Friday, November 21, 2008

ದೇವ್ರು ಇಲ್ಲಾ ಅಂತ ಅಂದೋರು ಯಾರು

ನಾವೆಲ್ಲಾ ಚಿಕ್ಕವರಿದ್ದಾಗ ದೇವ್ರು-ದೆವ್ವಗಳು ಇದ್ದಾವೋ ಇಲ್ಲವೋ ಅಂತ ಚಿಂತೆ-ಚಿಂತನೆ ನಡ್ಸಿ ನಡ್ಸಿ ಬಹಳ ಟೈಮು ಕಳೀತಿದ್ವಿ, ನಮ್ಮ ನಮ್ಮ ಮಟ್ಟಿನ ತತ್ವಗಳು ತರ್ಕಗಳು ನಮ್ಮನ್ನು ವಾದ-ವಿವಾದಗಳಲ್ಲಿ ತೊಡಗಿಸಿ ಕೆಲವೊಂದು ಕಥೆಗಳನ್ನು ಬಹಳ ರೋಚಕಗೊಳಿಸಿ (ಅಂದ್ರೆ ಮಸಾಲೆ ಸೇರಿಸಿ) ಹೇಳಿ ಹಂಚಿಕೊಳ್ಳುತ್ತಿದ್ದೆವು. ಪ್ರಪಂಚದಲ್ಲಿ ಇದ್ದ ಇಲ್ಲದ ದೆವ್ವ ಭೂತಗಳು, ಕೊಳ್ಳಿ ದೆವ್ವಗಳು ಇವೆಲ್ಲಾ ನಮ್ಮ ತಂಡದ ಅನುಪಸ್ಥಿತ ಸದಸ್ಯರಾಗಿದ್ದವು. ನಮ್ಮ ನಮ್ಮ ದೇವರುಗಳ ಜೊತೆಗೆ ನಮ್ಮೂರಿನ ಶ್ಮಶಾನದಲ್ಲಿದ್ದ ದೆವ್ವಗಳು ಹಾಗೂ ಅವುಗಳ ಕಥೆಗಳು ನಮ್ಮ ಜೊತೆಗೆ ಅಮೇರಿಕಕ್ಕೆ ಹೇಗೆ ಬಂದ್ವು, ಅವುಗಳಿಗೆ ವೀಸಾ ಕೊಟ್ಟೋರು ಯಾರು ಅನ್ನೋ ಪ್ರಶ್ನೆಗಳು ಇನ್ನು ಪ್ರಶ್ನೆಗಳಾಗೇ ಉಳಿದಿವೆ ಬಿಡಿ.

ಈ ತಣ್ಣನೆ ಹೊತ್ತಿನಲ್ಲಿ ದೇವ್ರ ಬಗ್ಗೆ ನೆನೆಸಿಕೊಳ್ಳೋದಕ್ಕೆ ಏನು ಕಾರಣ ಅಂತ ನನಗೇ ಅನ್ಸಿ ಒಂದು ನಗು ಹೊರಗೆ ಬಂತು, ಅದರ ಹಿಂದೇನೇ ದೇವ್ರ ಹೆಸರನ್ನ ಹಿಡಿದು ಒಂದಿಷ್ಟು ಕೀಟಲೆ ಮಾಡೋಣ ಅಂತ್ಲೂ ಅಂದುಕೊಂಡೆ, after all ಯಾವ ದೇವ್ರ ತಂಡವೂ ನಮ್ಮನ್ನೇನು sue ಮಾಡೋಲ್ಲ ಅಲ್ವೇ?

***

Thanks to my three year old - ಪ್ರತಿಯೊಂದು ಆಲ್ಟರ್‌ನೇಟ್ ಪದ ಇಂಚರಳ ಬಾಯಿಯಿಂದ ಹೊರಡೋದು "Why?" (but why, ಮತ್ತೆ ಅದಕ್ಕೆ ಅಮೇರಿಕನ್ ಆಕ್ಸೆಂಟಿನ ಟಚ್ ಜೊತೆ ಹಲವಾರು ವೇರಿಯೇಷನ್ನುಗಳೂ ಇವೆ!). ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋ ಹಿನ್ನೆಲೆ ಅಥವಾ ನೆಪದಲ್ಲಿ ಈ ಕೆಳಗಿನ ಪ್ರಶ್ನೆಗಳು ಅಷ್ಟೇ...(ತಮಾಷೆಗೆಂದು)

- ದೇವ್ರು ಬ್ಲಾಕೋ ವೈಟೋ ಅಥವಾ ಮಿಕ್ಸೋ? ಅಥ್ವಾ ಕಲರ್ಡ್ ಸ್ಕಿನ್ನೋ? ಹೌದೌದು, ರಾಮ-ಕೃಷ್ಣರ ಚಿತ್ರಗಳನ್ನು ನೋಡಿ ಸ್ವಲ್ಪ ನೀಲಿಯಾಗಿರುತ್ವೆ, ಶಿವನ ಕಂಠವೂ ಕೂಡಾ ನೀಲಿ.
- ಈ ಬ್ರಹ್ಮನ ತಲೆ ಕೂದಲನ್ನು ಕತ್ತರಿಸೋ ಪ್ರವೀಣ ಕಲಾವಿದ ಯಾರು? ಆ ನಾಲ್ಕು ತಲೆಗಳ ನಡುವೆ ಅವನ ಕತ್ತರಿ ಹೇಗೆ ಸಲೀಸಾಗಿ ಹರಿದಾಡುತ್ತೆ? ಯಾವ ಬಾಯಿಯಿಂದ ಹರಿಯೋ ಸಂವಾದಕ್ಕೆ ಆ ನಾಪಿತ ಯಾವ ಉತ್ತರ ಕೊಡ್ತಾನೆ?
- ಈ ನಾಲ್ಕು ಕೈ ಇರೋ ದೇವತೆಗಳಿಗೆ ಬಟ್ಟೆ ಹೊಲಿದು ಕೊಡೋರು (ಅಂದ್ರೆ ಡಿಸೈನರ್ಸ್) ಯಾರು?
- ಹತ್ತು ತಲೆ ಇರೋ ರಾವಣ ಯಾವ ಬಾಯಲ್ಲಿ ಅನ್ನಾ ಹಾಕ್ತಿದ್ದ?
- ಶಂಕರ ಕೋಪದಲ್ಲಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದ (why?), ಭಂಟರು ಹೋಗಿ ಉತ್ತರಕ್ಕೆ ತಲೆ ಹಾಕಿ ಮಲಗಿದ ಆನೆ ತಲೆಯನ್ನು ಕತ್ತರಿಸಿ ತಂದರು (why?), ಹಾರ್ಟು, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡೋದನ್ನ ಕೇಳಿದ್ದೇವೆ, ಪ್ರಾಣಿಯಿಂದ ಮನುಷ್ಯನಿಗೆ ತಲೆ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು ಯಾವ ಸರ್ಜನ್ನು? ಅನಸ್ತೇಷಿಯಾ ಕೊಟ್ಟೋರು ಯಾರು? ಆ ಬಾಲಕನ ಕಡಿದು ಹೋದ ತಲೆಯನ್ನೇ ಹುಡುಕಿ ಮತ್ತೇಕೆ ಜೋಡಿಸಲಿಲ್ಲ, ಆ ಆನೆಯ ಮುಂಡ ಏನಾಯ್ತು? ಇಡೀ ಬ್ರಹ್ಮಾಂಡದಲ್ಲಿ ಬರೀ ಅದೊಂದು ಬಡಪಾಯಿ ಆನೆ ಮಾತ್ರ ಉತ್ತರಕ್ಕೆ ತಲೆ ಹಾಕಿ ಮಲಗಿತ್ತೇ?
- ಈ ಕ್ಲೀನ್ ಶೇವನ್ನ್ ವಿಷ್ಣು ಬಳಸೋ ಬ್ಲೇಡ್ ಯಾವ್ದು? ಕೇವಲ ಶಿವ, ರಾಘವೇಂದ್ರ ಸ್ವಾಮಿ, ಹನುಮಂತ ಗಡ್ಡ ಬೆಳೆಸಿಕೊಂಡಿರೋ ಚಿತ್ರ ಮಾತ್ರ ನೋಡೋಕೆ ಯಾಕೆ ಸಿಗುತ್ತೆ?

ಈ ಮೇಲಿನ ಏನೆಲ್ಲ ಪ್ರಶ್ನೆಗಳು (ಹಾಗೂ ಅವುಗಳ ಉತ್ತರಗಳು) ಇದ್ರೂ ನಾವು ದೇವರನ್ನ ಘಟ್ಟಿಯಾಗಿ ನಂಬಿದವರೇ, ಪ್ರತಿನಿತ್ಯ ಶ್ರೀ ಗಣೇಶಾಯ ನಮಃ ಅಂದೇ ನಮ್ಮ ಜೀವನಗತಿಯನ್ನು ಆರಂಭಿಸುವವರೇ. ಈ ಪ್ರಶ್ನೆಗಳನ್ನ ನಾನು ಯಾವತ್ತೂ ಯಾರಿಗೂ ಕೇಳಿದ್ದಿಲ್ಲ (ಇಲ್ಲಿಯವರೆಗೆ), ಇವುಗಳೆಲ್ಲ ಹೀಗೆ ಬಾಲಿಶ ಅನ್ನಿಸಿದ್ರೂ ಪ್ರಶ್ನೆ ಕೇಳಬೇಕಾದ ವಯಸ್ಸಿನಲ್ಲಿ ಕೇಳಿದ್ರೆ ಉತ್ತರ ಕೊಡೋ ಬದಲು ’ಹೋಗೋ ತಲೆಹರಟೆ, ಅಧಿಕಪ್ರಸಂಗಿ...’ ಅಂತ ಯಾರಾದ್ರೂ ಬೈತಾರೆ ಅನ್ನೋ ಅವ್ಯಕ್ತ ಭಯವನ್ನು ಯಾರು ಹುಟ್ಟಿಹಾಕಿದ್ರೋ ಯಾರಿಗೆ ಗೊತ್ತು?

***

ಹೀಗೇ ಒಂದು ದಿನ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಮನೆಯಲ್ಲಿ ನಮ್ಮ ಮನೆಯ ಗೋಡೆಗಳಿಗೆ ಬಣ್ಣ ಹಚ್ಚೋಣ ಅನ್ನೋ ಆಲೋಚನೆ ಬಂದಿದ್ದೇ ತಡ ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನೆಲ್ಲ ಜೋಡಿಸಿಕೊಂಡು ಸುಸಜ್ಜಿತನಾದೆ, ಮೊದಮೊದಲು ಇದ್ದ ಉತ್ಸಾಹ ಕೆಲ್ಸಾ ಮಾಡ್ತಾ ಮಾಡ್ತಾ ಬತ್ತಿ ಹೋಗೋದರ ಜೊತೆಗೆ ದೊಡ್ಡ ತಲೆನೋವು ಇದು ಅನ್ನೋ ಭಾವನೆ ಬಲವಾಗಿ ಮುತ್ತಿಕೊಳ್ಳತೊಡಗಿತು. ದಿನಗಳೆದ ಮೇಲೆ ಇನ್ನೇನು ಸುಮಾರಾಗಿ ಎಲ್ಲ ಕೆಲ್ಸ ಮುಗಿದು ಫಯರ್ ಪ್ಲೇಸಿನ ಮೇಲೆ ಇದ್ದ ಗೋಡೆಯನ್ನು ಅರ್ಧ ಪೈಂಟ್ ಮಾಡುವ ಹೊತ್ತಿಗೆ ಅಚಾನಕ್ಕಾಗಿ ಏರ್‌ಪೋರ್ಟಿನಿಂದ ನನ್ನ ಸ್ನೇಹಿತನ ಕರೆ ಬಂತು.

’I am hungry, tired, jet lagged, cold - come and get me out of here!' ಅನ್ನೋ ಆಜ್ಞೆ. ನಮ್ಮ ಮನೆಯಿಂದ ಡಲ್ಲಸ್ ಏರ್‌ಪೋರ್ಟಿಗೆ ಕನಿಷ್ಠ ಒಂದು ಘಂಟೆ ದೂರ, ಮೊದಲೇ ಕೆಲಸ ಕಳ್ಳ ನಾನು (ಬಣ್ಣ ಹಚ್ಚೋ ಕೆಲಸ) ಒಂದು ನೆವ ಸಿಕ್ಕಿತೆಂದು ಕೆಲಸವನ್ನು ಅಲ್ಲೇ ಬಿಟ್ಟು ಏರ್‌ಪೋರ್ಟಿನ ಕಡೆ ಹೊರಟೆ. ನಾನು ಬರುವ ಹೊತ್ತಿಗೆ ಸುಮಾರು ಮೂರ್ನಾಲ್ಕು ಘಂಟೆ ಕಳೆದು ಹೋಗಿತ್ತು, ಟ್ರೇನಲ್ಲಿ ಇದ್ದ ಪೈಂಟೂ ಹಾಗೂ ನನ್ನ ರೋಲರ್ರುಗಳು, ಬ್ರಷ್ಷೂ ಇವೆಲ್ಲ ಒಣಗಿ ಹೋಗಿ ಉಪಯೋಗಕ್ಕೆ ಬಾರದವಾಗಿತ್ತು. ನೀರಿನಲ್ಲಿ ತೊಳೆದು ಅದೇನೇನು ಮಾಡಿದರೂ ಮೊದಲಿನ ಹಾಗೆ ಬಣ್ಣ ಹಚ್ಚಲು ಬಾರದವಾಗಿ ಹೋಗಿದ್ದವು. ಅದೇ ತಾನೆ ಮನೆಗೆ ಬಂದ ನನ್ನ ಸ್ನೇಹಿತನಿಗೆ ಸಹಸ್ರ ನಾಮ ಹಾಕುತ್ತಲೇ ಮತ್ತೆ ಇದ್ದ ಬದ್ದ ಒಣಗಿ ಕೃಶವಾದ ರೋಲರುಗಳಿಂದಲೇ ಬಣ್ಣ ಹಚ್ಚುವ ಬುದ್ಧಿವಂತ ಸಾಹಸಕ್ಕೆ ತೊಡಗಿದ್ದ ನನಗೆ ಬುದ್ಧಿ ಕಲಿಸುವ ಸಲುವಾಗಿ ಫೈಯರ್ ಪ್ಲೇಸಿನ ಮೇಲಿನ ಗೋಡೆಯ ಬಣ್ಣ ಬರೆಬರೆಯಾಗಿ ಹೋಯಿತು, ಮೊದಲು ಇದ್ದದ್ದಕ್ಕಿಂತಲೂ ಹಾಳಾಗಿ ಹೋಯಿತು. ಅದೂ ಸೆಮಿ ಗ್ಲಾಸ್ ಪೈಂಟು, ಅದರ ಸ್ಥಿತಿ ಇನ್ನೂ ಕಷ್ಟವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನನ್ನ ಎಲ್ಲ ಕರ್ಮಾಕರ್ಮಗಳನ್ನು ಹಳಿಯುತ್ತ ಇದನ್ನೆಲ್ಲ ಹೇಗೆ ಸರಿಪಡಿಸಲಿ ಎಂದು ಯೋಚಿಸುತ್ತಿದ್ದ ನನಗೆ ಮರುದಿನ ಬಹಳ ಆಶ್ಚರ್ಯವೊಂದು ಕಾದಿತ್ತು.

ನಮ್ಮ ಮಹಡಿಯ ಮನೆಯ ಮೇಲೆ ಆಟಿಕ್‌ನಲ್ಲಿ ಆ ವರ್ಷ ಇದ್ದ ಮಹಾನ್ ಛಳಿಯಲ್ಲಿ ನೀರಿನ ಪೈಪುಗಳು ಒಡೆದು ಹೋಗಿ ಒಂದೆರಡು ಮಹಡಿಗಳ ಮನೆಗಳಲ್ಲೆಲ್ಲಾ ನೀರು-ನೀರು ಹರಿದುಹೋಗಿತ್ತು. ಎರಡು ಮಹಡಿ ಕೆಳಗಿರುವ ನಮ್ಮ ಮನೆಯಲ್ಲೂ ನೀರಿನ ಪ್ರಭಾವ ಕಾಣುತ್ತಿತ್ತು. ವಿಶೇಷವೆಂದರೆ ನಮ್ಮ ಮನೆಯ ಎಲ್ಲಾ ಗೋಡೆಯನ್ನು ಹೊರತುಪಡಿಸಿ ಕೇವಲ ಆ ಫೈಯರ್ ಪ್ಲೇಸಿನ ಮೇಲೆ ನಾನು ಕೆಟ್ಟದಾಗಿ ಪೈಂಟ್ ಮಾಡಿದ್ದೆನಲ್ಲ, ಅಲ್ಲಿ ಮಾತ್ರ ನೀರಿನ ಕಲೆ ಬಿದ್ದಿತ್ತು! It is true, ನನ್ನ ಕಣ್ಣನ್ನೇ ನಾನು ನಂಬದ ನಿಜ!

Thanks to america, it is not my problem any more! ನಮ್ಮ ಕಾಂಡೋ ಅಸೋಸಿಯೇಷನ್ನಿನ್ನ ಇನ್ಷೂರೆನ್ಸ್ ಪಾಲಿಸಿಯ ದಯೆಯಿಂದ ಎಲ್ಲೆಲ್ಲಿ ನೀರಿನ ಡ್ಯಾಮೇಜ್ ಇತ್ತೋ ಅದನ್ನೆಲ್ಲ ಅಸೋಸಿಯೇಷನ್ನ್ ನವರು ಸರಿಮಾಡಿಸಿಕೊಟ್ಟರು, ನಮ್ಮ ಫಯರ್ ಪ್ಲೇಸಿನ ಗೋಡೆಯನ್ನೂ ಸೇರಿ! ಅವತ್ತೇ ಅಂದುಕೊಂಡಿದ್ದು ನಾನು, ನನ್ನ ಆಕ್ರಂದನ ಆದ್ಯಾವ ಮುಗಿಲು (celing) ಮುಟ್ಟಿತೋ ಆ ದೇವರು ಕಣ್ಣು ಬಿಟ್ಟು ನಮ್ಮ ಗೋಡೆಯ ಬಣ್ಣವನ್ನು ಸರಿ ಮಾಡಿಕೊಟ್ಟನಲ್ಲ ಎಂದು. ಅವತ್ತಿಂದ ಇವತ್ತಿನವರೆಗೆ ದೇವರು ಇದ್ದಾನೆ ಅಂತ್ಲೇ ಅಂದುಕೊಂಡಿರೋದು ನಾನು, ಆದ್ರೆ ಅವತ್ತಿನಿಂದ ಮುಗಿಲು ನೋಡಿ ಆರ್ತನಾಗಿ ಮೊರೆ ಇಡುವಾಗ ಮನೆಯಿಂದ ಹೊರಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ, the last thing you want is another broken water pipe in the middle of a winter - that is below freezing weather.

5 comments:

Harisha - ಹರೀಶ said...

ಹಿಹ್ಹಿಹ್ಹಿ... ಇಷ್ಟೊಂದು ಪ್ರಶ್ನೆಗಳನ್ನು ಕೇಳಿ ಹಾಗೇ ಬಿಟ್ಟಿದ್ದೀರಲ್ಲ.. ಉತ್ತರವನ್ನೂ ಕೊಡಿ..

Satish said...

ಹರೀಶ್,
ನನ್ನ ಮಗಳಿಗೆ ಉತ್ತರ ಹೇಳಿ ಸಾಕಾಗಿ ಹೋಗಿದೆ, ನಿಮ್ಮ ಉತ್ತರಗಳಿಗೆ ನೀವೇ ಜವಾಬ್ದಾರರು :-)

Anonymous said...

ಸರ,

ನೀವ ಹೇಳೂದ್ ಖರೇ ಅದ ನೋಡ್ರಿ. ದೇವರ ಅದಾನ್ರಿ. ನೋ ಡೌಟ್. ನನ್ನ experience ಕೇಳ್ರಿ. ಮೊನ್ನೆ ಪಾರ್ಕಿಂಗ್ ಲಾಟ್ನಾಗೆ ಯಾವದೋ ಹಡಬಿಟ್ಟಿ ನನ್ನ ಕಾರಿಗೆ ಜಜ್ಜಿ ಹೋಗಿದ್ದ / ಹೋಗಿದ್ದಳು. ಹೊಸ ಕಾರ್ ಬ್ಯಾರೆ. ರೇಪೈರ್ ಮಾಡಸಲೇ ಬೇಕಾಗಿತ್ತು. ಇನ್ಸೂರೆನ್ಸ್ ಇತ್ತು. ಆದರೂ ನನ್ನ ಪಾಲಿನ $೫೦೦ deductible ಕೊಡಬೇಕಲ್ಲ ಅಂತ ಅತಗೊತ್ತ ರೇಪೈರ್ಗೆ ಕೊಟ್ಟ ಬಂದಿದ್ದೆ. ಮೊನ್ನೆ ಪಿಕ್ ಅಪ್ ಮಾಡಕ ಹೋದಾಗ ರೇಪೈರ್ ಶಾಪ್ನವ 'since we did not have to do all the repairs and since insurance company has already cut the check, we will waive your deductible' ಅಂತ ಹೇಳಿ $೫೦೦ ಉಳಸಿದ್ನರಿ. ದೇವರ ಏನ್ ಮಹಿಮಾ ನಿಂದು. ಬಂದ ಕೂಡಲೇ $೫೦ ದೇವರಿಗೆ ಎತ್ತಿ ಇಟ್ಟೆ ನೋಡ್ರಿ. ಅದರ ಮ್ಯಾಲೆ ರೇಪೈರ್ಗೆ ಕೊಡೋಕಿಂತ ಮೊದಲು ನಾನು ಸರ್ವಿಸ್ ಅಡ್ವಿಸರ್ಗೆ ಬೇಕಾದಷ್ಟು ಮಸ್ಕನೂ ಹೊಡೆದಿದ್ದೆ ಬಿಡ್ರಿ. ಅದು ರೊಕ್ಕ ಉಳ್ಸೂದಕ್ಕಲ್ಲ. ಸರಿಯಾಗಿ ರೇಪೈರ್ ಮಾಡ್ಲಿ ಅಂತ. ಯಾಕಂದ್ರ ರೊಕ್ಕ ಉಳ್ಸೋಕಿಂತ ಫರ್ಸ್ಟ್ ಟೈಮ್ ಸರಿಯಾಗಿಲ್ಲ ಅಂದ್ರ ಮತ್ತ ಮತ್ತ ಅವ್ರ ಬಾಗ್ಲಿಗೆ ಅಡ್ಡದೂದು ಅಂದ್ರ ಮತ್ತೂ ದೊಡ್ಡ ತಲಿಶೂಲಿ. ದೇವರ ದಯದಿಂದ ಎಲ್ಲ ಸರಿಯಾತ್ರಿ ಯಪ್ಪಾ. ದೇವರಿಗೆ ನಮೋ ನಮೋ.

-ಮಠ.

ಯಜ್ಞೇಶ್ (yajnesh) said...

ಸತೀಶ್,

ಸೂಪರಾಗಿ ಬರ್ದಿದೀರ. ನೀವು ಕೇಳಿದ ಪ್ರಶ್ನೆಗಳನ್ನೇ ಇಲ್ಲಿ ಮತಾಂತರಕ್ಕೆ ಉಪಯೋಗಿಸ್ತಾಯಿದ್ದಾರೆ!!!
ನಿಮ್ಮ ಆ ದೇವ್ರು ಇವ್ಳಿಗೆ ಹುಟ್ಟಿದ್ದು, ಅವ್ಳಿಗೆ ಹುಟ್ಟಿದ್ದು ಅಂತೆಲ್ಲಾ ಪುಸ್ತ್ಕ ಬರದು ಹಂಚತಾಯಿದಾರಂತೆ.

ಪಾಪ.. ದೇವ್ರನ್ನು ಸುಮ್ನೇ ಬಿಡೋಲ್ಲ ನೋಡಿ !!!

Satish said...

ಮಠ್,
ಒಳ್ಳೇ ಕೆಲ್ಸಾ ಆಯ್ತು ನೋಡ್ರಿ, ಸದ್ಯ ನೀವಾದ್ರೂ ಒಂದು ಐನೂರು ಉಳಿಸಿದ್ರಿ...ಮೊನ್ನೆ ನನ್ನ ಕಾರು ಒಂದು ಜಿಂಕೆಗೆ ಮುತ್ತು ಕೊಟ್ಟ ಸಲುವಾಗಿ ನಾನು ಐನೂರು ತೆರಬೇಕಾಗಿ ಬಂದ ಪ್ರಸಂಗದಿಂದ ಬೇಸರವಾಗಿತ್ತು, ಅದು ಇನ್ನೂ ಹೆಚ್ಚುವಂತೆ ಮಾಡಿದ್ರಿ ನೋಡಿ! :-)

ಯಜ್ಞೇಶ್,
ಮೂಲಭೂತವಾದಿಗಳು ಪುಸ್ತಕಗಳನ್ನು ಹಂಚೋ ಬಗ್ಗೆ ಕೇಳಿದ್ದೇನೆ, ಅದು ಒಂಥರಾ ಖಾಯಿಲೆ ಯಾವಾಗ ವಾಸಿ ಆಗುತ್ತೋ ಅನ್ನೋ ಯೋಚನೆ ಅಷ್ಟೇ.