Tuesday, January 29, 2008

ಬಂಡವಾಳಶಾಹಿ ಜಗತ್ತಿನ ಎರಡು ಮಹಾಮಂತ್ರಗಳು

ಬದಲಾವಣೆಯೇ ಜಗದ ನಿಯಮ - ಅನ್ನೋದು ನಿಜವಾದರೆ ಬದಲಾವಣೆಯ ಆಗು ಹೋಗುಗಳನ್ನು ಮ್ಯಾನೇಜು ಮಾಡುವುದೂ ಅಷ್ಟೇ ನಿಜ ಅಥವಾ ಅಗತ್ಯ. ನಾವು ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ನಿರ್ವಹಿಸಿಕೊಂಡು ಹೋಗುತ್ತೇವೆ ಅನ್ನೋದು ನಮ್ಮಲ್ಲಿ ಜನರು ಹುಡುಕಿಕೊಂಡು ಬರುವ ಸ್ವಭಾವ ಅಥವಾ ಗುಣವಾಗಬಹುದು. ಈ ಬದಲಾವಣೆಯ ಅಗತ್ಯಗಳಿಗೆ ನಮ್ಮ ಸ್ಪಂದನ ಇಂದಿನ ದಿನಗಳಲ್ಲಂತೂ ಇನ್ನೂ ಮುಖ್ಯ, ಬದಲಾವಣೆ ಎನ್ನೋದು ಯಾವ ರೂಪದಲ್ಲಿ ಹೇಗೆ ಬೇಕಾದರೂ ಪ್ರತ್ಯಕ್ಷವಾಗಿ ನಮ್ಮ ನೆಲೆಗಟ್ಟನ್ನು ಅಲುಗಾಡಿಸುವ ನಿರೀಕ್ಷೆಯಂತೂ ಇರೋದು ನಿಜ.

ಈ ಬದಲಾವಣೆಗಳು ಯಾವುದೋ ಒಂದು ನಮಗೆ ಗೊತ್ತಿರುವ ರಸ್ತೆಯಲ್ಲಿ ಹೋಗುತ್ತಿರುವ ನಮ್ಮ ಕಂಫೋರ್ಟ್ ಝೋನ್ ಅನ್ನು ಪ್ರಶ್ನಿಸುವ ಡೀ-ಟೂರ್ ಇದ್ದ ಹಾಗೆ, ಅವುಗಳು ಒಡ್ಡುವ ಆ ಮಟ್ಟಿನ ಅನಿರೀಕ್ಷಿತ ತಿರುವುಗಳನ್ನು ಸಾವಧಾನ ಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯದೇ ಇದ್ದರೆ ಅಪಾಯವಂತೂ ಖಂಡಿತ. ಅದೇ ಬದಲಾವಣೆಗಳಿಗೆ ಕಿವಿಗೊಡದೇ ಇದ್ದ ರಸ್ತೆಯಲ್ಲೇ ಮುನ್ನಡೆದರೆ ಯಾವುದಾದರೂ ಗುಂಡಿ ಸೇರುವ ಅಪಾಯ ಬೇರೆ. ಹೀಗಾಗಿ ಬದಲಾವಣೆಗಳು ನಮ್ಮನ್ನು ಹೇಳಿಕೇಳಿ ಬರದೇ ಇದ್ದರೂ ಅವುಗಳನ್ನು ನಿರೀಕ್ಷಿಸಿಕೊಂಡೇ ಸಾಧ್ಯವಾದಷ್ಟರ ಮಟ್ಟಿಗೆ ತಯಾರಾಗಿರುವುದು ಈಗಿನ ಕಾಲದ ಅಗತ್ಯಗಳಲ್ಲೊಂದು. ಇಂದಿದ್ದ ಬಾಸ್ ನಾಳೆ ಇರದಿರಬಹುದು, ನಮ್ಮ ನೆಚ್ಚಿನ ಕೆಲಸ ಕಾರ್ಯಗಳು ಬೇರೆಯವರ ಕೈಗೆ ದಿಢೀರ್ ಹೋಗಿ ನಮಗೆ ಹೊಸ ಕೆಲಸಗಳು ಬರಬಹುದು, ಇಂದು ಮುಂಜಾನೆ ಇದ್ದ ಕೆಲಸವೇ ಸಂಜೆಗೆ ಇರದಿರಬಹುದು. ೨೦೦೦ ದಿಂದ ೨೦೦೩ ರವರೆಗೆ ಅನೇಕ ಕಂಪನಿಗಳು (ವಿಶೇಷವಾಗಿ ಡಾಟ್‌ಕಾಮ್) ಮುಚ್ಚಿ ಹೋದ ಹಿನ್ನೆಲೆಯಲ್ಲಿ ಅಥವಾ ಅವರ ವರ್ಕ್ ಫೋರ್ಸ್ ಅನ್ನು ಕಡಿಮೆ ಮಾಡುವ ಹುನ್ನಾರದಲ್ಲಿ ಅನೇಕ ಜನ ಕೆಲಸವನ್ನು ಕಳೆದುಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ಈಗಲೂ ಸಹ ಅಲ್ಲಲ್ಲಿ ಸಾವಿರಾರು ಜನರನ್ನು ಕೆಲಸವಿಲ್ಲದೇ ಮನೆಗೆ ಕಳಿಸುವುದನ್ನು ನಾವು ಕಾರ್ಪೋರೇಟ್ ರಿಪೋರ್ಟುಗಳಲ್ಲಿ ಓದಬಹುದು. ಹೀಗೆ ಒಂದು ಕಂಪನಿಯಲ್ಲಿನ ನಮ್ಮ ಅಸ್ತಿತ್ವವನ್ನು ದಿಢೀರ್ ಕಳೆದುಕೊಂಡು ಮತ್ತೊಂದು ಕಂಪನಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಬದಲಾವಣೆ ಒಬ್ಬನ ವೃತ್ತಿ ಜೀವನದಲ್ಲಿ ಬೇಕೆ? ಕೆಲಸ ಬದಲಾವಣೆ ಅನ್ನೋದು ಹೆಚ್ಚು ಸ್ಟ್ರೆಸ್ ಹುಟ್ಟಿಸುವ ಲೈಫ್ ಇವೆಂಟುಗಳಲ್ಲಿ ಒಂದು. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ, ಎರಡು ವಾರಗಳ ಹಿಂದೆ ಇದ್ದಕ್ಕಿದ್ದ ಹಾಗೆ ಕಂಪನಿಯಲ್ಲಿ ಅನೇಕ ಬದಲಾವಣೆಗಳು ನಾನಿಲ್ಲದ ವೇಳೆಯಲ್ಲಿ ಸಂಭವಿಸಿ ರಾತ್ರೋ ರಾತ್ರಿ ನನಗೆ ಹೊಸ ಬಾಸೂ, ಹೊಸ ಕೆಲಸವೂ ಬಂದಿದ್ದು ಇಂದಿಗೂ ನಿಜವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ ಕ್ಷಿಪ್ರವಾಗಿ ನಡೆದು ಹೋಗಿದೆ. ಹಳೆಯದನ್ನು ನೆನೆಸಿಕೊಂಡು ಕೊರಗುವ ಮನಸ್ಸಿದ್ದರೂ ಹೊಸದಕ್ಕೆ ಹೊಂದಿಕೊಂಡು ಹೋಗದೇ ಬೇರೆ ನಿರ್ವಾಹವೇ ಇಲ್ಲ. ಬದಲಾವಣೆ ಎನ್ನೋದು ಯಾವತ್ತಿದ್ದರೂ ಗೆಲ್ಲುತ್ತೆ, ಅದಕ್ಕೆ ಸ್ಪಂದಿಸಿ ಹೊಂದಿಕೊಂಡು ಹೋಗುವುದು ಎನ್ನುವುದು ರೂಲ್ ಅದು ಯಾವತ್ತೂ ಎಕ್ಸೆಪ್ಷನ್ನ್ ಅಲ್ಲ.

***

ಇಂದಿನದು ಇಂದಿಗೆ ನಾಳೆಯದು ನಾಳೆಗೆ ಎನ್ನುವ ಬಂಡವಾಳಶಾಹಿ ವ್ಯವಸ್ಥೆಯ ಮಹಾಮಂತ್ರಕ್ಕೆ ಎಂಥವರೂ ಮನಸೋಲಲೇ ಬೇಕು. ಇಲ್ಲಿ ಕ್ವಾರ್ಟರಿನಿಂದ ಕ್ವಾರ್ಟರಿಗೆ ತಿಂಗಳಿನಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ನಮ್ಮನ್ನು ನಾವು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ. ನಿನ್ನೆ ಉತ್ತಮವಾದದ್ದು ಇಂದಿಗೆ ನಿಜವಾಗ ಬೇಕೆಂದೇನೂ ಇಲ್ಲ, ಇಂದು ನಡೆದದ್ದು ನಾಳೆಗೆ ನಡೆಯುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಎಲ್ಲವೂ ಆಯಾ ವರ್ಷಕ್ಕೆ ಅನುಗುಣವಾದವುಗಳು, ಪ್ರತಿ ಮೂರು/ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆಯಾ ಕಂಪನಿಗಳ ಪರ್‌ಫಾರ್ಮೆನ್ಸ್ ಅನ್ನು ಲೆಕ್ಕ ಹಾಕುವ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ತಿಂಗಳಿನಿಂದ ತಿಂಗಳಿಗೆ ಚೇತರಿಸಿಕೊಳ್ಳುವ ವ್ಯವಸ್ಥೆ ಇರುವುದರ ಜೊತೆಗೆ ಹಳೆಯದನ್ನು ಆದಷ್ಟು ಬೇಗನೆ ಹಿಂದಕ್ಕೆ ತಳ್ಳಿ ಮುನ್ನುಗ್ಗುವ ಆತುರವೂ ಕಂಡುಬರುತ್ತದೆ. ಹಲವಾರು ವರ್ಷಗಳ ಕಾಲ ಒಂದೇ ಸಮನೆ ಒಂದು ’ಕ್ಯಾರೆಕ್ಟರ್’ ಅನ್ನು ಹುಟ್ಟಿಸಿ ಬೆಳೆಸುಕೊಳ್ಳುವುದಕ್ಕಿಂತಲೂ ಆಯಾ ಮಟ್ಟಿನ ಬೆಳವಣಿಗೆಗೆ ಹೆಚ್ಚು ಆಸ್ಪದ ನೀಡಿದಂತನಿಸುತ್ತದೆ. ಈ ಕೆಳಗಿನ ನ್ಯಾಸ್‍ಡಾಕ್ ಬೆಳವಣಿಗೆಯನ್ನು ನೋಡಿ.

ಜನವರಿ ೩, ೨೦೦೦ ರಂದು 4,186 ಕ್ಕೆ ತೆರೆದುಕೊಂಡ NASDAQ ಮಾರ್ಕೆಟ್ಟಿನ ಇಂಡೆಕ್ಸ್ ಅದೇ ವರ್ಷದ ಮಾರ್ಚ್ ೬ ರಂದು 5,048 ಹೋಗಿದ್ದನ್ನು ಬಿಟ್ಟರೆ ಅಲ್ಲಿಂದ ಕ್ರಮೇಣ ಹಂತ ಹಂತವಾಗಿ ಕೆಳಮುಖವಾಗಿ ಹರಿದ ಮಾರ್ಕೆಟ್ಟಿನ ಗ್ರಾಫು ಬುಡ ಬಂದು ಸೇರಿದ್ದು ಸೆಪ್ಟೆಂಬರ್ ೩೦, ೨೦೦೨ ರಂದೇ - ಅಂದು 1,139 ಕ್ಕೆ ಕ್ಲೋಸ್ ಆದ ಮಾರ್ಕೆಟ್ಟಿನ ಕೆಲ ದಾಖಲೆ ಎಂದೇ ಹೇಳಬೇಕು. ಸುಮಾರು ನಾಲ್ಕು ಸಾವಿರ ಪಾಯಿಂಟುಗಳಷ್ಟು ಕುಸಿತ ಕೇವಲ ಎರಡೂವರೆ ವರ್ಷಗಳಲ್ಲಿ. ಲಕ್ಷಾಂತರ ಜನ ತಮ್ಮ ಟೆಕ್ನಾಲಜಿ ಇನ್ವೆಷ್ಟುಮೆಂಟುಗಳಲ್ಲಿ ಹಣ ಕಳೆದುಕೊಂಡರು, ಬುದ್ಧಿವಂತರು ಆದಷ್ಟು ಬೇಗ ಟೆಕ್ನಾಲಜಿ ಸೆಕ್ಟರುಗಳಿಂದ ಜಾಗ ಖಾಲಿ ಮಾಡಿ ರಿಯಲ್ ಎಸ್ಟೇಟೋ ಮತ್ತಿನ್ನೆಲ್ಲೋ ತೊಡಗಿಸಿ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಂಡರು, ಇನ್ನುಳಿದವರು Yahoo, Oracle, Microsoft, Cisco ಮೊದಲಾದ ಕಂಪನಿಗಳಲ್ಲಿ ತಮ್ಮ ಹಣ ದಿನೇ ದಿನೇ ಕುಸಿಯೋದನ್ನು ನೋಡಿಕೊಂಡೇ ಸುಮ್ಮನಿದ್ದರು. ಇವೆಲ್ಲವನ್ನೂ ಮಾರ್ಕೆಟ್ ಪಂಡಿತರು ಬೇಕಾದ ರೀತಿಯಲ್ಲಿ ಅವಲೋಕಿಸಿ ಬೇಕಾದಷ್ಟನ್ನು ಪಬ್ಲಿಷ್ ಮಾಡಿರಬಹುದು, ಆದರೆ ಜನವರಿ ೨೦೦೩ ರಿಂದ ನಂತರದ ಕಥೆಯೇ ಬೇರೆ.

ಜನವರಿ ೬, ೨೦೦೩ ರಂದು 1,390 ಗೆ ತೆರೆದುಕೊಂಡ NASDAQ ಅದೇ ವರ್ಷ ಡಿಸೆಂಬರ್ ಅಂತ್ಯದ ಹೊತ್ತಿಗೆ 2,000 ದ ಗಡಿ ದಾಟಿತ್ತು. ಫೈನಾನ್ಸ್ ಪಂಡಿತರು, ಟಿವಿಯಲ್ಲಿನ ಮಾತನಾಡುವ ತಲೆಗಳು, ಮತ್ತಿತರ ಮಹಾಮಹಿಮರೆಲ್ಲರೂ ಮಾರ್ಕೆಟ್ಟನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಆ ವರ್ಷದ ಮಟ್ಟಿಗೆ NASDAQ ನಲ್ಲಿ 30% ಗಿಂತಲೂ ಹೆಚ್ಚು ಉತ್ತಮ ರಿಟರ್ನ್ಸ್‌ಗಳನ್ನು ಕಂಡುಕೊಂಡಿದ್ದು ನಿಜವಾದರೂ ಅದರ ಹಿಂದಿನ ಎರಡೂವರೆ ವರ್ಷಗಳಲ್ಲಿ ಹಣ ಕಳೆದುಕೊಂಡ ಬಗ್ಗೆ ಏನೂ ಸೆನ್ಸಿಟಿವಿಟಿಯೇ ಇಲ್ಲವೇ ಎಂದು ಅನ್ನಿಸಿದ್ದೂ ನಿಜ.

***

ಹೀಗೆ ಬಂಡವಾಳಶಾಹಿ ಜಗತ್ತಿನ ಬದುಕಿನಲ್ಲಿ ಇನ್ನೂ ಅನೇಕ ಸೂತ್ರಗಳಿವೆ, ಅವುಗಳನ್ನೆಲ್ಲ ಹೆಕ್ಕಿ ಹೇಳುತ್ತಾ ಹೋದರೆ ದೊಡ್ಡ ಕಥೆಯಾದೀತು. ಈ ಮಹಾಮಂತ್ರಗಳ ಪಟ್ಟಿ ಇಲ್ಲಿಗೆ ನಿಲ್ಲೋದಿಲ್ಲ, ಇನ್ನೂ ಬೇಕಾದಷ್ಟಿವೆ, ಅವುಗಳನ್ನು ಪುರುಸೊತ್ತು ಮಾಡಿಕೊಂಡು ಬೆಳೆಸಿಕೊಂಡು ಹೋಗಬೇಕಷ್ಟೆ, ಅಥವಾ ಅದರ ಬದಲಿಗೆ ಒಂದು ಪುಸ್ತಕ ಬರೆದರೂ ಆದೀತು!

ಇನ್ನು ಮುಂದೆ ಎಂದಾದರೂ ಒಮ್ಮೆ ಬಂಡವಾಳಶಾಹಿ ಜಗತ್ತಿನ ತಪ್ಪು-ಒಪ್ಪುಗಳ ಬಗ್ಗೆಯೂ, ತಪ್ಪನ್ನು ಕಂಡು ಹಿಡಿದವರಿಗೆ ಕೊಡುವ ಇನಾಮಿನಿಂದ ಹಿಡಿದು, ಕಂಪನಿಗಳು ಸರ್ಕಾರಕ್ಕೆ, ಸರ್ಕಾರದ ವಿವಿಧ ಎಂಟಿಟಿಗಳಿಗೆ ಸೆಟಲ್‌ಮೆಂಟ್ ದೃಷ್ಟಿಯಲ್ಲಿ ಹಂಚುವ ಹಣದ ಬಗ್ಗೆ ಬರೆಯುತ್ತೇನೆ.

Saturday, January 26, 2008

ಸುಂಕ ವ್ಯವಸ್ಥೆಯ ಸುಖ ದುಃಖಗಳು

ರಸ್ತೆಗಳೆಂಬ ಮಟ್ಟಗಾರರ ಬಗ್ಗೆ ಬರೆಯೋ ಹೊತ್ತಿಗೆ ಉಳಿದ ಮಟ್ಟಗಾರರ ಬಗ್ಗೆ ಯೋಚಿಸಿದಂತೆಲ್ಲಾ ಟ್ಯಾಕ್ಸ್ ಸೀಜನ್ನಿನಲ್ಲಿ ಟ್ಯಾಕ್ಸ್ ಬಗ್ಗೆ ಯೋಚಿಸಿ ಬರೆಯದೇ ಹೋದರೆ ಹೇಗೆ ಎಂದು ಅನ್ನಿಸಿದ್ದಂತೂ ನಿಜ. ಈ ಟ್ಯಾಕ್ಸ್, ತೆರಿಗೆ, ಕರ, ಸುಂಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಕಾನ್ಸೆಪ್ಟ್ ಮಹಾ ಮಟ್ಟಗಾರರಲ್ಲೊಂದು, ಸರ್ಕಾರ ಟ್ಯಾಕ್ಸ್ ಅನ್ನು ಹೇಗೆ ವ್ಯಾಖ್ಯಾನಿಸಿಕೊಂಡರೂ, ಜನರು ಅದನ್ನು ತಮ್ಮ ತಮ್ಮ ಮಟ್ಟಿಗೆ ಅದನ್ನು ಹೇಗೇ ಅನ್ವಯಿಸಿಕೊಂಡರೂ ಟ್ಯಾಕ್ಸ್ ಅನ್ನುವುದು ಯಾರನ್ನೂ ಬಿಟ್ಟಂತಿಲ್ಲ.

ಮೊನ್ನೆ ಹೀಗೇ ಅಫಘಾನಿಸ್ತಾನದವರ ಬಗ್ಗೆ ನನ್ನ ಸಹೋದ್ಯೋಗಿಯೊಡನೆ ಮಾತು ಬಂತು. ಅಭಿವೃದ್ಧಿ ಹೊಂದಿದ ದೇಶದ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೋಶಿಯಲ್ ಸೆಕ್ಯೂರಿಟಿ ನಂಬರ್ ಎನ್ನುವ ಒಂಭತ್ತು ಸಂಖ್ಯೆಗಳಿಂದ ಅಳೆದು ಪ್ರತಿಯೊಬ್ಬರಿಂದ ಲೆಕ್ಕಕ್ಕೆ ತಕ್ಕಂತೆ ಟ್ಯಾಕ್ಸ್ ಕೀಳುವುದು ಇರಲಿ ಕೊನೆಗೆ ವರ್ಷಕ್ಕೊಮ್ಮೆ ಅಮೇರಿಕದ ನಾಗರಿಕರು ತಮ್ಮ ವಾರ್ಷಿಕ ಆದಾಯ ಇಂತಿಷ್ಟಕ್ಕಿಂತ ಹೆಚ್ಚಿದ್ದರೆ ಅವರ ಟ್ಯಾಕ್ಸ್ ಅನ್ನು ಫೈಲ್ ಮಾಡಬೇಕಾದ ಅಗತ್ಯವನ್ನು ಮನಗಾಣುವುದು ಸುಲಭವಾಗಿತ್ತು. ನನ್ನ ಪ್ರಕಾರ (ಯಾವುದೇ ದಾಖಲೆಯ ಬೆಂಬಲವಿಲ್ಲದೆ) ತೃತೀಯ ಜಗತ್ತಿನಲ್ಲಿ ಎಷ್ಟೋ ಜನರಿಂದ ಅಪರೋಕ್ಷವಾಗಿ ವಸೂಲಿ ಮಾಡುವ ಸೇಲ್ಸ್ ಟ್ಯಾಕ್ಸ್ ಅನ್ನು ಬಿಟ್ಟರೆ ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ತಮ್ಮ ಆದಾಯಕ್ಕನುಗುಣವಾಗಿ ಟ್ಯಾಕ್ಸ್ ಅನ್ನು ಕಟ್ಟುವುದಾಗಲೀ ಅದನ್ನು ಫೈಲ್ ಮಾಡುವುದಾಗಲೀ ಸಾಧ್ಯತೆಗಳೇ ಇಲ್ಲ. ಸೇಲ್ಸ್ ಟ್ಯಾಕ್ಸ್ ಜೊತೆಗೆ ಯಾರು ಯಾರು ನಿಜವಾದ ಪೇ ಚೆಕ್ (ಸ್ಟಬ್) ಗಳನ್ನು ತೆಗೆದುಕೊಳ್ಳುತ್ತಾರೋ ಅವರಿಂದ ಸರ್ಕಾರದವರು, ಸಂಬಂಧಿತ ಇಲಾಖೆಯವರು ಟ್ಯಾಕ್ಸ್ ಅನ್ನು ವಜಾ ಮಾಡಿಕೊಳ್ಳುವ ಸಾಧ್ಯತೆಗಳಿರಬಹುದು, ಅದನ್ನು ಬಿಟ್ಟರೆ ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಸಣ್ಣ (ಗೃಹ) ಕೈಗಾರಿಕೆಗಳನ್ನು ನಡೆಸಿಕೊಂಡಿರುವವರು ಇತ್ಯಾದಿಗಳಿಂದ ಇಂತಿಷ್ಟೇ ಆದಾಯ ಹಾಗೂ ಅದಕ್ಕೆ ತಕ್ಕ ಟ್ಯಾಕ್ಸ್ ಎಂದು ವಸೂಲಿ ಮಾಡಿದ್ದನ್ನು ನಾನು ನೋಡಿಲ್ಲ, ಇತ್ತೀಚೆಗೇನಾದರೂ ಭಾರತದಲ್ಲಿ ಟ್ಯಾಕ್ಸ್ ಬದಲಾವಣೆಗಳಾಗಿದ್ದರೆ ಅದು ನನ್ನ ಮೌಢ್ಯವಷ್ಟೆ. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಕ್ಕಿರುವ ಅಫಘಾನಿಸ್ತಾನದಲ್ಲಿ ಯಾವ ಮಟ್ಟದ ಟ್ಯಾಕ್ಸ್ ವ್ಯವಸ್ಥೆ ಇದೆ, ಅಲ್ಲಿನ ಪ್ರತಿಯೊಬ್ಬ ನಾಗರಿಕರು ಹೇಗೆ ಟ್ಯಾಕ್ಸ್‌ಗೆ ಒಳಪಟ್ಟಿದ್ದಾರೆ ಎನ್ನುವುದು ನನಗೆ ನಿಖರವಾಗಿ ಗೊತ್ತಿಲ್ಲದಿದ್ದರೂ, ಬಡತನದಲ್ಲಿ ಬಾಂಗ್ಲಾ ದೇಶಕ್ಕೆ ಪೈಪೋಟಿ ಕೊಡುತ್ತಿರುವ ಅಲ್ಲಿನ ಜನರ ಉತ್ಪಾದನೆಯೇ ಕಡಿಮೆ ಇದ್ದು ಇನ್ನು ಪಾಪ ಅವರಾದರೂ ಯಾವ ಟ್ಯಾಕ್ಸ್ ಅನ್ನು ಕೊಟ್ಟಾರು. ಹಾಗೆಯೇ ಅಮೇರಿಕದಲ್ಲಿನ ಪ್ರತಿ ರಾಜ್ಯದ ಪ್ರತಿಯೊಬ್ಬರೂ ನಿಖರವಾಗಿ ಟ್ಯಾಕ್ಸ್ ಕೊಡುತ್ತಾರೆ ಎಂದೇನೂ ಅಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸೋಶಿಯಲ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ನ್ ನವರು ಒಂಭತ್ತು ಸಂಖ್ಯೆಗಳನ್ನೇನೋ ಒದಗಿಸಿಕೊಟ್ಟಿರಬಹುದು, ಆದರೆ ಅಮೇರಿಕದ ಉದ್ದಗಲಕ್ಕೂ ಪ್ರತಿಯೊಬ್ಬರಿಗೂ ಕನಿಷ್ಠ ಟ್ಯಾಕ್ಸ್ ಕೊಡುವ ಆದಾಯವಿದ್ದು, ಅವರು ಲೆಕ್ಕಕ್ಕೆ ತಕ್ಕಂತೆ ಕೊಡುತ್ತಾರೆ ಎನ್ನುವ ಜನರಲೈಜೇಷನ್ನನ್ನು ಮಾಡಲಾಗದು.

ಈ ಹಿನ್ನೆಲೆಯಲ್ಲಿಯೇ ಯೋಚಿಸಿ ಮತ್ತೊಂದು ಹೆಜ್ಜೆ ಮುಂದೆ ಹೋದಾಗ ಅಮೇರಿಕದವರಿಗೆ ಪ್ರಪಂಚದ ಉಳಿದ ದೇಶಗಳಲ್ಲಿನ ಅನುಕೂಲ, ಅನಾನುಕೂಲಗಳನ್ನು ಯೋಚಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿನ ಭ್ರಷ್ಟಾಚಾರವನ್ನಾಗಲೀ, ರಷ್ಯಾದಲ್ಲಿನ ಮಾಫಿಯಾವನ್ನಾಗಲೀ, ಎಷ್ಟೋ ದೇಶಗಳಲ್ಲಿನ ಅರಾಜಕತೆ, ಡಿಕ್ಟೇಟರ್‌ಶಿಪ್ಪುಗಳನ್ನಾಗಲೀ, ಅಲ್ಲಲ್ಲಿ ನಡೆಯುವ ಜನರ ದುರ್ಮರಣದ ಸಂಖ್ಯೆಯನ್ನಾಗಲೀ, ಅಥವಾ ಉಳಿದ ಮತ-ಧರ್ಮ-ಸಂಪ್ರದಾಯಗಳ ಹಿನ್ನೆಲೆಯನ್ನಾಗಲೀ ಅರ್ಥ ಮಾಡಿಕೊಳ್ಳಲು ದೊಡ್ಡ ಮನಸ್ಸೇ ಬೇಕು. ಇರಾಕ್‌ನಲ್ಲಿ ಸದ್ದಾಮನ ಸರ್ಕಾರವನ್ನು ಬೀಳಿಸಿದ್ದೇವೆ, ಅಲ್ಲಿನ ಜನರು ಸುಖವಾಗಿ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇಕೆ ಇರಬಾರದು? ಎಂದು ಕೇಳುವ ಪ್ರಶ್ನೆಗಳು ಬಾಲಿಶವೇ ಹೌದು. ಪ್ರಪಂಚದ ಎಲ್ಲರೂ ತಮ್ಮ ತಮ್ಮ ಲೆಕ್ಕದ ಟ್ಯಾಕ್ಸ್ ಅನ್ನು ನಿಖರವಾಗಿ ಕೊಟ್ಟು ಅವರವರ ಸರ್ಕಾರದ ಹುಂಡಿಯನ್ನೇಕೆ ಬೆಳೆಸಬಾರದು ಎನ್ನುವಷ್ಟೇ ಹುಂಬ ಪ್ರಶ್ನೆಯಾದೀತು. ಒಂದು ವ್ಯವಸ್ಥೆ - ಅದು ಟ್ಯಾಕ್ಸ್ ಕೊಟ್ಟು ಅದನ್ನು ಪರಿಶೀಲಿಸಿಕೊಳ್ಳುವ ಕ್ರಮವಾಗಿರಬಹುದು, ಲಂಚ ತೆಗೆದುಕೊಂಡವರನ್ನು ಗುರುತಿಸಿ ಥಳಿಸುವ ನಿಯಮವಾಗಿರಬಹುದು, ಕ್ರಿಮಿನಲ್ಲ್‌ಗಳನ್ನು ಹುಡುಕಿ ಶಿಕ್ಷಿಸುವ ಪರಿಯಾಗಿರಬಹುದು - ಅದು ಬೆಳೆದು ನಿಲ್ಲಲು ಆಯಾ ಸಮಾಜದ ಬೆಂಬಲವಂತೂ ಖಂಡಿತ ಬೇಕೇ ಬೇಕು, ಜೊತೆಗೆ ಹೆಚ್ಚಿನವರು ನಿಯಮಗಳನ್ನು ಪಾಲಿಸುವವರಾಗಿದ್ದಾಗ ಮಾತ್ರ ಹಾಗೆ ಮಾಡದವರನ್ನು ಹುಡುಕಿ ತೆಗೆಯುವುದು ಸುಲಭವಾದೀತು. ಆದರೆ ಸಮಾಜದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರದ ಸುಳಿಗೆ ಸಿಲುಕುವವರು ಹೆಚ್ಚಿದ್ದಾಗ, ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ತಿಳುವಳಿಕೆಯೇ ಇಲ್ಲದವರಿದ್ದಾಗ ಹಾಗೂ ಅಂತಹವರನ್ನು ಶೋಷಿಸುವ ವ್ಯವಸ್ಥೆ ಇದ್ದಾಗ ಯಾವೊಂದು ಸಮಾಜ ತಾನೇ ಆರೋಗ್ಯಕರವಾಗಿರಬಲ್ಲದು?

ಭಾರತದಲ್ಲಿ ಮಾರಾಟ ಮಾಡುವ ಬೆಂಕಿ ಪೊಟ್ಟಣದಿಂದ ಹಿಡಿದು ಉಳಿದ ವಸ್ತುಗಳಿಗೂ ಮಾರಾಟ ತೆರಿಗೆಯನ್ನು ಸೇರಿಸಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೀವು ನೋಡಿರಬಹುದು. ಅಂಗಡಿಯಲ್ಲಿ ಕೊಂಡ ದಿನಸಿಯ ಚೀಟಿಯ ಕೊನೆಗೆ ನಾನಂತೂ ಟ್ಯಾಕ್ಸ್ ಕೊಟ್ಟಿದ್ದಿಲ್ಲ, ಇತ್ತೀಚೆಗೆ ಬಂದ ವ್ಯಾಟ್ (VAT) ಪದ್ಧತಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ/ಸುಂಕವನ್ನು ತೆಗೆದುಕೊಳ್ಳುತ್ತಿರಬಹುದಾದರೂ ಹೆಚ್ಚಿನ ವಸ್ತುಗಳು ನನಗೆ ಗೊತ್ತಿದ್ದ ಹಾಗೆ ’inclusive of all taxes' ಎಂದು ಹಣೆ ಪಟ್ಟಿಯನ್ನು ಹಚ್ಚಿಕೊಂಡದ್ದು ನನ್ನ ನೆನಪು. ಅಮೇರಿಕದ ರೆಸ್ಟೋರೆಂಟುಗಳಲ್ಲಿ ಕೆಲಸ ಮಾಡುವ ವೇಟರ್ (ಸರ್ವರ್)ಗಳಾಗಲೀ, ಇಲ್ಲಿನ ಟ್ಯಾಕ್ಸಿ ಚಾಲಕರಾಗಲೀ ತಾವು ಪಡೆಯುವ ಟಿಪ್ಸ್ ಅನ್ನೆಲ್ಲ ನಿಖರವಾಗಿ ಲೆಕ್ಕ ಹಿಡಿದು ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎಂದು ನಾನೇನೂ ನಂಬುವುದಿಲ್ಲ. ಹಾಗೇ ಭಾರದಲ್ಲಿನ ರಿಕ್ಷಾ ಡ್ರೈವರುಗಳೂ ಜನರಿಂದ ಪಡೆಯುವ ಮೀಟರ್ ಹಣದ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎನ್ನುವುದು ನಂಬಲು ಕಷ್ಟವಾದ ವಿಷಯವೇ. ಹಾಗಿದ್ದ ಮೇಲೆ ಈ ರೀತಿಯ ಕೆಲಸಗಾರರಿಂದ ಹಿಡಿದು ಮಹಾ ಉದ್ಯಮಿಗಳಿಗೆಲ್ಲ ಅನ್ವಯವಾಗುವಂತೆ ವ್ಯಾಟ್ ಒಂದನ್ನು ಜಾರಿಗೆ ತಂದು ಬಿಡಿ ಎನ್ನುವುದು ನಿಜವಾಗಿ ಕಷ್ಟದ ಮಾತೇ. ಒಂದು ವಸ್ತು ಹಂತಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ ಕೈಯಿಂದ ಕೈಗೆ ಸಾಗುವ ವ್ಯವಸ್ಥೆಯೇ ಬೇರೆ ಅಲ್ಲಿ ಹೊಂದುವ ಟ್ಯಾಕ್ಸ್ ಪರಿಭಾಷೆಯನ್ನು ಸಾಮಾನ್ಯ ಜನರಿಗೂ ಬಳಸಿ ಅಲ್ಲಿ ಗೆಲ್ಲುವ ಮಾತಾದರೂ ಎಲ್ಲಿ ಬರುತ್ತದೆ.

ಅಮೇರಿಕದಲ್ಲಿ ತಲೆಯಿಂದ ತಲೆಗೆ ಬರುವ ಆಸ್ತಿಗಳಿಗೂ ಅನ್ವಯವಾಗುವಂತೆ ಟ್ಯಾಕ್ಸ್ ಬಳಸುವ ವ್ಯವಸ್ಥೆ ಇದೆ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಂತಹವರಿಗೆ ಕಷ್ಟವಾಗಬಹುದು. ಒಂದು ತಲೆಯಿಂದ ಮತ್ತೊಂದು ತಲೆಗೆ ವ್ಯವಸ್ಥಿತವಾಗಿ ಹಂಚಿಹೋಗುವ ಆಸ್ತಿಗೆ ಮತ್ತೇಕೆ ಅವರು ಟ್ಯಾಕ್ಸ್ ಕೊಡಬೇಕು ಎನ್ನುವುದು ನನಗಂತೂ ಕಠಿಣವಾದ ಪ್ರಶ್ನೆಯೇ. ನಾವು ಬ್ಯಾಂಕಿನಲ್ಲಿಟ್ಟ ಹಣಕ್ಕೆ ವರ್ಷಕ್ಕೆ ಹತ್ತೇ ಹತ್ತು ಡಾಲರ್ ಬಡ್ಡಿ ಬಂದರೂ ಅದನ್ನು ನಮ್ಮ ಆದಾಯವೆಂದು ಪರಿಗಣಿಸಿ ಅದಕ್ಕೂ ತಕ್ಕದಾದ ಟ್ಯಾಕ್ಸ್ ವಸೂಲಿ ಮಾಡುವ ವ್ಯವಸ್ಥೆ ನನಗಂತೂ ಮೊದಲಿನಿಂದಲೂ ಇಷ್ಟವಾಗದ ವಿಚಾರವೇ. ಇಷ್ಟವೋ ಕಷ್ಟವೋ ಅದನ್ನು ನಿಖರವಾಗಿ ತೋರಿಸಿ ಅಷ್ಟರಮಟ್ಟಿಗೆ ಟ್ಯಾಕ್ ಕೊಟ್ಟು ಇರುವುದು ಕಷ್ಟವಾಗೇನೂ ಇಲ್ಲ. ಆದರೆ ನಮ್ಮಂತಹವರು ಈ ದೇಶದಿಂದ ಹೊರಕ್ಕೆ ಗಿಫ್ಟ್ ಆಗಿಯೋ ಮತ್ತೊಂದಕ್ಕೋ ಕಳಿಸುವ ಹಣವಿದೆಯೆಲ್ಲ ಅದನ್ನು ನಾವು ಯಾವುದೇ ರೀತಿಯಿಂದಲೂ ತೋರಿಸಲು ಸಾಧ್ಯವಾಗಿಲ್ಲ. ನೀವು ಇಷ್ಟೊಂದು ಹಣವನ್ನು ದುಡಿದಿದ್ದೀರಿ ಎನ್ನುವುದರ ಹಿಂದೆ ಎಷ್ಟೊಂದು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಳೆದುಕೊಂಡಿದ್ದೀರಿ ಎನ್ನುವುದು ನಿಜ, ಅದರ ಜೊತೆಗೆ ನೀವು ನಿಮಗೆ ಬೇಕಾದವರಿಗೆ ಕೊಡಬಹುದಾದ ಗಿಫ್ಟ್ ಭಾರತದಿಂದ ಹೊರಗಿದ್ದರೆ ಇಲ್ಲಿನ ಸರ್ಕಾರದವರಿಗೆ ಅದು ಲೆಕ್ಕಕ್ಕೆ ಸಿಗದ ಕಾರಣ ಅದನ್ನು ವೆಚ್ಚವಾಗಿ ಬಳಕೆಯಾಗಿ ನೋಡುತಾರೆಯೇ ವಿನಾ ಅದಕ್ಕೆ ತೆರಿಗೆ ವಿನಾಯಿತಿಯನ್ನು ಕೊಡಲು ಕಷ್ಟವಾದೀತು. ಒಟ್ಟಿನಲ್ಲಿ ಪೇ ಚೆಕ್ಕ್‌ನಿಂದ ಪೇ ಚೆಕ್ಕ್‌ಗೆ ಹೋಗುವ ವ್ಯವಸ್ಥೆಯಲ್ಲಿ ಉಳಿಸುವುದೇನಿದ್ದರೂ ಟ್ಯಾಕ್ಸ್ ಅನ್ನು ಕೊಟ್ಟಬಳಿಕವೇ ಎನ್ನುವುದು ನಿಜ, ನಿಮಗೆ ಬೇಕೋ ಬೇಡವೋ ಅಗತ್ಯವಾದ ಟ್ಯಾಕ್ಸ್ ಅನ್ನು ಮೊದಲೇ ಹಿಡಿದುಕೊಂಡಿರುವುದರಿಂದ ವರ್ಷದ ಕೊನೆಗೆ ನಾವು ನಾವು ಫೈಲ್ ಮಾಡಿ ಸರ್ಕಾರದಿಂದ ಹಣವೇನಾದರೂ ಹಿಂತಿರುಗಿ ಬರುತ್ತದೆಯೇನೋ ಎಂದು ಬಕಪಕ್ಷಿಯ ಹಾಗೆ ಕಾದುಕೊಂಡಿರುವುದು ತಪ್ಪೋದಂತೂ ಇಲ್ಲ.

Sunday, January 20, 2008

ಅಂತರಂಗ - ಮುನ್ನೂರು



’ಅಂತರಂಗ’ ಒಂದರಲ್ಲೇ ಮುನ್ನೂರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾಯಿತು, ಇನ್ನಾದರೂ ನನ್ನ ಹುಚ್ಚು ಆಲೋಚನೆಗಳಿಗೆ ಒಂದಿಷ್ಟು ಕಡಿವಾಣ ಬೀಳುತ್ತದೆಯೇನೋ ಎಂಬ ಆಶಯದಲ್ಲಿ ಈ ಹಿಂದೆಯೇ ಯೋಚಿಸಿಟ್ಟಂತೆ ಹೊಸವರ್ಷ ಆರಂಭವಾದಂದಿನಿಂದ ಕಾರಿನಲ್ಲಿ ರೆಡಿಯೋವನ್ನು ನಿಲ್ಲಿಸಿದ್ದಾಯಿತು. ಆದರೂ ಬರೆಯೋಕೇನು ಬೇಕಾದಷ್ಟು ವಿಷಯಗಳು ಇದ್ದೇ ಇವೆ, ಅದರ ಜೊತೆಗೆ ಕಾಕತಾಳೀಯ ಎಂಬಂತೆ ಜನವರಿ ೧೩ ರಂದು ಭೂಮಿಕಾದ ವೇದಿಕೆಯಲ್ಲಿ ಕನ್ನಡ ಬ್ಲಾಗ್‌ಗಳ ಬಗ್ಗೆ ಮಾತನಾಡಿದಂದಿನಿಂದ ದಟ್ಸ್‌ಕನ್ನಡ ಕೃಪೆಯಿಂದ ಬ್ಲಾಗಿಗೆ ಎಲ್ಲೆಲ್ಲಿಂದಲೋ ಓದುಗರು ಬಂದು ಹೋಗುತ್ತಿರುವುದನ್ನು ನೋಡೀ ನೋಡೀ ಏನಾದರೂ ಬರೆಯುವ ಹಂಬಲದ ಹಿಂದೆ ಬರೆಯುವ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿಕೊಳ್ಳುವಂತಾಗಿರೋದೂ ನಿಜವೇ ಹೌದು.

ನನ್ನ ಸ್ನೇಹಿತ ಹರೀಶ್ ಹೇಳೋ ಹಾಗೆ ಕ್ರಿಯಾಶೀಲತೆ ಬಹಳ ಮುಖ್ಯ, ಪ್ರತಿಯೊಬ್ಬರೂ ಅವರ ಜೀವನದ ಉತ್ತುಂಗದಲ್ಲಿ ಏನೇನೆಲ್ಲವನ್ನು ಮಾಡಬೇಕು ಎಂದು ಆಲೋಚಿಸಿಕೊಂಡರೂ ಅಂದುಕೊಂಡಿದ್ದನ್ನು ಮಾಡಿ ತೋರಿಸುವುದು ಇದೆ ನೋಡಿ ಅದು ಕಷ್ಟದ ಕೆಲಸ. ಜೀವನದ ಒಂದು ಘಟ್ಟದಲ್ಲಿ ಎಲ್ಲರೂ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಳ್ಳೋದು ಸಹಜವಿರಬಹುದು, ಆದರೆ ಒಂದು ಪುಸ್ತಕವನ್ನು ಬರೆಯುವುದಕ್ಕೆ ಹಂದರವನ್ನು ಆಲೋಚಿಸಿಕೊಂಡು ಅದನ್ನು ಒಂದು ರೂಪಕ್ಕೆ ತಂದು ತಿದ್ದಿ ತೀಡಿ ಪ್ರಕಟಿಸಿ ಜನರಿಗೆ ತಲುಪಿಸುವುದು ಒಂದು ದೊಡ್ಡ ಕಾಯಕವೇ ಸರಿ. ಅಂತಹ ತಪಸ್ಸಿಗೆ ಬಹಳಷ್ಟು ವ್ಯವಧಾನ ಬೇಕು, ಸಾಕಷ್ಟು ಬೇಸರವನ್ನು ಸಹಿಸಿಕೊಂಡು ಮೈ ಬಗ್ಗಿಸಿ ದುಡ್ಡಿಯುವ ಕೆಚ್ಚಿರಬೇಕು. ಆ ನಿಟ್ಟಿನಲ್ಲಿ ಹೇಳೋದಾದರೆ ಒಂದು ಕಾಲದಲ್ಲಿ ಯಾವುದಾದರೊಂದು ಸಣ್ಣ ಲೇಖನವನ್ನು ಬರೆಯಲು ಭೌತಿಕವಾಗಿ ಕೊಸರಾಡುತ್ತಿದ್ದ ನನಗೆ ಇಂದು ಇಷ್ಟೊಂದು ಬ್ಲಾಗ್‌ ಪರಿಧಿಯಲ್ಲಿ ಬರೆದು ಪ್ರಕಟಿಸಿದ ಮೇಲೆ ಕುಳಿತು ಬರೆಯುವುದು ಇನ್ನೂ ಸವಾಲಾಗೇನೂ ಉಳಿದಿಲ್ಲ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಆದರೆ, ಆ ಹೆಮ್ಮೆಯ ಹಿಂದೆ ಬೇಕಾದಷ್ಟು ಕ್ಷೋಭೆಗಳಿವೆ: ಮೊದಲೆಲ್ಲ ಗಹನವಾದದ್ದನ್ನೇನೋ ಬರೆಯುವಾಗ ಮೊದಲು ಪೇಪರಿನಲ್ಲಿ ಬರೆದುಕೊಂಡು ನಂತರ ಕಂಪ್ಯೂಟರಿನಲ್ಲಿ ಅಕ್ಷರ ಜೋಡಿಸಿಕೊಳ್ಳುತ್ತಿದ್ದವನಿಗೆ ಇಂದು ಏಕ್‌ದಂ ಕಂಪ್ಯೂಟರ್ ಮೇಲೇ ಬರೆಯುವುದಕ್ಕೆ ರೂಢಿಸಿಕೊಂಡಿರುವುದರ ಹಿಂದೆ ಕೀ ಬೋರ್ಡಿನ ವೇಗಕ್ಕೆ ಮನಸ್ಸು ಹೊಂದಿಕೊಂಡಿರುವುದನ್ನು ಗಮನಿಸಿ ಸಂಕಟವಾಗುತ್ತದೆ. ಬ್ಲಾಗ್ ಕೊಡುವ ಸ್ವಾತಂತ್ರ್ಯ ಡೆಸ್‌ಟಾಕ್ ಪಬಿಷಿಂಗ್ - ಅದೇ ಅದರ ಮಿತಿ ಕೂಡ, ಬರಹವನ್ನು ಯಾರಾದರೂ ತಿದ್ದಿ ಹೀಗಲ್ಲ ಹಾಗೆ ಎಂದು ಹೇಳುವುದನ್ನು ಮೀರಿ ಬೆಳೆದ ನನ್ನಂಥ ಬ್ಲಾಗ್ ಬರಹಗಾರರಿಗೆ ನಮ್ಮ ಮಿತಿಯನ್ನು ಕಂಡುಕೊಳ್ಳುವುದೂ ಅದನ್ನು ತಿದ್ದಿಕೊಂಡು ಬೆಳೆಯುವುದೂ ದೊಡ್ಡ ಸವಾಲು. ಜೊತೆಗೆ ಬ್ಲಾಗ್ ಒದಗಿಸುವ ಬ್ಲಾಗ್ ಪರಿಧಿಯಲ್ಲಿ ವಸ್ತು-ವಿಷಯಕ್ಕೆ ಆಧ್ಯತೆ ಕೊಡುವುದಕ್ಕಿಂತಲೂ ಅವರವರ ಅಭಿಪ್ರಾಯ ದೊಡ್ಡದಾಗುತ್ತದೆ, ನಮ್ಮ ಅನಿಸಿಕೆಗಳು ನಮ್ಮ ಇಂದಿನ ಪ್ರಬುದ್ಧತೆಯೇ ನಮ್ಮ ಮಿತಿಯಾಗದೆ ನಮ್ಮನ್ನು ಇದ್ದಲ್ಲೇ ನಿಲ್ಲಿಸದಿದ್ದರೆ ಸಾಕು.

ಪ್ರತಿಯೊಬ್ಬ ಬ್ಲಾಗಿಗನೂ ತಮ್ಮ ಬೆಳವಣಿಗೆಗೆ ತಾವು ಓದುವ ಇತರ ಬ್ಲಾಗುಗಳ ಜೊತೆಗೆ ಇತರ ಮಾಧ್ಯಮಗಳನ್ನು ಅನುಸರಿಸಿಕೊಂಡಿದ್ದರೆ ಪುಣ್ಯ. ಬ್ಲಾಗ್ ಒಂದು ಅಭಿವ್ಯಕ್ತಿ ಮಾಧ್ಯಮ, ಆದರೆ ಅದೇ ಕೊರತೆಯಾಗಬಾರದು. ಮುಂದಿನ ಬರಹಗಳಲ್ಲಾದರೂ ತಕ್ಕ ಮಟ್ಟಿನ ರೆಫೆರೆನ್ಸ್‌ಗಳನ್ನು ಒದಗಿಸಿಯೋ, ಅಂಕಿ-ಅಂಶಗಳನ್ನು ಬಳಸಿಯೋ, ಶಬ್ದ-ಚಿತ್ರ ಮುಂತಾದವುಗಳ ಮೂಲಕವೋ ಬೇರೆ ಬೇರೆ ನಿಲುವುಗಳನ್ನು ತೋರಿಸುವ ಪ್ರಯತ್ನವನ್ನು ಮಾಡಬಾರದೇಕೆ ಎಂದು ಅನ್ನಿಸಿದ್ದಿರ ಹಿನ್ನೆಲೆಯಲ್ಲಿ ಮನಸ್ಸಿನಲ್ಲಿ ಬರುವ ಚಿಂತನೆ/ಆಲೋಚನೆಯೊಂದಕ್ಕೆ ಭಿನ್ನವಾಗಿ ನೋಡುವ ದೃಷ್ಟಿಕೋನ ಬಂದರೆ ಒಳ್ಳೆಯದೇ. ಸರಿ-ತಪ್ಪು ಎನ್ನುವುದಕ್ಕಿಂತ ಒಂದು ವಿಷಯಕ್ಕಿರುವ ಹಲವಾರು ಮಜಲುಗಳನ್ನು ಶೋಧಿಸುವ ವ್ಯವಧಾನ ಸಿಕ್ಕರೆ ಅದು ನನ್ನ ದೊಡ್ಡಸ್ತಿಕೆಯಾಗಲಿ. ರಾಬರ್ಟ್ ಕಿಯೋಸಾಕಿ (Robert Kiyosaki) ರಿಚ್‌ಡ್ಯಾಡ್ ಪೂವರ್ ಡ್ಯಾಡ್‌ನಲ್ಲಿ ಹೇಳೋ ಹಾಗೆ ಬ್ಲಾಗ್ ಆಗಲಿ ಪುಸ್ತಕವಾಗಲೀ ಯಾವುದೇ ಮಾಧ್ಯಮಕ್ಕಾದರೂ ಬೆಸ್ಟ್ "ಸೆಲ್ಲರ್" ನಿಲುವು ಮುಖ್ಯವಾದುದು, ಬ್ಲಾಗ್ ಬರೆಯುವವನು ತಾನು ಎಷ್ಟು ಬೇಡವೆಂದರೂ ಬ್ಲಾಗ್ ಓದುವವರ ಬಗ್ಗೆ ಯೋಚಿಸಿಯೇ ಯೋಚಿಸುತ್ತಾನೆ, ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಬ್ಲಾಗ್ ಓದುಗರ ಆಶಯಕ್ಕೆ ಒತ್ತಾಸೆಯಾಗಬೇಕು. ಹೀಗೆ ಹೇಳೋದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ ಇಂದು ಎಷ್ಟೋ ಜನ ಬ್ಲಾಗ್ ಓದುವುದಕ್ಕೆ ಮಾತ್ರ ಸೀಮಿತವಾದರೆ ಎನ್ನುವ ಹೆದರಿಕೆ, ಎರಡನೆಯದಾಗಿ ಮುಂದಿನ ವರ್ಷಗಳಲ್ಲಿ ಬ್ಲಾಗ್ ಒಂದು ಸಾಹಿತ್ಯ ಪ್ರಕಾರವಾಗಿ ನಿಲ್ಲುವ ಭಯ. ಆದ್ದರಿಂದಲೇ ’ಬಾಯಿಗೆ ಬಂದಂತೆ ಬರೆಯುವ’ ಬ್ಲಾಗಿಗರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇಂಗ್ಲೀಷ್ ಬ್ಲಾಗುಗಳೋ ಹಲವಾರು ರೀತಿಯಲ್ಲಿ ಇವಾಲ್ವ್ ಆದವುಗಳು, ಆದರೆ ಮಿತಿಯಲ್ಲಿರುವ ಕನ್ನಡದ ಬ್ಲಾಗ್‌ಗಳಿಗೆ ಸೂಕ್ಷ್ಮವಾದ ಜವಾಬ್ದಾರಿ ಇದೆ ಎನ್ನುವುದು ನನ್ನ ಆಶಯ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು

***

ಕ್ಯಾಪಿಟಲಿಷ್ಟಿಕ್ ವ್ಯವಸ್ಥೆಯಲ್ಲಿ ದಿನವೂ ನೀರು ಕುಡಿಯುವ ನಮಗೆ ಬರುವ ಚಿಂತನಶೀಲ ವಿಷಯಗಳ ಹರಿವು ಒಂದೇ ಮಟ್ಟದ್ದೇ ಎಂದು ಹೇಳಬಹುದು. ನಾವು ಇಲ್ಲಿನ ಕಾರ್ಪೋರೇಟ್ ಏಣಿಯ ಮೆಟ್ಟಿಲುಗಳಲ್ಲಿ ನಿಂತು ಅಮೇರಿಕದ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೇವೆ ಎಂದುಕೊಂಡರೆ ಅದು ನಮ್ಮ ಭ್ರಮೆ. ನಮ್ಮ ಮ್ಯಾನೇಜುಮೆಂಟ್ ಕೆಲಸಗಳಲ್ಲಿ ಜನಸಾಮಾನ್ಯರ ಪರಿಚಯ ಪ್ರಭಾವ ಕಡಿಮೆಯೇ, ನಮ್ಮ ಪ್ರಭಾವಳಿಯ ತ್ರಿಜ್ಯ ಯಾವತ್ತೂ ಒಂದೇ ಮಟ್ಟದ್ದೇ, ಅಪರೂಪಕ್ಕೊಮ್ಮೆ ದೊಡ್ಡ ಮನುಷ್ಯರ ಮಾತಿನಿಂದ ಪ್ರಭಾವಿತಗೊಂಡ ನಮ್ಮ ನಿಲುವಿನ ಚೇತನಶೀಲತೆಯನ್ನು ಒರೆಹಚ್ಚಲು ಸಿಗುವ ಸಾಣೇಕಲ್ಲುಗಳೂ ನುಣುಪಾದವುಗಳೇ. ತಾಯ್ನಾಡನ್ನು ಬಿಟ್ಟು ಬಂದ ನಮ್ಮ ನಂಬಿಕೆ, ವಿಶ್ವಾಸ, ನೆನಪುಗಳು ನಿಧಾನವಾಗಿ ನಾಷ್ಟಾಲ್ಜಿಯಾದ ವ್ಯಾಖ್ಯಾನವನ್ನು ಹೋಲುತ್ತವೆಯೇನೋ ಎನ್ನುವ ಭಯದ ಜೊತೆಗೆ ವೇಗದಲ್ಲಿ ಬೆಳೆಯುತ್ತಿರುವ ನಮ್ಮೂರು-ದೇಶದಿಂದ ಭಿನ್ನವಾಗಿ ಬೆಳೆಯುತ್ತಿರುವ ನಮ್ಮ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಬೇಕಾದಷ್ಟು ಸಾರಿ ಪ್ರಶ್ನಿಸಿಕೊಳ್ಳುವ ಅಖಾಡದಲ್ಲಿ ಸೆಣೆಸುವುದು ದಿನನಿತ್ಯದ ಮಾತುಕಥೆಗಳಲ್ಲೊಂದು. ಎಲ್ಲಕ್ಕಿಂತ ಮುಖ್ಯವಾಗಿ ’ಇಲ್ಲಿಯೇ ಇದ್ದು ಇಲ್ಲಿಯವರಾಗುವ ಪ್ರಯತ್ನವನ್ನು ಇನ್ನು ಮುಂದೂ ಮಾಡುತ್ತಲೇ ಇರುತ್ತೀರೋ?’ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದಿರಲಿ, ಇನ್ನೂ ಪ್ರಶ್ನೆಯ ವಿಸ್ತಾರವನ್ನೇ ಅರ್ಥ ಮಾಡಿಕೊಳ್ಳದಿರುವ ಅಸಹಾಯಕತೆ ನಮ್ಮದು.

ಓಹ್, ಬರೆಯೋಕೇನು ಬೇಕಾದಷ್ಟಿದೆ - ನಿಲ್ಲಿಸೋ ಮಾತೇ ಇಲ್ಲ!

***

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದುತ್ತಿರುವವರೆಲ್ಲರಿಗೂ ನನ್ನ ನಮನಗಳು. ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

Thursday, January 17, 2008

ಕನ್ನಡ ಬ್ಲಾಗ್ ಮಂಡಲ - ಭಾಷಣದ ಅವತರಣಿಕೆ

ಬಹಳ ಜನರ ಬೇಡಿಕೆ ಮೇರೆಗೆ ದಟ್ಸ್‌ಕನ್ನಡ ವರದಿಯಲ್ಲಿ ಪ್ರಕಟವಾದಂತೆ ಭಾಷಣದ ಆಡಿಯೋ ಹಾಗೂ ಬ್ಲಾಗ್ ಲಿಸ್ಟ್ ಅನ್ನು ಇಲ್ಲಿ ಕೊಡಲಾಗಿದೆ:

ಸತೀಶ್ ಕುಮಾರ್ ಕಂಡಂತೆ ಕನ್ನಡ ಬ್ಲಾಗ್‌ಮಂಡಲ


ಜನವರಿ ೧೩ ರಂದು ಭೂಮಿಕಾದಲ್ಲಿ ನಡೆದ ಭಾಷಣದ ಅವತರಣಿಕೆಗೆ ಇಲ್ಲಿ ಕ್ಲಿಕ್ ಮಾಡಿ (~40 MB, WAV file)

ಜೊತೆಗೆ ಈ ಕೆಳಗಿನ ಫೈಲ್‌ನಲ್ಲಿ 50 ಬ್ಲಾಗ್‌ಗಳ ಪಟ್ಟಿಯನ್ನೂ ಇಲ್ಲಿ ಕೊಡಲಾಗಿದೆ.

***
ಮೊದಲು ಪ್ರಕಟಿಸಿದ್ದ ೩೯ ಬ್ಲಾಗ್‌ಗಳ ಪಟ್ಟಿಯನ್ನು ಬದಲಾಯಿಸಿ ೫೦ ಬ್ಲಾಗ್‌ಗಳಿರುವ ಈ ಹೊಸಪಟ್ಟಿಯನ್ನು ಫೆಬ್ರುವರಿ ೩ ರಂದು ಸೇರಿಸಿದ್ದೇನೆ.

Wednesday, January 16, 2008

ರಸ್ತೆಗಳೆಂಬ ಮಟ್ಟಗಾರರು

ಬಡವರೂ-ಬಲ್ಲಿದರೂ ಎಲ್ಲರೂ ಪ್ರಯಾಣ ಮಾಡೋ ದಾರಿ, ಮೆಟ್ಟಿ ಮುನ್ನಡೆಯುವ ನೆಲದ ಮೇಲಿನ ಡಾಂಬರಿನ ಹೊದಿಕೆ, ಅಥವಾ ನಾವುಗಳು ನಮ್ಮ ನಮ್ಮ ವಾಹನದ ಮೇಲೆ ಸವರಿಕೊಂಡು ಹೋಗುವ ಅಂಕುಡೊಂಕಾಗಿದ್ದೂ ಹಿಡಿದ ಗುರಿಯನ್ನು ತಲುಪಿಸುತ್ತೇವೆ ಎಂಬ ವಾಗ್ದಾನವನ್ನು ಎಂದೂ ನೀಡಿಕೊಂಡಿರುವ ಸಂಗಾತಿಗಳ ಮೇಲೆ ಇಂದು ಹೊಸದಾಗಿ ಯೋಚಿಸುವಂತಾಯ್ತು. ಪಂಚಭೂತಗಳಾಗಲೀ, ಸಾವಾಗಲೀ ಪ್ರತಿಯೊಂದು ಸಮುದಾಯಕ್ಕೆ ಒಂದು ಸಮಮಟ್ಟವನ್ನು ಕಾಯ್ದುಕೊಂಡು ಬಂದಿದ್ದರೆ ನಾವು ದಿನವೂ ಬಳಸುವ ರಸ್ತೆಗಳು ಮಹಾ ದೊಡ್ಡ ಮಟ್ಟಗಾರರು (ಲೆವೆಲರ್ಸ್) ಎಂದು ಈ ದಿನ ವಿಶೇಷವಾಗಿ ಅನ್ನಿಸಿದ್ದಂತೂ ನಿಜ.

ಸಂಜೆ ಸುಮಾರು ಆರು ಘಂಟೆಯ ಹೊತ್ತಿಗೆಲ್ಲಾ ಮಹಾ ಕತ್ತಲೆ ಆವರಿಸಿಕೊಂಡು ಎಲ್ಲಾ ಕಡೆ ಸೂರ್ಯನನ್ನು ಅಡಗಿಸಿ ಅಟ್ಟಹಾಸವನ್ನು ತೋರಿಸುತ್ತಿತ್ತು. ಅದರ ಜೊತೆಗೆ ಛಳಿ-ಗಾಳಿಯೂ ಸೇರಿಕೊಂಡು ನಾಳೆ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಎಂದು ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಸೊನ್ನೆಗಿಂತ ಕೆಳಗಿನ ಛಳಿಯಿಂದ ಒಂದು ಒಣ ವಾತಾವರಣ ಸೃಷ್ಟಿಯಾಗಿತ್ತು. ನಾನು ಅದೆಷ್ಟೋ ಕಾರುಗಳ ಹಿಂದೆ, ಒಂದೇ ಒಂದು ಲೇನ್ ಇರುವ ಯಾವುದೋ ಗ್ರಾಮೀಣ ರಸ್ತೆಯೊಂದರಲ್ಲಿ ತೆವಳುತ್ತಿದ್ದವನು ಯಾವುದೋ ತಿರುವೊಂದರಲ್ಲಿ ದೂರದವರೆಗೆ ದೃಷ್ಟಿ ಹಾಯಿಸಿದ್ದಕ್ಕೆ ಸುಮಾರು ದೂರದವರೆಗೆ ಮುಂದಿರುವ ಕಾರಿನ ಟೇಲ್‌ಲೈಟುಗಳು ಕಂಡುಬಂದವು. ಇಷ್ಟು ಹೊತ್ತಿಗೆ ಅಲ್ಲಲ್ಲಿ ಪೋಲೀಸರು ಇದ್ದು ಅತಿವೇಗದಲ್ಲಿ ಹೋಗುವವರನ್ನು ಗುರುತಿಸಿ ದಂಡವಿಧಿಸುವುದು ಈ ರಸ್ತೆಗಳಲ್ಲಿ ಮಾಮಾಲಿಯಂತೂ ಅಲ್ಲ, ಆದರೂ ಮುಂದಿನ ಕಾರುಗಳೆಲ್ಲ ರಸ್ತೆಯ ಸ್ಪೀಡ್‌ಲಿಮಿಟ್‌ಗಿಂತಲೂ ಕಡಿಮೆ ವೇಗದಲ್ಲೇ ಚಲಿಸುತ್ತಿದ್ದವು ಅಥವಾ ತೆವಳುತ್ತಿದ್ದವು ಎಂದೇ ಹೇಳಬೇಕು. ಕಾರಿನ ಸ್ಟೇರಿಂಗ್ ವ್ಹೀಲ್‌ನ ಹಿಂದಿರ ಬಹುದಾದ ಹಲವಾರು ಮನಸ್ಥಿತಿಗಳು ಕಣ್ಣ ಮುಂದೆ ಸುಳಿದು ಹೋದವು: ದೂರದ ಡೇ ಕೇರ್ ಸೆಂಟರುಗಳಲ್ಲಿ ಕಾದುಕೊಂಡಿರುವ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದಾದ ತಂದೆ-ತಾಯಿಯರಿದ್ದರಬಹುದು, ವಾರದ ಮತ್ತೊಂದು ದಿನದ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿರುವವರಿರಬಹುದು, ದೂರದ ಬಾರು-ರೆಸ್ಟೋರೆಂಟಿನಲ್ಲಿ ಕಾದುಕೊಂಡಿರುವ ಪ್ರೇಮಿಯನ್ನು ಭೇಟಿ ಮಾಡುವ ತವಕದವರಿದ್ದಿರಬಹುದು, ಇಂದಿನ ಹಾಗೇ ನಾಳೆ ಎಂದು ಲೆಕ್ಕ ಹಾಕಿಕೊಂಡು ಅಗತ್ಯ ವಸ್ತುಗಳ ಶಾಪ್ಪಿಂಗ್‌ಗೆ ಹೋಗುತ್ತಿರುವ ವೃದ್ಧರಿರಬಹುದು, ಹೀಗೆ ಅನೇಕಾನೇಕ ಮುಖಗಳು ಮನಸ್ಥಿತಿಗಳು ಕಣ್ಣ ಮುಂದೆ ಹಾದು ಹೋದವು. ಇವೆಲ್ಲಕ್ಕೂ ಇಂಬುಕೊಡುವ ಹಾಗೆ ಘಂಟೆಗೆ ನಲವತ್ತೈದು ಮೈಲು ವೇಗದ ಮಿತಿಯಲ್ಲಿನ ರಸ್ತೆಯಲ್ಲಿ ಇಪ್ಪತ್ತೈದಕ್ಕಿಂತಲೂ ಕಡಿಮೆ ವೇಗದಲ್ಲಿ ತೆವಳುತ್ತಿರುವ ನನ್ನ ಹಿಂದುಮುಂದಿನ ವಾಹನಗಳ ಸಾಲು ಅದ್ಯಾವುದೋ ಯುದ್ಧಭೂಮಿಯಲ್ಲಿ ಸಾವರಿಸಿಕೊಂಡು ಹೋಗುತ್ತಿರುವ ಕಾನ್‌ವಾಯ್‌ಯಂತೆ ಕಂಡುಬಂತು. ಈ ಆಮೆ ವೇಗಕ್ಕೆಲ್ಲಾ ಕಾರಣ ಒಬ್ಬನೇ, ಅದೇ ಮುಂದಿನ ವ್ಯಕ್ತಿ, ಎಲ್ಲರಿಗಿಂತ ಮೊದಲು ಈ ಸಾಲಿನಲ್ಲಿ ತೆವಳಿಕೊಂಡು ಹೋಗುತ್ತಿರುವವನು/ಳು. ಛೇ, ಇಂಥ ಒಬ್ಬ ನಿಧಾನವಾದ ಡ್ರೈವರಿನಿಂದ ಎಷ್ಟೊಂದು ಜನರು ಹೀಗೆ ತೆವಳಬೇಕಾಯಿತಲ್ಲ ಎಂದು ಒಮ್ಮೆಲೇ ಕೋಪ ಬಂತು, ಆ ಕೋಪದ ಬೆನ್ನ ಹಿಂದೆ, ಆ ಮುಂದಿನ ವ್ಯಕ್ತಿಯೇ ನಮ್ಮ ನಾಯಕ (ಲೀಡರ್), ಅವನ/ಳ ವೇಗವೇ ನಮಗೆಲ್ಲರಿಗೂ ಮಾದರಿ, ನಾವು ಹಿಡಿದ ದಾರಿ ಒಂದೇ ಒಂದು ಲೇನ್ ಇರುವ ವ್ಯವಸ್ಥೆ ಆದ್ದರಿಂದ ಇನ್ನು ಮುಂದೆ ಅದೆಷ್ಟೋ ದೂರದವರೆಗೆ ಈ ನಿಧಾನವಾದ ವ್ಯಕ್ತಿಯನ್ನು ಅನುಸರಿಸಿಕೊಂಡಿರಬೇಕಲ್ಲ, ಆ ವ್ಯಕ್ತಿ ಯಾರೂ ಏನೂ ಎನ್ನುವುದು ಗೊತ್ತಿರದಿದ್ದರೂ ಆ ಲೀಡರ್‌ಶಿಪ್‌ನಿಂದ ಎಷ್ಟೊಂದು ಜನರಿಗೆ ಅದೇನೇನೋ ಪರಿಣಾಮ ಬೀರುತ್ತಲ್ಲಾ ಎನ್ನಿಸಿ ಸದಾ ವೇಗಕ್ಕೆ ಹೊಂದಿಕೊಂಡ ನನ್ನ ವಸಡುಗಳು ಯೋಚನೆಯ ಭಾರಕ್ಕೆ ಕುಸಿದು ಹೋದವು.

ಒಬ್ಬ ನಾಯಕನಿಗೆ ವೇಗವೆನ್ನುವುದು ಇರಲೇ ಬೇಕೆಂದೇನೂ ಇಲ್ಲ. ಪ್ರಪಂಚದ ಅದೆಷ್ಟೋ ದೇಶದ ನಾಯಕರುಗಳು ಸ್ಲೋ, ಅನೇಕ ಕಂಪನಿಯ ಲೀಡರುಗಳು ಟೈಪ್-ಬಿ ವ್ಯಕ್ತಿತ್ವದವರೇ ಸರಿ. ವೇಗವಾಗಿ ಹೋಗುವ ರಸ್ತೆಗಳಿದ್ದೂ ಅನುಕೂಲಗಳಿದ್ದೂ ಎಲ್ಲರಿಗಿಂತ ಮುಂದಿನ ವ್ಯಕ್ತಿ ನಿಧಾನವಾಗಿ ಹೋಗುತ್ತಿರುವ ಕಾರಣಕ್ಕೆ ಎಷ್ಟೊಂದು ಜನರ ಮೇಲೆ ಅದೇನೇನು ಪರಿಣಾಮಗಳು ಬೀರುತ್ತವೆ ಎಂದು ಒಮ್ಮೆ ಯೋಚಿಸಿಕೊಂಡೆ. ಯಾವುದು ಸಾಮಾನ್ಯ ಸಂಜೆಯಾಗಿ ಪರಿವರ್ತನೆಗೊಂಡು ಎಲ್ಲವೂ ಸುಗಮವಾಗಿ ನಡೆಯಬೇಕಿತ್ತೋ ಅಲ್ಲಿ ನಿಮಿಷ-ನಿಮಿಷಗಳನ್ನು ಆಧರಿಸಿಕೊಂಡಿರುವ ಎಷ್ಟೋ ಜನರಿಗೆ ವಿಳಂಬವಾಗಿ ಹೋಗಬಹುದು. ಒಮ್ಮೆ ವಿಳಂಬಗೊಂಡವರು ಗಲಿಬಿಲಿಯಿಂದ ಹೆಚ್ಚಿನ ವೇಗದಲ್ಲಿ ಓಡಿಸಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಅಪಾರವಾದ ಸಮಯವಿದೆ ಎನ್ನುವ ಮಹಾಕಾಲದ ಮುಂದೆಯೂ ನಾವು ದಿನ, ಘಂಟೆ, ನಿಮಿಷ, ಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ನಾವೇ ಸೃಷ್ಟಿಸಿಕೊಂಡಿರುವ ಗಡಿಯಾರವನ್ನಾಧರಿಸಿದ ವ್ಯವಸ್ಥೆಯಲ್ಲಿ ಅದೇನೇನು ಅವಾಂತರಗಳಾಗಬೇಡ. ಈಗಿನ ನಾಯಕ ಅಥವಾ ಮುಂದಾಳು ಬದಲಾಗುವವರೆಗೆ ಹಿಂದಿನವರು ಸಂಯಮದಿಂದ ಕಾಯಬೇಕೇ ಅಥವಾ ಈ ಮುಂದಾಳು ಬದಲಾಗಿ ಮತ್ತೊಬ್ಬ ಬಂದು ನಮ್ಮೆಲ್ಲರ ವೇಗದ ಗತಿಯ ನಿಧಾನವಾದ ಬದಲಾವಣೆಯ ಬಗ್ಗೆ ಚಿಂತಿಸಬೇಕೇ ಅಥವಾ ನಾವೇ ಮತ್ಯಾವುದೋ ಹೊಸ ರಸ್ತೆಯೊಂದನ್ನು ಹಿಡಿದು ನಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಳ್ಳಬೇಕೆ? ಒಂದು ವೇಳೆ ಹಾಗೆ ಮಾಡಿದರೂ ಈ ರಸ್ತೆಗಳೆಂಬ ಮಟ್ಟಗಾರರೂ ಎಲ್ಲಿಯೂ ಎಲ್ಲಕಡೆಯೂ ಇರಬಹುದಲ್ಲವೇ? ಈ ಮುಂದಾಳುವನ್ನು ತೊರೆದು ಹೋದ ಮಟ್ಟಿಗೆ ಮತ್ತೊಬ್ಬ ಮುಂದಾಳು ಸಿಗುವವ ಹೇಗಿರುತ್ತಾನೋ ಏನೋ? ರಾಬರ್ಟ್ ಪ್ರಾಸ್ಟ್‌ನ ಕಾಲದ ಕಡಿಮೆ ಜನರು ಸಂಚರಿಸಿದ ಮಾರ್ಗಗಳು ಇನ್ನೂ ಇವೆಯೇ ಎಂದು ಬೇಕಾದಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.

ರಸ್ತೆ ಎನ್ನುವುದು ಕೇವಲ ನಡೆದಾಡುವ ಹಾದಿ, ಹೆಚ್ಚು ಜನರು ಬಳಸುವ ವ್ಯವಸ್ಥೆ ಎಂದು ದೊಡ್ಡ ವ್ಯಾಖ್ಯಾನವನ್ನೇನೋ ಮಾಡಬಹುದು ಆದರೆ ಪ್ರತಿಯೊಬ್ಬರನ್ನೂ ಒಂದೇ ಮಟ್ಟಕ್ಕೆ ಎಳೆದು ತರುವ ಈ ಅವತರಣಿಕೆಯನ್ನು ಒಂದು ತತ್ವವನ್ನಾಗಿ ಅಥವಾ ಸಾಧನವನ್ನಾಗಿ ನೋಡಿದ್ದು ನಾನು ಇದೇ ಮೊದಲು. ಭೂಮಿಯ ಮೇಲಿನ ರಸ್ತೆಗಳು ಹಾಗೆಯೇ ಹೆಚ್ಚು ಜನರು ಬಳಸುವಲ್ಲಿ ಸಹಾಯವಾಗುವಂತೆ ಕಡಿಮೆ ಜನರು, ಮುತ್ಸದ್ದಿಗಳು, ಚಿಂತಕರು ಮೊದಲೇ ಯೋಚಿಸಿ ರೂಪಿಸಿರುವ ವ್ಯವಸ್ಥೆ. ನನ್ನ ಭೌತಿಕ ಅಸ್ತಿತ್ವದ ಮೊದಲೂ ನಂತರವೂ ನಾವು ಇರುತ್ತೇವೆ ಎಂಬ ಹಣೆಪಟ್ಟಿಯನ್ನು ಬರೆಸಿಕೊಂಡೇ ಹುಟ್ಟಿವೆ ಈ ಮಟ್ಟಗಾರರು. ಭೂಮಿಯ ಮೇಲಿನ ರಸ್ತೆಗಳನ್ನು ಒಮ್ಮೆ ತೋಡಿಕೊಂಡರೆ ಮತ್ತೆ ಮತ್ತೆ ಅದೇ ವ್ಯವಸ್ಥೆಗೆ ಬರುವಂತೆ ಮಾಡುವ ಕಟ್ಟಿ ಹಾಕುವ ನೆರೆಹೊರೆಗಳಿವೆ, ಅದೇ ನೀರಿನ ಮೇಲಾಗಲೀ ಗಾಳಿಯಲ್ಲಾಗಲೀ ತೇಲುವವರಿಗೆ ಈ ಜಿಜ್ಞಾಸೆಗಳಿರಲಿಕ್ಕಿಲ್ಲ. ಈ ಮಟ್ಟಗಾರ ರಸ್ತೆಗಳು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ ಎಂದು ಬೀಗುವುದನ್ನು ನೀವು ಗಮನಿಸಿರಬಹುದು, ಭೋಗೋಳದಲ್ಲಿ ಅಪರಿಮಿತವಾಗಿ ಗಾಳಿ-ನೀರಿದ್ದರೂ ನಾವು ಹೆಚ್ಚು ಹೆಚ್ಚು ಆಧರಿಸಿಕೊಂಡಿರುವುದು ನೆಲವನ್ನೇ. ಅದ್ಯಾವುದೋ ಸೈನ್ಸ್‌ಫಿಕ್ಷನ್ನ್ ಸಿನಿಮಾಗಳಲ್ಲಿ ತೋರಿಸೋ ಹಾಗೆ ನಾವೂ ಏಕೆ ಸ್ವತಂತ್ರರಾಗಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷದಲ್ಲಿ ತೇಲಬಾರದು? ನಮ್ಮ ಗುರಿಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ನಮ್ಮ ನಮ್ಮ ದೂರಕ್ಕೆ ತಂತ್ರಕ್ಕೆ ಆಲೋಚನೆಗಳಿಗೆ ನಾವು ನಾವೇ ಏಕೆ ನಾಯಕರಾಗಬಾರದು? ಯಾರೊಬ್ಬರ ಹಿಂದೂ ಇಲ್ಲದೇ, ಯಾರ ಮುಂದೆ ತೆವಳಿಕೊಂಡು ಹೋಗಬಹುದಾದ ಹಂಗೂ ಇಲ್ಲದೇ ಪ್ರತಿಯೊಂದು ಸಾರಿ ತೇಲುವಾಗಲೂ ನಮ್ಮ ದಾರಿಯನ್ನು ನಾವೇ ಏಕೆ ಕೊರೆದುಕೊಳ್ಳುವ ಮುಂದಾಳುಗಳಾಗಬಾರದು? ಕಡಿಮೆ ಭೂಮಿಯಲ್ಲಿ ಹೆಚ್ಚು ಹೆಚ್ಚು ಜನರು ಕೊರೆದು ಅದೆಲ್ಲಿಂದ ಅದೆಲ್ಲಿಗೋ ಹೋಗುವ ನಿರ್ಣಾಯಕ ರಸ್ತೆಗಳನ್ನು ನಿರ್ಮಿಸಿದಂತೆಲ್ಲಾ ಇವುಗಳು ಹಠ ಮಾಡುವ ಮಕ್ಕಳಿಗೆ ಒಂದೇ ಒಂದು ಆಪ್ಷನ್ನನ್ನು ಕೊಡುವ ಪೋಷಕರ ಹಾಗೆ ಯಾವತ್ತೋ ಅದೇ ಹಾಡನ್ನು ಹಾಡಿಕೊಂಡಿರುವ ಮಟ್ಟಗಾರರಾಗುವುದೇಕೆ? ಯಾವನೋ ಒಬ್ಬ ತನ್ನ ಗೌಜು-ಗದ್ದಲಗಳ ನಡುವೆ ನಿಧಾನವಾಗಿ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ಉಳಿದವರು ಅವನ ಮುಂದಾಳುತನವನ್ನಾಗಲೀ, ನಾಯಕತ್ವವನ್ನಾಗಲೀ ಅದೇಕೆ ಒಪ್ಪಿಕೊಳ್ಳಬೇಕು? ಒಮ್ಮೆ ಸರತಿ ಸಾಲಿನಲ್ಲಿ ಸಿಕ್ಕಿಕೊಂಡಾಕ್ಷಣ ಅದರಿಂದ ಮುಕ್ತಿಯೆಂಬುದೇ ಇಲ್ಲವೇನು?

Sunday, January 13, 2008

ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ

ಸದಾ ಗಿಜಿಗುಡುತ್ತಿರೋ ರಸ್ತೇ ಮೇಲೆ ಒಂದಲ್ಲ ಒಂದು ವಾಹನ ಹೋಗ್ತಲೇ ಇರುತ್ತೆ, ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್‌ಶೀಲ್ಡ್ ಮೂಲಕ ಮುಂದೆ ಹೋಗೋ ವಾಹನವನ್ನ ಹಿಂಬಾಲಿಸಿಕೊಂಡು ಹೋಗೋದು ಸುಲಭ ಅನ್ಸುತ್ತೆ. ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತೆ. ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ತಾನೇ ಇರುತ್ವೆ, ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವ ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತೆ.

ಹೀಗೆ ಪ್ರಯಾಣದ ಹಳೆಯ ಹೊಸ ಮುಖಗಳು ಮನಸ್ಸಿಗೆ ಬಂದದ್ದು ಈ ಒಂದು ವಾರದಲ್ಲಿ ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತಾ ಇರುತ್ತೆ ಅನ್ನೋದು ನನ್ನ ಭಾವನೆ. ಆದ್ರಿಂದ್ಲೇ ಪ್ರಯಾಣ ಅನ್ನೋದು ನಮ್ಮೊಳಗಿರೋ ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸೋದಕ್ಕೆ ನಾವು ಕಲ್ಪಿಸಿಕೊಡೋ ಒಂದು ಅವಕಾಶ ಅನ್ನೋದು ನನ್ನ ವಾದ. ನಾವು ಕ್ರಮಿಸೋ ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ನೋದು, ನಮ್ಮ ಜೊತೆ ಯಾರು ಯಾರು ಇದ್ದಾರೆ ಇರೋಲ್ಲ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನೋದು ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ ನೀವು ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗೋದ್ರಲ್ಲಿ ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸೋದಕ್ಕೆ ಬೇಕಾದಷ್ಟು ಆಸ್ಪದ ಸಿಕ್ಕು ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರ್ತೀನಿ ಅನ್ನೋದು ನಿಜ.

ಧ್ಯಾನದ ಹಲವಾರು ವಿಧಾನಗಳಲ್ಲಿ ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳೋದಕ್ಕೆ ಸಹಾಯ ಮಾಡುವ ಪ್ರಯಾಣವೂ ಒಂದು. ಸೆಲ್ಫ್ ಆಕ್ಚುವಲೈಜೇಷನ್ನಿಗೆ ಬೇಕಾದಷ್ಟು ಒತ್ತುಕೊಟ್ಟು ಎಷ್ಟೋ ಪುಸ್ತಕಗಳನ್ನು ಹೊರತಂದಿದ್ದಾರೆ. ಆದರೆ ಒಂದು ಪ್ರಯಾಣದ ನಡುವೆಯೂ ನಮಗೆ ನಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಸಹಾಯವಾಗುತ್ತಾ ಅನ್ನೋದು ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ಉದಾಹರಣೆಗೆ, ನಿಮ್ಮ ಎದಿರು ಮುಕ್ತವಾಗಿ ತೆರೆದ ರಸ್ತೆಯ ಲೇನ್‌ಗಳು ಅದೇನೇ ಇದ್ದರೂ ನೀವು ಯಾವುದೋ ಒಂದು ಗತಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತಿರುವ ವಾಹನದಿಂದ ಇಂತಿಷ್ಟೇ ದೂರದಲ್ಲಿದ್ದುಕೊಂಡು ಸುರಕ್ಷಿತವಾಗಿ ಗಾಡಿಯನ್ನು ಚಲಾಯಿಸಿಕೊಂಡಿರುತ್ತೀರಿ ನೋಡಿ ಆ ಸಂದರ್ಭದಲ್ಲಿ ಬೇಕಾದಷ್ಟು ನಿರ್ಣಯಗಳನ್ನು ಪುನರ್‌ವಿಮರ್ಶಿಸಿಕೊಳ್ಳುವ ನಿಮ್ಮ ಮನಸ್ಸು ಸುಲಭವಾದ ಮಾರ್ಗವನ್ನೇ ಹುಡುಕಿಕೊಂಡಿರುತ್ತದೆ. ನಿಮ್ಮ ಜೊತೆ ಸ್ಪರ್ಧೆಯಲ್ಲಿ ತೊಡಗುವ ಅಕ್ಕ ಪಕ್ಕದ ಡ್ರೈವರುಗಳು ನಿಮ್ಮ ತಾಳ್ಮೆಯನ್ನು ಕೆದಕಬಹುದು, ನಿಮ್ಮನ್ನೇ ಹಿಂಬಾಲಿಸಿಕೊಂಡೇ ಸಾಕಷ್ಟು ದೂರವನ್ನು ಕ್ರಮಿಸುವ ಇತರ ಡ್ರೈವರುಗಳು ನಿಮ್ಮಲ್ಲಿ ಸಂಶಯವನ್ನು ಹುಟ್ಟಿಸಬಹುದು. ನೀವು ಪದೇಪದೇ ಲೇನ್ ಬದಲಾಯಿಸಿಕೊಂಡು ವ್ಯಸ್ತರಾಗಿ ಹೋಗುತ್ತೀರೋ ಅಥವಾ ದೂರಕ್ಕೆ ಹೋಗೋದು ಇದ್ದೇ ಇದೆ ಎಂದು ಸಮಾಧಾನ ಚಿತ್ತರಾಗಿರುತ್ತೀರೋ ಎನ್ನುವುದೂ ನಿಮಗೇ ಬಿಟ್ಟಿದ್ದು. ಹೀಗೆ ಹಲವಾರು ತೆರೆದ ಆಪ್ಷನ್ನುಗಳ ನಡುವೆ ಅವರವರು ತಮ್ಮದೇ ಆದ ದಾರಿ ಗತಿ ರೀತಿಯನ್ನು ಆಧರಿಸಿ ಅದನ್ನು ಪಾಲಿಸುತ್ತಾರೆ ಅನ್ನೋದರಲ್ಲೇ ಬದುಕಿನ ಒಂದು ಮುಖವಿದೆ. ಆ ಮುಖದ ದರ್ಶನವನ್ನೇ ನಾನು ಸೆಲ್ಫ್ ಆಕ್ಚವಲೈಜೇಷನ್ನಿಗೆ ಹೋಲಿಸಿ ಹೇಳಿದ್ದು.

ಪ್ರಯಾಣ ಒಳ್ಳೆಯದು, ನಿಂತಲ್ಲೇ ನಿಂತ ಹಾಗಿರುವುದಕ್ಕಿಂತ ಯಾವಾಗಲೂ ಓಡುತ್ತಿರುವುದು ಆ ಮಟ್ಟಿಗೆ ಮನಸ್ಸಿಗೆ ಮುದ ನೀಡುತ್ತದೆ, ಬೇಕಾದಷ್ಟು ಹೊಸತನ್ನು ತೋರಿಸುತ್ತದೆ. ಅನೇಕ ಸವಾಲುಗಳನ್ನು ಎದುರಿಸಿಕೊಂಡು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತದೆ. ಪ್ರಯಾಣ ಗೋಳದ ಮೇಲಿನ ಸುತ್ತಿನಿಂದ ಹಿಡಿದು ನಾವು ದಿನ ನಿತ್ಯ ಅಲ್ಲಿಂದಿಲ್ಲಿಗೆ ಹೋಗಿ ಬರುವ ಸಣ್ಣ ಕಾಯಕವಿರಬಹುದು, ಆದರೆ ಅದರ ಆಳ ದೊಡ್ಡದು. ಅಲ್ಲಿಂದಿಲ್ಲಿಗೆ ಹೋಗಬೇಕು ಎನ್ನೋ ಉದ್ದೇಶಪೂರ್ವಕ ಪ್ರಯಾಣವಿದ್ದಿರಬಹುದು, ಸಮಯವಿದೆ ಹೀಗೇ ಸುತ್ತಿ ಬರೋಣ ಎನ್ನುವ ಅಭಿಯಾನವಿರಬಹುದು - ನಾವು ಬೆಳೆಸುವ ಹಾದಿ ಚಿಕ್ಕದೋ ದೊಡ್ಡದೋ ನಮ್ಮ ಪ್ರಯಾಣದಲ್ಲಿ ಯಾರು ಯಾರು ಸಿಗುತ್ತಾರೋ ಬಿಡುತ್ತಾರೋ, ಪ್ರತಿಯೊಬ್ಬರೂ ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ, ಎಲ್ಲರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಲೇ ಇರಲಿ!

***

ಕಳೆದೆರಡು ವಾರಗಳಲ್ಲಿ ನಾರ್ಥ್ ಕ್ಯಾರೋಲೈನಾದಿಂದ ನ್ಯೂ ಜೆರ್ಸಿಗೆ ಡ್ರೈವ್ ಮಾಡಿಕೊಂಡು ಹೋಗಿ ಬಂದಾಗ ಪ್ರಯಾಣದ ಬಗ್ಗೆ ಆಲೋಚಿಸಿಕೊಂಡು ಬರೆದ ಲೇಖನ.

Sunday, January 06, 2008

ಪರಿಸ್ಥಿತಿಯ ಕೈ ಗೊಂಬೆ

ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.

***

ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್‌ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.

ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.

ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

***

೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.

ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.

***

ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್‌ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?

Wednesday, January 02, 2008

ಹಾಡಿನ ಸವಾಲ್

ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.

’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.

ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?

ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.

’ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು’


ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.

ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?

ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.

ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.

ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.

***

Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.

ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.

***

ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.

ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!