Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

Saturday, February 05, 2011

ಸೋಶಿಯಲ್ಲ್ ಮೀಡಿಯಾ - ಸಾಮಾಜಿಕ ಕ್ರಾಂತಿ

ಓದೋಕೆ ಬರೆಯೋಕೆ ಬೇಕಾದಷ್ಟು ಅವಕಾಶಗಳು ಇದ್ದಂತೆ ಹಾಗೆ ಮಾಡದೇ ಇರೋದಕ್ಕೂ ಸಾಕಷ್ಟು ನೆಪಗಳೂ ಉದ್ಭವವಾಗುತ್ತಾ ಇತ್ತೀಚೆಗೆ ಓದಿ-ಬರೆಯೋ ರೂಢಿಯೇ ತಪ್ಪಿ ಹೋದಂತಾಗಿರೋದು ವಿಶೇಷ. ಮೊದಲೆಲ್ಲ ದೊಡ್ಡ ಸ್ಕ್ರೀನುಗಳಲ್ಲಿ ದೊಡ್ಡದಾಗಿ ಉದ್ದುದ್ದವಾಗಿ ಓದುತ್ತಿದ್ದವರಿಗೆ ಈಗ ಚಿಕ್ಕ ಸ್ಕ್ರೀನುಗಳಲ್ಲಿನ ಸಣ್ಣ-ಪುಟ್ಟ ಓದುಗಳಲ್ಲೋ ಅಥವಾ ಯಾವುದೋ ಲಿಂಕ್‌ನ ಬೆನ್ನು ಬಿದ್ದು ಅದರ ಹಿಂದಿನ ತಲಾಷೆಯಲ್ಲೋ ದಿನ ಕಳೆದು ಹೋಗಿಬಿಡುತ್ತದೆ. ಸೀರಿಯಸ್ಸಾಗಿ ಒಂದು ಪುಸ್ತಕವನ್ನು ಬಿಟ್ಟು ಬಿಡದಂತೆ ಕವರಿನಿಂದ ಕವರಿನವರೆಗೆ ಓದದೇ ಎಷ್ಟೋ ವರ್ಷಗಳೇ ಆಗಿ ಹೋಗಿವೆ. ಓದುವ ಚಾಳಿ ಹಾಗಿರಲಿ ಇನ್ನು ಬರೆಯೋದರ ಹವ್ಯಾಸವಂತೂ ಬಿಟ್ಟೇ ಹೋಗಿದೆ, ನೋಟ್ ಪುಸ್ತಕದಲ್ಲಿ ಒಂದಿಷ್ಟು ಬರೆದುಕೊಳ್ಳುವುದು ರೂಢಿ, ಅದೂ ಕೂಡಾ ಇಂದಿನ ಐಪ್ಯಾಡ್ (ipad) ದಿನಗಳಲ್ಲಿ ಸ್ಕ್ರಿಬಲ್ಲ್ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ.

ಇಂದಿನ ಫೇಸ್‌ಬುಕ್ ಸಂವೇದನೆಯ ದಿನಗಳಲ್ಲಿ ಎಲ್ಲವೂ ಹಗುರ ಮಯವಾಗಿ ಬಿಡುತ್ತಿದೆಯೇನೋ ಎಂದು ಬೆನ್ನ ಹುರಿಯಲ್ಲಿ ಹೆದರಿಕೆ ಮೂಡುವ ಹೊತ್ತಿಗೇ ಈಜಿಪ್ಟ್‌ನಲ್ಲಿ ಹೊತ್ತಿ ಉರಿಯುತ್ತಿರುವ ರಾಷ್ಟ್ರೀಯ ಕಲಹದ ಸಂವಹನದ ಬೆನ್ನುಲೆಬಾಗಿ ಸೋಶಿಯಲ್ಲ್ ಮೀಡಿಯಾ ಎದ್ದು ಕಾಣಿಸಿ ಹೊಸ ಯುಗದಲ್ಲಿ ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದೆ. ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿ ಸಣ್ಣಪುಟ್ಟದಾಗೇ ಶುರುವಾಗುವ ಅಲೆಗಳು ಕೊನೆಗೆ ಪ್ರಬಲ ಸುನಾಮಿಯಾದ ಉದಾಹರಣೆಗಳು ಬೇಕಾದಷ್ಟಿವೆ. ನಾನೂ ಇವೆಲ್ಲವುಗಳಲ್ಲಿ ಒಂದೊಂದು ಅಕೌಂಟ್ ಎಂದು ತೆರೆದುಕೊಂಡಿದ್ದು ಮಾತ್ರ, ಅಂದು ನೆಟ್ಟ ಗಿಡ ಇಂದಿಗೂ ಒಣಗುತ್ತಲೇ ಇದೆಯೇ ಹೊರತೂ ಎಂದು ಅದಕ್ಕೆ ನೀರುಣಿಸಿ ಬೆಳೆಸುವಷ್ಟು ವ್ಯವಧಾನವಂತೂ ನನಗೆ ಮೈಗೂಡಿದ್ದಿಲ್ಲ. ಆದರೆ ಈ ಸೋಷಿಯಲ್ಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಹೋದರೆ ಔಟ್‌ಡೇಟೆಡ್ ಆಗಿ ಹೋಗುವ ಹೆದರಿಕೆಯೂ ದೂರವಿಲ್ಲ.

ನಮ್ಮ ದೇಶದ ಸ್ವಾತಂತ್ರ್ಯದ ಚಳುವಳಿಯ ದಿನಗಳಲ್ಲಿ ವೈಯಕ್ತಿಕವಾಗಿ ಅನೇಕ ಮುಖಂಡರು ಲಕ್ಷಾಂತರ ಜನರನ್ನು ದೇಶದ ಉದ್ದಗಲಕ್ಕೂ ಒಟ್ಟುಗೂಡಿಸುತ್ತಿದ್ದರು, ಹಾಗೆ ಒಟ್ಟು ಗೂಡಿದ ಜನರೆಲ್ಲರೂ ತಮ್ಮದೇ ಆದ "ಸೋಶಿಯಲ್ಲ್ ಮೀಡಿಯ"ದ ಒಂದು ನೆಟ್‌ವರ್ಕ್ ಒಂದನ್ನು ಸೃಷ್ಟಿಸಿಕೊಂಡಿರಬೇಕು, ಇಲ್ಲವೆಂದಾದರೆ ಇಂತಲ್ಲಿ ಈ ದಿನ ಈ ಚಳುವಳಿ ನಡೆಯುತ್ತದೆ, ಅದಕ್ಕೆ ಸಿದ್ಧರಾಗುವಂತೆ ಸಂದೇಶಗಳು ಹೇಗೆ ಪಸರಿಸುತ್ತಿದ್ದವೋ? ಆಗ ಲಭ್ಯವಿದ್ದ ವೃತ್ತಪತ್ರಿಕೆಗಳು ಹಾಗೂ ಪ್ರಿಂಟ್ ಮಾಧ್ಯಮಗಳು ಸರ್ಕಾರ ವಿರುದ್ಧ ಪ್ರಕಟಿಸಲು ಹೆದರುತ್ತಿದ್ದ ಕಾಲದಲ್ಲಿ ಜನರು ತಮಗೆ ಅನುಕೂಲವಾಗುವ ರೀತಿಯಲ್ಲಿ ಕೈ ಬರಹದಿಂದಲೋ ಅಥವಾ ಸಣ್ಣ-ಪುಟ್ಟ ಗುಪ್ತ ಮೀಟಿಂಗ್‌ಗಳ ಸಹಾಯದಿಂದ ಸಂದೇಶಗಳನ್ನು ಬಿತ್ತರಿಸುತ್ತಿದ್ದರೆಂದು ಕಾಣುತ್ತದೆ. ಈಗಿನ ೨೦೧೧ ರಲ್ಲಿ ಈಜಿಪ್ಟ್‌ನಲ್ಲಾಗುವ ಜನಾಂದೋಲನವನ್ನು ಒಂದು ಸಣ್ಣ ಕ್ರಾಂತಿಯೆಂದು ಕರೆದರೆ ಈಗಿನ ಇಂಟರ್‌ನೆಟ್‌ನ ಸಹಾಯದಿಂದ ಸುಲಭವಾಗಿ ಹರಡುವ ಸಂದೇಶಗಳನ್ನು ಅರವತ್ತು ವರ್ಷದ ಹಿಂದೆ ಭಾರತದಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಹೋಲಿಸಿದರೆ ಬಹಳ ಸರಳವೆಂದೆನಿಸುವುದಿಲ್ಲವೇನು?

ಈಗಿನ ಜನಾಂದೋಲನ ತಾಜಾ ಸುದ್ದಿ ಹಾಗೂ ಮಾಹಿತಿಗೆ ಇಂಬು ಕೊಡುತ್ತದೆ, ಇಂದು ಆಗುವ ಸುದ್ದಿಗಳನ್ನು ನಾಳೆ ಪ್ರಕಟಿಸುವ ಸುದ್ದಿ ಪತ್ರಿಕೆಗಳು ಕಾಲವಾಗುವ ಪರಿಸ್ಥಿತಿ ಬೆಳೆದಿದೆ. ದೈನಿಕ ಸುದ್ದಿ ಪತ್ರಿಕೆಗಳು ದೈನಿಕ ಮ್ಯಾಗಜೀನುಗಳಾಗಿ ಪರಿವರ್ತನೆಗೊಳ್ಳುತ್ತಿರುವ ಹೊತ್ತಿಗೆ ಅವುಗಳ ಜರ್ನಲಿಸ್ಟುಗಳು ಪೂರ್ವದಿಂದ ಪಶ್ಚಿಮದೆಡೆಗೆ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಸಹ ಸುದ್ದಿಗೆ ಕಾತರರಾಗಿರುವ ಪ್ರಪಂಚದಾದ್ಯಂತ ಹರಡಿಕೊಂಡ ಇನ್‌ಫರ್ಮೇಷನ್ನ್ ಸ್ಯಾವೀ ಜನರಿಗೆ ತಾಜಾ ಸುದ್ದಿಯನ್ನು ಉಣಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲಲ್ಲಿ ಇನ್‌ವೆಷ್ಟಿಗೇಟಿವ್ ಜರ್ನಲಿಸಮ್ ಎಂಬ ಹೆಸರಿನಲ್ಲಿ ಹಲವಾರು ಸ್ಕ್ಯಾಂಡಲ್ಲುಗಳು ಹೊರಬಂದು ಕ್ಲಾಸ್ಸಿಕ್ ಪತ್ರಿಕೋದ್ಯಮವನ್ನು ಇನ್ನೂ ಜೀವಂತವಿರಿಸಿವೆ. ಇಂಟರ್ನೆಟ್ ಕಳೆದ ಎರಡು ದಶಕಗಳಲ್ಲಿ ಸುದ್ದಿ ಮಾಧ್ಯಮದ ಬೆನ್ನೆಲುಬಾಗಿ ಬೆಳೆದು ಎಲ್ಲವೂ ಅದರ ಸುತ್ತಲೂ ಸುತ್ತ ತೊಡಗಿವೆ ಎಂದರೆ ಅತಿಶಯೋಕ್ತಿಯೇನಲ್ಲ.

ಸೋಷಿಯಲ್ಲ್ ನೆಟ್‌ವರ್ಕಿಂಗ್‌ ವ್ಯವಸ್ಥೆಗಳು ಬೆಳೆಯುವುದರ ಹಿಂದೆ ಯುವ ಜನಾಂಗದ ಸಂಘ ಜೀವನದ ಅಗತ್ಯ ಬಹಳ ಮುಖ್ಯವಾಗಿದೆ, ದಿನದ ಉದ್ದಕ್ಕೂ ಒಂದೆರೆಡು ಸಣ್ಣಪುಟ್ಟ ವಾಕ್ಯಗಳಲ್ಲಿ ಆಗು-ಹೋಗುಗಳನ್ನು ಬಿತ್ತರಿಸುವುದರ ಜೊತೆಗೆ ತಮ್ಮಲ್ಲಿನ ಯಾವುದೇ ಬದಲಾವಣೆಗಳನ್ನೂ ಒಂದೇ ಮಾಧ್ಯಮದಡಿಯಲ್ಲಿ ಎಲ್ಲರೊಡನೆ ಹಂಚಿಕೊಳ್ಳುವ ಅಗತ್ಯಕ್ಕೆ ಒಂದು ಹೊಸಮುಖವನ್ನು ಕಂಡುಕೊಳ್ಳಲಾಗಿದೆ. ಈ ಸೋಷಿಯಲ್ಲ್ ನೆಟ್‌ವರ್ಕ್‌ಗಳಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತಿಯ ಬದುಕಿನ ಆಗು-ಹೋಗುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡಲು ಬೆಳಕಿನ ವೇಗದ ಹೊಸ ಮುಖವನ್ನು ಸೃಷ್ಟಿಸಲಾಗಿದೆ.

ಪರಿವರ್ತನೆ ಬಹಳ ಅಗತ್ಯ - ಒಂದು ಶತಮಾನದ ಹಿಂದೆ ಎನ್ನುವುದಕ್ಕಿಂತ ಕಳೆದ ವರ್ಷ ಇದ್ದುದು ಇಂದು ಚಾಲ್ತಿಯಲ್ಲಿ ಇರಲಾರದು. ಇಂದಿನ ವ್ಯವಸ್ಥೆ ಎಷ್ಟು ಬೇಗ ಬೆಳೆದುಕೊಳ್ಳುವುದೋ ಅಷ್ಟೇ ಬೇಗ ಅವಸಾನವನ್ನೂ ಹೊಂದಬಹುದು. ಪ್ರಪಂಚದಾದ್ಯಂತ ಮಿಲಿಯನ್ನುಗಟ್ಟಲೆ ಜನರು ಒಂದಲ್ಲ ಒಂದು ಅಗತ್ಯದ ಅಂಗಳದಲ್ಲಿ ಸ್ಪಂದಿಸುತ್ತಾರೆ ಎನ್ನುವುದು ಬಹಳ ಮುಖ್ಯ, ಆ ಸಂವೇದನೆ ಆಯಾ ಕಾಲದಲ್ಲಿ ಲಭ್ಯವಾಗುವ ತಂತ್ರಜ್ಞಾನವನ್ನು ಅವಲಂಭಿಸಿ ಅದರ ರೂಪವನ್ನು ತಾಳುವುದು ಸಹಜವಾಗುತ್ತದೆ, ಒಂದು ರೀತಿ ನೀರು ತಾನು ಇರುವ ಜಾಡಿಯ ಆಕಾರವನ್ನು ಪಡೆಯುವ ಹಾಗೆ. ಆದರೆ ಈ ಪರಿವರ್ತನೆ, ವಿಷಯಾವಲಂಭನೆ ಮತ್ತು ವೇಗ - ಸಾಧನೆಗಳಿಗೆ ಪರ್ಯಾಯವಾಗಬಾರದಿತ್ತು, ಇಂದು ನೆಟ್ಟ ಗಿಡ ನಾಳೆ ಫಲಕೊಡುವ ನಿರೀಕ್ಷೆ ಯುವ ಜನರಲ್ಲಿ ಬರಬಾರದಾಗಿತ್ತು. ಒಂದು ವಿಷಯವನ್ನು ಕುರಿತು ಗಹನವಾಗಿ ಆಲೋಚಿಸುವಲ್ಲಿ ಅಥವಾ ಒಂದು ಸಾಧನೆಯ ಹಿಂದೆ ಇಂದಿನ ತಂತ್ರಜ್ಞಾನಗಳು ಪೂರಕವಾಗಿ ಕೆಲಸಮಾಡಬೇಕೇ ವಿನಾ ಅವುಗಳು ಒಬ್ಬ ವ್ಯಕ್ತಿಯನ್ನು ವೇಗ ಹಾಗೂ ಬೇಗ ಎಂಬ ಒತ್ತಡಕ್ಕೆ ಮಣಿಸಬಾರದು. "ಕಾಯದೇ ಕೆನೆ ಕಟ್ಟದು" ಎಂಬ ಗಾದೆ ಮಾತಿನಂತೆ ಕೆಲವೊಂದಕ್ಕೆ ಸಮಯಕೊಡಬೇಕಾಗುತ್ತದೆ, ಅದರ ಬದಲಿಗೆ ಮೈಕ್ರೋವೇವ್ ಅಥವಾ ಅದಕ್ಕಿಂತಲೂ ಪ್ರಬಲವಾದ ಹೈ ಸ್ಪೀಡ್ ಅವನ್‌ಗಳಲ್ಲಿ (high speed oven) ಅರ್ಧ ನಿಮಿಷದಲ್ಲಿ ಹಾಲನ್ನು ಕೆನೆ ಕಟ್ಟಿಸಬಹುದಾದ ವಿಧಾನವನ್ನು ಇಂದಿನ ಜನತೆ ಹುಡುಕಿಕೊಂಡರೆ ಅದನ್ನು ತಪ್ಪು ಎನ್ನಲಾಗದು, ಆದರೆ ಹಾಲಿಗೆ ಒದಗಿ ಬಂದ ಹೈ ಸ್ಪೀಡ್ ಅವಕಾಶಗಳು ಎಲ್ಲ ಸಂದರ್ಭಗಳಲ್ಲೂ ನಿಜವಲ್ಲ ಎಂಬುದು ಈ ಲೇಖನದ ಕಳಕಳಿ ಅಷ್ಟೇ.

ಇಂದಿನ ಮಲ್ಟಿ ಟ್ಯಾಸ್ಕಿಂಗ್ ಜನಾಂಗಕ್ಕೆ ಅವರು ಒಂದೇ ಸಮಯದಲ್ಲಿ ಹಲವಾರು ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡು ಕಾರ್ಯ ಪ್ರವೃತ್ತರಾಗುವುದೋ ಅಥವಾ ಅವರ ಕರ್ಮಠತನವೋ ಅವರಿಗೆ ವರವಾಗಿರಲಿ, ಅದರ ಬದಲಿಗೆ ಅಲ್ಲೂ ಇಲ್ಲ, ಇಲ್ಲಿಯೂ ಸಲ್ಲ ಎನ್ನುವಂತೆ ಹಲವು ದೋಣಿಗಳಲ್ಲಿ ಒಟ್ಟೊಟ್ಟಿಗೇ ಪಯಣಿಸುವ ಪ್ರವಾಸಿಯಾಗದಿದ್ದರೆ ಸಾಕು.