ರಾಜಕೀಯ ಪ್ರಹಸನ
ಈ ವರ್ಷದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಎರಡು ಮಹತ್ವದ ಅಂಶಗಳು ಗಮನ ಸೆಳೆದವು: ಒಂದು, ದೇಶದಾದ್ಯಂತ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜನರು ನಂಬಿಕೆ ಇಟ್ಟು ಇನ್ನೈದು ವರ್ಷಗಳ ಸ್ಥಿರ ಆಡಳಿತಕ್ಕೆ ಬುನಾದಿ ಹಾಕಿರುವ ವಿಷಯ, ಅದರ ಜೊತೆಗೆ ಉಳಿದ ಪಕ್ಷಗಳ ಪ್ರಣಾಳಿಕೆಗಳ ಸಾರಾಸಗಟು ತಿರಸ್ಕಾರ. ಮೇಲ್ನೋಟಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡು ಬಂದರೂ, ಈ ಚುನಾವಣೆಯಲ್ಲಿ ಹಿರಿಯ ಮುತ್ಸದ್ದಿ ಇಲ್ಲದ ಉಳಿದ ರಾಷ್ಟ್ರೀಯ ಪಕ್ಷಗಳಿಗೆ ಬೆಲೆ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ. ಹೀಗಾಗಿ ಒಂದು ಪಕ್ಷ ಅಥವಾ ಬಣಕ್ಕೆ ಅವುಗಳ ಧ್ಯೇಯೋದ್ದೇಶಗಳು ಎಷ್ಟು ಮುಖ್ಯವೋ ಅಷ್ಟೇ ಅವುಗಳನ್ನು ಪ್ರತಿಬಿಂಬಿಸಿ ಜನಮನಗಳಿಗೆ ತಲುಪಿಸುವ ಒಂದು ಹಿರಿಯ ಧ್ವನಿಯೂ ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ. ಇದು ಯಾವತ್ತಿಗೂ ಸತ್ಯ. ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ವರ್ಚಸ್ವಿ ಜನನಾಯಕರುಗಳ ಕರೆಗೆ ಓಗೊಟ್ಟು ಲಕ್ಷಾಂತರ ಜನ ತಮ್ಮ ಮನೆಮಠಗಳನ್ನು ತೊರೆದು ಚಳವಳಿಯಲ್ಲಿ ಧುಮುಕಲಿಲ್ಲವೇ? ಹಾಗೇ, ಇಂದಿನ ಪ್ರಜಾಸತ್ತೆಯಲ್ಲಿಯೂ ಸಹ ಹಿರಿಯ ನಾಯಕರ ಕರೆಗೆ ಬೆಲೆ ಇದೆ, ಆದರೆ ಅಂತಹ ವರ್ಚಸ್ಸಿನ ಹಿರಿಯ ನಾಯಕರುಗಳ ಕೊರತೆ ಬಹಳ ಎದ್ದು ಕಾಣುತ್ತದೆ. ದೇಶದ ಉದ್ದಗಲಕ್ಕೆ ಎಣಿಸಿದರೆ ನೂರಾರು ಪಕ್ಷಗಳು ತಲೆ ಎತ್ತಿರುವ ನಮ್ಮ ದೇಶದಲ್ಲಿ ಅಷ್ಟೇ ಪ್ರಭಾವಿಗಳಾಗಿ ಜನಾಕರ್ಷಣೆಯನ್ನು ಹೊಂದಿರುವ ಮೂರು ಜನ ಮುಖಂಡರುಗಳಿಲ್ಲ ಎಂದು ಹೇಳಲು ಖೇದವಾಗುತ್ತದೆ. ಪ್ರಾದೇಶಿಕ ಮಟ್ಟದಲ್ಲಿ ಅನೇಕ ಜನಸ್ಪಂದನದ ವ್ಯಕ್ತಿತ್ವಗಳು ಗೋಚರಿಸಬಹುದು, ಆದರೆ ಅಂತಹ ಮುಂದಾಳುಗಳ ಧ್ವನಿಗಳು ತಮ್ಮ ತಮ್ಮ ಸ್ಥಳೀಯ ಜಂಜಾಟಗಳಲ್ಲಿ ಕಳೆದುಕೊಳ್ಳುತ್ತವೆಯೇ ವಿನಾ ದೇಶವನ್ನು ಬೆಳೆಸುವ ಮಟ್ಟಿಗೆ ಬೆಳೆಯುವುದು ಅಪರೂಪ. ಈ ನಿಟ್ಟಿನಲ್ಲಿ, ಗುಜರಾತ್ ಮೂಲದಲ್ಲಿ ಉದ್ಭವಿಸಿ ರಾಷ್ಟ್ರವ್ಯಾಪಿ ಬೆಳೆದು ನಿಂತಿರುವ ಹೆಮ್ಮರ ಮೋದಿ ಎನ್ನಬಹುದು.
***
ನಮ್ಮ ಜನ ಸಾಮಾನ್ಯರಲ್ಲಿ ಒಂದು ಸಹಜವಾದ ಪ್ರಶ್ನೆ ಆಗಾಗ್ಗೆ ಏಳುತ್ತಿರುತ್ತದೆ: ಈ ರಾಜಕಾರಣಿಗಳಿಗೆ ಎಷ್ಟು ದುಡ್ಡು ಮಾಡಿದರೂ (ತಿಂದರೂ) ತೃಪ್ತಿಯಾಗುವುದಿಲ್ಲವಲ್ಲ, ಏಕೆ? ಈ ಪ್ರಶ್ನೆಯ ಆಳಕ್ಕೆ ಹೋದಂತೆಲ್ಲ, ಹುಲಿ ಸವಾರಿ ಮಾಡಿಕೊಂಡು ಅಟ್ಟಹಾಸ ಮಾಡುತ್ತಿರುವ ಅನೇಕ ಜನನಾಯಕರ ಮುಖ ಗೋಚರಿಸಬಹುದು. ಇವರೆಲ್ಲ ದಾಹದ ಕೂಪವೆನ್ನುವ ಆಳವಾದ ಕೊರಕಲಿನಲ್ಲಿ ಭ್ರಷ್ಟಾಚಾರವೆನ್ನುವ ಹುಲಿ ಸವಾರಿಯನ್ನು ಮಾಡಿಕೊಂಡು ಗುಟುರು ಹಾಕಿಕೊಂಡಿರುತ್ತಾರೆ. ಆದರೆ, ಪಾಪ, ಇವರ ಜೀವಮಾನದಲ್ಲೆಲ್ಲೂ ಇವರು ಹುಲಿಯ ಬೆನ್ನಿನಿಂದ ಕೆಳಗಿಳಿಯಲು ಸಾಧ್ಯವೇ ಇಲ್ಲದೇ, ಈ ಹುಲಿ ಸವಾರಿ ಮಾಡುತ್ತಲೇ ನಿವೃತ್ತಿ, ಮೋಕ್ಷ ಮತ್ತಿನ್ನೆಲ್ಲವನ್ನೂ ಕಂಡುಕೊಳ್ಳುತ್ತಾರೆ. ನಮ್ಮ ರಾಜಕಾರಣಿಗಳು ಯಾವ ಸ್ಥರದಲ್ಲೇ ಇರಲಿ, ಮನೆಗೆ ಬಂದು ಮೂಟೆಗಟ್ಟಲೆ, ಸೂಟ್‌ಕೇಸುಗಟ್ಟಲೆ ಕೋಟ್ಯಾಂತರ ರೂಪಾಯಿ "ಅನುದಾನ"ವನ್ನು ತಂದು ಕೊಡುವವರಿರುವಾಗ ಹುಲಿ ಸವಾರರು ಒಲ್ಲೆ ಎಂದು ಹೇಳಲು ಸಾಧ್ಯವಿದೆಯೇ? ಉದಾಹರಣೆಗೆ, ಪ್ರತಿವರ್ಷ ಪ್ರತಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಐವತ್ತು ಕೋಟಿ ಅನುದಾನ ಬರುತ್ತದೆ ಎಂದುಕೊಂಡರೆ, ಅದರ ಹತ್ತು ಪರ್ಸೆಂಟ್, ಅಂದರೆ ಐದು ಕೋಟಿ ನಮ್ಮ ಎಂ.ಪಿ.ಗಳ ಮನೆಗೆ ಬಂದು ಸೇರಿತೆಂದುಕೊಳ್ಳಿ. ಅದನ್ನು ಬೇಡವೆಂದರೆ, ಇವರ ಹುಲಿ ಸವಾರಿಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಕೊನೆಗೆ ಆ ಹುಲಿಯೇ ಇವರನ್ನು ಬಲಿತೆಗೆದುಕೊಳ್ಳುತ್ತದೆ. ಅದನ್ನು ಇಟ್ಟುಕೊಂಡರೆ, ಅದು ಕಪ್ಪು ಹಣದ ಲೆಕ್ಕಕ್ಕೆ ಸೇರಿಕೊಂಡು ಮುಂದಿನ ಚುನಾವಣೆಯವರೆಗೆ ಎಲ್ಲೋ ಮೂಲೆಯಲ್ಲಿ ಕೊಳೆಯುತ್ತದೆ! ಈ ಹುಲಿ ಸವಾರಿ ಒಂದು ಉದಾಹರಣೆ ಅಷ್ಟೇ. ತಮ್ಮ ತಮ್ಮ ತಾಕತ್ತಿಗೆ ತಕ್ಕಂತೆ, ತಮ್ಮ ತಮ್ಮ ಪರಿಸರಕ್ಕೆ ತಕ್ಕಂತೆ, ಬೇರೆಬೇರೆ ಪ್ರಾಣಿಗಳ ಸವಾರಿ ಮಾಡಿ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಳ್ಳುವವರು ಇದ್ದಾರೆ.
***
ಹುಲಿ ಸವಾರಿಯ ಬಯಕೆಯ ಮೂಲವೇನು? ಅದೆಲ್ಲಿಂದ ಉತ್ಪನ್ನವಾಯಿತು ಎಂದು ಶೋಧಿಸಿ ನೋಡಿದಾಗ ನಮ್ಮ ಚುನಾವಣಾ ಪ್ರಕ್ರಿಯೆ ಕಣ್ಣಿಗೆ ಬಿತ್ತು. ನೀವು ಹಣಕಾಸು ವಿಲೇವಾರಿಯ ಯಾವುದೇ ಶಾಸನವನ್ನು ಬರೆಯಿಸಿ. ಪ್ರಪಂಚದ ಪೋಲೀಸರನ್ನೆಲ್ಲ ತಂದು ನಮ್ಮ ನಮ್ಮ ಜಿಲ್ಲೆಯಲ್ಲಿ ಎಲೆಕ್ಷನ್ ಉಸ್ತುವಾರಿಕೆಗೆ ಬಿಡಿ, ತಪ್ಪಿತಸ್ತರಿಗೆ ಎಂತಹ ಕಠಿಣ ಶಿಕ್ಷೆಯನ್ನಾದರೂ ಕೊಡಿಸಿ... ನೀವು ಅದೇನೇ ತಿಪ್ಪರಲಾಗ ಹಾಕಿದರೂ, ಹಣ-ಹೆಂಡ ಮತ್ತಿತರ ವಸ್ತುಗಳನ್ನು ಹಂಚಿ ಚುನಾವಣೆ ಗೆಲ್ಲುವ ಶಕ್ತಿಗಳಿಗೆ ಕಡಿವಾಣ ಹಾಕಲಾರಿರಿ. ಇತ್ತೀಚೆಗೆ ನಾನು ಕೇಳಿದ ಒಂದೆರಡು "ಕೊಟ್ಟು-ತೆಗೆದುಕೊಳ್ಳುವ" ಉದಾಹರಣೆಗಳಲ್ಲಿ, ಒಬ್ಬ ಮಲ್ಟಿ ಅಪಾರ್ಟ್‌ಮೆಂಟ್ ಮಾಲಿಕ ತನ್ನ ಒಂದು ವರ್ಷದ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕೊಡದೇ ಉಳಿಸಿಕೊಂಡಿರುತ್ತಾನೆ. ತನ್ನ ಹತ್ತಿರ ಓಟು ಕೇಳಲು ಹೋದವರಿಗೆ, ’ಈ ಬಿಲ್ ಅನ್ನು ಕಟ್ಟಿ ಬಾ...’ ಎಂದು ಬಿಲ್ ಕೊಟ್ಟು ಕಳುಹಿಸುತ್ತಾನೆ. ಒಂದು ಪಕ್ಷದವರಿಗೆ ಕರೆಂಟ್ ಬಿಲ್, ಮತ್ತೊಂದು ಪಕ್ಷದವರಿಗೆ ನೀರಿನ ಬಿಲ್ ಕೊಟ್ಟರೆ, ಈ ರೀತಿಯ ಲೇವಾದೇವಿಯನ್ನು ಯಾರು ಹೇಗೆ ಕಂಡು ಹಿಡಿಯಲು ಸಾಧ್ಯ? ನಮ್ಮ ಜನಗಳ ದುಡ್ಡೇ ಈ ರೀತಿ ತಿರುತಿರುಗಿ ಬೇನಾಮಿ ಖರ್ಚಾದಂತೆ ಕಂಡು ಬರುತ್ತಿದೆ ಎಂದು ಯಾರಿಗೆ ಹೇಳೋದು, ಯಾರಿಗೆ ಕೇಳೋದು? ಒಂದು ಲೋಕಸಭಾ ಚುನಾವಣೆಯಲ್ಲಿ ಎಷ್ಟು ದುಡ್ಡು ಹೇಗೆ ಖರ್ಚು ಆಗುತ್ತದೆ ಎಂದು ನಿಮಗೆ ನಿಜವಾಗಿಯೂ ಕುತೂಹಲವಿದ್ದರೆ, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಸೋತ ಮಧು ಬಂಗಾರಪ್ಪ ಅವರನ್ನು ಕೇಳಿ ನೋಡಿ!
ಒಂದು ಸಮೀಕ್ಷೆಯ ಪ್ರಕಾರ ಒಂದು ಜಿಲ್ಲೆಯ ಚುನಾವಣೆಯ ಖರ್ಚು ಕಡಿಮೆ ಎಂದರೆ ನೂರು ಕೋಟಿ ರುಪಾಯಿಗಳು! ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ನೀರಿನಂತೆ ಹಣ ಹರಿದು ಇನ್ನೂ ಹೆಚ್ಚು ಖರ್ಚಾಗಿರುವ ಉದಾಹರಣೆಗಳು ಕೂಡಾ ಇವೆ. ಈ ನೂರು ಕೋಟಿಯನ್ನು ಒಬ್ಬ ಅಭ್ಯರ್ಥಿ ಅನೇಕ ಮೂಲಗಳಲ್ಲಿ "ಸಂಪಾದಿಸ"ಬಹುದು. ಪಾರ್ಟಿ ಫಂಡಿನಿಂದ ದುಡ್ಡು ಹರಿಯಬಹುದು, ಉಳ್ಳವರ ಕಿಸೆಯಿಂದ ಹರಿದು ಬಂದಿರಬಹುದು, ತಾವೇ (ವಾಮಮಾರ್ಗದಲ್ಲಿ) ಕೂಡಿ ಹಾಕಿದ ಫಂಡ್ ಇರಬಹುದು, ಅಥವಾ ಇತರರ "ದೇಣಿಗೆ" ಇರಬಹುದು... ಇಷ್ಟೆಲ್ಲಾ ಖರ್ಚು ಮಾಡಿ, ಗೆಲ್ಲುವ, ಗೆದ್ದು ಮುನ್ನುಗ್ಗುವ ಛಲದ ಮೂಲ - ಈ (ಬಂಡವಾಳ) ದುಡ್ಡಿನ ನೂರು ಪಟ್ಟು ದುಡ್ಡು ಮಾಡುವುದು. ಹೀಗೆ ದುಡ್ಡು ಮಾಡುತ್ತಾ ಮಾಡುತ್ತಾ, ಇವರುಗಳು ಬಿದ್ದ ಕೂಪದ ಆಳ ಹೆಚ್ಚಾದಂತೆಲ್ಲ, ಇವರುಗಳು ಏರುವ ಹುಲಿಯ ಕೊಬ್ಬು ಏರುತ್ತಲೇ ಹೋಗುತ್ತದೆ.
ಇನ್ನೈದು ವರ್ಷ ಕೇಂದ್ರದಲ್ಲಿ ಸ್ಥಿರ ಸರ್ಕಾರ, ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಧೂಳೀಪಟ - ಇವೆರಡರ ಮೊತ್ತ, ಕರ್ನಾಟಕದ ಅಸ್ಥಿರ ರಾಜಕಾರಣ, ಅಥವಾ "ಪ್ರಬಲ"ವಾದ ಪಕ್ಷದ ಆಡಳಿತ. ಒಮ್ಮೆ ಪ್ರಬಲ ಸರ್ಕಾರದ ಆಡಳಿತವೆಂದರೆ ಅದು ಮೂರು, ಐದು, ಹತ್ತುವರ್ಷಗಳ ವರೆಗೆ ನಿರಂತರವಾಗಿ ಮುಂದೆ ಹೋಗುತ್ತಲೇ ಇರಬಹುದು. ಈ ಹಂತದಲ್ಲಿಯೇ ತಮ್ಮ ತಮ್ಮ ಪಕ್ಷದ ನಿಷ್ಠತೆಯನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಕೆಲವರು, ಅವಕಾಶ ಸಿಕ್ಕಿದ್ದೇ ತಡ ಜಿಗಿದರು. ಇನ್ನು ಕೆಲವರು, ನೀತಿ, ನಿಯಮ, ಸತ್ಯಸಂಧತೆಯ ಹಿನ್ನೆಲೆಯಲ್ಲಿ ರಾಜೀನಾಮೆ ಬಿಸಾಡಿದರು. ಇನ್ನು ಕೆಲವರು ಗೆದ್ದೆತ್ತಿನ ಬಾಲ ಹಿಡಿದರು.
***
ಗೆದ್ದು ಶಾಸಕ, ಸಂಸದನಾಗಿ ಆರಿಸಿ ಬಂದ ವ್ಯಕ್ತಿಗೆ ಮುಖ್ಯ ಎರಡು ಗುರಿಗಳಿವೆ: ತಮ್ಮ ಮೂಲ ಬಂಡವಾಳವನ್ನು ದ್ವಿಗುಣ-ತ್ರಿಗುಣ (ಉಲ್ಬಣ) ಗೊಳಿಸುವುದು, ತಮ್ಮ ಕಾರ್ಯಕರ್ತ-ಹಿತೈಷಿ-ಸಂತಾಪಕರ ನಡುವೆ ತಮ್ಮ ಪಾರಮ್ಯವನ್ನು ಮೆರೆಯುವುದು. ಇವೆರಡೂ ಒಂದಕ್ಕೊಂದು ಪೂರಕವಾಗಲು ಸಾಧ್ಯವಾಗುವ ಸುಲಭ ವಿಧಾನವೇ - ಮಂತ್ರಿಯಾಗುವುದು! ಈ ಸುಲಭ ಫಾರ್ಮುಲಾವನ್ನು ಮನದಟ್ಟು ಮಾಡಿಕೊಂಡ ರಾಜಕಾರಣಿಗಳೆಲ್ಲ ರಾತ್ರೋರಾತ್ರಿ ಮುತ್ಸದ್ದಿಗಳಾಗಿ, ಹಿರಿಯ ಹೋರಾಟಗಾರರಾಗಿ ವಿಜೃಂಭಿಸುವುದು. ಮೊದಲೆಲ್ಲ ಐದು ಬಾರಿ ಗೆದ್ದು ಶಾಸಕರಾದರೂ ಮಂತ್ರಿ ಪದವಿಯನ್ನು ಕೇಳದೇ ತಮ್ಮ ಪಾಲಿಗೆ ಬಂದದ್ದನ್ನು ಪಾಲಿಸುವ ಪಕ್ಷನಿಷ್ಠರಿದ್ದರು. ಆದರೆ ಇಂದು, ಕೇವಲ ಎರಡು ಸಾರಿ ಶಾಸಕರಾಗಿ ಒಂದು ಕ್ಷೇತ್ರದಿಂದ ಆರಿಸಿ ಬಂದವರೆಲ್ಲ ಮಂತ್ರಿಗಳಾಗುವ ಕನಸು ಕಾಣುವವರಾಗಿದ್ದಾರೆ. ಇರುವ ಇನ್ನೂರು ಚಿಲ್ಲರೆ ಶಾಸಕರೆಲ್ಲರಿಗೂ ಒಂದೊಂದು ಪದವಿ ಬೇಕು - ಅವರು ಪರ-ವಿರೋಧ ಯಾವುದೇ ಪಕ್ಷದಲ್ಲಿರಲಿ!
***
ಈ ಎಲ್ಲ ಗೊಂದಲಗಳ ನಡುವೆ ತಮ್ಮ ತಮ್ಮ ಕ್ಷೇತ್ರಗಳ ಬೆಳವಣಿಗೆಯನ್ನು ನೋಡುವವರು ಯಾರು? ತಮ್ಮ ತಮ್ಮ ಊರು, ಜಿಲ್ಲೆ, ರಾಜ್ಯಗಳನ್ನು ಬೆಳೆಸುವವರಾರು? ಎಲ್ಲರೂ ದುಡ್ಡು ಮಾಡಿಕೊಂಡಿದ್ದರೆ, ಅದಕ್ಕೆ ಮಿತಿಯೆಂಬುದೇ ಇಲ್ಲವೇ? ಇವರೆಲ್ಲ ಈ ರೀತಿ ದುಡ್ಡು ಮಾಡಿ ಕೊನೆಗೆ ಏನನ್ನು ಸಾಧಿಸುತ್ತಾರೆ? ಈ ರೀತಿ ಯಶಸ್ಸನ್ನು ಕಲ್ಪಿಸಿಕೊಳ್ಳುವ ನಮ್ಮ ನಡುವೆ, ದಶಕಗಳ ನಿರಂತರ ಶೋಧನೆ-ಸಂಶೋಧನೆ ಮಾಡಿ, ಮನುಕುಲದ ನಾಶಕ್ಕೆ ಟೊಂಕಕಟ್ಟಿ ನಿಂತ ಕಣ್ಣಿಗೆ ಕಾಣದ ವೈರಸ್ಸಿಗೆ ವಿರುದ್ಧವಾಗಿ ಹೋರಾಡಿ ಔಷಧಿ ಕಂಡು ಹಿಡಿಯಲು ತಮ್ಮ ಜೀವನವನ್ನೇ ಮುಡಿಪಾಗಿಡುವ ವಿಜ್ಞಾನಿಗಳು ಈ ಸಮಾಜದಲ್ಲಿ ಹುಟ್ಟುವುದು ಹೇಗೆ ಸಾಧ್ಯ?
ಇವರುಗಳು ಹೊಕ್ಕಿನಿಂತ ಆಳವಾದ ಬಾವಿಯ ದಾಹ ಇನ್ನೂ ಆಳಕ್ಕಿಳಿಸುತ್ತದೆ, ಅದು ಬತ್ತುವುದೂ ಇಲ್ಲ ಹಾಗೂ ತುಂಬುವುದೂ ಇಲ್ಲ ಎನ್ನುವ ಜಾಯಮಾನದ್ದು. ಈ ವ್ಯವಸ್ಥೆಯೇ ನಮ್ಮ ನಡುವೆ ಭ್ರಷ್ಟಾಚಾರಕ್ಕೆ ಇಂಬುಕೊಡುವುದು. ಒಬ್ಬ ಹಸಿದ ನಿರಕ್ಷರ ಬಡವನಿಗೆ ಸಾವಿರ ರೂಪಾಯಿ ತೋರಿಸಿ ಚುನಾವಣೆಯಲ್ಲಿ ಮತಹಾಕುವಂತೆ ಅಂಗಲಾಚಿ ಗೆಲ್ಲುವುದರಲ್ಲಿ ಏನು ದೊಡ್ಡತನವಡಗಿದೆ ಎಂದು ನಾವೆಲ್ಲ ಸಹಿಸಿಕೊಂಡು ಬಂದಿದ್ದೇವೋ ಎಂದು ಬೇಸರವಾಗುತ್ತದೆ. ಇಂತವರೆಲ್ಲ ನಮ್ಮನ್ನು (ಏನೂ ಕೆಲಸ ಮಾಡದೆ) ಆಳುವವರು, ಇಂತವರನ್ನು ಸಹಿಸಿಕೊಳ್ಳುವ ನಾವು (ಕೈಲಾಗದ) ಪ್ರಜೆಗಳು!
ಇದು ಇಂದು ನಿನ್ನೆಯದಲ್ಲ - ಹಿಂದೆ ಆಗಿದೆ, ಇಂದು ಆಗುತ್ತಿದೆ, ಮುಂದೆ ಎಂದೆಂದೂ ಆಗುತ್ತದೆ, ಆಗುತ್ತಲೇ ಇರುತ್ತದೆ!