Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

2 comments:

sunaath said...

ಸತೀಶ ಕುಮಾರ,
ನಮ್ಮ ಬಾಲ್ಯದ ಆಟಿಕೆಗಳ ಬಗೆಗೆ ನಮಗೆ ಮೋಹವಿರುವದು ಸಹಜವಾದದ್ದೇ! ನನಗೂ ಆ ಮೂರ್ಕಾಲಿಯ ಮೇಲೆ ಮೋಹ!

ವಿ.ರಾ.ಹೆ. said...

ಮೂರುಗಾಲಿ ಆಟಿಕೆ ನಮ್ಮನೇಲಿ ಇನ್ನೂ ಇದೆ ಸಾರ್ ಅಟ್ಟದ ಮೇಲೆ, ಗೆದ್ದಲು ಹಿಡಿಯೋಕೆ ಬಿಟ್ಟಿಲ್ಲ! :)