Thursday, May 01, 2008

ಮೊದಲು ಅಪ್ಪ-ಅಮ್ಮನಿಗೆ ಬುದ್ಧಿ ಹೇಳಿ!

ಬ್ರೂ ಕಾಫಿ ಸ್ವಾದ-ತಾಜಾತನದ ಬಗ್ಗೆ ಒಂದು ಕಮರ್ಷಿಯಲ್ ಅಡ್ವರ್‌ಟೈಸ್‌ಮೆಂಟು ಉದಯ ಟಿವಿಯಲ್ಲಿ ಬರುತ್ತೆ, ಅದರಲ್ಲಿ ನವದಂಪತಿಗಳನ್ನು ಅವರ ಮನೆಯಲ್ಲಿ ಸಂದರ್ಶಿಸಲೆಂದು ಹತ್ತಿರದ ಸಂಬಂಧಿಕರು ಬಂದಿರುತ್ತಾರೆ, ಆಧುನಿಕ ಉಡುಪಿನಲ್ಲಿರುವ ಯುವತಿ ಮನೆಯನ್ನು ಕಿಟಕಿಯಿಂದಲೇ ಪ್ರವೇಶ ಮಾಡಿ ಮನೆಗೆ ಬಂದವರ ಸಮಾಧಾನಕ್ಕೆ ಹಾಗೂ ಅವರಿಗೆ ಆಶ್ಚರ್ಯವಾಗುವಂತೆ ಕೂಡಲೇ ಟ್ರೆಡಿಷನಲ್ ಡ್ರೆಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ತೋರಿಸುತ್ತಾರೆ. ಕೈ ಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಬರುವುದು ಅದರ ಜೊತೆಗೆ ಸೇರಿರುತ್ತೆ. ಆ ವಿಡಿಯೋ ತುಣುಕಿನ ಸಂದೇಶವೇನೇ ಇರಲಿ, ದೂರದ ನನಗೆ ನಮ್ಮ ದೇಶದಲ್ಲಿನ ಗೊಂದಲ ಒಡನೆಯೇ ನೆನೆಪಿಗೆ ಬಂತು. ಅದೇ ನಮ್ಮಲ್ಲಿನ ಜನರೇಶನ್ ಗ್ಯಾಪ್.

ಇಂದಿನ ಕಾಲದಲ್ಲಿ ಹೈ ಸ್ಕೂಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರವನ್ನು ಶಾಲೆಯ ಆವರಣದಲ್ಲಿ ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ ನೋಟ. ಶಾಲೆ-ಕಾಲೇಜಿನವರೆಗೆ ತಮ್ಮ ದಿನನಿತ್ಯದ ಡ್ರೆಸ್‌ಗಳಲ್ಲಿ ಬಂದು, ಶಾಲೆಯು ಹತ್ತಿರ ಬಂದಾಗ ಸಮವಸ್ತ್ರವನ್ನು ಧರಿಸಿಕೊಳ್ಳುವುದು ಬೆಳಗ್ಗಿನಿಂದ ಸಂಜೆವರೆಗೆ ಹೈ ಸ್ಕೂಲು ಸಮವಸ್ತ್ರವನ್ನೇ ಧರಿಸಿ ತಿರುಗಾಡುತ್ತಿದ್ದ ನಮಗೆ ವಿಶೇಷವಾಗಿ ಕಾಣಿಸುವುದರಲ್ಲಿ ತಪ್ಪೇನು ಇಲ್ಲ.

***

ಹಿಂದಿನ ಸಂಬಂಧ-ಸೂಕ್ಷ್ಮತೆ ಲೇಖನ ಬರೆದ ಮೇಲೆ ಆ ಕುರಿತು ಮತ್ತಿನ್ನಷ್ಟು ಆಲೋಚಿಸಲಾಗಿ ಈ ನಡುವೆ ಕುಟುಂಬಗಳಲ್ಲಿ ಅಸಮಧಾನ ಏಕೆ ಹೊಗೆ ಆಡುತ್ತದೆ ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಕ್ಕ ಹಾಗಿದೆ. ಅದರಲ್ಲಿ ಪ್ರತಿಯೊಬ್ಬರೂ ಅವರವರ ತಂದೆ-ತಾಯಿ ಬಂಧು ಬಳಗದವರನ್ನು ಅದೆಷ್ಟರ ಮಟ್ಟಿಗೆ ತಿಳುವಳಿಕೆ ಹೇಳಿಕೊಡುತ್ತಾರೆ ಅದರ ಮೇಲೂ ಬಹಳಷ್ಟು ನಿರ್ಧರಿತವಾಗುತ್ತದೆ. ಈ ಕೆಳಗಿನ ನಿದರ್ಶನಗಳನ್ನು ಪರಿಶೀಲಿಸಿ ನೋಡಿ:

೧) ಇತ್ತೀಚಿನ ಚಿಕ್ಕ (nuclear) ಕುಟುಂಬಗಳಲ್ಲಿ ಗಂಡ-ಹೆಂಡತಿಯರು ತಮ್ಮ ತಮ್ಮಲ್ಲಿ ಏಕವಚನದಲ್ಲೇ ಸಂಭಾಷಣೆ ನಡೆಸುತ್ತಾರೆ.
೨) ಡಬಲ್ ಇನ್‌ಕಮ್ ಇರುವ ಕುಟುಂಬಗಳಲ್ಲಿ ಗಂಡ-ಹೆಂಡತಿಯ ಸಂಬಳದಲ್ಲಿ ಹೆಚ್ಚು ವ್ಯತ್ಯಾಸವಿರಬೇಕಿಲ್ಲ, ಹೆಂಡತಿಗೆ ಗಂಡನಿಗಿಂತ ಹೆಚ್ಚು ಸಂಬಳಬರುವ ಸಾಧ್ಯತೆಗಳೂ ಇವೆ.
೩) ಗಂಡ-ಹೆಂಡತಿಯರ ವಯಸ್ಸಿನಲ್ಲಿ ಹೆಚ್ಚಿನ ಅಂತರವಿರಬೇಕೆಂದೇನಿಲ್ಲ ಜೊತೆಗೆ ಅವರ ವಿದ್ಯಾರ್ಹತೆಯೂ ಒಂದೇ ಮಟ್ಟದಲ್ಲಿರಬಹುದು.

ಪ್ರತಿಯೊಂದು ಕುಟುಂಬದಲ್ಲಿಯೂ ಈ ಹೌಸ್‌ಹೋಲ್ಡ್ ಕಾಯಕಗಳು ಸಹಜವಾದವುಗಳು: ಅವೇ - ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆದು-ಒಣಗಿಸಿ-ಮಡಚಿಡುವುದು, ಮಕ್ಕಳಿದ್ದರೆ ಅವರ ಹೋಮ್‌ವರ್ಕ್ ಊಟ-ಉಪಚಾರದಲ್ಲಿ ತೊಡಗುವುದು, ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮ್ಯಾನೇಜ್ ಮಾಡುವುದು, ದಿನಕ್ಕೆರಡು ಬಾರಿಯಾದರೂ ಅಡಿಗೆ ಮನೆಯಲ್ಲಿನ ಕೆಲಸಗಳಿಗೆ (ಕುಕು, ಕ್ಲೀನ್, ಆರ್ಗನೈಜ್, ಇತ್ಯಾದಿ) ಆದ್ಯತೆ ಕೊಡುವುದು ಇತ್ಯಾದಿ. ಈ ಕೆಲಸಗಳು ಒಂದು ದಿನಕ್ಕೆ ಮಾತ್ರ ಬಂದು ಹೋಗುವಂಥದ್ದಲ್ಲ, ಇವುಗಳನ್ನು ಪ್ರತಿದಿನ, ಪ್ರತಿರಾತ್ರಿ ನಿರ್ವಹಿಸುತ್ತಲೇ ಇರಬೇಕು ಎಂಥ ಕುಟುಂಬವಾದರೂ. ದುಡ್ಡಿದ್ದವರು ಕೆಲಸದವರನ್ನು ನೇಮಿಸಿಕೊಂಡಿರಬಹುದು, ಆದರೆ ಕೆಲಸ ಮಾಡುವವರನ್ನು ನಿಭಾಯಿಸುವುದು ತಪ್ಪುವುದಿಲ್ಲ. ಅಂದರೆ ಮನೆ ಎಂದರೆ ಇಂತಿಷ್ಟು ಕೆಲಸಗಳು ಇದ್ದೇ ಇರುತ್ತವಾದ್ದರಿಂದ ಈ ಆಧುನಿಕ ಕುಟುಂಬಗಳ ಹೆಚ್ಚಿನ ಸಮಸ್ಯೆಯೇ ಈ ಕೆಲಸಗಳ ಹೂಡಿಕೆ-ಹಂಚಿಕೆಗಳಿಂದ ಎಂದರೆ ತಪ್ಪಾಗಲಾರದು. ಇಂಥದರ ನಡುವೆ ಅಥವಾ ಇಷ್ಟೆಲ್ಲಾ ಇದ್ದೂ, ಅದರ ಮೇಲೆ ಬರುವುದೇ "in-law" factor, ಅಥವಾ ಸಂಬಂಧಿಕರ ಉಪದ್ರವ! ದೂರದ ಅಮೇರಿಕೆಯಲ್ಲಿರುವ ನಮಗೆ ಸಂಬಂಧಿಕರಿಲ್ಲ ಎಂದು ಕೊರಗುವವರು ಒಂದು ಕಡೆ, ದಿನಕ್ಕೊಮ್ಮೆ ಒಬ್ಬರಲ್ಲ ಒಬ್ಬರು ಬರುತ್ತಾರಲ್ಲ ಎಂದು ಹಲಬುವ ಬೆಂಗಳೂರಿನ ದಂಪತಿಗಳು ಮತ್ತೊಂದು ಕಡೆ.

ಅದೇ "in-law" factor ಎಂದರೆ ತಮ್ಮ ಸಣ್ಣ ಕುಟುಂಬಕ್ಕೆ ಅವರವರ ತಂದೆ-ತಾಯಿಯರಿಂದಲೇ ಕಷ್ಟಗಳು ಬರುತ್ತವೆ ಎನ್ನುವ ಮಾತು. ಉದಾಹರಣೆಗೆ, ಗಂಡ-ಹೆಂಡತಿ ಇಬ್ಬರೂ ಸಮವಯಸ್ಕ, ಸಮಾನ ಅಭಿರುಚಿ, ಸಮಾನ ವಿದ್ಯಾರ್ಹತೆ, ಸಮಾನ ಕೆಲಸದಲ್ಲಿದ್ದಾರೆಂದುಕೊಳ್ಳೋಣ. ಹುಡುಗನ ತಂದೆ ತಾಯಿಯರು ಈ ನವದಂಪತಿಗಳಿರುವ ಗೂಡಿಗೆ ದೂರದ ಊರಿನಿಂದ ಬಂದರೆಂದುಕೊಂಡರೆ ಅಲ್ಲಿ ತನ್ನ ಅತ್ತೆ-ಮಾವಂದಿರ ಉಪಚಾರವನ್ನು ಈ ಹುಡುಗಿಯೇ ಕೈಗೊಳ್ಳಬೇಕೆ, ಅದು ಎಷ್ಟರ ಮಟ್ಟಿನ ನಿರೀಕ್ಷೆಯಾಗಿರಬೇಕು ಎನ್ನುವುದು ಒಳ್ಳೆಯ ಪ್ರಶ್ನೆ. ಅದೇ ಮನೆಗೆ ಹುಡುಗಿಯ ತಂದೆ-ತಾಯಿಯರು ಬಂದರೆಂದುಕೊಂಡರೆ ಹುಡುಗನಿಂದ ಅವರು ಏನೇನನ್ನು ನಿರೀಕ್ಷಿಸಬಹುದು? ನಮ್ಮ ಸಮಾಜ ಇನ್ನೂ ಪುರುಷ-ಪ್ರಧಾನವಾದುದು ಎನ್ನುವ ಉತ್ತರ ನಾವಂದುಕೊಂಡಷ್ಟು ಪ್ರಬಲವಾಗಿ ಇಲ್ಲಿ ಸಹಾಯ ಮಾಡೋದಿಲ್ಲ. ಆ ಮನೆಯ ಹುಡುಗಿಗೂ ತಕ್ಕ ಕೆಲಸ, ಡೆಡ್‌ಲೈನುಗಳು, ಜವಾಬ್ದಾರಿ ಮುಂತಾದವುಗಳೆಲ್ಲ ಇದ್ದಾಗ ತನ್ನ ತಂದೆ-ತಾಯಿಯರಿಗೆ ತನ್ನ ಕೈಯಾರೇ ತಾನೇ ಮಗ ಒಂದು ಕಪ್ ಕಾಫಿ ಮಾಡಿಕೊಟ್ಟ ಎಂದೇ ಇಟ್ಟುಕೊಳ್ಳಿ ಆ ತಂದೆ-ತಾಯಿ ಅದನ್ನು ನೋಡುವ ರೀತಿಯೇ ಬೇರೆ. ಕೆಲಸಕ್ಕೆ-ಸಂಬಳಕ್ಕೆ-ಸ್ಟೇಟಸ್ಸಿಗೆ ಮಾತ್ರ ಹೆಂಡತಿ ಎಂದುಕೊಂಡರೆ ಆದೀತೆ? ಇಂತಹ ಸಮಯದಲ್ಲೇ ನಾನು ಆ ಹುಡುಗ ತನ್ನ ತಂದೆ-ತಾಯಿಯರ ನಿರೀಕ್ಷೆಗೆ ತಕ್ಕ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳಬೇಕು ಎನ್ನುವುದು. ಡಬಲ್ ಇನ್‌ಕಮ್ ಕುಟುಂಬಗಳಲ್ಲಿನ ಜವಾಬ್ದಾರಿಗಳು ತಕ್ಕಮಟ್ಟಿಗೆ ಡಿವೈಡ್ ಆಗಿ ಒಬ್ಬರಿಗೊಬ್ಬರು ಪೂರಕವಾಗಿ ನಡೆದುಕೊಳ್ಳುವುದೇ ಉತ್ತರ ಹೊರತು ಹೊರಗಿನ ಸಮಾಜಕ್ಕೆ (ತಮ್ಮ ತಂದೆ-ತಾಯಿ ಕುಟುಂಬದವರನ್ನೂ ಸೇರಿ) ತಕ್ಕಂತೆ ನಡೆಯುತ್ತೇವೆ ಎಂದುಕೊಳ್ಳುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನು?

ನಮ್ಮಲ್ಲಿ ಸಣ್ಣ-ಸಣ್ಣ ವಿಷಯಗಳೂ ದೊಡ್ಡದಾಗಿ ಬೆಳೆದುಕೊಳ್ಳಲು ಬೇಕಾದ ರೀತಿಯ ವಾತಾವರಣ ಇರುತ್ತೆ. ಈ ಉದಾಹರಣೆಯನ್ನು ನೋಡಿ: ನನಗೆ ಗೊತ್ತಿರುವ ಯುವ ದಂಪತಿಗಳು ತಮ್ಮ ತಮ್ಮನ್ನು ಏಕವಚನದಲ್ಲೇ ಸಂಬೋಧಿಸಿಕೊಳ್ಳೋದು - ಅಂದರೆ ಹೋಗೋ-ಬಾರೋ ಎಂಬ ರೀತಿಯಲ್ಲಿ. ಒಬ್ಬೊರಿಗೊಬ್ಬರು ಅನ್ಯೋನ್ಯವಾಗಿರುವ ಅವರು ತಮ್ಮನ್ನು ಪ್ರೀತಿಯಿಂದ ಈ ಸಂಬೋಧನೆಗೆ ಹೊಂದಿಸಿಕೊಂಡಿದ್ದಾರೆ ಅಷ್ಟೇ. ಅದೇ ದಂಪತಿಗಳು ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದಾಗಲೂ ತಮ್ಮ ಸಂಬಂಧಿಕರ ನಡುವೆಯೂ ತಮ್ಮನ್ನು ಹೀಗೇ ಕರೆದುಕೊಳ್ಳುತ್ತಾರಷ್ಟೇ. ಅಕಸ್ಮಾತ್ ಅವರು ತಮ್ಮತಮ್ಮ ತಂದೆತಾಯಿಯರ ನಡುವೆ "ಏನ್ರೀ-ಬನ್ರೀ" ಪ್ರಯೋಗಕ್ಕೆ ತೊಡಗಿಕೊಂಡರೆಂದರೆ ಹೇಗಿರಬಹುದು? ನೆರೆಹೊರೆಗೆ ಹೊಂದಿಕೊಂಡಿರುವುದೋ ಅಥವಾ ತಮಗೆ ಬೇಕಂತೆ ನಡೆದುಕೊಳ್ಳುವುದೋ ಎನ್ನುವ ಪ್ರಶ್ನೆ ಬರುತ್ತದೆ. ನನ್ನ ಅನಿಸಿಕೆ ಪ್ರಕಾರ, ಯುವ-ದಂಪತಿಗಳು ಈ ನಿಟ್ಟಿನಲ್ಲೂ ತಮ್ಮ ಹಿರಿಯರಿಗೆ ತಿಳಿಹೇಳುವ ಅಗತ್ಯವಿದೆ.

***

ಮೊನ್ನೆ ಯಾರೋ ಹೇಳೋದನ್ನು ಕೇಳಿದೆ - ’ನಮ್ಮ ಮಗ ಅಮೇರಿಕಕ್ಕೆ ಇದಷ್ಟೇ ಬಂದಿದ್ದಾನೆ, ಅವನಿಗೊಂದು ಭಾರತೀಯ ಮೂಲದ ಅಮೇರಿಕನ್ ಸಂಜಾತೆಯೊಡನೆ ಮದುವೆ ನಿಶ್ಚಯವಾಗಿದೆ, ಆದರೆ ನಮ್ಮದು ಒಂದೇ ಒಂದು ಕಂಡೀಷನ್ ಎಂದರೆ ಇನ್ನೈದು ವರ್ಷಗಳ ನಂತರ ಅವರಿಬ್ಬರೂ ಪರ್ಮನೆಂಟ್ ಆಗಿ ಭಾರತಕ್ಕೆ ಹಿಂದಿರುಗಿಬಿಡಬೇಕು!’. ನನ್ನ ಮನಸ್ಸಿನಲ್ಲಿ, ’ಏಕೆ?’ ಎನ್ನುವ ಪ್ರಶ್ನೆ ಬಂದು ಹಾಗೇ ಉಳಿದುಹೋಯಿತು.

ನಮಗೆಲ್ಲ ೨೪ ವರ್ಷವಾಗುವವರೆಗೆ ಫುಲ್‌ಟೈಮ್ ಓದಿಸುವವರೆಗೆ ನಮ್ಮ ನಮ್ಮ ಪೋಷಕರು ಸಹಾಯ ಮಾಡಿದ್ದಾರೆ ನಿಜ. ನಮಗೆಲ್ಲ ಜಾತಿ-ಜಾತಕಗಳ ಬಂಧನಕ್ಕೆಳೆದು ಅವರ ಮನಸ್ಸಿಗೆ ಸಮಾಧಾನವಾಗುವಂತೆ ವಿವಾಹ ಮಾಡಿದ್ದಾರೆ ನಿಜ. ಇದೇ ಪೋಷಣೆ ಸಾಯುವವರೆಗೂ ನಮ್ಮನ್ನು ಕಾಯಬೇಕೇಕೆ? ನಮ್ಮ ಪೋಷಕರು ನೋಡಿರದ ಅಮೇರಿಕಕ್ಕೆ ನಾವು ಬಂದಿರೋದು, ಇನೈದು ಹತ್ತು ಇಪ್ಪತ್ತು ವರ್ಷಗಳಲ್ಲಿ ಈ ಹುಡುಗ-ಹುಡುಗಿಯ ಪ್ರಬುದ್ಧತೆ ಬದಲಾಗುತ್ತೆ, ಅವರಿಗೂ ಒಂದು ಕುಟುಂಬವಿರುತ್ತೆ, ಮೇಲಾಗಿ ಜವಾಬ್ದಾರಿ ಇರುತ್ತೆ, ಅದರ ನಡುವೆ ಇನ್ನೈದು ವರ್ಷಗಳಲ್ಲಿ ’ಭಾರತಕ್ಕೆ ಹಿಂತಿರುಗಿ’ ಎಂದು ಆಜ್ಞೆ ಮಾಡಲು ಇವರ ಹಿನ್ನೆಲೆ ಏನಿರಬಹುದು? ಸರಿ, ಆ ಅಮೇರಿಕನ್ ಸಂಜಾತೆ ಹೆಣ್ಣಿಗೆ ಇವರ ಬಾಯಿ ನೀರೂರುವ ಇಡ್ಲಿ-ದೋಸೆಯನ್ನು ಮಾಡಲು ಬಾರದಿದ್ದರೆ ಅದು ಆಕೆಯ ತಪ್ಪೇ? ನಮ್ಮಲ್ಲಿ ಒಂದು ಗಾದೆ ಮಾತಿದೆ, ಅಕ್ಕನೂ ಉಳಿಯಲಿ ಅಕ್ಕಿಯೂ ಉಳಿಯಲಿ ಎಂದರಾಗದು. ಅತ್ತೆ-ಮಾವಂದಿರನ್ನು ಮೆಚ್ಚಿಸಿಕೊಂಡು ಗಂಡನ ಸಮಸಮಕ್ಕೆ ಕೆಲಸವನ್ನೂ ಮಾಡಿಕೊಂಡು ಮನೆಯಲ್ಲಿ ಮತ್ತೆ ಹೊರಗೆ "ತಗ್ಗಿ-ಬಗ್ಗಿ" ನಡೆಯುವ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಇಟ್ಟುಕೊಂಡರಾದರೆ ಅದು ಅನಿರೀಕ್ಷಿತ ಪ್ರತಿಫಲವನ್ನು ತಂದುಕೊಡಬಹುದು.

ಇಷ್ಟೇ ಅಲ್ಲದೆ, ಹಣ ಕಾಸಿನ ದೃಷ್ಟಿಯಿಂದಲೂ ಬೇಕಾದಷ್ಟು ಸಂಕಷ್ಟಗಳು ಬಂದೊದಗುವುದು ಸಹಜ. ತಮ್ಮ ಮಗ ತಮ್ಮನ್ನು ಇಳಿವಯಸ್ಸಿನಲ್ಲಿ ಸಲಹಲಿ ಎಂದು ಆಶಿಸುವ ಅಪ್ಪ-ಅಮ್ಮ ಅದೇ ರೀತಿ ತಮ್ಮ ಮನೆಯ ಸೊಸೆಗೂ ಹಾಗೇ ಜವಾಬ್ದಾರಿ ಇರಬಹುದು ಎನ್ನುವುದನ್ನು ನೋಡಲಾರರೇಕೆ? ತನ್ನ ತಂದೆಯ ಆಸ್ತಿಯಲ್ಲಿ ತನ್ನ ಸಹೋದರರ ಸಮಸಮಕ್ಕೆ ಪಾಲು ಕೇಳುವಂತೆ ಕಾನೂನೇ ಇದ್ದಾಗ ಗಂಡು ಮಕ್ಕಳ ಸಮಕ್ಕೆ ಹೆಣ್ಣು ಮಕ್ಕಳೂ ಅವರರವರ ಹೆತ್ತವರನ್ನು ನೋಡಿಕೊಂಡರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಎನ್ನುವ ಗಾದೆ ಮಾತಿನ ಮೊರೆ ಏಕೆ ಹೋಗಬೇಕು?

ಹೀಗೆ...ಈ ವಿಷಯವನ್ನು ಕುರಿತು ಬೇಕಾದಷ್ಟು ಬರೆಯಬಹುದು, ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ ಎಂದೆನಿಸಿದ್ದು ಈ ಹೊತ್ತಿನ ತತ್ವಗಳಲ್ಲೊಂದು!

11 comments:

ಸುಪ್ತದೀಪ್ತಿ suptadeepti said...

ನಿಮ್ಮ ಸದ್ಯದ ತತ್ವ ಓದೋದಕ್ಕೆ ಸರಿಯಾಗಿದೆ, ಕೆಲಸಕ್ಕೆ ಕಷ್ಟ ಎಂದರೆ ಬೇಜಾರು ಮಾಡಿಕೊಳ್ಳಬೇಡಿ. ಇದರ ಒಂದು ಸ್ವರೂಪ ನಮ್ಮ ಸಂಬಂಧಿಕರ ಮನೆಯಲ್ಲೇ ನೋಡುತ್ತಿದ್ದೇನೆ.

ನನ್ನ ತಮ್ಮಂದಿರ (ಕಸಿನ್ಸ್) ಪರವಾಗಿ ಅವರ ಅಪ್ಪ-ಅಮ್ಮನಿಗೆ ತಿಳಿಹೇಳಿದರೆ ಅನಾಹುತವೇ ಕಾದಿತ್ತು. ಅತ್ತು-ಕರೆದು ರಂಪಾಟವಾಗಿ, ಕೊನೆಗೆ ನನ್ನನ್ನೂ ಹೀಯಾಳಿಸಿ ಬೈದುಬಿಟ್ಟರು. ಅವರ ಸೊಸೆ ಹೊರಗೂ ದುಡಿಯಬೇಕು (ಮಗ ತಗೊಂಡ ಮನೆಯ ಸಾಲ ತೀರಬೇಕಲ್ಲ), ಮನೆಯೊಳಗೂ ಎಲ್ಲವನ್ನೂ ಮಾಡಬೇಕು (ಮನೆ ಹೆಣ್ಣಿನ ಜವಾಬ್ದಾರಿ!!). ಇನ್ನೊಂದು ತಮ್ಮನ ಮನೆಯಲ್ಲಿ ಮಗುವನ್ನು "ದೊಡ್ಡ" ಶಾಲೆಗೆ ಹಾಕಿದ್ದಾರೆ, ಅದರ ಹಣಕಾಸು ಹೊಂದಿಸಲು ಸೊಸೆ ದುಡಿಯಲೇಬೇಕು. ಇವರಿಬ್ಬರು ಸದ್ಯಕ್ಕೆ ತಮ್ಮ ಪಾಡಿಗೆ ತಾವಿದ್ದಾರೆ. ಇನ್ನು ಈ ಹುಡುಗರು ಅವರನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ, ಮನೆಗಳೆರಡೂ ರಣರಂಗಗಳೇ ಆದಾವೇನೋ ಅನ್ನಿಸಿದೆ ನನಗೆ. ಈ ಹುಡುಗರ ಮಾತಿಗೆ ಯಾವುದೇ ಬೆಲೆ ಕೊಡುತ್ತಿಲ್ಲ ಈ ಅಪ್ಪ-ಅಮ್ಮ. "ನೀನು ಸುಮ್ಮನಿರು. ನಿನಗೇನೂ ತಿಳಿಯದು. ಅವಳು ಕಿತಾಪತಿ ಹಚ್ಚಿದ್ದಾಳೆ" ಅಂತಲೇ ಶುರು ಮಾಡುತ್ತಾರೆ. "ಇವರನ್ನು ಸರಿ ಮಾಡೋದಕ್ಕೆ ಸಾಧ್ಯವೇ ಇಲ್ಲಕ್ಕಾ" ಅಂತಾರೆ ಹುಡುಗರು. ಅವರ ಪರಿಸ್ಥತಿ ಪಾಪ!!

Sandhya said...

nice post!...but avarigella tiLi heLodu kashta..."doddavrige" heLtaare anno innond comment kooda sErkoLotte.

Anonymous said...

ನಮ್ಮ ಸಮಾಜದಲ್ಲಿ ಇವತ್ತಿಗೂ ಮಗಳನ್ನು ನೋಡೋ ದೃಷ್ಟಿಕೋನಕ್ಕೂ, ಸೊಸೆಯನ್ನು ನೋಡೋ ದೃಷ್ಟಿಕೋನಕ್ಕೂ ಅಗಾಧ ಅಂತರವಿದೆ. ಅಳಿಯ ಮಗಳಿಗೆ ಸಹಾಯ ಮಾಡಿದರೆ ಅವನು ತುಂಬಾ "ಒಳ್ಳೆಯವಾಗಿ" ಕಾಣುತ್ತಾನೆ. ಅದೇ ಸಹಾಯ ಮಗ ತನ್ನ ಹೆಂಡತಿಗೆ ಮಾಡಿದಲ್ಲಿ ಅವನು ಹೆಂಡತಿ ಗುಲಾಮನಾಗುತ್ತಾನೆ!ಹಾಗಾಗಿ, ಸೊಸೆಯರೂ ಅತ್ತೆಗೆ ಸಲ್ಲಬೇಕಾದ "ಮರ್ಯಾದೆ"ಯನ್ನೇ ಸಲ್ಲಿಸುತ್ತಾರೆ :)


ನಮ್ಮ ಸಮಾಜದಲ್ಲಿ ಇವತ್ತಿಗೂ ಮಗಳನ್ನು ನೋಡೋ ದೃಷ್ಟಿಕೋನಕ್ಕೂ, ಸೊಸೆಯನ್ನು ನೋಡೋ ದೃಷ್ಟಿಕೋನಕ್ಕೂ ಅಗಾಧ ಅಂತರವಿದೆ. ಅಳಿಯ ಮಗಳಿಗೆ ಸಹಾಯ ಮಾಡಿದರೆ ಅವನು ತುಂಬಾ "ಒಳ್ಳೆಯವಾಗಿ" ಕಾಣುತ್ತಾನೆ. ಅದೇ ಸಹಾಯ ಮಗ ತನ್ನ ಹೆಂಡತಿಗೆ ಮಾಡಿದಲ್ಲಿ ಅವನು ಹೆಂಡತಿ ಗುಲಾಮನಾಗುತ್ತಾನೆ!ಹಾಗಾಗಿ, ಸೊಸೆಯರೂ ಅತ್ತೆಗೆ ಸಲ್ಲಬೇಕಾದ "ಮರ್ಯಾದೆ"ಯನ್ನೇ ಸಲ್ಲಿಸುತ್ತಾರೆ :)


"ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ." - ಅಷ್ಟು ಸುಲಭವಲ್ಲ ಇದು. ಆದರೂ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ.

sunaath said...

ಅತ್ಯಂತ ಸಮಯೋಚಿತವಾದ ಬರಹ. ಭಾರತೀಯ ಸಮಾಜದಲ್ಲಿ
ಇದು ಬರಲೇಬೇಕಾದ ಬದಲಾವಣೆ. ನಿಮ್ಮ ಲೇಖನಕ್ಕೆ ಸ್ವಾಗತ ಬಯಸುತ್ತೇನೆ.

Satish said...

ಜ್ಯೋತಿ ಮೆಡಮ್,
ನಮ್ಮ್ ತಂದೆ-ತಾಯಿಯರಿಗೆ ನಾವು ತಿಳಿ ಹೇಳೋಕ್ ಆಗೋಲ್ಲ ಅಂತಂದ್ರೆ ಇನ್ನ್ ಯಾರಿಗ್ ತಾನೇ ಏನ್ ಹೇಳೋಕ್ ಆಗುತ್ತೇ ಹೇಳಿ? ನೀವು ಹೇಳಿದಂತೆ ಅದು ಅಷ್ಟು ಸುಲಭವೂ ಅಲ್ಲ.

ಸಂಧ್ಯಾ,
ಅವರು ಕಾಮೆಂಟ್ ಸೇರಿಸ್ಲಿ, ’ನಿಮಗ್ಗೊತ್ತಾಗಲ್ಲ ಸುಮ್ನಿರಿ’ ಅಂತ ಹೇಳಿ ನೀವೇ ಚಾರ್ಜ್ ತೆಗೊಳ್ಳಿ ಸರಿ ಹೋಗುತ್ತೆ!

ತ್ರಿವೇಣಿ,
ಪ್ರಯತ್ನ ನಮ್ಮದು, ನಮ್ಮ ಪ್ರಯತ್ನಕ್ಕೆ ಬಗ್ಗದಿದ್ದರೆ ತಂದೆ-ತಾಯಿಯರನ್ನು ದೂರ ಮಾಡ್ಕೋ ಬೇಕಾಗುತ್ತೆ, ಈ ಆಧುನಿಕ ಬದುಕಿನ ಸಂಕೀರ್ಣಗೆ ಅಷ್ಟೂ ಸ್ಪಂದಿಸಲಿಲ್ಲ ಅಂದ್ರೆ ಹೇಗೆ ಅಲ್ವಾ?! :-)

ಸುನಾಥ್,
ಧನ್ಯವಾದಗಳು, ಈ ಬದಲಾವಣೆ ಇವತ್ತಲ್ಲ ನಾಳೆ ಬರುತ್ತೆ ಅನ್ನೋದು ನನ್ನ ನಂಬಿಕೆ.

Veena Shivanna said...

ಹೀಗೆ ದಟ್ಸ್ ಕನ್ನಡ ದಿಂದ ಕೊಂಡಿ ಸಿಕ್ತು.. ಬಹಳ ಸಮಯೋಚಿತ ಬರಹ.
ಅದು ಬ್ರೂ ಅಲ್ಲ ನೆಸ್ಕೇಫೆ ದು ಅಡ್ವರ್ಟೈಸೆಮೆಂಟ್.!! :-)

ಅಪ್ಪ ಅಮ್ಮನಿಗೆ ಹೇಳೊದು ಬಹಳ ಕಷ್ಟದ ಕೆಲ್ಸ ವೇನಲ್ಲ, ಅದು ಚಿಕ್ಕಂದಿನಿಂದ ನಿಮ್ಮ ನಿಮ್ಮ ಅಪ್ಪ ಅಮ್ಮನ ಸಂಭಂದ ಹೇಗಿರತ್ತೆ ಅನ್ನೊದರ ಮೇಲೆ ನಿರ್ಬಂದವಾಗಿರತ್ತೆ. ಮೊದಲಿಂದ ಅವರು ಹೇಳಿದಕ್ಕೆ ಚಕಾರ ಎತ್ತದೆ ಎಲ್ಲ ಪಾಲಿಸಿಕೊಂಡು ಬಂದು, ಹೆಂಡತಿ ಬಂದ ತಕ್ಷಣ ಇದೆಲ್ಲ ಹೆಳೋಕ್ ಶುರು ಮಾಡಿದ್ರೆ ಅವರು ಏನೇಳ್ ತಾರೆ? ಮಗ ಏನೋ ಸರಿಯಾಕೆ ಇದ್ದಾ, ಸೊಸೆ ಬಂದು ಇದೆಲ್ಲ ಶುರು ಅಂತ...
ಆದ್ರು ಇಂತಹ ದೊಡ್ಡ ದೊಡ್ಡ ಬದಲಾವಣೆಗಳನ್ನ ನಿಧಾನವಾಗಿ ತರೋದು ಒಳ್ಳೆಯದು.. ಮಗನೇ ಯಾಕೆ ಸೊಸೆ ಕೂಡ ಅತ್ತೆ ಮಾವನಿಗೆ ತನ್ನ ಅನಿಸಿಕೆಗಳನ್ನ ಹೇಳೊ ಪ್ರಯತ್ನ ಮಾಡಬಹುದಲ್ವಾ?

ಅಪ್ಪ ಅಮ್ಮ ಕೂಡ ನನ್ನ ಮಗ ನಾವ್ ಹೇಳಿದ್ ಹೆಣ್ಣಿಗೆ ತಾಳಿ ಕಟ್ತಾನೆ ಅನ್ನೊ ಆಸೆ ಇಟ್ಕೋಳೊದು ಅಷ್ಟೊಂದು ಸರಿ ಕಾಣೋಲ್ಲ(ನಂಗು ಒಬ್ಬ ಮಗ ಇದ್ದಾನೆ :-))

ಅಪ್ಪ ಅಮ್ಮ ಏಕವಚನ ದಲ್ಲಿ ಮಾತಾಡಿದ್ರೆ ಇನ್ನೊಂದು ಕಷ್ಟ ಎನು ಅಂದ್ರೆ, ಮಕ್ಕಳು ಕೂಡ ಅಮ್ಮ ಅಪ್ಪನ್ನ ಬನ್ನಿ ಹೋಗಿ ಅನ್ನೋ ಬದ್ಲು ಬಾ ಹೋಗು ಅನ್ನೋಕ್ಕೆ ಶುರು ಮಾಡ್ತಾರೆ ಅಷ್ಟೆ. :-)

ಸಂಬಂದಿಕರು ಉಪದ್ರವ ಅನ್ನೋ ಪರಿಸ್ಥಿತಿ ಇನ್ನು ಎಲ್ಲಾ ಕಡೆ ಇಲ್ಲ ಅನ್ನಿಸುತ್ತೆ! ಅಮೇಲೆ ಜನರಿಗೆ ಕೂಡ ಮನೆಗೆ ಬರುವಾಗ ಸ್ವಲ್ಪ ಅವರ convinience check ಬರ್ಬೇಕು ಅನ್ನೋದೆಲ್ಲ ತಿಳ್ದೆ ಇದೆ.
America dalli iro ashTu partying gethering, kannada kooTa ella idre illu saha janarige nentru manege hogbeku annisodu kaDime aagbahudu.

America dalli jana neMtarilla antha halubodu nijana, mathe cinema gaLalli without appointment ella friends bandre kiri kiri antha toristaaralla yaake?

Anonymous said...

maneli, sosehyanrigu matte magaligu differentiate madtaare andralla,,,, eegina kaladalli...
Hendatiyaru,, appanigu matte mavaniguu,, tumba differentaagi nodtaare... modali hendadati get buddi helbeku...

Anonymous said...

ಸತೀಶ್,ಒಳ್ಳೆ ಬರಹ ಆದರೆ ಈ ಕಾಲದಲ್ಲಿ ಬೆಂಗಳೂರಿನಂತಹ ನಗರದಲ್ಲಿ ಚಿಕ್ಕ ವಯಸ್ಸಿನ ಮಕ್ಕಳೂ ಕೂಡ ಬುದ್ಧಿ ಹೇಳುವುದು ಸಾಮಾನ್ಯ ನಾನು ಎಷ್ಷೋ ಮನೆಗಳಲ್ಲಿ ನೋಡಿದ್ದ ವಿಷಯ ಮತ್ತು ನೆಂಟರಗಳು ಮನೆಗೆ ಬಂದರೆ ತೊಂದರೆಯಾಗುತ್ತೆ ಎಂದು ತಿಳಿದುಕೊಳ್ಳುವುದು ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಈಗಲೂ ಮೈಸೂರಿನಂತಹ ಅಂದರೆ ನಗರ ಅಥವಾ ಪಟ್ಟಣ, ಅಥವಾ ಹಳ್ಳಿಗಳಿಗೆ ನೆಂಟರು ಬಂದಲ್ಲಿ ಎಷ್ಠು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವುದನ್ನು ಅಲ್ಲಿಗೆ ಹೋಗಿ ಅನುಭವಿಸುವುದೇ ಒಳ್ಳೆಯದು ಆದರೆ ಬೆಂಗಳೂರಿನಂತಹ ಸಿಲಿಕಾನ್ ಸಿಟಿಯಲ್ಲಿ ಅಪ್ಪಿ ತಪ್ಪಿ ನೆಂಟರು ಬಂದಲ್ಲಿ ಒಂದು ಕಾಫಿ ಅಥವಾ ಟೀ ಕೊಟ್ಟು ನಾವು ಇವುತ್ತು ಮನೆಯಲ್ಲಿ ಇರೋದಿಲ್ಲಾ ಅಂಥಾನೋ ಅಥವಾ ಇನ್ನಾವುದೋ ಕಾರಣ ಕೊಟ್ಟು ಮೊದಲು ಅಲ್ಲಿಂದ ಸಾಗಿಹಾಕೋದನ್ನ ನಾನು ಸ್ವತಃ ಅನುಭವಿಸಿದ್ದೀನಿ. ಇದಕ್ಕೆ ಕೆಲವು ಸರಿಯಾದ ಕಾರಣಗಳೂ ಇರಬಹುದು ಜಾಗದ ಅಭಾವ ನೀರಿನ ಅಭಾವ ಆದರೆ ಇದೆಲ್ಲಕ್ಕಿಂತ ಮುಖ್ಯವಾದುದು ಸಂಬಂಧ, ಸಂಭಂದಗಳಿಗೆ ಬೆಲೆ ಕಟ್ಟಲಿಕ್ಕೆ ಆಗುವುದಿಲ್ಲ, ಮೊದೆಲೆಲ್ಲ ಒಂದು ಮನೆಯೆಂದರೆ ಅಪ್ಪ,ಅಮ್ಮ ಕನಿಷ್ಠ 3 ರಿಂದ 4 ಮಕ್ಕಳು ಇರುತ್ತಿದ್ದುವು, ಆಗ ಅಣ್ಣ-ತಂಗಿ, ಅಕ್ಕ-ತಪ್ಪ, ಅಕ್ಕ-ತಂಗಿ ಸೋದರ ಸಂಭಂದಗಳು ಹೇಗೆ ಅನ್ನುವುದು ತಿಳಿಯುತ್ತಿದ್ದವು. ಆದರೆ ಈಗಿನ ಕಾಲದಲ್ಲಿ ಒಂದೇ ಮಕ್ಕಳಿರುವ ಮನೆಯಲ್ಲಿ ಸಂಭಂದಗಳಿಗೆ ಬೆಲೆಯೇ ಇರುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಸಂಸ್ಕಾರ, ಮನೆಯಲ್ಲಿ ಸರಿಯಾಗಿ ಸಂಸ್ಕಾರ ಕೊಟ್ಟಿದ್ದಲ್ಲಿ, ಅವರು ಭಾರತದಲ್ಲಿ ಇರಲಿ, ಅಥವಾ ಅಮೆರಿಕಾದಲ್ಲಿ ಇರಲಿ ಅಥವಾ ಹಳ್ಳಿಯಲ್ಲಿ ಇರಲಿ ಅಥವಾ ಬೆಂಗಳೂರಿನಲ್ಲಿ ನಲ್ಲಿ ಸಂಬಂಧಗಳಿಗೆ ಬೆಲೆ ಕೊಟ್ಟು ಬಂದ ಅತಿಥಿಗಳಿಗೆ ಸರಿಯಾಗಿ ನೋಡಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಮೇಲೆ ಹೇಳಿದ ಹಾಗೆ ನೋಡಿಕೊಳ್ಳುತ್ತಾರೆ. ನಮ್ಮ ದೇಶದ ಅತಿಥಿಗಳಿಗೆ ಒಂದು ಗಾದೆ ಇದೆ "ಅತಿಥಿದೇವೋಭವ" ಆದರೆ ಈಗಿನ ಕಾಲದಲ್ಲಿ ಅತಿಥಿ ಅನ್ನೊ ಪದವೇ ಎಷ್ಟೋ ಜನಗಳಿಗೆ ಗೊತ್ತಿರುವುದಿಲ್ಲ ಗೊತ್ತಿದ್ದರೂ ಅದು ಬೇಕಾಗಿಲ್ಲ. ಮತ್ತು ಸತೀಶ್ ರವರು ಅಪ್ಪ-ಅಪ್ಪನನ್ನು ನೆಂಟರು ಅಂತಹ ಹೇಳಿದ್ದಾರೆ. ಅಂದರೆ ಅದರ ಅರ್ಥ ದೂರದಲ್ಲಿರುವ ಮಗನ ಅಥವಾ ಮಗಳ ಮನೆಗ ಅಪ್ಪ-ಅಮ್ಮ ಅಥವಾ ಅತ್ತೆ-ಮಾವ(ಹೆಂಡತಿಯ ಅಪ್ಪ-ಅಮ್ಮ) ಬಂದಲ್ಲಿ ಇವರಿಗೆ ತೊಂದರೆಯಾಗುತ್ತೆ ಅಂತ, ಆದರೆ ಅಪ್ಪ-ಅಪ್ಪ ಇಷ್ಟು ವರ್ಷಗಳ ಕಾಲ ನಮ್ಮನ್ನುಸಾಕಿ ಸಲಹೆ ದೊಡ್ಡವರನ್ನು ಮಾಡಿ ಓದಿಸಿ, ಒಳ್ಳೆಯ ವ್ಯಕ್ತಿಯನ್ನು ಮಾಡಿ, ವಯಸ್ಸಾದ ಮೇಲೆ ಒಂದು ನಾಲ್ಕು ದಿನ ಮಗನ ಅಥವಾ ಮಗಳ ಮನೆಗೆ ಬಂದಲ್ಲಿ ಅವರು ನೆಂಟರಾಗಿ ಬಿಡುತ್ತಾರಾ ಅಪ್ಪ-ಅಮ್ಮನಿಗೆ ಇಷ್ಟೇನಾ ಬೆಲೆ ದಯವಿಟ್ಟು ಎಲ್ಲರಲ್ಲೂ ಒಂದು ಕೋರಿಕೆ ದಯವಿಟ್ಟು ನೀವು ಓದಿ ಒಳ್ಳೆ ಕೆಲಸ ಸಿಕ್ಕ ಕೂಡಲೇ ದಯವಿಟ್ಟು ಅಪ್ಪ-ಅಮ್ಮನನ್ನು ನಿರ್ಲಕ್ಷಿಸಬೇಡಿ, ಅವರಿಗೆ ಬೇಕಾದ ಅನುಕೂಲ ಮಾಡಿಕೊಡುವುದು ಮಕ್ಕಳ ಕರ್ತವ್ಯ ಇಲ್ಲದಿದ್ದಲ್ಲಿ ಅವರ ಗತಿಯೇ ಮುಂದೆ ನಿಮಗೆ ಬರುವುದು ಖಂಡಿತಾ ಅದಕ್ಕೆ ಗಾದೆ ಇರುವುದು "ಇತಿಹಾಸ ಮರುಕಳಿಸುತ್ತದೆ ಎಂದು" ಮತ್ತು ತಂದೆ-ತಾಯಿ ಯವರಿಗೆ ತಿಳಿಹೇಳುವುದು ಒಳ್ಳೆಯದು ಆದರೆ ಅದನ್ನು ಹೇಳುವಾಗ ಒಂದನ್ನು ಮಾತ್ರ ನೆನಪಿನಲ್ಲಿ ಇಟ್ಟಿಕೊಳ್ಳಬೇಕು ಯಾವುದೇ ಕಾರಣಕ್ಕೂ ಅವರು ಮನಸ್ಸಿಗೆ ಬೇಜಾರಾದ ರೀತಿಯಲ್ಲಿ ಹೇಳಿದ್ದಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ. ಹಾಗಂತ ನಾನು ತಂದೆ-ತಾಯಿಯರ ಪರ ಅಂಥ ಅಲ್ಲಾ, ತಂದೆ-ತಾಯಿಯರೂ ಕೂಡ ಮಕ್ಕಳ ಕಷ್ಠವನ್ನು ಅರ್ಥಮಾಡಿಕೊಂಡು ಕಾಲಕ್ಕೆ ತಕ್ಕಂತೆ ಕೆಲವು ಹೊಂದಾಣಿಕೆಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ. (ನನ್ನ ತೊದಲು ನುಡಿಯಲ್ಲಿ ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ).

Satish said...

ಅನಾಮಧೇಯರೇ,
ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು, ಅದರಲ್ಲಿ ತಪ್ಪುಒಪ್ಪಿನ ಪ್ರಶ್ನೆ ದೂರ.
ಅವರವರ ದೃಷ್ಟಿಕೋನದಲ್ಲಿ ಸಮಸ್ಯೆ ಭಿನ್ನವಾದಂತೆ ಕಂಡರೂ ಬದಲಾಗುತ್ತಿರುವ ಜಾಗತಿಕ ನೆಲೆಯಲ್ಲಿ ಎರಡು ತಲೆಮಾರುಗಳ ನಡುವಿನ ತಳಮಳವನ್ನು ಎತ್ತಿಡುವುದು ಮೂಲ ಲೇಖನದ ಆಶಯವಷ್ಟೇ.

Anonymous said...

nimma lekhana thumba chenagide, hennu appana maneyallu horaginavalu, gandana maneyallu horaginavalu idu badalaguvudu yavaga prapanchadalli yesto badalavanegalu nedeyuthive adre idu mathra badalagadu.
Innu appa ammanige buddi helabahudu adare avaru thidikolluvudilla.

Satish said...

ಅನಾಮಧೇಯರೇ,
ಧನ್ಯವಾದಗಳು, ನನ್ನ ಊಹೆಯ ಪ್ರಕಾರ ಭಾರತೀಯ (ಮೂಲದ) ಕುಟುಂಬಗಳು ಮುಂಬರುವ ದಿನಗಳಲ್ಲಿ ಬಹಳಷ್ಟು ಬದಲಾವಣೆಯನ್ನು ಕಾಣುತ್ತವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ರೋಲ್, ಕಮ್ಮ್ಯೂನಿಕೇಷನ್ ಮೊದಲಾದವುಗಳು ಪುನರ್ ವ್ಯಾಖ್ಯಾನಗೊಳ್ಳುತ್ತವೆ ಎನ್ನುವುದು ನನ್ನ ನಿರೀಕ್ಷೆ.