Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

2 comments:

Dash said...

ಪ್ರಕಾಶ್ ಬಗ್ಗೆ ಹೆಚ್ಚು ಮಾಹಿತಿ ನಿರೀಕ್ಷಿಸಿ ಓದಿದೆ.
ನೀವು ಅವರನ್ನು meet ಮಾಡಿದ್ದನ್ನು ನೆನಪಿಸಿಕೊಂಡ ಝಲಕ್ ನಂತೆ ಕಾಣುತ್ತದೆ.

Satish said...

ವಸಂತ್,
ಧನ್ಯವಾದ.

ದಾಶರಥಿ,
ಗುಡ್ ಪಾಯಿಂಟ್. ಪ್ರಕಾಶ್ ಸಾಹಿತ್ಯ ಕೃಷಿ ಬಗ್ಗೆ ಹುಡುಕಿದೆ, ಹೆಚ್ಚಿನ ಮಾಹಿತಿ ಸಿಗಲಿಲ್ಲ - ಒಂದಿಬ್ಬರಿಗೆ ಫೋನ್ ಮಾಡಬೇಕು ಪುರುಸೊತ್ತು ಮಾಡಿಕೊಂಡು.