ನಾವೂ ನಮ್ಮ ವೆಕೇಷನ್ನೂ...
ನಮ್ಮ ಆಫೀಸಿನಲ್ಲಿ ಸಮ್ಮರ್ ಬಂತೆಂದರೆ ವೆಕೇಷನ್ನುಗಳ ಅಧಿಕೃತ ಆರಂಭವೆಂದೇ ಅರ್ಥ. ಮಾರ್ಚ್‌ಗೆ ಆರಂಭವಾಗುವ ಸ್ಪ್ರಿಂಗ್ ತನ್ನ ಆಗಮನದ ಜೊತೆಗೆ ಒಂದಿಷ್ಟು ಚಿಗುರುಗಳಲ್ಲಿ ಹುರುಪನ್ನು ಮೂಡಿಸುತ್ತದೆಯೇ ವಿನಾ ವಾತಾವರಣದ ಉಷ್ಣತೆ ಎಪ್ಪತ್ತು ಡಿಗ್ರಿ (ಫ್ಯಾರನ್‌ಹೈಟ್) ಮೇಲೆ ಏರಿ ಸುಯ್ ಎಂದು ತೀಡುವ ಮೃದುವಾದ ಗಾಳಿಯಿಂದ ರೋಮಾಂಚನವಾಗುವುದರಿಂದ ಹಿಡಿದು ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಷ್ಟರಲ್ಲಿ ಸಮ್ಮರ್ ಹೋಗೇ ಬಿಟ್ಟಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಶಾಲೆಗಳಿಗೆ ರಜೆ, ಪೋಷಕರು ತಮ್ಮ ಮಕ್ಕಳನ್ನು ವರ್ಷಾವಧಿ ವೆಕೇಷನ್ನುಗಳಿಗೆ ಕೊಂಡೊಯ್ಯುವುದು ಕುಟುಂಬ ರೂಢಿ.
ನಾನು ನ್ಯೂ ಜೆರ್ಸಿಯಲ್ಲಿ ನೋಡಿರೋ ಹಾಗೆ ಅನಫಿಷಿಯಲ್ ಸಮ್ಮರ್ ಎಂದರೆ ಮೇ ತಿಂಗಳ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕ್ ಎಂಡ್ ನಿಂದ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ. ಜೂನ್-ಜುಲೈ-ಆಗಷ್ಟ್ ಇವೇ ಮೂರು ತಿಂಗಳು, ಅದೇನು ಕಡಿದು ಹಾಕುತ್ತೀರೋ ಬಿಡುತ್ತೀರೋ, ಇವೇ ವರ್ಷದ ಉಳಿದ ಒಂಭತ್ತು ತಿಂಗಳನ್ನು ಸಹಿಸಿಕೊಳ್ಳುವಂತೆ, ಪ್ರತಿ ಸಮ್ಮರ್‌ನಲ್ಲಿ ಹೊಸದೇನನ್ನೋ ಸೃಷ್ಟಿಸುವಂತೆ ನಮ್ಮನ್ನೆಲ್ಲ ಕಟ್ಟಿ ಹಾಕಿರೋದು.
ಸಾಗರದ ಎಲ್.ಬಿ. ಕಾಲೇಜಿನಲ್ಲಿ ಓದಿಕೊಂಡಿರುವಾಗ ಇದ್ದಿಲು ಒಲೆಗೆ ಬೆಂಕಿ ತಗಲಿಸಿ ಹೊಟ್ಟೆ ತುಂಬಿಕೊಂಡ ಕರ್ಮ ಇನ್ನೂ ಮುಗಿದಿಲ್ಲವೇನೋ ಅನ್ನೋ ಹಾಗೆ ನಮ್ಮನೆ ಡೆಕ್ ನಲ್ಲಿ ಇರುವ ಕಲ್ಲಿದ್ದಲು ಗ್ರಿಲ್ ಏಪ್ರಿಲ್ ಅಂಚಿನಲ್ಲಿ ಬೇಸ್‌ಮೆಂಟ್ ನಿಂದ ಡೆಕ್ ಮೇಲೆ ಬಂದು ಇದ್ದಿಲಿಗೂ ನನಗೂ ಇರುವ ಋಣವನ್ನು ನೆನಪಿಸಿಕೊಡುತ್ತದೆ. ’ವೆಜಿಟೇರಿಯುನ್ನ್ ಜನ ನೀವೇನು ಗ್ರಿಲ್ ಮಾಡ್ತೀರಿ?’ ಎನ್ನೋರು ವಿಸ್ಮಿತರಾಗುವ ಹಾಗೆ ನನ್ನ ವೆಜಿಟೇರಿಯನ್ನ್ ಗ್ರಿಲ್ಲಿಂಗ್ ಪುರಾಣವನ್ನೆಲ್ಲ ಹೊರಗೆ ತೆಗೆದಿಡುತ್ತೇನೆ. ಈ ಕಲ್ಲಿದ್ದಲು ಶಾಖ ಎಷ್ಟು ಜೋರು ಅಂದ್ರೆ ಸರಿಯಾಗಿ ಮ್ಯಾನೇಜ್ ಮಾಡಿದ್ರೆ ಒಂದು ದಿನದ ಊಟ-ವ್ಯವಸ್ಥೆಯನ್ನು ಈ ಗ್ರಿಲ್ ಒಲೆಯಲ್ಲೇ ಮಾಡಿಬಿಡಬಹುದು. ಅಮೇರಿಕನ್ ಊಟದ ಪದ್ಧತಿಯ ಹಾಗೆ ನಾವು ಒಂದಿಷ್ಟು ವೆಜಿಟೇರಿಯನ್ ಪ್ಯಾಟ್ಟಿಗಳು, ಉಪ್ಪು-ಹುಳಿ-ಖಾರ ಸವರಿದ ಗೊಂಜೋಳ, ಸ್ಕಿವರ್‌ಗೆ ಪೋಣಿಸಿದ ಥರಥರ ತರಕಾರಿಗಳು, ಚಿಪ್ಸ್ ಮುಳುಗಿಸಿ ತಿನ್ನಲಿಕ್ಕೆ ಮಾವಿನ ಹಣ್ಣಿನ ಚಟ್ನಿ (ಸಾಲ್ಸಾ), ಸವತೆಕಾಯಿ ತುಂಡುಗಳು, ಮಾವಿನ ಹಣ್ಣು, ಮನೆಯಲ್ಲೇ ಮಾಡಿದ ಲಿಂಬೆ ಪಾನಕ (ಲೆಮನೇಡ್), ಹಲವು ಥರದ ಬ್ರೆಡ್ಡು, ಕೆಚಪ್, ಸುಟ್ಟ ಈರುಳ್ಳಿ, ರೆಡ್ ವೈನ್ ಮೊದಲಾದವುಗಳನ್ನು ನಮ್ಮ ಬ್ಯಾಕ್ ಯಾರ್ಡ್‌ನಲ್ಲಿ ಹರಡಿಕೊಂಡು ವರ್ಷದ ಒಂದಿಷ್ಟು ದಿನಗಳು ಮನೆಯಲ್ಲೇ "ಪಿಕ್‌ನಿಕ್" ಮಾಡೋದು ರೂಢಿ. ಇವುಗಳ ಜೊತೆಗೆ ಮೆಣಸಿನ ಕಾಯಿ ಬೋಂಡಾ, ಆಲೂಗಡ್ಡೆ ಬಜ್ಜಿ ಹಾಗೂ ಪನ್ಕೋಡಾ ಸೇರಿಕೊಂಡು ನಮ್ಮ ಸಮ್ಮರ್ ಪಾರ್ಟಿಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತವೆ. ಸ್ವಿಚ್ ಒತ್ತಿ ಗ್ಯಾಸ್ ಗ್ರಿಲ್ ಮೇಲೆ ಒಂದೇ ಕ್ಷಣದಲ್ಲಿ ಬರ್ಗರ್‌ಗಳನ್ನು ಮಾಡುವುದಕ್ಕಿಂತ ಕಲ್ಲಿದ್ದಲ ಗ್ರಿಲ್ ಹೊತ್ತಿಸಿ ಅದಕ್ಕೆ ಗಾಳಿ ಬೀಸಿ ನಿಧಾನವಾಗಿ ಹೊತ್ತಿ ಉರಿಯುವ ಬೆಂಕಿಯಲ್ಲಿ ದಿನದ ಒಂದೆರಡು ಘಂಟೆ ಹೊರಗಿರುವುದು ಸುಖ ತರುತ್ತದೆ. ನಮ್ಮ ಅತಿಥಿಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಹುಟ್ಟುತ್ತದೆ.
ಆದರೆ ಇವು ಯಾವುದೂ ನಮ್ಮ ವೇಕೇಷನ್ನ್ ಅಲ್ಲವೇ ಅಲ್ಲ. ಬಾರ್ ಬೇ ಕ್ಯೂ ಏನಿದ್ದರೂ ವಾರಾಂತ್ಯದಲ್ಲಿ ನಾವು ಮನೆಯಿಂದ ಹೊರಗಿರುವ ಪ್ರಯತ್ನವಷ್ಟೇ. ಇನ್ನು ಎಲ್ಲರಂತೆ ಪಡೆದುಕೊಳ್ಳುವ ನಮ್ಮ ವೆಕೇಶನ್ನ್ ದಿನಗಳು ಎಲ್ಲಿಗೆ ಹೋಗುತ್ತವೆ, ಹೋಗಿಬಿಟ್ಟವು. ವರ್ಷಕ್ಕೆ ಒಂದೋ ಎರಡೋ ಬಾರಿ ಸಮುದ್ರ ಇನ್ನೂ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವ ಹಾಗೆ ಬೀಚ್‌ಗೆ ಹೋಗುವುದು ವೇಕೇಷನ್ನ್ ಅಲ್ಲ. ಮುಂದಿನ ವರ್ಷ ನೋಡೋಣ ಎನ್ನುತ್ತಲೇ ಮುಂದೆ ತಳ್ಳುತ್ತ ಬಂದ ಡಿಸ್ನಿ ವರ್ಲ್ಡ್ ಮತ್ತು ಇತರ ಸ್ಥಳೀಯ ಆಕರ್ಷಣೆಗಳು ಇನ್ನೂ ಪುಸ್ತಕದ ಗಂಟಾಗೇ ಉಳಿದಿವೆ. ನಮ್ಮ ಮನೆಯಿಂದ ಕೇವಲ ಐವತ್ತೇ ಮೈಲು ದೂರದ ನ್ಯೂ ಯಾರ್ಕ್ ನಗರವನ್ನು ನೋಡೋದು ಯಾವಾಗಲೋ ಒಂದು ಬಾರಿ, ’ಯಾರು ಹೋಗುತ್ತಾರೆ ಅಲ್ಲಿಗೆ, ಹಳ್ಳ-ಕೊಳ್ಳವನ್ನು ದಾಟಿ’ ಎನ್ನುವ ಉದಾಸೀನ ಗೆದ್ದು ಬಿಡುತ್ತದೆ. ಅಮೇರಿಕದ ನಮ್ಮ ಬದುಕಿನಲ್ಲಿ ಆಫೀಸಿನ ಕೆಲಸ, ಕಾರ್ಯ ಹಾಗೂ ಅದರ ಸಂಬಂಧಿ ಯೋಚನೆಗಳನ್ನು ತೆಗೆದು ಹಾಕಿ ಬಿಟ್ಟರೆ ನಮ್ಮದು ಎಂದು ಉಳಿಯುವ ಭಾಗ ಬಹಳ ಕಡಿಮೆಯೇ ಎನ್ನಿಸಿ ಒಮ್ಮೆ ಭಯವಾಗುತ್ತದೆ.
ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುವಾಗ ವಾರಕ್ಕೆರಡು ಮತ್ತು ತಿಂಗಳಿಗೆರಡು ಸಿಗುವ ರಜೆಗಳನ್ನು ಒಟ್ಟು ಪೋಣಿಸಿಕೊಂಡು ವಾರಗಟ್ಟಲೆ ಕರ್ನಾಟಕದಲ್ಲಿ ತಿರುಗಾಡಿದರೂ ಇನ್ನೂ ಮುಗಿಯದ ಕೆಲಸಗಳು ಹವ್ಯಾಸಗಳು ಅದೆಷ್ಟೋ ಇದ್ದವು. ಇನ್ನೂ ತಂತ್ರಜ್ಞಾನ ಇಷ್ಟು ಮುಂದುವರಿಯದೆ ನಮ್ಮ ನಮ್ಮ ನಡುವೆ ಅಗಾಧ ದೂರಗಳಿದ್ದರೂ ಭೇಟಿಯಾಗಿ, ಮಾತನಾಡಿ, ಮುಟ್ಟಿ, ಹರಟಿ, ಹಾಡಿ, ಜಗಳವಾಡಿ ಮತ್ತೆ ಒಂದು ಗೂಡಿ, ಕುಣಿದು ಕುಪ್ಪಳಿಸುವ ಅನೇಕ ಚಟುವಟಿಕೆಗಳ ತುಡಿತವಿತ್ತು. ಬೇಕಾದಷ್ಟು ನೆಪಗಳಿದ್ದವು, ನೆನಪುಗಳಿದ್ದವು. ಸಾಕಷ್ಟು ಸಂಖ್ಯೆಯ ಗುರುತು-ಪರಿಚಯದವರಿದ್ದರು, ಸಂಬಂಧಿಗಳಿದ್ದರು. ತಿರುಗಲು ದೇವಸ್ಥಾನಗಳಿದ್ದವು, ಮರುಗುವ ಮನಸ್ಸಿತ್ತು. ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎನ್ನುವ ತುಡಿತವಿತ್ತು. ಸಾಹಿತ್ಯವಿತ್ತು, ಸಂಗೀತವಿತ್ತು, ಸಿನಿಮಾಗಳಿದ್ದವು, ಪುಸ್ತಕಗಳಿದ್ದವು, ನಿಯತಕಾಲಿಕಗಳಿದ್ದವು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಾರ್ಗದಲ್ಲಿ ಓದಿ ಮುಗಿಸಿದ ಅದೆಷ್ಟೋ ಲಂಕೇಶ್, ಸುಧಾ, ತರಂಗ, ಮಯೂರ, ಉತ್ಥಾನ, ಮಲ್ಲಿಗೆ, ಪ್ರಜಾಮತದ ವಾಹಿನಿಗಳಿದ್ದವು. ಊರಿಗೊಂದಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬೇಂದ್ರೆ, ಭೈರಪ್ಪ, ತರಾಸು, ಕಾರಂತ, ಮಾಸ್ತಿ, ಕುವೆಂಪು ಮೊದಲಾದ ಸ್ನೇಹಿತರ ಅನುಭವಗಳು ಅನಂತವಾಗಿ ಹಾಗೂ ಪುಕ್ಕಟೆಯಾಗಿ ಸಿಗುತ್ತಿದ್ದವು. ಇಂತಹ ಅಪರಿಮಿತ ಅನುಭವಗಳನ್ನು ಪಠಿಸಿ-ಪ್ರವಚಿಸಿದ ಘಟಾನುಗಟಿಗಳ ಸಾರ ಸುಲಭವಾಗಿ ಸಿಗುತ್ತಿತ್ತು. ಹಲವಾರು ತತ್ವಗಳು ಸಿಗುತ್ತಿದ್ದವು - ಒಂದು ರೀತಿ ಬಯಲಿನಲ್ಲಿ ಮೇಯುವ ದನಕ್ಕೆ ಸಿಗುವ ಅವಕಾಶದ ಹಾಗೆ, ಅಂತಹ ಅಗಾಧವಾದ ಅನೇಕಾನೇಕ ಬಯಲುಗಳು ಮೇಯಲಿದ್ದವು.
ಇವೆಲ್ಲದರ ಬಗ್ಗೆ ಈಗ ಬರೀತಾ ಹೋದರೆ ಅದು ಸವಿ ನೆನಪಾಗುತ್ತದೆ, ಅದರ ಮರುಘಳಿಗೆ ಅದು ನಾಸ್ಟಾಲ್ಜಿಯಾವಾಗಿ ಕಾಣುತ್ತದೆ. ಆದರೆ ಈವರೆಗೆ ಒಂದು ವಿಷಯವಂತೂ ಸತ್ಯ - ನಾವು, ನಮ್ಮ ವೇಕೇಷನ್ನುಗಳು, ನಮ್ಮ ದುಡಿಮೆ-ಇಡುಗಂಟು ಇವೆಲ್ಲದರ ಸಾಕ್ಷಾತ್ಕಾರ ಈ ಮೇಲಿನ ನಾಸ್ಟಾಲ್ಜಿಯಾದೊಂದಿಗೆ ಮಾತ್ರವೇ. ಅದನ್ನು ಹೊರತು ಪಡಿಸಿ, ಅಮೇರಿಕದಲ್ಲಿ ನಮ್ಮ ವೇಕೇಷನ್ನುಗಳಿಗೆ ಪೂರ್ಣ ಅರ್ಥ ಬಂದಿದ್ದಿಲ್ಲ, ನಮ್ಮ ಅರ್ಥ ಪರಿಸ್ಥಿತಿ ಪರಿಪೂರ್ಣವಾದದ್ದಿಲ್ಲ. ನಿಜವಾಗಿಯೂ ನಮ್ಮತನವನ್ನು ಕಲಕಿ ನೋಡುವ ವೆಕೇಷನ್ನುಗಳು ಕೆಲವು ಪುಣ್ಯಾತ್ಮರಿಗೆ ವರ್ಷಕ್ಕೊಮ್ಮೆ ಬರುತ್ತವೆ, ಇನ್ನು ಕೆಲವು ನಮ್ಮಂಥವರಿಗೆ ಮೂರು-ನಾಲ್ಕು ವರ್ಷಕ್ಕೊಮ್ಮೆ ಕೂಡಿ ಬರುತ್ತದೆ. ಬರೀ ವಿದೇಶ ಪ್ರಯಾಣದ ಯೋಗವೊಂದಿದ್ದರೆ ಸಾಲದು, ಮತ್ತೆ ಮರಳಿ ಸ್ವದೇಶವನ್ನು ಆಗಾಗ್ಗೆ ನೋಡುವ ಯೋಗವೂ ಇರಬೇಕು ಎನ್ನುವ ಆಲೋಚನೆ ಬಂದಿದ್ದು ಇತ್ತೀಚೆಗೆ ಮಾತ್ರ.
ಹಿಂದೆ ಎರಡು ಭುಜಗಳಿದ್ದ ಮನಕ್ಕೆ ಇಂದು ಎಂಟು ರೆಕ್ಕೆಗಳಿವೆ, ಎಲ್ಲಿಗಾದರೂ ಹೋಗಬೇಕು ಬರಬೇಕು ಎಂದರೆ ಅದರ ಮುಂದಿನ ತಯಾರಿ ಮತ್ತು ಅದರ ನಂತರದ ಚಿಂತೆಗಳು ಅನಿವಾರ್ಯವಾಗುತ್ತವೆ. ಹಣ ಹೆದರಿಕೆ ಎರಡೂ ಒಂದೇ ನಾಣ್ಯದ ಮುಖಗಳ ಹಾಗೆ ಒಂದನ್ನೊಂದು ಅನುಸರಿಸಿಕೊಂಡು ಬಂದಿವೆ - ಹಿಂದೆ ಹೆಗ್ಗೋಡಿನಿಂದ ಸಾಗರಕ್ಕೆ ನಿನಾಸಂ ನಾಟಕ ಮುಗಿಸಿ ನಡೆದುಕೊಂಡು ಬಂದಾಗ ಕತ್ತಲಿನ ದಾರಿಯಲ್ಲಿ ಹಾವಿದ್ದರೆ ಎನ್ನುವ ಹೆದರಿಕೆ ಇರಲಿಲ್ಲ, ಇಂದು ಕಾರಿನಲ್ಲಿ ಬೆಚ್ಚಗೆ ಕುಳಿತು ರಾತ್ರಿ ಡ್ರೈವ್ ಮಾಡುತ್ತಿದ್ದರೆ ರಸ್ತೆಯ ನಡುವೆ ಜಿಂಕೆಗಳು ಬಂದರೆ ಎಂದು ಕಂಪನ ಶುರುವಾಗುತ್ತದೆ.
ವರ್ಷವಿಡೀ ದುಡಿದು ಇರುವ ಮೂರು ನಾಲ್ಕು ವಾರಗಳನ್ನು ಒಟ್ಟುಗೂಡಿಸಿ ಕೆಲವು ವರ್ಷಗಳಿಗೊಮ್ಮೆ ಮಾಡುವ ಸ್ವದೇಶ ಪ್ರಯಾಣ ತರುವ ಸುಖಕ್ಕಿಂತ ಹೆಚ್ಚು ಕೆಲಸವಾಗುತ್ತದೆ, ವೆಕೇಷನ್ನಿನ್ನಲ್ಲಿ ಎಲ್ಲರೂ ಎಣಿಸಿ ಖರ್ಚು ಮಾಡುವುದಕ್ಕಿಂತ ಹೆಚ್ಚೇ ಕಾಸು ಕಳಚಿ ಹೋಗುತ್ತದೆ. ನಮ್ಮನ್ನು ಭೇಟಿಯಾಗುವವರ ಅನೇಕಾನೇಕ ಮುಖಗಳು ಅವುಗಳ ಹಿಂದಿನ ಕಥನವನ್ನು ಮನಸ್ಸಿನಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ನೆನಪಿನಲ್ಲಿರುವ ಹಾಗಿನ ಎಷ್ಟೋ ವ್ಯಕ್ತಿಗಳು ಇನ್ನೂ ಹರೆಯದವರಾಗಿರದೆ ಮುದುಕುರಾಗಿರುವುದನ್ನು ಅಪ್‌ಡೇಟ್ ಮಾಡಿಕೊಳ್ಳಲು ವಿದುಳು ಹೆಣಗುತ್ತದೆ. ಇತ್ತೀಚೆಗೆ ಕೇಳಿರದ ಅನೇಕ ಪದ-ವಾಕ್ಯಗಳ ಬಳಕೆ ಬೆಚ್ಚಿ ಬೀಳಿಸುತ್ತದೆ. ಅಲ್ಲಲ್ಲಿ ಕೇಳಿಬರುವ ಸಿನಿಮಾ ಹಾಡುಗಳು ಹೊಸದಾಗೇ ಉಳಿಯುತ್ತವೆ. ಹುಟ್ಟಿದ ಹೊಸಬರು, ಸತ್ತ ಹಳೆಯವರನ್ನು ಕುಟುಂಬಗಳ ಹಿನ್ನೆಲೆಯಲ್ಲಿ ತಾಳೆ ಹಾಕಿಕೊಳ್ಳುವುದು ಮುಗಿಯದ ಲೆಕ್ಕವಾಗುತ್ತದೆ.
’ನಾಲ್ಕು ವಾರ ವೆಕೆಷೆನ್ನಾ...’ ಎಂದು ಕೇಳಿ ಬರುವ ಉದ್ಗಾರಗಳಿಗೆ ಉತ್ತರವಾಗಿ ’ನಮ್ಮ ವೆಕೇಷನ್ನುಗಳ ಹಣೆಬರಹ ಇವರಿಗೇನು ಗೊತ್ತು!’ ಎನ್ನುವ ಹೇಳಿಕೆ ಮನದಲ್ಲೇ ಉಳಿದುಬಿಡುತದೆ. ವೆಕೇಷನ್ನಿಗೆ ಹೋಗುವುದಕ್ಕಿಂತ ಮೊದಲು ಹಾಗೂ ವೆಕೇಷನ್ನಿಂದ ಬಂದ ನಂತರ ಕೆಲಸಗಳು ಮಾತ್ರ ಅತಿಯಾಗಿ ಹೋಗುತ್ತವೆ. ಪ್ರತಿವರ್ಷ ಹೀಗೆ ಹೋಗಬೇಕು ಎನ್ನುವ ಆಸೆ, ಆಸೆಯಾಗಿಯೇ ಉಳಿದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮೂರು-ನಾಲ್ಕು ವರ್ಷಗಳಿಗೊಮ್ಮೆಯಾಗಿ ಬಿಡುತ್ತದೆ.