Wednesday, January 31, 2024

ಕಾಡುವ ಹಾಡು: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಕಾಡುವ ಹಾಡು: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ (ಅನಂತ ಪ್ರಣಯ)

ಕವಿ: ದ.ರಾ. ಬೇಂದ್ರೆ

ಚಿತ್ರ: ಶರಪಂಜರ

ನಿರ್ದೇಶಕ: ಕಣಗಾಲ್ ಪುಟ್ಟಣ್ಣ

ಸಂಗೀತ: ವಿಜಯ ಭಾಸ್ಕರ್

ಗಾಯಕರು: ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ

ನಟನೆ: ಗಂಗಾಧರ್, ಕಲ್ಪನ

ಚಿತ್ರ ಬಿಡುಗಡೆಯಾದ ವರ್ಷ: 1971

ಚಿತ್ರಕತೆ, ಕಾದಂಬರಿ: ತ್ರಿವೇಣಿ

ಶರಪಂಜರ, ಕನ್ನಡದ ಒಂದು ಶ್ರೇಷ್ಠ ಸಿನಿಮಾಗಳಲ್ಲೊಂದು. ಕತೆ, ನಟ, ನಟಿ, ನಿರ್ದೇಶಕ, ಸಹ ನಟರು ಹೀಗೆ ಎಲ್ಲ ಕಾರಣಗಳಿಂದಲೂ ಮನಸ್ಸಿಗೆ ಹತ್ತಿರವಾಗುವ ಈ ಸಿನಿಮಾ, ಇದರ ಪ್ರತಿಯೊಂದು ಹಾಡುಗಳೂ ಕೂಡ ಕನ್ನಡಿಗರ ಮನದಲ್ಲಿ ಇಂದಿಗೂ ಗುನುಗುವಷ್ಟರ ಮಟ್ಟಿಗೆ ಪ್ರಸಿದ್ದಿಯನ್ನು ಪಡೆದಿವೆ. ಈ ಚಿತ್ರದಲ್ಲಿ ವಿಜಯ್ ಭಾಸ್ಕರ್ ಅವರ ಸಂಗೀತ, ಮತ್ತು ಪಿ.ಬಿ. ಶ್ರೀನಿವಾಸ್-ಪಿ. ಸುಶೀಲ ಅವರ ಗಾಯನವನ್ನು ನಾವು ಮರೆಯಲು ಸಾಧ್ಯವೇ ಇಲ್ಲ.

ಈ ವಿವರಣೆಯನ್ನು ಓದಿದ ಮೇಲೆ, ಕೇವಲ ಮೂರು ನಿಮಿಷ 33 ಸೆಕೆಂಡುಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲು ಆಗ ಅವರಿಗೆ ಅದೆಷ್ಟು ಕಷ್ಟವಾಗಿದ್ದಿರಬಹುದು ಎಂದು ಊಹಿಸಬಹುದು.


ಅನಂತ ಪ್ರಣಯ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ 

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಜಿಸಿ ನಗೆಯಲಿ ಮೀಸುತಿದೆ|


ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ|


ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸೆಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು|


ಅಕ್ಷಿನಿಮೀಲನ ಮಾಡದೆ ನಕ್ಷತ್ರದ

ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರದಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ|

****

ಹಾಡಿನ ಆರಂಭದಲ್ಲಿ ಸೂರ್ಯಾಸ್ತಮಾನದ ಚಿತ್ರಣ, ನಾಯಕಿ ಮತ್ತು ನಾಯಕ ಒಂದು ಬೆಟ್ಟದ ತುದಿಯಲ್ಲಿ ಕುಳಿತು ಮುಳುಗುತ್ತಿರುವ ಸೂರ್ಯನತ್ತ ಕೈ ಚಾಚಿಕೊಂಡು ಹಾಡುವರು:

"ಓಹೋಹೋ....ಓ ಓ ಓ..."

"ಆಹ ಹಹಾ...... ಆ ಆ ಆ..."


ಉತ್ತರಧ್ರುವದಿಂ ದಕ್ಷಿಣಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ!

ಹೀಗೇ ಹೇಳುತ್ತಾ ನಾಯಕಿ ತನ್ನ ಕೈಯನ್ನು ಅಲೆಗಳೋಪಾದಿಯಲ್ಲಿ ಆಡಿಸುತ್ತಾಳೆ. ಈ ಮೂರು ನಿಮಿಷಗಳ ಹಾಡಿನ ಚಿತ್ರಣವನ್ನು ಯಾವ ಯಾವ ರೀತಿಯಲ್ಲಿ ಮಾಡಬಹುದಿತ್ತು ಎನ್ನುವುದನ್ನು ತಂತ್ರಜ್ಞ್ನರಿಗೆ ಬಿಟ್ಟರೆ, ಐವತ್ತು ವರ್ಷಗಳಿಗಿಂತ ಮೊದಲು ತಮ್ಮಲ್ಲಿರುವ ಕ್ಯಾಮರಾಗಳನ್ನು ಬಳಸಿ ಒಂದು ಸುಂದರವಾದ ರಸಕಾವ್ಯವನ್ನು ಕಟ್ಟಲು ಪ್ರಯತ್ನಿಸಿದ್ದಾರೆ ಎನ್ನಬಹುದು. ಸೂರ್ಯಾಸ್ತಮಾನದಿಂದ ಆರಂಭವಾಗಿ ಸೂರ್ಯಾಸ್ತಮಾನದಲ್ಲಿ ಕೊನೆಯಾಗುವ ಹಾಡು, ತನ್ನೊಡಲಾಳದಲ್ಲಿ ಅದೇನೋ ರಹಸ್ಯವನ್ನು ಬಚ್ಚಿಟ್ಟುಕೊಂಡ ಅನುಭವವಾಗುತ್ತದೆ!


"ಅನಂತ ಪ್ರಣಯ"ದ ಈ ಎರಡು ಸಾಲುಗಳಲ್ಲಿ ಕವಿ, ಸೂರ್ಯಮಂಡಲ, ಭೂಮಿ, ಸೌರವ್ಯೂಹ ಇವೆಲ್ಲದರ ಆಂತರಿಕ ಸತ್ಯವಾದ ಚುಂಬಕತೆ (magnetism) ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಪ್ರಣಯ ಎಂದುಕೊಳ್ಳಬಹುದು, ಆಕರ್ಷಣೆ ಎಂದು ಕೂಡ ಅಂದುಕೊಳ್ಳಬಹುದು. ಆದರೆ, ಚುಂಬಕತೆಯಲ್ಲಿ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಣೆಗೊಳಗಾಗುವುದು ಎಂದಿಗೂ ಸತ್ಯವಾದ ಅಂಶ. ಆದರೆ, ಈ ವೈಜ್ಞಾನಿಕ ಸತ್ಯವನ್ನ ಕವಿ ತನ್ನದೇ ಆದ ದಾರ್ಶನಿಕತೆಗೆ ಒಳಪಡಿಸಿ, ಸುಂದರವಾದ ಅನೇಕ ಉಪಮೆ-ಉಪಮಾನಗಳೊಂದಿಗೆ ಪ್ರಸ್ತುತ ಪಡಿಸುವುದೇ ಅನಂತ ಪ್ರಣಯ. ಈ ವ್ಯವಸ್ಥಿತವಾದ ಕಥನವನ್ನ ಅಷ್ಟೇ ಸುಂದರವಾಗಿ ಕಲ್ಪಿಸಿಕೊಂಡು ಚಿತ್ರದಲ್ಲಿ ಮೂಡಿಸಿರುವ ಹಿರಿಮೆ ನಟ-ನಟಿ-ನಿರ್ದೇಶಕರದ್ದು.  ಮೂಲ ಭಾವಗೀತೆಗೆ ಎಲ್ಲಿಯೂ ಚ್ಯುತಿ ಬರದೆ, ಕಷ್ಟವಾದ ಸಾಹಿತ್ಯವನ್ನ ಮನದಟ್ಟು ಮಾಡಿಕೊಂಡು ಹಾಡಿದ ಹಿರಿಮೆ ಗಾಯಕರದ್ದು.

ಭೂಮಿ ಮತ್ತು ಭೂಮಂಡಲ ವ್ಯವಸ್ಥೆಯಲ್ಲಿ ಕೇವಲ ಸೂರ್ಯನೊಬ್ಬನಷ್ಟೇ ಅಲ್ಲ, ಅಲ್ಲಿ ಚಂದ್ರನ ಪಾತ್ರವೂ ಇದೆ. ಭೂಮಿ-ಸೂರ್ಯ-ಚಂದ್ರರ ನಡುವೆ ಇರುವ ಬಾಂಧ್ಯವದ ಹಂಬಲವೇ ಮುಂದಿನ ಸಾಲು. 

ಸೂರ್ಯನ ಬಿಂಬಕೆ ಚಂದ್ರನ ಬಿಂಬವು ಎನ್ನುವಲ್ಲಿ ಚಂದ್ರನಿಗೆ ಸ್ವಯಂ ಪ್ರಕಾಶವಿಲ್ಲ ಚಂದ್ರನೇನೋ ಬಿಂಬಿಯಾಗಿದ್ದಾನೆ, ಆದರೂ ಸೂರ್ಯನನ್ನು ಬಿಂಬವೆಂದೇಕೆ ಕರೆದರು? ಇರಲಿ, ಇವರಿಬ್ಬರ ಬಿಂಬಗಳು ಒಬ್ಬರನೊಬ್ಬರು ರಂಬಿಸಿ (ರಮಿಸಿ, ಸಮಾಧಾನ ಪಡಿಸಿ, ಸಂತೈಸಿ) ನಗೆಯಲಿ ಮೀಸುತಿದೆ (ಸ್ನಾನ ಮಾಡಿಸು, ಮುಳುಗೇಳಿಸು).

ಸೂರ್ಯ-ಭೂಮಿಯರ ನಡುವಿನ ಅವಿನಾಭಾವ ಸಂಬಂಧ ಎಂದಿಗೂ ಇರುವುದೇ, ಆದರೆ, ಭೂಮಿಯ ಮೇಲಿನ ಚಂದ್ರನ ಹಂಬಲ ಹೇಗೆ ವಿಶೇಷವಾದದ್ದು, ಎನ್ನುವುದನ್ನು ಮುಂದಿನ ಸಾಲಿನಲ್ಲಿ ಕವಿ ವಿವರಿಸಿದ್ದಾರೆ:

ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ.

ಭೂರಂಗಕೆ, ಅಭಿಸಾರಕೆ (ಪ್ರಿಯರ ಭೇಟಿಗಾಗಿ ಸಂಕೇತ ಸ್ಥಾನಕ್ಕೆ ಹೋಗುವ ಕ್ರಿಯೆ) ಕರೆಯುತ ತಿಂಗಳು (ಚಂದ್ರ), ತಿಂಗಳು ನವೆಯುತ್ತಾನೆ (ಕ್ಷೀಣಿಸುತ್ತಾನೆ ಮತ್ತೆ ಮೈ ತುಂಬಿಕೊಳ್ಳುತ್ತಾನೆ). ತಾನು ಮೈ ತುಂಬಿಕೊಂಡಾಗ ತನ್ನನ್ನು ಭೂಮಿ ಸೇರಬಹುದು ಎಂದು ಆಸೆಯನ್ನು ತಿಂಗಳ ಬೆಳಕಿನ ಮೂಲಕ ವ್ಯಕ್ತಪಡಿಸುತ್ತಾನೆ. ಈ ರೀತಿಯಾದ ನವಿರಾದ ಆಲೋಚನೆಗಳನ್ನ ಪ್ರತಿ ತಿಂಗಳು ತುಂಬುತ, ತುಳುಕುತ, ತೀರುತ ತನ್ನೊಳಗೆ ತಾನೇ ಸವಿಯನ್ನು ಸವಿಯುತ್ತಿದ್ದಾನೆ. ತುಳುಕುವುದು ಎಂದರೆ, ಬಿಂದಿಗೆಯಲ್ಲಿರುವ ನೀರು ತುಳುಕುವ ಹಾಗೆ, ಈ ಚಂದ್ರನ ವರ್ತನೆಯಿಂದ (ಕ್ಷೀಣಿಸುವುದು ಮತ್ತು ಮೈ ತುಂಬಿಕೊಳ್ಳುವುದು), ಭೂಮಿಯ ಮೇಲಿನ ನೀರಿನಲ್ಲಿ ಅಲೆಗಳು ತುಂಬಿ ತುಳುಕುವ ಹಾಗಿರಬಹುದು.

ಚಂದ್ರನ ಪರಿಸ್ಥಿತಿ ತಿಂಗಳಿಗೊಮ್ಮೆ ಹೀಗಿರುವಾಗ, ಭೂಮಿಯ ಪರಿಸ್ಥಿತಿ ಹೇಗಿರಬಹುದು ನೋಡಿ (ಭೂಮಿಯ ಸಂಬಂಧ ಸೂರ್ಯನ ಜೊತೆಯೂ ಇದೆ ಎನ್ನುವುದು ನೆನಪಿನಲ್ಲಿರಲಿ):

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಲ್ಲಿ ಏನು ವ್ಯತ್ಯಾಸ. ಚಂದ್ರನಂತೆ ಭೂಮಿ ತಿಂಗಳಿಗೆರಡು ಬಾರಿ ಬದಲಾಗಲಾರಳು.  ಭೂಮಿಯ ಚಲನೆಯಿಂದಾಗಿ ಆರು ಋತುಗಳು ನಿರ್ಮಾಣಗೊಳ್ಳುತ್ತವೆ - ವಸಂತ, ಗ್ರೀಷ್ಮ, ವರ್ಷ, ಶರತಿ, ಹೇಮಂತ್ , ಮತ್ತು ಶಿಶಿರ.

ಭೂಮಿಯ ಮೇಲಿನ ವನ - ಭೂವನ, ಕುಸುಮಿಸಿ, ಹೂವಾಗಿ ಅರಳಿ, ಪುಲಕಿಸಿ, ಪುಲಕಗೊಂಡು, ಮರಳಿಸಿ - ಹೀಗೆ ಕೋಟ್ಯಾಂತರ ವರ್ಷಗಳಿಂದ ಈ ಪ್ರಕ್ರಿಯೆ ನಡೆದಿದೆ. ಇಲ್ಲಿ ಹೊಸೆಯಿಸಿ, ಎಂದರೆ ಹೊಸತನ ಪಡೆದು ಎಂದೂ, ತಮ್ಮೊಳಗೊಂದಾಗಿ ಹೊಸೆದು-ಬೆಸೆದುಕೊಂಡೂ ಎಂದೂ ಅರ್ಥ ಮಾಡಿಕೊಳ್ಳಬಹುದು. ಭೂಮಿಯ ಮೇಲಿನ ಈ ಬದಲಾವಣೆ ಎಲ್ಲವೂ ಸೂರ್ಯನ ಕಿರಣಗಳ ದಯೆಯಿಂದ ಆದದ್ದು. ಭೂಮಿ, ಸೂರ್ಯನಿಂದ ಎಷ್ಟು ದೂರದಲ್ಲಿ, ಯಾವ ಕೋನದಲ್ಲಿ ತಿರುಗುತ್ತಿದ್ದಾಳೆ ಎನ್ನುವುದರ ಮೇಲೆ ಇಲ್ಲಿನ ಎಲ್ಲ ಋತುಮಾನಗಳು ಆಗುವುದಲ್ಲವೇ?

ಆದರೆ, ಈ ಭೂಮಿಯ ಈ ಮಹತ್ತರವಾದ ಬದಲಾವಣೆಗೆ ಸೂರ್ಯನ ಅನಿಸಿಕೆ ಏನಿರಬಹುದು? ಮಿತ್ರನ (ಸೂರ್ಯ) ಮೈತ್ರಿಯ (ಕೂಡುವಿಕೆ, ಬಂಧನ), ಒಸಗೆ (ಸಂದೇಶ) ಮಸಗದಿದೆ (ಇನ್ನೂ ಕಳೆಗುಂದದಿರುವುದು), ಮರುಕದ (ಕರುಣೆಯ) ಧಾರೆಯನ್ನ (ನೀರು ಸುರಿಯುವುದು, ನೀರು ಎರೆದು ಕೊಡುವ ದಾನ, ಮದುವೆಯ ಒಂದು ವಿಧಿ) ಮಸೆಯಿಸಿತು (ಕಳೆಗುಂದದೇ ಇನ್ನೂ ಹೆಚ್ಚಾಗುತ್ತಲೇ ಇರುವುದು).

ಒಂದೊಂದು ಪದವನ್ನೂ ಸಹ ವ್ಯವಸ್ಥಿತವಾಗಿ ಪೋಣಿಸಿ ಒಂದು ಪ್ರಣಯದ ಎರಡು ಮುಖಗಳನ್ನು ಸಂಪೂರ್ಣವಾಗಿ ಚಿತ್ರಿಸಿಕೊಡುವ ಕವಿಯ ಜಾಣತನವನ್ನು ಇಲ್ಲಿ ಗುರುತಿಸಬಹುದು.

ಬೇಂದ್ರೆಯವರ ಒಂದು ಉಪಮೆ - ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು, ಹಕ್ಕಿಗಳಾ ಹಾಡು - ಇದನ್ನು ಮೂಡಲ ಮನೆಯ ಪದ್ಯವನ್ನು ಓದಿದವರಿಗೆ ನೆನಪಿರುತ್ತದೆ. ಈ ರೀತಿಯ ಉಪಮೆಯು, ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿಯೂ ನೋಡಲು, ಕೇಳಲು ಸಿಗಲಾರದು ಎನ್ನುವುದು ನನ್ನ ನಂಬಿಕೆ. ಅಂತಹದೇ ಇನ್ನೊಂದು ಉಪಮೆ ಮುಂದಿನ ಚರಣದಲ್ಲಿ ನೋಡಿ:

ಅಕ್ಷಿನಿಮೀಲನ ಮಾಡದ ನಕ್ಷತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರನಲಿ ಇಂದಿಗು ಮಿಲನದ ಚಿಹ್ನವು ತೋರದಿದೆ.

ಅಕ್ಷಿ ನಿಮೀಲನ ಮಾಡದ ನಕ್ಷತ್ರದ ಗಣ, ಅಕ್ಷಿ ನಿಮೀಲನ ಎಂದರೆ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿರುವುದು, ಎವೆಯಿಕ್ಕಿ ನೋಡುವುದು, ಆದರೆ, ನಡುವೆ ರೆಪ್ಪೆಗಳು ಪಟಪಟನೆ ಹೊಡೆದುಕೊಳ್ಳುವ ಹಾಗೆ, ನಕ್ಷತ್ರಗಳನ್ನ ನೋಡಿದ ಕವಿಗೆ ಹೀಗನ್ನಿಸಿತು. ಈ ಅನಂತ ಪ್ರಣಯದಲ್ಲಿ ಕೇವಲ ಭೂಮಿ, ಚಂದ್ರ, ಸೂರ್ಯರನ್ನು ಮಾತ್ರ ಉಲ್ಲೇಖಿಸಿದರೆ ಸಾಕೆ? ನಕ್ಷತ್ರಗಳೂ, ನಕ್ಷತ್ರಪುಂಜಗಳೂ ಬೇಕಲ್ಲ? ಅವುಗಳ ಗತಿಯೇನು? ಅವುಗಳ ಕತೆ ಏನು?

ಈ ಅನಂತ ಪ್ರಣಯಕ್ಕೆ ಸಾಕ್ಷಿಯಾಗಿ ದೇವತೆಗಳ ಗಣಗಳು ನಕ್ಷತ್ರಗಳಾಗಿ ತೋರುತ್ತಿರಬಹುದು. ಮಾಡದ (ಮಾಡದೇ ಇರುವ, ಮಾಡ ಎಂದರೆ ಛಾವಣಿ, ಛಾವಣಿ ಮೇಲಿರುವ) ನಕ್ಷತ್ರಗಳ ಗಣ (ಗುಂಪು) ಗಗನದಿ ಹಾರದಿದೆ (ಹಾರುತ್ತಿವೆ, ಹಾರದೆ ಇವೆ, ಹೂವಿನ ಹಾರದಂತೆ ತೋರುತ್ತಿವೆ). ಹೀಗೆ ಒಂದೊಂದು ಪದದಲ್ಲಿ ಎರಡೆರಡು ಅರ್ಥಗಳು ಬರುವಂತೆ ಇರುವ ಬಿಗಿಯಾದ ಹೆಣಿಗೆ ಇದು.  ಹೀಗಿರುವಾಗ ಬಿದಿಗೆಯ ಬಿಂಬ (ಚಂದ್ರನ ಸಣ್ಣ ಗೆರೆ, ಆದರೆ ಬಿದಿಗೆಯ ಚಂದ್ರ ಮುಂದೆ ದೊಡ್ಡದಾಗಿ ಬೆಳೆಯುವ ಆಸೆಯನ್ನು ಇಟ್ಟುಕೊಂಡವನು), ಇಂದಿಗೂ ತನ್ನ ಆಸೆಯನ್ನು ಜೀವಂತವಾಗಿ ಇಟ್ಟುಕೊಂಡವನು. ಈ ಬಿದಿಗೆಯ ಚಂದ್ರನ ಬಿಂಬ ಮಿಲನದ ಚಿಹ್ನೆ (ಸೂಚನೆ) ಯಾಗಿ ತೋರುತ್ತಿದೆ.

ಹೀಗೆ ಭೂಮಿ-ಚಂದ್ರ-ಸೂರ್ಯ-ನಕ್ಷತ್ರ ಗಣಗಳ ಸಮೇತ ನಡೆಯುತ್ತಿರುವ ಈ ನಿರಂತರ ಬದಲಾವಣೆಯೇ ಕವಿಯ ಕಲ್ಪನೆಯಲ್ಲಿ ಅನಂತ ಪ್ರಣಯವಾಗಿ ಕಂಡುಬಂದಿರುವುದು. ಪದದಿಂದ ಪದಕ್ಕೆ, ಅನೇಕ ಉಪಮೆ-ಉಪಮಾನಗಳ ಸಹಾಯದಿಂದ ಪರಿಸರದಲ್ಲಿನ ದೈನಿಕ-ಮಾಸಿಕ ಬದಲಾವಣೆಗಳನ್ನು ಎಷ್ಟು ಸೂಕ್ಷ್ಮವಾಗಿ ಸೆರೆಹಿಡಿದ್ದಾರೆಂದರೆ, ಈ ಕವನವನ್ನು ಮತ್ತೆ ಮತ್ತೆ ಓದಿದಂತೆಲ್ಲ ಹೆಚ್ಚು ಹೆಚ್ಚು ಕೋನಗಳಿಂದ ಅರ್ಥವಾಗುವುದು.

ಈ ಹಾಡನ್ನುಇಲ್ಲಿ ನೋಡಬಹುದು.

Sunday, January 14, 2024

ಸ್ವಾತಿ ಮುತ್ತಿನ ಮಳೆ ಹನಿಯೇ

ನಿನ್ನೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ನೋಡೋ ಅವಕಾಶ ಸಿಕ್ಕಿತು. ನಿಧಾನವಾಗಿ ಓಡುವ ಸಿನಿಮಾ, ಕೊನೆಯಲ್ಲಿ ದುರಂತದಲ್ಲಿ ಕೊನೆಗೊಳ್ಳುವ ಎಲ್ಲ ಮುನ್ನೆಚ್ಚರಿಕೆಗಳು ಸಿಕ್ಕಿದ್ದರೂ, ರಾಜ್ ಬಿ. ಶೆಟ್ಟಿಯಲ್ಲಿ ಒಬ್ಬ ಸಿನಿಮಾ ಕಥಾವಸ್ತುವನ್ನು ಸೂಕ್ಷ್ಮವಾಗಿ ಹೆಣೆಯುವ ಕಸಬುಗಾರಿಕೆಯ ಬರಹಗಾರನನ್ನು ಗುರುತಿಸುವ ನಾನು, ಒಂದು ಸುಂದರವಾದ ಕಥಾ ಹಂದರವನ್ನು ನಿರೀಕ್ಷೆಯಲ್ಲಿಟ್ಟುಕೊಂಡಿದ್ದೆ. ಆ ನಿರೀಕ್ಷೆ ಹುಸಿಯಾಗದಂತೆ ಆದದ್ದು ಈ ಸಿನಿಮಾದ ಹೆಚ್ಚುಗಾರಿಕೆ ಮತ್ತು ಅದರ ಗೆಲುವು ಕೂಡ.

ಕೋಟ್ಯಾಂತರ ರೂಪಾಯಿಗಳನ್ನು ಸುರಿದು ಒಂದು ಭವ್ಯವಾದ ಕಥನವನ್ನು ಹೆಣೆದು ಮೇಲೆದ್ದು ಬಂದು ಗೆದ್ದ ಚಿತ್ರಗಳು ಎಷ್ಟೋ, ಸೋತವುಗಳು ಕೂಡ ಅಷ್ಟೇ. ಈ ಎಲ್ಲ ವ್ಯಾವಹಾರಿಕ ಚಿತ್ರ ಪ್ರಪಂಚದಲ್ಲಿ ಅದೊಂದು ದುಡಿಮೆಯ ಮೂಲವಾಗಿ ಗೆದ್ದಾಗ ನಿರ್ಮಾತೃಗಳನ್ನು ಎತ್ತಿಕೊಂಡಾಡುವಷ್ಟೇ ಸಹಜವಾಗಿ, ಬಿದ್ದಾಗ ಹಣ ಹಾಕಿದವರು ಎಲ್ಲವನ್ನು ಕಳೆದುಕೊಳ್ಳುವುದು ಮಾಮೂಲು. ಆದರೆ, ಈ ಸಣ್ಣ ಬಜೆಟ್ಟಿನ ಚಿತ್ರಗಳಲ್ಲಿ ಹಾಗಲ್ಲ. ಇಲ್ಲಿ ಸೋಲು-ಗೆಲುವು, ಹಣ ಮಾಡಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ನಿರ್ಮಾತೃಗಳಿಗೆ, ತಮ್ಮ ಮನದಾಳದಲ್ಲಿ ಸೂಕ್ಷ್ಮವಾಗಿ ಹುಟ್ಟಿ, ಕತೆಯಾಗಿ ಬೆಳೆದ ಕತೆಗಳ ಮುಖೇನ, ಒಂದು ಸಂದೇಶವನ್ನು ಸಾರುವುದು ಅವುಗಳ ಧ್ಯೇಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಈ ಚಿತ್ರ, ರಾಜ್ ಶೆಟ್ಟಿ ಅವರ ಮನದ ಮೂಸೆಯಲ್ಲಿ ಕುದಿದ ಬಂಗಾರದಿಂದ ಮಾಡಿದ ಒಂದು ಸುಂದರವಾದ ಆಭರಣದಂತೆ ಕಂಡು ಬರುತ್ತದೆ.

ಈ ಚಿತ್ರದಲ್ಲಿ ಎಲ್ಲವೂ ನಿಧಾನವೇ. ಕಥಾನಾಯಕಿ ಪ್ರೇರಣ, ಅವಳ ನಡೆ-ನುಡಿ, ಆಡಿದರೆ ದುಡ್ಡು ಖರ್ಚಾಗುವುದೇನೋ ಎನ್ನುವಷ್ಟು ಕಡಿಮೆ ಮಾತುಗಳು. ಹಿನ್ನೆಲೆಯಲ್ಲಿ ಒಂದೇ ಒಂದು ಗುಂಗಿನ ಸಂಗೀತ, ಇವೆಲ್ಲವೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಲ್ಲದು. ನಮ್ಮ ವೃತ್ತಿ ಜೀವನದ ಏಳು-ಬೀಳುಗಳು ನಮ್ಮನ್ನು ಪ್ರಬುದ್ಧತೆಯ ವಿಭಿನ್ನ ನೆಲೆಗೆ ಕೊಂಡೊಯ್ಯುವ ಹಲವು ಅಂಶಗಳನ್ನು ಅಭಿವ್ಯಕ್ತಪಡಿಸುವಲ್ಲಿ, ನಾಯಕಿಯದ್ದು ಸಹಜವಾದ ಅಭಿನಯ. ತಮ್ಮ ಇಂಟ್ರೋಶಾಟ್ ಒಂದರಲ್ಲಿಯೇ, ’ಬುಲೆಟ್‌ನಲ್ಲಿ ಬಂದ ಪೇಶೆಂಟ್’ ಆಗಿ ರಾಜ್ ಅವರು ಚಿತ್ರದೊಳಗೆ ತಾವೇ ಒಂದಾಗಿ ಹೋಗಿದ್ದಾರೆ ಎನ್ನುವಷ್ಟು ತನ್ಮಯತೆಯನ್ನು ಪ್ರದರ್ಶಿಸಿದ್ದಾರೆ.

ಒಂದು ಮೊಟ್ಟೆಯ ಕಥೆಯಲ್ಲಿ ನೀವು ರಾಜ್ ಅವರನ್ನು ನೋಡಿದ್ದರೆ, ಇಲ್ಲಿ ಮತ್ತೆ ಆ ವ್ಯಕ್ತಿತ್ವವನ್ನು ಸಮತೋಲಿಸಿಕೊಳ್ಳಬಹುದು. ಚಿತ್ರದಲ್ಲಿ ನಾಯಕನ ಹೆಸರೇ, ಅನಿಕೇತ್, ಮನೆ ಇಲ್ಲದವ... ಅದೂ ಕೂಡ ಈ ಸಂದರ್ಭಕ್ಕೆ ಆತನಿಟ್ಟುಕೊಂಡ ಹೆಸರು ಎಂದು ಗೊತ್ತಾಗುತ್ತದೆ.

ಚಿತ್ರದುದ್ದಕ್ಕೂ ಅನೇಕ ರೂಪಕಗಳಿವೆ, ವಿಡಂಬನೆಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಅಷ್ಟೇ. ಕಸದಂತೆ ದಿನವಿಡೀ ಹೂವು ಉದುರಿಸುವ ನಂದಿಬಟ್ಟಲು ಗಿಡ, ಅದರೆ ಬಗ್ಗೆ ನಿಮ್ಮಇರುವ ನಿಮ್ಮ ಮನದೊಳಗಿನ ಪ್ರತಿಮೆಯನ್ನು ಈ ಸಿನಿಮಾ ಬದಲಾಯಿಸಬಲ್ಲದು. ಹಾಗೆಯೇ, ಹಾಲು ಹಾಕದ ಚಹಾ, ಬೀದಿ ನಾಯಿ ಹೇಗೆ ಸಾಯುತ್ತದೆ ಎನ್ನುವುದು, ಒಂದು ಕೊಳ/ಕೆರೆ ದಿನದ ವಿವಿಧ ಸಮಯದಲ್ಲಿ ಹೇಗಿರುತ್ತದೆ ಎನ್ನುವುದರ ಮೂಲಕ ನಿಮ್ಮ ಚಿಂತನಶೀಲತೆಗೆ ಇಲ್ಲಿ ಹಲವಾರು ವಸ್ತುಗಳು ಸಿಗುವುದಂತೂ ನಿಜ. ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ಬದುಕಿನ ಆಯಾ ಸಂದರ್ಭಕ್ಕೆ ಇರುವ ಕಷ್ಟದ ಸನ್ನಿವೇಶಗಳನ್ನ ವಾಷಿಂಗ್‌ಮೇಷೀನ್‌ನಲ್ಲಿ ಕೊಳೆ ಬಟ್ಟೆಗಳು ತಿರುವುದರ ಮೂಲಕವೂ ಒಂದು ಸಂದೇಶವನ್ನು ಹೇಗೆ ಹೇಳಬಹುದು ಎನ್ನುವುದು ಸಿನಿಮಾವನ್ನು ಹೇಗೆ ಮಾಡಬಹುದು ಎಂದು ಹಲವು ವಿದ್ಯಾರ್ಥಿಗಳಿಗೆ ಒಂದು ಡಾಕ್ಯುಮೆಂಟ್ ಕೂಡ ಆಗಬಲ್ಲದು.

ಸಿನಿಮಾದಲ್ಲಿ ಅಲ್ಲಲ್ಲಿ ಹೆಣ್ಣೆದ ಸಣ್ಣಪುಟ್ಟ ತಿರುವುಗಳು ಊಟಿಯ ಹೊರಾಂಗಣ ಚಿತ್ರೀಕರಣದಷ್ಟೇ ಸಹಜವಾಗಿ ನಿಮ್ಮನ್ನು ಕಾಡುತ್ತವೆ. ಸಿನಿಮಾದ ಎಲ್ಲ ಪಾತ್ರಗಳೂ ನಿಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತವೆ ಎಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಪಾತ್ರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆಂದರೆ, "ಅವನೇ ಶ್ರೀಮನ್ ನಾರಾಯಣ" ಚಿತ್ರದಲ್ಲಿ ಅಭೀರರ ದೊರೆಯಾಗಿ ಕಠೋರ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಬಾಲಾಜಿ ಮನೋಹರ್, ಈ ಚಿತ್ರದಲ್ಲಿ ಒಂದು ಹಾಸ್‌ಪಿಸ್ ಸೆಂಟರಿನ ಮುಖ್ಯ ಡಾಕ್ಟರ್‌ ಆಗಿ, ಪೇಷಂಟ್‌ಗಳಿಗೆ ಮಾದಕ ದ್ರವ್ಯಗಳ ದಾಸರಾಗುವಂತೆ ಮಾಡದಿರುವುದು ಸರಿ ಎಂಬ ನಿಲುವಿನಿಂದ ತಮ್ಮ ಬಿಗಿ ನಟನೆಯಿಂದ ಅವರಲ್ಲಿನ ಕಲಾವಿದನಿಗೆ ನ್ಯಾಯ ಒದಗಿಸಿದ್ದಾರೆ.

***

ಇತ್ತೀಚಿನ ನೂರು-ಸಾವಿರ ಕೋಟಿ ವ್ಯವಹಾರದ ಉದ್ಯಮದ ಬೆಂಬಲದಲ್ಲಿ ಹುಟ್ಟಿ ಮೂಡಿಬರುವ ಚಿತ್ರಗಳು ತಾಂತ್ರಿಕತೆ, ಸೆಟ್ ಮತ್ತು ವಿಜೃಂಬಣೆಯಲ್ಲಿ ಎಲ್ಲರ ಗಮನ ಸೆಳೆಯಬಲ್ಲವು. ಉದಾಹರಣೆಗೆ, ಕೆಜಿಎಫ಼್ ಚಿತ್ರದಲ್ಲಿ ಉಪಯೋಗಿಸುವ ಸುತ್ತಿಗೆ, ಚೈನು, ಧೂಳು ಮತ್ತಿತರ ವಸ್ತುಗಳು ಒಂದು ವ್ಯವಸ್ಥಿತವಾದ ಕ್ಯಾಮೆರಾ ಕಣ್ಣಿನಲ್ಲಿ ಅದ್ಭುತವಾಗಿ ಹೊರಹೊಮ್ಮ ಬಲ್ಲವು. ಆದರೆ, ಈ ಗ್ರ್ಯಾಂಡ್ ಕಥಾನಾಯಕರಂತೆ ಅದ್ಯಾವ ಅಗಮ್ಯವಾದ ಶಕ್ತಿಯನ್ನೂ ಹೊಂದಿರದ ಒಬ್ಬ ಸಾಮಾನ್ಯ ಮನುಷ್ಯನ ಚಿತ್ರದಲ್ಲಿ ತನ್ಮಯತೆಯನ್ನು ಕಾಣುವ ನಿರೂಪಣೆಯನ್ನು ಮಾಡಿ ನೂರು ನಿಮಿಷಗಳ ಕಮರ್ಶಿಯಲ್ ಸಿನಿಮಾದಲ್ಲೂ ಕಲಾತ್ಮಕತೆಯನ್ನು ಕಾಣುವುದು ಬಹಳ ಕಷ್ಟ.

ನೀವು ತರಾಸು ಅವರ ಕಾದಂಬರಿ ಆಧಾರಿತ "ಬೆಂಕಿಯಬಲೆ" ಸಿನಿಮಾವನ್ನು ನೋಡಿದ್ದರೆ, ಅಲ್ಲಿ ಅನಂತ್‌ನಾಗ್, ಲಕ್ಷ್ಮಿ, ಅಶ್ವಥ್, ತೂಗುದೀಪ ಶ್ರೀನಿವಾಸ್ ಅವರ ಪಾತ್ರಗಳ ಸಂವೇದನಾಶೀಲತೆಯನ್ನು ಅರ್ಥಮಾಡಿಕೊಂಡಿದ್ದರೆ, ರಾಜ್ ಬಿ. ಶೆಟ್ಟಿಯ ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ.

ಇದು ನನ್ನ ಅನಿಸಿಕೆ. ಹೆಚ್ಚಿನ ವಿವರಗಳಿಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ವಿಮರ್ಶೆಯನ್ನು ನೋಡಿ.