ಹಾಡಿನ ಸವಾಲ್
ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.
’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.
ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?
ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.
’ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು’
ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.
ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?
ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.
ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.
ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.
***
Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.
ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.
***
ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.
ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!
2 comments:
ಸತೀಶವರೇ ನಮಸ್ಕಾರ.
ನೀವು ನಿಮ್ಮ ಬ್ಲಾಗ್ ಬರಹಗಳಲ್ಲಿ ಹೇಗೆ ಅಗತ್ಯವಿಲ್ಲದಿದ್ದರೂ, ಚೆನ್ನಾದ ಕನ್ನಡ ಪದ ಲಭ್ಯವಿದ್ದರೂ ಕೂಡ ಇಂಗ್ಲೀಷ ಪದಗಳನ್ನು ಬಳಸುತ್ತೀರೋ ಹಾಗೇ ಅವರಿಗೂ ಕೂಡ ಸಂಗೀತ, ಸಂದರ್ಭಕ್ಕೆ ತಕ್ಕಂತೆ, ಎಲ್ಲ ವರ್ಗದ ಜನರನ್ನೂ ಆಕರ್ಷಿಸುವ ಸಾಹಿತ್ಯ ರಚಿಸುವ ಅಗತ್ಯವಿರುತ್ತದೆ. ಹೆಚ್ಚು ಜನರ ಬಾಯಲ್ಲಿ ಕನ್ನಡ ಗೀತೆ ಉಳಿದಿರಲು ಅದೂ ಕಾರಣವೆಂದರೆ ತಪ್ಪಾಗಲಾರದು.
vikAs namaskAra
nAvella bradarrU sisTarrU annadE idrU ittIchege chennAgi gottirO bhAnuvAra sOmavAragaLanna biTTu san^^DE, man^^DE annOk shurumADi bahaLa dinagaLAgi hOytu. nIvu hELidaMte blAg^^nalli kannaDada badalu uddEshapUrvakavAgi AMgla padagaLannu baLasidarU saha nanna eShTO kannaDa padagaLu AviyAgi hOgive annOdu nija.
Adre, 'aMtaraMga'dalli kelavu barahagaLu nUrakke nUru AMglada padagaLannu baLasidE iruva nidarshanagaLu kUDA illadilla.
heccu janara bAyalli uLiyuva sAhitya svacChavAgirutte, spaShTavAgirutte annOdu nanna anisike, adara badalu padagaLa uccAravE gottAgada hAgiruva sAhityavannEnu mADOdu hELi?
Post a Comment