Tuesday, February 17, 2009

ನಾನು ಮತ್ತು ನನ್ನ ದೇವರುಗಳು - ಭಾಗ ೧

ಶಾಲಾ ಕಾಲೇಜು ದಿನಗಳಲ್ಲಿ ದೇವರನ್ನು ಕುರಿತು ಅದೆಷ್ಟೋ ವಾದ-ವಿವಾದಗಳನ್ನು ನಡೆಸಿಕೊಂಡು ಬಂದು, ’ದೇವಸ್ಥಾನಕ್ಕೆ ಏಕೆ ಹೋಗಬೇಕು?’, ’ದೇವರೆಲ್ಲಿದ್ದಾನೆ?’ ಎನ್ನುವ ಅರ್ಥ ಕೊಡುವ ಇನ್ನೂ ಹಲವಾರು ಪ್ರಶ್ನೆಗಳಿಗೆ ನಮ್ಮದೇ ಆದ ಉತ್ತರಗಳನ್ನು ಕಂಡುಕೊಂಡು ನಾವು ಸಮಾಧಾನ ಪಟ್ಟಿದ್ದಿದೆ. ಕೊನೆಗೆ ದೇವರ ಪೂಜೆಯನ್ನು ಮಾಡದೇ, ಹಬ್ಬ-ಹರಿದಿನಗಳಿಗೆ ಮನೆಯಲ್ಲಿ ಅಬ್ಸೆಂಟ್ ಆಗುತ್ತಾ ಬಂದು ಒಂದು ರೀತಿಯ ರೆಬೆಲ್ ಜೀವನವನ್ನು ಸಾಗಿಸಿದ ನನ್ನಂತಹವರು ಈಗ ಮೇಲೇರಿದ ಏಣಿ ಗೋಡೆಗೆ ಹೆಚ್ಚು ಒರಗುವಂತಾಗುವ ಹಾಗೆ ದಿನವೂ ದೇವರ ನಾಮ ಸ್ಮರಣೆಯಿಲ್ಲದೇ ದಿನವನ್ನು ಆರಂಭಿಸೋದು ಕಡಿಮೆ. ದೇವರು ಎನ್ನುವ ಕಾನ್ಸೆಪ್ಟಿಗೂ ಮೂರ್ತಿ ಪೂಜೆ (ವಿಗ್ರಹಾರಾಧನೆ) ಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ದೇವರು ಎನ್ನುವ ಪ್ರತಿಮೆ ಒಬ್ಬ ವ್ಯಕ್ತಿ (ಪರಿವಾರ) ಕ್ಕೆ ಸೀಮಿತಗೊಳ್ಳಬಹುದು, ಅಥವಾ ಅದು ನಿಸರ್ಗದ ಮತ್ತೊಂದು ವಸ್ತು/ಜೀವಿಗೆ ನಾವು ನಮ್ಮ ಮನದಲ್ಲಿ ಕೊಡಬಹುದಾದ ಉನ್ನತ ಪರಿಭಾಷೆ ಇರಬಹುದು. ದೇವರು ಎನ್ನುವುದು ಇಂದಿಗೆ ಪ್ರಸ್ತುತವಾದ ಅಂಶವಿರಬಹುದು ಅಥವಾ ಸಾವಿರಾರು ವರ್ಷಗಳ ಹಿಂದಿನ ಯಾವುದೋ ಒಂದು ಉಲ್ಲೇಖಕ್ಕೆ ಸಂಬಂಧಪಟ್ಟಿರಬಹುದು. ಹೀಗೆ ದೇವರು ಎನ್ನುವ ಎಂದೂ ಮುಗಿಯದ ವಿಚಾರಗಳ ಖಜಾನೆಯನ್ನು ಶೋಧಿಸಿದಂತೆಲ್ಲ ಅವರವರ ಪರಿಮಿತಿಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ರೂಪ/ಆಕೃತಿ ಅದರಿಂದ ಹೊರ ಹೊಮ್ಮುತ್ತಲೇ ಇರುತ್ತೆ ಎನ್ನುವುದು ನನ್ನ ಅಂಬೋಣ.

ಉದಾಹರಣೆಗೆ, ನಮ್ಮ ಇಂದಿನ ಅನಿವಾಸಿ ಬದುಕಿನ ಒಂದು ದಿನವನ್ನು ಅವಲೋಕಿಸಿಕೊಳ್ಳೋಣ: ಇಲ್ಲಿ ನಾವು ಬೇಡವೆಂದರೂ ಘಂಟೆಗಳ ನಿನಾದ ನಮ್ಮ ಕಿವಿಗೆ ಬೀಳುವ ಗಲ್ಲಿಗಳ ದೇವಸ್ಥಾನಗಳ ಗೊಂದಲವಿಲ್ಲ. ’ಲಾ ಇಲಾಹ ಇಲ್ಲಲ್ಲ...’ ಎನ್ನುವ ಮುಂಜಾನೆ ಐದೂವರೆಗೆ ಮಸೀದಿಯಿಂದ ಕೂಗುವ ಮುಲ್ಲಾನ ಸ್ವರವಿಲ್ಲ. ಮೊದಲು ವೇಣುವಾದನದಲ್ಲಿ (ಮೋಹನರಾಗ) ಆರಂಭಗೊಂಡು ಶಹನಾಯಿವಾದನದ ಮೂಲಕ ನಮ್ಮನ್ನು ಎದ್ದೇಳಿಸುವ ಬಾನುಲಿಗಳಿಲ್ಲ (ರೆಡಿಯೋ ಸ್ಟೇಷನ್‌). ಅಪರಿಮಿತವಾಗಿ ನಮ್ಮ ಇಂದ್ರಿಯಗಳಿಗೆ ದೊರೆಯುವ ಒಂದಲ್ಲ ಒಂದು ರೀತಿಯ ದೇವರ ಉಲ್ಲೇಖಗಳಿಲ್ಲ. ಹೀಗೆಲ್ಲ ಇದ್ದಾಗ್ಯೂ ನಾನು ಕಂಡ ಅನೇಕಾನೇಕ ಅನಿವಾಸಿಗಳ ಮನೆಗಳ ಮೂಲೆಗಳಲ್ಲಿ ಕಾರಿನ ಮೂಲೆಗಳಲ್ಲಿ ದೇವರಿಗೆ ಸ್ಥಾನವಿದೆ, ಜೊತೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ದೇವರುಗಳ ದರ್ಶನ ಮಾಡುವ ರೂಢಿಯಿದೆ. ಭಾರತದಲ್ಲಿ ಎಲ್ಲವೂ ಇದ್ದು ಅಲ್ಲಿ ನಮಗಿಲ್ಲದ ದೇವರುಗಳ ಜೊತೆ/ಸಾಂಗತ್ಯಕ್ಕೆ ಇಲ್ಲಿ ಹೆಚ್ಚಿನ ಅಗತ್ಯ ಕಂಡುಬರುತ್ತೆ.

ಜನವರಿ-ಫೆಬ್ರುವರಿ ದಿನಗಳಲ್ಲಿ ನಾನು ಆಫೀಸಿಗೆ ಹೋಗೋ ಹೊತ್ತಿಗೆಲ್ಲಾ ಸೂರ್ಯೋದಯದ ಸಮಯ. ದಿನಕ್ಕೊಂದು ಬಗೆಬಗೆಯ ಚಿತ್ತಾರವನ್ನು ಆಕಾಶದಲ್ಲಿ ಸೃಷ್ಟಿಸಿರೋ ಆ ಮೋಡಿಗೆ ಮಾರುಹೋಗದೇ ಇರಲು ಯಾರಿಗಾದರೂ ಹೇಗೆ ಸಾಧ್ಯ? ಅದೇ ಸಮಯಕ್ಕೆ ನಾನು ’ಓ ದಿನಕರ ಶುಭಕರ ಧರೆಗೆ ಬಾ ಎಂದು ಹಾಡುತ್ತೇನೆ’, ಅಥವಾ ’ಓ ಮಿತ್ರಾಯ ನಮಃ’ ಎನ್ನುತ್ತೇನೆ, ಅಥವಾ ತೈತ್ರೇಯ ಉಪನಿಷತ್ತೋ ಅಥವಾ ಮತ್ತಿನ್ನೆಲ್ಲೋ ಉಲ್ಲೇಖಗೊಂಡ ’ನಿನ್ನ ಹೊನ್ನ ಕಿರಣಗಳಿಂದ ನಮ್ಮನ್ನು ಪಾವನಗೊಳಿಸು’ ಎಂದು ಬೇಡಿಕೊಳ್ಳುತ್ತೇನೆ. ನಾನು ಹೀಗೆ ಮಾಡದಿದ್ದರೂ (ಅಥವಾ ಸೂರ್ಯನನ್ನು ನೋಡದೇ ಇದ್ದರೂ) ಸೂರ್ಯನ ದಿನಚರಿಯಲ್ಲಿ ಏನೂ ಬದಲಾಗೋದಿಲ್ಲ. ಹಾಗೆಂದಾಕ್ಷಣ ಎರಡು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತವೆ: ೧) ನಿಯಮಿತವಾಗಿ ನಡೆಯುವ ಪ್ರಕೃತಿಯ ಕ್ರಿಯೆಗೆ ನಾನು ಪ್ರತಿಕ್ರಿಯಿಸಿದರೆಷ್ಟು ಬಿಟ್ಟರೆಷ್ಟು? ೨) ಈ ಪ್ರಕೃತಿಯ ಬದಲಾವಣೆಯ ಉಲ್ಲೇಖಕ್ಕೂ ದೇವರಿಗೂ ಏನು ಸಂಬಂಧ?

ಬಹಳ ಸುಲಭವಾಗಿ ದೇವರನ್ನು ಹೀಗೆ ಪರಿಕಲ್ಪಿಸಿಕೊಳ್ಳಬಹುದು: ನಮ್ಮ ಪ್ರಕೃತಿಯೇ ದೇವರು. ಅದರಲ್ಲಿ ಸೂರ್ಯ-ಚಂದ್ರರಿದ್ದಾರೆ, ನದಿ-ಸಾಗರಗಳಿವೆ, ಹಾವು-ಮುಂಗುಸಿ-ಹಂದಿ-ಕಪ್ಪೆ ಇತ್ಯಾದಿಗಳಿದ್ದಾವೆ, ಪಕ್ಷಿಗಳಿವೆ, ಎಲ್ಲವೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸರಪಳಿ ಇದೆ. ಯಾವ ವಿಜ್ಞಾನಿಯೂ ಬರೆದಿಡದ ತತ್ವದ ಪ್ರಕಾರ ನಡೆಯುವ ಅದೆಷ್ಟೋ ಅನನ್ಯವಾದ ಚಕ್ರಗಳಿವೆ, ಕೋಟ್ಯಾನುಕೋಟಿ ಜೀವರಾಶಿ ಇದೆ, ಇನ್ನೂ ಏನೇನೋ ಇದೆ. ನನಗೆ ಮುಂಜಾನೆ ಸೂರ್ಯ ದೇವರಾಗಿ ಕಂಡು ಬಂದರೆ ಒಬ್ಬ ರೈತನಿಗೆ ಅವನ ಬೆಳೆಯನ್ನು ಕಾಡುವ ಇಲಿಗಳಿಂದ ರಕ್ಷಣೆಕೊಡುವ ಹಾವು ದೇವರಾಗಿ ಕಂಡುಬರಬಹುದು, ಇನ್ನೊಬ್ಬರಿಗೆ ಅನ್ನವನ್ನು ಕೊಡುವ ಭೂತಾಯಿ ದೇವರಾಗಬಹುದು. ನೀರೆ ಒಂದು ದೊಡ್ಡ ಸಿದ್ಧಾಂತವಾಗಬಹುದು. ಗಾಳಿ, ಮಳೆ, ಬೆಂಕಿ ಮಣ್ಣು, ಮತ್ತೊಂದು ಎಲ್ಲವೂ ಅವರವರ ದೇವರಾಗಬಹುದು. ಈ ಸೃಷ್ಟಿಯ ಅಗಾಧತೆ ಹಾಗೂ ಅದರಲ್ಲಿನ ಶಕ್ತಿ ಎಲ್ಲಗಿಂತ ಮಿಗಿಲಾಗಿರಬಹುದು - ಸಣ್ಣದಾಗಿ ದೇವರ ಮುಂದೆ ಉರಿಯುವ ನಂದಾದೀಪದ ಬೆಂಕಿಗೂ ಇತ್ತೀಚೆಗಷ್ಟೇ ಆಷ್ಟ್ರೇಲಿಯದಲ್ಲಿ ಸಾವಿರಾರು ಮೈಲನ್ನು ಕಬಳಿಸಿದ ಕಾಡ್ಗಿಚ್ಚಿಗೂ ನಂಟಿದೆ. ಈ ಭೂಮಿಯನ್ನು ಸುಮಾರು ಎಂಭತ್ತು ಭಾಗ ಆವರಿಸಿಕೊಂಡ ನೀರಿನ ಅವತಾರಗಳಿಗೆ ಅಪರಿಮಿತ ಶಕ್ತಿ ಇದೆ.

ಈ ಮೇಲೆ ಉಲ್ಲೇಖಿಸಿದ ದೇವರಿನ ಪರಿಕಲ್ಪನೆಗೆ ಜಾತಿಗಳಿಲ್ಲ, ಪ್ರವಾದಿಗಳಿಲ್ಲ, ಮತಗಳಿಲ್ಲ ಹಾಗೇ ಇವು ಎಲ್ಲವೂ ಎಲ್ಲ ಕಡೆಯೂ ಇವೆ. ಅದೇ ಸರ್ವಾಂತರ್ಯಾಮಿ. ಅದೇ ಸರ್ವಶಕ್ತ. ಅದೇ ಭಗವಂತ.

***
’ಓ ಶ್ರೀ ಗಣೇಶಾಯ ನಮಃ’ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ. ಅಪರೂಪಕ್ಕೊಮ್ಮೆ ದೇವಸ್ಥಾನದಲ್ಲಿ ಕಾಲು ನೋಯಿಸಿಕೊಂಡು ವಿಷ್ಣು ಸಹಸ್ರನಾಮ ಓದಿ ಬರುತ್ತೇವೆ. ಧರ್ಮಸ್ಥಳದಲ್ಲಿ ಕೊಟ್ಟ ಶಿವಸಹಸ್ರ ನಾಮಾರ್ಚನೆಯ ಪುಸ್ತಕದಲ್ಲಿ ಕೊನೆಯ ಪಕ್ಷ ಒಂದು ನೂರು ನಾಮವನ್ನಾದರೂ ಬಾಯಿ ಪಾಠ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನಗಳಿಗೆ ನಮ್ಮದೇ ಒಂದು ವರ್ಶನ್ನನ್ನು ಅನ್ನು ಸೃಷ್ಟಿಸಿಕೊಂಡಿದ್ದೇವೆ. ದಿನವನ್ನು ಆರಂಭಿಸುವ ಮೊದಲು ದೇವರ ಮುಂದೆ ದೀಪ ಹಚ್ಚುತ್ತೇವೆ, ಅಪರೂಪಕ್ಕೊಮ್ಮೆ ಸ್ಮೋಕ್ ಡಿಟೆಕ್ಟರುಗಳಿಗೆ ಹೆದರಿಕೊಂಡೇ ಊದುಬತ್ತಿಯನ್ನು ಉರಿಸುತ್ತೇವೆ. ಹಬ್ಬ ಹರಿದಿನಗಳೇನಾರೂ ವಾರಾಂತ್ಯಕ್ಕೆ ಒದಗಿ ಬಂದರೆ ದೇವಸ್ಥಾನಗಳ ಕಡೆಗೆ ಮುಖ ತಿರುಗಿಸುತ್ತೇವೆ.

ಈ ದೇವಸ್ಥಾನ ಎನ್ನುವುದು ನಮ್ಮ ಸಮುದಾಯ. ಭಾರತದಲ್ಲಿ ವಿಷ್ಣು ದೇವರ ಮುಂದೆ ಹಾಗೂ ಆಜೂ-ಬಾಜಿನಲ್ಲಿ ಹೆಚ್ಚು ದೇವರುಗಳನ್ನು ನಾವು ಸೃಷ್ಟಿಸಿಕೊಳ್ಳೋದಿಲ್ಲ, ಆದರೆ ನಮ್ಮ ಅನಿವಾಸಿ ಬದುಕಿನಲ್ಲಿ ನಾವು ಎಡೆತಾಕುವ ದೇವಸ್ಥಾನಗಳ ಹೆಸರುಗಳು ಏನೇ ಇದ್ದರೂ ಅದರಲ್ಲಿ ಎಲ್ಲವೂ ಇವೆ. ಗಣೇಶ (ಅದರಲ್ಲೂ ಹಲವಾರು ವಿಧ, ಭಂಗಿ, ಗಾತ್ರ - ಒಂದೇ ದೇವಸ್ಥಾನದ ಹಲವು ಕಡೆ), ಶಿವ, ಅಂಬಿಕೆ, ಸತ್ಯನಾರಾಯಣ ಸ್ವಾಮಿ (ಪರಿವಾರ), ರಾಮ (ಪರಿವಾರ), ಭೂಮಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ (ಪರಿವಾರ), ಶ್ರೀಕೃಷ್ಣ (ಪರಿವಾರ), ಆಂಜನೇಯ, ನವಗ್ರಹಗಳು, ಇತ್ಯಾದಿ - ಜೊತೆಗೆ ಮುಖ್ಯ ದೇವತೆ (ದೇವಸ್ಥಾನದ ಹೆಸರಿಗೆ ತಕ್ಕಂತೆ). ದೊಡ್ಡ ಬಾಲಾಜಿಯು ವಿಗ್ರಹದ ಕೆಳಗೆ ಸಣ್ಣದೊಂದಿದೆ, ಅದಕ್ಕೂ ಚಿಕ್ಕದಾಗಿ ಮತ್ತೊಂದು ಗಣೇಶ ಮೂರ್ತಿ ಇದೆ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಬೇಕಾದಷ್ಟು ಸಣ್ಣ-ಪುಟ್ಟ ಗಣೇಶ-ಶಿವರು ಕಂಡುಬರುತ್ತಾರೆ.

ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಅನಿವಾಸಿಗಳು ಸೃಷ್ಟಿಸಿಕೊಂಡ ದೇವಸ್ಥಾನಗಳು ದೇವಸ್ಥಾನಗಳೇ ಅಲ್ಲ ಎನ್ನಬಹುದು. ಇಲ್ಲಿನ ಮಳೆ-ಛಳಿ-ವ್ಯವಸ್ಥೆಗೆ ತಕ್ಕಂತೆ ಬನಿಯನ್-ಕಾಲುಚೀಲ ಧರಿಸಿ ಪೂಜೆ ನಡೆಸಿಕೊಡುವ ಅರ್ಚಕರಿದ್ದಾರೆ. ಆ ಮೂಲ ವಿನೀತ ಭಾವನೆಯಿಂದ ದೇವರಿಗೆ ನಮ್ಮ ಪ್ರಾರ್ಥನೆಯನ್ನು ಅರ್ಪಿಸಿಕೊಳ್ಳುವ (ನಮ್ಮಲ್ಲಿ) ಮನೋಭಾವನೆಯಲ್ಲಿ ಬಹಳಷ್ಟು ಬದಲಾವಣೆ ಇದೆ/ಆಗಿದೆ. ಬೇಸಿಗೆ ಸಮಯದಲ್ಲಿ ಹೊರಗಡೆ ಜೀನ್ಸ್ ಚೆಡ್ಡಿ(ಬರ್ಮುಡಾ) ವನ್ನು ಧರಿಸಿಕೊಂಡು ಓಡಾಡುವ ನಮಗೆ ದೇವಸ್ಥಾನಗಳಲ್ಲಿ ’ಶಿಸ್ತಾಗಿ ಬನ್ನಿ’ ಎನ್ನುವ ವಿನಂತಿ/ಆದೇಶವಿದೆ. ಶೂಗಳನ್ನು ಯಾವಾಗಲೂ ರ್ಯಾಕ್‌ನಲ್ಲೇ ಇಡಿ ಎಂದು ಅದ್ಯಾವುದೇ ಭಾಷೆಯಲ್ಲಿ ಅದೆಷ್ಟೇ ಬೋರ್ಡುಗಳನ್ನು ಬರೆಸಿಹಾಕಿದ್ದರೂ ಅದನ್ನೆಲ್ಲ ಧಿಕ್ಕರಿಸಿ ಬಾಗಿಲ ಬಳಿಯೇ ಚಪ್ಪಲಿ/ಶೂ ರಾಶಿ ಪೇರಿಸುವ ’ಅದು ನಮಗಲ್ಲ’ ಎಂದು ಕೊಡಗಿಕೊಳ್ಳುವ ಮನೋಭಾವನೆ ಇದೆ (ಇದೇ ಒಂದು ಅಂಶ ಸಾಕು ನಾವು, ಭಾರತೀಯರು ರೂಲ್ಸ್, ರೆಗ್ಯುಲೇಶನ್ನ್ ಹಾಗೂ ಕಾನೂನನ್ನು ಹೇಗೆ ಪರಿಪಾಲಿಸುತ್ತೇವೆ ಎಂದು ಸಾಧಿಸಲು).

ಹೀಗೆ ನಮ್ಮ ಮನೆ, ಮನ, ಕಾರುಗಳಲ್ಲಿರುವುದು ದೇವರೋ ಅಥವಾ ಈ ದೇವಸ್ಥಾನವೆಂದು ಹೆಸರಿಟ್ಟುಕೊಂಡ ಸಮುದಾಯಗಳಲ್ಲಿರುವುದು ದೇವರೋ ಅಥವಾ ನಮ್ಮ ಊರು/ಪರಂಪರೆಯಲ್ಲಿರುವುದು ದೇವರೋ ಎನ್ನುವ ಪ್ರಶ್ನೆ ಬಹುಷಃ ಎಲ್ಲರಿಗೂ ಬಂದಿರಬಹುದು. ಇಷ್ಟೆಲ್ಲಾ ದೇವರಿನ ಪರಿಕಲ್ಪನೆ ಸಾಲದು ಎಂದು ನಮ್ಮ ನಮ್ಮ ಕಲ್ಪನೆಯ ಮಠಗಳನ್ನು ಹುಟ್ಟು ಹಾಕಿಕೊಂಡಿದ್ದೇವೆ. ಸಂಕಟಕ್ಕೆ ತಿರುಪತಿಯ ವೆಂಕಟರಮಣನಿದ್ದಾನೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯಿದೆ (ಒಂದು ಆಬ್ಜೆಕ್ಟ್ ಪರಿಕಲ್ಪನೆ ಗಮನಿಸಿ), ಮಂತ್ರಾಲಯವಿದೆ, ಹೊರನಾಡಿದೆ, ಶೃಂಗೇರಿಯಿದೆ. ನಮ್ಮ ಊರಿನ ಕೈಟಭೇಶ್ವರನಿದ್ದಾನೆ, ಸರ್ಕಲ್ಲಿನ ಚೌಡಮ್ಮಳಿದ್ದಾಳೆ, ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಇದ್ದಾನೆ, ಸುಬ್ರಹ್ಮಣ್ಯ ಸ್ವಾಮಿಯ ಸಾನಿಧ್ಯವಿದೆ. ನಮ್ಮ ಹಿಂದೂ ಪರಿಕಲ್ಪನೆಯೇ ಎಷ್ಟು ವಿಸ್ತಾರವಾದುದೆಂದು ನಾನು ಸೋಜಿಗಗೊಂಡಿದ್ದೇನೆ - ಅವರವರ ಅನುಕೂಲಕ್ಕೆ ತಕ್ಕಂತೆ ಯಾರು/ಏನನ್ನು ಬೇಕಾದರೂ ಮೆಚ್ಚಿ/ಹಚ್ಚಿಕೊಳ್ಳುವ ಸ್ವಾತಂತ್ರ್ಯವಿದೆ.


***

ಸೃಷ್ಟಿ, ಪ್ರಕೃತಿ ಹಾಗೂ ಮೂರ್ತಿ ಪೂಜೆಯ ಆಧಾರದಲ್ಲಿ ಈ ಎಲ್ಲ ಉಲ್ಲೇಖಗಳನ್ನು ಮಂಡಿಸಿದಂತೆ ಒಂದು ಅಂಶ ಪ್ರಸ್ತುತವಾಗುತ್ತದೆ - ಅದೇ ನಮ್ಮ ಸಮುದಾಯ. ಭಾರತದಲ್ಲಿ ನಾವು ಬೆಳೆದುಬಂದಂತೆ ಒಂದು (ಮೆಜಾರಿಟಿ) ವ್ಯವಸ್ಥೆಯ ಅಂಗವಾಗಿದ್ದೆವು, ಆ ವ್ಯವಸ್ಥೆ ಇಲ್ಲಿ ಇರದಿದ್ದ ಮಾತ್ರಕ್ಕೆ ಅದನ್ನು ನಾವು-ನಾವೇ ಹುಟ್ಟುಹಾಕಿಕೊಂಡಿರೋದು (ಪ್ರಯತ್ನ). ಸಂಘಜೀವ ಪ್ರತಿಯೊಬ್ಬರಿಗೂ ಬೇಕಾದ ಹಾಗೇ ಒಂದಲ್ಲ ಒಂದು ಗೋಡೆಗೆ ನಾವು ಒರಗಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಮನ-ಕಾರು-ಮನೆಗಳಲ್ಲಿನ ದೇವರುಗಳನ್ನು ಒಂದು ಸ್ವಲ್ಪ ದಿನಗಳ ಮಟ್ಟಿಗೆ ತೆಗೆದುಹಾಕಿ ನೋಡಿದಾಗ (ಸಾಧ್ಯವಿದ್ದರೆ) ಅಲ್ಲಿ ಒಂದು ನಿರ್ವಾತ (ವ್ಯಾಕ್ಯೂಮ್) ಹುಟ್ಟತ್ತದೆ, ಈ ನಿರ್ವಾತದ ವಿಶೇಷವೆಂದರೆ ಅದನ್ನು ಮತ್ತೊಂದರಿಂದ ತುಂಬಲೇ ಬೇಕಾಗುತ್ತದೆ. ಒಂದು ರೀತಿಯ ಪೆಂಡುಲಮ್ ಗುಂಡು ಇದ್ದ ಹಾಗೆ, ನೀವು ಒಂದು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋದಂತೆಲ್ಲ ಅದು ಅಷ್ಟೇ ವಿರುದ್ಧ ದಿಕ್ಕಿಗೆ ಚಲಿಸುವ ಸಹಜತೆ ಇರುವ ಹಾಗೆ.

ಪ್ರತಿಯೊಬ್ಬರಿಗೂ ಅವರವರ ಬೇಡಿಕೆಗಳಿವೆ ಹಾಗೂ ಅಗತ್ಯಗಳಿವೆ, ಅದಕ್ಕೆ ತಕ್ಕಂತೆ ಅವರವರ ಮನಸ್ಸಿನಲ್ಲಿ ಎಲ್ಲೋ ಮೂಲೆಯಲ್ಲಿ ದೇವರ ಪರಿಕಲ್ಪನೆ ಇದೆ. ದೇವರು ಇಲ್ಲ ಎನ್ನುವ ವಾದವೂ, ದೇವರ ಮೇಲಿನ ಸೇಡೂ, ವಿರೋಧಾಲೋಚನೆಗಳು ಎಲ್ಲವೂ ಆ ದೇವರ ಕೃಪೆಯೇ ಎಂದುಕೊಂಡರೆ ಎಲ್ಲವೂ ದೇವರ ಮಯ. ದೇವರು ಎನ್ನುವ ಭಾವನೆ ಅಥವಾ ಆ ಭಾವನೆ ಇಲ್ಲದಿರುವ ಭಾವನೆಯೇ ದಿವ್ಯವಾದುದು, ಅಷ್ಟೇ!

2 comments:

sunaath said...

ಅದಕ್ಕೇ ಸಾರ್, ಭಾರತಕ್ಕೆ ‘ದೇವಭೂಮಿ’ ಅನ್ನೋದು!

Satish said...

ಸುನಾಥ್,
’ದೇವಭೂಮಿ’ಯ ಬಗ್ಗೆ ಮತ್ತಿನ್ನಷ್ಟು ಬರೆಯಬೇಕು ಎಂದುಕೊಂಡರೆ ಪುರುಸೊತ್ತು ಸಿಗಲೇ ಇಲ್ಲ ನೋಡಿ.

ಶಮ,
ನಿಮ್ ಸೈಟ್ ನೋಡಿದೆ, ಧನ್ಯವಾದಗಳು -- ಮುಂದೆ ವಿವರವಾಗಿ ಕಾಮೆಂಟ್ ಹಾಕುತ್ತೇನೆ.