Tuesday, March 17, 2009

ಅವೇ ಆಲೋಚನೆಗಳು...

ಆಲೋಚನೆಗಳೇ ಹಾಗೆ ನಿಲ್ಲೋದೇ ಇಲ್ಲ, ಅವುಗಳ ಒರತೆ ಬತ್ತೋದಂತೂ ಖಂಡಿತ ಇಲ್ಲ. ನೀವು ಜನನಿಬಿಡ ಮರಳುಗಾಡಿನಲ್ಲೇ ಇರಲಿ ಅಥವಾ ಯಾವ ಕಾಡಿನ ಯಾವ ಮೂಲೆಯಲ್ಲಿದ್ದರೂ ಆಲೋಚನೆಗಳ ಸರಣಿ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ನಾನು ಇತ್ತೀಚೆಗೆ ಖರೀದಿ ಮಾಡಿದ ಉಗುರಿನಷ್ಟು ದೊಡ್ಡ ಸೆಮಿಕಂಡಕ್ಟರ್ ಸ್ಟೋರೇಜ್ ಡಿವೈಸಿನಲ್ಲಿ ಹದಿನಾರು ಗಿಗಾಬೈಟುಗಳಷ್ಟು ಮಾಹಿತಿಯನ್ನು ಸ್ಟೋರ್ ಮಾಡಬಹುದು ಎನ್ನುವುದು ನನ್ನಂತಹವನ ಕಣ್ಣಿಗೆ ದೊಡ್ಡ ಅಚೀವ್‌ಮೆಂಟ್ ಆಗಿ ಕಾಣಬಹುದು. ಹಾಗೆ ಕಂಡ ಮರುಘಳಿಗೆಯಲ್ಲಿಯೇ ಈ ಸೃಷ್ಟಿಯ ಸ್ಟೋರೇಜಿನ ಮುಂದೆ ಇವೆಲ್ಲಾ ಯಾವ ಲೆಕ್ಕ ಎನ್ನಿಸಲೂ ಬಹುದು. ನಮ್ಮ ಮಿದುಳು ಸಂಸ್ಕರಿಸಿ, ಪೋಷಿಸುವ ಅದೆಷ್ಟೋ ಆಡಿಯೋ ವಿಡಿಯೋ, ಡೇಟಾ ಮತ್ತಿತರ ಅಂಶಗಳನ್ನೆಲ್ಲ ಪೋಣಿಸಿ ಗಿಗಾಬೈಟುಗಳಲ್ಲಿ ಎಣಿಸಿದ್ದೇ ಆದರೆ ಇಂದಿನ ಟೆರಾಬೈಟ್ ಮಾನದಂಡವೂ ಅದರ ಮುಂದೆ ಸೆಪ್ಪೆ ಅನಿಸೋದಿಲ್ಲವೇ? ಈ ಸೃಷ್ಟಿಯ ಅದ್ಯಾವ ತಂತ್ರಜ್ಞಾನ ಅದು ಹೇಗೆ ನರಮಂಡಲದ ವ್ಯೂಹವಾಗಿ ಬೆಳೆದುಬಂದಿದ್ದಿರಬಹುದು ಎಂದು ಸೋಜಿಗೊಂಡಿದ್ದೇನೆ.

ಇಂತಹ ಸೋಜಿಗಗಳಿಂದ ದಿಢೀರ್ ಮತ್ತೊಂದು ಆಲೋಚನೆ: ನಮ್ಮಲ್ಲಿ ನಿಕ್ ನೇಮ್ ಗಳನ್ನು ಬಳಸುವ ಬಗ್ಗೆ. ಭಾರತದಲ್ಲಿ ’ಕೃಷ್ಣಮೂರ್ತಿ’ ಎನ್ನುವ ಅಫಿಷಿಯಲ್ ನೇಮ್ ಮನೆಯಲ್ಲಿ ’ಕಿಟ್ಟಿ’ ಆಗಿ ರೂಪಗೊಳ್ಳಬಹುದು, ಅದೇ ಅಮೇರಿಕದಲ್ಲಿ ’ವಿಲಿಯಮ್’ ಎನ್ನುವ ಅಫಿಷಿಯಲ್ ನೇಮ್ ’ಬಿಲ್’ ಉಪಯೋಗಕ್ಕೊಳಗಾಗಬಹುದು. ಇದರಲ್ಲಿ ಒಂದು ವ್ಯತ್ಯಾಸವಂತೂ ಇದೆ - ನಮ್ಮ ನಿಕ್ ನೇಮ್‌ಗಳು ಖಾಸಗಿ ಆದರೆ ಇಲ್ಲಿಯವರ ನಿಕ್ ನೇಮ್‌ಗಳು ಎಲ್ಲರ ಬಳಕೆಗೂ ಸಿಗುತ್ತವೆ, ಅದು ಎಷ್ಟರ ಮಟ್ಟಿಗೆ ಪ್ರಭಾವಿ ಎಂದರೆ ಪ್ರೆಸಿಡೆಂಟುಗಳಿಂದ ಹಿಡಿದು ಸಾಮಾನ್ಯ ’ಜೋ’ ವರೆಗೂ ಅವರ ನಿಕ್‌ನೇಮ್ ಗಳೇ ಮುಖ್ಯನಾಮ. ಅಫಿಷಿಯಲ್ ನೇಮ್ ಏನಿದ್ದರೂ ಪುಸ್ತಕಕ್ಕೆ ಮಾತ್ರ.

ಈ ಆಲೋಚನೆಯಿಂದ ಹೊರಬರುವ ಹೊತ್ತಿಗೆ, ಭಾರತಕ್ಕೆ ಒಂದು ಫೋನು ಮಾಡಬಾರದೇಕೆ ಎನ್ನಿಸಿ, ತಕ್ಷಣ ಸೆಲ್ ಫೋನಿನಲ್ಲಿ ಕುಕ್ಕ ತೊಡಗಿದೆ. ೮೦೦ ನಂಬರ್ ಅನ್ನು ಹೊಡೆದು ಇನ್ನೊಂದೆರೆಡು ಕ್ಷಣಗಳಲ್ಲಿ ಎಲೆಕ್ಟ್ರಾನಿಕ್ ಚೆಲುವೆಯ (ಧ್ವನಿ) ಕೃಪೆಯಿಂದ ನನ್ನ ಅಣ್ಣನ ಮೊಬೈಲ್ ನಂಬರನ್ನು ಒತ್ತತೊಡಗಿದೆ. ಎರಡು ರಿಂಗುಗಳ ನಂತರ ಆತ ಫೋನ್ ಎತ್ತಿಕೊಂಡ, ಉಭಯ ಕುಶಲೋಪರಿಯ ಜೊತೆಗೆ ಎಲ್ಲಿದ್ದೀಯಾ? ಆಫೀಸಿಗೆ ಹೊರಟಿದ್ದೀಯಾ? ಏನು ತಿಂಡಿ? ಎಂದು ಕೇಳುವ ಅವನ ಪ್ರಶ್ನೆಗಳಿಗೆ ಡ್ರೈವ್ ಮಾಡುತ್ತಿದ್ದೇನೆ, ಇನ್ನೇನು ಆಫೀಸು ಹತ್ತಿರ ಬಂತು. ’ತಿಂಡಿ ಮಾಮೂಲಿ - ಅದೇ ಬ್ರೆಡ್ಡು, ಬಾಳೆಹಣ್ಣು, ಜ್ಯೂಸ್, ಕಾಫಿ’, ಎಂದೆ. ನಾನು ಹೀಗೆ ಹೇಳಿದಾಗಲೆಲ್ಲ ಆ ಕಡೆಯಿಂದ ಮಾಮೂಲಿ ಮೌನ. ಮತ್ತೆ ನಾನೇ ಅದೂ-ಇದೂ ಕೇಳಿದಂತೆ ಸಂಭಾಷಣೆ ವಿಷಯನ್ನು ಆಧರಿಸಿ ಎರಡು ನಿಮಿಷದಿಂದ ಹಿಡಿದು ಇಪ್ಪತ್ತು ನಿಮಿಷದ ವರೆಗೂ ನಡೆಯುತ್ತೆ.

ನಾನೆಂದೆ, ’ಹೌದು, ನೀನು ಇತ್ತೀಚೆಗೆ ಅಡುಗೆ ಮಾಡಿದ್ದು ಯಾವತ್ತು?’
ಅವನೆಂದ, ’ನಾನು ಆಡುಗೆ ಮಾಡಿ ಅದ್ಯಾವ ಕಾಲವೋ ಆಗಿದೆ.’
’ನೀನು, ಮನೆಯನ್ನು ಸ್ವಚ್ಛ ಮಾಡಲು ಸಹಾಯ ಮಾಡ್ತೀಯೋ, ಇಲ್ವೋ?’
’ಖಂಡಿತ, ಇಲ್ಲ - ನಾನು ಶಾಲೆಗೆ ಹೋಗಿ ಬರೋ ಹೊತ್ತಿಗೆ ಸಾಕಾಗಿರುತ್ತೆ, ಮತ್ತೇನೂ ಮಾಡೋದಿಲ್ಲ’

ಹೀಗೆ ನಾನು ಹುಡುಕಿ-ಹುಡುಕಿ ಕೇಳಿದ ಪ್ರಶ್ನೆಗಳು ನಾನು ಇಲ್ಲಿ ಆಗಾಗ್ಗೆ (ನಿತ್ಯ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ) ಮಾಡೋ ಕೆಲಸಗಳನ್ನು ಕುರಿತವಾಗಿದ್ದವು (ಉದಾಹರಣೆಗೆ ಬಟ್ಟೆ ಒಗೆದು ಒಣಗಿಸಿ ಮಡಚಿಡುವುದು). ಆದರೆ ಅವನು ಮನೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಒಂದೇ ನಮ್ಮ ಅತ್ತಿಗೆಯ ಹೆಸರನ್ನೋ ಅಥವಾ ಆಳುಗಳು ಮಾಡುವ ಕೆಲಸವೆಂದೋ ಹೇಳುತ್ತಿದ್ದ.

ಅವನಿಗೆ ’ಬೈ’ ಹೇಳಿ ಫೋನ್ ಇಟ್ಟ ಹೊತ್ತಿಗೆಲ್ಲ ಕುಡಿಯುತ್ತಿದ್ದ ಸುಡುಸುಡು ಕಾಫಿ ಇತ್ತೀಚೆಗಷ್ಟೇ ಎಲೆಕ್ಷನ್ನು ಗೆದ್ದು ಅಸೆಂಬ್ಲಿ ಸೇರಿದ ರೆಪ್ರೆಸೆಂಟಿವ್‌ನ ಥರ ನರಮಂಡಲದ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ಕೆಲಸವನ್ನು ಆರಂಭಿಸಿತ್ತು. ಥೂ, ಈ ಅಮೇರಿಕದಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಂಡು ಜೀವಿಸೋದರಲ್ಲೇ ಕಾಲ ಕಳೆದು ಹೋಗುತ್ತೆ. ಎಷ್ಟು ದುಡ್ಡಾಗಲಿ ಏನು ಕೆಲಸವಾಗಲಿ ಇದ್ದರೆ ಏನು ಬಂತು - ದಿನಾ ನಮ್ಮ ದುಗುಡ ಇದ್ದದ್ದೇ. ಬನೀನ್ ಎಲ್ಲಿದೆ? ಪ್ಯಾಂಟಿಗೆ ಮ್ಯಾಚ್ ಆಗುವ ಕಾಲುಚೀಲ ಸಿಗುತ್ತಿಲ್ಲ (ಬೆಳಗ್ಗೆ ಅದೂ ಚಿಮುಚಿಮು ಬೆಳಕಿನಲ್ಲಿ)! ಕಾಫಿ ಮಾಡಿಕೋ ಬೇಕು, ತಿಂಡಿಗೆ ಅವೇ ಬ್ರೆಡ್ಡು ಸ್ಲೈಸುಗಳು, ಅವೇ ಜ್ಯೂಸಿನ ಬಾಟಲುಗಳು. ವಾರಾಂತ್ಯದಲ್ಲಿ ಅಪರೂಪಕ್ಕೆ ಬ್ರೇಕ್‌ಫಾಸ್ಟ್‌ಗೆಂದು ತಿನ್ನುವ ದೋಸೆ-ಇಡ್ಲಿಗಳು ಹೆಚ್ಚಾಗಿ ಮಧ್ಯಾಹ್ನ ಲಂಚ್ ಸೇರದ ಅಥವಾ ರುಚಿಸದ ಅನುಭವ. ಮಿಸ್ಟರ್ ಕಾಫಿಯಿಂದ ಇಳಿದ ಲಾರ್ಜ್ ಕಾಫಿಯ ಗುಲಾಮಗಿರಿಯನ್ನು ಒಪ್ಪಿಕೊಂಡ ನರಮಂಡಲ ಚಿಕ್ಕ ಲೋಟಾದಲ್ಲಿ ಕುಡಿಯುವ ಕಾಫಿಯನ್ನು ’ಚಿಕ್ಕ ಸೈಜ್’ ಎಂದು ಪರಿಗಣಿಸುವ ಅನುಭೂತಿ. ಕಾಫಿಯ ಸ್ಟಿಮ್ಯುಲೇಶನ್ನಿಂದ ಹುಟ್ಟಿ ಕಾಫಿಯ ವಿರುದ್ಧವೇ ತಿರುಗುವ ಆಲೋಚನೆಗಳ ಪಾಪಪ್ರಜ್ಞೆ!

ಇಷ್ಟು ಹೊತ್ತಿಗೆ ಆಫೀಸಿನ ವಾತಾವರಣ ಹತ್ತಿರ ಬರುತ್ತಿದ್ದ ಹಾಗೆ - Oh! there is a 8 am meeting today! ಎನ್ನುವ ಅಮೇರಿಕನ್ ಉದ್ಗಾರ ನನ್ನಲ್ಲಿಯ ಕನ್ನಡತನವನ್ನು ಇನ್ನು ಹತ್ತು ಘಂಟೆಗಳ ಮಟ್ಟಿಗೆ ಅದುಮಿಕೊಳ್ಳುವ ಹಾಗೆ ಸೆಡ್ಡು ಹೊಡೆಯುವ ಅಟ್ಟಹಾಸದ ಆಲೋಚನೆ. ಆಫೀಸ್ ಬಂದೇ ಬಿಡ್ತು, ಇಲ್ಲ ನಾನೇ ಅದರ ಹತ್ತಿರ ಹೋಗ್ತಾ ಇದ್ದೇನೆ. ದೂರದ ಇಂಡಿಯಾಕ್ಕೆ ಕಾಲ್ ಮಾಡಿ ಸಂಭಾಷಣೆಯಿಂದ ಸೋತ ಸೆಲ್ ಫೋನ್ ಪಕ್ಕದಲ್ಲಿ ಬಿದ್ದುಕೊಂಡಿದೆ, ಅದರ ಗಂಟಲನ್ನೂ ಹಿಚುಕಿ (ವೈಬ್ರೇಷನ್ನ್ ಮೋಡ್‌ಗೆ ಹಾಕಿ) ಕೋಟಿನ ಜೇಬಿನಲ್ಲಿ ತುರುಕಿ ಲಂಚ್ ಪ್ಯಾಕ್ (ಅದೇ ಅನ್ನ, ಸಾರು, ಮೊಸರು, ಕೆಲವೊಮ್ಮೆ ಪಲ್ಯ) ಅನ್ನು ಕೈಯಲ್ಲಿ ಹಿಡಿದುಕೊಂಡು ಲಗುಬಗೆಯಿಂದ (ಇನ್ನೇನು ಆಫೀಸು ಎಲ್ಲಿಯಾದರೂ ಓಡಿ ಹೋದೀತೋ ಎನ್ನುವಂತೆ) ಹೆಜ್ಜೆ ಹಾಕತೊಡಗುತ್ತೇನೆ.

ಆಲೋಚನೆಗಳು ಇನ್ನೂ ಮುಂದುವರೆಯುತ್ತಲೇ ಇವೆ...

5 comments:

Keshav.Kulkarni said...

Satish,

Well written. Keep it up. You are the telling every "anivaasi's" dilemma and thoughts.

By the way, are you on twitter?

- Keshav (www.kannada-nudi.blogspot.com)

sunaath said...

ಸತೀಶ,
Every cloud has a silver line.
ಬಹುಶ: ನಿಮ್ಮ ಕಣ್ಣಿಗೆ ಆ ಬೆಳ್ಳಿಗೆರೆ ಬಿದ್ದಿಲ್ಲ!

Satish said...

ಕೇಶವ್,
’ಟ್ವಿಟರ್’ನಲ್ಲಿ ಅಕೌಂಟ್ ತೆರೆದ ಹಾಗೆ ನೆನಪು, ನೋಡುತ್ತೇನೆ. ನಾನು ಇತ್ತೀಚೆಗೆ ಈ ಆನ್‌ಲೈನ್ ಸಮೂಹಗಳ ಜೊತೆ ಕೀಪ್ ಮಾಡಲು ಹೆಣಗುತ್ತಿರುವವರಲ್ಲಿ ಒಬ್ಬ!

ಸುನಾಥ್,
ತಲೆಯಲ್ಲಿ ಬೆಳ್ಳಿ ಕೂದಲು ಬಂದರೂ ಇನ್ನೂ ಕಣ್ಣಿಗೆ ಬೆಳ್ಳಿ ಗೆರೆ ಬಿದ್ದಿಲ್ಲವೆಂದರೆ?! :-)

Pramod said...

ಓದುತ್ತಾ ಹೋದ ಹಾಗೆ ಇ೦ತಹ ಯೋಚನೆಗಳು ನನ್ನ ತಲೆಯೊಳಗೂ ಬರಲಿಕೆ ಶುರುವಾಗ ತೊಡಗಿದವು..ಮನಸ್ಸೆ೦ಬ ಮರ್ಕಟ..ಬೆಳಕಿನ ವೇಗಕ್ಕಿ೦ತಲೂ ಅಪರಿಮಿತ ವೇಗದಲ್ಲಿ ಓಡುತ್ತಾ ಆಲೋಚಣೆಗಳೇ ಕಾಣೆಯಾಗುತ್ತವೆ..ಮಸ್ತ್ ಲೇಖನ

Satish said...

ಪ್ರಮೋದ್,
ಡ್ರೈವ್ ಮಾಡ್ತಾ ಇದ್ರೆ ಹುಷಾರಾಗಿರಿ, ಬೆಳಗಿಂತಲೂ ವೇಗವಾಗಿ ಓಡೋ ಮನಸ್ಸು ರಸ್ತೆ ಮೇಲೆ ವೇಗವಾಗಿ ಕಾರನ್ನೇನಾದ್ರೂ ಓಡಿಸಿದ್ರೆ ಮಾಮಾ ರೆಡಾರ್‍ ಇಟ್ಟುಕೊಂಡು ನಿಮ್ಮನ್ನು ಗುರುತಿಸಿಬಿಟ್ಟಾನು :-)