Sunday, August 31, 2008

ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು?

Even tea bags have instructions to follow! ಅಂತ ಅನ್ನಿಸಿದ್ದು ಇತ್ತೀಚೆಗೆ. ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು? ಬೆಳಕಿನ ಬಗ್ಗೆ ತಿಳಕೊಳ್ಳೋಣ ಅಂತ ಶಾಲೆ-ಕಾಲೇಜಿಗೆ ಹೋದ್ರೆ ಬೆಳಕು ಅಂದ್ರೆ ಪಾರ್ಟಿಕಲ್ಲೋ ವೇವೋ ಅಂತ ನಮ್ಮನ್ನೇ ಕನ್‌ಫ್ಯೂಸ್ ಮಾಡ್ತಾರೆ, ಕ್ಲಾಸಿಕಲ್ ಥಿಯರೀನೂ ಬೇಡಾ ಮಾಡರ್ನ್ ಸೈನ್ಸೂ ಬೇಡಾ ಅಂತಂದ್ರೆ ಯಾವಾಗ್ಲೂ ಕ್ವಾಂಟಮ್ ಮೆಕ್ಯಾನಿಕ್ಸ್ ಇದ್ದೇ ಇದೆ, ಆದ್ರೆ ನಮ್ಮ ಕಾಲೇಜು ಮೇಷ್ಟ್ರುಗಳು ಮಾಡೋ ಪಾಠವನ್ನು ಅರ್ಥ ಮಾಡ್ಕೋ ಬೇಕಾದ್ರೆ ವಿದ್ಯಾರ್ಥಿಗಳು ಬೆಳಕಿನ್ ವೇಗಕ್ಕಿಂತ್ಲೂ ಹೆಚ್ಚು ಚುರುಕಾಗಿರಬೇಕು. ಇನ್ನೇನು Heisenberg's Uncertainity Principle ತಲೆ ಒಳಗೆ ಹೊಕ್ಕಿರುತ್ತೋ ಇಲ್ವೋ ಅಷ್ಟೊತ್ತಿಗೆ ಎಕ್ಸಾಮ್ ಅಂತ ತಲೆ ತಿಂದು ಕಲಿ ಬೇಕಾದ್ದು ಕಲಿಯೋ ಹೊತ್ತಿಗೆ ಎಕ್ಸಾಮ್ ಪ್ರಿಪರೇಷನ್ನ್ ಎಕ್ಸಾಮ್ ಪ್ರಿಪರೇಷನ್ನ್ ಮಾಡೋ ಹೊತ್ತಿಗೆ ಕಲಿ ಬೇಕಾದ್ದು ಕಲಿಯೋ ಸಂದರ್ಭ ಬಂದಿದ್ದು ನನಗಂತೂ ಮೊದಲ್ನೇ ಸರ್ತಿ ಅಲ್ಲಾ ತಾನೆ?

ಇಂತಲ್ಲೇ ರಸ್ತೆ ದಾಟೀ ಅಂತ ಬಿಳಿ-ಗೆರೆಗಳನ್ನು ಎಳೆದಿರ್ತಾರೆ, ಅದನ್ನ ದಾಟೋದಕ್ಕಿಂತ ಮೊದ್ಲೇ zeebra crossing ಅಂತ ಹೇಳಿ ಕನ್‌ಫ್ಯೂಸ್ ಮಾಡ್ತಾರೆ. ಪೈಥಾಗೊರೋಸ್ ಥಿಯರಮ್ ಅಂತಾ ತಲೆ ತಿಂತಾರೆ, ಅದನ್ನು ಕಲಿತು ಮುಗೀತಿದ್ದ ಹಾಗೆ it is also known as Donkey's formula ಅಂತಾರೆ. ಝೀಬ್ರಾ ಕತ್ತೆ ಕುದುರೆಗಳಿಗೆ ಗೊತ್ತಿರೋ ಲಾಜಿಕ್ಕನ್ನ ತಿಳಕೊಳ್ಳೋದಕ್ಕೆ ನಾವ್ಯಾಕೆ ಶಾಲೆಗೆ ಹೋಗ್ಬೇಕು?

ನಮ್ ಕನ್ನಡಿಗರದ್ದು ಯಾವಾಗ್ಲೂ ಸಪ್ಪೆ ಸ್ವಭಾವ, ಯಾಕೆ ಅಂತೀರಾ? ಮತ್ತಿನ್ನೇನು, ನಾವೆಲ್ಲ ದೊಡ್ಡದಾಗಿ ’ನಮಸ್ಕಾರ, ಹೇಗಿದ್ದೀರಾ?’ ಅಂತ ಕೇಳ್ತೀವಲ್ಲ, ಈ ’ನಮಸ್ಕಾರ’ ಅನ್ನೋದರಲ್ಲಿ ಕಿಕ್ ಇಲ್ಲ, ಅದರಲ್ಲಿ ನಮಸ್ಕಾರಮ್, ವಣಕ್ಕುಮ್, ಸಲಾಮ್, Hey, Hi ಅನ್ನೋದರಲ್ಲಿರೋ ಗ್ಲಾಮರ್ ಇಲ್ಲ. ’ನಮಸ್ಕಾರ, ನಮಸ್ಕಾರ, ನಮಸ್ಕಾರ’ ಅಂತ ಹೇಳ್ಕೊಂಡು ಆ ಗಣೇಶನೇನೋ ಮುಂದೆ ಬಂದ, ಅದೇ ರೀತಿ ನೀವೇನಾದ್ರೂ ದಾರೀಲಿ ಹೋಗೋರ್ ಬರೋರಿಗೆ ’ನಮಸ್ಕಾರ ನಮಸ್ಕಾರ’ ಅಂದ್ರೆ ತಲೆ ಸರಿ ಇಲ್ಲ ಅಂದ್‌ಕೋತಾರೆ ಅಷ್ಟೇ. ಅದಕ್ಕೋಸ್ಕರನೇ ನಮ್ ಬಯಲ್ ಸೀಮೆಯಲ್ಲಿ ’ಅರಾಮಾ?’ ಅನ್ನೋದು ಅದು How're you doing? ಅನ್ನೋದರ ಯಥಾ ನಕಲೇ, ಆದ್ರೆ ಬಹಳ ಸಿಂಪಲ್ಲಾಗಿರೋದು. ಒಂದು ರೀತಿ ಅರ್ಧ ಪೇಜ್ ಬರೆದಿರೋ ಸ್ಪ್ಯಾನಿಷ್ ಡೈಲಾಗನ್ನು ಮೂರೇ ಮೂರು ಸಾಲು ಇಂಗ್ಲೀಷಿನಲ್ಲಿ ಹೇಳಿದ ಹಾಗೆ.

ಸಹ್ಯಾದ್ರಿ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೋತಿದ್ದೆ, ನಾನೋ ಟೈಮರನ್ನು ಒಡಲಾಳದಲ್ಲೇ ಇಟ್ಟುಕೊಂಡು ಹುಟ್ಟಿದ ಹಾಗೆ ಬಹಳ ಶಿಸ್ತಿನವನು. ಪಾಪ ಯಾವ್ದೋ ಹಳ್ಳಿ ವಿದ್ಯಾರ್ಥಿ ಒಂದೆರಡು ನಿಮಿಷ ಲೇಟ್ ಆಗಿ ಬಂದ, ’ಯಾಕೆ, ಕ್ಲಾಸ್ ಇರೋದ್ ಮರ್ತು ಹೋಯ್ತಾ?’ ಅಂದೆ (’ಊಟ ಮಾಡೋದ್ ಮರೆಯೋದಿಲ್ವಾ?’ ಅನ್ನೋದು ಫಾಲ್ಲೋ ಅಪ್ ಡೈಲಾಗು, ಪರಿಸ್ಥಿತಿ ಅಲ್ಲೀವರೆಗೆ ಹೋಗ್ಲಿಲ್ಲ), ಅವನು, ’ಇಲ್ಲಾ ಸಾರ್, ಈಗಷ್ಟೇ ಊರಿಂದ ಬಂದೆ?’ ಅಂದ. ನಾನು, ’ಹಾಗಾದ್ರೆ ನಾವೆಲ್ಲ ಕಾಡಿಂದ ಬರ್ತೀವೇನು?’ ಅಂದು ಸುಮ್ಮನಾದೆ, ಕ್ಲಾಸ್ ಎಲ್ಲ ನಗ್ತು, ಹುಡುಗನ ಮೋರೆ ಪೆಚ್ಚಗಾಗಿ ನನಗೆ ’ನೀನು ಅಮೇರಿಕದಲ್ಲಿ ಹೋಗಿ ಬೀಳು!’ ಅಂತ ಶಾಪಾ ಹಾಕ್ದಾ ಅನ್ಸತ್ತೆ, ಅದಕ್ಕೆ ಇಲ್ಲ್ ಬಂದ್ ಬಿದ್ದಿದ್ದೀನ್ ನೋಡಿ. ಇಲ್ಲೋ, ವಿದ್ಯಾರ್ಥಿಗಳು ಆನ್‌ಟೈಮ್ ಬರೋದಿರ್ಲಿ ಶಾಲೇಲಿ ಮೇಷ್ಟ್ರುಗಳ ಎದಿರು ವಿದ್ಯಾರ್ಥಿಗಳು ತಿಂಡಿ-ತೀರ್ಥ ತಿನ್ನಬಹುದು ಕುಡೀಬಹುದು. ನಾನು ಯಾವ್ದೋ ಡಾಕ್ಟ್ರು ಅಪಾಯಿಂಟ್‌ಮೆಂಟು ಅಂತ ಅವರು ಕೊಟ್ಟ ಟೈಮಿಗೆ ಹೋದ್ರೆ ಅವರು ಮೊದ್ಲು ದೊಡ್ಡ ರೂಮಿನಲ್ಲಿ ಕಾಯಿಸಿದ್ದು ಆಲ್ದೇ ಅದಕ್ಕಿಂತ ಸಣ್ಣ ರೂಮಿನಲ್ಲಿ ಮತ್ತೆ ಕಾಯಿಸ್ತಾರಲ್ಲ. ಇಲ್ಲಿಯವರಿಗೆ ಟೈಮ್ ಸೆನ್ಸೇ ಇಲ್ಲ, ನನ್ ಮೀಟಿಂಗ್‌ಗಳು ಆನ್‌ಟೈಮ್ ಶುರು ಆಗೋದಿರಲಿ, ಅವು ಸರಿಯಾದ ಟೈಮಿಗೆ ಮುಗಿಯೋದೂ ಇಲ್ಲ. ಯಾವ್ದೂ ಬೇಡಪ್ಪಾ ನ್ಯಾಸಾದ ಉಡಾವಣೆಗಳೇ ಸರಿಯಾದ ಸಮಯಕ್ಕೆ ಆಗೋದಿಲ್ಲ ಅಂದ್ರೆ, ಅಮೇರಿಕದಲ್ಲಿ ಟೈಮಿಗೆ ಎಲ್ಲಿ ಬೆಲೆ ಇದೆ ನೀವೇ ಹೇಳಿ? ನನ್ ತಂದೆ ತಾಯಿ ಮಾಡಿದ ಮೂವತ್ತೈದು ವರ್ಷ ಮೇಷ್ಟ್ರ ಸರ್ವೀಸ್‌ನಲ್ಲಿ ಪ್ರತಿದಿನ ಕೆಲ್ಸಕ್ಕೆ ಹೋಗೋವಾಗ್ಲೂ ಯಾವಾಗ್ಲೂ ಆನ್‌ಟೈಮ್ ಅವರು ಶುರು ಮಾಡುತ್ತಿದ್ದ ತರಗತಿಗಳು ಆನ್‌ಟೈಮ್, ಆದ್ರೆ ನಾನ್ ನೋಡಿ ನನ್ನ ಹದಿನೈದು ವರ್ಷದ ವೃತ್ತಿ ಜೀವನದಲ್ಲಿ ಒಂದ್ ದಿನಾನೂ ಮನೇನ ಆನ್‌ಟೈಮ್ ಬಿಟ್ಟಿದ್ದಿಲ್ಲ - ಎಲ್ಲಾ ಆ ಸಹ್ಯಾದ್ರಿ ಕಾಲೇಜ್ ಹುಡುಗನ್ದೇ ತಪ್ಪು!

ಇಷ್ಟು ಚಿಕ್ಕ ಮನುಷ್ಯ ನಾನು, ನನ್ನದೊಂದು ದೊಡ್ಡ ಮಾತಿದೆ - ಕನ್ನಡಿಗರಿಗೆ ಆತ್ಮಾಭಿಮಾನ ಕಮ್ಮಿ - ಅಂತ. ಬೇರೆ ಯಾವ್ ಭಾಷೇನೋರೂ ಆವರ ಮಾತುಕಥೆಯ ನಡುವೆ ಮತ್ತೊಬ್ಬ ಪರಭಾಷಿಯ ಆಗಮನವಾದ್ರೆ ತಮ್ ಮಾತೃಭಾಷೆಯಲ್ಲಿನ ಡೈಲಾಗನ್ನು ಬದಲಾಯಿಸೋದಿಲ್ಲ, ಕೇವಲ ಕನ್ನಡಿಗರು ಮಾತ್ರ ಒಂದೇ ಕಾಮನ್ ಲಾಂಗ್ವೇಜ್ ಇಂಗ್ಲೀಷಿಗೆ ಮೊರೆ ಹೋಕ್ತಾರೆ, ಇನ್ನೂ ವರ್ಸ್ಟ್ ಅಂದ್ರೆ ಆಗಮಿಸಿದ ಪರಭಾಷಿಯ ಭಾಷೆಯಲ್ಲಿ ತಮ್ಮ ಡೈಲಾಗನ್ನು ಕಂಟೀನ್ಯೂ ಮಾಡ್ತಾರೆ. ನನಗೆ ಹಾಗೆ ಆದಾಗ್ಲೆಲ್ಲ ಮೈ ಉರಿಯುತ್ತೆ ಅನ್ನೋದೇನೋ ನಿಜ, ಆದ್ರೆ ಏನ್ ಮಾಡ್ಲಿ ಹೇಳಿ? ಅದಕ್ಕೆ ಒಂದು ಹೊಸ ಫಾರ್ಮುಲಾ ಕಂಡ್ ಹಿಡಿದಿದ್ದೀನಿ. ನಿಮ್ಮ ಎದುರು ಯಾರಾದ್ರೂ ಕನ್ನಡಿಗರು ನನಗೆ ಆ ಭಾಷೆ ಬರುತ್ತೆ, ಈ ಭಾಷೆ ಬರುತ್ತೆ ಅಂತ ಕೊಚ್ಚಿಕೋತಾರೆ ನೋಡಿ, ಆಗ ಅವರಿಗೆ ಒಂದು ಸರಳ ಪ್ರಶ್ನೆ ಕೇಳಿ ಬಾಯಿ ಮುಚ್ಚಿಕೊಂಡು ಸುಮ್ಮನಿರ್ತಾರೆ. ನಮ್ಮ್ ಸೋದರಮಾವ ಹಾಗೆ ಭಾರತದಲ್ಲಿ ಅಲ್ಲಿ ಇಲ್ಲಿ ಇದ್ದು ಬಂದೋರು ಕನ್ನಡವೂ ಬರೋಲ್ಲ, ಉಳಿದ ಭಾಷೆಗಳೂ ಬರೋದಿಲ್ಲ ಅಂತಂದ್ರೇನೇ ಚೆನ್ನ. ಒಂದ್ ದಿನ ಅವರು ಕೊಚ್ಚಿ ಕೊಳ್ತಾ ಇದ್ರು, ನನಗೆ ತಮಿಳು ಬರುತ್ತೆ, ತೆಲುಗು ಬರುತ್ತೆ, ಮುಂತಾಗಿ ಒಟ್ಟು ಹನ್ನೊಂದೋ ಹನ್ನೆರಡೋ ಕೌಂಟು ಮಾಡುವಷ್ಟು. ನಾನೆಂದೆ ’ನಿಮಗೆ ತಮಿಳು ಬರುತ್ತಾ? ಹಾಗಾದ್ರೆ - ಆಧುನಿಕ ಭಾರತದಲ್ಲಿ ಜನಸಂಖ್ಯಾ ಸ್ಪೋಟದಿಂದ ಸಮಸ್ಯೆಗಳು ಉಲ್ಬಣಗೊಂಡಿವೆ - ಅನ್ನೋದನ್ನು ಆ ಭಾಷೆಯಲ್ಲಿ ಹೇಗೆ ಹೇಳ್ತೀರಿ?’ ನಮ್ಮ್ ಮಾವ ಬೆಬ್ಬೆಬ್ಬೆ ಆದ್ರು. ನಾನು ಹೇಳಿರೋ ಕನ್ನಡದ ವಾಕ್ಯದಲ್ಲಿ ಸಂಸ್ಕೃತ ಪದಗಳೇ ಇರಬಹುದು, ಆದ್ರೆ ನಾನು ಹೇಳಿದ್ದನ್ನ ಅವರು ಆಯಾ ಭಾಷೇನಲ್ಲಿ ಟ್ರಾನ್ಸ್‌ಲೇಟ್ ಮಾಡ್ದೇ ಹೋದ್ರೆ ಅವರಿಗೆ ಆ ಭಾಷೆ ಬರುತ್ತೇ ಅಂತ ಹೇಗ್ ಹೇಳ್ಲಿ, ಹೇಗೆ ಒಪ್ಪಿಕೊಳ್ಳಲಿ. ಸ್ವಲ್ಪ ವರ್ಷಗಳ ಮೇಲೆ ತಿಳೀತು, ನಾನು ಹೇಳಿದ ಕನ್ನಡದ ಸಾಲೇ ಅವರಿಗೆ ಅರ್ಥವಾಗಿರಲಿಲ್ಲ ಅಂತ!

ಗುರುದ್ವಾರ-ಗುದದ್ವಾರದ ಕಥೆ ಹೇಳಿ ನಿಮ್ಮನ್ನ ಬಿಟ್ಟು ಬಿಡ್ತೀನಿ, ನೈಜ ಘಟನೆ ಆದರೆ ಪಾತ್ರಗಳನ್ನು ಬದಲಾಯಿಸಿದ್ದೀನಿ ಅಷ್ಟೇ - ಆದ್ರೆ ಹೀಗೆ ಹೇಳ್ದೋನು ನಾನಂತೂ ಅಲ್ಲ!
ಒಂದು ದಿನ ನಮ್ಮ ಐಟಿ ಪ್ರಾಜೆಕ್ಟ್ ಟೀಮಿನ ಪ್ರೊಡಕ್ಷನ್ನ್ ಮೀಟಿಂಗ್ ನಡೀತಾ ಇತ್ತು, ವೀಕೆಂಡಿನಲ್ಲಿ ಯಾವ್ದೋ ಎಮರ್ಜನ್ಸಿ ಬಂದಿತ್ತಾದರಿಂದ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಎಲ್ಲರನ್ನೂ ಪೇಜ್ ಮಾಡೀ ಮಾಡೀ ಕಾನ್‌ಫರನ್ಸ್ ಕಾಲ್‌ಗೆ ಸೇರಿಕೊಳ್ಳೋದಕ್ಕೆ ಹೇಳ್ತಾ ಇದ್ವಿ. ಐಟಿ ಟೀಮು ಅಂದ್ರೆ ಭಾರತೀಯರ ಸಮೂಹ - ಬರೀ ವರ್ಕರ್ ಬೀಸ್ ಮಾತ್ರ ಸಾರ್, ಮ್ಯಾನೇಜ್‌ಮೆಂಟ್ ಅಲ್ಲ - ಅದರಲ್ಲಿ ಸರ್ದಾರ್‌ಜಿಗಳು, ಸೌತ್ ಇಂಡಿಯನ್ಸೂ (ಕನ್ನಡಿಗರೂ ಸೇರಿ!) ಇರೋ ಅಂತದ್ದು. ನಾನು ರಾಮ್ ಸಿಂಗ್ ಇನ್ನೂ ಯಾಕೆ ಬಂದಿಲ್ಲ ಅಂತ ಯೋಚಿಸ್ತಾ ಇರೋವಾಗ ನನ್ನ ಕನ್ನಡ ಮಿತ್ರ ಅವನಿಗೆ ಪೇಜ್ ಮಾಡಿ, ಅವನ ಜೊತೆ ಫೋನ್‌ನಲ್ಲಿ ಮಾತನಾಡಿದ ನಂತರ ಬಂದು ಕಿವಿಯಲ್ಲಿ ಹೇಳಿದ - ’ರಾಮ್ ಸಿಂಗ್, ಗುದದ್ವಾರಕ್ಕೆ ಹೋಗಿದ್ದಾನೆ, ಇನ್ನೊಂದು ಅರ್ಧ ಘಂಟೆ ಬರೋಕೆ ತಡವಾಗುತ್ತಂತೆ!’ ಅಂತ. ನಾನು ಮುಖ ಕಿವುಚಿ, ’What?!’ ಅಂದ್ರೆ, ಮತ್ತೆ ’ಅವನು ಗುದದ್ವಾರದಲ್ಲಿದ್ದಾನೆ!’ ಅಂತ ಹೇಳ್ದ. ಅವನು ಇನ್ನೊಂದ್ ಸರ್ತಿ ಹಂಗೇ ಹೇಳಿದ್ರೆ ನಾನು ನಂಬ್‌ಕೊಂಡ್ ಬಿಡ್ತಿದ್ನೋ ಏನೋ, ನನಗಂತೂ ನಗು ತಡೆಯಲಾಗದೇ ಕಾನ್‌ಫರೆನ್ಸ್ ಕಾಲ್‌ನ ಮ್ಯೂಟ್ ಮಾಡಿ, ’Are you sure?' ಅಂದೆ, ಆದರೆ ನನ್ನ ಕನ್ನಡ ಮಿತ್ರನಿಗೆ ತಾನು ಏನು ಹೇಳಬೇಕಾಗಿತ್ತು ಏನು ಹೇಳ್ದೆ ಅನ್ನೋದೇ ಅರ್ಥ ಆಗ್ಲಿಲ್ಲ. ’ಗುರುದ್ವಾರ, ಗುದದ್ವಾರ ಎರಡೂ ಭಗವಂತನ ಸೃಷ್ಟಿಗಳೇ, ಸದ್ಯ ಅಲ್ಲಿಂದ ಬರ್ತಾನಲ್ಲ ಸಾಕು’ ಎಂದು ಸುಮ್ಮನಾದೆ. ಈ ವಿಷಯವನ್ನು ನೆನೆಸಿಕೊಂಡಾಗಲೆಲ್ಲ ಎಂತಹ ಕಷ್ಟದ ಸಮಯದಲ್ಲೂ ನನಗೆ ತಿಳಿ ನಗು ಬರುತ್ತೆ.

***
ಕೊಸರು: ಇಂಗ್ಲೀಷೇ ದೊಡ್ಡದು ಅಂತ ಹಾರಾಡಿ ಒದ್ದಾಡೋರಿಗೆಲ್ಲ ಒಂದು ಸವಾಲು, ಯಾವಾಗ್ಲೂ ’ಶಿಟ್-ಶಿಟ್’ ಅಂತ ಅನ್ನೋರು ದಯವಿಟ್ಟು ತಮ್ಮ ಮಾತಿನ ಮಧ್ಯೆ ಒಂದ್ ಸರ್ತೀನಾದ್ರೂ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿ ನಿಮ್ಮ ಬಾಯಿ ಎಷ್ಟು ಕೊಳಕಾಗಿದೆ ಅಂತ ಎಲ್ಲರಿಗೆ ತೋರಿಸಬಾರದೇಕೆ?

Wednesday, August 27, 2008

ಮರಳು ಭೂಮಿ ಮತ್ತು ಮೌನ

ಟೋನಿ ಬೋರ್ಡೇನ್ (Anthony Bourdain) ನ Without Pyramids ಕಾರ್ಯಕ್ರಮವನ್ನು ಟ್ರಾವೆಲ್ ಚಾನೆಲ್‌ನಲ್ಲಿ ನೋಡಿದಾಗಲೇ ಈಜಿಪ್ಟಿನ ಮರಳುಗಾಡು calm ಮತ್ತು clean ಆಗಿರುವ ಬಗ್ಗೆ ಅವನ ವಿವರಣೆಗಳನ್ನು ಕೇಳುತ್ತಲೇ ಒಂದು ಮರಳುಭೂಮಿಯಲ್ಲೂ ಒಬ್ಬನ ಅಂತಃಸತ್ವವನ್ನು ಶುದ್ಧೀಕರಿಸುವ ಅಗಾಧವಾದ ಮೌನವಿದೆ ಎಂದು ಅರಿವಿಗೆ ಬಂದದ್ದು. ಒಬ್ಬನ ಒಡಲಾಳದ ಸಂಸ್ಕಾರಗಳನ್ನು ಕೂಲಂಕಷವಾಗಿ ಸೋಸಿ ಶುದ್ಧೀಕರಿಸುವ ಬಗ್ಗೆ ಭಾರತೀಯ ಮೂಲದ ಧ್ಯಾನದಲ್ಲೂ ಪರಮರ್ಶೆಗಳು ದೊರೆಯುತ್ತವೆ (self-purification by introspection). ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳು ಹಿಮಾಲಯದ ತಪ್ಪಲಿನ ಮೊರೆ ಹೊಕ್ಕಿದ್ದರ ಬಗ್ಗೆ ಕೇಳಿದ್ದೆನೆ ಹೊರತು ರಾಜಸ್ತಾನದ ಮರಳುಗಾಡಿನಲ್ಲಿ ಅಗಮ್ಯ ಹಾಗೂ ಅನಂತವಾದ ಮೌನವನ್ನು ಹುಡುಕಿಕೊಂಡು ಹೋದವರ ಬಗ್ಗೆ ನಾನು ಕೇಳಿಲ್ಲ. ನಕ್ಷತ್ರಗಳು ಮಿನುಗುವ ನಿಶ್ಶಬ್ದ ಮುಗಿಲಿನ ರಾತ್ರಿಗಳಲ್ಲಿ, ಕಾಲ ಬೆರಳುಗಳ ನಡುವೆ ಸೋಕಿ ಹರಿದಾಡುವ ಬಿಸಿ-ತಂಪು ಮರಳಿನ ಕಣಗಳಲ್ಲಿ ಜೊತೆಗೆ ಒಬ್ಬನ ಒಳಗನ್ನು ಹೊರತೆರೆದು ತೋರುವ ಏಕತಾನ ಮೌನದ ಬಗ್ಗೆ ಟೋನಿ ಹಾಗೂ ಆತನ ಸಹ ಪ್ರಯಾಣಿಕರು ವಿವರಿಸಿದ ಅನುಭವ ಬಹಳಷ್ಟು ಮುದ ನೀಡಿತು. ಈ ಕಾರ್ಯಕ್ರಮದಲ್ಲಿನ ಈಜಿಪ್ಟಿನ ಮರಳುಭೂಮಿಯ ಮೂಲದವನೊಬ್ಬನು ವಿವರಿಸುವಂತೆ ಐದೇ ಐದು ದಿನಗಳು ಸಾಕು ಎಂತಹವರ ಅಂತರಾಳವನ್ನು ಬಡಿದೆಬ್ಬಿಸಲು ಎಂಬರ್ಥ ಬರುವ ಮಾತುಗಳು ಗಮನ ಸೆಳೆದವು.

ಈಜಿಪ್ಟ್ ಎಂದರೆ ನೈಲ್ ನದಿ, ಪಿರಮಿಡ್ಡುಗಳು, ಪುರಾತನ ಕಾಲದಿಂದಲೂ ಬಂದ ಪರಂಪರೆ ಎಂಬುದು ಎಲ್ಲರ ಮನಸ್ಸಿಗೆ ಬರಬಹುದಾದ ಅಂಶ. ಸುಮಾರು USA ಭೂವಿಸ್ತಾರದಷ್ಟೇ ದೊಡ್ಡದಾದ ಸಹಾರ ಮರುಭೂಮಿ ಪ್ರಪಂಚದ ಅತಿದೊಡ್ಡ ಮರಳುಭೂಮಿ. ಕ್ರಿಸ್ತಪೂರ್ವ ೬೦೦೦ ವರ್ಷಗಳ ಹಿಂದಿನ ಉಲ್ಲೇಖಗಳು ಸಿಗುವಂತಹ ಈಜಿಪ್ಟ್ ಸಂಸ್ಕೃತಿಗೆ ಈ ಮರುಭೂಮಿಯ ಸಂಸ್ಕೃತಿ ಇನ್ನೂ ಹಳೆಯದು!

***

ಇದು ಮರುಭೂಮಿಯ ಕಥೆಯನ್ನಾಗಲೀ ಈಜಿಪ್ಟಿನ ಬಗ್ಗೆ ವ್ಯವಸ್ಥಿತವಾಗಿ ಹೇಳುವ ಪ್ರಯತ್ನವಂತೂ ಆಗಲಾರದು ಏಕೆಂದರೆ ಅವೆರೆಡನ್ನೂ ನಾನು ನೋಡೇ ಇಲ್ಲ, ಅನುಭವಿಸಿಯೂ ಇಲ್ಲ - ಟಿವಿ ಪರದೆಯ ಮೇಲೆ ನೋಡಿದ್ದನ್ನು ಹೊರತು ಪಡಿಸಿ. ಇನ್ನು ಭಾರತದ ಥಾರ್ ಮರುಭೂಮಿಯ ಬಗ್ಗೆ ಓದಿದ್ದೇನಾದರೂ ಕಣ್ಣಿಂದ ನೋಡಿದ್ದಂತೂ ಇಲ್ಲ. ಈ ಯುಎಸ್‌ಎ ಅಷ್ಟು ದೊಡ್ಡದಾದ ಮರಳುಗಾಡನ್ನು ಊಹಿಸಿಕೊಳ್ಳುತ್ತಾ ಹೋದಂತೆ, ಒಬ್ಬ ಪಶ್ಚಿಮದವನು ಮರುಭೂಮಿಯಲ್ಲಿ ನಡೆಯುತ್ತಾ ಅದರ ವೈಭವವನ್ನು ವರ್ಣಿಸುತ್ತಾ ಹೋದದ್ದನ್ನು ನೋಡಿದಂತೆ, ಸ್ಥಳೀಯ ಈಜಿಪ್ಟ್ ಮೂಲದವನು ಈ ಮರುಭೂಮಿ ಎಂಥವರನ್ನೂ ತಮ್ಮನ್ನು ಅವಿಷ್ಕರಿಸಿಕೊಳ್ಳಲು ಸಹಾಯಮಾಡುವುದು ಎಂಬ ಮಾತನ್ನು ಕೇಳಿದಂತೆ ನನ್ನ ಮನದಲ್ಲಿ ಮರುಭೂಮಿಯ ಬಗ್ಗೆ ಹೊಸದಾದ ಗೌರವ ಭಾವವೊಂದು ತಳೆಯತೊಡಗಿತು. ಈ ಸೃಷ್ಟಿಯಲ್ಲಿ ಮರುಭೂಮಿಯ ಪಾತ್ರವೂ ಇದೆ, ಅದಕ್ಕೂ ಒಂದು ನೆಲೆ ಇದೆ ಎನ್ನುವ ಆಲೋಚನೆ ಹೊಮ್ಮಿದ್ದು.

ಈ ಪ್ರಪಂಚದಲ್ಲಿ ಮೌನವಿದೆ, ಹುಡುಕಿಕೊಂಡು ಹೋಗಬೇಕಷ್ಟೇ. ಅದಕ್ಕೆ ಬೇಕು ಎರಡು ರೀತಿಯ ಪ್ರಯಾಣ - ಒಂದು ಅಂತರಾಳದ ಒಳಗೆ ಇನ್ನೊಂದು ಇರುವುದರೆಲ್ಲದರಿಂದ ದೂರ. ಇವೆರಡನ್ನೂ ಮಾಡಲು ದೂರವೆಲ್ಲೂ ಹೋಗಬೇಕಾದುದಿಲ್ಲ, ಮರುಭೂಮಿಯೂ ಬೇಡ ಬಯಲೂ ಬೇಡ, ಎಲ್ಲವೂ ನಮ್ಮೊಳಗೇ ಇದೆ. ಹಾಡುಹಗಲು ಎಂತಹ ಸಂತೆಯ ವಾತಾವರಣದಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರೆ ಮಾಡುವವರಿಲ್ಲವೇನು? ಆದರೆ ನಮಗೆ ಅಂಟಿಕೊಂಡವುಗಳಿಂದ ’ದೂರ’ ಹೋಗುವುದು ಸರಳವಂತೂ ಅಲ್ಲ, ಅದಕ್ಕೆ ಬಹಳಷ್ಟು ಕಷ್ಟಪಡಬೇಕಾದ ಅಗತ್ಯವಿದೆ. ಈ ’ದೂರ’ ಹೋಗುವಿಕೆಗೆ ಅನುಕೂಲವಾಗಿ ಬರಬಹುದಾದ ಭೌತಿಕವಾಗಿ ಒಂದು ನೆಲೆಯಿಂದ ಮತ್ತೊಂದು ನೆಲೆಯಲ್ಲಿ ನಮ್ಮನ್ನು ಕಂಡುಕೊಳ್ಳಲು ಅನುವುಮಾಡಿಕೊಡುವಲ್ಲಿ ಮರುಭೂಮಿಯ ಪಾತ್ರವಂತೂ ಸ್ಪಷ್ಟವಾಯಿತು. ಇನ್ನು ಅಲ್ಲಿಗೆ ಹೋಗುವುದು ಹೇಗೆ ಅಲ್ಲಿ ಒಂದು ವಾರ ಕಳೆಯುವುದು ಹೇಗೆ ಎಂದೆಲ್ಲ ಯೋಚಿಸಿಕೊಂಡು ಬಾಯಿ ತುಟಿಯೊಣಗಿ ಹತ್ತಿರದ ನೀರಿನ ಬಾಟಲಿಯನೆತ್ತಿ ಮರುಭೂಮಿಯಲ್ಲಿ ನೀರು ಕುಡಿಯುವವರ ಹಾಗೆ ನೀರು ಕುಡಿದದ್ದಷ್ಟೇ ಬಂತು, ಆದರೆ ಅದು ಅಷ್ಟು ಸುಲಭವಂತೂ ಅಲ್ಲ.

***

ನಮ್ಮನ್ನಂಟಿದ ಸಂಕೋಲೆಗಳನ್ನೆಲ್ಲ ಬದಿಗೊತ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮತ್ಯಾವುದೋ ದೇಶದವರಾದ ನಾವು ಹೋಗುವುದು ಬರುವುದು ಬಹಳ ದೂರದ ಮಾತು. ಐದು ವರ್ಷಗಳ ಹಿಂದೆ ಯೂರೋಪಿನಲ್ಲಿ ಕಳೆದ ಹನ್ನೆರಡು ದಿನಗಳನ್ನು ಇತ್ತೀಚಿನ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ನೋಡಿದಾಗ ಅದು ದೊಡ್ಡ ಸಾಹಸವೆಂದೇ ಕಂಡೀತು. ಇನ್ನು ನನಗೆ ಆಸಕ್ತಿ ತಂದ ಸಹಾರ ಮರುಭೂಮಿಯನ್ನು ನೋಡಿ ಅನುಭವಿಸುವುದು ಕನಸಿನ ಮಾತೇ. ಅದಕ್ಕೆಂದೇ ನಾನು ಟಿವಿ ಚಾನೆಲ್ಲುಗಳಿಗೆ ಪ್ರವಾಸಿ ಪುಸ್ತಕ/ವೆಬ್ ಸೈಟ್‌ಗಳಿಗೆ ಜೋತು ಬೀಳೋದು. ’ಕೋಶ ಓದು’ ಎನ್ನುವ ಮಾತಿನಲ್ಲಿ ಬಲವಿದೆ, ಬೆಂಬಲವಿದೆ. ನಾವು ಈಗಿರುವ ನೆಲೆಯಿಂದ ಹೊರಬಂದು ಮತ್ತಿನ್ಯಾವುದೋ ನೆಲೆಯಲ್ಲಿ ನಮ್ಮನ್ನವಿಷ್ಕರಿಸಿಕೊಂಡು ಎಲ್ಲವೂ ನೆಮ್ಮದಿಯಿದ್ದಾಗ ತಾನೇ ಆ ದಿವ್ಯ ಮೌನ ಹೊಮ್ಮೋದು? ಹಾಗಾಗಲೂ ಬಹಳ ಕಷ್ಟವಿದೆ, ದಿವ್ಯ ಮೌನ ಹೊಮ್ಮದಿರುವ ಮಾತಲ್ಲ ಅದಕ್ಕೆ ಮೊದಲಿನ ನೆಮ್ಮದಿಯ ಬಗ್ಗೆ. ನಮ್ಮ ಆಹಾರ ಆಚಾರ-ವಿಚಾರಗಳು ಭಿನ್ನ, ನಮ್ಮ ನಿಲುವು ನೋಟ ಭಿನ್ನ, ಈ ಭಿನ್ನತೆ ಮತ್ತೊಂದು ಅಗಾಧವಾದ ಸಂಸ್ಕೃತಿಯ ಮುಂದೆಯೂ ಎದ್ದು ಕಾಣುತ್ತದೆ. ಪ್ರವಾಸಿಗರಾಗಿ ಹೋದಲ್ಲಿ ನಾವು ನಮ್ಮತನವನ್ನು ಎತ್ತಿ ಗಂಟುಕಟ್ಟಿಕೊಂಡು ಹೋಗೋದೋ ಅಥವಾ ಹೋದಲ್ಲಿ ಬಂದಲ್ಲಿ ಅಲ್ಲಿಯವರಲ್ಲೊಂದಾಗಿ ಅವರ ಸ್ಥಳೀಯ ಅನುಭವಗಳಿಗೆ ಸ್ಪಂದಿಸುವುದೋ ಎನ್ನುವ ದ್ವಂದ್ವ ಎದುರಾಗುತ್ತದೆ. (ಭಾರತೀಯ ಮೂಲದ ನಾವು ಅಮೇರಿಕದಿಂದ ಈಜಿಪ್ಟಿಗಾಗಲೀ ಯೂರೋಪಿಗಾಗಲೀ ಎಲ್ಲೇ ಹೋದರೂ ನಾವು ಅಲ್ಲಿಯವರ ಕಣ್ಣಿಗೆ ಭಾರತೀಯರೇ ಎಂಬುದನ್ನು ನಾನು ನನ್ನ ಯುರೋಪಿನ ಪ್ರವಾಸದಲ್ಲಿ ಸ್ವತಃ ಅನುಭವಿಸಿದ್ದು ನಿಜ.) ಪ್ರವಾಸಿಗರು ಏನನ್ನು ’ನೋಡಲು’ ಹೋಗುತ್ತಾರೆ, ಎಷ್ಟು ’ದೂರ’ ಹೋಗುತ್ತಾರೆ ಎನ್ನುವುದು ಮುಖ್ಯ. ನೀವು ಕೇವಲ ನೋಡಲು ಹೋಗುವವರಾದರೆ ನಿಮ್ಮ ಪುಳಿಯೊಗರೆ, ತಿಳಿಸಾರು-ಅನ್ನ, ಮೊಸರು ನಿಮ್ಮ ಜೊತೆ ಬಂದೀತು, ಅಲ್ಲಿಯ ಬದುಕನ್ನು ಅನುಭವಿಸಿ ನೋಡುವವರಿಗೆ ಗೋಟ್ ಚೀಜೂ ಇಷ್ಟವಾದೀತು ಎನ್ನುವುದು ಈ ಹೊತ್ತಿನ ತತ್ವವಷ್ಟೇ!

Sunday, August 17, 2008

ಚಿತ್ರವಿಲ್ಲದ ಕವನ

Its all your fault...ಚಿತ್ರಕವನ! ಕಳೆದ ಅರವತ್ತೈದು ವಾರಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನನ್ನನ್ನು ನಾಲ್ಕು ಸಾಲು ಕವನದ ರೀತಿಯಲ್ಲಿ ಗೀಚುವಂತೆ ಪ್ರೇರೇಪಿಸುತ್ತಿದ್ದ ಚಿತ್ರಗಳನ್ನು ಬಿಂಬಿಸುತ್ತಿದ್ದ ತಾಣ ಈಗ ಒಂದು ವಾರದಿಂದ ಸ್ಥಗಿತಗೊಂಡಿದೆ, ಅಥವಾ ಸೆಪ್ಪೆಯಾಗಿದೆ.

So, what is the impact? ನಾನು ಪ್ರತಿವಾರ ಏನಾದರೊಂದನ್ನು ಕವನದ ರೂಪದಲ್ಲಿ ಬರೆಯಬೇಕೆನ್ನುವುದು ರೂಢಿಯಾಗಿ ಹೋಗಿದೆ, ಅದಕ್ಕೋಸ್ಕರ ಈ ಬ್ಲಾಗ್‌ಪೋಸ್ಟ್‌ನಲ್ಲಿ ಮುಂದೆ ಒಂದು ಕವನ ಹುಟ್ಟಲಿದೆ - ಈವರೆಗೆ ಅದರ ತತ್ವವಾಗಲಿ, ಸತ್ವವಾಗಲಿ, ಯಾವುದರ ಬಗ್ಗೆ ಬರೆಯಬೇಕು ಬಿಡಬೇಕು ಎಂಬುದರ ಬಗ್ಗೆ ಒಂದು ಚೂರೂ ಗೊತ್ತಿಲ್ಲ - ಕೆಳಗೆ ಕವನ ಡೈನಮಿಕ್ ಆಗಿ ಹುಟ್ಟೋದೇ ಈ ಬ್ಲಾಗ್ ಬರಹಗಳ ವಿಶೇಷ!

***

ಕಳೆದ ವರ್ಷ ಮೇ ತಿಂಗಳಿನಲ್ಲಿ, ಅರವತ್ತೈದು ವಾರಗಳ ಹಿಂದೆ ಶ್ರೀದೇವಿ ಹೀಗೊಂದು ಸೈಟು ಹುಟ್ಟು ಹಾಕಿದ್ದೇವೆ ನೋಡಿ ಎಂದು ಹೇಳಿದ್ದೇ ತಡ ನನ್ನೊಳಗಿನ ಕವಿಗೆ ಒಂದು ಜೀವ ಬಂದು ಹಾಕಿದ ಚಿತ್ರಗಳಿಗೆಲ್ಲ ಒಂದು ಕವನವನ್ನು ಬರೆದು ಹಾಕಿದ್ದಾಯಿತು. ಮುಂದೆ ಅವರು ತಮ್ಮದೇ ಆದ ವೆಬ್‌ಸೈಟ್ ಅನ್ನು ಹುಟ್ಟು ಹಾಕುತ್ತೇವೆ, ಅದು ’ಚಿತ್ರಸ್ಪಂದನ’ವಾಗಿ ಹೊರಬರಲಿದೆ ಎಂದಾಗ ನಾನೇ ’ಯಾಕೆ, ಈಗಿರುವುದು ಚೆನ್ನಾಗೇ ಇದೆಯೆಲ್ಲ’ ಎಂದು ಕೊಂಕು ನುಡಿದಿದ್ದೆ. ಕೆಲವರ ಹುಮ್ಮಸ್ಸು ನೋಡಿ ನನಗೆ ಬಹಳಷ್ಟು ಸಂತೋಷವಾದರೂ, ಹಿಂದೆ ’ಕರ್ನಾಟಕಪತ್ರ ಡಾಟ್ ಕಾಮ್’ ನಮ್ಮದೇ ಆದ ವೆಬ್‌ಸೈಟ್ ಇಲ್ಲದೇ ನಮ್ಮ ಬದುಕೇ ನಡೆಯದು ಎಂದು ಹಂಬಲಿಸಿದ ಒಂದಿಬ್ಬರು ಬೆಂಗಳೂರಿನ ಯುವಕರಿಗೆ ನಾನು ದುಡ್ಡು ಖರ್ಚು ಮಾಡಿ ಒಂದು ಇಂಡಿಪೆಂಡೆಂಟ್ ವೆಬ್‌ಸೈಟ್ ಅನ್ನು ಮಾಡಿಕೊಟ್ಟ ಮೇಲೆ ಏನಾಯಿತು, ಫ್ರೀ ಸೈಟ್‌ನಲ್ಲಿದ್ದ ಕಂಟೆಂಟಾಗಲೀ, ಅದರ ಹುಮ್ಮಸ್ಸಾಗಲೀ ಸ್ವತಂತ್ರ ಸೈಟ್‌ನಲ್ಲಿ ಮೂಡಿ ಬರಲೇ ಇಲ್ಲ. ಈ ಯುವಕರು ಮುಂದೆ ತಮ್ಮ ತಮ್ಮ ದಾರಿ ಹಿಡಿದು ಹೊರಟು ಹೋದರು, ನಾನು ಮರೀಚಿಕೆಗೆ ಇನ್ನೂರೈವತ್ತು ಡಾಲರ್ ಸುರಿದು ಬೆಪ್ಪನಾದೆ. ಈ ಹಿಂದೆ ಹೀಗೆ ಕೈ ಸುಟ್ಟುಕೊಂಡ ಕಾರಣಕ್ಕಾಗಿಯೇ ನಾನು ’ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ’ ಎಂದು ಹಾರಾಡುವವರನ್ನೆಲ್ಲ ಭೂಮಿಗೆ ಹಿಡಿದು ಒಂದು ಮೊಳೆ ಹೊಡೆದಿಡಲು ಪ್ರಯತ್ತಿಸುವುದು, ಅವರ ಪರಿಶ್ರಮ ನಿಜವಾಗಿಯೇ ಇದ್ದಲ್ಲಿ ಅದು ಪರಿಶುದ್ಧ ಚಿನ್ನದಂತೆ ಮೂಸೆಯಲ್ಲಿ ಕುದಿಯುವಾಗಲೂ ಹೊಳೆಯುತ್ತದೆ, ಸಣ್ಣಪುಟ್ಟ ಅಡೆತಡೆಗಳು ದೊಡ್ಡ ಗುರಿಯನ್ನಾಗಲೀ, ಆಶಾವಾದವನ್ನಾಗಲೀ ನಿಲ್ಲಿಸಲಾರವು.

***

ಈಗ ಕೆಳಗೆ ಬರೆಯಬೇಕಾದ ಕವನ - ಚಿತ್ರವೆಲ್ಲಿದೆ ಎಂದುಕೊಳ್ಳುತ್ತೀರಾದರೆ, ನೀವು ಕಣ್ಣು ಮುಚ್ಚಿ ಐದು ಕ್ಷಣ ನಿಮ್ಮೊಳಗೆ ನೀವು ನೋಡಿಕೊಂಡಿದ್ದೇ ಆದರೆ ಅದೇ ಚಿತ್ರ, ಅದಕ್ಕೆ ತಕ್ಕನಾಗಿ ನಿಮಗೊಬ್ಬರಿಗೆ ಮಾತ್ರ ಅರ್ಥವಾಗುವ ಈ ಕವಿತೆಯ ಸಾಲುಗಳು - here you go:

ಪಯಣ ದೊಡ್ಡದೋ ಹಾದಿ ದೊಡ್ಡದೋ
ಹಾದಿ ಹಿಡಿದು ಹೊರಟ ಪಯಣ
ತಲುಪೋ ಗುರಿಯು ದೊಡ್ಡದೋ.
ತೇರು ದೊಡ್ಡದೋ ಕಲಶ ದೊಡ್ಡದೋ
ಸುತ್ತ ಹತ್ತು ಕಷ್ಟ ಹೇಳಿಕೊಂಡು
ಬೇಡೋ ಜನರ ಮನಸು ದೊಡ್ಡದೋ.

ನಡೆಯತೊಡಗಿ ನೋಡಿದಂತೆ ಮುಂದೆ
ದೂರ ಎಷ್ಟೋ ಭಾರ ಎಷ್ಟೋ ಹಿಂದೆ
ನಾಳೆ ಇರುವ ಕಷ್ಟಗಳ ಯೋಚನೆ
ಇಂದು ಗಟ್ಟಿ ನಿಂತ ಮನದ ಯಾಚನೆ.

ಮೇಲೆ ಎಷ್ಟೇ ಮಳೆಯು ಸುರಿದರೂ
ಸೂರಿನಿಂದ ನೀರು ಹನಿಯಾಗಿ ಬೀಳುವಂತೆ
ಕೈಕೊಂಡಿಹ ಕೆಲಸಕೆ ಆತಂಕವು ಸಹಜವು.
ಅಲ್ಲಿ ಇಲ್ಲಿ ಹಾಗೆ ದುಡಿದು ಬೇಡವಾದುದನ್ನು
ಬಗೆದು ಸವಾಲುಗಳನ್ನೆಲ್ಲ ಮೀರಿ ಒಮ್ಮೆ ಸಿಕ್ಕ
ನೆಲೆಯಿಂದ ಇನ್ನೆಲ್ಲೋ ಸಾಗುವುದೇ ಕ್ಷೇಮವು.

ಒಳಗಿರುವ ಸುಖವನ್ನು ನೋಡುವವರೇ ಇಲ್ಲ
ಯಾವಾಗಲೂ ಹೊರಗೆ ಅರ್ಭಟಿಸುವುದೇ ಎಲ್ಲ
ಸುಖವೆಂಬುದು ಅವರವರ ಮನಸಿನಾ ನೆಲೆ
ಇರದಿದ್ದಲ್ಲಿ ಹುಡುಕುವುದು ಒಂದು ಕಷ್ಟದ ಬಲೆ.


***

So, what do you think? ಚಿತ್ರವಿಲ್ಲದೇ ಕವನ ಚಿತ್ರಕವನ ತಂಡದ ಕೃಪೆಯಿಂದ ಇಲ್ಲಿ ಹೀಗೆ ಪಬ್ಲಿಷ್ ಆಗ್ತಾ ಇದೆ. ಇದಕ್ಕೆ ಹಿನ್ನೆಲೆ-ಮುನ್ನೆಲೆ, ಮಣ್ಣೂ-ಮಸಿ ಒಂದೂ ಇಲ್ಲ, ಸುಮ್ಮನೇ ಎಂದಿನಂತೆ ಬರೆದ ಈ ಹೊತ್ತಿನ ತತ್ವವಷ್ಟೇ!

ಈ ಸಾರಿ ಶ್ರಾವಣ ಮಾಸ ಆರಂಭವಾಗಿ ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ, ನೂಲು ಹುಣ್ಣಿಮೆ, ರಕ್ಷಾ ಬಂಧನ ಇವುಗಳೆಲ್ಲ ಆದ್ರೂ ಇನ್ನೂ ’ಅಂತರಂಗ’ದಲ್ಲಿ ಶ್ರಾವಣ ಅನ್ನೋ ಪದವೇ ಬಳಕೆ ಯಾಕೆ ಆಗಿಲ್ಲ ಅಂತ ನನಗೆ ನನ್ನದೇ ಪ್ರಶ್ನೆ. ಈ ಒಲಂಪಿಕ್ಸ್ ಆಟಗಳನ್ನು ನೋಡೋದರಲ್ಲಿ ಟೈಮು ಕಳೆಯುತ್ತಿದ್ದೇನೆ ಅನ್ನೋದು ಒಂದು ಸುಳ್ಳು ನೆಪ ಅಷ್ಟೇ, ಯಾಕೋ ಬರೆದೇ ಇಲ್ಲ ಇತ್ತೀಚೆಗೆ. ಈ ಬ್ಲಾಗ್ ಬರಹಗಳು ಒಂದು ರೀತಿ ಫ್ರೀಡಂ ಅನ್ನೋ ಕೊಡೋದರ ಜೊತೆಗೆ ಬರೀ ಇದಕ್ಕೆ ಅಡಿಕ್ಟ್ ಆಗಿದ್ದುಕೊಂಡು ಇದರಲ್ಲೇ ನಮ್ಮ ಮಿತಿಗಳನ್ನು ಆಡಿಸಿಕೊಂಡು ಬರೋದು ಹುಚ್ಚಾಟವಾಗುತ್ತದೆ. ಆ ಕಾರಣದಿಂದಲೇ ಇತ್ತೀಚೆಗೆ ಒಂದಿಷ್ಟು ಓದೋದನ್ನ ರೂಢಿಸಿಕೊಳ್ಳುತ್ತಿದ್ದೇನೆ. After all, ಚೆನ್ನಾಗಿ ಓದದೇ ಏನು ಬರೆದರೇನು, ಬಿಟ್ಟರೇನು?! ನಾವು ನಾವೇ ಬರೆಯೋದು ಎಲ್ಲರಿಗೂ ಮಹಾನ್ ಆಗಿ ಕಾಣೋದರಲ್ಲಿ ತಪ್ಪಿಲ್ಲ, ನಮ್ಮದನ್ನು ಬಿಟ್ಟು ಬೇರೆಯವರದೂ ಇದೆ ಎಂದುಕೊಂಡು ಬೇರೆಲ್ಲೋ ನಮ್ಮನ್ನು ನಾವು ಕಂಡುಕೊಳ್ಳೋದು ಇದೆಯಲ್ಲ ಅದು ದೊಡ್ಡದು.

Tuesday, August 12, 2008

ಎದೆಕರಗದ ದೇಶಭಕ್ತಿ, ನೋವಿರದ ನಾಗರಿಕತೆ

ಬೀಜಿಂಗ್ ಓಲಂಪಿಕ್ಸ್ ಪಂದ್ಯಾವಳಿಗಳು ವಿಶ್ವದ ಉದ್ದಗಲದ ಆಟೋಟಗಳನ್ನು ಅಮೇರಿಕನ್ ಟಿವಿ ಪರದೆಯ ಮೇಲೆ ಮೂಡಿಸುತ್ತವೆ ಎಂದೇ ಹೇಳಬೇಕು. ನನಗೆ ಆಶ್ಚರ್ಯವಾಗುವ ಹಾಗೆ ಕೆಲವು ಕಡೆ ಸಾಕರ್ ಎನ್ನುವ ಬದಲು ಫುಟ್‌ಬಾಲ್ ಎಂದು ಮಾಧ್ಯಮಗಳು ಬಳಸುವುದನ್ನು ನೋಡಿ ಸೋಜಿಗವಾಗಿತ್ತು. ಇನ್ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಈ ಅವಕಾಶ ಈ ಹಿಂದೆ ಎಂದೂ ಬಂದಿರಲಾರದು. ಅಲ್ಲಲ್ಲಿ ಭಾರತೀಯ ಕ್ರೀಡಾಳುಗಳು ಭಾಗವಹಿಸಿದ ತುಣುಕುಗಳನ್ನು ಬಿಟ್ಟರೆ ಇಲ್ಲಿನ ಪ್ರೈಮ್ ಟೈಮ್‌ನಲ್ಲಿ ನನಗೆ ಸಿಗುತ್ತಿರುವುದು ಅಮೇರಿಕನ್ ತಂಡಗಳು ಭಾಗವಹಿಸಿದ ಸ್ಪರ್ಧೆಗಳು ಮಾತ್ರ.

ಆಟವನ್ನು ನೋಡುವುದೂ ಒಂದು ರೀತಿಯ ಮನೋರಂಜನೆಯಂತೆ, ಯಾವೊಂದು ಟೀಮ್ ಇವೆಂಟ್ ಅನ್ನು ನೋಡಿದರೂ ವೀಕ್ಷಕನ ಮನಸ್ಸಿನಲ್ಲಿ ಒಂದಲ್ಲ ಒಂದು ತಂಡ ಅಥವಾ ಸ್ಪರ್ಧಿಯ ಪರವಾಗಿ ಆಲೋಚಿಸದೆ ಇರುವುದು ಕಷ್ಟ. ನಾನು ಇಲ್ಲಿಯವರೆಗಿನ ಕ್ರೀಡೆಗಳನ್ನು ನೋಡಿದಂತೆ ಮನಸ್ಸು ಒಂದಲ್ಲ ಒಂದು ಸ್ಪರ್ಧಿಯನ್ನು ಬೆಂಬಲಿಸತೊಡಗುತ್ತದೆ, ಕೆಲವೊಮ್ಮೆ ಅವರು ನನಗೆ ಈವರೆಗೆ ತಿಳಿಯದ ಯಾವುದೋ ದೇಶದವರೂ ಆಗಿರಬಹುದು. ಅದೇ ಭಾರತೀಯರು ಸ್ಪರ್ಧಿಸುವ ಕ್ರೀಡೆಗಳಲ್ಲಿ ನನ್ನ ಮೈಮಸ್ಸುಗಳೆಲ್ಲ ಭಾರತೀಯರ ಪರವೇ.

1932 ರ ಲಾಸ್ ಎಂಜಲೀಸ್ ಒಲಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಅಮೇರಿಕವನ್ನು 24-1 ಗೋಲುಗಳಿಂದ ಸೋಲಿಸಿದ ಕ್ಷಣಗಳು ಮತ್ತೆ ಮರುಕಳಿಸಲಾರವು. ಹಾಗೆ ಏನಾದರೂ ಭಾರತೀಯ ತಂಡ ಅಮೇರಿಕನ್ ತಂಡವನ್ನು ಎದುರಿಸಿ ಆಡುತ್ತಿದೆಯೆಂದರೆ ನನ್ನೊಳಗಿನ ನೋಡುಗ ಯಾವ ದೇಶವನ್ನು ಪ್ರತಿಬಿಂಬಿಸುತ್ತಾನೆ, ಯಾವ ದೇಶವನ್ನು ಪ್ರೋತ್ಸಾಹಿಸುತ್ತಾನೆ ಎಂದು ಊಹಿಸಿಕೊಂಡಾಕ್ಷಣ ನಮ್ಮಂತಹವರು ವಲಸೆ ಬಂದು ಮತ್ತೊಂದು ದೇಶದ ನಾಗರಿಕತೆಯನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಅದು ಒಂದು ಪಾಸ್‌ಪೋರ್ಟ್ ಕೊಟ್ಟು ಮತ್ತೊಂದು ಪಾಸ್‌ಪೋರ್ಟ್ ಅನ್ನು ಪಡೆದಷ್ಟು ಸುಲಭವಂತೂ ಅಲ್ಲ ಎನ್ನಿಸಿತು. ನಾವು ಹುಟ್ಟಿ ಬೆಳೆದ ದೇಶ, ನಮ್ಮಲ್ಲಿ ಹುದುಗಿದ ನಮ್ಮ ದೇಶದ ಇತಿಹಾಸ, ಪರಂಪರೆ ಇವುಗಳನ್ನೆಲ್ಲ ಒಂದೇ ಉಸಿರಿನಲ್ಲಿ ಬದಿಗೊತ್ತಲು ಪಾಸ್‌ಪೋರ್ಟ್ ಅಂತಹ ಪುಸ್ತಕಗಳಿಗೆ ಸಾಧ್ಯವಿರಲಾರದು.

ನಾವು ಇದ್ದಲ್ಲಿ ಹೋದಲ್ಲಿ ನಮ್ಮತನವನ್ನು ಉಳಿಸಿ-ಬೆಳೆಸಿಕೊಳ್ಳುವುದು ದೇಶದ್ರೋಹಿತನವಂತೂ ಅಲ್ಲ. ನಾವು ನಮ್ಮಲ್ಲಿಯ ಕ್ರೀಡೆ-ಕೌಶಲ್ಯಗಳನ್ನು ಆಡಿ ಅರಿತಂತೆ ಇಲ್ಲಿಯ ಕ್ರೀಡೆ ಅವುಗಳ ರೀತಿ ನೀತಿಯನ್ನು ಬಲ್ಲವರಲ್ಲ. ನಮಗೆ ಗೊತ್ತಿರುವ ಕ್ರಿಕೇಟ್ ಪಂದ್ಯಗಳ ನಿಯಮಗಳಷ್ಟು ಸುಲಭವಾಗಿ ಇಲ್ಲಿಯ ಬೇಸ್‌ಬಾಲ್ ಸೂತ್ರಗಳು ನಮ್ಮನ್ನು ಸುತ್ತುವರಿಯಲಾರವು. ನಮಗೆ ನಮದೇ ಆದ ಬ್ಯಾಸ್ಕೆಟ್ ಬಾಲ್, ಅಮೇರಿಕನ್ ಫುಟ್‌ಬಾಲ್ ಹಾಗೂ ಬೇಸ್‌ಬಾಲ್‌ಗಳ ಆಟಗಾರ ಪ್ರತಿಭೆಗಳ ಪಟ್ಟಿ ಇದ್ದರೂ ನಮ್ಮ ಕ್ರಿಕೆಟ್ ಆಟಗಾರರ ಹೆಸರುಗಳಷ್ಟು ಉದ್ದ ಪಟ್ಟಿ ಬೆಳೆಯಲಾರದು - ಪಟೌಡಿ, ಬೇಡಿ, ಮದನ್‌ಲಾಲ್, ಕಿರ್ಮಾನಿ, ಚಂದ್ರಶೇಖರ್, ಗವಾಸ್ಕರ್ ಅಲ್ಲಿಂದ ಹಿಡಿದು ತೆಂಡೂಲ್ಕರ್, ಧೋನಿ, ದ್ರಾವಿಡ್‌, ಕುಂಬ್ಳೆವರೆಗೆ ಬೆಳೆಯಲಾರದು, ಕ್ರಿಕೆಟ್ ಆಡುವ ಇತರೆ ಅಂತಾರಾಷ್ಟ್ರೀಯ ದೇಶಗಳ ಪೈಕಿ ಪ್ರತಿಯೊಂದು ದೇಶದ ಕೊನೆಪಕ್ಷ ಐದು ಆಟಗಾರರನ್ನು ಗುರುತಿಸುವ ನೆನಪು ಅಮೇರಿಕನ್ ಆಟಗಾರರ ಹೆಸರುಗಳನ್ನು ಉಳಿಸಿಕೊಳ್ಳಲಾರದು. ಮೊನ್ನೆ ಯಾರೋ ದಾನಕ್ಕೆ ಕೊಟ್ಟರೆಂದು ನ್ಯೂ ಯಾರ್ಕ್ Knicks ಬ್ಯಾಸ್ಕೆಟ್ ಬಾಲ್ ತಂಡದ ಟೋಪಿಯೊಂದನ್ನು ಹಾಕಿಕೊಂಡು ನ್ಯೂ ಯಾರ್ಕ್ ಸಿಟಿಯಲ್ಲಿ ತಿರುಗುತ್ತಿರುವಾಗ ಯಾರಾದರೂ ’Knicks ತಂಡದಲ್ಲಿ ನಿನ್ನ ಫೇವರೈಟ್ ಆಟಗಾರ ಯಾರು?’ ಎಂದು ಪ್ರಶ್ನಿಸಿದರೆ ಏನು ಉತ್ತರ ಹೇಳೋಣ ಎನ್ನಿಸಿ ಒಮ್ಮೆ ಹೆದರಿಕೆಯಾಗಿದ್ದಂತೂ ನಿಜ!

ಪೌರತ್ವ ಅನ್ನೋದು not just a status, rather it is status of mind. ಈ ವಾಕ್ಯವನ್ನು ಬೇಕಾದಷ್ಟು ರೀತಿಯಲ್ಲಿ ವಿವರಿಸಿಕೊಳ್ಳಬಹುದು. ನಾವು ಎಲ್ಲಿದ್ದರೇನು ಹೇಗಿದ್ದರೇನು ಭಾರತೀಯರಾಗಿಯೇ ಇರುತ್ತೇವೆ ಎನ್ನುವುದು ಒಂದು ಬಗೆಯಾದರೆ, ಒಮ್ಮೆ ಪೌರತ್ವದ ಸ್ಟೇಟಸ್ ಒಮ್ಮೆ ಬದಲಾದ ಮೇಲೆ ಅಫಿಷಿಯಲ್ ಆಗಿ ಹೊಸ ದೇಶವನ್ನು ಬೆಂಬಲಿಸೋದೇ ಅವರವರ ಕರ್ತವ್ಯ, ಹೀಗೆ ವಿಧವಿಧವಾಗಿ ನೋಡಬಹುದು. ಉದ್ಯೋಗ ಅನ್ನ-ನೀರು ಕೊಡುವ ದೇಶವೆಂದು ಅಮೇರಿಕವನ್ನು ಪ್ರೀತಿಸಿ ಗೌರವಿಸುವ ನನ್ನತನ ಅದೇ ಅಮೇರಿಕನ್ ಕ್ರೀಡಾಳುಗಳನ್ನು ಅಷ್ಟೇ ವಿಶ್ವಾಸದಿಂದ ನೋಡೋದಿಲ್ಲ, ಅವರನ್ನು ಹುರಿದುಂಬಿಸೋದಿಲ್ಲ. ಭಯೋತ್ಪಾದಕತನ-ದೇಶದ್ರೋಹ ಮೊದಲಾದ ಕಟ್ಟು ನಿಟ್ಟಾದ ಪದಗಳಿಗೆ ಸಿಗದ ವಿಶೇಷ ನಿಲುವು ನಮ್ಮಂತಹವರದ್ದು - ಜೊತೆಗೆ ನಾವು ಯಾರಿಗೂ ಯಾವ ತೊಂದರೆಯನ್ನೂ ಕೊಡೋದಿಲ್ಲ ಎನ್ನುವುದೂ ಮುಖ್ಯ. ಒಲಂಪಿಕ್ಸ್ ಪಂದ್ಯಗಳಲ್ಲಿ ಯಾವುದೋ ಬಡದೇಶದ ಸ್ಪರ್ಧಿ ವಿಶ್ವದ ಬಲಾಢ್ಯ ರಾಷ್ಟ್ರಗಳ ಎದುರು ಸೆಣೆಸಿ ಚಿನ್ನವನ್ನು ಪಡೆದಾಗ ಆ ಸ್ಪರ್ಧಿ ಹಾಗೂ ಆತನ ದೇಶವನ್ನು ನಾನು ಬೆಂಬಲಿಸೋದು ಅಮೇರಿಕದ ವಿರೋಧಿ ನಿಲುವುಗಳಿಂದಲಂತೂ ಅಲ್ಲವೇ ಅಲ್ಲ. ಅಮೇರಿಕದಂತಹ ಮುಂದುವರೆದ ದೇಶಗಳಲ್ಲಿ ಪ್ರತಿಭೆ ಇದ್ದವರಿಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಯಾವ ರೀತಿಯ ಬೆಲೆ, ಬೆಂಬಲ, ಅವಕಾಶಗಳು ದೊರಕುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು, ಅದೇ ಬಡದೇಶಗಳಲ್ಲಿ ಅಷ್ಟೊಂದು ಕೊರತೆಗಳ ನಡುವೆ ಒಬ್ಬ ಸ್ಪರ್ಧಿ ಎಲ್ಲರನ್ನೂ ಮೀರಿಸಿ ಮುಂದೆ ಬರುವುದು ನಿಜವಾಗಿಯೂ ದೊಡ್ಡದು ಎನ್ನುವ ಕಾರಣದಿಂದ ಅದು ಮನಸ್ಸಿಗೆ ಹತ್ತಿರವಾಗುತ್ತದೆ. ಈವರೆಗೆ ಭಾರತ ಗಳಿಸಿದ ಒಂದೇ ಒಂದು ಸ್ವರ್ಣ ಪದಕ ಅದಕ್ಕೆ ಸಂಬಂಧಿಸಿದ ಸುದ್ದಿ-ಚಿತ್ರಗಳು ನಮ್ಮವರು ಎಷ್ಟೋ ವರ್ಷಗಳ ನಂತರ ಗೆದ್ದರಲ್ಲ ಎನ್ನುವ ರೋಮಾಂಚನ ಉಂಟು ಮಾಡುತ್ತದೆ, ಈ ಮಾನಸಿಕ ನೆಲೆಗಟ್ಟಿಗೆ ಹೋಲಿಸಿದ್ದಲ್ಲಿ ಅಮೇರಿಕದವರು ಮೇಲಿಂದ ಮೇಲೆ ಗೆಲ್ಲುತ್ತಲೇ ಇರುವ ಪದಕಗಳು ಗೌಣವಾಗುತ್ತವೆ.

ನಮ್ಮಲ್ಲಿನ ಭಾರತೀಯತೆ ಎನ್ನೋದು ಬರೀ ಪಾಸ್‌ಪೋರ್ಟ್ ಎನ್ನುವ ಪುಸ್ತಕವಂತೂ ಅಲ್ಲ, ಅದಕ್ಕೂ ಮಿಗಿಲಾಗಿ ನಮ್ಮ ಚರ್ಮದ ಬಣ್ಣಕ್ಕಷ್ಟೇ ಸೀಮಿತವಾಗೂ ಇಲ್ಲ. ನಮ್ಮಲ್ಲಿನ ಸಂವೇದನೆಗಳು ಎಂದಿಗೂ ಭಾರತೀಯ ಸಂವೇದನೆಗಳು ಎನ್ನುವುದು ದೃಢವಾದಲ್ಲಿ ನಮ್ಮ ಸಂವಿಧಾನ ಬದ್ಧವಾದ ಗುರುತಿನ ಚೀಟಿ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದೂ ಮತ್ತೊಂದು ತರ್ಕವಾಗುತ್ತದೆ. ನಮ್ಮಲ್ಲಿನ ದೇಶಪ್ರೇಮ, ದೇಶಭಕ್ತಿ ಎನ್ನುವ ಭಾವನೆಗಳು, ತಳಮಳಗಳು ಅಮೇರಿಕದ ಪರ್ಲ್ ಹಾರ್ಬರ್ ನಂತಹ ಐತಿಹಾಸಿಕ ಘಟನೆಗಳಿಗೆ ಹೇಗಾದರೂ ಸ್ಪಂದಿಸಬಲ್ಲವು, ಅದೇ ಹತ್ತೊಂಭತ್ ನೂರಾ ಹತ್ತೊಂಭತ್ತರಲ್ಲಿ (1919) ಬ್ರಿಟೀಷ್ ಸರ್ಕಾರ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಎದೆ ನಡುಗುವಂತೆ ಮಾಡಿದ್ದನ್ನು ನಾವು ಮರೆಯುವುದಾರೂ ಹೇಗೆ?

ಯಾವ ನಾಗರಿಕತೆಯಲ್ಲಿ ನಾವು ನಮ್ಮನ್ನು ಕರಗಿಸಿಕೊಳ್ಳುವುದಿಲ್ಲವೋ, ಎಲ್ಲಿ ನೋವು-ನಲಿವುಗಳು ಐತಿಹಾಸಿಕವಾಗಿ ಒಬ್ಬನ ಮೈಮನಸ್ಸುಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದು ಪುಸ್ತಕದ ಮಟ್ಟದಲ್ಲಿ ಮಾತ್ರ ಉಳಿಯುತ್ತದೆ. ಅದನ್ನು ಪೌರತ್ವ/ಸಿಟಿಜನ್‌ಶಿಪ್ ಎಂದೇನಾದರೂ ಕರೆದುಕೊಳ್ಳಿ ನಮ್ಮೊಳಗಿನ ಉಸಿರಿರುವವರೆಗೆ ’ವಂದೇ ಮಾತರಂ’ ಹಾಗೂ ’ಜನಗಣಮನ’ವನ್ನು ಮರೆಯದ ನಾವು ಮತ್ತೊಂದು ದೇಶದ ಹಕ್ಕು-ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸುವಷ್ಟರ ಮಟ್ಟಿಗೆ ಅಲ್ಲಿನ ಪೌರರಾಗುತ್ತೇವೆ ಎನ್ನುವುದು ನಿಜವೆನಿಸುತ್ತದೆ.

Sunday, August 10, 2008

ನಯಾಗರ ಜಲಪಾತ, ಕಾಮನಬಿಲ್ಲು ಹಾಗೂ ಡೆಲಾವೇರ್ ವ್ಯಾಲಿ

ಅಮೇರಿಕಕ್ಕೆ ಬಂದ ಹೊಸದರಲ್ಲಿ ಮೊಟ್ಟಮೊದಲು ನಾನು ನಯಾಗರ ಜಲಪಾತವನ್ನು ನೋಡಲು ಹೋಗಿದ್ದು ೧೯೯೮ ರಲ್ಲಿ, ಹತ್ತು ವರ್ಷಗಳಲ್ಲಿ ನಾನು ಒಂದಲ್ಲ ಒಂದು ಕಾರಣದಿಂದ ನಯಾಗರಕ್ಕೆ ಹೋಗಿ ಬರುತ್ತಲೇ ಇದ್ದೇನಾದರೂ ಮೊದಲ ಸಲವೊಂದನ್ನು ಬಿಟ್ಟು ಇನ್ನುಳಿದ ಸಲವೆಲ್ಲ ನಾನು ಹೊಸದಾಗಿ ನಯಾಗರ ಫಾಲ್ಸ್ ಅನ್ನು ನೋಡಲು ಹೋಗುವವರ ಜೊತೆಗೆ ಹೋಗಿದ್ದೇನೇದ್ದಾರಿಂದ ನನ್ನ ಪಾಲಿನ ಪ್ರವಾಸವನ್ನು ನಯಾಗರವನ್ನು ನೋಡುವವರನ್ನು ನೋಡಲು ಹೋಗುವುದು ಎಂದು ವರ್ಣಿಸುವುದು ಸರಿ ಎನ್ನಿಸುತ್ತೆ.

ನಮ್ಮ ಮಲೆನಾಡಿನ ಆಜುಬಾಜಿನವರು, ಈಗಾಗಲೇ ನಮ್ಮೂರಿನ ಹತ್ತಿರವಿರುವ ಜೋಗ ಗೇರುಸೊಪ್ಪೆ ಜಲಪಾತವನ್ನು ನೋಡಿದವರು ನಯಾಗರವನ್ನು ನೋಡಿ ’ಇಷ್ಟೇನಾ!’ ಎಂದು ಉದ್ಗರಿಸುವುದನ್ನು ನಾನು ಗಮನಿಸಿದ್ದೇನೆ. ಕೃತಕವಾಗಿ ನಿರ್ಮಿತಗೊಂಡ ಜಲಪಾತಗಳ ಮಜಲು ಹಾಗೂ ಮನರಂಜನೆಗೆಂದು ಹೆಚ್ಚು ನೀರನ್ನು ಹಾಯಬಿಟ್ಟಿರುವುದು ಮುಂದುವರೆದ ದೇಶಗಳಲ್ಲಿ ಕಣ್ಣಿಗೆ ಕೊಬ್ಬಿದಂತೆ ಕಾಣುವ ಎಲ್ಲ ಅಂಶಗಳಲ್ಲಿ ಒಂದಾಗುವುದಕ್ಕೆ ಮೊದಲು ನಾವು ಬೇಡವೆಂದರೂ ನಮ್ಮವರ ಮನಸ್ಸು ಒಂದಲ್ಲ ಒಂದು ತುಲನೆಯಲ್ಲಿ ತೊಡಗಿರುತ್ತದೆ. ಆ ತುಲನೆಯ ಹಿನ್ನೆಲೆಯಲ್ಲೇ ನಮ್ಮೂರಿನ ಸಹಜವಾದ ಜೋಗದ ಆರ್ಭಟದ ಮುಂದೆ ಇಲ್ಲಿನ ಕೊಬ್ಬಿನ ಜಲಪಾತಗಳು ಸಪ್ಪೆಯಾಗಿ ಕಾಣುತ್ತವೆ, ಇದು ನನ್ನೊಬ್ಬನ ಮಾತಂತೂ ಖಂಡಿತ ಅಲ್ಲ.

(ಜೊತೆಗೆ, ನಾವು ಇಲ್ಲಿ ಏನನ್ನೇ ಮಾಡಿದರೂ ದುಡಿದರೂ ಕಡಿದರೂ ಅವುಗಳಿಗೆಲ್ಲ ಒಂದು ಅರ್ಥ ಸಿಗುವುದು ನಮ್ಮ ಅದೇ ತುಲನೆಯಲ್ಲೇ ಎಂಬುದು ಇನ್ನೊಂದು ದಿನದ ವಿಚಾರವಾಗಲಿ!).


ನಯಾಗರದಿಂದ ಮರಳಿಬರುತ್ತಿರುವಾಗ ರೂಟ್ ೮೧ ರಿಂದ ರೂಟ್ ೮೦ ಕ್ಕೆ ಇನ್ನೇನು ಬಂದು ತಲುಪಬೇಕು ಎನ್ನುವ ಹೊತ್ತಿಗೆ ಪೆನ್ಸಿಲ್‌ವೇನಿಯಾ-ನ್ಯೂ ಜೆರ್ಸಿ ರಾಜ್ಯಗಳ ಗಡಿಯಲ್ಲಿ ಸಿಕ್ಕ ಕಾಮನಬಿಲ್ಲಿನ ಚಿತ್ರ.

ನಾನು ಇಂತಹ ಸುಂದರವಾದ ಕಾಮನಬಿಲ್ಲನ್ನು ನೋಡಿ ಅದೆಷ್ಟು ವರ್ಷವಾಗಿತ್ತೋ ಏನೋ? ಇತ್ತೀಚೆಗಂತೂ ಮಳೆಯಲ್ಲಿ ನೆನೆಯುವುದೂ ದಶಕಕ್ಕೊಂದು ದಿನದ ಅನುಭವವಾಗಿ ಹೋಗಿದೆ ಎನ್ನೋದು ನನ್ನೊಳಗಿನ ಮತ್ತೊಂದು ಕೊರಗು, ಇನ್ನು ಮಳೆ ಬೀಳುವಾಗ ಬಿಸಿಲಿದ್ದು, ಬಿಸಿಲಿರುವಾಗ ನಾವಿದ್ದು, ನಾವಿರುವಾಗ ಪುರುಸೊತ್ತು ಇದ್ದು, ಪುರುಸೊತ್ತು ಇದ್ದಾಗ ಹೊರಗಡೆ ಹೋಗಿ ನೋಡುವ ಮನಸ್ಸಿರುವ ಸಾಧ್ಯತೆ ಎಷ್ಟರ ಮಟ್ಟಿಗೆ ಸಾಧ್ಯ ನೀವೇ ಹೇಳಿ.

ಊಹ್ಞೂ, ’ಮಳೆ ಬಿಲ್ಲು ಬಂದರೇನು, ಮತ್ತೇನೇ ಆದರೇನು, ಕಾರು ನಿಲ್ಲೋಲ್ಲ, ಬ್ರೇಕು ಹಿಡಿಯೋಲ್ಲ’ ಎಂದು ಡ್ರೈವರ್ ಬದಿಯ ಕಿಟಕಿಯ ಗಾಜನ್ನು ಇಳಿಸಿ ಘಂಟೆಗೆ ಅರವತ್ತೈದು ಮೈಲು ವೇಗವಾಗಿ ಹೋಗುವ ಕಾರಿನಲ್ಲೇ ಈ ಚಿತ್ರವನ್ನು ಹಿಡಿಯುವಂತಾಯ್ತು. ಆ ತುದಿಯಿಂದ ಈ ತುದಿಗೆ ಬಾಗಿದ ಬಿಲ್ಲನ್ನು ಸೆರೆ ಹಿಡಿಯಲು ಹಲವಾರು ಆತಂಕಗಳು, ಅವುಗಳ ಮಧ್ಯೆ ಚಿತ್ರವನ್ನೂ ಹಿಡಿದದ್ದಾಯ್ತು, ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಮ್ಮ ಜೊತೆಗೇ ಪಯಣಿಸಿದ ಕಾಮನಬಿಲ್ಲನ್ನು ನೋಡಿ ಹರ್ಷಿಸಿದ್ದೂ ಆಯ್ತು.





ಇನ್ನೇನು ರೂಟ್ ೮೦ ಹತ್ತಿ ಮನೆಯಿಂದ ಮುವತ್ತು ಮೈಲು ದೂರವಿದೆ ಎನ್ನುವಾಗ ಡೆಲಾವರ್ ರಿವರ್ ವ್ಯಾಲಿಯಲ್ಲಿ ಸೆರೆಹಿಡಿದದ್ದೇ ಮೂರನೇ ಚಿತ್ರ. ಈ ತಾಣ ಯಾವತ್ತೂ ನನ್ನ ಮನಸ್ಸಿಗೆ ಮುದಕೊಡುತ್ತದೆ. ನಮ್ಮ ಕೊಡಚಾದ್ರಿಯ ಚಾರಣದ ಅನುಭವವನ್ನು ಕೊಡುವ ಅನೇಕ ಹೈಕಿಂಕ್ ಟ್ರೇಲ್‌ಗಳನ್ನು ಇಲ್ಲಿ ಕಂಡುಕೊಂಡಿದ್ದೇನೆ. ಅಪರೂಪಕ್ಕೊಮ್ಮೆ ಅಲ್ಲಲ್ಲಿ ಇನ್ನೂ ಹೆಸರಿಡದ ಝರಿಗಳನ್ನು ಕಂಡು ಖುಷಿಪಟ್ಟಿದ್ದೇನೆ. ಎಂತಹ ಬೇಸಿಗೆಯಲ್ಲೂ ತನ್ನೊಡಲಲ್ಲಿ ತಂಪನ್ನು ಕಾಯ್ದುಕೊಂಡು ಇರುವ ತಾಣಗಳಲ್ಲಿ ಕೆಲವೆಡೆ ನಿಂತು ಹರಿಯುವ ಐಸ್ ಕೋಲ್ಡ್ ನೀರಿನಲ್ಲಿ ಸ್ವಚ್ಛಂದವಾಗಿ ಆಡಿದ್ದೇನೆ.