾವತ್ತಾದ್ರೂ ಮುನಿಸಾತು ಅಂದ್ರ, ನಿಮ್ಮ ಮನ್ಯಾಗ ಸೈಕಲ್ಲೋ ಲೂನಾನೋ ಟಿವಿಎಸ್ಸೋ ಇದ್ರs, ಅದ್ರ ಚಕ್ರದಾಗಿನ ಹವಾ ಟುಸ್ಸ್ ಅಂದಂಗs ಅಂಥ ತಿಳಕೊಳ್ರಿ.  ಅದ್ಯಾವ ಮಾಯದಾಗ ಗಿರಿ ಬರ್ತಿದ್ನೋ... ನಿಮ್ಮನಿ ಮುಂದ ನಿಲ್ಸಿರೋ ಟೂ ವ್ಹೀಲರಿನ ಹವಾ ಇದ್ದಕ್ಕಿದ್ದಂಗ ನಾಪತ್ತೆ ನೋಡ್ರಿ!  ಈ ಟೂ ವ್ಹೀಲರ್ ಹವಾ ಕಳೆದುಕೊಂಡ ಮ್ಯಾಲೆ ಅದನ್ನ ತಳ್ಳೋದು ಎಷ್ಟು ಕಷ್ಟ ಅಂಥ ನಿಮಗ ಗೊತ್ತಿರಲಿಕ್ಕಿಲ್ಲ, ಯಾವತ್ತರ ಟ್ರೈ ಮಾಡಿ ನೋಡ್ರಿ.  ಹವಾ ಕಳಕೊಂಡ ಅದರ ಟ್ಯೂಬಿನೊಳಗೆ ವಾಷರ್ ಒಡೆದು ಹೋಗಿರೋ ಸೈಕಲ್ ಪಂಪ್ ಬಳಸಿ, ಪೆಚ್ಚ್ ಮೋರೇ ಹಾಕ್ಕೊಂಡು, ಹವಾ ತುಂಬೋದು ಅಂದ್ರs ಅದರ ಪಜೀತಿ ಯಾವ ವೈರಿಗೂ ಬ್ಯಾಡ.  ಹವಾ ಹೊಡ್ದೂ ಹೊಡ್ದೂ ಕೈ ಮೈ ನೋವ್ ಬಂದಂಗs.
ಯಾರ್ದಾರೂ ಮನಿ ಹಿತ್ಲಾಗ ಬಾಳೆ ಗೊನಿ ಇನ್ನೇನು ಕಟಾವಿಗೆ ಬಂತೂ ಅಂದ್ರ, ಅದು ಅದರ ಹಿಂದಿನ್ ದಿನಾ ಅದು ಮಂಗ್ ಮಾಯಾ ನೋಡ್ರಿ! ನಮ್ ಗಿರಿ ಹತ್ರ ಯಾರ್ ಹಿತ್ಲಾಗ್ ಯಾವ್ ಫಲ ಎಷ್ಟು ದಿನದಾಗ ಕಟಾವಿಗೆ ಬರ್ತತಿ ಅನ್ನೋದರ ಮಾಹಿತಿ ಭಾಳ್ ಛೊಲೋ ಇತ್ ನೋಡ್ರಿ. ಅವನ ತಲೀ ಒಡೋದೇ ಹಂಗs.  ಮಾವಿನ್ ತೋಪ್‌ನ್ಯಾಗೆ ಕಾಯೋರು ನಮ್ಮನ್ನ ನೋಡ್ರಿದ್ರೆ ದೇವ್ರು ಬಂದೋರಂಗ ಆಡೋರು!  ಎಲ್ಲಾರೂ ಗುರಿ ಇಟ್ಟ್ ಕಲ್ ಹೋಡ್ದು ಒಂದು ಫಲ ಉದುರಿಸಿದ್ರೆ, ನಮ್ಮ್ ತಂಡ ಇಡೀ ಮರಾನೇ ಖಾಲೀ ಮಾಡೋದು... ಮರಾ ಒಂದೇ ಅಲ್ಲ್ ಇರ್ತಿತ್ತು, ಯಾಕಂದ್ರ ಮತ್ತ್ ಮುಂದಿನ ವರ್ಷಕ್ಕ್ ಬೇಕ್ ಅಲ?
ಅಷ್ಟೂ ಮಾಡಿ ನಮಗೆಲ್ಲಾ ಅವಾಗ ಛಾಟೀ ಬಿಲ್ಲಿನ ಹುಚ್ಚು ರೀ.  ಅದರೊಳಗ ಪರಿಣಿತ ಅಂದ್ರ ನಮ್ ಗಿರಿ.  ಅವನ ಗುರಿ ಭಾಳಾ ನಿಖರ.  ನಮ್ ಶಾಲೀ ಕಟ್ಟೀ ಮುಂದ ಧ್ವಜಾ ಹಾರ್ಸೋ ಕಂಬಕ್ಕ ಸುಮಾರು ಐವತ್ತ್ ಏನು, ನೂರ್ ಅಡೀ ದೂರ್ದಿಂದ ಗುರಿ ಇಡೋನ್ ರೀ. ಅದು ಒಂದಿನಾನು ತಪ್ಪಿದ್ದು ನಾ ನೋಡಿಲ್ಲ.  ಅಷ್ಟೂ ಮಾಡಿ ನಿಮಗ ಏನಾರಾ ಗಿರಿ ಕಂಡ್ರ ಆಗಂಗಿಲ್ಲ ಅಂದ್ರ, ನಿಮಗೂ ಛಾಟೀ ಬಿಲ್ಲಿನ ಕಲ್ಲಿನ ಏಟು ಕುಂಡೀ ಮ್ಯಾಲ ಬಿತ್ತೂ ಅಂತಾನs ಲೆಕ್ಕ.

ಎಲ್ರೂ ಊಟಕ್ಕೆ ಕುತ್ವಿ ಅಂದ್ರ ಇವ ನಿಂತೇ ಇರ್ತೀನಿ ಅನ್ನೋವ.  ಅವನೇನಾರ ಲಿಂಬಿ ಹಣ್ಣು, ಟೊಮೇಟೋ, ಮುಸಂಬಿ ಹಣ್ಣು ತಿಂತಾನೇ ಅಂದ್ರ ಅವನ ಅಕ್ಕಾ-ಪಕ್ಕಾ ಯಾರೂ ಇರಂಗಿಲ್ಲ ನೋಡ್ರಿ.  ಅವರ ಪಾಡು ದೇವ್ರಿಗೆ ಪ್ರೀತಿ.  ಅವರ ಕಣ್ಣಿನಾಗೆ ಗ್ಯಾರಂಟಿ ಲಿಂಬೀ ಹಣ್ಣಿನ್ ರಸಾ ಬೀಳೋದೆ.  ಈ ಹಣ್ಣಿನ್ ರಸಾ ಎಲ್ಲಾ ಕಡೆ ಒಸರೋ ಹಂಗ, ಹಣ್ಣನ್ನ ಹಿಚುಕಿ-ಹಿಚುಕಿ ಎಲ್ಲಾ ರಸಾ ಮಾಡ್‌ಕ್ಯಂಡ್ ಒಂದ್ ಕಡೆ ತೂತ್ ಮಾಡಿ ಅದನ್ನ ತನ್ನ ಗುರಿಗೆ ಹಿಡಿದು ಮುಖ ಮಾಡಿ ತಿನ್ನೋದರಲ್ಲಿ ನಮ್ ಗಿರಿ ನಿಸ್ಸೀಮ ರೀ.

ಯಾರ್ದಾರ ಮದ್ವೀ ನಡದ್ರ ನಮಗ್ಯಾರೂ ಬರ್ರೀ ಅಂತ ಕರೀದಿದ್ರೂ ನಾವಾs ಹೋಗ್ತಿದ್ವಿ.  ನಮ್ಮೂರಿನಾಗೆ ಮದ್ವಿ ಮುಂಜೀ ಅಂದ್ರ ಒಂಥರ ನಮ್ಮೂರಿನ ಹಬ್ಬಗಳು ಇದ್ದಂಗ, ಅದಕ್ಯಾರು ಬರಬ್ಯಾಡಾ ಹೋಗಬ್ಯಾಡ ಅನ್ನೋರು?  ಅಲ್ಲಿ ವಾಲಗಾ ಊದೋರ ಮುಂದ ನಾವು ಎಳೇ ಹುಣಸೀ ಕಾಯಿ ತಿಂತಿದ್ವಿ, ಅವರು ನಮ್ಮುನ್ನ ಓಡಿಸಿಕ್ಯಂಡ್ ಬರೋರು.  ಹಿಂಗs, ನಮ್ ಮಜಾ ನಡೀತಿತ್ತ್ ನೋಡ್ರಿ.

ಮದ್ವಿ ಅಂದ ಮ್ಯಾಲ ನೆನಪಾತು. ನಮ್ಮೂರಿನ ನಡುಮನಿ ಈರಪ್ಪನ ಮಗಳ ಮದವ್ಯಾಗ ನಮ್ ಗಿರಿ ಮಾಡಿದ ಪರಾಕ್ರಮ ನೆನಸಿಕೊಂಡ್ ಇವತ್ತಿಗೂ ನಗು ಬರ್ತತಿ ನೋಡ್ರಿ.  ನಡುಮನಿ ಈರಪ್ಪ ಅಂಥ ಸಾವ್ಕಾರ ಏನಲ್ಲ, ಆದ್ರೂ ಇದ್ದೊಬ್ಬ ಮಗಳ ಲಗ್ನಾನ ಅಚ್ಚುಕಟ್ಟಾಗಿ ಮಾಡಬಕು ಅಂತ ಮನಿ ಮುಂದ ಬ್ಯಾಡ,
ಊರಿನ ಛತ್ರದಾಗ ಇಟ್ಟುಗೊಣೂನು ಅಂತ, ಅಲ್ಲೇ ಎಲ್ಲಾ ಫಿಕ್ಸ್ ಮಾಡಿದ್ದ ರೀ.  ಹಿರೇಕೇರೂರು ಸಂಬಂಧ, ಅಂಥಾ ದೂರೇನೂ ಇಲ್ಲ, ಆದ್ರ ಮುಂಜಾನೆ ಬೇಗ ಲಗ್ನ ಮಹೂರ್ತ ಐತಿ ಅಂತ ಎಲ್ರೂ ಹಿಂದಿನ್ ದಿನಾನೇ ಬಂದು ಚೌಳ್ಟ್ರಿ ಸೇರಿಕೊಂಡಿದ್ರು ರೀ.  ನಾವು ನಮ್ಮ ತಂಡದ ಸಮೇತ ಈ ಅತಿಥಿಗಳನ್ನ ಮುಗುಳ್ನಕ್ಕು ಬರಮಾಡಿಕೊಂಡಿದ್ವಿ.  ಯಾರು, ಹೆಂಗಾs ಅಂಥ ಗೊತ್ತಾಗಬೇಕಲ? ಅದಕ್ಕಾ.  ರಾತ್ರೀ ಎಲ್ಲಾರು ಸೇರಿ ಸಮಾ ಹರಟಿ ಹೊಡದ್ವಿ...ಅದು ಯಾವಾಗ ಮಲಗಿದ್ವೋ ಅದು ಯಾವನಿಗ್ ಗೊತ್ತು!

ಮರುದಿನ, ಮುಂಜಾನೆ ಒಂಭತ್ತ್ ಘಂಟಿ ಅಭಿಜಿನ್ ಮಹೂರ್ತ ಅಂಥಾ ಕಾಣ್ತತಿ.  ಮದ್ವೀ ಮನಿ ಅಂದ್ರ ಗಡಿಬಿಡಿ, ಗಿಜಿಬಿಜಿ ಇದ್ದದ್ದ.  ಎಲ್ರೂ ಹೊಸ ಬಟ್ಟಿ ಹಾಕ್ಕೊಂಡಾರ.  ಎಲ್ಲಾ ಕಡಿ ಹೂ ಹಣ್ಣು ಕಾಣ್ಸಕ್ ಹತ್ಯಾವ. ಆದ್ರ ಒಂದಾs ಒಂದ್ ಪ್ರಾಬ್ಲಮ್ಮ್ ರೀ.
ಸುಮಾರು ಎಂಟೂವರಿಯಿಂದ ಎಲ್ಲ್ ಹುಡುಕಿದ್ರೂ ಮದುವೀ ಗಂಡಾ ಕಾಣಸಂಗಿಲ್ಲ!  ಕೆಲವೊಂದಿಷ್ಟು ಮಂದಿ ಹುಡುಗಾ ಓಡಿ-ಗೀಡಿ ಹೋಗ್ಯಾನೇನೋ ಅಂತ ಸಂಶಯಾ ವ್ಯಕ್ತಪಡಿಸಿದ್ರು.  ಕೆಲವೊಂದಿಷ್ಟು ಮಂದಿ ಹುಡುಗನ್ ಅಪ್ಪ-ಅಮ್ಮನಿಗಿ ಜೋರ್ ಮಾಡಕ್ ಹಿಡುದ್ರು.  ಒಂದಿಷ್ಟು ಹೆಣ್ ಮಕ್ಳು ಒಂದ್ ಕಡಿ ಅಳಾಕ್ ಹತ್ಯಾವ!  ಒಂಥರಾ ಕಿಲಕಿಲಾ ಅಂಥ ನಕ್ಕೊಂಡಿದ್ ಛತ್ರ ಹೊಟ್ಟಿ ಬ್ಯಾನಿ ಬಂದ್ ರೋಧ್ನ ಮಾಡೋ ಮಗೂ ಹಂಗ ಅಳಾಕ್ ಹತ್ತೈತಿ! ಯಾರೂ ಪೋಲೀಸ್-ಗಿಲೀಸ್ ಅಂದಂಗಿದ್ದಿಲ್ಲ.  ನಡುಮನಿ ಈರಪ್ಪನ ಮರ್ಯಾದೆ ಪ್ರಶ್ನೆ ನೋಡ್ರಿ.  ಅವ ಏನ್ ಮಾಡ್ತಾನ? ಅತ್ಲಾಗಿಂದ್ ಇತ್ಲಾಗ, ಇತ್ಲಾಗಿಂದ್ ಅತ್ಲಾಗ್ ಒಂಥರಾ ಬೋನ್‌ನಾಗಿರೋ ಹುಲೀ ಮರೀ ಮಾಡ್ದಂಗ ಒಡಾಡ್‌ಕೊಂಡ್ ಬುಸುಗುಡಾಕ್ ಹತ್ತಿದ್ದ.  ವಾಲಗದೋರ್ ಅವರ ಕೆಲ್ಸಾ ನಡ್ಸ್ಯಾರ.  ಮೈಕ್ ಸೆಟ್ ರುದ್ರ, ಅದ್ಯಾವ್ದೋ ಬಭ್ರುವಾಹನ ಸಿನಿಮಾ ಹಾಡ್ ಜೋರಾಗ್ ಹಾಕ್ಯಾನ.  ಭೋಜನಶಾಲೆ ಅಡಿಗಿ ಮನೀ ಒಳಗಿಂದ ಶಾವ್ಗೀ ಪಾಯ್ಸದ ವಾಸ್ನಿ ಗಮ್ಮ್ ಅನ್ನಾಕ್ ಹತ್ತಿತ್ತು.  ಒಂದಿಷ್ಟು ಮಂದೀ ನಮಗೇನೂ ಗೊತ್ತೇ ಇಲ್ಲ ಅನ್ನೋ ಹಂಗ ಮದ್ವೀ ಮಂಟಪದ ಮುಂದ ಜಮಖಾನದ ಮ್ಯಾಲೆ ಕುಂತೂ ಹರಟೀ ಹೊಡ್ಯೋದ್ರಾಗ ತಲ್ಲೀನ ಆಗಿದ್ರು.  ಕೆಲವು ಕಡೆ ಒಂಥರ ಕುಮುಟು ಬೆವ್ರು ವಾಸ್ನಿ ಬೇರೆ!

ಇನ್ನೇನು ಲಗ್ನದ ಮಹೂರ್ತ ಬಂತು, ಹತ್ರಾ ಬಂದೇ ಬಿಡ್ತು, ಆದ್ರೂ ಎಲ್ಲಿ ನೋಡ್ರಿದ್ರೂ ಮದ್ವಿ ಗಂಡಿನ ಸುಳಿವೇ ಇಲ್ಲ!  ಹುಡುಗನ ಅಪ್ಪಾ ಅಮ್ಮಾ ಕಂಗಾಲು.  ಜೋಬ್ನಾಗೆ ಹತ್ತ್ ಪೈಸಾ ಇರದಿದ್ರು ನಮ್ಮ್ ಮಂದಿ ಮರ್ಯಾದೆಗೆ ಹೆದ್ರೋ ಜನಾ ನೋಡ್ರಿ.  ಅಷ್ಟೊತ್ತಿಗ್ ಆಗ್ಲೆ ಅವರ ಮುಖಾ ಕಪ್ಪ್ ಹಿಡದ ಕರಟಾ ಆಗಿತ್ತು.  ಹುಡುಗನ್ ಕಡಿ ಬಾಳ ಮಂದಿ ಇದ್ದಂಗಿರ್ಲಿಲ್ಲಾ ಆದ್ರೂ ಪಾಪ ಅವರಿಗೆ ಊರ್ ಹೊಸತು, ಏನ್ ಮಾಡ್ತಾರ, ಏನ್ ಬಿಡ್ತಾರ?

ನಮ್ ತಂಡ ಅಲ್ಲೇ ಇತ್ತು, ನಾವೂ ಹಂಗಾ ಚ್ಯಾಷ್ಟೀ ಮಾಡ್‌ಕೊಂಡು ಹಾಡ್ ಕೇಳ್ತಾ ನಿಂತಿದ್ವಿ.  ಅಷ್ಟ್ರಾಗ ಯಾರೋ ಒಬ್ರು "ಹೇ, ಗಿರಿ, ಸಾಯಾ ಮಾಡ್ರಪ್ಪಾ, ವರಾ ಎಲ್ಲೂ ಕಾಣಸ್ತಾನೇ ಇಲ್ಲ, ಮದ್ವೀ ನಿಂತ್ ಹೋಗೋ ಪರಿಸ್ಥಿತಿ ಬಂದೈತಿ!" ಅಂದ್ರು.  ನಮ್ ಗಿರಿ ಇದ್ದೋನು, "ಅಲ್ರೀ, ಎಲ್ಲಾ ಕಡೆ ನೋಡೀರೇನು? ಅತ್ಲಾಗ್ ಸಂಡಾಸ್ ರೂಮ್ ನೋಡೀರೇನು?" ಅಂದ.
"ಬಚ್ಚಲ್ ಮನಿ ನೋಡ್ರಿ, ಬಚ್ಚಲ್ ಮನಿ ನೋಡ್ರಿ" ಅಂತ ಯಾರ್ ಯಾರೋ ಕೂಗಿದ್ರು, ಕೊನೀಗ್ ನೋಡಿದ್ರ ಹೊಟ್ ಬ್ಯಾನೀನೋ, ಏನ್ ಕರ್ಮಾನೋ ಅಂದಂಗ ಮದ್ವಿ ಗಂಡ್ ಸಂಡಾಸ್ ರೂಮ್‌ನಾಗೆ ಬಾಗ್ಲ್ ಹಾಕ್ಕೊಂಡು ಕುಂತಾನಾ!  ಯಾರೂ ನೋಡೇ ಇಲ್ಲ!  ಕೊನೀಗೂ ಸಿಕ್ಕಿದಾ ಅಂತ ಎರ್ಲೂ ಸಮಾಧಾನ್ ಮಾಡ್‌ಕೊಂಡು ಅವನ್ನ ಎಷ್ಟು ಲಗೂನಾ ಅತೋ ಅಷ್ಟು ಲಗೂ ಕರ್ಕೊಂಡ್ ಬಂದ್, ಕೊನೀಗೆ ಮಹೂರ್ತ ಮೀರೋದ್ರೊಳಗ ತಾಳೀನೂ ಕಟ್ಸ್ ಬಿಟ್ರು ನೋಡ್ರಿ.  ಎಲ್ರೂ ಸಮಾಧಾನ ಪಟ್ರು, ನಡುಮನಿ ಕುಟುಂಬ ಒಂದ್ ದೀಡ್ ಕಡ್ದು ಹಾಕಿದ ಕೆಲ್ಸ ಮಾಡ್ದಂಗ್ ನಿಟ್ಟುಸಿರು ಬಿಡ್ತು.  ಈರಪ್ಪ ಅದ್ಯಾವ್ ದೇವ್ರಿಗೆ ಅದೇನೇನ್ ಹರಿಕಿ ಹೊತ್ತಾ ಅಂತಾ ಕೇಳಬಕು, ಆ ಸ್ಥಿತಿ!

ಅಷ್ಟೂ ಮಾಡಿ, ಮದ್ವಿ ಗಂಡು ಯಾಕ್ ಅಲ್ಲಿ ಹೊಕ್ಕೊಂಡು ಕುಂತಿದ್ದ ಅಂತ ಯಾರೋ ಕೇಳ್ಲಿಲ್ಲ, ಯಾರೂ ಹೇಳ್ಲಿಲ್ಲ! ನಮಗೊಂದಿಷ್ಟು ಮಂದಿಗೆ ಮಾತ್ರ ಗಿರಿ ಹೇಳಿದ ಮ್ಯಾಲೆ ಗೊತ್ತಾತು: ಮದ್ವಿ ಗಂಡು ಎಂಟ್ ಘಂಟಿ ಅಷ್ಟೊತ್ತಿಗೆ ಸಂಡಾಸ್ ರೂಮಿನ್ ಕಡೀಗೆ ಹೋಗೋದನ್ನ ನೋಡಿ, ಗಿರಿ ಅವನ ಫಾಲೋ ಮಾಡಿದ್ನಂತ.  ಆ ಹುಡುಗ, ತನ್ನ ಬಿಳೀ ಪಂಚಿ ಬಿಚ್ಚಿ, ಸಂಡಾಸ್ ರೂಮ್ ಬಾಗ್ಲ್ ಮ್ಯಾಲ ಇಟ್ಟು, ತನ್ನ ಕೆಲ್ಸ ಮುಂದುವರೆಸ್ಯಾನಂತ.  ಅಷ್ಟೊತ್ತಿಗೆ, ಗಿರಿ ಹೋಗಿ ಅವನ ವಸ್ತ್ರ ಅಪಹರಣ ಮಾಡಿ ಮತ್ತೊಂದು ರೂಮಿನಾಗೆ ಇಟ್ಟನಂತ.  ಯಾವ್ದೋ ಊರಿಂದ ಯಾವ್ದೋ ಊರಿಗೆ ಬಂದು, ಸಂಕೋಚದ ಅಪರಾವತರ ಅನ್ನೋ ಹಂಗ್ ಇದ್ದ ಹುಡುಗಾ ಕೂಗೋಕೂ ಆಗ್ದೇ ಹೊರಾಗ್ ಬರೋಕೂ ಅಗ್ದೇ ಅಲ್ಲೇ ಕುಂತಿದ್ನಂತೆ ನೋಡ್ರಿ!

ಇವೆಲ್ಲ ಆಗಿದ್ದು ನಮ್ ಗಿರಿ ಮತ್ತು ಅವರ ತಂಡದ ಕೃಪೆ ಅಂತ ಯಾರಿಗಾದ್ರೂ ಗೊತ್ತಾಗಿದ್ರ ನಮ್ ಪರಿಸ್ತಿತಿ ದಯನೀಯ ಆಗ್ ಹೋಗ್ತಿತ್ತು, ಆ ಸಂಕೋಚದ ಪ್ರವೃತ್ತಿ ಹುಡುಗನ ದೆಸೆಯಿಂದ ನಾವೆಲ್ಲ ಇವತ್ತು ಕೈಕಾಲು ನೆಟ್ಟಗೆ ಇಟಗೊಂಡಿರೋ ಹಂಗಾತು ಅಂತ ನೆನೆದು ಇವತ್ತೂ ನಾವ್ ನಗತೀವ್ ನೋಡ್ರಿ.  ನೀವೇನಾರಾ ನಮ್ಮೂರಿಗೆ ಹೋಗ್ತೀವಂದ್ರ ನಮ್ಮ್ ಗಿರಿ ಕಂಡು ಕುದ್ದ್ ಮಾತಾಕ್ಯಂಬರ್ರಿ, ಅವ ಹಿಂದ್ ಇದ್ದಂಗ್ ಈಗಿಲ್ಲ, ಆದ್ರೂ ಸ್ವಲ್ಪ ಹುಶಾರ್ ಇರ್ರಿ!


***
ಈ ಲೇಖನ ಮಾರ್ಚ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

Sunday, February 28, 2016

ಆಜಾದಿಯಿಂದ ಬರಬಾದಿಯವರೆಗೆ...

ಈ ತಿಂಗಳ ೯ನೇ ತಾರೀಖಿನಿಂದ ಜೆಎನ್‌ಯು ನಲ್ಲಿ ಕೆಲವು ವಿದ್ಯಾರ್ಥಿಗಳು ಕವನಗಳನ್ನು ಓದುತ್ತೇವೆ ಎಂದು ಪರ್ಮಿಷನ್ ತೆಗೆದುಕೊಂಡು ಅಫಝಲ್ ಗುರುವನ್ನು ಗಲ್ಲಿಗೇರಿಸಿದ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಕೂಗಲಾಯ್ತು (ಈ ಹೇಳಿಕೆಗಳನ್ನು ಯಾರು ಕೂಗಿದರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದ್ದು, ಈ ಸಂಬಂಧ ಇನ್ನೂ ಪೋಲೀಸ್ ಇನ್ವೆಸ್ಟಿಗೇಷನ್ ನಡೆಯುತ್ತಿದೆ).  ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಜೊತೆಗೆ ವಿದ್ಯಾರ್ಥಿ ನಾಯಕನನ್ನು ಬಂಧಿಸಲಾಯ್ತು.  ನಂತರ ಕೋರ್ಟಿನ ಆವರಣದಲ್ಲೇ ವಿದ್ಯಾರ್ಥಿ ನಾಯಕನನ್ನು ಥಳಿಸಲಾಯ್ತು.  ಈಗ ಐವರು ವಿದ್ಯಾರ್ಥಿಗಳು ತಿಹಾರ್ ಜೈಲಿನಲ್ಲಿ ದಿನಗಳನ್ನು ಎಣಿಸುತ್ತಿದ್ದರೆ, ದೇಶದಾದ್ಯಂತ ಅವರನ್ನು ಮುಕ್ತಗೊಳಿಸಲು ಅನೇಕ ಚಳುವಳಿ/ಆಂದೋಲನಗಳು ನಡೆದಿವೆ.  ಇದು ರಾಜಕೀಯವಾಗಿಯೂ ತೀವ್ರವಾಗಿ ಬೆಳೆದಿದ್ದು ಸಂಸತ್ತಿನಲ್ಲಿ ಪಕ್ಷ-ಪ್ರತಿಪಕ್ಷಗಳ ನಾಯಕರುಗಳು ಅನೇಕ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದು, ದೇಶದಾದ್ಯಂತ ಇದು ಅನೇಕ ವಿಚಾರಧಾರೆಗಳನ್ನು ಹರಿಸಿದೆ.  ಇದಕ್ಕೆಲ್ಲ ಒಂದು ರೀತಿಯ ಟ್ರಿಗ್ಗರ್ ಆಗಿ ಕಳೆದ ತಿಂಗಳು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಹಾಗೂ ಅದನ್ನು ಸರ್ಕಾರ ನಿಭಾಯಿಸಿದ ವಿಧಾನ ಎಂಬ ಮಾತುಗಳೂ ಜಾರಿಯಲ್ಲಿವೆ.  ಇಷ್ಟಕ್ಕೂ ಅಫಝಲ್ ಗುರು, ರೋಹಿತ್ ವೇಮುಲ, ಕನ್ಹೈಯಾ ಕುಮಾರ್, ಉಮರ್ ಖಾಲೀದ್, ಅನಿರ್ಬಾನ್ ಭಟ್ಟಾಚಾರ್ಯ, ಯಾಕೂಬ್ ಮೆಮನ್ ಇವರಿಗೆಲ್ಲ ಏನು ಸಂಬಂಧ?  ಇವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇರಬೇಕೇ? ಅದರಲ್ಲೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಯಾರಾದರೂ ಕೂಗಬಹುದೇ?  ಅಕಸ್ಮಾತ್ ಇದು ಒಂದು ರಾಷ್ಟ್ರ ವಿರೋಧೀ ಕಾರ್ಯಾಚರಣೆಯೇ ಆಗಿದ್ದಲ್ಲಿ, ಇದರ ಮೂಲ ಎಲ್ಲಿದೆ? ಇದಕ್ಕೆಲ್ಲ ಹಣಕಾಸು ಒದಗಿಸುವವರು ಯಾರು? ಈ ಘರ್ಷಣೆ ಕೇವಲ ಕಳೆದೆರಡು-ಮೂರು ವರ್ಷಗಳಲ್ಲಿ ಹುಟ್ಟಿದ್ದೇ? ಅಥವಾ ಇದರ ಹಿಂದೆ ಹಲವಾರು ವರ್ಷಗಳಿಂದ ಅನೇಕ ಕಾರಣಗಳು ಇವೆಯೋ?

ಈ ನಿಟ್ಟಿನಲ್ಲಿ ಮೊದಲು ಮುಖ್ಯ ವಿದ್ಯಾರ್ಥಿಗಳ ಬಗ್ಗೆ ತಿಳಿಯೋಣ:
ಕನ್ಹೈಯಾ ಕುಮಾರ್ ಮೂಲತಃ ಬಿಹಾರ್‌ನವನು. ವಿದ್ಯಾರ್ಥಿ ದಿನಗಳಿಂದಲೂ ಕಮ್ಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತನಾಗಿ ದುಡಿದವನು.

ಕೆಲವು ವರ್ಷಗಳಿಂದ ಜೆಎನ್‌ಯು ನಲ್ಲಿ ಆಫ್ರಿಕನ್ ಸ್ಟಡೀಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ೨೦೧೫ ರಲ್ಲಿ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಚುನಾಯಿತನಾದವನು.  ತನ್ನ ಪ್ರಚೋದನಾಕಾರಿ ಭಾಷಣಳಿಂದ ಮುಂದೆ ಬಂದವನು.
ಉಮರ್ ಖಾಲೀದ್ ಮೂಲತಃ ಮಹಾರಾಷ್ಟ್ರದವನು.  ವಿದ್ಯಾರ್ಥಿ ದಿನಗಳಿಂದಲೂ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಕಾರ್ಯಕರ್ತನಾಗಿ ದುಡಿದವನು.  ಜೆಎನ್‌ಯುನಲ್ಲಿ ಕೆಲವು ವರ್ಷಗಳಿಂದ ಎಮ್‌ಎ, ಎಮ್‌ಫಿಲ್ ಮಾಡಿ ಮುಗಿಸಿದ್ದು, ಈಗ ಸೋಶಿಯಲ್ ಸೈನ್ಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ಅಫ್‌ಝಲ್ ಗುರು ಕಾರ್ಯಕ್ರಮ ನಡೆಸುವ ಬಗ್ಗೆ ಮೊದಲು ಈತನೇ ಜೆಎನ್‌ಯು ಪರ್ಮಿಷನ್ ಕೇಳಿದ್ದು,  ವಿಶ್ವ ವಿದ್ಯಾನಿಲಯದ ಅಡ್ಮಿನಿಸ್ಟ್ರೇಷನ್ ನಿರಾಕರಿಸಿದ ಮೇಲೆ, ಈತ ಪಾಂಪ್ಲೆಟ್ಟುಗಳನ್ನು ಮುದ್ರಿಸಿ, ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೂಲಕ ಅನೇಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಎಂದು ಇವನ ಮೇಲೆ ಆರೋಪವಿದೆ.

***

ಭಾರತ ಒಂದು ಪ್ರಬಲವಾದ ರಾಷ್ಟ್ರ, ಪ್ರಜಾಪ್ರಭುತ್ವವನ್ನು ಎಲ್ಲ ಕೋನಗಳಿಂದಲೂ ಅಳೆದರೆ ನಿಜವಾದ ಸ್ವಾತ್ರಂತ್ರ್ಯ ಎಲ್ಲರಿಗೂ ಇದೆ. ಅದು ಅಭಿವ್ಯಕ್ತಿ ಸ್ವಾತ್ರಂತ್ರ್ಯವಾಗಿರಬಹುದು, ಅಥವಾ ಸಂಘಟನಾ ಸ್ವಾತಂತ್ರ್ಯವಾಗಿರಬಹುದು.  ಈ ಮೂಲಭೂತ ಸ್ವಾತಂತ್ರ್ಯವೇ ಒಂದು ಕಾಲದಲ್ಲಿ ನಮ್ಮ ಸ್ವತಂತ್ರ ಹೋರಾಟಗಾರರ ಹಕ್ಕು ಆಗಿತ್ತು.  ಅದರ ಮುಖಾಂತರವೇ ದೇಶವನ್ನು ಆಳುತ್ತಿದ್ದ ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು, ಸತ್ಯಾಗ್ರಹಗಳನ್ನು ಸಂಘಟಿಸಿ, ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದರಿಂದಲೇ ನಾವು ಬ್ರಿಟೀಷ್ ರಾಜ್ಯದಿಂದ ಮುಕ್ತಿ ಪಡೆದದ್ದು.  ಈ ಸ್ವಾತಂತ್ರ್ಯ ಹೋರಾಟ ಒಂದೆರಡು ವರ್ಷದ್ದಲ್ಲ, ಬದಲಿಗೆ ಹಲವು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಹರಡಿ ಅನೇಕರ ತ್ಯಾಗ ಬಲಿದಾನಗಳಿಂದ ಈಗಿರುವ ಮುಕ್ತ ದೇಶ ಹುಟ್ಟಲು ಸಾಧ್ಯವಾಯ್ತು.  ಆದರೆ ಅಲ್ಲಿ, ಪರ-ವಿರೋಧಗಳ ಬಗ್ಗೆ ಒಮ್ಮತವಿತ್ತು, ಯಾರು ನಮ್ಮವರು ಯಾರು ಪರಕೀಯರು ಎನ್ನುವುದು ಗೊತ್ತಿತ್ತು.  ಜೊತೆಗೆ ನಮ್ಮ ನಾಯಕರೂ ಸಹ ಮಂದವಾದ ಮತ್ತು ತೀವ್ರವಾದದ ಭಿನ್ನತೆಯನ್ನು ಹೊರತು ಪಡಿಸಿದರೆ ದೇಶದ ಸಮಸ್ಯೆಗಳ ಆಳವನ್ನು ತಿಳಿದವರಾಗಿದ್ದರು.  ನಿಜವಾದ ದೇಶಭಕ್ತರಾಗಿದ್ದರು.  ನಮಗೆ ಸ್ವಾತ್ರಂತ್ರ್ಯ ಸಿಗುವುದಕ್ಕೆ ನೂರು ವರ್ಷಗಳ ಮೊದಲೇ ಈ ಮನೋಭಾವ ದೇಶದ ಉದ್ದಗಲಕ್ಕೂ ಹರಡಿತ್ತು.  ವೈಚಾರಿಕ ಪಂಥ, ಭಕ್ತಿ ಪಂಥ, ಉಗ್ರ ಪಂಥ, ಶಾಂತಿ ಪಂಥ - ಈ ಎಲ್ಲರ ಗುರಿ ಬ್ರಿಟೀಷರಿಂದ ನಮ್ಮನ್ನು ಮುಕ್ತಗೊಳಿಸುವುದೊಂದೇ ಆಗಿತ್ತು.  ಅದು ನಿಜವಾದ ದೇಶ ಪ್ರೇಮ, ನಿಜವಾದ ದೇಶಭಕ್ತಿ.  ಲಕ್ಷಾಂತರ ಕುಟುಂಬಗಳು ಸಾವಿಗೀಡಾದವು.  ಯಾವೊಂದು ನೇರ ಲಾಭ ಅಥವಾ ದುರ್ಬಳಕೆ ಇಲ್ಲದ ಶುದ್ಧ ಮನೋಭಾವದ ಅನೇಕ ಯೋಧರು ಹಿಂದೆ ಮುಂದೆ ನೋಡದೆ ಜೀವ ತೆತ್ತರು.

ನಾವು ಇಂದಿನ ರಾಷ್ಟೀಯವಾದಿ ಚಳುವಳಿಗಳನ್ನು ಈ ಒಂದು ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.  ಈ ಮೇಲೆ ಹೇಳಿದ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಬೇಕಾಗಿರುವುದು ಏನು?  ಭಾರತ ಸರ್ಕಾರ ಮತ್ತು ಭಾರತದ ಟ್ಯಾಕ್ಸ್ ಪೇಯರ್ಸ್ ಹಣ ಕೊಟ್ಟು ಓದಿಸುತ್ತಿರುವ ಇವರಿಗೆಲ್ಲ ಅಫಝಲ್ ಗುರು, ಯಾಕೂಬ್ ಮೆಮನ್ ಆಪ್ತರೇಕಾಗುತ್ತಾರೆ?  ಈ ತೀವ್ರತರ ಆಲೋಚನೆಗಳು ಕೇವಲ ಒಂದೆರಡು ವರ್ಷಗಳಲ್ಲಿ ಹುಟ್ಟದೇ ಅನೇಕ ಮೈತ್ರಿ ಪಕ್ಷಗಳು ಹಲವು ವರ್ಷಗಳಿಂದ ರಾಜಕೀಯ ವಾತಾವರಣವನ್ನು ದೇಶದಾದ್ಯಂತ ಹುಟ್ಟು ಹಾಕಿರುವುದು ನಿದರ್ಶನಕ್ಕೆ ಬರುತ್ತದೆ.  ವಿಶ್ವ ವಿದ್ಯಾನಿಲಯಗಳಲ್ಲಿ ರಾಜಕೀಯ ಪ್ರೇರಣೆ ಇರಬೇಕೆ ಬೇಡವೇ?  ವಿಶ್ವವಿದ್ಯಾನಿಲಯ ಮುಕ್ತ ಆಲೋಚನೆಗಳನ್ನು ಬೆಳೆಸಬೇಕೆ ಅಥವಾ ಕೇವಲ ಶೈಕ್ಷಣಿಕ ಸಂಬಂಧಿ ಆಲೋಚನೆಗಳನ್ನು ಮಾತ್ರ ಬೆಳೆಸಬೇಕೆ?  ಈ ಪ್ರಶ್ನೆಗಳು ನಮ್ಮ ನಂಬಿಕೆಯ ಬುಡವನ್ನು ಅಲುಗಾಡಿಸುತ್ತವೆ.
ಈ ಹೈದರಾಬಾದ್ ಮತ್ತು ಜೆಎನ್‌ಯು ವಿದ್ಯಮಾನಗಳನ್ನು ಕೂಲಂಕಶವಾಗಿ ನೋಡಿದಾಗ ಅನೇಕ ಮೂಲ ಕಾರಣಗಳು ಗೊತ್ತಾಗುತ್ತವೆ:

ಭಾರತ ಸರ್ಕಾರದ ಎಚ್.ಆರ್.ಡಿ. ಮಿನಿಸ್ಟ್ರಿ ಅನೇಕ ದಲಿತ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಿತು ಎನ್ನುವ ಆರೋಪವಿದೆ.  ತಮಗೆ ಬೇಕಾದವರನ್ನು ಮಾತ್ರ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ ಎಂಬ ಆರೋಪವಿದೆ.  ರೋಹಿತ್ ವೇಮುಲನ ಸಾವನ್ನು ರಾಜಕೀಯ ದಾಳವಾಗಿ ಬಳಸಲಾಯ್ತು ಎನ್ನುವ ಆಲೋಚನೆಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಮೂಲ ಸ್ಥಂಭಗಳಾದ ಮುಕ್ತ ಆಲೋಚನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬುದು.  ಇದಕ್ಕೂ ಒಂದು ಹೆಜ್ಜೆ ಹಿಂದೆ ಹೋಗಿ ನೋಡಿದರೆ ದೇಶದ ಉದ್ದಗಲಕ್ಕೂ ಮಕ್ಕಳಿಗೆ ಯಾವ ರೀತಿಯಲ್ಲಿ ಇತಿಹಾಸವನ್ನು ಬೋಧಿಸಲಾಗಿದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.  ಈ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಬಲಿ ಕೊಟ್ಟು ದೇಶದ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ         ಗಲ್ಲಿಗೊಳಗಾದ ಅಫಝಲ್ ಗುರು ಮತ್ತು ಯಾಕೂಬ್ ಮೆಮನ್ ಪರ ಏಕೆ ನಿಲ್ಲುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ.  ನಾವೊಂದು ಸಮಸ್ಯೆಯ ವಿರುದ್ಧ ಹೋರಾಟ ಮಾಡಿದಾಗ, ನಾವು ಎಲ್ಲಿ ಗೆರೆಯನ್ನು ದಾಟುತ್ತಿದ್ದೇವೆ ಎನ್ನುವ ತಿಳುವಳಿಕೆ ಈ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಗೊತ್ತಾಗುತ್ತದೆ, ಜೊತೆಗೆ ರಾಜಕೀಯ ದಾಳಗಳಿಗೆ ಬಲಿಪಶುಗಳಾದ ಮೌಢ್ಯವೂ ಎದ್ದು ಕಾಣುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ವಿದ್ಯಾರ್ಥಿಗಳು ನಡೆಸುವ ಧರಣಿ ಕಾರ್ಯಕ್ರಮಗಳಿಗೆ ಹಣಕೊಡುವವರಾರು? ಅಫಝಲ್ ಗುರುವಿನ ಸಾವಿರಾರು ಫೋಟೋಗಳನ್ನು ಪ್ರಿಂಟ್ ಮಾಡಲು ಯಾರು ಹಣಕೊಟ್ಟರು?  ಅಫಝಲ್ ಗುರುವಿಗೆ ಅನ್ಯಾಯವಾಗಿದೆ ಎಂದುಕೊಂಡರೆ ಅದನ್ನು ಅವನು ಬದುಕಿದ್ದಾಗ ಸುಪ್ರೀಮ್ ಕೋರ್ಟ್‌ನಲ್ಲಿ ಕಂಟೆಸ್ಟ್ ಏಕೆ ಮಾಡಲಿಲ್ಲ?  ಇದರ ಹಿಂದೆ ನಮ್ಮ ದೇಶದ ವಿವಿಧ ರಾಜಕೀಯ ಶಕ್ತಿಗಳು ಮಾತ್ರ ಇವೆಯೇ? ಅಥವಾ ಹೊರ ದೇಶಗಳ ಹುನ್ನಾರವಿದೆಯೇ? ಇಷ್ಟು ದಿನ ಕೇವಲ ಮೂಲಭೂತವಾದದ ಬಗ್ಗೆ ಓದುತ್ತಿದ್ದ ನಮಗೆ ಈಗ ಹಿಂದೂ ವಿದ್ಯಾರ್ಥಿಗಳು ಒಂದು ದೇಶದ ಉಚ್ಛ ನ್ಯಾಯಾಲಯ ದೇಶದ್ರೋಹಿಯೆಂದು ಪರಿಗಣಿಸಿದ ಕೆಲವು ಮುಸ್ಲಿಂ ಪ್ರತಿವಾದಿಗಳನ್ನು ದೈವತಾ ಸ್ವರೂಪಿಗಳೆಂದು ಕರೆಯುವಷ್ಟರ ಮಟ್ಟಿಗೆ ದೇಶದ ವಿದ್ಯಾರ್ಥಿಗಳ ನೈತಿಕ ತಿಳುವಳಿಕೆಯ ಬಗ್ಗೆ ಚಿಂತೆ ಪಡುವಂತೆ ಮಾಡಿದೆ.

***
ಘೋಷಣೆಗಳನ್ನು ಯಾರೇ ಕೂಗಿರಲಿ, ಅವುಗಳನ್ನು ಕೂಗಿದ್ದಂತೂ ನಿಜ.  ಒಬ್ಬನ ವಾಕ್ ಸ್ವಾತಂತ್ರ್ಯದಲ್ಲಿ ಏನೇನೆಲ್ಲ ಮಾಡಲು ಸಾಧ್ಯವಿದೆ?  ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಜಗತ್ತಿನಾದ್ಯಂತ ಉಳಿದ ದೇಶಗಳು ಯಾವ ರೀತಿಯ ಟ್ರೀಟ್‌ಮೆಂಟ್ ಅನ್ನು ಕೊಡುತ್ತವೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.  ನಮ್ಮ ಸುತ್ತ ಮುತ್ತ ಕಮ್ಯೂನಿಷ್ಟ್ ದೇಶಗಳಿವೆ, ಅವುಗಳಲ್ಲಿ ನಡೆಯುವ ಸುದ್ದಿಯೂ ಹೊರಬರದಂತೆ ನರಮೇಧ ನಡೆದಾಗಲೆಲ್ಲ ಇದೇ ವಿದ್ಯಾರ್ಥಿಗಳು ಚಳುವಳಿ ನಡೆಸುತ್ತಾರೆಯೇ? ಅವರ ಪ್ರತೀಕಾರದ ಪರಿಮಿತಿ ಎಷ್ಟು?  ನಮ್ಮ ಪಕ್ಕದ ದೇಶಗಳಲ್ಲಿ ನೂರಾರು ಜನ ಅಮಾಯಕರು ಸತ್ತಾಗ ಇದೇ ವಿದ್ಯಾರ್ಥಿಗಳ ತಿಳುವಳಿಕೆಗೆ ಅದು ನಿಲುಕದ ವಿಷಯವಾಗಿರುವುದೇಕೆ?  ಕಮ್ಯೂನಿಸಮ್‌ನ ತತ್ವಗಳೇನು? ಹಾಗೂ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರವೇನು ಎಂಬುದನ್ನು ಯೋಚಿಸಲಾರದಷ್ಟು ಈ ವಿದ್ಯಾರ್ಥಿಗಳು ಶೂನ್ಯರಾದರೇಕೆ?
ಈ ವಿದ್ಯಾರ್ಥಿಗಳು ಅನವಶ್ಯಕವಾಗಿ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವಾಗ ನನಗೆ ಬೇಸರವಾಗುವ ಒಂದು ಸಂಗತಿ ಎಂದರೆ ನಮ್ಮ ದೇಶದಲ್ಲೇ ಅನೇಕ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿರುವಾಗ ಅವುಗಳನ್ನು ನಿರ್ಮೂಲನ ಮಾಡಲು ಈ ವಿದ್ಯಾರ್ಥಿಗಳು ಯಾಕೆ ಯೋಚಿಸಬಾರದು?  ವಿಜ್ಞಾನ, ತಂತ್ರಜ್ಞಾನ ಮುಂದುವರೆದು ಜಗತ್ತಿನ ಉಳಿದ ಯುವಜನತೆ ಅನೇಕ ಉನ್ನತ ಚಿಂತನೆ, ಧೋರಣೆಗಳಲ್ಲಿ ತೊಡಗಿದ್ದರೆ ನಮ್ಮ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಫಝಲ್ ಗುರುವಿನ ಹಿಂದೆ ಏಕೆ ಬಿದ್ದಿದ್ದಾರೆ?  ಇವರೇ ನಮ್ಮ ಮುಂದಿನ ನಾಗರೀಕರೆ? ಇವರೇ ನಮ್ಮ ಮುಂದಿನ   ಲೀಡರುಗಳೇ?

ಒಂದು ದೇಶದ ಸತ್ಯಾನಾಶ ಎಂದರೆ ಏನು? ಭಾರತವನ್ನು ಸಂಪೂರ್ಣ ಬುಡಮೇಲು ಮಾಡುವುದೇ? ಅಥವಾ ಅದನ್ನು ತುಂಡು ತುಂಡು ಮಾಡಿ ವಿಭಜನೆ ಮಾಡುವುದೇ?  ನಾವೆಲ್ಲ ಇಂದೂ ಸಹ ಬೇರೆ ಬೇರೆ ಪ್ರಾಂತ್ಯದವರೇ? ಅನೇಕ ಭಾಷೆ ಸಂಸ್ಕೃತಿ ವೈವಿಧ್ಯತೆಗಳ ಪ್ರತೀಕ ಭಾರತ, ಇಂಥ ಭೂಮಿಯಲ್ಲಿ ಅನೇಕ ವೈರುಧ್ಯಗಳೂ ಇರುವುದು ಸಹಜ.  ಆ ವೈರುಧ್ಯಗಳನ್ನು ನಾವು ವಿಚಾರವಾದಿಗಳಾಗಿ ಬಗೆಹರಿಸಿಕೊಳ್ಳುತ್ತೇವೆಯೋ ಅಥವಾ ಕಾನೂನು ಅಧಿಕಾರಗಳಿಂದ ಸಂಭ್ರಮಿಸಿಕೊಳ್ಳುತ್ತೇವೆಯೋ ಅನ್ನುವುದು ಮುಖ್ಯವಾಗುತ್ತದೆ.  ಇಂದಿನ ಮಾಧ್ಯಮಗಳು ದೂರದ ದೇಶಗಳಿಗೆ ಹರಡುತ್ತಿರುವ ಬಿಸಿಬಿಸಿ ಸುದ್ದಿ ಈ ವರೆಗೆ ನಮ್ಮ ದೇಶದ ವಿದ್ಯಾರ್ಥಿಗಳ ಬಗ್ಗೆ ಒಳ್ಳೆಯ ಮನೋಭಾವನೆಯನ್ನು ಮೂಡಿಸಲು ಸೋತಿವೆ ಎಂದು ಹೇಳಲು ಖೇದವಾಗುತ್ತದೆ.

ಒಟ್ಟಿನಲ್ಲಿ ಕಳೆದ ಇನ್ನೂರು ವರ್ಷಗಳ ಸತತ ಹೋರಾಟದ ಬಳಿಕ ದೊರೆತ ನಮ್ಮ ಆಜಾದಿ, ಸ್ವಾತಂತ್ರ್ಯಾ ನಂತರ ಕೇವಲ ಆರು ದಶಕಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ದೇಶದ ಬರಬಾದಿಯ ಕಡೆಗೆ ಯೋಚಿಸುವಂತೆ ಮಾಡಿದ್ದು ನಿಜವಾಗಿಯೂ ನಮ್ಮ ದುರ್ದೆಶೆ.

***
ಈ ಲೇಖನ ಈ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.