ನಮ್ಮೂರ ರಸ್ತೆ ಹಾಗೂ ಜನರ ಮನಸ್ಥಿತಿ
"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.
ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.
ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.
ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.
ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?