ಸ್ವಾಗತ
ಅಂತರಂಗಕ್ಕೆ ಸ್ವಾಗತ - ದಯವಿಟ್ಟು ನಿಮ್ಮ ಬಹಿರಂಗವನ್ನೂ ತನ್ನಿ!
ಏನಾದ್ರೂ ಬರೀ ಬೇಕು ಅಂತ ಅಂದುಕೊಂಡು ಶುರು ಮಾಡಿದ್ರೆ ಡಜನ್ ಗಟ್ಟಲೆ ವಿಷಯಗಳು ಬಂದು ದುತ್ ಅಂತ ಮುತ್ತಿಕೊಳ್ಳ್ತಾವೆ. ಪೇಪರ್-ಪೆನ್ನು ಉಪಯೋಗಿಸಿ ಬರೆದು ಯಾವ್ದೋ ಕಾಲ ಆಯ್ತು, ಬರೆದ್ರೂ ಅದನ್ನ ಎಲ್ಲಿ ಅಂತ ಇಡೋದು ಹೇಗೆ ನಿಭಾಯ್ಸೋದು ಅಂತ ಕಂಪ್ಯೂಟರ್ ಮುಂದೆ ಕೂತು ಬರೆಯೋಕೆ ಅಲ್ಲ ಟ್ಪೈಪ್ ಮಾಡೋಕ್ ಶುರು ಮಾಡಿದ್ರೆ, ಈ ಹಾಳಾದ್ ಆಲೋಚನೆಗಳು ಬಂದಷ್ಟು ವೇಗದಲ್ಲೇ ಮಾಯವಾಗ್ತಾವಲ್ಲ! ಅದ್ಯಾವಳೋ ಒಬ್ಳು ಕುಣಿಯೋಕೆ ಬರ್ದೆ ನೆಲಾನ್ ಡೊಂಕು ಅಂದ್ಲಂತೆ ಹಂಗಾಯ್ತು ನನ್ ಕಥೆ. ಕಂಪ್ಯೂಟರ್ ಮುಂದೆ ಕೂತು "ಬರಹ"ದಲ್ಲಿ ಇನ್ನೂ ಒಂದು ಪುಟಾನೂ ತುಂಬಲ್ಲ, ಆಗ್ಲೇ ಇನ್ನೇನೋ ಬಂದು ತಲೆ ತುಂಬಾ ತುಂಬಿಕೋತಾವೆ - ನಾನು ದೊಡ್ಡ ಬರಹಗಾರನಾದಂತೆ, ಇಲ್ಲಾ, ನನ್ನ ಬರಹಗಳಿಂದ ಒಂದು ದೊಡ್ಡ ಸಾಮಾಜಿಕ ಕ್ರಾಂತಿ ಆದಂತೆ, ಇಲ್ಲಾ, ಒಂದು ಮಹಾನ್ ಪರ್ವತಾನ ಕಡಿದು ಬಿಸಾಡಿದಂತೆ! ದಿನದ ಕೊನೆಯಲ್ಲಿ ಆಗೋದೇನಿದ್ರೂ ಇಷ್ಟೇ ಅಂತ ಈಗ್ಲಾದ್ರೂ ಅರಿವಿಗೆ ಬಂದು ಬ್ಲಾಗಿನ ಬಾಗಿಲನ್ನ ಹೊಕ್ಕಿದ್ದೇನೆ, ಇದರಲ್ಲಿ ಬಾಗಿಲು ಯಾವಾಗ್ಲೂ ತೆರೆದುಕೊಂಡಿರುತ್ತೆ ಅನ್ನೋದು ಹೆದರಿಕೆ ವಿಷ್ಯಾನಾದ್ರೂ ಒಂದು ರೀತಿ ಒಳ್ಳೇದೇ ಅನ್ನಿಸ್ತಾ ಇದೆ. ನೋಡೋಣ ಇದು ಎಲ್ಲೀವರೆಗೆ ಬರುತ್ತೋ ಅಂತ. ನಾನು ಹೀಗೆ "ನಿಮ್ಮವ"ನಾಗಿದ್ದರೇನೆ ಚೆಂದ, ಹೀಗೆ pen name ಇಟ್ಟುಕೊಂಡು ಬರೆಯೋದ್ರಿಂದ ಸ್ವಲ್ಪ candid ಆಗಿ ಬರೆಯಬಹುದು ಅಂದುಕೊಂಡಿದ್ದೇನೆ.
ಇಲ್ಲಿನ ಬರಹಗಳಲ್ಲಿ ಭಾರತೀಯರನ್ನು ತೆಗಳಿ ಬರೆದಿದ್ದೇನೆಂದು ನಿಮಗೇನಾದರೂ ಅನ್ನಿಸಿದರೆ, ಕ್ಷಮಿಸಿ - ನನ್ನ ದೇಶ, ನನ್ನ ಜನರ ಒಳಿತಿನ ಬಗ್ಗೆ ಯೋಚಿಸುವ ನನ್ನ ಸ್ವಭಾವವೇ ಹಾಗೆ!