Tuesday, July 27, 2010

ಶಿಕಾರಿಪುರ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರ...ಈ ಹೆಸರನ್ನು ನೆನದಾಗಲೆಲ್ಲ ಎಷ್ಟೊಂದು ಆತ್ಮೀಯ ನೆನಪುಗಳು ನಮ್ಮ ಸುತ್ತ ಸುಳಿದಾಡುತ್ತವೆ, ಧ್ವನಿ ಗದ್ಗದಿತವಾಗುತ್ತದೆ, ಭಾವನೆಗಳ ಕೋಡಿ ಕಿತ್ತೇಳುತ್ತದೆ. ಹಿಂದಿನ ಅನೇಕಾನೇಕ ಒಡನಾಟಗಳ ಸಾಂಗತ್ಯದಲ್ಲಿ ಬೆಳೆದುಬಂದ ಸಂಬಂಧವನ್ನಾಗಲೀ ಮಧುರ ನೆನಪುಗಳನ್ನಾಗಲೀ ಬುಡಸಹಿತ ಕಿತ್ತೊಗೆಯುವ ಶಕ್ತಿ ಸಾವು ಎನ್ನುವ ಎರಡಕ್ಷರದ ಪದಕ್ಕಂತೂ ಖಂಡಿತ ಇಲ್ಲ ಎನ್ನುವ ಧೋರಣೆ ನನ್ನ "ಅಂತರಂಗ"ದ್ದು ಇತ್ತೀಚಿನ ದಿನಗಳಲ್ಲಿ.

ಹಿಂದೆ ಡಿ.ಆರ್. ನಾಗರಾಜ್ ತೀರಿಕೊಂಡಾಗ ’ಬಣ್ಣದ ವೇಷ ಅಟ್ಟವನೇರಿ...’ ಎಂಬ ಕವನವನ್ನು ಕಂಬಾರರು ಬರೆದಿದ್ದರು, ಸದಾ ಅವಿರತ ದುಡಿದ ಹರಿಹರೇಶ್ವರ ಅವರಿಗೂ ಅನ್ವಯಿಸುವ 'ಈಗಲಾದರೂ ವಿಶ್ರಾಂತಿ ತಗೋ ಮಿತ್ರಾ...' ಎನ್ನುವ ಆ ಕವನದ ಸಾಲುಗಳು ಥಟ್ಟನೆ ನೆನಪಿಗೆ ಬಂದವು.

ನಮ್ಮ ಅನಿವಾಸಿ ಕನ್ನಡಿಗರ ಪಾಲಿಗೆ ಹರಿಹರೇಶ್ವರ ಅವರು ಯಾವತ್ತೂ ಸಂಪರ್ಕಿಸಬಹುದಾದ ಪರಾಮರ್ಶಕರಾಗಿದ್ದರು. ಕೆಲವು ವರ್ಷಗಳ ಹಿಂದೆ ’ಉಗಾದಿ-ಯುಗಾದಿ’ ಎನ್ನುವ ಪದಬಳಕೆಯ ವ್ಯಾಪ್ತಿ ವ್ಯುತ್ಪತ್ತಿಯಿಂದ ಹಿಡಿದು, ಇತ್ತೀಚಿನ ’ಸಿಂಚನ’ ಎಂದರೆ ಏನು ಎನ್ನುವ ನನ್ನ ಪ್ರಶ್ನೆಗೆ ತತ್‌ಕ್ಷಣ ಯಾವುದೇ ಪುಸ್ತಕದ ಸಹಾಯವಿಲ್ಲದೇ, ತಮ್ಮ ನೆನಪಿನ ಶಕ್ತಿಯಿಂದಲೇ ಈ ಕೆಳಗಿನ ವಾಕ್ಯಗಳನ್ನು ಇ-ಮೇಲ್ ಮೂಲಕ ಕಳುಹಿಸಿದ್ದರು.

"...ಸಿಂಚನ ಪದವನ್ನು ಪ್ರೋಕ್ಷಣ, ಚಿಮುಕಿಸುವುದು, ಸಿಂಪಿಸುವುದು-- ಮೆಲ್ಲಗೆ ಚೆಲ್ಲುವುದು -ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು (ಉದಾಹರಣೆಗೆ, ಮಾಘ ಕವಿ ಕಿರಾತಾರ್ಜುನೀಯ ೮:೩೪, ೮:೪೦ ರಲ್ಲಿ; ಕಾಳಿದಾಸ ಮೇಘದೂತ ೧:೨೬ ದಲ್ಲಿ ) ಬಹಳ ಹಿಂದೆಯೇ ಬಳಸಿದ್ದಾರೆ.

"ಸಿಂಪಡಿಸು" ಎಂದರೆ ಸಿಂಚನವೇ. ಅದರ ಇನ್ನೊಂದು ರೂಪ "ಸಿಂಬಡಿಸು" ಅದಕ್ಕೆ ಈ ಸ್ವಾರಸ್ಯಕರ ಉದಾಹರಣೆ ನೋಡಿ:
"ಗಂಡ ಹೆಂಡರ ಮಾತು ಒಂದೆ ಹಾಸಿಗೆ ಮ್ಯಾಲ; ಗಂಧ ಸಿಂಬಡಿಸಿ ನಗತಾಳ ನನ ತಮ್ಮ, ಗಂಗಿ ನಿನಗೆಲ್ಲಿ ದೊರೆತಾಳ!"" (ಗರತಿಯ ಹಾಡು ೫೧)
ಸಿಂಪಿಣಿ, ಸಿಂಪಣಿ, ಸಿಂಪಣಿಗೆ, ಸಿಂಪಣಿಯಾಡು, ಸಿಂಪಣಿಗೆಗೊಡು, ಸಿಂಪಿಸು- ಸಿಂಪಡಿಸು- ಇತ್ಯಾದಿ ವಿವಿಧ ರೂಪಗಳು ಕನ್ನಡ ಕಾವ್ಯಗ್ರಂಥಗಳಲ್ಲಿ ಹಲವೆಡೆ ಬರುತ್ತವೆ. ಇವೆಲ್ಲಕ್ಕೂ ಸಿಂಚನ- ವೇ ಮೂಲ ಧಾತು ಮತ್ತು ಅರ್ಥ. "

ನಾನು ಕುತೂಹಲಿತನಾಗಿ ಇಷ್ಟೊಂದು ವಿವರವಾಗಿ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದ್ದಕ್ಕೆ, ಕಿರಾತಾರ್ಜುನೀಯ, ಮೇಘದೂತಗಳನ್ನು ಬೇಕಾದಷ್ಟು ಸಾರಿ ಓದಿ, ಇವೆಲ್ಲವೂ ನೆನಪಿನಲ್ಲಿ ಚೆನ್ನಾಗಿವೆ ಎಂದಿದ್ದರು.

ಹೀಗೆ ಯಾವೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಅದರಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ತಮ್ಮ ಕೈಲಾದದ್ದಕ್ಕಿಂತಲೂ ಹೆಚ್ಚಿನದನ್ನು ಮಾಡುವುದು ಅವರ ಶೈಲಿ ಎನ್ನುವುದಕ್ಕಿಂತ, ಹಾಗಿರುವುದನ್ನೇ that's him - ಎನ್ನಬಹುದು.
ನಾವು ಅನಿವಾಸಿ ಕನ್ನಡಿಗರು, ನಮ್ಮ ಪದಭಂಡಾರ, ನಮ್ಮ ಹಳವಂಡಗಳು ದಿನೇದಿನೇ ಒಣಗಿ ಹೋಗೋ ನೀರು ತುಂಬಿದ ಹೊಂಡವಾಗಿರುವ ಹೊತ್ತಿನಲ್ಲಿ ನಮ್ಮ ಸಂಕಷ್ಟಗಳಿಗೆ ದೂರದಿಂದ ಹರಿಹರೇಶ್ವರ ತಮ್ಮ ಎಂದೂ ಬತ್ತದ ಸಪೋರ್ಟನ್ನು ಕೊಟ್ಟವರು. ಹರಿ ಅವರು ತಮ್ಮ ಸಮಯವನ್ನು ಹೇಗೆ ವ್ಯಯಿಸುತ್ತಾರೆ, ಎಷ್ಟೊಂದು ಪ್ರಾಜೆಕ್ಟುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲ ಎಂದು ನಾನು ಆಶ್ಚರ್ಯ ಪಡುವ ಹೊತ್ತಿಗೇ ಅವರು ತೊಡಗುವ ಇನ್ನೊಂದು ಪ್ರಾಜೆಕ್ಟಿಗೂ ಒಬ್ಬ ತಂದೆ ತನ್ನ ಮಕ್ಕಳ ನಡುವೆ ಸಮಪ್ರೀತಿಯನ್ನು ಹಂಚಿಕೊಂಡಂತೆ ಹಂಚಿಕೊಳ್ಳುವವರು....ಹೀಗೆ ಏನೇನೆಲ್ಲ ಬರೆದರೂ ಅದು ಇತಿಹಾಸವಾಗುತ್ತದೆ, ಹರಿ ಅವರ ಜೀವನಶೈಲಿಯ ಒಂದು ಸಣ್ಣ ತುಣುಕಿನ ಕಿರುಪರಿಚಯವಾಗುತ್ತದೆ.

ಹರಿ ಅವರ ಆದರ್ಶ, ಅವರ ಅಗಾಧ ಕನ್ನಡ ಪ್ರೇಮ ಅದಕ್ಕೆ ಹೊಂದುವ ಸೇವಾ ಮನೋಭಾವ, ಕರ್ಮಠತನ, ಕನ್ನಡಿಗನ ಅನುಭೂತಿಯಲ್ಲಿ ಪೂರ್ವ-ಪಶ್ಚಿಮಗಳ ಪರಿಕಲ್ಪನೆ ಹಾಗೂ ಅನುಭವ, ಅವರು ಹೊರತಂದ ಹಲವಾರು ಹೊತ್ತಿಗೆಗಳು, ಗ್ರಂಥ ಸಂಗ್ರಹ, ಎಲ್ಲಕ್ಕಿಂತ ಮಿಗಿಲಾಗಿ ಹಿರಿಯ-ಕಿರಿಯರೆಲ್ಲರಿಗೂ ದೊರಕುವ ’ಸ್ನೇಹ’ - ಇವೆಲ್ಲವನ್ನು ಕಳೆದುಕೊಂಡು ನಾವು ಕನ್ನಡಿಗರು ಬಡವರಾಗಿದ್ದೇವೆ. ನಮ್ಮ ಇ-ಮೇಲ್ ಇನ್‌ಬಾಕ್ಸ್‌ಗೆ ಇನ್ನು ಮುಂದೆ "ಸ್ನೇಹದಲ್ಲಿ ನಿಮ್ಮ,..." ಎಂದು ಸಹಿ ಇರುವ ಅವರ ಸಂದೇಶಗಳು ಬರದೇ ಸೊರಗುತ್ತದೆ.

೨೦೦೦ದಲ್ಲಿ ನಡೆದ "ಅಕ್ಕ" ಸಮ್ಮೇಳನಕ್ಕೆ ಸಾಕಷ್ಟು ದುಡಿದದ್ದರಿಂದ ಹಿಡಿದು, ಹತ್ತು ವರ್ಷಗಳ ನಂತರ ನಡೆಯುವ ಮುಂಬರುವ ಸಮ್ಮೇಳನದಲ್ಲೂ ಹರಿಯವರ ಸಹಾಯ ಹಸ್ತವಿದೆ. ತಮ್ಮ ಹೆಸರನ್ನು ಹಲವಾರು ತಂಡದ ಪರವಾಗಿ ನಮೂದಿಸಲಿ ಬಿಡಲಿ, ತಾವು ತೊಡಗಿಕೊಂಡ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿರಿಮೆ ಹಾಗೂ ಇತಿಹಾಸ ಅವರದು. ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾವು ಎಂದಿಗಿಂತಲೂ ಹೆಚ್ಚು ನಮ್ಮನ್ನು ನಾವು ತೊಡಗಿಸಿಕೊಂಡು ಮುಂಬರುವ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟು ಸಮ್ಮೇಳನವನ್ನು ಎಲ್ಲಾ ರೀತಿಯಿಂದಲೂ ಯಶಸ್ಸುಗೊಳಿಸುವುದೇ ನಾವು ಅವರಿಗೆ ಕೊಡುವ ಗೌರವ. ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಮ್ಮನ್ನು ನಾವು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಂದ ನಾವು ಕಲಿಯಬಹುದಾದ ನಡವಳಿಕೆ.

(ಚಿತ್ರಕೃಪೆ: ದಟ್ಸ್‌ಕನ್ನಡ.ಕಾಮ್)