ಹೊಸವರ್ಷ ಹೊಸತನ್ನು ತರಲಿ!
ಎಲ್ಲಾ ಇಂಡೆಕ್ಸುಗಳೂ ಮಾರ್ಕೆಟ್ ಇಂಡಿಕೇಟರುಗಳು ಇಳಿಮುಖ ಹಿಡಿಯುತ್ತಿದ್ದಂತೆ ದಿನಕ್ಕೊಮ್ಮೆ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ನಮ್ಮ ನಮ್ಮ ಪೊಸಿಷನ್ನುಗಳನ್ನು ಪ್ರಶ್ನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯವಾಗಲಾರದು. ಸೆಕ್ಯುರಿಟೀಸ್ಗಳ ಮೇಜರ್ ಇಂಡಿಕೇಟರುಗಳು ಅಮೇರಿಕದಲ್ಲಿ ಹನ್ನೆರಡು ಹದಿಮೂರು ವರ್ಷದ ಕೆಳಗಿನ ಮಟ್ಟಕ್ಕೆ ಕುಸಿದಿರುವಾಗ ಈ ಹನ್ನೆರಡು ವರ್ಷಗಳಿಂದ ನಾವಿಲ್ಲಿ ದುಡಿದು ಉಳಿಸಿ ಬೆಳೆಸಿದ್ದು ಎಲ್ಲವೂ ಮರೀಚಿಕೆಯಂತಾಗಿ ಹೋಗಿದೆ ಅನ್ನೋದು ನನ್ನ ತಲೆಮಾರಿನವರ ತಳಮಳ. ಹೆಚ್ಚಿನ ಎಕ್ಸ್ಪರ್ಟ್ಗಳು ಹೇಳೋ ಹಾಗೆ ನಿಮ್ಮ ಎಮರ್ಜನ್ಸಿ ಫಂಡ್ ಅನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಪೊಸಿಷನ್ ಹೀಗೇ ಇರಲಿ, ಇವತ್ತಲ್ಲ ಮುಂದೆ ಮಾರ್ಕೆಟ್ ಮೇಲೆ ಬಂದೇ ಬರುತ್ತದೆ ಎನ್ನುವುದೆಲ್ಲ ಸುಳ್ಳಿನ ಪ್ರಣಾಳಿಕೆಗಳಾಗಿ ಕಂಡುಬರುತ್ತಿವೆ.
ಇಲ್ಲಿ ನಮಗೆ ನಾವೇ ದಿಕ್ಕು ದೆಸೆಗಳಾಗಿ ಬದುಕುತ್ತಿರುವ ಅನಿವಾಸಿಗಳಿಗೆ ಈ ಏರಿಳಿತದಿಂದ ದೊಡ್ಡ ಹೊಡೆತ ಬಿದ್ದೇ ಬೀಳುತ್ತದೆ. ನಾವು ಇರುವ ರೆಸಿಡೆನ್ಸ್ ಅನ್ನು ಹೊರತುಪಡಿಸಿ ಇರುವುದೆಲ್ಲವೂ ನಮ್ಮ ನೆಟ್ವರ್ತ್ನಲ್ಲಿ ಸೇರಿಕೊಳ್ಳುವ ಅಸ್ಸೆಟ್ ಎಂದು ಪರಿಗಣಿಸಿಕೊಂಡರೆ ಎಲ್ಲ ಕಡೆಯೂ ಹೊಡೆತವೆ. ರಿಟೈರ್ಮೆಂಟ್ ಉಳಿತಾಯದಿಂದ ಹಿಡಿದು ಇನ್ವೆಸ್ಟ್ಮೆಂಟಿನವರೆಗೆ ನಮ್ಮದು ಎನ್ನುವ ಎಲ್ಲವೂ ಕುಸಿದು ಹೋದ ಹಾಗಿನ ಅನುಭವ ಒಂದು ರೀತಿ ಸಮುದ್ರದ ತೆರೆಗಳು ನಮ್ಮ ಕಾಲಿನ ಕೆಳಗಿನ ಮರಳನ್ನು ಸಡಿಲಗೊಳಿಸುತ್ತಾ ಕ್ರಮೇಣ ನೀರಿನಲ್ಲಿ ಹೂತುಹೋಗುವ ಹಾಗೆ.
***
ಈ ಇಳಿತ ಎಲ್ಲರಿಗೂ ಆಗುತ್ತಿರುವುದೇ ಆದ್ದರಿಂದ ಅದರ ಬಗ್ಗೆ ಹಾಡಿದ್ದೇ ಹಾಡಿದಲ್ಲಿ ಏನೂ ಪ್ರಯೋಜನವಂತೂ ಇಲ್ಲ. ಇನ್ನು ಮುಂದೆ ಹೇಗೆ ಎಂದು ಏನಾದರೂ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟರೂ ಅವುಗಳು ಹೆದರಿಸುವುದು ಸಾಮಾನ್ಯ. ಇನ್ನು ಈ ಮಾರ್ಚ್ ತಿಂಗಳು ಕಳೆಯುತ್ತಿದ್ದ ಹಾಗೆ ಏಪ್ರಿಲ್ ಮೊದಲ ದಿನಗಳಲ್ಲಿ ಪ್ರಥಮ ಕ್ವಾರ್ಟರ್ ನಂಬರುಗಳು ಎಲ್ಲ ಕಡೆಯಿಂದ ಬರತೊಡಗಿ ಮತ್ತೆ ಮಾರುಕಟ್ಟೆ ಕುಸಿಯುವಂತೆ ಆದರೂ ಆಗಬಹುದು, ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಕ್ವಾರ್ಟರ್ ನಂತರ ಕಂಪನಿಗಳು ಕಡಿಮೆ ಮಾಡುವ ಎಕ್ಸ್ಪೆನ್ಸ್ ನಿಂದಾಗಿ ಜನರ ಕೆಲಸ ಹೋಗುವ ಸಾಧ್ಯತೆಯೂ ಹೆಚ್ಚು. ನಮ್ಮ ಟೀಮುಗಳಲ್ಲಂತೂ ವರ್ಷದೆಲ್ಲದ ಲೆಕ್ಕವನ್ನು ಇನ್ನೊಂದೆರಡು ವಾರಗಳಲ್ಲಿ ಮುಗಿಸಿ ಕೊನೆಗೆ ಅದರಲ್ಲಿ ಮೇಲಿನವರ ಆದೇಶದಂತೆ ಕಡಿತಗೊಳಿಸುತ್ತಾ ಬರುವುದು ಪದ್ಧತಿ, ಅದಕ್ಕೆ ಈ ವರ್ಷ ಭಿನ್ನವೇನೂ ಆಗೋದಿಲ್ಲ.
ಈ ಕೆಟ್ಟ ನ್ಯೂಸ್/ವಿಚಾರಗಳ ಸಂಘವೇ ಬೇಡ ಎಂದು ರೆಡಿಯೋ/ಇಂಟರ್ನೆಟ್ ಮೊದಲಾದವನ್ನು ಮುಚ್ಚಿ ಇಟ್ಟರೂ ಒಂದಲ್ಲ ಒಂದು ರೀತಿಯಿಂದ ಕೆಟ್ಟ ವಿಚಾರಗಳು ಮಿದುಳನ್ನು ಹೊಕ್ಕೇ ತೀರುತ್ತವೆ ಎಂದು ಪ್ರತಿಜ್ಞೆ ಮಾಡಿದವರ ಹಾಗೆ ಮುತ್ತಿಕೊಳ್ಳುತ್ತವೆ. ಈಗಾಗಲೇ ಇರುವ ಸ್ಟ್ರೆಸ್ ಕಡಿಮೆ ಎನ್ನುವ ಹಾಗೆ ಇನ್ನೂ ಏನೇನೋ ಕೆಟ್ಟ ಆಲೋಚನೆಗಳನ್ನು ವಿಜೃಂಬಿಸಿ ಬರೆಯುವವರ ವರದಿಗಳೂ ಸಿಗತೊಡಗುತ್ತವೆ. ಹೇಗಾದರೂ ಮಾಡಿ ಕೆಟ್ಟ ವಿಚಾರಗಳು ಯಾವುವೂ ನಮ್ಮನ್ನು ಹಿಂಸಿಸದಿರುವಂತೆ ಮಾಡುವುದು ಅಸಾಧ್ಯವೆನಿಸತೊಡಗುತ್ತದೆ. ಅವೇ ಹಳಸಲು ಅಂಕಿ-ಅಂಶಗಳು, ಅವೇ ವಿಚಾರಗಳು, ಎಲ್ಲ ಕಡೆ ಕೋಲಾಹಲ -- ಇಷ್ಟೇ.
ಕೊರೆಯುವ ಕೆಟ್ಟ ಛಳಿಯ ಮಾರನೇ ದಿನ ಬೆಚ್ಚಗಿನ ಬಿಸಿಲಿನ ಹಾಗೆ ಹೊಸ ವರ್ಷದ ದಿನಗಳಾದರೂ ಶುಭವನ್ನು ತರಲಿ, ಮುಂದಿನ ಯುಗಾದಿ ಹೊಸ ಸಂವತ್ಸರಗಳು ಹೊಸತನ್ನು ಹಾರೈಸಲಿ!
3 comments:
ಸತೀಶ,
If winter comes can spring be far behind?(-Shelly)
ಸುನಾಥ್,
ಈ ವಾರದ ಕೊನೆಯಲ್ಲಿ ಇಲ್ಲಿ ಸ್ಪ್ರಿಂಗ್ ಬರುತ್ತಂತೆ, ಕಾದುಕೊಂಡಿದ್ದೇನೆ ಹದ್ದಿನ ಹಾಗೆ!
Post a Comment