ನಮ್ಮೊಳಗಿನ ಬದಲಾವಣೆ ದೊಡ್ಡದು...
’ಇಂಡಿಯಾ ಪ್ರವಾಸ ಹೇಗಿತ್ತು?’ ಅನ್ನೋ ಪ್ರಶ್ನೆಗೆ ’ಅದು ಪ್ರವಾಸವೇ ಅಲ್ಲ!’ ಎಂದು ಉತ್ತರ ಕೊಟ್ಟು ಪ್ರಶ್ನೆ ಕೇಳಿದವರ ಮುಖದ ಮೇಲೆ ಸಹಜವಾಗಿ ಏಳುವ ಆಶ್ಚರ್ಯದ ಅಲೆಗಳನ್ನು ನೋಡೋದಕ್ಕೆ ಒಂದು ರೀತಿ ಖುಷಿ ಅನ್ಸುತ್ತೆ. ನಮ್ಮ ಊರಿಗೆ ನಾವು ಟೈಮ್ ಸಿಕ್ಕಾಗ ಕೊಡೋ ಭೇಟಿಯನ್ನು ಯಾರಾದ್ರೂ ಪ್ರವಾಸ ಅಂತ ಕರೀತಾರೇನು? ಅದು ಯಾವತ್ತಿದ್ದರೂ ಋಣ ಕರ್ಮಗಳಿಗೆ ಅಂಟಿಕೊಂಡಂತ ಒಂದು ಬಂಧನ, ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಯಾವುದೋ ಒಂದು ಹೆಸರಿನಿಂದ ಕರೆಯಲೇ ಬೇಕು ಅಂತಾದರೆ ಅದನ್ನು "ಭೇಟಿ" ಎಂದು ಕರೆಯೋಣ, ಅದು ನನ್ನ ಮಟ್ಟಿಗೆ ಪ್ರವಾಸವಂತೂ ಖಂಡಿತ ಅಲ್ಲ. ಇಲ್ಲಿಂದ ಅಲ್ಲಿಗೆ ಹೋಗಿ ಮತ್ತಿನ್ಯಾವುದಾದರೂ ಯಾತ್ರಾ ಸ್ಥಳಗಳಿಗೋ ಪ್ರೇಕ್ಷಣೀಯ ಸ್ಥಾಣಗಳಿಗೋ ಹೋಗಿ ಬಂದರೆ ಅದಾದರೂ ಪ್ರವಾಸವಾದೀತು, ನಮ್ಮದೇನಿದ್ದರೂ ಏರ್ಪೋರ್ಟಿನಿಂದ ಮನೆ, ಮನೆಯಿಂದ ಏರ್ಪೋರ್ಟ್ ಅನ್ನಬಹುದು ಅಷ್ಟೇ.
’ಸಾಕಪ್ಪಾ ಸಾಕು ಆ ಗುಂಡಿ ರಸ್ತೆಗಳು...’, ’ಸಾಕಪ್ಪಾ ಆ ಟ್ರಾಫಿಕ್ ಜ್ಯಾಮು...’ ಎಂದು ಮೂಗೆಳೆಯುವವರಿಗಂತೂ ನನ್ನ ಹತ್ತಿರ ಸಿದ್ಧ ಉತ್ತರವಿದೆ. ’ಮತ್ತಿನೇನನ್ನು ತಾನೇ ನಿರೀಕ್ಷಿಸಬಲ್ಲಿರಿ? ಬದಲಾದವರು ನೀವು ಹಾಗೂ ನಿಮ್ಮ ನಿಲುವು, ನೀವು ಬದಲಾದ ಮಾತ್ರಕ್ಕೆ ಪ್ರಪಂಚವೇ ಬದಲಾಗಬೇಕೇನು? ನೀವು ಅಮೇರಿಕದವರು ಸ್ವಿಟ್ಜರ್ಲೆಂಡ್ ಹೋಗಿ ಬಂದಾಕ್ಷಣ ಅಲ್ಲಿಯವರ ಹಾಗೆ ಸಮಯ ಪಾಲಿಸುತ್ತೀರೇನು?’ ನಮ್ಮ ದೇಶ ಬಡ ದೇಶವಾಗಿತ್ತು, ಈಗ ನಿಧಾನವಾಗಿ ಅಭಿವೃದ್ಧಿಯ ಹಂತಕ್ಕೆ ಕಾಲಿಡುತ್ತಿದೆ. ನಾವು ಹಾಗೂ ನಮ್ಮ ತತ್ವಗಳು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವವು, ರಾತ್ರೋ ರಾತ್ರಿ ಕಾನೂನನ್ನು ಸೃಷ್ಟಿಸಿ ಅದನ್ನು ಎಲ್ಲರು ನಾಳೆಯಿಂದ ಪಾಲಿಸಿ ಎನ್ನಲು ನಮ್ಮದು ಸರ್ವಾಧಿಕಾರಿ ಸರ್ಕಾರವಂತೂ ಅಲ್ಲ. ರಸ್ತೆಯ ಮೇಲೆ ಉದ್ದಾನುದ್ದಕೂ ಲೇನ್ಗಳನ್ನು ಎಳೆದುಕೊಂಡ ಮಾತ್ರಕ್ಕೆ ಅದನ್ನು ಎಲ್ಲರೂ ಪಾಲಿಸಬೇಕು ಎನ್ನುವ ನಿಯಮವನ್ನು ಎಲ್ಲರೂ ಅನುಕರಿಸಿದ್ದೇ ಆದರೆ ಟ್ರಾಫಿಕ್ ಲೈಟ್ನಿಂದ ಹಿಡಿದು ರಸ್ತೆಯ ಉದ್ದಾನುದ್ದಕ್ಕೂ, ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅವೇ ದೇಶ, ಅವೇ ರಸ್ತೆಗಳು ಆದರೆ ದಿನೇ-ದಿನೇ ಹಿಗ್ಗುತ್ತಿರುವ ಜನಸಂಖ್ಯೆ ಮತ್ತು ಅದರ ಡಿಮ್ಯಾಂಡುಗಳಿಗೆ ಸ್ಪಂದಿಸೋದಕ್ಕೆ ಆ ಹಳೆಯ ಇನ್ಪ್ರಾಸ್ಟ್ರಕ್ಚರ್ರಿನಿಂದ ಹೇಗಾದರೂ ಸಾಧ್ಯವಿದೆ ಹೇಳಿ?
***
ಅಮೇರಿಕದಿಂದ ಭಾರತಕ್ಕೆ ಬಂದು ಲ್ಯಾಂಡ್ ಆಗುವ ವಿಮಾನಗಳು ಹಾಗೂ ಭಾರತವನ್ನು ಬಿಟ್ಟು ಹೊರಡುವ ವಿಮಾನಗಳು ಮಧ್ಯರಾತ್ರಿಯ ನಂತರ ಹಾಗೂ ಬ್ರಾಹ್ಮೀ ಮಹೂರ್ತಕ್ಕೆ ಮುಂಚೆ ಏಕೆ ಬಂದು ಹೋಗುತ್ತವೆ ಎಂದು ಯೋಚಿಸಿದ್ದಕ್ಕೆ ಈ ಸಾರಿ ಉತ್ತರ ಸಿಕ್ಕಿತು. ನಮ್ಮಂತೆ ದೇಶವನ್ನು ಅದೆಷ್ಟೋ ವರ್ಷಗಳ ನಂತರ ಅರಸಿ ಬಂದವರಿಗೆ ಏಕ್ದಂ ಭ್ರಮನಿರಸನವಾಗಬಾರದಲ್ಲ ಅದಕ್ಕೆ. ಉದಾಹರಣೆಗೆ ಚಿಕಾಗೋದಿಂದ ಹೊರಟ ವಿಮಾನ ಸರಿ ಬೆಳಗ್ಗೆ ಒಂಭತ್ತು ಘಂಟೆಗೆ ಬೆಂಗಳೂರನ್ನು ತಲುಪಿತು ಎಂದುಕೊಳ್ಳಿ, ಅಲ್ಲಿನ ಪೀಕ್ ಅವರ್ ನಲ್ಲಿ ನೀವು ಆ ದಿನ ಮನೆ ಸೇರುವಾಗ ಅದೆಷ್ಟು ಹೊತ್ತಾಗುತ್ತೋ ಯಾರು ಬಲ್ಲರು? ನಿಮಗೆ ಎದಿರಾಗಿ ದಿಢೀರನೆ ಉದ್ಭವಿಸೋ ಮುಷ್ಕರ ಮೆರವಣಿಗೆಗಳಿರಬಹುದು, ಯಾರೋ ಸತ್ತರು ಎಂದು ತೂರಿ ಬರುವ ಕಲ್ಲುಗಳಿಗೆ ಆಹುತಿಯಾಗುವ ಗಾಜಿನ ತುಣುಕುಗಳಿರಬಹುದು ಅಥವಾ ಸಾಮಾನ್ಯ ಟ್ರಾಫಿಕ್ಕ್ ಜಾಮೇ ನಿಮ್ಮನ್ನು ಮೊದಲ ದಿನವೇ ಹೈರಾಣಾಗಿಸಿಬಿಡಬಹುದು. ಇಲ್ಲಿ ಬರುವಾಗ ಅದೇನೇನೋ ಕನಸುಗಳನ್ನು ಕಟ್ಟಿಕೊಂಡ ನಮಗೆ ಇಲ್ಲಿ ಬರುವ ಅವಕಾಶ ಅವಸ್ಥೆಗಳೆಲ್ಲ ಒಂದು ರೀತಿಯ ಓಪನ್ ಎಂಡೆಡ್ ಪ್ರಶ್ನೆಗಳ ಥರ, ಅದೇ ಇಲ್ಲಿಂದ ಅಲ್ಲಿಗೆ ಹೋದಾಗ ನಮ್ಮ ನಿರೀಕ್ಷೆ ಮತ್ತು ನಮಗಾಗೂ ನಿರಾಶೆಗಳ ಮೂಲವೇ ಬೇರೆ.
ಪಲಾಯನವಾದ ಅನ್ನೋದು ನಮ್ಮ ಹೆಸರುಗಳಿಗೆ ನಮ್ಮ ಪ್ರತಿಭೆಗೆ ಮಾತ್ರ ಅಂಟಿದ್ದಲ್ಲ, ನಾವು ನಮ್ಮ ಮ್ಯಾನೇಜ್ಮೆಂಟಿನ ಸ್ಥರಗಳಲ್ಲಿ ನಮ್ಮ ಅನುಭವಗಳನ್ನು ವಿಸ್ತರಿಸಿಕೊಂಡ ಹಾಗೆಲ್ಲ ದುತ್ತನೆ ಎದುರಾಗುವ ಸಮಸ್ಯೆಗಳಿಗೆ ಥಟ್ಟನೆ ಉತ್ತರ ಹೇಳುವಲ್ಲಿ ಸೋತು ಹೋಗುತ್ತೇವೇನೋ ಅನ್ನಿಸುತ್ತದೆ. ಎಂಥ ವಾಜ್ಞಿ ರಾಜಕಾರಣಿ ಅಧಿಕಾರಕ್ಕೆ ಬಂದರೂ ಮುಂದೆ ಪಬ್ಲಿಕ್ ಸ್ಟೇಟ್ಮೆಂಟ್ ಕೊಡೋವಾಗ ಪದಗಳ ನಂತರ ಪದಗಳನ್ನು ಹುಷಾರಾಗಿ ಪೋಣಿಸಿ ವಾಕ್ಯಗಳನ್ನು ರಚಿಸುವಂತೆ ಭಾರತದಲ್ಲಿ ಎದಿರಾಗೋ ಸಮಸ್ಯೆಗಳಿಗೆ ಅಮೇರಿಕದಿಂದ ಹೋದೋರು ಸ್ಪಂದಿಸೋದು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಓರಗೆಯವರ ಬ್ಯಾಂಕ್ ಬ್ಯಾಲೆನ್ಸಿಗಿಂತ ನಮ್ಮದು ತುಸು ಹೆಚ್ಚಿರಬಹುದು ಎನ್ನುವಲ್ಲಿ ನಾವೇ ಮುಂದೇ ಹೊರತು ಅಲ್ಲಿಯ ಆಗು ಹೋಗುಗಳಿಗೆ ನಿಜವಾಗಿ ಸ್ಪಂದಿಸೋದಕ್ಕೆ ನಮ್ಮಿಂದ ಸಾಧ್ಯವೇ? ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದು ಸ್ಥಳೀಯ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಅಥವಾ ಕೈಲಾದರೆ ಪ್ರೈವೇಟ್ ನರ್ಸಿಂಗ್ ಹೋಮ್ಗಳಲ್ಲಿ ಟ್ರೀಟ್ಮೆಂಟ್ ಕೊಡಿಸಿ ನೋಡಿ, ಅಲ್ಲಿಯ ಚಲನವಲನ (ಲಾಜಿಸ್ಟಿಕ್ಸ್)ಗಳಿಗೆ ನಮ್ಮಿಂದ ಹೊಂದಿಕೊಳ್ಳೋದಕ್ಕೆ ಇನ್ನೊಂದು ದಶಕವೇ ಬೇಕು ಎನ್ನಿಸುತ್ತೆ ಕೆಲವೊಮ್ಮೆ. ಇಲ್ಲಿಯ ವೇಷವನ್ನು ಕಳಚಿ ಕ್ರಮೇಣ ಅಲ್ಲಿಯವರಾದಂತೆ ನಟಿಸಿದರೂ ನಮ್ಮೊಳಗಿನ ಭಿನ್ನ ಮನ ಸದಾ ಬದಲಾವಣೆಯನ್ನು ನಿರೀಕ್ಷಿಸುತ್ತದೆ, ಆದರೆ ಅಲ್ಲಿಯ ವ್ಯವಸ್ಥೆ ಮನೋ ವೇಗಕ್ಕೆ (ಅಥವಾ ರೋಗಕ್ಕೆ) ಸ್ಪಂದಿಸೋದಾದರೂ ಹೇಗೆ ಸಾಧ್ಯ?
ನಮ್ಮ ಕೈಯಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ - ಒಂದು ಹೊತ್ತು ಉಂಡರೆ ಮತ್ತೊಂದು ಹೊತ್ತು ಊಟದ ಬಗ್ಗೆ ಕೊರಗುವ ನಾಗರಿಕತೆ ಇರುವಾಗ, ನಮ್ಮ ಸಂಪನ್ಮೂಲ ಸ್ತೀಮಿತವಾಗುತ್ತದೆ. ನಾವು ನಿರೀಕ್ಷಿಸುವ ಬದಲಾವಣೆಗಳು ಲಾರ್ಜ್ಸ್ಕೇಲ್ನಲ್ಲಿ ಇಂಪ್ಲಿಮೆಂಟ್ ಮಾಡಲಾಗದ ಪುಸ್ತಕದ ಬದನೆಕಾಯಿಯಾಗುತ್ತದೆ. ದಿನೇ-ದಿನೇ ಉಳ್ಳವರ-ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಾ ಹೋಗುತ್ತಿರುವಾಗ ನಮ್ಮ ಧನಾತ್ಮಕ ಆಲೋಚನೆಗಳು ಮುರಿದು ಹೋದ ಚಿಕ್ಕ ಮರದ ತುಂಡನ್ನು ಅಂಟಿಸೋ ಗೋಂದಾಗುತ್ತದೆಯೇ ಹೊರತು ಅದು ದೊಡ್ಡ ಪ್ರಮಾಣದ ಬಂಧನವಾಗೋದಿಲ್ಲ. ನಾವು ಎಲ್ಲವನ್ನು ಮಾಡಲಾಗದಿದ್ದರೂ ನಮ್ಮ ಮನಸ್ಸಿನಲ್ಲಿರುವ ಕ್ವಾಲಿಟಿಗೆ ತಕ್ಕಂತೆ ಎಲ್ಲರಿಂದ ಕೆಲಸವನ್ನು ನಿರೀಕ್ಷಿಸುವುದು ಇನ್ನೂ ಕಷ್ಟದ ಮಾತೇ. ಬೆಂಗಳೂರಿನಲ್ಲಿ ಮನೆ ಕೆಲಸದವರ ಜೊತೆ ಏಗಿ ಸರಿಯಾಗಿ ಪಾತ್ರೆ ತೊಳೆಸಿಕೊಂಡು ಬಟ್ಟೆ ಒಗೆಸಿಕೊಂಡು ನೆಲವನ್ನು ಸ್ವಚ್ಛವಾಗಿಸಿಕೊಳ್ಳುವುದಕ್ಕೆ ಪೀಪಲ್ ಮ್ಯಾನೇಜ್ಮೆಂಟಿನಲ್ಲಿ ಹೊಸ ಡಿಗ್ರಿ ಬೇಕಾಗುತ್ತದೆ. ಆಳು ಮಾಡಿದ್ದು ಹಾಳು...ಅಂತಹ ಹಾಳು ಕೆಲಸದ ನಡುವೆ ನಮ್ಮ ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವಾಗ ಮೈಕ್ರೋ-ಮಿನಿ ಮ್ಯಾನೇಜುಮೆಂಟುಗಳಿಗೆ ಜೋತು ಬೀಳಬೇಕಾಗುತ್ತದೆ.
***
ಭಾರತಕ್ಕೆ ಹೋಗಿ ಬರೋ ಅನುಭವ ಪ್ರವಾಸವಲ್ಲ, ಅದು ಒಂದು ದರ್ಶನ, ಒಂದು ವಾತಾವರಣದಲ್ಲಿ ಪಕ್ವಗೊಂಡ ಮನಸ್ಸು ಮತ್ತೊಂದು ವಾತಾವರಣದಲ್ಲಿ ಬೆರೆಯುವ ಯೋಗ, ತಾಯ ಮಡಿಲನ್ನು ಸೇರಿ ಹಾಯಾಗಿ ಕಣ್ಮುಚ್ಚಿ ಮಲಗುವ ಮಗುವಿಗೆ ದೊರೆತ ಒಂದು ಅವಕಾಶ. ಸಮಸ್ಯೆಗಳು ಎಲ್ಲಿಲ್ಲ, ಹಾಗಿರುವಾಗ ನಾವು ಹೋದಲೆಲ್ಲ ಸುತ್ತಲಿನ ಕೊಳೆಯನ್ನು ಮಾತ್ರ ನೋಡಿಕೊಂಡು "ಶಿಟ್" ಎಂದು ಮೂಗು ಸಿಂಡರಿಸಿದಾಕ್ಷಣ ಅಲ್ಲಿಯದೇನೂ ಬದಲಾಗೋದಿಲ್ಲ. ಬದಲಾವಣೆ ಎಲ್ಲ ಕಡೆಗಿದೆ, ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಬದಲಾವಣೆಗೊಳಪಟ್ಟ ನಮ್ಮ ಮನಸ್ಸು ಎಲ್ಲ ಕಡೆ ಅದನ್ನೇ ನಿರೀಕ್ಷಿಸಿದರೆ ಅದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ನಮ್ಮ ಆಫೀಸಿನಿಂದ ಬಿಸಿನೆಸ್ ಗೋಸ್ಕರ ಹೋಗುವವರಿಗೆ ನಾನು ಹೇಳೋದು ಇಷ್ಟೇ: ’ಅಲ್ಲಿ ಬೇಕಾದಷ್ಟು ಸಂಸ್ಕೃತಿಗಳಿವೆ, ಒಂದು ಬಿಲಿಯನ್ನ್ಗಿಂತಲೂ ಹೆಚ್ಚು ಜನರಿದ್ದಾರೆ, ದೊಡ್ಡ ಸಾಗರವನ್ನು ನೋಡೋ ಹಾಗೆ ನೋಡಿ, ಅದನ್ನು ಬಿಟ್ಟು ಆಗಾಗ್ಗೆ ಬರುವ ಅಲೆಗಳಿಗೆ ತಲೆಕೆಡಿಸಿಕೊಳ್ಳಬೇಡಿ!"
3 comments:
ತುಂಬಾ ದಿನ ಆದ ಮೇಲೆ ಬರಿತಾಯಿದೀರಾ... ಲೇಖನ ಚೆನ್ನಾಗಿದೆ ಸತೀಶ್..
ನಮಸ್ಕಾರ,
ಕಲ್ಪನೆಗಳ ನವಿರು ಸಮರ್ಪಕವಾಗಿ ಚಿತ್ರಿತವಾಗಿದೆ. ಶೈಲಿ ಚನ್ನಾಗಿದೆ all the best!
- ಬದರಿನಾಥ ಪಲವಳ್ಳಿ
Pl. visit my Kannada Poems blog:
www.badari-poems.blogspot.com
nice one.......
Thanks
RAJANAL
Post a Comment