ಗಂಟಲ ಒಳಗಿನ ಪದಗಳು
ನಾವೆಲ್ಲ ಹಾಗೇ ನಮ್ಮ ಬಾಯಲ್ಲಿ ಪದಗಳೇ ಹೊರಡೋದಿಲ್ಲ, ಯಾರೋ ನಮ್ಮ ಗಂಟಲಿನಲ್ಲಿ ಶವೆಲ್ಲನ್ನು ತೆಗೆದು ಪದಗಳನ್ನು ಗೋಚಿ ಬದಿಗೆ ಎತ್ತಿ ಹಾಕಿದ ಹಾಗೆ ಒಂದು ರೀತಿ ಛಳಿಗಾಲದಲ್ಲಿ ರಸ್ತೆಯ ಬದಿ ಗೋಚಿಹಾಕಿದ ಬಿಳಿಯ ಹಿಮದಂತೆ. ನಮ್ಮಲ್ಲಿನ ಪದಗಳೋ ಹಿಮದ ಹಾಗೆ ಕಪ್ಪು ಮಣ್ಣಿನ ಬಣ್ಣ ಕಂಡು ಬಿಸಿಲಿಗೆ ಕರಗಿ ಮತ್ತೆ ನೀರಾಗಿ ಇಂದಲ್ಲ ನಾಳೆ ಮತ್ತೆ ಬಿಳಿಯ ಹಿಮವಾಗುವ ಪ್ರಕ್ರಿಯೆಯಂತೆ ಹಿಂದೆ ಬಾರದೇ ಎಲ್ಲೋ ಅನತಿ ದೂರದ ಮೋಡಗಳ ಹಾಗೆ ದೂರವೇ ಉಳಿದು ಬಿಡುತ್ತವೆ. ನಾವು ನಮ್ಮ ಭಾಷೆ ನಮ್ಮತನವೆನ್ನುವುದು ಪದೇ ಪದೇ ಅವುಗಳ ಅಸ್ತಿತ್ವವನ್ನು ಹುಡುಕಿಕೊಳ್ಳುವ ಎಂದೂ ಮುಗಿಯದ ಲೂಪ್‌ನಲ್ಲಿ ಸೇರಿಕೊಂಡು ಮತ್ತೆ ಬರೋದೇ ಇಲ್ಲ.
ನಮಗೆ ನಮ್ಮತನ ನಮ್ಮದರ ನಡುವೆ ಇರೋದು ಭಾಷೆಯ ಸಮಸ್ಯೆಯೋ, ಅಭಿರುಚಿಯ ಸಮಸ್ಯೆಯೋ ಅಥವಾ ನಮ್ಮ ಸಂಸ್ಕೃತಿಯೇ ಹಾಗೋ? ಇಲ್ಲಿ ದಿನಕ್ಕೆ ನೂರು ಬಾರಿ ’ಧನ್ಯವಾದಗಳು’ ಎಂದು ಒಣಗಂಟಲಿನಲ್ಲಿ ಅನ್ನುವ ನಾವು ನಮ್ಮೂರುಗಳಲ್ಲಿ ಅಂದದ್ದಿಲ್ಲ. ಎಂದೋ ಯಾರದ್ದೋ ಕೈ ಹಿಡಿದುಕೊಂಡು ಕೃತಾರ್ಥರಾಗಿದ್ದೇವೆ, ನಿಂತು ಹೋದ ಮದುವೆಯನ್ನು ನಡೆಸಿಕೊಟ್ಟವರ ಕುರಿತು ಕನ್ಯಾಪಿತೃಗಳು ಗದ್ಗದರಾದ ಹಾಗೆ ಮಂಜುಕಣ್ಣಿನವರಾಗಿದ್ದೇವೆ, ದೊಡ್ಡವರು-ದೇವರ ಮುಂದೆ ಆರ್ತರಾಗಿದ್ದೇವೆ, ಅಷ್ಟೇ. ನಮ್ಮೂರಿನ ಮೇಷ್ಟ್ರುಗಳೋ ಬರೀ ಬೈಯುತ್ತಲೇ ಕಲಿಸುತ್ತಾ ಹೋದರು, ಬೈಗಳು ಮಾಮೂಲಿ ಸಂವಹನಾ ಶಬ್ದಗಳಾದವು. ನಮ್ಮ ಹಿರಿಯರು ನಮ್ಮನ್ನು ಕಣ್ಣಿನಿಂದಲೇ ಹೆದರಿಸುತ್ತಾ ಬಂದರು, ಅವರನ್ನು ನೋಡಿದಾಗಲೆಲ್ಲ ತಾಯ ಮಡಿಲಿನಲ್ಲಿ ಮಗು ಕಂಡು ಕೇಳರಿಯದ ಗುಮ್ಮನ ಹೆಸರನ್ನು ಕೇಳಿ ಮುದುರಿಕೊಳ್ಳುವ ಹಾಗೆ ಮಾಡಿದರು, ಶಕ್ತಿ ಸಾಧಿಸುವವರು ಸಾಧಿಸಿ ತೋರಿಸಿದರು, ಇಲ್ಲದವರು ಇದ್ದವರ ವ್ಯತ್ಯಾಸವನ್ನು ಗುರುತಿಸುತ್ತಲೇ ಬಂದರು.
ನಮ್ಮ ಭಾಷೆ, ಪದ ಬಂಡಾರ ಬೆಳೆಯಲೇ ಇಲ್ಲ. ನಮ್ಮ ಸ್ನೇಹಿತರು ವಾರಿಗೆಯವರು ಇಂಗ್ಲೀಷೇ ಸರ್ವಸ್ವ ಎಂದುಕೊಂಡು ಊಟ ಮಾಡಿದವರು ಕೈತೊಳೆದುಕೊಂಡಷ್ಟು ಸಲೀಸಾಗಿ ಉತ್ತಮವಾಗೇ ಮಾತನಾಡುತ್ತಿದ್ದ ಕನ್ನಡವನ್ನು ಮರೆತು, ಹರಿದು-ಬೆರೆತು-ಅರಿಯದೇ ಇಂಗ್ಲೀಷಿಗೆ ತೊಡಗಿಕೊಂಡರು. ನಮ್ಮ ಸಹಪಾಠಿಗಳಿಗಾಗಲೇ ಇಂಗ್ಲೀಷು ಓದಿನ ಹುಚ್ಚು ಹತ್ತಿ ಹೋಗಿತ್ತು, ಇಂಗ್ಲೀಷು ಸಿನಿಮಾಗಳು ಸರ್ವವ್ಯಾಪಿಗಳಾಗಿ ಹೋಗಿದ್ದವಾಗಲೇ. ಕನ್ನಡ ಸಿನಿಮಾಗಳ ಕೌಟುಂಬಿಕ ಚಿತ್ರಣಕ್ಕೆ ಮೀರಿ ನಮ್ಮ ಪಡ್ಡೆತನಕ್ಕೆ ಇಂಗ್ಲೀಷಿನ ಬೆತ್ತಲೆ ಚೆಲುವೆಯರು ಉತ್ತರ ಕೊಡತೊಡಗಿದ್ದರು, ನಮಗೆ ಗೊತ್ತಿಲ್ಲದೇ ನಾವೇ ಮಾರು ಹೋಗಿದ್ದೆವು - ನಮ್ಮ ಭಾಷೆ, ಔಚಿತ್ಯ, ಗಾಂಭೀರ್ಯತೆಯನ್ನು ಮೀರಿ ಮತ್ತೆಂದೂ ಹಿಂದೆ ಬರದಷ್ಟು ದೂರಕ್ಕೆ. ನಾವು ಬಳಸುವ ಶಾಲೆ ಮೇಜು ಪಡಸಾಲೆ ಕಾಲುಚೀಲ ಎನ್ನುವ ಪದಗಳು ನಮ್ಮ ಓರಗೆಯವರ ಹುಬ್ಬೇರುವುದಕ್ಕೆ ಕಾರಣವಾದವು. ಈ ಕಡೆ ಕನ್ನಡವನ್ನೂ ಓದದ ಆ ಕಡೆ ಇಂಗ್ಲೀಷನ್ನೂ ಸರಿಯಾಗಿ ತಿಳಿಯದವರ ಜೊತೆ ನಾವು ಕನ್ನಡವನ್ನು ಬಲ್ಲ ಕೆಲವರು ಅಲ್ಪರಾದೆವು. ನಮ್ಮೊಳಗೆ ನಾವು ಅಂತರ್ಮುಖರಾಗಿಕೊಂಡು ವರ್ಷಕ್ಕೊಮ್ಮೆ ಕಷ್ಟಪಟ್ಟು ಸಂಪಾದಿಸಿಕೊಳ್ಳುವ ಕಾಲೇಜು ವಾರ್ಷಿಕೋತ್ಸವದ ಮ್ಯಾಗಜೀನಿನಲ್ಲಿ ಒಂದು ಕವನ ಲೇಖನ ಬರೆಯುವಷ್ಟರಲ್ಲಿ ಸ್ಖಲಿತರಾಗಿ ಹೋಗುವಲ್ಲಿ ನಮ್ಮ ಅಂತಃಸತ್ವ ಮಿತಗೊಂಡಿತು. ಹಾಗೆ ಬರೆದ ಲೇಖನ ನಮ್ಮ ನಡುಗೆ ಉಡುಗೆ ಮಾತುಕಥೆಗಳು ಓರಗೆಯವರಿಗೆ ಗಾಂಧೀತನವಾಗಿ ಕಂಡಿತು. ರೆಟ್ಟೆಗಳನ್ನು ಬಲಿಸಿಕೊಳ್ಳದ ನಾವು ಮಿದುಳನ್ನು ಬಲಿಸಿಕೊಳ್ಳುವತ್ತ ವಾಲಿಕೊಂಡಾಗ ರೆಕ್ಕೆ ಬಲಿತ ಕೆಲವು ಪಡ್ಡೆ ಹುಡುಗರು ನಮ್ಮಕ್ಕ ತಂಗಿಯರನ್ನು ಕೀಟಲೆ ಮಾಡಿ ನಕ್ಕರೆ ಅವರಿಗೆರಡೇಟು ಬಿಡದಿರುವುದು ಮೇಲ್ನೋಟಕ್ಕೆ ಆದರ್ಶವೆಂದುಕೊಂಡರೂ ಅದು ನಮ್ಮ ಕೈಲಾಗದ ಮಾತು ಎನ್ನುವುದು ನಮ್ಮ ಹೊಟ್ಟೆಯಲ್ಲೇ ಹುಟ್ಟಿ ಸತ್ತ ಸತ್ಯವಾಗಿ ಹೋಗಿತ್ತು.
***
ಹೀಗೇ ಒಂದು ತಣ್ಣನೆ ಸೋಮವಾರದ ಸಂಜೆ. ಅಮೇರಿಕದಲ್ಲಿ ನಮ್ಮ ಬದುಕಿನ ಸುಗಮ ಸಂಗೀತವೆನ್ನುವುದು ಆರಂಭ ಹಾಗೂ ಅಂತ್ಯವಾಗುವುದು ವಾರಾಂತ್ಯಗಳಲ್ಲೇ ಎಂದು ಯಾರೋ ಬರೆದು ಶಾಸನ ಮಾಡಿಟ್ಟು ಹೋದ ಹಾಗಿದ್ದುದನ್ನು ಉಲ್ಲಂಘಿಸಿ ಸೋಮವಾರ ಆಫೀಸಿನ ತರುವಾಯ ನಡೆದ ಮುಖಾಮುಖಿ ಮಾತುಕಥೆಯೊಂದರಲ್ಲಿ ಜಯಂತ ಕಾಯ್ಕಿಣಿ ನನ್ನನ್ನು ಕೇಳಿದರು, ’ನಿಮ್ಮ ತಲೆಮಾರುಗಳಲ್ಲಿ ಮೇಷ್ಟ್ರುಗಳೇ ಇಲ್ಲ, ಭಾರತದಲ್ಲಿ ಚೆನ್ನಾಗಿ ಅಂಕಪಡೆದ ಎಲ್ಲರೂ ಉದ್ಯಮವನ್ನು ಕುರಿತ ಶಿಕ್ಷಣವನ್ನು ಪಡೆಯಲು ಸ್ಪರ್ಧಿಸಿದಂತೆ ಮೂಲ ಶಿಕ್ಷಣ - ಹ್ಯುಮಾನಿಟೀಸ್, ಬೇಸಿಕ್ ಸೈನ್ಸ್, ಎಜುಕೇಷನ್, ಆರ್ಥಶಾಸ್ತ್ರ ಮುಂತಾದವುಗಳು - ಎನ್ನುವುದನ್ನು ಕಲಿಯುವರೂ ಇಲ್ಲ, ಕಲಿಸುವವರೂ ಇಲ್ಲ. ಹೀಗಾದರೆ ಮುಂಬರುವ ತಲೆಮಾರು ಹೇಗಿದ್ದಿರಬಹುದು?’
ನಾನೆಂದೆ, ’ಬೇಕಾದಷ್ಟು ಹೊಸ ಶಾಲೆಗಳಿವೆ, ಖಾಸಗಿಯವರು ಜೋರಾಗಿಯೇ ಇದ್ದಾರೆ, ಇವುಗಳ ನಡುವೆ ಗುರುಗಳೇ ಇಲ್ಲವೇ?’
ಅವರೆಂದರು, ’ಇಲ್ಲ, ಚೆನ್ನಾಗಿ ಓದುವವರು ವೃತ್ತಿನಿರತ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡರೆ ಉಳಿದ ಶಿಕ್ಷಣ ಕ್ಷೇತ್ರಗಳಿಗೆ ಕಾಲಿರುಸುವವರು ಮೊದಲಿನವರು ಕಷ್ಟಪಡುತ್ತಿದ್ದಷ್ಟಂತೂ ಕಷ್ಟಪಡುತ್ತಿಲ್ಲ.’
ಇದು ನಿಜ, ನಾವು ಹತ್ತನೇ ತರಗತಿ ಪಾಸ್ ಮಾಡುತ್ತಿದ್ದ ಹೊತ್ತಿಗೇನೇ ಫಸ್ಟ್ ಕ್ಲಾಸ್ ಪಡೆದವರು ಪಿಯುಸಿ ಸೈನ್ಸ್ ಅಥವಾ ಡಿಪ್ಲೋಮಾ ವಿಭಾಗ, ಸೆಕೆಂಡ್ ಹಾಗೂ ಥರ್ಡ್ ಕ್ಲಾಸ್ ಪಾಸ್ ಮಾಡಿದವರು ಕಾಮರ್ಸ್ ಅಥವಾ ಆರ್ಟ್ಸ್ ತೆಗೆದುಕೊಳ್ಳುತ್ತಿದ್ದುದು ಸಹಜವಾಗಿತ್ತು. ಅಲ್ಲಲ್ಲಿ ಎಕ್ಸೆಪ್ಷನ್ನುಗಳನ್ನು ನೋಡಿದ್ದೇನೆ, ತುಂಬ ಬುದ್ಧಿವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮಗೆ ಬೇಕಾದ ವಾಣಿಜ್ಯ, ಅರ್ಥಶಾಸ್ತ್ರವನ್ನು ತೆಗೆದುಕೊಂಡು ಅದನ್ನು ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗಿಂತಲೂ ಅವರೇ ಹೆಚ್ಚು ಓದಿಕೊಂಡಿದ್ದ ಪ್ರಸಂಗಗಳನ್ನು.
ಕಾಯ್ಕಿಣಿಯವರ ನಡುವಿನ ಮಾತುಕಥೆಯಲ್ಲಿ ಮತ್ತೊಂದು ವಾಸ್ತವಾಂಶ ಸ್ಪಷ್ಟವಾಗಿತ್ತು: ಇಂದಿನ ಜನ ಅದೆಷ್ಟು ಬೇಗ ಪ್ರತಿಫಲವನ್ನು ಆಶಿಸುತ್ತಾರೆ ಎಂಬುದು ಆಶ್ಚರ್ಯ ಮೂಡಿಸಿತ್ತು. ಟಿವಿ ಕಾರ್ಯಕ್ರಮಗಳಿಗೆ ತಯಾರಾಗಲೆಂದೇ ಮಕ್ಕಳಿಗೆ ಸಂಗೀತ ಕಲಿಸಿಕೊಡುವ ವ್ಯವಸ್ಥೆ ಹುಟ್ಟಿದೆ, ಒಂದು ವಾರ-ತಿಂಗಳು ಅಥವಾ ಕೆಲವೇ ತಿಂಗಳುಗಳಲ್ಲಿ ಮಕ್ಕಳಲ್ಲಿ ಸಂಗೀತವನ್ನು ತುಂಬುತ್ತೇವೆನ್ನುವ ಗ್ಯಾರಂಟಿ ಕೊಡುವ ವ್ಯವಸ್ಥೆ ಬಂದಿದೆ ಅಥವಾ ಹಾಗಿರುವುದಕ್ಕೆ ಡಿಮ್ಯಾಂಡ್ ಇದೆ ಎನ್ನುವ ಮಾತು ಆಶ್ಚರ್ಯ ಮೂಡಿಸಿತ್ತು. ಎಲ್ಲವೂ ವೇಗವಾಗಿ ಆಗಬೇಕೆನ್ನುವ ವ್ಯವಸ್ಥೆಯಲ್ಲಿ ಸಾಧನೆಗೆ ಸ್ಥಳವಿಲ್ಲ. ಸಾನ್ಯಾ ಮಿರ್ಜಾ ಲಿಯಾಂಡರ್ ಪೇಸ್ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ಕಠಿಣ ಪರಿಶ್ರಮ ಪಟ್ಟು ಮುಂದೆ ಬರುವುದನ್ನು ನೋಡಿಕೊಂಡೂ ಜನರು ಒಂದೇ ಉಸಿರಿನಲ್ಲಿ ಚಾಂಪಿಯನ್ನರಾಗುವ ಕನಸು ಕಂಡರೆ ಅದಕ್ಕೇನೆನ್ನೋಣ? ನಮ್ಮ ಗುರುಗಳು ತಮ್ಮ ಜೀವನ ಪರ್ಯಂತ ಹಿಂದೂಸ್ತಾನೀ ಸಂಗೀತ ಸಾಧನೆ ಮಾಡಿಯೂ ಸಂಗೀತವೆನ್ನುವುದು ಒಂದು ಸಾಗರ ಅದರಲ್ಲಿ ನಾನು ಕುಡಿದದ್ದು ಒಂದು ಬೊಗಸೆ ಉಪ್ಪು ನೀರು ಅಷ್ಟೇ ಎನ್ನುವುದನ್ನು ಇಂದಿನ ವೇಗಮಯ ಜೀವನದ ಮುಂದೆ ಸರಳವಲ್ಲದ್ದು ಎನ್ನೋಣವೆ?
***
ಏಕೋ ಅಶ್ವಥ್ ತಮ್ಮ ಹಾಡಿನ ನಡುವೆ ’ನಾವು ಭಾರತೀಯರು...’ ಎಂದಾಗ ಸ್ವಲ್ಪ ಹೊತ್ತಿನ ಮೊದಲು ’...ಇವರು ನಿಮ್ಮ ದೇಶದವರು!’ ಎಂದು ಯಾರನ್ನೋ ಪರಿಚಯಿಸಿಕೊಟ್ಟ ನನ್ನನ್ನೇ ನೋಡಿ ಕೈ ಮಾಡಿ ’ನಾವು ಭಾರತೀಯರು...’ ಎಂದು ಹಾಡಿದಂತಾಯಿತು. ನಾವು ಭಾರತೀಯರು ಎನ್ನುವುದರಲ್ಲಿ ಹುರುಳಿದೆ ತಿರುಳಿದೆ, ಒಂದೇ ಒಂದು ಮಾತಿನಲ್ಲಿ ಎಲ್ಲವೂ ಇದೆ. ಅಮೇರಿಕದಲ್ಲೇ ಹುಟ್ಟಿ ಬೆಳೆದವನಂತಿರುವ ನನ್ನ ಸಹೋದ್ಯೋಗಿ ನಮ್ಮ ಕಾನ್‌ಫರೆನ್ಸ್ ಕಾಲಿನ ನಡುವೆ ಇನ್ಯಾರನ್ನೋ ಕುರಿತು, ’ಅದೊಂದು ಆರ್ಡರನ್ನು ಹೇಗೋ ತಳ್ಳಿಬಿಡು, ಸ್ವಲ್ಪ ಅಡ್ಜಷ್ಟ್ ಮಾಡಿಕೋ...’ ಎಂದು ಹೇಳಿದಾಗ ನನ್ನ ಪಕ್ಕೆಗೆ ತಿವಿದಂತಾಗಿ ಒಂದು ಕಡೆ ರಿಪೀಟಬೆಲ್ ಪ್ರಾಸೆಸ್ಸುಗಳನ್ನು ಎಸ್ಟಾಬ್ಲಿಷ್ ಮಾಡುವುದು ನನ್ನ ಜವಾಬ್ದಾರಿ ಅಂತಹುದರಲ್ಲಿ ’ಸ್ವಲ್ಪ ಅಡ್ಜಷ್ಟ್ ಮಾಡಿಕೊಳ್ಳುವುದನ್ನು’ ಅದು ಹೇಗೆ ರಿಪೀಟ್ ಮಾಡಲಿ? ಅಥವಾ ಅದು ನಮ್ಮ ಕ್ರೋಮೋಸೋಮು, ಡಿಎನ್‍ಎ ಗಳಲ್ಲಿ ಯಾವತ್ತೂ ರಿಪೀಟ್ ಆಗುತ್ತಲೆಯೇ ಇದೆಯೋ?
ನಮ್ಮ ಗುರುಗಳೆಲ್ಲ ಇಂಗ್ಲೀಷನ್ನು ಗಾಢವಾಗಿ ಓದಿಕೊಂಡ ಪಂಡಿತರು ಅಥವಾ ಅಂತಹ ಪಂಡಿತರನ್ನು ಬಲ್ಲವರು. ಅವರು ಇಂಗ್ಲೀಷನ್ನು ಓದಿಕೊಂಡ ಹಿನ್ನೆಲೆಗೆ ತಕ್ಕಂತೆ ಕನ್ನಡದ ಗಂಧ-ಗಾಳಿಯನ್ನೂ ಬಲ್ಲವರು ಒಂದು ರೀತಿ ಫ್ಲ್ಯಾಷ್ ಲೈಟ್‌ನ ನೇರಕ್ಕೆ ಒಂದು ಒಂದು ಬೆಳಕಿನ ವರ್ತುಲ ಬಿದ್ದರೆ ಅದಕ್ಕೆ ಸುತ್ತಲಿನ ಪ್ರಭಾವಳಿ ಇದ್ದಂತೆ. ನಾವುಗಳೆಲ್ಲ ನಮಗೆ ಬೇಕಾದುದನ್ನು ಓದಿಕೊಂಡು ಬೇಕಾದಷ್ಟು ಅಂಕಗಳನ್ನು ಗಳಿಸಿ ಮುಂದೆ ಬಂದೆವು. ಇಲ್ಲಿಯವರೆಗೂ ನಮ್ಮ ಸಬ್ಜೆಕ್ಟಿನ ಬಗ್ಗೆಯೇ ಯಾರೇ ಪ್ರಶ್ನೆ ಕೇಳಿದರೂ ’ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎನ್ನುವ ಉತ್ತರವನ್ನು ಆ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಿಂತ ಮೊದಲು ಯೋಚಿಸಿಕೊಳ್ಳುತ್ತಿದ್ದೆವು. ಒಂದು ದಿನವೂ ನಾವು ಕಲಿಯುವುದರ ಹಿನ್ನೆಲೆ ಮುಂದೆ ಅದನ್ನು ಜೀವನದಲ್ಲಿ ಬಳಸುವ ಬಗ್ಗೆ ತಲೆ ಕೆಡಿಸಿಕೊಂಡು ಗೊತ್ತಿಲ್ಲದವರಾಗಿದ್ದೆವು. ನಮಗೆ ಗೊತ್ತಿರದೆಯೋ ಗೊತ್ತಿದ್ದೋ ಮುಂದಿನ ಜಗತ್ತಿಗೆ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುತ್ತಿದ್ದೆವು ಆದರೆ ಅದರ ವೇಗ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದ್ದುದೂ ಇತ್ತು.
ಮತ್ತದೇ ಮಾತು, ಕೆಲವೊಂದು ಭಾವನೆಗಳು ಭಾಷೆಯನ್ನೂ ಮೀರುತ್ತವೆಯಂತೆ, ಆದರೆ ಆ ಸಮಸ್ಯೆಯ ಆಳ ನಮಗೆಂದೂ ಅರಿವಾಗದು ಏಕೆಂದರೆ ನಮ್ಮ ಭಾಷೆಯ ಆಳವೇ ಅಷ್ಟು. ಯಾರಾದರೊಡನೆ ಮುಖ ಕೊಟ್ಟು ಮಾತನಾಡೋಣವೆಂದರೆ ಅವರು ಇಂಗ್ಲೀಷಿನ ಮೊರೆ ಹೊಕ್ಕು ಕೊನೆಗೆ ಮಾತೇ ನಿಂತು ಹೋಗುವ ಸ್ಥಿತಿ ಬರುವ ಹಾಗೆ ನಮಗೆ ನಮ್ಮತನವೇ ದೊಡ್ಡದಾಗಿ ಯಾವತ್ತೂ ಎಲ್ಲೂ ಕಾಣೋದಕ್ಕೆ ಒಂದು ಕಾರಣ ಹುಟ್ಟಿಕೊಳ್ಳುತ್ತದೆ. ನಮ್ಮ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಹಲವಾರು ಧ್ವನಿಗಳು ಹುಟ್ಟೋದೇನೋ ನಿಜ, ಆದರೆ ಅವುಗಳು ರಾಗವಾಗಿ ಬೆಳೆಯೋದೇ ಇಲ್ಲ, ಒಂದು ಆಲಾಪನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಹಾಗೆ ಮತ್ತೊಂದು ಹುಟ್ಟಿದರೂ ಹುಟ್ಟಬಹುದು ಎನ್ನುವ ನಿರೀಕ್ಷೆಯಲ್ಲೇ ಬದುಕು-ಭಾವನೆ-ಬಂಡವಾಳವೆಲ್ಲವೂ ಕಳೆದು ಹೋದ ಹಾಗೆ. ಹ್ಞೂ, ನಮ್ಮ ನಮ್ಮ ಮುಸುಡಿಯನ್ನು ನಾವು ನಾವೇ ನೋಡಿಕೊಂಡು ನಮ್ಮ ಪ್ರಪಂಚದಲ್ಲಿ ನಾವೇ ತೇಲಾಡಿ ಓಲಾಡಿಕೊಂಡು ನಾವೇ ಬರೆದು ಸಂಪಾದಿಸಿ ಪ್ರಕಟಿಸುವ ಸಾಹಿತ್ಯದಲ್ಲಾದರೂ ಅದೇನು ಮಹತ್ತವಿದ್ದಿರಬಹುದು? ತೀಡಿ ಗಂಧವಾಗಲಿಲ್ಲ, ಕಾಯಿಸಿ ಬಗ್ಗಿ ಹೊಳೆಯಲಿಲ್ಲ ಎನ್ನುವ ಸಂಬಂಧಗಳಲ್ಲಿ ಸೂಕ್ಷ್ಮವಾದರೂ ಎಲ್ಲಿಂದ ಬಂದೀತು? ನಿಜವಾದ ನೋವಿಗೆ ಸ್ಪಂದಿಸದೇ ಅದೆಷ್ಟು ದಿನ ಎಲ್ಲವನ್ನೂ ಮುಂದೆ ತಳ್ಳಲಾದೀತು?