Friday, September 27, 2019

ತಿಂಗಳಯಾನ ತಂಗಳಾಗದಿರಲಿ...

ಭಾರತದ ಬಾಹ್ಯಾಕಾಶದ ಬಹು ಮುಖ್ಯ ಮೈಲಿಗಲ್ಲಾಗಿ ಈ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವದಾದ್ಯಂತ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿದ್ದ ನಮಗೆ, ಸಿಕ್ಕಿದ್ದು ಕಡಿಮೆ ಯಶಸ್ಸೇನಲ್ಲ.  ಅತಿ ಚಿಕ್ಕ ಬಜೆಟ್ಟಿನಲ್ಲಿ ವಿಶ್ವವೇ ಬೆರಗಾಗುವಂತೆ ಈ ಸಾಹಸಕ್ಕೆ ಕೈ ಹಾಕಿ, ವಿಶ್ವದ ಹಿರಿಯಣ್ಣರನ್ನೂ ಬೆಚ್ಚಿ ಬೀಳಿಸುವ ಹಾಗೆ ಸೆಡ್ಡು ಹೊಡೆದು ಆಂತರಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಮತ್ತು ಪ್ರಜ್ಞಾನ್‌ರು ಚಂದ್ರನ ನೆಲದಿಂದ ಇನ್ನೇನು ಕೇವಲ ಎರಡು ಕಿಲೋಮೀಟರ್ ಇರುವಂತೆ ಅಪ್ಪಳಿಸಿ ಅಸು ನೀಗಿದ್ದು ನಮ್ಮ ವಿಜ್ಞಾನಿಗಳಲ್ಲಿ ಹೊಸ ಚಾಲೆಂಜ್ ಅನ್ನು ಹುಟ್ಟಿಸಲಿ.  ಏನಿಲ್ಲವೆಂದರೂ ಚಂದ್ರನ ಸುತ್ತಲೂ ಒಂದು ವರ್ಷ ಸುತ್ತುವ ಆರ್ಬಿಟರ್‌ನಿಂದಾಗಿಯೂ ನಾವು ಕಲಿಯುವುದು ಬಹಳಷ್ಟಿದೆ.  ಯಾರೂ ಕಾಲಿಡದ ಚಂದ್ರನ ದಕ್ಷಿಣ ಪ್ರದೇಶವನ್ನು ಹೊಕ್ಕೇ ತೀರುತ್ತೇವೆಂದು ಚಂದ್ರಯಾನ-೩ ರಲ್ಲಿ ನಮ್ಮ ವಿಜ್ಞಾನಿಗಳು ಗೆದ್ದು ಸಂಭ್ರಮಿಸುವ ದಿನಗಳು ಹತ್ತಿರ ಬರಲಿ.

***
ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಅಳತೆ ಮಾಡಿದಾಗ ಮೌಂಟ್ ಎವರೆಸ್ಟ್ ಪರ್ವತದ ಎತ್ತರ 27 ಸಾವಿರ ಅಡಿಗಳು (8800 ಮೀಟರುಗಳು, 8.8 ಕಿಲೋಮೀಟರುಗಳು).  ನನ್ನ ಊಹೆಯ ಪ್ರಕಾರ ಚಂದ್ರನ ದಕ್ಷಿಣ ಪ್ರದೇಶ ಅದು ಉದ್ಭವಿಸಿದಾಗಿನಿಂದ ಸೂರ್ಯನ ಬೆಳಕನ್ನೇ ಕಾಣದೆ ದಟ್ಟವಾದ ಮೋಡ, ಮಂಜಿನ ಪರದೆಯೊಳಗೆ ಏನಾದರೂ ಅವಿತಿದ್ದಿರಬಹುದು.  ನಮ್ಮ ವಿಕ್ರಮ್ ಲ್ಯಾಂಡ್ ಆಗಬೇಕಾದ ಜಾಗದಲ್ಲಿ ಒಂದು ವೇಳೆ ಯಾವುದಾದರೂ ಪರ್ವತದಂಥ ಪ್ರದೇಶ ಹಾದು ಬಂದಿದ್ದರೆ?  ಸೂರ್ಯನಿಗೆ ದಿನವೂ ಮುಖವೊಡ್ಡುವ ಭೂಮಂಡಲದಲ್ಲೇ 8 ಕಿಲೋಮೀಟರ್ ಎತ್ತರದ ಪರ್ವತಗಳಿರುವಾಗ ಚಂದ್ರನ ಯಾರೂ ಅಳೆಯದ ಈ ಭಾಗದಲ್ಲಿ ಪರ್ವತಮಯವಾಗಿದ್ದರೆ, ಅಥವಾ ಉಬ್ಬು ತಗ್ಗುಗಳು ದೊಡ್ಡದಾಗಿದ್ದು ನಾವು ಅವುಗಳನ್ನು ಅಳೆಯಲಾರದೆಯೋ ಅಥವಾ ತಪ್ಪಾಗಿ ಅಳೆದೋ ಏನೋ ಗೊಂದಲವಾಗಿರಬಹುದು.  ದುರದೃಷ್ಟವಶಾತ್, ಸೆಪ್ಟೆಂಬರ್ 6 ನೇ ತಾರೀಖಿನಂದು ತನ್ನ ಲ್ಯಾಂಡಿಂಗ್ ಸೈಟ್ ಹತ್ತಿರಕ್ಕೆ ಹೋದ ವಿಕ್ರಮ್ ಕೊನೆಯ ಕೆಲವು ನಿಮಿಷಗಳಲ್ಲಿ ಪತನಗೊಂಡಿದ್ದನ್ನು ಬಿಟ್ಟರೆ, ಆರ್ಬಿಟರ್‌ನಿಂದಾಗಲೀ, ಮತ್ತಿನ್ಯಾವ ಉಪಗ್ರಹಗಳಿಂದಾಗಲೀ ಬೇರೆ ಯಾವುದೇ ಮಾಹಿತಿಯನ್ನು ಕಂಡುಕೊಳ್ಳಲಾಗದೇ, ಏಕೆ ಹೀಗಾಯಿತು ಎನ್ನುವುದೂ ಗೊತ್ತಿಲ್ಲದಂತಾಗಿರುವುದು ಸೈಂಟಿಫಿಕ್ ಕಮ್ಯುನಿಟಿಗೆ ಅರಗಿಸಿಕೊಳ್ಳಲು ಬಹಳ ಕಷ್ಟದ ವಿಚಾರ.
ಕೇವಲ 87 ಮಿಲಿಯನ್ ಡಾಲರುಗಳಲ್ಲಿ (ರೂ.600 ಕೋಟಿ) ಈ ಮಹತ್ಸಾಧನೆಯನ್ನು ನಾವು ಮಾಡಿರುವುದು ಬಹಳ ಸಣ್ಣ ವಿಷಯವೇನಲ್ಲ.  ನಾವಿರುವ ಅಮೇರಿಕದಲ್ಲಿ ಕೆಲವು ಮ್ಯಾನ್ಷನ್ನುಗಳಿಗೆ 87 ಮಿಲಿಯನ್ನುಗಟ್ಟಲೇ ಹೆಚ್ಚು ಹಣ ಕೊಟ್ಟು ಕೊಳ್ಳುವವರಿರುವಾಗ, ಈ ಹಿಂದಿನ ಸಾಧನೆಯ ಸಹಾಯದಿಂದ ಇನ್ನು ಮುಂದೆ ಇನ್ನೂ ಕಡಿಮೆ ಖರ್ಚಿನಲ್ಲಿ ಮತ್ತೊಮ್ಮೆ ಚಂದ್ರಯಾನದ ಕನಸನ್ನು ನಾವು ಸಾಕಾರಗೊಳಿಸಿಕೊಳ್ಳಬಹುದಾಗಿದೆ.

***
ಅಂತರಿಕ್ಷವನ್ನು ಅಳೆಯುವಲ್ಲಿ ರಷ್ಯಾದವರು ಮೊದಲಿಗರು... ಅವರನ್ನು ಹಿಂದೆ ಹಾಕುವಂತೆ ತಮ್ಮ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಸಿ ಬೆಳೆದಿದ್ದು ಅಮೇರಿಕ.  ಈ ಎರಡು ದೇಶಗಳಿಗೆ ಪೈಪೋಟಿ ಒಡ್ಡುವಂತೆ ತಮ್ಮನ್ನು ತಾವು ಬೆಳೆಸಿಕೊಂಡವರು ಚೈನಾದವರು.  ಜಗತ್ತಿನ ನಾಲ್ಕನೇ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಭಾರತ.  ಚೈನಾದವರು ಏನು ಮಾಡಿದರೋ ಬಿಟ್ಟರೋ ಎಂದು ವೆರಿಫೈ ಮಾಡುವುದು ಬಿಡುವುದು ನಿಮಗೆ ಬಿಟ್ಟಿದ್ದು.  ಯಾಕೆಂದರೆ ಐವತ್ತು ವರ್ಷದ ಹಿಂದೆ ಅಮೇರಿಕದವರು ನಿಜವಾಗಿಯೂ ಮಾನವನನ್ನು ಚಂದ್ರನ ಮೇಲೆ ಕಳಿಸಿದ್ದು ಹೌದೇ? ಹಾಗೆ ಅಂದು ಕಳಿಸಿದ್ದು ನಿಜವಾಗಿದ್ದರೆ, ಈ ದಿನ ಮತ್ತೆ ಬೇರೆ ಯಾರೂ ಏಕೆ ಹೋಗುತ್ತಿಲ್ಲ... ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಕೆರಳಿಸುವ ಅನೇಕ ಕಾಂಟ್ರೋವರ್ಷಿಯಲ್, ಕಾನ್ಸ್‌ಪಿರಸಿ ವಿಡಿಯೋಗಳು ಇಂಟರ್ನೆಟ್ಟಿನಲ್ಲಿ ದೊರೆಯುತ್ತವೆ, ಅಂತಹ ಒಂದು ತುಣುಕನ್ನು ಇಲ್ಲಿ ನೋಡಬಹುದು.

ಅಮೇರಿಕದವರ ಈ ಪ್ರಯತ್ನವನ್ನೇ ಸುಳ್ಳು ಎನ್ನುವ ವಾದಗಳಿರುವಾಗ ಇನ್ನು ಚೀನಾದವರು ತಮ್ಮದೇ ತಂತ್ರಜ್ಞಾನದಿಂದ ಅದು ಏನನ್ನು ಸಾಧಿಸಿದ್ದಾರೋ ಬಿಟ್ಟಿದ್ದಾರೋ ಎಂದು ನೀವೇ ಊಹಿಸಬಹುದು.  ಆದರೆ ನಮ್ಮ ಚಂದ್ರಯಾನದ ವಿಚಾರದಲ್ಲಿ ರಷ್ಯಾದವರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಕೈ ಜೋಡಿಸಿದ್ದು ನಿಜ. ಆದರೆ, ಕಳೆದ ಆರು ವರ್ಷಗಳಲ್ಲಿ ನಮ್ಮವರು ಬೇರೆ ಯಾರ ಹಂಗಿಲ್ಲದೆ ನಾವೇ ಮುಂದುವರೆಯುತ್ತೇವೆ ಎಂದು ಮುಂದೆ ಸಾಗಿದ್ದು ಬಹಳ ಹೆಮ್ಮೆಯ ವಿಷಯ.  ರಷ್ಯಾದವರು ಲ್ಯಾಂಡರ್ ಮಾಡಿ ಮುಗಿಸುವಲ್ಲಿ ವಿಳಂಬಿಸಿದರು ಅನ್ನೋ ಕಾರಣವೂ ಇದೆ.  ಆದರೆ, ಈ ಲ್ಯಾಂಡರ್ ಇಳಿಯುವಾಗಿನ ವೈಫಲ್ಯದಿಂದಲೇ ನಾವು ಕೊನೆಯ ಘಳಿಗೆಯಲ್ಲಿ ಅನಿರೀಕ್ಷಿತ ತಿರುವನ್ನು ಪಡೆಯಬೇಕಾಗಿ ಬಂತು ಎನ್ನುವುದು ಗಮನಿಸಬೇಕಾದ ವಿಚಾರ.

***
ಈಗ ನಮ್ಮ ಮುಂದಿರುವ ಮಹತ್ವದ ಸವಾಲೆಂದರೆ, ಲ್ಯಾಂಡರ್‌ಗೆ ಏನು ಆಗಿರಬಹುದು ಎಂಬುದು ಗೊತ್ತಾಗದೇ ಮುಂದಿನ ಚಂದ್ರಯಾನದ ಲ್ಯಾಂಡರ್ ಅನ್ನು ತಯಾರಿಸಿ ಪರೀಕ್ಷಿಸುವುದು ಕತ್ತಲೆಯಲ್ಲಿ ಕತ್ತಿಯಾಡಿಸಿದಂತಾಗುತ್ತದೆ.  ಆದರೆ, ತಮ್ಮ ಒಂದು ತಪ್ಪಿನಿಂದಾಗಿ ಈ ಬಹುಮುಖ್ಯವಾದ ಯೋಜನೆಯನ್ನು ಅನಿರೀಕ್ಷಿತವಾಗಿ ಮುಂದುಹಾಕಿಕೊಂಡು ಕಾಯುವ ಕಷ್ಟವೂ ನಮ್ಮ ವಿಜ್ಞಾನಿಗಳಿಗೆ ಬರದಿರಲಿ.  ಈ ಸಂದರ್ಭದಲ್ಲಿ, ದೇಶದ ಬಹುಪಾಲು ಜನರು ಈ ಯೋಜನೆಯನ್ನು ಬೆಂಬಲಿಸುತ್ತಾರಾದ್ದರಿಂದ, ಈಗಿನ ಸುಭದ್ರ ಸರ್ಕಾರ ಇರುವವರೆಗೆ ನಮ್ಮ ಇನ್ನೊಂದು ಪ್ರಯತ್ನಕ್ಕೆ ಖಂಡಿತ ಹಸಿರು ನಿಶಾನೆ ಸಿಗುವುದೆಂಬ ಭರವಸೆ ನಮ್ಮದು.  ತಿಂಗಳಯಾನದ ಕನಸು ತಂಗಳಾಗದಿರಲಿ!