Sunday, November 28, 2021

ಸೋಜಿಗದ ಸಮೂಹ

 ಈ ವಿಶ್ವದ ಒಂದು ಸಣ್ಣ ಗೋಲವಾದ ಭೂಮಿಯ ಪದರು-ಮಡಿಕೆ-ಪೊಟರೆಗಳಲ್ಲಿ ಅನೇಕಾನೇಕ ಜೀವರಾಶಿಗಳು... ಈ ಸಮೂಹವನ್ನ ಕೋಟ್ಯಾಂತರ ಜೀವರಾಶಿಗಳೇ ಎನ್ನಬಹುದು.  ಹೆಚ್ಚಿನವು ಮಾನವನ ಕಣ್ಣಿಗೆ ಬಿದ್ದು ಅವುಗಳ ’ಜನಗಣತಿ’ ಅಥವಾ ಅವನತಿ ಆದಂತಿದ್ದರೆ, ಇನ್ನು ಕೆಲವು ಜೀವಜಂತುಗಳನ್ನು ಇದುವರೆಗೂ ಯಾರೂ ನೋಡಿಯೂ ಇಲ್ಲ!  ಸಮುದ್ರ-ಸಾಗರಗಳ ಆಳದಿಂದ ಹಿಡಿದು, ಭೂಮಿಯ ಅನೇಕ ಮೈಲುಗಳ ಕೆಳ ಪದರಗಳಲ್ಲಿಂದ ಹಿಡಿದು, ಭೂಮಿಯ ಮೇಲಿನ ವಾತಾವರಣದಲ್ಲಿಯೂ ಬದುಕಿ ಬಾಳಬಲ್ಲ ಈ ಜೀವ ಸಮೂಹವನ್ನು ಸೃಷ್ಟಿ ಅದೆಷ್ಟು ಚೆನ್ನಾಗಿ ಹೆಣೆದುಕೊಂಡಿದೆ! ಒಂದರ ಮೇಲೆ ಮತ್ತೊಂದು ಜೀವ-ಜೀವಿಯ ಅವಲಂಭನೆಯನ್ನು ಯಾರೋ ಅದೆಷ್ಟು ಚೆನ್ನಾಗಿ ಸೃಷ್ಟಿಸಿದ್ದಾರೆ ಎನ್ನಿಸೋದಿಲ್ಲವೇ?

***

ನಮ್ಮ ನ್ಯೂ ಯಾರ್ಕ್ ನಗರದ ಎಂಪೈರ್ ‌ಸ್ಟೇಟ್ ಬಿಲ್ಡಿಂಗ್ ನೆಲದಿಂದ ಸುಮಾರು 1400 ಅಡಿ ಎತ್ತರದಲ್ಲಿದೆ.  ಒಬ್ಬ ವ್ಯಕ್ತಿಯ ಎತ್ತರ ಸುಮಾರು ಆರು ಅಡಿಗಳು ಎಂದಾದಲ್ಲಿ ಈ ಕಟ್ಟಡ ಎತ್ತರ ಸುಮಾರು 235 ಪಟ್ಟು.  ಅದೇ ಒಂದು ಇರುವೆಯ ಎತ್ತರ ಸುಮರು 0.14 ಇಂಚುಗಳು, ಅಂದರೆ, 0.012 ಅಡಿಗಳು ಎಂದಾದಲ್ಲಿ, ಆ ಇರುವೆಯ ಎತ್ತರವನ್ನು ಒಬ್ಬ ಆರು ಅಡಿಯ ಮನುಷ್ಯನಿಗೆ ಹೋಲಿಸಿದಲ್ಲಿ, ಇರುವೆಗಿಂತ ಮಾನವ ಸುಮಾರು 500 ಪಟ್ಟು ಎತ್ತರ, ಅಂದರೆ, ಮಾನವನ ಗಾತ್ರ ಇರುವೆಗೆ, ಒಂದು ಬುರ್ಜ್ ಖಲೀಫ಼ಾ ಕಟ್ಟಡವಾಗಿ ಕಾಣಬಹುದು (ಬುರ್ಜ್ ಖಲೀಫ಼ಾದ ಎತ್ತರ 2722 ಅಡಿ, ಅಂದರೆ ಮಾನವಗಿಂತ ಸುಮಾರು 453 ಪಟ್ಟು ಹೆಚ್ಚು).

ಇನ್ನು ನಮ್ಮ ಕಣ್ಣಿನ ಎತ್ತರದ ಆಕಾಶದ ವಿಚಾರಕ್ಕೆ ಬರುವುದಾದರೆ, ಸುಮಾರು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ನಾವು ಮೋಡಗಳನ್ನು ನೋಡುತ್ತೇವೆ, ಅದಕ್ಕಿಂತಲೂ ಎತ್ತರದಲ್ಲಿ ಅಂದರೆ 36,000 ಅಡಿಗಳಷ್ಟು ಎತ್ತರದಲ್ಲಿ ನಮ್ಮ ವಿಮಾನಗಳು ಹಾರಾಡುತ್ತವೆ.  ಇದಕ್ಕಿಂತಲೂ ಹೆಚ್ಚಿನದ್ದು ನಮ್ಮ ಆಕಾಶವಾಗುತ್ತದೆ.  ಅದು ಎಲ್ಲದ್ದಕ್ಕೂ ಮೀರಿದ್ದು.

ಇದೇ ಆಕಾಶವನ್ನು ನಾವು ಒಂದು ಇರುವೆಯ ಗಾತ್ರದಲ್ಲಿ ಯೋಚನೆ ಮಾಡಿದರೆ, ಆ ಇರುವೆಯ 20 ಅಡಿಗಳಲ್ಲಿ ಮೋಡಗಳು ತೇಲುತ್ತವೆ, ಹಾಗೆ 72 ಅಡಿ ಎತ್ತರದಲ್ಲಿ ಕಮರ್ಷಿಯಲ್ ವಿಮಾನಗಳು ಹಾರಾಡುತ್ತವೆ...ಉಳಿದದ್ದೆಲ್ಲ ನಭೋಮಂಡಲವಾಗುತ್ತದೆ.

ಈ ವಿಚಾರವನ್ನು ಏಕೆ ಹೇಳಬೇಕಾಗಿ ಬಂತೆಂದರೆ: ನಾವು ಹುಲು ಮಾನವರು.  ಈ ಪ್ರಾಣಿ ಪ್ರಬೇಧಗಳಲ್ಲಿ ನಾವು ನಮ್ಮನ್ನೇ ಹಿರಿದು ಎಂದುಕೊಂಡು ಹಿಗ್ಗುತ್ತೇವೆ, ಜೊತೆಗೆ ನಮಗೆ ಸಿಗಬಹುದಾದ ಸಂಪನ್ಮೂಲಗಳನ್ನು ಯಥಾ ಇಚ್ಚೆ ಬಳಸುತ್ತೇವೆ.  ಆದರೆ, ನಮಗಿಂತಲೂ ದೊಡ್ಡ ಜೀವಜಂತುಗಳು ಈ ವಿಶ್ವದಲ್ಲಿ ಇರಬಹುದೇ ಎಂದು ನಮಗೆ ಯೋಚಿಸಲು ಸಾಧ್ಯವಿದೆಯೇ? ನಾವು ನಮ್ಮನ್ನು ಒಂದು ಇರುವೆಯ ಗಾತ್ರಕ್ಕೆ ಹೋಲಿಸಿಕೊಂಡರೆ, ಆ ಇರುವೆಯ ಕಣ್ಣುಗಳಲ್ಲಿ ಒಂದು ಮಾನವನಷ್ಟು ದೊಡ್ಡ ಜೀವಿಯನ್ನು ನೋಡಲು ಸಾಧ್ಯವಿದೆಯೇ?

ಕೆಲವೊಮ್ಮೆ ಫ್ರೀವೇಗಳಲ್ಲಿ ಟ್ರಾಫ಼ಿಕ್ ಜಾಮ್ ಆದ ದೃಶ್ಯಗಳನ್ನು ನೋಡಿದಾಗ, ಅಲ್ಲಿ ಒಂದರ ಹಿಂದೆ ಒಂದರಂತೆ ನಿಧಾನವಾಗಿ ತೆವಳುವ ಕಾರುಗಳು ಇರುವೆಯ ಸಾಲುಗಳನ್ನು ನೆನಪಿಸುತ್ತವೆ.  ನೀವು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹೋಗಿ ಅಲ್ಲಿನ ಅಬ್ಸರ್‌ವೇಟರಿಯಿಂದ ನೋಡಿದರೆ, ಕೆಳಗೆ ಹರಿದಾಡುವ ಮನುಷ್ಯರು ಚಿಕ್ಕ ಇರುವೆಗಳಂತೆಯೇ ಕಾಣುತ್ತಾರೆ.

ಇನ್ನು ಈ ಇರುವೆಯ ಹವಾಮಾನ ಮುನ್ಸೂಚನೆ ಹೇಗಿರಬಹುದು? ನಾವು ಕಸ ಹೊಡೆದರೆ ಅವಕ್ಕೆ ಬಿರುಗಾಳಿ ಬೀಸಿದ ಅನುಭವವಾಗಬಹುದು.  ನಮ್ಮ ಬಚ್ಚಲು ಮನೆಗಳಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗುವ ಅವುಗಳಿಗೆ ಮಹಾಪ್ರಪಾತದ ದೃಶ್ಯದ ಅರಿವಾಗಬಹುದು.  ತಮ್ಮ ಮೇಲೆ ಬೀಳುವ ಒಂದೊಂದು ಹನಿ ನೀರೂ ಸಹ, ದೊಡ್ಡ ಪರ್ವತದ ಗಾತ್ರವನ್ನು ಮೈ ಮೇಲೆ ಹಾಕಿದ ಹಾಗೆ ಆಗಬಹುದು.  ಇನ್ನು ಬೆಂಕಿಯ ವಿಚಾರವಂತೂ ಯೋಚಿಸಲೂ ಆಗದಷ್ಟು ದೊಡ್ಡದಿರಬಹುದು.  ಹೀಗೆ ನಮ್ಮನ್ನು ನಾವು ಒಂದು ಇರುವೆಯನ್ನಾಗಿ ಊಹಿಸಿಕೊಂಡು ನೋಡಿದರೆ, ಈ ವಿಶ್ವದಲ್ಲಿ ಅದೆಷ್ಟು ಸೋಜಿಗಗಳಿರಬಹುದು ಎನಿಸೋದಿಲ್ಲವೇ?

***

ಇನ್ನು ಆತ್ಮದ ವಿಷಯಕ್ಕೆ ಬರುವುದಾದರೆ, ಎಲ್ಲ ಜೀವಿಗಳಲ್ಲೂ "ಜೀವ" ಇರುವ ಹಾಗೆ, ಅವುಗಳಲ್ಲೂ ಒಂದೊಂದು ಆತ್ಮ ಇದೆಯೇ?  ಅಥವಾ ಆತ್ಮ ಕೇವಲ ಮಾನವರಿಗೆ ಮಾತ್ರ ಸಂಬಂಧಿಸಿದ್ದೋ?

ಈ ವಿಶ್ವದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆತ್ಮಗಳಿದ್ದು, ಅವೇ ದೇಹದಿಂದ ದೇಹಕ್ಕೆ ವರ್ಗಾವಣೆಯಾಗುತ್ತವೆಯೋ? ಅಥವಾ ಜೀವಿಗಳು ಹೇಗೆ ಅನಿರ್ಧಿಷ್ಟ ಪ್ರಮಾಣದಲ್ಲಿರುವಂತೆ ಆತ್ಮಗಳೂ ಇದ್ದು, ಎಲ್ಲ ಜೀವಿಗೂ ಒಂದೊಂದು ಆತ್ಮ ಯಾವಾಗಲೂ ಇರುತ್ತದೆಯೋ?  ಹಾಗಾದರೆ ಮುಕ್ತಿ ಹೊಂದುವ ಆತ್ಮಗಳು ಹೋಗುವುದಾದರೂ ಎಲ್ಲಿಗೆ?  ಈ ಆತ್ಮ ಇಂದಿಗೆ ಮುಕ್ತಿ ಹೊಂದುತ್ತದೆ ಎಂದು ಲೆಕ್ಕ ಇಡುವವರಾರು?  ಇರುವೆಯ ಜೀವಿತಾವಧಿಯ ಆತ್ಮದ ಬದುಕಿಗೂ, ಮನುಷ್ಯನ ಜೀವಿತಾವಧಿಯ ಆತ್ಮದ ಬದುಕಿಗೂ ವ್ಯತ್ಯಾಸವಿದೆಯೇ? ಹಾಗಾದರೆ, ಈ ಪ್ರತಿಯೊಂದು ಜೀವಜಂತುವಿನ ಆತ್ಮದ ಜೀವಿತಾವಧಿಯ ಬೆಳವಣಿಗೆಗಳನ್ನು ಪೋಷಣೆಗಳನ್ನು ಯಾವ ವೈಟೇಜ್‌ನಲ್ಲಿ ಇಟ್ಟು ನೋಡಲಾಗುತ್ತದೆ?  ಮಾನವನ 80 ವರ್ಷದ ಆತ್ಮದ ಪರ್‌ಫಾರ್ಮೆನ್ಸ್ ಅನ್ನು ಮುಟ್ಟಲು ಇರುವೆಯ ಆರು ತಿಂಗಳಿನ ಆತ್ಮ ಯಾವ ಮಟ್ಟಕ್ಕೆ ಕಷ್ಟ ಪಡಬೇಕು?

ಈ ಭೂಮಂಡಲದಲ್ಲಿ ಇರುವ ಎಲ್ಲ ರಸಾಯನಿಕ ಪದಾರ್ಥ, ಮೂಲವಸ್ತುಗಳ ಪ್ರಮಾಣ ಯಾವಾಗಲೂ ಒಂದೇ ಇರುವುದೆಂದಾದರೆ, ಒಂದು ಕಡೆ ಹೆಚ್ಚುವುದು ಮತ್ತೊಂದು ಕಡೆ ಕಡಿಮೆ ಆಗಲೇ ಬೇಕು ಅಲ್ಲವೇ (conservation)? ಅಂದರೆ, ಹೆಚ್ಚು ಹೆಚ್ಚು ಹುಟ್ಟುವ ಮಾನವ ಸಂತತಿ ತನ್ನ ಮಡಿಲಲ್ಲಿ ಹೆಚ್ಚು ಹೆಚ್ಚು ರಸಾಯನಿಕಗಳನ್ನು ಅಡಗಿಸಿಕೊಳ್ಳುವುದರಿಂದ ಉಳಿದ ಯಾವುದೋ ಜೀವಿಯ ಸಂತತಿಗೆ ಅಥವಾ ಸಂತತಿಗಳಿಗೆ ಅದು ಕಡಿಮೆ ಆಗುತ್ತದೆಯೇ?

ಎಲ್ಲಕ್ಕಿಂತ ಮುಖ್ಯವಾಗಿ, ಸದಾ ಊರ್ದ್ವ ಮುಖಿಯಾಗಿರುವ ಈ ಆತ್ಮದ ಆತ್ಮ ಯಾಕೆ ಯಾವಾಗಲೂ ಹೋರಾಡುತ್ತಿರುತ್ತದೆ, ಆಶಾಂತವಾಗಿರುತ್ತದೆ?  "ಇಂಥವರ ಆತ್ಮಕೆ ಶಾಂತಿ ಸಿಗಲಿ!" ಎಂದು ಮೊಟ್ಟ ಮೊದಲ ಬಾರಿಗೆ ಯಾವ ನಾಗರೀಕತೆಯಲ್ಲಿ ಯಾರು ಮೊದಲು ಹೇಳಿದರು?  ಇಂದಲ್ಲ ನಾಳೆ ಮೋಕ್ಷ ಸಿಗುವುದೇ ಹೌದು ಎಂದಾದಲ್ಲಿ ಅದಕ್ಕೆಂದೇ ಹೋರಾಟವಾದರೂ ಏಕೆ ಬೇಕು?

***

ನಮಗೆ ನಾವೇ ದೇವರು! ನಮ್ಮ ದೇವರುಗಳ ಚಿತ್ರಣಗಳಲ್ಲಿ ಅವರನ್ನು ನಮಂತೆಯೇ ಸೃಷ್ಟಿಸಿಕೊಂಡಿದ್ದೇವೆ, ಆದರೆ ಸ್ವಲ್ಪ ಬಲ, ಭಿನ್ನತೆಗಳನ್ನು ತೋರುವುದರ ಮೂಲಕ ಅವರನ್ನೆಲ್ಲ ಸೂಪರ್ ಹ್ಯೂಮನ್ ಮಾಡಿದ್ದೇವೆ.  ಅದೇ ರೀತಿ ಇರುವೆಗಳಲ್ಲೂ ಸೂಪರ್ ಇರುವೆಗಳ ದೇವರುಗಳು ಇರಬಹುದು!  ನಮ್ಮ ದೇವರುಗಳೆಲ್ಲ ಸಾವನ್ನು ಗೆದ್ದವರು, ಚಿರಂತನರು ಮತ್ತು ಸರ್ವವ್ಯಾಪಿಗಳು.  ಅಂದರೆ, ನಮ್ಮ ಸುತ್ತಲಿರುವ ನಮ್ಮನ್ನು ಆವರಿಸಿರುವ ಪಂಚಭೂತಗಳು! ನಾವು ಒಂದು ಕ್ಷಣ ಇರುವೆಯಾಗಿ ಯೋಚಿಸಿದಾಗ ಈ ವ್ಯವಸ್ಥೆ ಮತ್ತು ವಿಶ್ವ ಅದೆಷ್ಟು ಅಗಾಧವಿದೆಯೆಲ್ಲ ಎಂದು ಅನ್ನಿಸುವುದು ಖಂಡಿತ.  ಆದರೆ, ನಾವು ಹುಲು ಮಾನವರಾಗಿ ಈ ಅಗಾಧತೆಯನ್ನ ಅಷ್ಟು ಸಲೀಸಾಗಿ ಗ್ರಹಿಸೋದಿಲ್ಲ. ಈ ಎತ್ತರ ಕಟ್ಟಡಗಳೂ, ಅವುಗಳ ಅತಿ ಎತ್ತರದಲ್ಲಿ ಹಾರಾಡುವ ವಿಮಾನಗಳೂ, ಅದಕ್ಕೂ ಮಿಗಿಲಾದ ಮುಗಿಲಿನಲ್ಲಿ ತೇಲುವ ಉಪಗ್ರಹಗಳು ಇವೆಲ್ಲ ನಮ್ಮ ಸೃಷ್ಟಿಯೇ!  ಹಾಗೇ ನಮ್ಮ ಸುತ್ತಲೂ ಇರುವೆಗಳು ಈಗಾಗಲೇ ಹಾರಾಡಿಸಿರುವ ಉಪಗ್ರಹಗಳೂ ಇರುಬಹುದಾದ ಸಾಧ್ಯತೆಗಳಿಲ್ಲವೆನ್ನಲಾಗದು.  ಏಕೆಂದರೆ, ಗೆದ್ದಲು ಕಟ್ಟುವ ಮಣ್ಣಿನ ಮನೆ ಆಧುನಿಕವಾಗಿರುವುದಷ್ಟೇ ಅಲ್ಲದೇ ನಮ್ಮಅನೇಕ ಬುರ್ಜ್ ಖಲೀಫ಼ಾಗಳ ಎತ್ತರವನ್ನೂ ಮೀರಿ ಬೆಳೆದಿರುತ್ತದೆ ಎನ್ನುವುದನ್ನು ಹೆಚ್ಚಿನವರು ನಂಬಲಾರರು, ಆದರೆ, ಅದು ನಿಜ.

ಹಾಗಾದರೆ, ಈ ಅಗಾಧವಾದ ಪೃಥ್ವಿಯಲ್ಲಿ ನಾವು ಒಂದು ಸಣ್ಣ ಹುಳುವಾದರೆ, ಈ ಇರುವೆಗಳು ನಮಗಿಂತ ಕನಿಷ್ಟ ಮಟ್ಟದ ಜೀವಿಗಳು ಎನ್ನಬಹುದು.  ಆಯಾ ಜೀವಿಗಳಿಗೆ ಅವುಗಳ ಬದುಕಿನ ಒಂದು ಧರ್ಮವಿದೆ, ಅದರೊಳಗೊಂದು ಮರ್ಮವಿದೆ.  ಆದರೆ, ಮನುಷ್ಯನ ಮಟ್ಟಿಗೆ ಮಾತ್ರ ತನ್ನ ಅಳಿವು ಮತ್ತು ಉಳಿವಿಗೆ ಮೊದಲಿನಿಂದಲೂ ಆತ ತನ್ನ ಸುತ್ತಲನ್ನು ದ್ವಂಸ ಮಾಡುತ್ತಲೇ ಬಂದಿದ್ದಾನೆ.  ಈ ಮನುಷ್ಯನಿಗೆ ಬದುಕಲು ವಿಶೇಷವಾದ ಹಕ್ಕನ್ನು ಕೊಟ್ಟವರಾರು? ಈ ಜಗತ್ತಿನ ನ್ಯಾಯಾಲಯದಲ್ಲಿ ನಾವೆಲ್ಲರೂ ಸಮಾನರು ಎಂದು ಇನ್ನಾದರೂ ನಮ್ಮ ಅರಿವಿಗೆ ಬರುತ್ತದೆಯೇ?