ಗೆಲುವಾಗೆಲೆ ಅನಿವಾಸಿ ಮನ…
ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ. ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.
ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ. ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ. ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.
ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ. ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್ನಲ್ಲೇ ಇರುತ್ತವೆ. ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ. ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.
ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ. ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ. ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.
****
ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ. ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು? ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ ಬೇಕಾದರೂ ತಗುಲಿಕೊಳ್ಳಬಹುದು ತಾನೆ? ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ? ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್
ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ. ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು. ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ. ಸ್ಥಳೀಯ ಡಿ.ಎಮ್.ವಿ. ಲೈನ್ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ. ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ. ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.
ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್ಶಿಪ್ನವರ್ ಮ್ಯಾಂಡೇಟರಿ ಗಾರ್ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ. ಎಲ್ಲರೂ ಕಸವನ್ನು ತೆಗೆದು ಕನ್ಸರ್ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ. ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ. ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.
ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!
6 comments:
ಸತೀಶ,
ಹೌದೌದು. ನೀವೇಳೋದೆಲ್ಲಾ ನೂರಕ್ಕೆ ನೂರು ಖರೆ. ಕನ್ನಡದಲ್ಲಿ ನೀವು ಬರೆದಿರುವ ಈ ಪುಟ್ಟ ಬರಹ, ಇಲ್ಲಿನ ಗಾರ್ಡಿಯನ್ನಿನಲ್ಲಿನ ಅಂಕಣಕ್ಕಿಂತ ಅಪ್ಯಾಯಮಾನ!
- ಕೇಶವ
ಪ್ರಿಯ ಸತೀಶ್ ನಿಮ್ಮ ಮಾತು ನಿಜಕ್ಕೂ ಸತ್ಯ, ಈ ರೀತಿಯ ಭಾಷಾ ಪೀಕಲಾಟವನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಕೆಲಸಮಾಡುವಾಗ ಅನುಭವಿಸಿದ್ದೇನೆ...
www.bidarakote.blogspot.com
ಪ್ರಿಯ ಸತೀಶ್ ನಿಮ್ಮ ಮಾತು ನಿಜಕ್ಕೂ ಸತ್ಯ, ಈ ರೀತಿಯ ಭಾಷಾ ಪೀಕಲಾಟವನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಕೆಲಸಮಾಡುವಾಗ ಅನುಭವಿಸಿದ್ದೇನೆ...
www.bidarakote.blogspot.com
ಉಮಾಶಂಕರ ಅವರೇ,
ನಿಮಗ್ಯಾತಕ್ಕೇ ಈ ಅನಿವಾಸಿತನ, ಬಂದುಬಿಡಿ ಅಮೇರಿಕಕ್ಕೆ :-)
ಕೇಶವ್ ಅವರೇ,
ಇದರ ಮುಂದಿನ ಕಂತನ್ನು ಓದಲು ಮರೀಬೇಡಿ (ಇನ್ನೂ ಬರೆದು ಪಬ್ಲಿಷ್ ಮಾಡಿಲ್ಲ, ಆ ಮಾತು ಬೇರೆ)...ಗಾರ್ಡಿಯನ್ ಕಂಪ್ಯಾರಿಸನ್ ತುಂಬಾ ದೊಡ್ಡ ಮಾತು, ಧನ್ಯವಾದ.
ಹಲೋ ಸರ್, ನನಗೇನೋ ಅಮೇರಿಕಾ ನೋಡುವ ಆಸೆ ಆದ್ರೆನ್ ಮಾಡೋದು ಕರ್ನಾಟಕ ಬಿಟ್ಟು ಬಾರೋ ಮನ್ಸಿಲ್ವಲ್ಲ ಸರ್
Post a Comment